Thursday 15 May 2008

ನಾ ಕಂಡ ವಿಭಿನ್ನ ಸಂಸ್ಕೃತಿ

ಈ ವಾರ, ಹೋದ ವಾರ ಎಲ್ಲವೂ ಮಳೆ ಬಿಡದೆ ಸುರಿದಿದ್ದರಿಂದ ಎಲ್ಲೂ ಹೊರಗೆ ಹೋಗದೆ ಮನೆಯಲ್ಲೇ ಇದ್ದೆವು. ಎದುರು ಮನೆಯಲ್ಲಿ ಏನೋ ಜೋರಾಗಿ ಪಾರ್ಟಿ ನಡೆಸಿದ್ದರಿಂದ ಸಹಜವಾಗಿ ನನ್ನ ಕಣ್ಣು, ಕಿವಿ ಅತ್ತಕಡೆಗೇ ಇದ್ದವು.


ಯಜಮಾನರು ಈ ಊರಿಗೆ ಬಂದಾಗ ನಾನಿನ್ನೂ ಅಮ್ಮನ ಮನೆಯಲ್ಲೇ ಕವಳ ಕತ್ತರಿಸಿಕೊಂಡಿದ್ದೆ. ಅವರು ಮೊದಲು ಬಂದು ಮನೆ ನೋಡಿ ಸೆಟ್ ಮಾಡಿದ ಮೇಲೆ ಬರುವ ಯೋಚನೆ ಹಾಕಿದ್ದರಿಂದ, ಅವರಿಗೂ ಮನೆ ಅಷ್ಟು ಬೇಗನೆ ಸಿಕ್ಕಲಿಲ್ಲವಾದ್ದರಿಂದ ಆರಾಮವಾಗಿ ಅಮ್ಮನ ಮನೆಯಲ್ಲಿ ಇದ್ದೆ. ಮನೆ ಸಿಗುವವರೆಗೂ ಯಜಮಾನರು ಸ್ನೇಹಿತರ ಮನೆಯಲ್ಲಿದ್ದರು. ಕಡೆಕಡೆಗೆ ನೀನು ಬಂದು ಬಿಡು, ಒಟ್ಟಿಗೆ ಮನೆ ಹುಡುಕಿದರಾಯಿತು, ಆಮೇಲೆ " ಅದು ಹೀಗಿದೆ, ಹಾಗಿದೆ.." ಅನ್ನುತ್ತೀಯಾ, ನೀನು ಬಂದ ಮೇಲೆ ಮನೆ ಹುಡುಕುವ ವಿಚಾರ ಎಂದಿದ್ದರಿಂದ ಊರಿನಿಂದ ಹೊರಟೆ.


ಈ ಊರಿನಲ್ಲಿ ಬಿಸಿಲೊಂದೇ ಅಗ್ಗ. ಆದ್ದರಿಂದ ಉಳಿದವುಗಳೆಲ್ಲಾ ತುಟ್ಟಿ. ಮೊದಲೊಂದು ವಾರ ಮನೆಗಳ ಬೇಟೆ. ಮರದ ಮನೆಗಳ ಸಹವಾಸ ಸಾಕಾದ್ದರಿಂದ ಅವುಗಳ ತಂಟೆಗೇ ಹೋಗಲಿಲ್ಲ. ಅಂತೂ ಹುಡುಕಿ ಹುಡುಕಿ ಒಂದು ಮನೆ ಸೆಲೆಕ್ಟ್ ಮಾಡಿದೆವು. ಊರಿಗೆ ಹೋಗುವ ಮೊದಲು ಸ್ನೇಹಿತರ ಮನೆಯಲ್ಲಿ ನಮ್ಮ ಸಾಮಾನುಗಳನ್ನು ಇಟ್ಟಿದ್ದರಿಂದ, ಎಲ್ಲವನ್ನೂ ತರಿಸಿದೆವು.


ಬಂದ ಒಂದೆರಡು ದಿನ ಅಡಿಗೆ ಮಾಡುವ ಕೆಲಸವೇ ಇರಲಿಲ್ಲ. ದಿನಕ್ಕೆ ಒಬ್ಬೊಬ್ಬರು ಊಟಕ್ಕೆ, ತಿಂಡಿಗೆ ಎಂದು ಕರೆಯುತ್ತಿದ್ದರಿಂದ ನಾನೂ ಮನೆ ಸಾಮಾನುಗಳನ್ನು ಜೋಡಿಸುವ ಕೆಲಸಕ್ಕೆ ಹೋಗಿರಲಿಲ್ಲ.


