Monday, 21 April 2008

Cape Reinga - ಕೇಪ್ ರಿಯಾಂಗ

ಕಾವಕವದಿಂದ ನಮ್ಮ ಪ್ರಯಾಣ ಮುಂದುವರೆದದ್ದು 90 ಮೈಲಿ ಬೀಚ್ ಗೆ.




4 x 4 ಜೀಪಿದ್ರೆ ಬೀಚ್ ಮೇಲೆ ಜುಂ ಅಂತ ಹೋಗ್ಬೋದು. ಇಲ್ಲದಿದ್ದರೆ, ಮರಳಲ್ಲಿ ಕಾರು ಹೂತು ಹೋಗಿ, ಆ ಕಡೆಯಿಂದ ಅಲೆಗಳ ಬಡಿತಕ್ಕೆ ಕಾರು ಕೊಚ್ಚಿ ಹೋಗಲೂ ಬಹುದು. ಆದ್ದರಿಂದ ಮೊದಲೇ ಎಚ್ಚರಿಕೆ ಬೋರ್ಡ್ ಹಾಕಿದ್ದಾರೆ. ಕೆಲವು ಟೂರ್ ಬಸ್ ಗಳು ಬೀಚಿನ ಮೇಲೆ ಕರೆದೊಯ್ಯುತ್ತಾರೆ.





90 ಮೈಲ್ ಬೀಚಿನಿಂದ ನಮ್ಮ ಪ್ರಯಾಣ " ಕೇಪ್ ರಿಯಾಂಗ " ಎನ್ನುವ ನ್ಯೂಜಿಲೆಂಡಿನ ತುತ್ತ ತುದಿಗೆ. ಇಲ್ಲಿಗೆ ನ್ಯೂಜಿಲೆಂಡಿನ ಉತ್ತರ ಭೂಭಾಗ ಕೊನೆಗೊಳ್ಳುತ್ತದೆ. ಭರ್‍ರೆಂದು ಬೀಸುವ ಗಾಳಿಗೆ ಹಾರಿ ನೀರಿಗೆ ಬೀಳುತ್ತೇವೇನೋ ಅನ್ನಿಸುತ್ತದೆ. ಇಲ್ಲಿಂದ ಆತ್ಮಗಳು ಮುಕ್ತಿಯನ್ನು ಹೊಂದುತ್ತವೆ ಎಂದು ಇಲ್ಲಿನ ಮೌರಿಜನರ ನಂಬಿಕೆಯಂತೆ. ಇದ್ದರೂ ಇರಬಹುದು ಬರ್ರೋ ಎಂದು ಬೀಸುವ ಗಾಳಿಗೆ ಸಿಕ್ಕಿದರೆ ತರಗೆಲೆಗಳಂತೆ ಹಾರಿಹೋಗುತ್ತೇವೇನೋ ಅನ್ನಿಸುತ್ತಿತ್ತು.







ಇಲ್ಲಿ ಟಾಸ್ಮೆನ್ ಸಮುದ್ರ ಬಂದು ಪೆಸಿಫಿಕ್ ಸಾಗರದಲ್ಲಿ ಲೀನವಾಗುತ್ತದೆ. ನೀರಿನ ರಭಸ ಹೆಚ್ಚಂತೆ ಇಲ್ಲಿ. ಗಾಳಿ ಮತ್ತು ನೀರುಗಳೆರಡು ಸ್ಪರ್ಧೆಗೆ ಬಿದ್ದವರಂತೆ ಆರ್ಭಟಿಸುತ್ತವೆ.






ಕೇಪ್ ರಿಯಾಂಗದಲ್ಲಿರುವ ಸುಂದರ ಲೈಟ್ ಹೌಸನ್ನು ಎತ್ತಲು ಶ್ರಮಪಟ್ಟಿರುವುದು :D. ನಾನು ಹೀಗೆ " ನಿಂತಿದ್ದನ್ನು ' ನೋಡಿ, ಇನ್ನೂ ಕೆಲವರು " ಮೇಲಿನಿಂದ ಅಮುಕಿದಂತೆ, ಎರಡೂ ಕೈಗಳಲ್ಲಿ ಹೂವು ಹಿಡಿದಂತೆ, ಮತ್ತೊಬ್ಬ ರಂಭೆ, ತುದಿಬೆರಳಿನಿಂದ ಅಮುಕಿದಂತೆ"ನಿಂತು, ನನ್ನನ್ನು ಕಾಪಿಚೆಟ್ ಮಾಡಿದರು.






