Thursday, 17 July 2008

ಸ್ವಯಂಕೃತಾಪರಾಧ!

ನನಗಿರುವ ಅನೇಕ ದುರಭಾಸ್ಯಗಳಲ್ಲಿ ಅತ್ಯಂತ ಕೆಟ್ಟ ಅಭ್ಯಾಸವೆಂದರೆ ಕೈಗೆ ಏನನ್ನು ಕೊಟ್ಟರೂ ಅದನ್ನು ಕೆಳಗೆ ಬೀಳಿಸಿಯೇ ತೆಗೆದುಕೊಳ್ಳುವುದು. ಚಿಕ್ಕವಳಿದ್ದಾಗಲಂತೂ ನಮ್ಮಮ್ಮನ ಹತ್ತಿರ ಬೈಸಿಕೊಂಡಿದ್ದು ಲೆಕ್ಕವಿಲ್ಲ. ಕೈಗೆ ತಿಂಡಿ ಕೊಟ್ಟರೂ ಬೀಳಿಸಿ ಕೊಂಡೇ ತಿನ್ನುತ್ತಿದ್ದಿದ್ದು. ಅದೇನೋ ನನ್ನ ಕೈಗೆ ಏನು ಕೊಟ್ಟರೂ ಅದು ನಿಲ್ಲುವುದಿಲ್ಲ, ಎಷ್ಟೇ ಜಾಗರೂಕಳಾಗಿದ್ದರೂ ಅದು ಹ್ಯಾಗೋ ಪಟಕ್ಕನೇ ಕೆಳಗೆ ಬಿದ್ದೇ ಬಿಡುತ್ತಿತ್ತು.

ನನ್ನ ಈ ಅಭ್ಯಾಸದಿಂದ ಯಾರಿಗೇನೂ ಲಾಭವಾಗದಿದ್ದರೂ ನಮ್ಮ ನಾಯಿಗೆ ಮಾತ್ರ ಸಿಕ್ಕಾಪಟ್ಟೆ ಲಾಭವಾಗುತ್ತಿತ್ತು. ನಮ್ಮಮ್ಮ ಎಲ್ಲರ ಕೈಗೂ ತಿಂಡಿ ಕೊಟ್ಟರೆ, ಎಲ್ಲರೂ ಚೂರೂ ಚೆಲ್ಲದೆ, ಬೀಳಿಸದೆ ನೇರವಾಗಿ ಬಾಯಿಗೆ ಹಾಕಿಕೊಂಡು, ಅಲ್ಲಿಂದಲೂ ಬೀಳದಂತೆ ಕೈ ಅಡ್ಡವಾಗಿಟ್ಟುಕೊಂಡು ತಿಂದು ಮುಗಿಸಿದರೆ, ನಾನು. ನಮ್ಮಮ್ಮ ಕೈಗೆ ಕೊಡುವುದೇ ತಡ. ಕೆಳಗೆ ಬೀಳಿಸಿಕೊಂಡಿರುತ್ತಿದ್ದೆ. ಬಗ್ಗಿ ಎತ್ತಿಕೊಳ್ಳುವ ಮೊದಲೇ ನಮ್ಮ ಟೈಗರ್ ಬಾಯಿ ಹಾಕಿ ಬಿಡುತ್ತಿತ್ತು.


ಎರಡು ಕತ್ತೆ ವಯಸ್ಸಾದರೂ ನನ್ನ ಈ ಅಭ್ಯಾಸ ಮಾತ್ರ ಹೋಗಲಿಲ್ಲ. ಮದುವೆಯಾದ ಮೇಲೆ ನಮ್ಮವರಿಗೆ ನನ್ನ ಈ ದುರಭ್ಯಾಸ ತಿಳಿದಿದ್ದರಿಂದ ( ಮೊದಲ ಭೇಟಿಯಲ್ಲಿ ಅವರಿತ್ತ ಹೂವಿನ ಬೊಕೆ ಸಹ ಕೆಳಗೆ ಬೀಳಿಸಿಯೇ ಎತ್ತಿಕೊಂಡಿದ್ದೆ) ನನ್ನ ಕೈಗೆ ಏನನ್ನೂ ದಾಟಿಸುತ್ತಿರಲಿಲ್ಲ.


