Tuesday, 15 April 2008

KAWAKAWA ಊರಿನ ವಿಶೇಷಗಳು.

ಸ್ನೇಹಿತರ ಮನೆಗೆ ಊರಿನಿಂದ ಅವರ ತಂಗಿ ಬಂದಿದ್ದರು. ನ್ಯೂಜಿಲೆಂಡಿನ ದಕ್ಷಿಣ ಭೂ ಭಾಗವನ್ನು ನೋಡಿದ್ದಾಗಿತ್ತು, ಇನ್ನು ಉತ್ತರ ಭಾಗವನ್ನು ನೋಡಲು ಹೊರಟಿದ್ದರು. ನಾವು ಅವರ ಜೊತೆ ಹೊರಟಿದ್ದೆವು. ದಾರಿಯಲ್ಲಿ " ಕಾವಕವ " ಎಂಬ ಈ ಊರು ಸಿಕ್ಕಿತು. 'ಕಾವಕವ' ಎಂದರೆ, Maori ಅವರ ಒಂದು ಔಷಧಿಯುಕ್ತ ಗಿಡ. ಇಲ್ಲಿ ಈ ಗಿಡಗಳು ಹೆಚ್ಚಾಗಿ ಸಿಗುತ್ತಿದ್ದರಿಂದ ಊರಿಗೆ ಇದೇ ಹೆಸರಿಟ್ಟಿದ್ದಾರೆ. ಬರೀ ಗಿಡ,ಮರ, ಬೀಚು ಇಷ್ಟೇ ನೋಡಿ, ಕಡೆ ಕಡೆಗೆ ಅವರಿಗೆ..." ಏನಕ್ಕಾ...ನ್ಯೂಜಿಲೆಂಡ್ ಅಂದರೆ ಎಲ್ಲಾ ಊರು ಒಂದೇ ತರ ಅನ್ನಿಸುತ್ತದೆ, ಯಾವ ಊರಿಗೆ ಹೋದರೂ ಅದೇ ತರಹದ ಬೀಚು, ಗಿಡ, ಮರ, ಬೆಟ್ಟ, ಗುಡ್ಡ ..." ಅಂದಿದ್ದರಿಂದ ಈ ಊರಿನಲ್ಲಿ ನಿಲ್ಲಿಸಿ, " ನೋಡು ತಂಗಿ...ಇಡೀ ನ್ಯೂಜಿಲೆಂಡಿನಲ್ಲಿರದ ವಿಶೇಷ ಈ ಊರಿನಲ್ಲಿದೆ" ಎಂದು ತೋರಿಸಿದೆವು. ಅಂತಾದ್ದೇನು ವಿಶೇಷ ಅನ್ನುತ್ತೀರಾ? ಬನ್ನಿ ನಿಮಗೂ ತೋರಿಸುತ್ತೇನೆ.





ಇದೇನು ನಮ್ಮ ಪಾಪಕರ್ಮಗಳನ್ನು ಕಳೆದುಕೊಳ್ಳಲು ಕಟ್ಟಿರುವ ದೇವಾಲಯ ಅಂದು ಕೊಂಡಿರಾ? ಅಲ್ಲಾ....ನಮ್ಮ ದೈನಿಕ ಕರ್ಮಗಳನ್ನು ಕಳೆದುಕೊಳ್ಳಲು ಕಟ್ಟಿರುವುದು! ಇದು ವಿಶ್ವ ವಿಖ್ಯಾತವಂತೆ! ಇದರ ವಿನ್ಯಾಸವನ್ನು ನೋಡಲು ದೇಶ ವಿದೇಶಗಳಿಂದ ಜನ ಬರುತ್ತಾರಂತೆ! ಒಟ್ಟಿನಲ್ಲಿ ಈ ಊರೇ ಇದಕ್ಕೆ ಫೇಮಸ್! ಇದರ ಮುಂದೆ ಒಂದೆರಡು ತಾಸು ನಿಂತರೆ ನಿಮ್ಮ ಫೋಟೋ ಬೇರೆ ಬೇರೆ ದೇಶಗಳಿಂದ ಬಂದ ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಹಿಡಿಯಲ್ಪಡುತ್ತದಂತೆ! . ಯಾಕೆಂದರೆ ಅಷ್ಟು ಜನ ಪ್ರವಾಸಿಗರು ಇದನ್ನು ನೋಡಲು ಬರುತ್ತಾರೆ.