ಕೇಪ್ ರಿಯಾಂಗದ ಲೈಟ್ ಹೌಸನ್ನು ಎತ್ತಿದ ಸಾಹಸ ಮಾಡಿದ ನಂತರ ನಮ್ಮ ಪ್ರಯಾಣ ನ್ಯೂಜೆಲೆಂಡಿನಲ್ಲಿ ಅತೀ ದೊಡ್ಡದಾದ "ಮರಳುದಿಣ್ಣೆಗಳ" ಕಡೆಗೆ. ನೋಡಿದಾಗ " ಅಯ್ಯೋ ಇಷ್ಟೇಯೇ..." ಅನ್ನಿಸಿ ಏರಲು ಶುರುಮಾಡಿದೆವು. ಆದರೇನು..ಎಷ್ಟು ಏರಿದರೂ ಕೊನೆಯೇ ಸಿಗುತ್ತಲಿಲ್ಲ...ಒಂದು ಗುಡ್ಡ ಏರಿದ ನಂತರ ಮತ್ತೊಂದು ಅದಕ್ಕೆ ಅಂಟಿಕೊಂಡಂತೆ! ನಮ್ಮ ಸ್ನೇಹಿತರ ಮನೆಯವರೆಲ್ಲರೂ ಸೋಲೊಪ್ಪಿಕೊಂಡು ಅರ್ಧಕ್ಕೇ ಕೂತುಬಿಟ್ಟರು. ಸ್ನೇಹಿತರ ತಂಗಿ, ತೆಳ್ಳಗೆ ಬಳಬಳುಕುತ್ತ ಇದ್ದುದರಿಂದಲೇ ಏನೋ ಸಲೀಸಾಗಿ ಏರತೊಡಗಿದರು. ನನಗಂತೊ ಇದು ಮರ್ಯಾದೆಯ ಪ್ರಶ್ನೆಯಾಗಿದ್ದಿತು. " ಮನೆಯಲ್ಲೇ ಕೂತು ತೂಕ ಹೆಚ್ಚುಮಾಡಿಕೊಂಡಿದ್ದೀಯಾ, ಅದಕ್ಕೆ ಇಷ್ಟು ಏದುಸಿರು " ಎಂದು ಯಜಮಾನರು ಹಂಗಿಸಿದ್ದರಿಂದ ಛಲ ಬಿಡದೇ ಉಸ್ಸ್ ಉಸ್ಸ್ ಅನ್ನುತ್ತಲೇ ಏರಿದೆ.




ಮರಳದಿಣ್ಣೆಯ ತುದಿಗೆ ಏರಿ ನಿಂತಾಗ ಕಂಡ ದೃಶ್ಯ. ಯಾವ ದಿಕ್ಕಿಗೆ ನೋಡಿದರೂ ಮರಳು...ಮರಳು. ಕ್ಷಣಕ್ಕೊಮ್ಮೆ ಬೀಸುವ ಗಾಳಿ ನಮ್ಮ ಕಣ್ಣು ಮೂಗಿಗೆ ಮರಳು ತುಂಬಿದಲ್ಲದೇ ಹೆಜ್ಜೆ ಗುರುತುಗಳನ್ನೇ ಅಳಿಸುತ್ತಿತ್ತು. ಬೀಚಿನಲ್ಲಿ ನಿಂತು ಬರೀ ನೀರು, ಆಕಾಶ ನೋಡಿದ್ದ ನನಗೆ ಇದೊಂದು ವಿನೂತನ ಅನುಭವ. ಸಾಗರದಷ್ಟೇ ಅಗಾಧವಾಗಿ ಮರಳು ಹರಡಿಕೊಂಡು, ಸಾಗರದ ಪಕ್ಕ ಮರುಭೂಮಿ ಇದೆಯೇನೋ ಅನ್ನಿಸುತ್ತದೆ.

ಹತ್ತುವಾಗ ಇದ್ದ ಏದುಸಿರು, ಇಳಿದು ಕೆಳಗೆ ಹರಿಯುವ ನೀರಿನಲ್ಲಿ ಕಾಲಿಟ್ಟಾಗ ಹಾಯ್ ಎನ್ನಿಸಿ, ದಣಿವೆಲ್ಲಾ ಹಾರಿಹೋದಂತಾಯಿತು.