ಎಂದಿನಂತೆ ಯಜಮಾನರು ಕೆಲಸಕ್ಕೆ ಹೊರಟ ಮೇಲೆ, ಸಾಮಾನುಗಳನ್ನು ಜೋಡಿಸಿದರಾಯಿತು ಎಂದು ಕೂತೆ. ಎಲ್ಲಿಂದ ಶುರು ಮಾಡಲಿ ಎಂದು ಯೋಚಿಸುತ್ತಿದ್ದಂತೆ ಬಾಗಿಲನ್ನು ಯಾರೋ ಮೆಲ್ಲಗೆ ಕಟ ಕಟಾಯಿಸಿದ ಸದ್ದು ಕೇಳಿತು. ನಮ್ಮ ಮನೆಗೆ ಈ ಹೊತ್ತಿನಲ್ಲಿ ಯಾರು ಬರುತ್ತಾರೆ?? ಅಥವಾ ಯಜಮಾನರು ಏನಾದರೂ ಮರೆತು ವಾಪಸ್ಸ್ ಬಂದರೇನೋ ಅಂದುಕೊಂಡರೆ, ಕಾರ್ ನ ಸದ್ದೇ ಆಗಿಲ್ಲವಲ್ಲ....ಮೊದಲೇ ಇದು " ಗ್ಯಾಂಗ್ ಗಳ ಏರಿಯಾ...ಅಲ್ಲಿ ಯಾಕೆ ಮನೆ ಮಾಡಲು ಹೋದಿರಿ...ಹುಷಾರಾಗಿರಿ ಎಂದೆಲ್ಲಾ ಇವರ ಸ್ನೇಹಿತರು ಹೆದರಿಸಿದ್ದು ನೆನಪಿಗೆ ಬಂತು. ಮತ್ತೆ ಬಾಗಿಲು ಕುಟ್ಟಿದ ಸದ್ದು ಕೇಳಿಬಂತು. ಮೆಲ್ಲಗೆ ಅಡಿಗೆ ಮನೆಯಿಂದ ಇಣುಕಿದರೆ ಯಾರೋ ಇಬ್ಬರು ನಿಂತಿದ್ದು ಕಾಣಿಸಿತು, ನೋಡಲು ಗ್ಯಾಂಗ್ ಲೀಡರ್ ಗಳ ತರವೇನೂ ಕಾಣಿಸಲಿಲ್ಲವಾದ್ದರಿಂದ, ಯಜಮಾನರ ಎಚ್ಚರಿಕೆಯ ಮಾತನ್ನೂ ತಳ್ಳಿ, ಮುಂದಿನ ಬಾಗಿಲನ್ನು ತೆಗೆದೆ.


ಒಬ್ಬ ದಡಿಯ ಗಂಡಸು, ಒಂದು ಚಿಕ್ಕ ಪುಟಾಣಿ ಹೆಂಗಸು ಹಲ್ಲು ಕಿರಿದು ನಿಂತಿದ್ದರು. ನಾನು ಹಲ್ಲು ಬಿಡುತ್ತಾ " ಯಾರಪ್ಪ ಇವರು...ಮೊದಲಿದ್ದ ಮನೆಯವರ ಪರಿಚಯದವರೇನೋ?" ಹಾಗಿದ್ದರೆ ನನ್ನನ್ನು ನೋಡಿದ ಮೇಲೆ " ಸಾರಿ" ಅನ್ನಬೇಕಿತ್ತಲ್ಲ....ಅಂದುಕೊಂಡೇ " ಯೆಸ್" ಎಂದೆ.

ಇಬ್ಬರೂ ನಮ್ಮ ಎದುರಿನ ಮನೆ ಕಡೆ ಕೈ ತೋರಿಸಿ, ಅದು ತಮ್ಮ ಮನೆಯೆಂದು, ನಾನು ಹೊಸದಾಗಿ ಬಂದಿದ್ದರಿಂದ ನನ್ನನ್ನು ಅ ಪರಿಚಯ ಮಾಡಿಕೊಳ್ಳಲು ಬಂದವರೆಂದು ತಿಳಿಯಿತು.


ನಾನು ಈ ಮನೆ ನೋಡಿದಷ್ಟೇ. ಅಕ್ಕ ಪಕ್ಕ, ಎದುರು ಮನೆಯಲ್ಲಿ ಎಂಥಹ ಜನರಿರುತ್ತಾರೋ ಎಂದು ತಲೆಕೆಡಿಸಿಕೊಂಡಿರಲಿಲ್ಲ.


" ಹಲ್ಲೋ....ಹೌ ಆರ್ ಯು...." ಎಂದು ಇಬ್ಬರೂ ಕೈ ಮುಂದು ಮಾಡಿದರು. ನೋಡಿದರೆ ಗಂಡಸು ಆರೇನು ಏಳು ಅಡಿ ಇರಬೇಕು, ಇನ್ನೊಂದು ಪುಟಾಣಿ ಹೆಂಗಸು, ಬಹುಶಃ ಮಗಳಿರಬೇಕು ಅಂದುಕೊಂಡು....ನಾನೂ " ಹಲ್ಲೋ..." ಎಂದು ಹಲ್ಲುಕಿರಿದೆ.


" ಆರ್ ಯು ಆಲ್ ರೈಟ್" ಎಂದ ದಡಿಯ...

ನಾನೂ " ಫೈನ್...ಫೈನ್..ಥ್ಯಾಂಕ್ಸ್" ಎಂದೆ. ಮನೆ ಒಳಗೇ ಕರೆಯಲೋ ಬೇಡವೋ?? ಮನೆ ನೋಡಿದರೆ ಎಲ್ಲಾ ಸಾಮಾನು ಕಿತ್ತಾಡಿ ಇಟ್ಟಿದ್ದೇನೆ...ಎಂದು ಕೊಳ್ಳುತ್ತಲೇ ಅವರ ಮುಖ ನೋಡಿದರೆ, ಇಬ್ಬರೂ ಹಲ್ಲು ಕಿರಿಯುತ್ತಲೇ ಇದ್ದಾರೆ!


ನಾನೂ ಆದದ್ದು ಆಗಲಿ, ಹೆಚ್ಚು ಕಡಿಮೆಯಾಗಿ ಇವರೇನಾದರೂ ಗ್ಯಾಂಗ್ ಕಡೆಯವರಾಗಿದ್ದರೆ, ಹೇಗಿದ್ದರೂ ರೂಮಿನ ಕಿಟಕಿ ದೊಡ್ಡದಿದೆ, ಹೊರಗೆ ಓಡಬಹುದು..ಎಂದೆಲ್ಲಾ ಧೈರ್ಯ ಹೇಳಿಕೊಂಡು...


" ಕಮ್...ಕಮ್...ಪ್ಲೀಸ್ ಕಮಾನ್ ಇನ್." ಎಂದೆ.