ಇದೊಂದು ಸಾರ್ವಜನಿಕ ಶೌಚಾಲಯ! ಈ ಊರಿನ ಕೌನ್ಸಿಲ್ ಸಾರ್ವಜನಿಕ ಶೌಚಾಲಯಗಳನ್ನು ನವೀಕರಿಸಬೇಕೆಂದಿದ್ದಾಗ ಈ ಪುಣ್ಯಾತ್ಮ ಬಂದು ಇದನ್ನು ವಿನ್ಯಾಸಗೊಳಿಸಿದನಂತೆ. ಇದರ ಒಳಾಂಗಣ ಅಲಂಕಾರವೆಲ್ಲವೂ ಇಲ್ಲಿನ ಕಾಲೇಜು ವಿದ್ಯಾರ್ಥಿಗಳದು. ಏನಪ್ಪಾ ಇದರ ವಿಶೇಷ ಎಂದರೆ, ಇದರ ಕಟ್ಟಡವನ್ನು ಕಟ್ಟಿರುವಾತ ದೊಡ್ಡ ಶಿಲ್ಪಿ Frederick Hundertwasser ಅವನ ಜೀವನದ ಕಡೆಯ ಕಾಲವನ್ನು ಕಳೆಯಲು ಇಲ್ಲಿಗೆ ಬಂದನಂತೆ. ಈ ಊರಿನ ಅಂದ ಚಂದ ನೋಡಿ ಮನಸೋತು ಕಡೆಗೆ ಈ ಊರಿಗೆ ಏನಾದರೂ ಒಳ್ಳೆಯದು ಮಾಡಬೇಕೆಂದುಕೊಂಡು ಈ ಶೌಚಾಲಯವನ್ನು ಕಟ್ಟಿದನಂತೆ. ಇದನ್ನು ಕಟ್ಟಿರುವುದು, ಆಧಾರ ಕೊಟ್ಟಿರುವುದು, ಎಲ್ಲವೂ ಬಳಸಿದ ವೈನ್ ಬಾಟಲ್ ಗಳು. ಇದಕ್ಕೆ ಬಳಸಿರುವ ಪರಾರ್ಥಗಳೆಲ್ಲವೂ ಒಮ್ಮೆ ಬಳಸಿದವುಗಳು.



ಒಮ್ಮೆ ಯಾರೋ ತುಂಟ ಹುಡುಗರು ಒಂದೆರಡು ಬಾಟಲ್ ಗಳನ್ನು ಇದರಿಂದ ತೆಗೆದಿದ್ದರಂತೆ. ಮತ್ತೆ ವೈನ್ ಬಾಟಲ್ ಗಳನ್ನು ಅದೇ ಜಾಗಕ್ಕೆ ಕೂಡಿಸಿದ್ದಾರೆ.





ಈ ಊರಿನ ಮತ್ತೊಂದು ವಿಶೇಷ ಏನಪ್ಪಾ ಅಂದ್ರೆ, ಊರಿನ ಮಧ್ಯದಲ್ಲೇ ರೈಲ್ವೇ ಲೈನು ಹಾಕಿದ್ದಾರೆ. ತಾಸಿಗೊಮ್ಮೆ ಗೂಡ್ಸ್ ರೈಲು ರಸ್ತೆಯ ಮಧ್ಯದಲ್ಲೇ ಹಾದು ಹೋಗುತ್ತದೆ. ಇಡೀ ನ್ಯೂಜಿಲೆಂಡಿನಲ್ಲಿ ಈ ರೀತಿ ಇರುವುದು ಇದೊಂದೇ ಊರಿನಲ್ಲಿ.




ನಮ್ಮ ಹುಡುಗಿ ಈ ಊರಿನ ಶೌಚಾಲಯ ನೋಡಿ ಅದೆಷ್ಟು ಇಂಪ್ರೆಸ್ ಆಗಿ ಬಿಟ್ಟಳೆಂದರೆ, ವಾಪಸ್ಸು ಹೋದ ಮೇಲೆ ಅವಳ ಸ್ನೇಹಿತರಿಗೆ ಗೆಸ್ ಮಾಡಲು ಕೇಳುತ್ತಾಳಂತೆ! ನಿಮಗೇನಾದರೂ ಈ ಚಿತ್ರ fwd ಮೇಲ್ ಬಂದರೆ ತಕ್ಷಣ ಉತ್ತರಿಸಲು ಮರೆಯದಿರಿ.