ಎಲ್ಲವನ್ನು ಬೀಳಿಸುತ್ತೇನೆ ಎಂದಲ್ಲಾ, ನಾನೇ ಕೈಗೆತ್ತಿಕೊಳ್ಳುವಾಗ ಹುಷಾರಾಗಿಯೇ ತೆಗೆದುಕೊಳ್ಳುತ್ತೇನೆ. ತಟ್ಟೆ ಲೋಟಗಳನ್ನು ನನ್ನ ಕೈಯಾರೆ ಬೀಳಿಸಿಲ್ಲ, ಆದರೆ ಯಾರಾದರೂ ಹಿಡಿದು ಕೋ ಎಂದು ಕೊಟ್ಟರೆ ಮಾತ್ರ...ಢಂ!


ಶಾಪಿಂಗಿಗೆ ಹೊರಟರೆ ನನ್ನದೇನಿದ್ದರೂ ಯಾವ್ಯಾವುದು ಸಾಮಾನು ಬೇಕೆಂದು ಲಿಸ್ಟ್ ನೋಡುತ್ತಾ ಕೈ ಗಾಡಿಯನ್ನು ದೂಡುವ ಕೆಲಸ ಅಷ್ಟೇ. ನಾನೇನೂ ಬೀಳುಸುವದಿಲ್ಲವಾದರೂ ಯಜಮಾನರು ಯಾಕೋ ರಿಸ್ಕ್ ತೆಗೆದುಕೊಳ್ಳುವುದು ಬೇಡ ಅಂದಿದ್ದರಿಂದ, ನನ್ನದೇನಿದ್ದರೂ ಬೋರ್ಡ್ ಓದುವ ಕೆಲಸ ಅಷ್ಟೇ.