" ಥ್ಯಾಂಕ್ಸ್..." ಎಂದು ಅಲ್ಲೇ ನಿಂತರು.


ಒಳಗೆ ಇಣುಕಿ ನೋಡಿದ್ದರಿಂದ ಇಬ್ಬರಿಗೂ ಅರಿವಾಗಿರಬೇಕು...ಈ ಹೆಣ್ಣು ಇನ್ನೂ ಮನೆ ಜೋಡಿಸಿಲ್ಲಾ ಎಂದು....


ನನಗೆ ಇವರು ಯಾಕೆ ಬಂದಿದ್ದಾರೆ? ಕೇಳಿಯೇ ಬಿಡೋಣ ಎಂದುಕೊಳ್ಳುತ್ತಿರುವಾಗಲೇ-
ಅವನೇ " ಯುವರ್ ನೇಮ್ " ಅಂದ.

ನಾನೂ ಹಲ್ಲು ಕಿರಿಯುತ್ತಾ, ಒಂದು ನಾಕು ಸಲ ಹೆಸರು ಹೇಳಿದ ಮೇಲೆ ಅವರಿಗೆ ಗೊತ್ತಾಯಿತು.

ನನಗೆ ಇನ್ನೂ ಇವರಿಬ್ಬರ ಸಂಬಂಧ ಗೊಂದಲಮಯವಾಗಿತ್ತು. ಮಗಳೂ ಅಲ್ಲಾ, ಹತ್ತಿರದಿಂದ ನೋಡಿದರೆ ಹೆಂಗಸಿಗೆ ವಯಸ್ಸಾದಂತೆ ಕಾಣಿಸುತ್ತದೆ. ಗಂಡ ಹೆಂಡಿರಾ???!! ಭಗವಂತಾ ಎಲ್ಲಿಂದ ಜೋಡಿ ಮಾಡಿದೆ ಇವರಿಬ್ಬರಿಗೆ?! ಅವನ ಮುಖ ನೋಡಲು ಇವಳು ಒಂದು ನಾಕು ಅಡಿ ದೂರ ನಿಂತು ಮುಖ ಎತ್ತಿ ನೋಡಬೇಕು!


ಬಿಡುವಾದಾಗ ಟೀ ಬರಲು ಆಮಂತ್ರಣ ನೀಡಿ, ಇಬ್ಬರೂ ಬಾಯ್ ಎಂದು ಕೈ ಬೀಸಿ ಏನಾದರೂ ಸಹಾಯ ಬೇಕಿದ್ದರೆ ಕೇಳು ಎಂದು ಹೊರಟರು.


ನಾನು ಹೆಚ್ಚು ಮಾತನಾಡಲು ಹೋಗುತ್ತಿರಲಿಲ್ಲವಾದ್ದರಿಂದ, ಯಾವಾಗಲೋ ಹೊರಗೆ ಕಂಡರೆ ಬರೀ " ಹಾಯ್ ..ಹಲೋ" ಗಳಲ್ಲೇ ಮಾತು ಮುಗಿಸುತ್ತಿದ್ದೆವು. ಅದರೂ ನನಗೆ ಒಳಗೊಳಗೇ ಕುತೂಹಲ! ಇವರಿಬ್ಬರೇ ಯಾಕಿದ್ದಾರೆ? ಮಕ್ಕಳೆಲ್ಲಿ? ಒಮ್ಮೆ ಮಾತನಾಡುವಾಗ ಮಗಳು ಇದೇ ಊರಿನಲ್ಲಿದ್ದಾಳೆಂದು ಹೇಳಿದ್ದರು. ಆದರೆ ಒಮ್ಮೆಯೂ ಅವರ ಮಗಳನ್ನು ನಾನು ನೋಡಿರಲಿಲ್ಲ.


