Monday, 28 April 2008

ಬಾನಂಗಳದಲ್ಲಿ ಟ್ರಾಫಿಕ್!

ಸ್ನೇಹಿತರ ತಂಗಿ ಊರಿಗೆ ವಾಪಸ್ ಹೊರಟಿದ್ದರು. ನಮ್ಮೂರಿನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇಲ್ಲದಿರುವುದರಿಂದ ಆಕ್ಲೆಂಡಿಗೆ ನಾವೂ ಅವರಿಗೆ ಬೀಳ್ಕೊಡಲು ( ಚಾಕೊಲೇಟ್, ಮೊಬೈಲುಗಳನ್ನು ಮೈಸೂರಿಗೆ ಒಯ್ಯಲು ಅವರು ಒಪ್ಪಿದ್ದರಿಂದ :D) ಹೊರಟಿದ್ದೆವು.


ವಿಮಾನ ನಿಲ್ದಾಣದಲ್ಲಿ ಕಣ್ ಮನ ತಣಿಸುವ, ನಮ್ಮವರ ಪರ್ಸು ಹಗುರ ಮಾಡುವ ಅನೇಕ ಶಾಪಿಂಗ್ ಸೆಂಟರುಗಳಿರುವುದರಿಂದ, ನಾನೂ ಸ್ನೇಹಿತರು ಇಬ್ಬರೂ ಕೂಡಿ ಮಾಸ್ಟರ್ ಪ್ಲಾನ್ ಹಾಕಿದ್ದೆವು. ತಂಗಿಯ ಚೆಕ್-ಇನ್, ಮಣ್ಣು ಮಸಿಗಳೆಲ್ಲ ಮುಗಿದು ನಮಗೆ ಕೈ ಬೀಸಿ ಹೋದ ತಕ್ಷಣ, " ನಡಿ, ನಡಿ...ಬೇಗ ಲುಕ್ ಔಟ್ ಪಾಯಿಂಟ್ ಗೆ ಹೋಗೋಣ....ಥಾಯ್ ವಿಮಾನಕ್ಕೆ ಅಲ್ಲಿಂದ ಟಾಟಾ ಮಾಡೋಣ..." ಎಂದು ನಮ್ಮ ಪ್ಲಾನಿನ ಸುಳಿವು ಹತ್ತಿದವರಂತೆ ಇಬ್ಬರ ಗಂಡಂದಿರೂ ನಮ್ಮನ್ನು ಹೊರಡಿಸಿಯೇ ಬಿಟ್ಟರು. ಮನೆ ಬಿಟ್ಟಾಗಿನಿಂದ ಏರ್ ಪೋರ್ಟ್ ಲ್ಲಿ ಶಾಪಿಂಗ್ ಮಾಡಬೇಕೆಂದು ಕೊಂಡಿದ್ದ ನಮ್ಮ ಪ್ಲಾನ್ ಎಲ್ಲವೂ ಫ್ಲಾಪ್ ಆಯಿತು. ನಾನು ಮುಖ ಊದಿಸಿಕೊಂಡೇ ಹೊರಟೆ.


ತಂಗಿಯ ವಿಮಾನ ಹೊರಡುವವರೆಗೂ ಇಲ್ಲೇ ಕೂತರಾಯಿತು ಎಂದು ಅವರ ಅಕ್ಕ ಕಡೆಯ ಪ್ರಯತ್ನ ಮಾಡೇ ಬಿಡೋಣವೆಂದು ಹೇಳಿದರು. ನಾನೂ " ಹೂಂ" ಎಂದು ಕೂರಲು ಜಾಗ ಹುಡುಕ ತೊಡಗಿದೆ. ಕೂಡಲೇ ಇಬ್ಬರೂ ಗಂಡಸರು..." ಬೇಡ ಬೇಡ ಲುಕ್ ಔಟ್ ಪಾಯಿಂಟ್ ಗೇ ಹೋಗೋಣ...ಅಲ್ಲಾದರೇ ಪ್ಲೇನು ಇನ್ನೂ ಚೆನ್ನಾಗಿ ಕಾಣುತ್ತದೆ..." ಎಂದು ನಮಗೆ ಸಿಗಬಹುದಾಗಿದ್ದ ಕಡೇ ಅವಕಾಶವನ್ನೂ ಬಿಡಲಿಲ್ಲ. ಮತ್ತೇನು ಮಾಡುವುದೆಂದು ಇಬ್ಬರೂ ಹೊರಟೆವು. ಲುಕ್ ಔಟ್ ಪಾಯಿಂಟಿಗೆ ಅಲ್ಲಿಂದ ಎರಡು ಕಿಲೋಮೀಟರುಗಳಷ್ಟೇ.


ಲುಕ್ ಔಟ್ ಪಾಯಿಂಟಿನಲ್ಲಿ ಏರೋ ಪ್ಲೇನುಗಳು ಹಾರುವ, ಹಾಗೂ ಇಳಿಯುವ ದೃಶ್ಯ ತುಂಬಾ ಚೆನ್ನಾಗಿ ಕಾಣುತ್ತದೆ. ಅಲ್ಲಿ ನಿಂತರೆ, ವಿಮಾನಗಳು ಇಳಿಯುವ, ಹಾರುವ ಸುಂದರ ದೃಶ್ಯ ಹತ್ತಿರದಿಂದ ನೋಡಬಹುದು. ಬಗೆಬಗೆಯ ಬಣ್ಣ ಬಣ್ಣದ, ಒಂದೊಂದು ದೇಶದ ವಿಮಾನ ಒಂದೊಂದು ಕಲರ್!
ನಾವು ಬಂದು ಕೂರುತ್ತಿದ್ದಂತೆ ಗಗನಕ್ಕೆ ಚಿಮ್ಮಿದ " ಏರ್ ನ್ಯೂಝಿಲೆಂಡ್" ಪುಟಾಣಿ ವಿಮಾನ...ಇಲ್ಲೇ ಹತ್ತಿರದ ಊರಿಗೆ ಹೊರಟಿರುವುದು.