ಬೆಟ್ಟದ ಬುಡದಿಂದ ಕಾರು ನಿಲ್ಲಿಸಿದ ಸ್ಥಳಕ್ಕೆ ಪದ ಹೇಳುತಿದ್ದ ಕಾಲುಗಳನ್ನು ಎಳೆದುಕೊಂಡು ಬಂದು ಕಾರಿನಲ್ಲಿ ಕುಕ್ಕರಿಸಿ ನಮ್ಮ ನಮ್ಮ ಗೂಡು ಸೇರಿಕೊಂಡೆವು.

7 comments:

bhadra said...

ವಾಹ್ ವಾಹ್! ಮತ್ತೊಂದು ಸುಂದರ ಬರವಣಿಗೆ
ಸುಂದರ ಚಿತ್ರಗಳು

ನಮ್ಮೂರಲ್ಲೂ ಉದ್ದಕ್ಕೂ ಬೀಚು ಇದೆ. ಎಲ್ಲಿ ನೋಡಿದ್ರೂ ನೀರು ಹಿಡಿದು ಕುಳಿತಿರ್ತಾರೆ ಇಲ್ಲಾಂದ್ರೆ ಲಲ್ಲೆ ಹೊಡೆಯುತ್ತಾ ಕುಳಿತಿರ್ತಾರೆ. ಕುಟುಂಬದೊಂದಿಗೆ ಹೋಗೋಕ್ಕೆ ಆಗದೇ ಇರೋ ಜಾಗ

ನನ್ನನ್ನೂ ನಿಮ್ಮೊಂದಿಗೆ ಪಿಕ್‍ನಿಕ್ಕಿಗೆ ಕರೆದೊಯ್ದಿದ್ದಕ್ಕೆ ಧನ್ಯವಾದಗಳು

ಈಗಾಗಲೇ ನೂಝಿಲೆಂಡ್ ತುದಿ ಮುಟ್ಟಿದ್ರಿ ಅಂದ್ರೆ, ಇಡೀ ದೇಶ ಸುತ್ತಿದ್ದು ಆಗಿ ಹೋಯಿತಾ? ಹಾಗಿದ್ರೆ ಬೇರೆ ದೇಶಕ್ಕೆ ಹಾರಿ ಹೋಗ್ತಿದ್ದೀರಾ?

ಗುಟ್ಟಿನ ವಿಷಯ : ಹ ಹ ಹ! ನಿಮ್ಮ ಕೈ ಕಾಣಿಸಿಬಿಡ್ತು. ಕೈಗೆ ಕಟ್ಟಿರುವ ಗಡಿಯಾರ ಕಾಣಿಸಿಬಿಡ್ತು.
ಅಷ್ಟು ಸಣಕಲು ಕೈ ಆದರೂ ದೀಪದ ಮನೆಯನ್ನೇ ಎತ್ತಿದ್ದೀರಿ ಅಂದ್ರೆ, ಬಹಳ ಗಟ್ಟಿಗಿತ್ತಿ ಎಂದೆನಿಸುತ್ತಿದೆ :D

Anonymous said...

ಧನ್ಯವಾದಗಳು ನೀಲ್ ಗಿರಿ

ಕೇಪ್ ರೀಯಾಂಗ ದ ಮೇಲಿನ ಬ್ಲಾಗ್ ತುಂಬಾ ಚನ್ನಾಗಿದೆ. ಲೈಟ್ ಹೌಸ್ ಅನ್ನು ಕೈ ಮೇಲೆ ಹಿಡಿದು ಕೊಂಡ ಹಾಗೆ ಕಾಣುವ ಚಿತ್ರ ತುಂಬಾ ಚನ್ನಾಗಿ ಮೂಡಿ ಬಂದಿದೆ. ಇದೆ ತರಹದ ಚಿತ್ರಗಳನ್ನು ನಾನು ಬೇರೆಯವರು ಇಟಲಿಯ Leaning Tower of Pisa ದಲ್ಲಿ ಆ ಸುಂದರ ಗೋಪುರಕ್ಕೆ ಒರಗಿ ಕೊಂಡಂತೆ ಕಾಣುವ ಚಿತ್ರವನ್ನು ತೆಗೆದು ತೋರಿಸಿದನ್ನು ನೆನಪಿಸಿಕೊಂಡೆ.