ಒಮ್ಮೆ ಯಾವುದೋ ಕೆಲಸದಲ್ಲಿದ್ದಾಗ, ಮನೆ ಮುಂದೆ ಕಾರ್ ಒಂದೇ ಸಮನೆ ಹಾರನ್ ಮಾಡುತ್ತಿದ್ದುದನ್ನು ಕಂಡು ಹಾಗೆ ಇಣುಕಿದೆ. ಮನೆ ಮುಂದೆ ಕಾರ್ ನಿಲ್ಲಿಸಿ ಒಂದು ಹೆಣ್ಣು ಟೈಟ್ ಪ್ಯಾಂಟ್, ಟೀ ಶರ್ಟ್ ಧಾರಿ, ಜೊತೆಗೆ ಮತ್ತೊಂದು ದಢೂತಿ ಹೆಣ್ಣು ಇಬ್ಬರೂ ಎದುರು ಮನೆ ಕಡೆ ಕೈ ಬೀಸಿ ಹಾರನ್ ಮಾಡುತ್ತ ಹೊರಡುತ್ತಿದ್ದರು. ಯಾರೋ ಗೆಳತಿಯರೇನೋ ಅಂದುಕೊಂಡು ಸುಮ್ಮನಾದೆ. ಅದೇ ಸಂಜೆ ಮತ್ತೆ ಅವರಿಬ್ಬರೂ ಎದುರು ಮನೆಗೆ ಬಂದಿದ್ದರಿಂದ, ಓಹೋ ಯಾರೋ ಅತಿಥಿಗಳೇನೋ ಅಂದುಕೊಂಡು ಯಜಮಾನರಿಗೆ.." ಯಾರೋ ಏನೋ...ಇಷ್ಟು ದಿನ ಬರದವರು, ಇವತ್ತು ಬೆಳಗ್ಗಿನಿಂದ ಇಲ್ಲೇ ಇದ್ದಾರೆ, ಈಗ ನೋಡಿದರೆ ಇಲ್ಲೇ ಉಳಿದುಕೊಂಡಿದ್ದಾರೆ, ಯಾರೋ ಹತ್ತಿರದವರೇ ಇರಬೇಕು..." ಎಂದೆಲ್ಲಾ ತಲೆ ಕೊರೆದಿದ್ದರಿಂದ ಅವರಿಗೂ ಸಾಕಾಗಿ..." ನಿಂದೊಳ್ಳೆ ಕತೆ, ಯಾರು ಯಾರ ಮನೆಗೆ ಬಂದರೇನು? ಸುಮ್ಮನಿದ್ದರಾಗದೇ??" ಎಂದು ರೇಗಿದ್ದರಿಂದ ಸುಮ್ಮಗಾದೆ. ಆದರೂ ಒಳಗೊಳಗೇ ಕುತೂಹಲ. ಬಂದವರು ಇನ್ನೂ ನಾಲ್ಕು ದಿನವಿದ್ದುದರಿಂದ ನನ್ನ ಕುತೂಹಲ ತಡೆಯಲಾರದಾಯಿತು. ನಮ್ಮ ಮನೆಗೆ ಯಾರೇ ಬರಲಿ, ಇವರಿಬ್ಬರೂ ಎದುರು ಸಿಕ್ಕರೆ ಪರಿಚಯ ಮಾಡಿಕೊಡುತ್ತಿದ್ದೆನಾದುದರಿಂದ, ಇವರು ಯಾರೆಂದು ಹೇಗೂ ಹೇಳುತ್ತಾರೆ ಎಂದುಕೊಂಡೇ ಸುಮ್ಮನಿದ್ದೆ. ಆದರೇನು ಮನೆಯಿಂದ ಗಂಡ ಹೆಂಡತಿ ಇಬ್ಬರೂ ಹೊರಬಂದಿಲ್ಲ. ಈ ಇಬ್ಬರು ಹೆಂಗಸರೇ ಹೊರಗೆ ಹೋಗುವುದು ಬರುವುದು...ಹೊರಡುವ ಮೊದಲು ಕಿವಿ ಕಿತ್ತುಹೋಗುವಂತೆ ಹಾರನ್ ಮಾಡುವುದನ್ನು ನೋಡಿ ನೋಡಿ ನನಗೂ ಸಾಕಾಗಿತ್ತು.


ಒಮ್ಮೆ ಪೋಸ್ಟ್ ತೆಗೆದುಕೊಳ್ಳಲು ಹೊರಗೆ ಬಂದಾಗ, ಪೋಷ್ಟಪ್ಪನಿಗೆ ನಮ್ಮ ಕೈತೋಟದ ಟೊಮೋಟೋ, ಸೌತೆಕಾಯಿ ಕೊಟ್ಟಿದ್ದರಿಂದ ಅವನೂ ನನ್ನ ನೋಡಿದಾಗಲೆಲ್ಲ, ಊಟ ತಿಂಡಿಯ ಬಗ್ಗೆ ವಿಚಾರಿಸುತ್ತಿರುತ್ತಾನೆ. ಊರಿನಿಂದ ಕಾಗದ ಬಂದರೆ, ಜೋಪಾನವಾಗಿ ಡಬ್ಬಕ್ಕೆ ಹಾಕದೆ ಮನೆಗೆ ಬಂದು ಕೊಡುತ್ತಾನೆ. ಅವತ್ತೇ ಊರಿನಿಂದ ಕೆಲವು ಕನ್ನಡ ಸಿನೆಮಾಗಳ ಡಿವಿಡಿ ಕಳಿಸಿದ್ದರು. ಮನೆ ಬಾಗಿಲ ಹತ್ತಿರ ಬಂದು, ನನ್ನ ಸಹಿ ತೆಗೆದುಕೊಂಡು ನಿಮ್ಮ ದೇಶದವರ ಬಳಿ ಸಿಕ್ಕಾಪಟ್ಟೆ ದುಡ್ಡಿರಬೇಕು, ಎಂದು ಐ.ಪಿ.ಲ್ ಕ್ರಿಕೆಟ್ ಬಗ್ಗೆ ಮಾತನಾಡಲು ಶುರು ಮಾಡಿದ. ನನಗೆ ಆ ಟಾಪಿಕ್ ಬಿಟ್ಟು ಬೇರೆ ಮಾತಾಡು ಎಂದಿದ್ದರಿಂದ ನಗುತ್ತ, ಹೊರಟ. ಎದುರು ಮನೆಯಿಂದ ಆ ಟೈಟ್ ಪ್ಯಾಂಟುಧಾರಿಯೂ ಹೊರಗೆ ಬಂದು ಪೋಸ್ಟ್ ವಿಚಾರಿಸುತ್ತಿದ್ದವಳು, ನನ್ನನ್ನು ಕಂಡವಳೇ ನಕ್ಕು ಕೈ ಮುಂದೆ ಮಾಡಿ ಹಾಯ್ ಹೆಲೋ ಹೇಳಿ ಅವರ ಮಗಳೆಂದು ಪರಿಚಯ ಮಾಡಿಕೊಂಡು ಮನೆಯೊಳಗೆ ಹೊರಟು ಹೋದಳು. ಅಂತೂ ನನ್ನ ಕುತೂಹಲಕ್ಕೊಂದು ವಿರಾಮ ಬಿತ್ತು. ಆ ದಢೂತಿ ಹೆಣ್ಣು ಅಷ್ಟರಲ್ಲಿ ಹೊರಗೆ ಬಂದಿದ್ದರಿಂದ ಇವಳು, ಅವಳ ಕತ್ತು ಬಳಸಿ ಮನೆಕಡೆ ತಿರುಗಿದ್ದರಿಂದ ನಾನೂ ಸುಮ್ಮನೆ ಒಳಗೆಬಂದೆ. ಚಿಕ್ಕವರಿದ್ದಾಗ ನಾವೂ ಹೀಗೆ ಫ್ರೆಂಡ್ಸ್ ಕತ್ತು ಕತ್ತು ಹಿಡಿದುಕೊಂಡು ಹೋಗುತ್ತಿದ್ದಿದು ನೆನಪಿಗೆ ಬಂದಿತು. ಬಹಳ ಕ್ಲೋಸ್ ಫ್ರೆಂಡ್ಸ್ ಇರಬಹುದು ಅದಕ್ಕೆ ಇಷ್ಟು ಅನ್ಯೋನ್ಯತೆ ಅಂದುಕೊಂಡು ಸುಮ್ಮನಾದೆ.