ಏರ್ ನ್ಯೂಝಿಲೆಂಡ್ ಹಾರಿದಂತೆ, ಅದಕ್ಕಾಗಿಯೇ ಕಾಯುತ್ತಿದ್ದು ಧರೆಗಿಳಿದ ದೊಡ್ಡ ವಿಮಾನ "ಏರ್ ಪೆಸಿಫಿಕ್ ".


ಏರ್ ಪೆಸಿಫಿಕ್ ಇಳಿಯುವುದನ್ನೇ ಕಾಯುತ್ತಿದ್ದು, ಗಗನಕ್ಕೆ ಹಾರಿತು ಮತ್ತೊಂದು ಪುಟಾಣಿ ಏರ್ ನ್ಯೂಝಿಲೆಂಡ್. ಒಂದು ಇಳಿದರೆ ನಾಲಕ್ಕು ಇಂತಹ ಪುಟಾಣಿಗಳು ಹಾರುತ್ತಿದ್ದವು.
ಏರ್ ನ್ಯೂಝಿಲೆಂಡಿನ ವಿಮಾನ ನೆಲಕ್ಕಿಳಿದು ನಿಲ್ಲಲು ಜಾಗ ಹುಡುಕುತ್ತಿದ್ದಂತೆ, ಹೊರಡಲು ರೆಡಿಯಾದ ಕಾಂಟಾಸ್, ಹಿನ್ನೆಲೆಯಲ್ಲಿ ಲೈಟ್ ಹಾಕಿಕೊಂಡು ಇಳಿಯುತ್ತಿರುವ ಎಮಿರೇಟ್ಸ್!


ಒಂದರ ಹಿಂದೆ ಒಂದರಂತೆ ಆಕಾಶಕ್ಕೆ ಹಾರಿದ ಕ್ಯಾಥೇ ಪೆಸಿಫಿಕ್, ಮಲೇಶಿಯನ್ ಏರ್ ಲೈನ್ಸ್, ಕಾಂಟಾಸ್!
ಎಲ್ಲರಿಗೂ ಕೂತಲ್ಲೇ ಟಾಟಾ ಮಾಡಿ ಮುಗಿಸಿದರೂ ಥಾಯ್ ನ ಸುಳಿವೇ ಇಲ್ಲ...ಒಂದು ಗಂಟೆಗೆ ಹೊರಡುತ್ತದೆಂದು ಹೇಳಿದ್ದರಲ್ಲ, ಎಂದು ಅಂದುಕೊಳ್ಳುತ್ತಿರುವಾಗಲೇ ಹೊರಬಂದ ಥಾಯ್ ಏರ್ ವೇಸ್.
ಎಲ್ಲ ವಿಮಾನಗಳು ಹೊರಟ ನಂತರ ಕಡೆಗೆ ಹೊರಟ ಥಾಯ್ ಏರ್ ವೇಸ್.


ವಿಮಾನ ಕಣ್ಮರೆಯಾಗುವವರೆಗೂ ನೋಡಿ ಹೊರಡಲು ಅಣಿಯಾದೆವು. ನಮ್ಮ ಕೋಪಗಳನ್ನು ಶಮನಗೊಳಿಸಲೆಂದೋ ಏನೋ, ಊಟ ಮಾಡಲು ಶಾಪಿಂಗ್ ಮಾಲುಗಳಿಗೆ ಹೋಗೋಣವೆಂದರು. ಒಳಗೇ ಖುಷಿಯಾದರೂ ತೋರಗೊಡಬಾರದೆಂದು," ಎಂಥದ್ದೂ ಬೇಕಿಲ್ಲ, ನಡೆಯಿರಿ ವಾಪಸು ಮನೆಗೆ ಹೋಗಿ ಊಟ ಮಾಡಿದರಾಯಿತು..." ಎಂದು ಒಣ ಜಂಭ ತೋರಿದೆವು.


