Wednesday, 11 June 2008

ನೆಗಡಿ ಎಂಬ ಮಹಾರೋಗ!

ನಮ್ಮೂರಿಗೆ ಎಂತದೋ ಪ್ಲೂ ಬರಬಹುದು, ಅದಕ್ಕಾಗಿ ಎಲ್ಲರೂ ವ್ಯಾಕ್ಸೀನ್ ಹಾಕಿಸಿಕೊಳ್ಳಿ ಎಂದು ಎಲ್ಲಾ ಕಡೆ ಬರೆಸಿಹಾಕಿದ್ದರು. ಮೊದಲೇ ಇಂಜಕ್ಷನ್, ಮಾತ್ರೆ ಎಂದರೆ ಮಾರು ದೂರು ಓಡುವ ನಾನು, " ಹೇ, ಇದೆಲ್ಲಾ, ನಾನಿರೋ ಕಡೆ ಬರೋ ಹೊತ್ತಿಗೆ ನೋಡಿಕೊಳ್ಳೋಣ...." ಎಂದು, ಯಜಮಾನರು ಎಷ್ಟು ಹೇಳಿದರೂ ಇಂಜಕ್ಷನ್ ತೆಗೆದುಕೊಳ್ಳಲಿಲ್ಲ. ಅದೂ ಅಲ್ಲದೆ, ಆ ಪ್ಲೂ ಊರು ಬಿಟ್ಟು, ಬೆಟ್ಟ ಹತ್ತಿ ನಾನಿರೋ ಮನೆಗೆ ಬರುತ್ತಾ? ನಿಮಗಾದ್ರೆ ಯಾರದ್ರೂ ಒಬ್ಬರಿಗೆ ಬಂದರೆ ಆಯ್ತು, ಉಳಿದವರಿಗೆಲ್ಲಾ ಹಂಚುತ್ತೀರಾ, ಅದಕ್ಕೆ ಮೊದಲು ಬಂದು ನಿಮಗೆಲ್ಲಾ ಇಂಜಕ್ಷನ್ ಕೊಟ್ಟು ಹೋಗಿರೋದು ಎಂದು ನಕ್ಕಿದ್ದೆ. ಯಜಮಾನರು ಅದ್ಯಾಕೋ ಬಲವಂತ ಮಾಡದೆ ಸುಮ್ಮನಿದ್ದರು.

ಸ್ನೇಹಿತರ ಯಾರದೇ ಮನೆಗೆ ಫೋನ್ ಮಾಡಿದರೂ ಎಲ್ಲರೂ ನೆಗಡಿ, ಜ್ವರ ಎಂದು ನರಳಾಡುತ್ತಿದ್ದರಿಂದ ನಾನು ಮಾತ್ರ ಆರಾಮವಾಗಿ " ಓಹೋ ..ಹೌದಾ...ಪಾಪ ಬಿಡಿ, ನೆಗಡಿ ಅಂದ್ರೇ ದೊಡ್ಡ ರೋಗನೇ, ನೀವು ವ್ಯಾಕ್ಸೀನ್ ತೆಗೆದುಕೊಂಡಿಲ್ವಾ?" ಎಂದು ನನ್ನ ಪಾಂಡಿತ್ಯ ಮೆರೆಯುತ್ತಿದ್ದೆ.