ಊರಿನಲ್ಲಿ ಹೆಚ್ಚು ಕಡಿಮೆ ಕಾಲೇಜು ಓದುವವರೆಗೂ ನಾವು ಒಬ್ಬರ ಮೇಲೊಬ್ಬರ ಹೆಗಲ ಮೇಲೆ ಕೈ ಹಾಕಿಕೊಂಡು ಹೋಗುತ್ತಿದ್ದೆವು. ಇಲ್ಲಿ ಹಾಗೆಲ್ಲ ಓಡಾಡುವ ಹುಡುಗ ಹುಡುಗಿಯರನ್ನು ಕಂಡಿದ್ದೇ ಇಲ್ಲ. ಯಜಮಾನರೊಡನೆ ಒಮ್ಮೆ ಆಕ್ಲೆಂಡ್ ಯೂನಿವರ್ಸಿಟಿಗೆ ಹೋಗಿದ್ದಾಗ ಅಲ್ಲಿ ಹುಡುಗಿಯರು ಮಾರು ದೂರ ಕೂತು ಮಾತನಾಡುವ, ಹ್ಹ..ಹ್ಹಾ...ಎಂದು ಜೋರಾಗಿ ನಕ್ಕು ಸಿಗರೇಟು ಎಳೆಯುವವರನ್ನು ಕಂಡಿದ್ದೇನೆಯೇ ಹೊರತು, ನಮ್ಮಗಳ ತರ ಕುತ್ತಿಗೆಗೆ ಜೋತು ಬಿದ್ದು, ಅಕ್ಕ ಪಕ್ಕ ಕೂತು ನೋಟ್ಸ್ ಕಾಪಿಮಾಡುವವರನ್ನಾಗಲೀ, ಜಡೆ ಎಳೆದು ರೇಗಿಸುವವರನ್ನಾಗಲೀ ಕಾಣದ್ದರಿಂದ ಒಂತರಾ ಭಣಭಣ ಅನ್ನಿಸುತ್ತಿತ್ತು. ಹಬ್ಬದ ಮರುದಿನ ಹೊಸ ಡ್ರೆಸ್ ಹಾಕ್ಕೊಂಡು ಹೋಗಿ, ಅದರ ಬಗ್ಗೆ ಎಲ್ಲರ( ಹುಡುಗರ :D) ಕಮೆಂಟುಗಳನ್ನು ಕೇಳಿ, ನಾವೂ ಹೇಳಿ, ಗೆಳತಿಯರ ದುಪ್ಪಟಾಗಳನ್ನು ನಾವೂ ಹೊದ್ದುಕೊಂಡು ನಮಗೆ ಕಲರ್ ಸೂಟ್ ಆಗುತ್ತದೋ ಇಲ್ಲವೋ ಎಂದೆಲ್ಲಾ ಸಂಭ್ರಮ ಪಡುತ್ತಿದ್ದೆವು. ನಮ್ಮೊಂದಿಗಿದ್ದ ಗೆಳತಿಗೆ ಓದುವಾಗಲೇ ಮದುವೆಯಾದ್ದರಿಂದ, ಅವಳು ದಿನವೂ ಸೀರೆಯುಟ್ಟು ಬರುತ್ತಿದ್ದಳು. ಕ್ಲಾಸಿನಲ್ಲಿ ಪಕ್ಕ ಕೂತು ಅವಳ ಸೆರಗಿನ ತುದಿಯನ್ನು ಹಿಡಿದು, ನಾವೂ ನಿರಿಗೆ ಹಿಡಿಯಲು ಅಭ್ಯಾಸ ಮಾಡಿಕೊಳ್ಳುತ್ತಿದ್ದಿದು, ಅವಳು " ಹಾಗಲ್ಲ ಕಣ್ರೇ...." ಎಂದು ಸೀನಿಯರ್ ಗತ್ತಿನಲ್ಲಿ ನಮಗೆಲ್ಲಾ ಹೇಳಿಕೊಡುತ್ತಿದ್ದದು...ಎಷ್ಟು ಚೆನ್ನಾಗಿತ್ತು. ಇಲ್ಲಿ ಒಂದೇ ರೀತಿಯ ಬಣ್ಣಗೆಟ್ಟ ಪ್ಯಾಂಟು, ಟೀ ಶರ್ಟ್ ಧಾರಿಗಳನ್ನೆಲ್ಲಾ ನೋಡುವಾಗ ನನ್ನ ಕಾಲೇಜು ದಿನಗಳು ನೆನಪಿಗೆ ಬಂತು.