ಕಡೆಗೆ ಸೆಂಟ್ ಲೂಕ್ಸ್ ಶಾಪಿಂಗ್ ಮಾಲ್ ನ ಇಂಡಿಯನ್ ರೆಸ್ಟೋರೆಂಟಿನಲ್ಲಿ ಊಟ ಮಾಡಿ, ಒಂದೆರಡು ಬಣ್ಣಗೆಟ್ಟ ( ನಮ್ಮವರ ಭಾಷೆಯಲ್ಲಿ) ಇಯರ್ ರಿಂಗ್ ಗಳನ್ನು ತೆಗೆದುಕೊಂಡು, ಮನೆ ದಾರಿ ಹಿಡಿದೆವು. " ಇಲ್ಲಿಗಿಂತ, ಇಂಡಿಯಾದಲ್ಲೇ ಚೆನ್ನಾಗಿರುವುದು ಸಿಗುವುದಿಲ್ಲವೆ? ಇಲ್ಲಿ ಸಿಗುವ 9 ಕ್ಯಾರೆಟ್ ಚಿನ್ನಾಭರಣಗಳನ್ನು ನೋಡಿದರೆ, ನಮ್ಮ ಫ್ಯಾನ್ಸಿ ಸ್ಟೋರಿನ ಗೋಲ್ಡ್ ಕವರಿಂಗೇ ಎಷ್ಟೋ ಝಗಮಗ ಅನ್ನುತ್ತವೆ...ಅದೂ ಅಲ್ಲದೇ ಇಲ್ಲಿ ಸಿಗುವುದೆಲ್ಲವೂ ಮೇಡ್ ಇನ್ ಚೈನಾಗಳೇ...ಅದನ್ನೇನು ಶಾಪಿಂಗ್ ಮಾಡುವುದು..." ಎಂದು ಉದ್ದಕೂ ಭಾಷಣ ಬಿಗಿದುಕೊಂಡೇ ಬಂದರು. ನಮಗೇನು ಇವೇನು ಗೊತ್ತಿಲ್ಲದಿಲ್ಲ, ಅಂದರೂ ಹೋದಲ್ಲಿ ಬಂದಲ್ಲಿ ಶಾಪಿಂಗ್ ಮಾಡಿಲ್ಲವೆಂದರೆ ನಮ್ಮ ಜನ್ಮ ಸಾರ್ಥಕವಾಗುವುದಾದರೂ ಹೇಗೆ ;-).

Monday, 21 April 2008

Cape Reinga - ಕೇಪ್ ರಿಯಾಂಗ

ಕಾವಕವದಿಂದ ನಮ್ಮ ಪ್ರಯಾಣ ಮುಂದುವರೆದದ್ದು 90 ಮೈಲಿ ಬೀಚ್ ಗೆ.
4 x 4 ಜೀಪಿದ್ರೆ ಬೀಚ್ ಮೇಲೆ ಜುಂ ಅಂತ ಹೋಗ್ಬೋದು. ಇಲ್ಲದಿದ್ದರೆ, ಮರಳಲ್ಲಿ ಕಾರು ಹೂತು ಹೋಗಿ, ಆ ಕಡೆಯಿಂದ ಅಲೆಗಳ ಬಡಿತಕ್ಕೆ ಕಾರು ಕೊಚ್ಚಿ ಹೋಗಲೂ ಬಹುದು. ಆದ್ದರಿಂದ ಮೊದಲೇ ಎಚ್ಚರಿಕೆ ಬೋರ್ಡ್ ಹಾಕಿದ್ದಾರೆ. ಕೆಲವು ಟೂರ್ ಬಸ್ ಗಳು ಬೀಚಿನ ಮೇಲೆ ಕರೆದೊಯ್ಯುತ್ತಾರೆ.

90 ಮೈಲ್ ಬೀಚಿನಿಂದ ನಮ್ಮ ಪ್ರಯಾಣ " ಕೇಪ್ ರಿಯಾಂಗ " ಎನ್ನುವ ನ್ಯೂಜಿಲೆಂಡಿನ ತುತ್ತ ತುದಿಗೆ. ಇಲ್ಲಿಗೆ ನ್ಯೂಜಿಲೆಂಡಿನ ಉತ್ತರ ಭೂಭಾಗ ಕೊನೆಗೊಳ್ಳುತ್ತದೆ. ಭರ್‍ರೆಂದು ಬೀಸುವ ಗಾಳಿಗೆ ಹಾರಿ ನೀರಿಗೆ ಬೀಳುತ್ತೇವೇನೋ ಅನ್ನಿಸುತ್ತದೆ. ಇಲ್ಲಿಂದ ಆತ್ಮಗಳು ಮುಕ್ತಿಯನ್ನು ಹೊಂದುತ್ತವೆ ಎಂದು ಇಲ್ಲಿನ ಮೌರಿಜನರ ನಂಬಿಕೆಯಂತೆ. ಇದ್ದರೂ ಇರಬಹುದು ಬರ್ರೋ ಎಂದು ಬೀಸುವ ಗಾಳಿಗೆ ಸಿಕ್ಕಿದರೆ ತರಗೆಲೆಗಳಂತೆ ಹಾರಿಹೋಗುತ್ತೇವೇನೋ ಅನ್ನಿಸುತ್ತಿತ್ತು.ಇಲ್ಲಿ ಟಾಸ್ಮೆನ್ ಸಮುದ್ರ ಬಂದು ಪೆಸಿಫಿಕ್ ಸಾಗರದಲ್ಲಿ ಲೀನವಾಗುತ್ತದೆ. ನೀರಿನ ರಭಸ ಹೆಚ್ಚಂತೆ ಇಲ್ಲಿ. ಗಾಳಿ ಮತ್ತು ನೀರುಗಳೆರಡು ಸ್ಪರ್ಧೆಗೆ ಬಿದ್ದವರಂತೆ ಆರ್ಭಟಿಸುತ್ತವೆ.


ಕೇಪ್ ರಿಯಾಂಗದಲ್ಲಿರುವ ಸುಂದರ ಲೈಟ್ ಹೌಸನ್ನು ಎತ್ತಲು ಶ್ರಮಪಟ್ಟಿರುವುದು :D. ನಾನು ಹೀಗೆ " ನಿಂತಿದ್ದನ್ನು ' ನೋಡಿ, ಇನ್ನೂ ಕೆಲವರು " ಮೇಲಿನಿಂದ ಅಮುಕಿದಂತೆ, ಎರಡೂ ಕೈಗಳಲ್ಲಿ ಹೂವು ಹಿಡಿದಂತೆ, ಮತ್ತೊಬ್ಬ ರಂಭೆ, ತುದಿಬೆರಳಿನಿಂದ ಅಮುಕಿದಂತೆ"ನಿಂತು, ನನ್ನನ್ನು ಕಾಪಿಚೆಟ್ ಮಾಡಿದರು.