ದೂರ ದೇಶದಲ್ಲಿ ಇದ್ದುಕೊಂಡೆ ನನಗೆ ನಿಮ್ಮ ಬ್ಲಾಗ್ ಮೂಲಕ ನ್ಯೂ ಜೀಲ್ಯಾಂಡ್ ಬಗ್ಗೆ ಓದಿ ತಿಳಿದುಕೊಳ್ಳುವ ಒಂದು ಅವಕಾಶವನ್ನು ಮಾಡಿ ಕೊಟ್ಟಿದಿರಿ. ನಿಮ್ಮ ಪ್ರಯತ್ನಕ್ಕೆ ನನ್ನ ಪ್ರೋತ್ಸಾಹ ಎಂದಿಗೂ ಇದೆ.

ನಿಮ್ಮ ಬ್ಲಾಗ್ ಓದಿದರೆ ನ್ಯೂ ಜೀಲ್ಯಾಂಡ್ ನಿಜವಾಗಿಯೂ ಒಂದು ವಿಬಿನ್ನ ದೇಶ ಅನಿಸುತ್ತದೆ, ಅಲ್ಲಿ ಇರುವ ಪ್ರೇಕ್ಷಣೀಯ ಸ್ಥಳಗಳು, ಅಲ್ಲಿನ ಊರುಗಳ ಚರಿತ್ರೆ ತುಂಬ ವಿಬಿನ್ನವಾಗಿವೆ.

ಜೀವನದಲ್ಲಿ ಆವಕಾಶ ಒದಗಿ ಬಂದರೆ ನ್ಯೂ ಜೀಲ್ಯಾಂಡ್ ದೇಶವನ್ನು ಒಂದು ಸಲ ನೋಡುವ ಆಸೆ ನನಗೆ!

ಜೆ ಹೆಚ್!

Shubha said...

TVS and JH have said whatever I wanted to express Nilgiri... It is pleasure to read your blog. Thanks for the NZ trip everyweek....

Sumeru said...

Hello Girija! as usual thumba chenagi ide nimma writing, thanks Girija for sharing.....
Rgds
Sangeetha..

maddy said...

girija,
Light house pic tumba chennagide...

once again i like nimma 'mugdha bhaase' in blog posts..

Madhu :)

ಸುಪ್ತದೀಪ್ತಿ suptadeepti said...

ಸರಳ ಶೈಲಿಯ ಲವಲವಿಕೆಯ ಬರಹ ಖುಷಿ ಕೊಟ್ಟಿತು. ಚಿತ್ರಗಳು ಬಣ್ಣ ತುಂಬಿದವು. ಧನ್ಯವಾದಗಳು.

NilGiri said...

@ Srinivas Sir,
ಇಲ್ಲಿ ಇರೋದೇ ನಲವತ್ತು+ ಸಾವಿರ ಜನ ಸಾರ್. ಆದೂ ಅಲ್ಲದೇ ಸುತ್ತಮುತ್ತಲೆಲ್ಲಾ ಬೀಚುಗಳಿರುವುದರಿಂದ ಒಮ್ಮೊಮ್ಮೆ ಜನ ಕಮ್ಮಿ ಬೀಳುತ್ತಾರೆ :D.

ಇನ್ನೂ ನ್ಯೂಝಿಲೆಂಡ್ ಪೂರ್ತಿ ನೋಡಿಲ್ಲ ;-) ಸದ್ಯಕ್ಕೆ ದೇಶ ಬಿಡುವ ಯೋಚನೆಯಿಲ್ಲ ಸಾರ್.

ಬರಹ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು ಸಾರ್.

``````````````````````````````

@ J.H,

ಬರಹ ಮೆಚ್ಚಿಕೊಂಡು ಪ್ರೋತ್ಸಾಹಿಸಿದಕ್ಕೆ ಧನ್ಯವಾದಗಳು ಜೆ.ಎಚ್. ನಿಜಕ್ಕೂ ಒಮ್ಮೆ ನೋಡಲೇ ಬೇಕಾದ ದೇಶ. ನೀವು ಬನ್ನಿ. ನಿಮ್ಮನ್ನು ನೋಡಿಕೊಳ್ಳುವ ಜವಾಬ್ದಾರಿ ನಮ್ಮದು.

``````````````````````````````

ಬರಹ ಮತ್ತು ಚಿತ್ರಗಳನ್ನು ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು @ ಶುಭಾ, ಸಂಗೀತ, ಮಧು ಮತ್ತು ಸುಪ್ತದೀಪ್ತಿಯವರಿಗೆ.