ಮರುದಿನ ಇಬ್ಬರೂ ಫ್ರೆಂಡ್ಸೂ ಮಾಮೂಲಿ ಬೀದಿಗೆಲ್ಲಾ ಕೇಳುವಂತೆ ಹಾರನ್ ಮಾಡಿಕೊಂಡು ಹೊರಟಿದ್ದನ್ನು ನೋಡಿ, " ಓಹೋ ಅವರವರ ಮನೆಗೆ ಹೋದರೇನೋ" ಅಂದುಕೊಂಡು ಸುಮ್ಮನಾದೆ. ಸಂಜೆ ವಾಕಿಂಗ್ ಮುಗಿಸಿ ಬರುತ್ತಿದ್ದಾಗ ಗೇಟಿನ ಹತ್ತಿರವೇ ಸಿಕ್ಕ ದಂಪತಿಗಳು, ಮಗಳೂ ಮತ್ತು ಅವಳ ಗೆಳತಿಯೂ ಬಂದಿದ್ದರಿಂದ ಸಮಯ ಹೋಗಿದ್ದೇ ಗೊತ್ತಾಗಲಿಲ್ಲ, ಮಗಳು ತುಂಬಾ ಬುದ್ಧಿವಂತಳೆಂದೂ ಹೊಗಳಿಕೊಂಡರು. ಏನು ಮಾಡುತ್ತಿದ್ದಾಳೆ ಮಗಳು ಎಂಬ ನನ್ನ ಪ್ರಶ್ನೆಗೆ, ಅವಳು ' ಇಂಟೀರಿಯರ್ ಡಿಸೈನರ್" ಆಗಿ ಕೆಲಸ ಮಾಡುತ್ತಿದ್ದಾಳೆಂದೂ ಮತ್ತೊಮ್ಮೆ ಮಗಳನ್ನು ಮೆಚ್ಚಿಕೊಂಡು ಹೋದರು.


ಇದಾದ ಎರಡು ದಿನಕ್ಕೆ, ಮತ್ತೆ ಮಗಳೂ, ಅವಳ ಫ್ರೆಂಡೂ ಮನೆಗೆ ಬಂದರು. ಇದೇನು ಇಷ್ಟು ಕ್ಲೋಸ್ ಫ್ರೆಂಡ್ಸಾ? ಅಂದುಕೊಂಡು ಸುಮ್ಮನಾದೆ. ಅರ್ಧಗಂಟೆಯೊಳಗೇ ಬಾಗಿಲು ತಟ್ಟಿದ ಸದ್ದಾಗಿದ್ದರಿಂದ ತೆಗೆದು ನೋಡಿದರೆ, ಅಪ್ಪನೂ ಹಿಂದೆ ಮುಖವನ್ನು ಹಿಂಡಿಕೊಳ್ಳುತ್ತಾ ಮಗಳೂ ನಿಂತಿದ್ದರು. ಮಗಳ ಕೈಗೆ ಉಗುರುಸುತ್ತಾಗಿದೆ, ಅದಕ್ಕೆ ಯಾವ " ಆಂಟಿಬಯಾಟಿಕ್ಸ್" ಹಾಕಬೇಕೆಂದು ಯಜಮಾನರಿಗೆ ಕೇಳಲು ಬಂದಿದ್ದರು. ಈಗಾಗಲೇ ಯಾವುದೋ ಮಾತ್ರೆ ತೆಗೆದುಕೊಳ್ಳುತ್ತಿರುವುದಾಗಿ ಮಗಳು ಹೇಳಿದಳು. ಯಾವುದು ಮಾತ್ರೆಯೆಂದು ಇವರು ಕೇಳಿದ್ದರಿಂದ ಹೆಸರು ತನಗೆ ನೆನಪಿಲ್ಲವೆಂದೂ ತನ್ನ ಪಾರ್ಟನರ್ ಗೆ ಕೇಳಿಬರುವನೆಂದು ಹೋದಳು. ಅವಳ ಮಾತ್ರೆಯ ಬಗ್ಗೆ ಇವರು ಹೇಳಿ ಕಳಿಸಿದ ನಂತರ, ನಾನು ಕೇಳಿದೆ.." ಪಾರ್ಟನರ್ ಅನ್ನುತ್ತಾಳಲ್ಲಾ, ಪರವಾಗಿಲ್ಲವೇ, ಇಷ್ಟು ಚಿಕ್ಕ ವಯಸ್ಸಿಗೆ ಬಿಸಿನೆಸ್ ಮಾಡುತ್ತಾಳಲ್ಲ.." ಎಂದು ಉದ್ಗರಿಸಿದೆ. ಅವರೋ, " ನಿನ್ನ ಕಾಮರ್ಸ್ ಪಾಠದ " ಪಾರ್ಟನರ್" ಅಲ್ಲಾ....ಇವರ ಪ್ರಕಾರ, ಮದುವೆಯಾಗದೆ ಒಟ್ಟಿಗೆ ಇರುವ ಬಾಯ್ ಫ್ರೆಂಡ್/ಗರ್ಲ್ ಫ್ರೆಂಡ್ಸ್ ಗೆ ಪಾರ್ಟನರ್ ಗಳೆಂದು ಹೇಳಿಕೊಳ್ಳುತ್ತಾರೆ " ಅಂದರು. " ಹಾಗಿದ್ದರೆ, ಅವಳೊಡನೆ ಇದ್ದ ದಢೂತಿ ಹೆಣ್ಣು ಇವಳ ಪಾರ್ಟನರ್ರಾ??". ಎಲ್ಲೋ ಓದಿದ್ದು, ಕೇಳಿದ್ದಷ್ಟೇ ಇವರುಗಳ ಬಗ್ಗೆ." ಛೆ! ಇರಲಾರದು...ಅಥವಾ ಇದ್ದರೂ ಇರಬಹುದು...ಇವಳ ವೇಷ, ಅವಳು ಕೂದಲು ಕತ್ತರಿಸಿಕೊಂಡ ರೀತಿ ಎಲ್ಲವನ್ನೂ ಮೊದಲು ನೋಡಿದ್ದರೂ ಇವತ್ತು ಬೇರೆಯೇ ತರ ಯೋಚಿಸಿದಾಗ..." ಇದ್ಯಾವ ಸೀಮೆಯಪ್ಪಾ" ಎನಿಸಿದಂತೂ ನಿಜ.