ಕೇಪ್ ರಿಯಾಂಗದ ಲೈಟ್ ಹೌಸನ್ನು ಎತ್ತಿದ ಸಾಹಸ ಮಾಡಿದ ನಂತರ ನಮ್ಮ ಪ್ರಯಾಣ ನ್ಯೂಜೆಲೆಂಡಿನಲ್ಲಿ ಅತೀ ದೊಡ್ಡದಾದ "ಮರಳುದಿಣ್ಣೆಗಳ" ಕಡೆಗೆ. ನೋಡಿದಾಗ " ಅಯ್ಯೋ ಇಷ್ಟೇಯೇ..." ಅನ್ನಿಸಿ ಏರಲು ಶುರುಮಾಡಿದೆವು. ಆದರೇನು..ಎಷ್ಟು ಏರಿದರೂ ಕೊನೆಯೇ ಸಿಗುತ್ತಲಿಲ್ಲ...ಒಂದು ಗುಡ್ಡ ಏರಿದ ನಂತರ ಮತ್ತೊಂದು ಅದಕ್ಕೆ ಅಂಟಿಕೊಂಡಂತೆ! ನಮ್ಮ ಸ್ನೇಹಿತರ ಮನೆಯವರೆಲ್ಲರೂ ಸೋಲೊಪ್ಪಿಕೊಂಡು ಅರ್ಧಕ್ಕೇ ಕೂತುಬಿಟ್ಟರು. ಸ್ನೇಹಿತರ ತಂಗಿ, ತೆಳ್ಳಗೆ ಬಳಬಳುಕುತ್ತ ಇದ್ದುದರಿಂದಲೇ ಏನೋ ಸಲೀಸಾಗಿ ಏರತೊಡಗಿದರು. ನನಗಂತೊ ಇದು ಮರ್ಯಾದೆಯ ಪ್ರಶ್ನೆಯಾಗಿದ್ದಿತು. " ಮನೆಯಲ್ಲೇ ಕೂತು ತೂಕ ಹೆಚ್ಚುಮಾಡಿಕೊಂಡಿದ್ದೀಯಾ, ಅದಕ್ಕೆ ಇಷ್ಟು ಏದುಸಿರು " ಎಂದು ಯಜಮಾನರು ಹಂಗಿಸಿದ್ದರಿಂದ ಛಲ ಬಿಡದೇ ಉಸ್ಸ್ ಉಸ್ಸ್ ಅನ್ನುತ್ತಲೇ ಏರಿದೆ.
ಮರಳದಿಣ್ಣೆಯ ತುದಿಗೆ ಏರಿ ನಿಂತಾಗ ಕಂಡ ದೃಶ್ಯ. ಯಾವ ದಿಕ್ಕಿಗೆ ನೋಡಿದರೂ ಮರಳು...ಮರಳು. ಕ್ಷಣಕ್ಕೊಮ್ಮೆ ಬೀಸುವ ಗಾಳಿ ನಮ್ಮ ಕಣ್ಣು ಮೂಗಿಗೆ ಮರಳು ತುಂಬಿದಲ್ಲದೇ ಹೆಜ್ಜೆ ಗುರುತುಗಳನ್ನೇ ಅಳಿಸುತ್ತಿತ್ತು. ಬೀಚಿನಲ್ಲಿ ನಿಂತು ಬರೀ ನೀರು, ಆಕಾಶ ನೋಡಿದ್ದ ನನಗೆ ಇದೊಂದು ವಿನೂತನ ಅನುಭವ. ಸಾಗರದಷ್ಟೇ ಅಗಾಧವಾಗಿ ಮರಳು ಹರಡಿಕೊಂಡು, ಸಾಗರದ ಪಕ್ಕ ಮರುಭೂಮಿ ಇದೆಯೇನೋ ಅನ್ನಿಸುತ್ತದೆ.

ಹತ್ತುವಾಗ ಇದ್ದ ಏದುಸಿರು, ಇಳಿದು ಕೆಳಗೆ ಹರಿಯುವ ನೀರಿನಲ್ಲಿ ಕಾಲಿಟ್ಟಾಗ ಹಾಯ್ ಎನ್ನಿಸಿ, ದಣಿವೆಲ್ಲಾ ಹಾರಿಹೋದಂತಾಯಿತು.

ಬೆಟ್ಟದ ಬುಡದಿಂದ ಕಾರು ನಿಲ್ಲಿಸಿದ ಸ್ಥಳಕ್ಕೆ ಪದ ಹೇಳುತಿದ್ದ ಕಾಲುಗಳನ್ನು ಎಳೆದುಕೊಂಡು ಬಂದು ಕಾರಿನಲ್ಲಿ ಕುಕ್ಕರಿಸಿ ನಮ್ಮ ನಮ್ಮ ಗೂಡು ಸೇರಿಕೊಂಡೆವು.

Tuesday, 15 April 2008

KAWAKAWA ಊರಿನ ವಿಶೇಷಗಳು.