ಯಜಮಾನರಿಗೆ ಅದೇನೋ ಕೆಲಸದ ನಿಮಿತ್ತ ಆಕ್ಲೆಂಡಿಗೆ ಹೊರಡುವುದಿತ್ತು, ಬಸವನ ಹಿಂದೆ ಬಾಲದಂತೆ ನಾನೂ ಹೊರಟೆ. ಅವರ ಕೆಲಸ ಮುಗಿಯುವವರೆಗೂ ಕೈಗೆ ಕ್ರೆಡಿಟ್ ಕಾರ್ಡ್ ಕೊಟ್ಟು ನನ್ನನ್ನು ಶಾಪಿಂಗ್ ಮಾಲಿನಲ್ಲಿ ಬಿಟ್ಟು ಹೊರಟಿದ್ದರು. ಅಲ್ಲೆ ಮೇಲೆ ಕೆಳಗೆ ಸುತ್ತಾಡಿ, ಕಣ್ಣಿಗೆ " ಚಂದ" ಎನಿಸಿದ ಎರಡು ಸ್ವೆಟರ್ ( ಚೆನ್ನಾಗಿಲ್ಲವಂತೆ, ಗಾಳಿ ಒಳಗೆ ನುಗ್ಗುತ್ತಂತೆ ಹಾಕ್ಕೊಂಡ್ರೆ)ತೆಗೆದುಕೊಂಡು ಸಂಜೆ ವರೆಗೆ ಟೈಮ್ ಪಾಸ್ ಮಾಡಿದೆ. ಊಟವಂತೂ ನನ್ನ ಫೇವರಿಟ್ ಸಬ್-ವೇ ಇದ್ದಿತಲ್ಲ :D. ಸಂಜೆ ವಾಪಸ್ ಊರಿಗೆ ಹೊರಡಲು ಕಾರ್ ಹತ್ತುವ ಮುನ್ನ ಅದ್ಯಾಕೋ ಮೂಗು ತುರುಸಿದಂತೆ, ಒಂದೇ ಸಮನೆ ಅಕ್ಷೀ ಗಳು ಶುರುವಾದವು. ನೀವೇನೇ ಹೇಳಿ, ಒಂದು ನಾಕು ಮನೆಗೆ ಕೇಳುವ ಹಾಗೆ ಅಕ್ಷೀ ಮಾಡಿದರೆ ನನಗೆ ಸಮಾಧಾನ! ಕೆಲವರು ಬೆಕ್ಕು ಸೀನಿದಂತೆ " ಕೊಸಕ್ " ಎಂದು ಸುಮ್ಮನಾಗುತ್ತಾರೆ, ಅದು ಹೇಗೆ ಅವರಿಗೆ ಅಷ್ಟಕ್ಕೇ ಸಮಾಧಾನವಾಗುತ್ತದೋ ಗೊತ್ತಿಲ್ಲ. ಕಾರು ಊರು ಬಿಟ್ಟರೂ ನನ್ನ ಅಕ್ಷೀಗಳು ಮಾತ್ರ ನಿಲ್ಲಲಿಲ್ಲ. " ಎಲ್ಲಾ ಕಡೆ ಯಾಕೆ ಸುತ್ತಬೇಕಿತ್ತು? ಸುಮ್ಮನೆ ಒಂದರ್ಧ ಗಂಟೆ ಆದ ಮೇಲೆ ಕಾರಲ್ಲಿ ಕೂರಕ್ಕೆ ಆಗ್ತಾ ಇರಲಿಲ್ವಾ? ನೋಡು ಈಗ..." ಎಂದು ಯಜಮಾನರು ಶುರು ಹಚ್ಚಿಕೊಂಡರು. ಒಂದೆರಡು ಅಕ್ಷೀಗಳು ಬಂದರೆ ಏನೀಗ? ..." ಎಂದು ಹೇಳುವಷ್ಟರಲ್ಲೇ ನಾಲ್ಕು ಆಕ್ಷೀ...."

ಅಂತೂ ಇಂತೂ ಕಣ್ಣು ಮೂಗಿನಲ್ಲಿ ಗಂಗಾ ಭವಾನಿ ಹರಿಸಿಕೊಂಡು ಊರು ಸೇರುವಷ್ಟರಲ್ಲಿ ಸಾಕಾಗಿತ್ತು. ಬಿಸಿ ಬಿಸಿ ಕಾಫಿ ಕುಡಿದರೂ ನನ್ನ ನೆಗಡಿ ನಿಲ್ಲಲಿಲ್ಲ. ರಾತ್ರಿ ಅಷ್ಟರಲ್ಲಿ, ಸಣ್ಣಗೆ ಜ್ವರ!