5 comments:

Anonymous said...

Thanks Nilgiri.

I am really surprised that someone would spend so much time and effort to design a public restroom(or bathroom)

Why only your friends sister, I am sure anyone would be impressed on seeing such a wonderful piece of architecture!

The railroad track that goes in the middle of road I believe that must be for a train that is used for joy ride or a commuter train, but then again I am not surprised if a huge diesel/electric train goes on those track knowing what people in that town are capable of doing(like they did with the restroom!)

Enjoyed your blog entry.

Keep blogging!

bhadra said...

ನಿತ್ಯಕರ್ಮಕ್ಕಾಗಿ ದೇಗುಲದಂತಹ ಕಟ್ಟಡವೇ? ಆ ಸ್ಥಳವನ್ನು ಉಪಯೋಗಿಸಲು ಹೇಗೆ ಮನಸ್ಸಾಗುವುದೋ ಏನೋ, ಸಧ್ಯ ನಾನಂತೂ ಅಲ್ಲಿಗೆ ಬರೋಲ್ಲ ಬಿಡಿ.

ಕಾಗೆ ಕವಕವ, ನಾಯಿ ಬೌಬೌ, ಗಾಳಿ ಸುಂಯ್ ಸುಂಯ್ ಅಂತ ಮಕ್ಕಳಿಗೆ ಹೇಳಿಕೊಟ್ಟಂತಿದೆ, ಈ ಊರಿನ ಹೆಸರು. ಅದಿರ್ಲಿ, ಕವಕವ ಅಂದ್ರೆ ಅರ್ಥ ಏನಂತೆ?

ರಸ್ತೆಯ ಮಧ್ಯದಲ್ಲಿ ರೈಲ್ವೇ ಲೈನು?! :o
ಆಶ್ಚರ್ಯ ಪಡಬೇಡಿ, ಮುಂಬಯಿಯ ದಾದರ, ಪರೇಲ ಮತ್ತು ಕೂಪರೇಜ್ ಗಳಲ್ಲಿಯೂ ಇದನ್ನು ಕಾಣಬಹುದು. ಇದು ಟ್ರಾಮ್ ಹಳಿ. ಈಗೀಗ ಟ್ರಾಮ್ ಬಳಕೆಯಲ್ಲಿ ಇಲ್ಲದಿರೋದ್ರಿಂದ, ರಸ್ತೆ ಆ ಹಳಿಗಳನ್ನು ಮುಚ್ಚಿ ಹಾಕುತ್ತಿದೆ. ಬಹುಶಃ ಕೊಲ್ಕತಾದಲ್ಲಿ ಕಾಣಬಹುದು ಎನಿಸುತ್ತದೆ.

ನೀವೇನೇ ಹೇಳಿ, ಏನೇ ವಿಷಯ ಕೊಡಲಿ, ಅದಕ್ಕೆ ಸುಂದರವಾದ ಒಂದು ರೂಪ ಕೊಟ್ಟು, ಲೇಖನ ಮತ್ತು ಅದಕ್ಕೆ ತಕ್ಕಂತಹ ಚಿತ್ರಗಳನ್ನು ಏರಿಸಿಬಿಡ್ತೀರ. ಅದೆಷ್ಟು ಬಾರಿ ನಾನು ಟೋಪಿ ಕೆಳಗಿಡಲೋ ಏನೋ! ಟೋಪಿ ನಿಮ್ಮ ಮನೆಯ ಅಂಗಳದಲ್ಲಿಯೇ ಇಟ್ಟುಬಿಡುವೆ

ವಿಸೂ: ಪ್ರತಿ ಗುರುವಾರ ಸಂಜೆ ಸುಧಾ ವಾರಪತ್ರಿಕೆ ಅಂಗಡಿಯಲ್ಲಿ ತೂಗುಹಾಕುವುದನ್ನೇ ಕಾಯುತ್ತಿರುತ್ತೇನೆ. ಹಾಗೆಯೇ ನೀಲಗಿರಿಯಲ್ಲಿ ಯಾವ ಹೂ ಬಿಟ್ಟಿದೆ ಅಂತ ಭಾನುವಾರ ಸಂಜೆಯಿಂದ ಕಾಯುತ್ತಿರುತ್ತೇನೆ. ಈ ಸಲ ಯಾಕೋ ತಡವಾಯ್ತು ಅನ್ನಿಸುತ್ತಿದೆ.