ಸ್ನೇಹಿತರ ಮನೆಗೆ ಊರಿನಿಂದ ಅವರ ತಂಗಿ ಬಂದಿದ್ದರು. ನ್ಯೂಜಿಲೆಂಡಿನ ದಕ್ಷಿಣ ಭೂ ಭಾಗವನ್ನು ನೋಡಿದ್ದಾಗಿತ್ತು, ಇನ್ನು ಉತ್ತರ ಭಾಗವನ್ನು ನೋಡಲು ಹೊರಟಿದ್ದರು. ನಾವು ಅವರ ಜೊತೆ ಹೊರಟಿದ್ದೆವು. ದಾರಿಯಲ್ಲಿ " ಕಾವಕವ " ಎಂಬ ಈ ಊರು ಸಿಕ್ಕಿತು. 'ಕಾವಕವ' ಎಂದರೆ, Maori ಅವರ ಒಂದು ಔಷಧಿಯುಕ್ತ ಗಿಡ. ಇಲ್ಲಿ ಈ ಗಿಡಗಳು ಹೆಚ್ಚಾಗಿ ಸಿಗುತ್ತಿದ್ದರಿಂದ ಊರಿಗೆ ಇದೇ ಹೆಸರಿಟ್ಟಿದ್ದಾರೆ. ಬರೀ ಗಿಡ,ಮರ, ಬೀಚು ಇಷ್ಟೇ ನೋಡಿ, ಕಡೆ ಕಡೆಗೆ ಅವರಿಗೆ..." ಏನಕ್ಕಾ...ನ್ಯೂಜಿಲೆಂಡ್ ಅಂದರೆ ಎಲ್ಲಾ ಊರು ಒಂದೇ ತರ ಅನ್ನಿಸುತ್ತದೆ, ಯಾವ ಊರಿಗೆ ಹೋದರೂ ಅದೇ ತರಹದ ಬೀಚು, ಗಿಡ, ಮರ, ಬೆಟ್ಟ, ಗುಡ್ಡ ..." ಅಂದಿದ್ದರಿಂದ ಈ ಊರಿನಲ್ಲಿ ನಿಲ್ಲಿಸಿ, " ನೋಡು ತಂಗಿ...ಇಡೀ ನ್ಯೂಜಿಲೆಂಡಿನಲ್ಲಿರದ ವಿಶೇಷ ಈ ಊರಿನಲ್ಲಿದೆ" ಎಂದು ತೋರಿಸಿದೆವು. ಅಂತಾದ್ದೇನು ವಿಶೇಷ ಅನ್ನುತ್ತೀರಾ? ಬನ್ನಿ ನಿಮಗೂ ತೋರಿಸುತ್ತೇನೆ.

ಇದೇನು ನಮ್ಮ ಪಾಪಕರ್ಮಗಳನ್ನು ಕಳೆದುಕೊಳ್ಳಲು ಕಟ್ಟಿರುವ ದೇವಾಲಯ ಅಂದು ಕೊಂಡಿರಾ? ಅಲ್ಲಾ....ನಮ್ಮ ದೈನಿಕ ಕರ್ಮಗಳನ್ನು ಕಳೆದುಕೊಳ್ಳಲು ಕಟ್ಟಿರುವುದು! ಇದು ವಿಶ್ವ ವಿಖ್ಯಾತವಂತೆ! ಇದರ ವಿನ್ಯಾಸವನ್ನು ನೋಡಲು ದೇಶ ವಿದೇಶಗಳಿಂದ ಜನ ಬರುತ್ತಾರಂತೆ! ಒಟ್ಟಿನಲ್ಲಿ ಈ ಊರೇ ಇದಕ್ಕೆ ಫೇಮಸ್! ಇದರ ಮುಂದೆ ಒಂದೆರಡು ತಾಸು ನಿಂತರೆ ನಿಮ್ಮ ಫೋಟೋ ಬೇರೆ ಬೇರೆ ದೇಶಗಳಿಂದ ಬಂದ ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಹಿಡಿಯಲ್ಪಡುತ್ತದಂತೆ! . ಯಾಕೆಂದರೆ ಅಷ್ಟು ಜನ ಪ್ರವಾಸಿಗರು ಇದನ್ನು ನೋಡಲು ಬರುತ್ತಾರೆ.ಇದೊಂದು ಸಾರ್ವಜನಿಕ ಶೌಚಾಲಯ! ಈ ಊರಿನ ಕೌನ್ಸಿಲ್ ಸಾರ್ವಜನಿಕ ಶೌಚಾಲಯಗಳನ್ನು ನವೀಕರಿಸಬೇಕೆಂದಿದ್ದಾಗ ಈ ಪುಣ್ಯಾತ್ಮ ಬಂದು ಇದನ್ನು ವಿನ್ಯಾಸಗೊಳಿಸಿದನಂತೆ. ಇದರ ಒಳಾಂಗಣ ಅಲಂಕಾರವೆಲ್ಲವೂ ಇಲ್ಲಿನ ಕಾಲೇಜು ವಿದ್ಯಾರ್ಥಿಗಳದು. ಏನಪ್ಪಾ ಇದರ ವಿಶೇಷ ಎಂದರೆ, ಇದರ ಕಟ್ಟಡವನ್ನು ಕಟ್ಟಿರುವಾತ ದೊಡ್ಡ ಶಿಲ್ಪಿ Frederick Hundertwasser ಅವನ ಜೀವನದ ಕಡೆಯ ಕಾಲವನ್ನು ಕಳೆಯಲು ಇಲ್ಲಿಗೆ ಬಂದನಂತೆ. ಈ ಊರಿನ ಅಂದ ಚಂದ ನೋಡಿ ಮನಸೋತು ಕಡೆಗೆ ಈ ಊರಿಗೆ ಏನಾದರೂ ಒಳ್ಳೆಯದು ಮಾಡಬೇಕೆಂದುಕೊಂಡು ಈ ಶೌಚಾಲಯವನ್ನು ಕಟ್ಟಿದನಂತೆ. ಇದನ್ನು ಕಟ್ಟಿರುವುದು, ಆಧಾರ ಕೊಟ್ಟಿರುವುದು, ಎಲ್ಲವೂ ಬಳಸಿದ ವೈನ್ ಬಾಟಲ್ ಗಳು. ಇದಕ್ಕೆ ಬಳಸಿರುವ ಪರಾರ್ಥಗಳೆಲ್ಲವೂ ಒಮ್ಮೆ ಬಳಸಿದವುಗಳು.ಒಮ್ಮೆ ಯಾರೋ ತುಂಟ ಹುಡುಗರು ಒಂದೆರಡು ಬಾಟಲ್ ಗಳನ್ನು ಇದರಿಂದ ತೆಗೆದಿದ್ದರಂತೆ. ಮತ್ತೆ ವೈನ್ ಬಾಟಲ್ ಗಳನ್ನು ಅದೇ ಜಾಗಕ್ಕೆ ಕೂಡಿಸಿದ್ದಾರೆ.