" ನಂಗೇನೂ ಫ್ಲೂ ಅಲ್ಲಾ, ಸ್ವಲ್ಪ ನೆಗಡಿ ಅಷ್ಟೇ " ಎಂದು ನನಗೆ ನಾನೇ ಸಮಾಧಾನ ಮಾಡಿಕೊಂಡರೂ ಜ್ವರ ಮಾತ್ರ ಬಿಡದೇ ಏರುತ್ತಲೇ ಹೋಗಿತ್ತು. ನೆಗಡಿಗೇನೂ ಔಷಧಿಯೇ ಇಲ್ಲ. ನೆಗಡಿಗೆ ಔಷಧಿ ತೆಗೆದುಕೊಂಡರೆ, ಒಂದು ವಾರ ಬೇಕಂತೆ, ಹಾಗೇ ಬಿಟ್ಟರೆ ಏಳು ದಿನ!! ಊರಿನಿಂದ ಅಮ್ಮ ಹೇಳಿದ ಎಲ್ಲಾ ಕಷಾಯಗಳೂ ಆದುವು. ನಮ್ಮಪ್ಪನಂತೂ ಸೀಮೆ ಬದನೇಕಾಯಿ ಬೆಳೆಸಿದ್ದೀಯಾ ಅಂತ ಅದನ್ನೇ ವಾರವೀಡಿ ಯಾಕೆ ತಿಂದೆ? ಮೊದಲೇ ಅದು ಶೀತ...ಅದಕ್ಕೆ ನಿಂಗೆ ನೆಗಡಿ " ಅವರೂ ಅಲ್ಲಿಂದ ಉಪದೇಶ. ಯಾರೇನೇ ಹೇಳಿದರೂ ಜಪ್ಪಯ್ಯ ಅಂದರೂ ನುಂಗದಿದ್ದ ಮಾತ್ರೆಗಳನ್ನು ಕಷ್ಟಪಟ್ಟು ನಾನು ನುಂಗಿದ್ದರೂ..ಜ್ವರ ಮತ್ತು ನೆಗಡಿ ನನ್ನನ್ನು ಬಿಟ್ಟು ಹೋಗಲಿಲ್ಲ.

ಸ್ನೇಹಿತರ ಮನೆಯವರು ಫೋನ್ ಮಾಡಿ, " ಶಾಪಿಂಗ್ ಅಂತ ಹೋಗಿ ಜ್ವರ ತೆಗೆದುಕೊಂಡು ಬಂದ್ರಾ " ಎಂದು ರೇಗಿಸತೊಡಗಿದ್ದರು.

ನೆಗಡಿ ಶುರುವಾದ ಮೊದಲೆರಡು ದಿನ ಚಪಾತಿಗೆ ಸ್ವಲ್ಪ ಉಪ್ಪಾಗಿದ್ದಿದ್ದಕ್ಕೆ, ಯಜಮಾನರು ಬೇಕೆಂದೇ, " ಚಪಾತಿ ಮಾಡುವಾಗ, ಟಿಶ್ಯೂ ಇಟ್ಕೊಂಡಿದ್ದಾ?" ಎಂದು ರೇಗಿಸಿದ್ದರಿಂದ, ಸಿಟ್ಟಿಗೆದ್ದ ನಾನು ಅಡಿಗೆ ಮನೆಗೆ ಕಾಲಿಟ್ಟರಲಿಲ್ಲ. ಅಡಿಗೆ ಕೆಲಸವೆಲ್ಲವೂ ಅವರದೇ.