ದಂಪತಿಗಳು, ಯಾಕೆ ನನ್ನ ಮುಖ ತಪ್ಪಿಸುತ್ತಿದ್ದರೆಂದು ನಿಧಾನವಾಗಿ ಹೊಳೆಯತೊಡಗಿತು. ದಂಪತಿಗಳು ಒಬ್ಬಳೇ ಮಗಳೆಂದು, ಮದುವೆಯಾದರೆ ಜೊತೆಯಲ್ಲೇ ಇರುತ್ತಾಳೆಂದು ಅವಳಿಗೆಂದೇ ಈ ಮನೆಕಟ್ಟಿಕೊಂಡಿರುವುದಾಗಿ ಒಮ್ಮೆ ಹೇಳಿದ್ದು ನೆನಪಿಗೆ ಬಂತು. ಆದರೂ ಅವರಿಬ್ಬರು ಆ ದಢೂತಿ ಹೆಣ್ಣನ್ನು ತಮ್ಮ ಮಗಳ ಗೆಳತಿಯೆಂದು ಹೇಳಿದ್ದರಿಂದ, ಮಗಳ ಆಯ್ಕೆ ಬಗ್ಗೆ ಅವರಿಗೆ ಅಸಮಾಧಾನ ಇರುವುದಂತೂ ಖಚಿತಗೊಂಡಿತು. ಮಗಳ ಮೇಲೆ ಅದೇನೇನು ಆಸೆಗಳನ್ನಿಟ್ಟುಕೊಂಡಿದ್ದರೋ, ಮಗಳು-ಅಳಿಯ ಎಂಬ ಮಾತೇ ಬರುವುದಿಲ್ಲವಲ್ಲ! ತಮ್ಮ ನಂತರ ಅಳಿಯ ಚೆನ್ನಾಗಿ ನೋಡಿಕೊಳ್ಳುತ್ತಾನೆಂದು ನೆಮ್ಮದಿ ಪಡುವ ಹಾಗೂ ಇಲ್ಲ. ಮಗಳ ಈ ರೀತಿಯ ಸಂಬಂಧ ನಮಗೆ ತಿಳಿಯುವುದು ಬೇಡ ಎಂದುಕೊಂಡಿದ್ದರೋ ಏನೋ...(ಕೆಲವೊಮ್ಮೆ ಮಾತಿಗೆ ಬಂದಾಗ ಇಬ್ಬರೂ ಇಲ್ಲಿನ " ಕಿವಿ" ಸಂಸ್ಕೃತಿಯನ್ನು ಟೀಕಿಸುತ್ತಿದ್ದಿದು ಯಾಕೆಂದು ಹೊಳೆಯಿತು)


ಇಲ್ಲಿ ಈ ರೀತಿಯ ಜೀವನ ಹೊಸದಲ್ಲವಾದ್ದರಿಂದ, ನನಗೇನೂ ಆಗಬೇಕಿರಲಿಲ್ಲ. ಆದರೂ ಪ್ರಕೃತಿ ಗಂಡು- ಹೆಣ್ಣು ಎಂದು ಸೃಷ್ಟಿಸಿರುವಾಗ ಪ್ರಕೃತಿಯ ವಿರುದ್ಧ ಹೋಗುವ ಕೆಲವರ ಪ್ರಯತ್ನ ನಿಜಕ್ಕೂ ನನ್ನ ಊಹೆಗೆ ಮೀರಿದ್ದು. ಪ್ರಾಣಿ ಪಕ್ಷಿಗಳಲ್ಲಿ ಈ ರೀತಿಯ " ಗೇ" ಮತ್ತು " ಲೆಸ್ಬಿಯನ್" ಸಂಬಂಧ ಇದೆಯೋ ಇಲ್ಲವೋ ಗೊತ್ತಿಲ್ಲ. ಹೆಣ್ಣು ಹೆಣ್ಣುಗಳೇ, ಗಂಡು ಗಂಡುಗಳೇ ವಿವಾಹವಾಗುವುದು, ಕೆಲವು ದೇಶಗಳು ( ನ್ಯೂಝಿಲೆಂಡ್ ಸಹಾ) ಆ ರೀತಿಯ ವಿವಾಹಗಳನ್ನು ಮಾನ್ಯ ಮಾಡುತ್ತವೆ ಕೂಡ. ಆದರೂ ಪ್ರಕೃತಿ ಸಹಜವಾದ ಕಾಮನೆಗಳನ್ನು ತಣಿಸಿಕೊಳ್ಳಲು ಇವರುಗಳು ಮೊರೆಹೋಗುವ ವಿಧಾನಗಳನ್ನು ತಿಳಿದರೆ, ಇವರುಗಳು ಹೀಗೆ ವಿವಾಹವಾಗಿ ಕಡಿದು ಕಟ್ಟೆಹಾಕುವುದಾದರೂ ಏನನ್ನು ಅನ್ನಿಸುತ್ತದೆ.