ಈ ಊರಿನ ಮತ್ತೊಂದು ವಿಶೇಷ ಏನಪ್ಪಾ ಅಂದ್ರೆ, ಊರಿನ ಮಧ್ಯದಲ್ಲೇ ರೈಲ್ವೇ ಲೈನು ಹಾಕಿದ್ದಾರೆ. ತಾಸಿಗೊಮ್ಮೆ ಗೂಡ್ಸ್ ರೈಲು ರಸ್ತೆಯ ಮಧ್ಯದಲ್ಲೇ ಹಾದು ಹೋಗುತ್ತದೆ. ಇಡೀ ನ್ಯೂಜಿಲೆಂಡಿನಲ್ಲಿ ಈ ರೀತಿ ಇರುವುದು ಇದೊಂದೇ ಊರಿನಲ್ಲಿ.
ನಮ್ಮ ಹುಡುಗಿ ಈ ಊರಿನ ಶೌಚಾಲಯ ನೋಡಿ ಅದೆಷ್ಟು ಇಂಪ್ರೆಸ್ ಆಗಿ ಬಿಟ್ಟಳೆಂದರೆ, ವಾಪಸ್ಸು ಹೋದ ಮೇಲೆ ಅವಳ ಸ್ನೇಹಿತರಿಗೆ ಗೆಸ್ ಮಾಡಲು ಕೇಳುತ್ತಾಳಂತೆ! ನಿಮಗೇನಾದರೂ ಈ ಚಿತ್ರ fwd ಮೇಲ್ ಬಂದರೆ ತಕ್ಷಣ ಉತ್ತರಿಸಲು ಮರೆಯದಿರಿ.

Sunday, 6 April 2008

ಡೇ ಲೈಟ್ ಸೇವಿಂಗೂ ನನ್ನ ಡೇ ಸೇವಿಂಗೂ

ಇವತ್ತು ಬೆಳಿಗ್ಗೆ ಏಳಲೇ ಬೋರ್...ಭಾನುವಾರ ಬೇರೆ ಯಾರಾದರೂ ಬೇಗ ಎದ್ದರೆ ಅಪಚಾರವಲ್ಲವೇ..ಆದರೂ ಯಜಮಾನರು ವೀಕೆಂಡ್ಸ್ ಬಿಡುವಾದಾಗ ( ಹವಾಮಾನ ಹದಗೆಟ್ಟಾಗ :D) ಸೇಂಟ್ ಜಾನ್ ಗೆ ಸ್ವಯಂಸೇವಕ " ಅಂಬುಲೆನ್ಸ್ ಆಫೀಸರ್" ಅಗಿ ಕೆಲಸ ಮಾಡುತ್ತಿರುತ್ತಾರೆ. ನೆನ್ನೆಯೇ ಸೇಂಟ್ ಜಾನ್ ನವರು ಫೋನ್ ಮಾಡಿ ಇವತ್ತು ಬೆಳಿಗ್ಗೆ 8ಗಂಟೆಗೆ ಬರಬೇಕಿಂದಿದ್ದರಿಂದ ಭಾನುವಾರವಾದರೂ ಬೆಳಿಗ್ಗೆ ಏಳಲೇ ಬೇಕಾಗಿತ್ತು. ನಿಮ್ಮ ವಾಲೆಂಟರಿ ಕೆಲಸವೂ ಸಾಕು, ನಾನು ಬೆಳಗಾಗೆದ್ದು ( ಅದೂ ಭಾನುವಾರ ) ರೆಡಿ ಮಾಡುವುದು ಸಾಕು...ಈ ಚಳಿಯಲ್ಲಿ ಬೇಗ ಏಳುವ ಕರ್ಮ ನಂದು...ಹಾಗೆ ಹೀಗೆ ಗೊಣಗಿಕೊಂಡೇ ಎದ್ದೆ.