" ಹಟ ಮಾಡದೇ ನಡೀ, ನಾಳೆ ಡಾಕ್ಟರ್ ಹತ್ತಿರ ಅಪಾಯಿಂಟ್ ಮೆಂಟ್ ತೆಗೆದುಕೊಂಡಿದ್ದೇನೆಂದು " ಯಜಮಾನರು ಹೇಳಿದ ಕೂಡಲೇ ಇಂಜಕ್ಷನ್ ನೆನೆಸಿಕೊಂಡು ಮೈ ಬೆವರಿದಂತೆ " ಹೇ..ಜ್ವರ ಬಿಡೋತರ ಇದೆ..ಸುಮ್ಮನೇ ಯಾಕೆ ಡಾಕ್ಟರ್ " ಎಂದೆ. ಆದರೇನು, ನನಗೆ ನೆಗಡಿ, ಜ್ವರ ಬಂದಾಗಿಲಿನಿಂದ ಹೆಚ್ಚು ಕಡಿಮೆ ಹುಚ್ಚು ಹಿಡಿದವಳಂತೆ ಎಲ್ಲದಕ್ಕೂ ಯಜಮಾನರ ಮೇಲೆ ಕೋಪಮಾಡಿಕೊಳ್ಳುತ್ತಿದ್ದ ನನ್ನನ್ನು ನೋಡಿ ಅವರಿಗೂ ಸಾಕಾಗಿತ್ತೇನೋ! " ನಿನ್ನ ಮಾತೆಲ್ಲಾ ಸಾಕು, ನಾಳೆ ಬೆಳಿಗ್ಗೆ ಹತ್ತಕ್ಕೆ ರೆಡಿ ಇರು, ಹೋಗೋಣ " ಎಂದಿದ್ದರಿಂದ ಪಿಟ್ ಎನ್ನದೇ ಸುಮ್ಮನಾದೆ.

ಜ್ವರ ಬಡಪೆಟ್ಟಿಗೆ ಬಿಡದಿರುವುದನ್ನು ಕಂಡ ನಾನು ಡಾಕ್ಟರ ಬಳಿ ಹೋಗಲು ಮನಸು ಮಾಡಲೇ ಬೇಕಾಗಿದ್ದಿತು. ಯಜಮಾನರು ಡಾಕ್ಟರ್ ಆಗಿದ್ದರೂ ನನಗೆ ಜಿ.ಪಿ.ಯೇ ಔಷಧಿ ಬರೆಯಬೇಕಿದ್ದರಿಂದ ಸವಾರಿ ಕ್ಲಿನಿಕ್ಕಿಗೆ ಹೊರಟಿತು.

ನನ್ನನ್ನೊಂದಷ್ಟು ಹೊತ್ತು ಕಾಯಿಸಿ, ಅಂತೂ ಒಳಗೆ ಕರೆದ ಡಾಕ್ಟರಮ್ಮನಿಗೆ " ಕೋಲ್ಡ್, ಫೀವರ್...." ಅಂತ ಶುರು ಮಾಡಿದೆ. ಅಷ್ಟರಲ್ಲಿ ಯಜಮಾನರು ಡಾಕ್ಟರು ಎಂದು ಗೊತ್ತಾಗಿದ್ದರಿಂದ, ಡಾಕ್ಟರಮ್ಮ ನನ್ನನ್ನು ವಿಚಾರಿಸುವುದನ್ನು ನಿಲ್ಲಿಸಿ, ಡಾಕ್ಟರನ್ನು ವಿಚಾರಿಸತೊಡಗಿದರು. ಕಡೆಗೆ ಎಲ್ಲಾ ಸುತ್ತಿ, ಆ ಡಾಕ್ಟರಮ್ಮನಿಗೆ ಇವರ ಕೊಲೀಗ್ ಗೊತ್ತು ಎಂಬಲ್ಲಿಗೆ ಬಂದು ನಿಂತಿತು. ಡಾಕ್ಟರಮ್ಮ, ತನ್ನ ವೆಸ್ಟ್ ಜರ್ಮನಿಯ ಅನುಭವ ಶುರುಮಾಡಿದರೆ, ಇವರು ಇಲ್ಲಿಯ ಮತ್ತು ಊರಿನ ಆಸ್ಪತ್ರೆಯ ವಾತಾವರಣವನ್ನು ಹೋಲಿಸಿ ಮಾತನಾಡಲು ಶುರುಮಾಡಿದರು. ನಾನು ಸುಮ್ಮನೇ ಮಿಕಿಮಿಕಿ ಎಂದು ಅವರಾಡುವ ಮಾತಗಳನ್ನು ಕೇಳಿಸಿಕೊಂಡು ಕೂತಿದ್ದೆ. ಅಂತೂ ಅವರ ಮಾತುಗಳಿಗೆ ವಿರಾಮ ಕೊಟ್ಟು ನನ್ನ ಕಣ್ಣು, ಮೂಗು, ಗಂಟಲು ಎಲ್ಲವನ್ನೂ ಚೆಕ್ ಮಾಡಿ, ಯಾವುದಕ್ಕೂ ರಕ್ತ ಪರೀಕ್ಷೆ ಮಾಡಿಸಿಬಿಡು ಎಂದು ಯಜಮಾನರಿಗೆ ಹೇಳಿ, ಮತ್ತೆ ಇಬ್ಬರೂ ತಮ್ಮ ತಮ್ಮ ಪ್ರವರ ಶುರುಹಚ್ಚಿಕೊಂಡರು.