Anveshi said...

ನೀeeeeeeeಲಗಿರಿ ಅವರೆ,

ಏನೋ ಕವಕವಾಂತ ಕೇಳಿಸ್ತು. ಅದ್ಕಾಗಿ ಬಂದೆ. ನೋಡಿದ್ರೆ, ನಮ್ಮ ಪಾಪ ಕರ್ಮಗಳನ್ನೆಲ್ಲಾ ಬಹಿಷ್ಕರಿಸೋ ತಾಣವಿದು! ವೈನು ಕುಡಿದರೆ ಪಾಪವೆಲ್ಲಾ ತೊಳೆದು ಹೋಗುತ್ತದೆಯೋ ಅಂತ ವಿಚಾರಿಸಿದ್ರಾ?

ಅದಿರ್ಲಿ, ಊರಿನ ಮಧ್ಯೆಯೇ ಲೈನು ಹಾಕಿದ್ದು ಯಾಕಂತೆ? ಎಲ್ಲರ ಮಧ್ಯೆಯೇ ರೈಲು ಬಿಡೋದು ಯಾಕೆ?

Sumeru said...

Thumba chenagi narrate madideera Girija....:)
warm rgds
Sangeetha

NilGiri said...

@ anonymous (JH?),

ರಸ್ತೆ ಮಧ್ಯೆ ಡೀಸೆಲ್ ರೈಲು ತಾಸಿಗೊಮ್ಮೆ ಮರದ ದಿಮ್ಮಿಗಳನ್ನು ಹೊತ್ತು ಸಾಗುತ್ತದೆ.

ಬರಹ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು.

~~~~~~~~~~~~~~~~~~~~~~~~~~~
@ Srinivas Sir,
ಅಯ್ಯೋ! ನೀವು ನಮ್ಮೂರಿಗೆ ಬನ್ನಿ ಸಾರ್. ಹೊರಗಿನಿಂದ ನೋಡುವಿರಂತೆ ;)

ಕಾವಕವ ಎಂದರೇನು ಅಂತ ನೀವು ಕೇಳಿದ್ಮೇಲೆ ನನ್ನ ಬರಹನ ತಿದ್ದೀದೀನಿ :D. ಇಲ್ಲಿನ ಊರುಗಳ ಹೆಸರುಗಳೋ, ಕೈವಾಕ, ಕೈಪಾರ, ಕೈಕೋಹೆ, ಕಾವಕವ, ಇವೆಲ್ಲಾ ಸ್ಯಾಂಪಲ್ಲುಗಳು.

ಟೋಪಿ ಹಾಕಿದ್ದಕ್ಕೆ ಥ್ಯಾಂಕ್ಸು ಸರ್.

```````````````````````````````

ಅಸತ್ಯ ಅನ್ವೇಷಿಗಳೇ,

ವೈನು ಕುಡಿಯೋರನ್ನ ಕೇಳ್ಬೇಕೇನೋ...ಏನೋಪ್ಪಾ ನಾನಿದೆಲ್ಲಾ ಅನ್ವೇಷಿಸಿಯೇ ಇಲ್ಲ :D. ಎಲ್ಲಾ ಊರುಗಳಲ್ಲೂ ರೈಲು ಮನೆಯ ಹಿತ್ತಿಲು, ತಿಪ್ಪೆಗುಂಡಿ ಹಾದು ಹೋಗುವುದರಿಂದ ಇಲ್ಲಿ ಸ್ವಲ್ಪ ಛೇಂಚ್ ಇರಲಿ ಎಂದು ಹಾಕಿದ್ದಾರೆನಿಸಿತ್ತದೆ. ಇದೊಂದು ಪುಟಾಣಿ ಊರು, ಇರೋದೆ ಒಂದು ರೋಡ್. ರೈಲು ಬರೀ ಮರದ ದಿಮ್ಮಿಗಳನ್ನು ಸಾಗಿಸುತ್ತದೆ.

``````````````````````````

@ Sangeetha,

ಬರಹ ಮೆಚ್ಚಿಕೊಂಡಿದ್ದಕ್ಕೆ ಥ್ಯಾಂಕ್ಸು ಸಂಗೀತ.