ವಾರಾಂತ್ಯದಲ್ಲಿ ಹೊರಗೆಲ್ಲೂ ಹೋಗಲಿಕ್ಕಾಗದೇ ಸುಮ್ಮನೇ ಮಳೆ ನೋಡುತ್ತಿದ್ದ ನನಗೆ ಎದುರು ಮನೆಯವರು ನಡೆಸುತ್ತಿದ್ದ ಪಾರ್ಟಿಯಿಂದ ಒಮ್ಮೆಲೇ ಹೊಮ್ಮಿದ ಕರ್ಕಶ ಹಾಡಿನ ಸದ್ದಿಗೆ ನನ್ನ ಯೋಚನಾಸರಣಿ ನಿಲ್ಲಿಸಿ ಎದ್ದೆ.

Sunday 4 May 2008

ನಮ್ ಬ್ಲಾಗಿಗೆ ಒಂದೊರ್ಷ!

ನಮ್ಮ್ ಬ್ಲಾಗೂದೂ ಹ್ಯಾಪೀ ಬರ್ತ್ ಡೇ! ದಿನ? ನಂಗೂ ಗೊತ್ತಿಲ್ಲ.. ಎಲ್ಲರ ಬ್ಲಾಗುಗಳನ್ನು ಓದುವಾಗ ಎಲ್ಲರದೂ ಹೆಚ್ಚು ಕಡಿಮೆ " ಹುಟ್ಟುಹಬ್ಬದ್ದೇ" ವಿಷಯಗಳನ್ನು ನೋಡಿ, " ಅರೆ ನಮ್ ದ್ಯಾವಾಗ ಬರ್ತ್ ಡೇ" ಅನ್ಕೊಂಡು ನೋಡಿದ್ರೆ ಈ ತಿಂಗಳೇ!


ಬ್ಲಾಗು ಅಂದ್ರೇನು ಅಂತ ಗೊತ್ತಿಲ್ಲದೇ ಇಲ್ಲದ ದಿನಗಳಲ್ಲಿ, ಬೆನ್ನು ತಟ್ಟಿ " ನೀವು ಬರೀರಿ ಮೇಡಂ" ಅಂತ ಏಣಿಯೇ ಇಲ್ಲದೆ ಹತ್ತಿಸಿದ್ದರಿಂದ ನೋಡಿಯೇ ಬಿಡುವ ಒಂದು ಕೈ ಅಂತ ಶುರು ಮಾಡಿ, ನಾಕೂವರೆ ಸಾವಿರ ಚಿಲ್ಲರೆ ಹಿಟ್ಟುಗಳನ್ನು ( ಅದೇನೋ ವೈರಸ್ಸುಗಳೂ ಜಾಸ್ತಿ ನಂಗೆ ) ತಿಂದಿದ್ದು ನನ್ನ ಮಟ್ಟಿಗೆ ದೊಡ್ಡ ಸಾಧನೆಯೇ.


ಏನು ಬರೆಯೋದಪ್ಪಾ ಅಂತ ಯೋಚನೆ ಮಾಡಿ, ಕಡೆಗೆ ಮೊಟ್ಟ ಮೊದಲನೇ ಬಾರಿಗೆ " ಕುಡ್ಕನ್ ಗೋಳು" ಅಂತ ಪದ್ಯ ಬರೆದು, ಅದನ್ನೇ ಬ್ಲಾಗಿನಲ್ಲೇ ಹಾಕಿಕೊಂಡು, ನಂತರ ಹೀಗೆ ಬರೆದು ಬಿಡುತ್ತೇನೆ ಅಂತ ಶುರು ಮಾಡಿ ನಂತರ ಬರೆದದ್ದೇ " ಮಳೆ" ನನ್ನ ಅನುಭವ ಕವನ :D. ಆಮೇಲೆ ಒಂದಷ್ಟು " ಜೋಕ್ಸು" ಗಳನ್ನು ಅಲ್ಲಿ ಇಲ್ಲಿ ಕದ್ದು ಹಾಕ್ಕೊಂಡು ಕ್ಯಾಸೆಟ್ ಜೋಕ್ಸ್ ಕೇಳಿದಂತೆ, ಮನಸು ಬೋರಾದಾಗ ಓದಿಕೊಳ್ಳುತ್ತಿದ್ದೆ.


ನಂತರ ಸ್ನೇಹಿತರೆಲ್ಲರೂ ನಿಮ್ಮ ನ್ಯೂಝಿಲೆಂಡ್ ಅನುಭವಗಳನ್ನೇ ಬರೆಯಿರಿ, ನೀವು ಏನೇನು ನೋಡಿದರಿ ಅದನ್ನೇ ಬ್ಲಾಗಿನಲ್ಲಿ ಹಾಕಿ ಎಂದು ಭಯಂಕರ ಸಲಹೆ ಕೊಟ್ಟಿದ್ದರಿಂದ ವಾರಕ್ಕೊಂದಾವರ್ತಿಯಾದರೂ ಯಜಮಾನರೊಂದಿಗೆ ಊರು ಸುತ್ತಲು ಹೊರಟು, ಅಲ್ಲಿ ನೋಡಿದ, ತಿಳಿದ ವಿಷಯಗಳನ್ನೇ ಇಲ್ಲಿ ಕುಟ್ಟಲು ಶುರು ಮಾಡಿದೆ.


ಪ್ರೀತಿಯಿಂದ ತಿದ್ದಿದ, ನೋಡಿದ, ಖುಷಿಪಟ್ಟು ಬೆನ್ನು ತಟ್ಟಿದ ಆತ್ಮೀಯ ಗೆಳೆಯ/ಗೆಳತಿಯರೆಲ್ಲರಿಗೂ ವಂದನೆಗಳು. ಹೀಗೆ ನನ್ನ ಕೊರೆತವನ್ನು ಸಹಿಸಿಕೊಳ್ಳುತ್ತೀರೆಂದು ನಂಬುತ್ತಾ.......aNILGIRIja.