" ವ್ಯಾಕ್ಸೀನ್ ತೆಗೆದುಕೊಂಡೆಯಾ " ಎಂದ ಡಾಕ್ಟರಮ್ಮನನ್ನು ನನಗೆ ಕೇಳಲಿಲ್ಲವೇನೋ ಎಂಬಂತೆ ತೂಕ ನೋಡಿಕೊಳ್ಳಲು ಎದ್ದು ಹೋದೆ. ಇವರೋ ಸಿಕ್ಕಿದ್ದೇ ಎಂಬಂತೆ ನನ್ನನ್ನೊಂದಷ್ಟು ಆಡಿಕೊಂಡು, ಇಂಜಕ್ಷನ್ ಮತ್ತು ಮಾತ್ರೆಗಳ ಬಗ್ಗೆ ನನಗಿರುವ ಹೆದರಿಕೆಯನ್ನು ಇನ್ನೊಂದಷ್ಟು ಒಗ್ಗರಣೆ ಮಾಡಿ ಹೇಳಿ ಇಬ್ಬರೂ ನಕ್ಕರು.


ಮರುದಿನವೇ ನನ್ನ ರಿಪೋರ್ಟ್ ಎಲ್ಲವೂ " ಸರಿಯಾಗಿದೆ" ಎಂದು ಬಂದಿದೆ ಎಂದು ಡಾಕ್ಟರಮ್ಮ ಫೋನ್ ಮಾಡಿ ಹೇಳಿದರು. ವೈದ್ಯರ ಮತ್ತು ಉಪಾಧ್ಯಾಯರ ಫೀಸನ್ನು ಬಾಕಿ ಇಟ್ಟುಕೊಳ್ಳಬಾರದು ಎಂದು ಎಲ್ಲೋ ಓದಿದ ನೆನಪು. ಇಲ್ಲದಿದ್ದರೆ ಓದಿದ್ದು ಮರೆತು ಹೋಗುತ್ತದಂತೆ, ರೋಗ ವಾಪಸ್ಸು ಬರುತ್ತದಂತೆ! ಅಂತೂ ಒಂದು ವಾರ ನನ್ನನ್ನು ಸಾಕ್ ಸಾಕು ಮಾಡಿದ ನೆಗಡಿ ಜ್ವರಗಳು ಡಾಕ್ಟರಮ್ಮನಿಗೆ ಅವರ ಕಂತು ಕಟ್ಟಿದ ಮೇಲೆಯೇ ನನ್ನ ಬಿಟ್ಟವು.


(ಬ್ಲಾಗು ಯಾಕೆ ಅಪ್ ಡೇಟ್ ಮಾಡಿಲ್ಲವೆಂದು " ವಿಚಾರಿಸಿದ" ಗೆಳೆಯರಿಗೆ ನನ್ನ ಈ ಪುರಾಣವು :)