ಲಂಚ್ ಕೊಡುತ್ತೇವೆ ಎಂದರೂ ಅವರ ಪ್ರಕಾರ ಕೋಳಿ ಮೊಟ್ಟೆ, ಮೀನು ಎಲ್ಲವೂ ವೆಜಿಟೇರಿಯನ್ನೇ! ಆದ್ದರಿಂದ ಎಲ್ಲಿಗೇ ಹೋಗಲಿ ಮನೆಯಿಂದಲೇ ಡಬ್ಬಿ ಕಟ್ಟಿಬಿಡುತ್ತೇನೆ. ಇವತ್ತು ಅದಿಕ್ಕೆಯೇ ನನ್ನ ಗೊಣಗಾಟ. ತಿಂಡಿಯ ಚಿಂತೆಯೇನೋ ಇರಲಿಲ್ಲ. ಯಜಮಾನರಿಗೆ ಬೆಳಿಗ್ಗೆ ಬ್ರೆಡ್, ಟೀ ಕೊಟ್ಟರೆ ಮುಗಿಯಿತು. ಅನಂದವಾಗಿ ತಿಂದು ಹೊರಡುತ್ತಾರೆ. ಮಧ್ಯಾಹ್ನದ್ದೆ ಯೋಚನೆಯಿತ್ತು...ಏನು ಮಾಡುವುದು ಎಂದು ಹಲ್ಲುಜ್ಜಿ, ಮುಖ ತೊಳೆದು ಕನ್ನಡಿಯಲ್ಲಿ ನೋಡಿಕೊಂಡು ನನಗೇ ನಾನೇ " ಅಯ್ಯೋ, ಭಾನುವಾರ ಬೇಗ ಎದ್ದಿದ್ದಕ್ಕೆ ಕಣ್ಣೆಲ್ಲಾ ಕೆಂಪಗೆ ಊದಿಕೊಂಡಿವೆ, ನಿದ್ದೆ ಸಾಲಲೇ ಇಲ್ಲ..." ಅಂದುಕೊಳ್ಳುತ್ತಲೇ ಸಡನ್ ತಲೆಯ ಮೇಲೆ ಲೈಟ್ ಹೊತ್ತಿತು..." ಅರೇ ಇವತ್ತು ಡೇ ಲೈಟ್ ಸೇವಿಂಗ್ ಕೊನೆ! ಅಂದರೆ ಈಗಿನ್ನೂ ಆರೂವರೆ!" ಯಜಮಾನರು ಆಗಲೇ ಟೀ ಮಾಡಲು ಇಟ್ಟಿದ್ದರು.

ಅವರೂ ಗಮನಿಸಿರಲಿಲ್ಲ, " ಹೋ ಹೌದಲ್ಲ! ಹಾಗಿದ್ದರೂ ಈಗಿನ್ನೂ ಆರೂವರೆ, ನಿಧಾನಕ್ಕೆ ತಯಾರಾದರಾಯಿತು...ನೀನು ತಿಂಡಿಯೇ ಮಾಡಿಬಿಡು, ಇವತ್ತು ಬ್ರೆಡ್ ಬೇಡ ಎಂದು ಉದಾರತನ ತೋರಿದರು. ಮತ್ತೇನು ಮಾಡುವುದು ಹೇಗಿದ್ದರೂ ಅವಲಕ್ಕಿ ಇದೆ, ಅದನ್ನೇ ಅಲಂಕರಿಸಿದರಾಯಿತು ಎಂದು ಅವಲಕ್ಕಿ ಒಗ್ಗರಣೆ ಮಾಡಿ ಅದನ್ನೇ ಡಬ್ಬಿಗೆ ಮೊಸರು, ಸಲಾಡ್ ಜೊತೆ ಕಟ್ಟಿದೆ.


ಮೊದಲು ನನಗೆ ಇಲ್ಲಿ ಬಂದಾಗ, ಇವರ ಒಂದು ಗಂಟೆ ಹಿಂದೆ ಹಾಕುವ, ಒಂದು ಗಂಟೆ ಮುಂದೆ ಹಾಕುವ ರೀತಿಯೇ ಗೊತ್ತಿರಲಿಲ್ಲ. ನಮ್ಮಲ್ಲಂತೂ ಈ ಗೊಂದಲವೇ ಇರಲಿಲ್ಲ. ಇಲ್ಲಿನವರು ಬೇಸಿಗೆಯಲ್ಲಿ ಒಂದು ಗಂಟೆ ಮುಂದೆ ಹಾಕುವುದು, ಚಳಿಗಾಲದಲ್ಲಿ ಒಂದು ಗಂಟೆ ಹಿಂದೆ ಹಾಕುವುದು ನೋಡಿ, ಹೇಗಪ್ಪಾ ಇವರ ಲೆಕ್ಕಾಚಾರ ಎನಿಸುತ್ತಿತ್ತು. ನಾವೇನೋ ಗಡಿಯಾರ ನೋಡಿ ಸಮಯ ತಿಳಿಯುತ್ತೇವೆ, ಈ ಹಕ್ಕಿಗಳು ಹೇಗೆ? ಅವೂ ಬೇಗ ಗೂಡಿಗೆ ಮರಳುತ್ತವೆಯೇ? ಒಂದು ಗಂಟೆ ಬೇಗ ಬರಬೇಕೆಂದು ಅವಕ್ಕೆ ಹೇಗೆ ಗೊತ್ತಾಗುತ್ತದೆ? ಹೂವುಗಳು ಸಂಜೆಯಾದಂತೆಲ್ಲಾ ಮುದುಡುವುದನ್ನು ಕಂಡಿದ್ದ ನನಗೆ, ಇವತ್ತಿನಿಂದ ಒಂದು ಗಂಟೆ ಬೇಗ, ಅಥವಾ ಲೇಟಾಗಿ ಮುದುಡಿಕೊಳ್ಳುತ್ತವೆಯೇ ಎಂದೆಲ್ಲಾ ತಲೆಕೆಡಿಸಿಕೊಂಡಿದ್ದ ನನಗೆ, ಆಮೇಲೆ ಗೊತ್ತಾಯಿತು. ಇದೆಲ್ಲಾ ನಮ್ಮ ಲೆಕ್ಕಕ್ಕಷ್ಟೇ. ಬೇಸಿಗೆಯಲ್ಲಿ ನಮಗೆ ರಾತ್ರಿ ಹತ್ತಾದರೂ ಇನ್ನೂ ಸಂಜೆ ಆರರ ಬಿಸಿಲಿನಂತೆ ಬೆಳಕಿರುತ್ತದೆ. ಇನ್ನು ಸಂಜೆ ಆರುಗಂಟೆಯಂತೂ ಮಧ್ಯಾಹ್ನದ ಬಿಸಿಲಿನಂತೆ ಮುಖಕ್ಕೆ ರಾಚುತ್ತಿರುತ್ತದೆ. ಆದರೆ ಈ ಹಕ್ಕಿಗಳಾಗಲಿ, ಹೂವುಗಳಾಗಲಿ ಯಾವುದೇ ಸೇವಿಂಗ್ ಗಳಿಗೆ ತಲೆಕೆಡಿಸಿಕೊಂಡಿಲ್ಲ. ಸೂರ್ಯನ ಬಿಸಿಲಿನಲ್ಲಿ ನಗುನಗುವ ಬಗೆಬಗೆಯ ಡೈಸಿಗಳು, ಸಂಜೆ ಆರಾಗುತ್ತಿದ್ದಂತೆ ಎಷ್ಟೆ ಬೆಳಕಿದ್ದರೂ ಎಲ್ಲವೂ ಮುದುಡಿಕೊಳ್ಳುತ್ತಿದ್ದವು. ಹಕ್ಕಿಗಳು ತಮ್ಮ ತಮ್ಮ ಗೂಡಿಗೆ ಮರಳಿ ಬಂದು, ವೈರಿನ ಮೇಲೆ ಉದ್ದಕ್ಕೂ ಕೂತು ಒಳ್ಳೆ ನರ್ಸರಿ ಮಕ್ಕಳ ಶಾಲೆಯಂತೆ ಗಿಜಿಗಿಜಿ ಎಂದು ಗಲಾಟೆಮಾಡುತ್ತಿದ್ದವು.


ಹಾಗಿದ್ದರೆ ಈ ಸೇವಿಂಗ್ ಗಳು ನಮಗೆ ಮಾತ್ರ! . ಬೇಸಿಗೆಯಲ್ಲಿ ಹೆಚ್ಚು ಬೆಳಕಿರುವುದರಿಂದ ಕಡಿಮೆ ವಿದ್ಯುಚ್ಛಕ್ತಿಯನ್ನು ಬಳಸುತ್ತೇವಂತೆ. ವಾರಾಂತ್ಯದ ದಿನಗಳು ಉದ್ದವಿವೆಯಲ್ಲ ಎಂದು ಖುಷಿಯೆನಿಸುತ್ತದೆ. ಊರಿಂದೂರಿಗೆ ಪ್ರಯಾಣ ಮಾಡುವಾಗ ಗಂಟೆ ಹತ್ತಾಗಿದ್ದರೂ " ನೈಟ್ ಜರ್ನಿ" ಎಂದು ಭಯಪಡಬೇಕಿರುವುದಿಲ್ಲ. ಲೇಟಾಗಿ ಕತ್ತಲಾಗುವುದರಿಂದ ಆರಾಮವಾಗಿ ಊರೆಲ್ಲಾ ಸುತ್ತಬಹುದು. ಪ್ರಪಂಚದ ಅನೇಕ ದೇಶಗಳು ಈ " ಡೇ ಲೈಟ್ ಸೇವಿಂಗ್ಸ್ ಪದ್ಧತಿಯನ್ನು ಅನುಸರಿಸುತ್ತವೆ.ನಮ್ಮಲ್ಲಿ ಡೇ ಲೈಟ್ ಸೇವಿಂಗ್ಸ್ 30 ಸೆಪ್ಟಂಬರ್ 2007 ಇಂದ 6 ಏಪ್ರಿಲ್ 2008ಗೆ ಕೊನೆಗೊಂಡಿತು, ಮುಂದಿನ ಡೇ ಲೈಟ್ ಸೇವಿಂಗ್ 29 ಸೆಪ್ಟಂಬರ್ ರಿಂದ 5 ಏಪ್ರಿಲ್ 2009 ಅಂತೆ.

ಇವತ್ತಿನಿಂದ ಅಂದರೆ ಏಪ್ರಿಲ್ 6ರ ಬೆಳಿಗ್ಗೆಯಿಂದ ನಾವು ಒಂದು ಗಂಟೆ ಹಿಂದೆ! ನಮ್ಮ ನಮ್ಮ ಗಡಿಯಾರಗಳನ್ನು ಒಂದು ಗಂಟೆ ಹಿಂದೆ ಹಾಕಿದೆವು.