ಒಮ್ಮೆ ಡಿವಿಡಿ ಪ್ಲೇಯರ್ ಗಳ ಸೇಲ್ ಹಾಕಿದ್ದರು. ಒಂದೆರಡು ತೆಗೆದುಕೊಂಡು ಇಡೋಣ, ಊರಿಗೆ ಹೋದಾಗ ಯಾರಿಗಾದರೂ ಕೊಡಬಹುದಲ್ಲಾ ಎಂದು ಇಬ್ಬರೂ ಹೊರಟೆವು. ಸಿಕ್ಕಾಪಟ್ಟೆ ರಶ್ಯಿನ ಮಧ್ಯೆ ಎರಡು ಪ್ಲೇಯರ್ ಗಳ ಬಾಕ್ಸ್ ಹಿಡಿದುಕೊಂಡು ದುಡ್ಡು ಕೊಡಲು ಕ್ಯೂ ನಿಂತಿದ್ದೆವು. ಕೌಂಟರಿನ ರಂಭೆ, ಯಜಮಾನರು ಕಾರ್ಡು ಉಜ್ಜುತ್ತಾ ನಿಂತಿದ್ದರಿಂದ, ಪಕ್ಕದಲ್ಲೇ ಇದ್ದ ನನ್ನ ಕೈಗೆ ಪ್ಯಾಕೆಟ್ ಕೊಡಲು ಬಂದಳು. ನಾನೋ ಬಲೇ ಸಂತೋಷದಿಂದ ಎರಡೂ ಕೈ ಚಾಚಿ ಈಸಿಕೊಳ್ಳಲು ಹೋದೆ. ಯಜಮಾನರು ಕಾರ್ಡ್ ಉಜ್ಜುವುದನ್ನೂ ಬಿಟ್ಟು ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಲು ಅವರೇ ಕೈ ಚಾಚಿದರು. ಆದರೇನು ರಂಭೆ ನನ್ನ ಕೈಗೆ ಪ್ಯಾಕೆಟ್ ಕೊಡಲು ಬಾಗಿದ್ದರಿಂದ, ನಾನೂ ಈಸಿಕೊಳ್ಳಲು ಕೈ ನೀಡಿದ್ದರಿಂದ ಪ್ಯಾಕೆಟ್ ಅವಳ ಕೈಯಿಂದ ಜಾರಿ ನನ್ನ ಕೈಗೆ ಬರುವ ಬದಲು ದಡ್ ಎಂದು ಕೆಳಗೆ ಬಿತ್ತು. ಅವಾಕ್ಕಾದ ಕೌಂಟರಿನ ಹುಡುಗಿ ಕೂಡಲೇ ಸಾರಿ ಸಾರಿ ಎಂದಿದ್ದರಿಂದ, ಸದ್ಯ ನನ್ನ ತಪ್ಪಿಲ್ಲವಲ್ಲ ಎಂದು ನಿಂತೆ. ಯಜಮಾನರು ನನ್ನತ್ತ ಅರ್ಥಗರ್ಭಿತ ನೋಟ ಬೀರಿದರು. ಆ ಹುಡುಗಿ ಏನಂದು ಕೊಂಡಳೊ ಏನೋ, ಆ ಪ್ಯಾಕಿನ ಮೇಲೆ ಡ್ಯಾಮೇಜ್ ಎಂದು ಬರೆದು, ಬೇರೆಯೇ ಎರಡು ಡಿವಿಡಿ ಪ್ಲೇಯರ್ ಗಳನ್ನು ಚಕಾಚಕಾ ಎಂದು ಪ್ಯಾಕ್ ಮಾಡಿ ಯಜಮಾನರ ಕೈಗೆ ಕೊಟ್ಟಳು. " ಅಯ್ಯೋ ನಂಗೆ ಗ್ರೇ ಕಲರ್ ಬೇಡ, ಎರಡೂ ಬ್ಲ್ಯಾಕ್ ಕಲರ್ ಬೇಕು " ಎಂದು ನಾನು ವದರಲು ಶುರು ಮಾಡಿದೆ. " ಸುಮ್ಮನೆ ಇರು, ಅವಳು ಇಷ್ಟು ಕೊಟ್ಟಿದ್ದೇ ಹೆಚ್ಚು, ಎಲ್ಲಾ ನಿನ್ನಿಂದಲೇ. ಸುಮ್ಮನೆ ಇರೋದು ಬಿಟ್ಟು ಕೈ ಯಾಕೆ ಚಾಚಬೇಕಿತ್ತು?' ನೀನ್ಯಾಕೆ ಕೈ ನೀಡಲು ಹೋದೆ? ನೀನೇ ಬೀಳಿಸಿದ್ದು, ಪಾಪ ಆ ಹುಡುಗಿಗೇನು ಗೊತ್ತು ನಿನ್ನ ಕೈಗುಣ" ಎಂದು ಹೊರಗೆ ಬಂದಕೂಡಲೇ ಜೋರು ಮಾಡಿದ್ದರಿಂದ, " ನಂದೇನು ತಪ್ಪಿಲ್ಲ, ಅವಳಿಗೂ ನನ್ನ ತರಹವೇ ಎಲ್ಲವನ್ನೂ ಬೀಳಿಸಿಯೇ ಕೊಟ್ಟು ಅಭ್ಯಾಸವಿರಬೇಕು " ಎಂದು ತಪ್ಪೆಲ್ಲವನ್ನೂ ಅವಳ ಮೇಲೆ ಹಾಕಿ ಗೊಣಗಿಕೊಂಡು ಹೊರಟಿದ್ದೆ.

ನನ್ನ ಈ ದುರಭ್ಯಾಸದಿಂದ ಅಲ್ಲಲ್ಲಿ ಚಿಕ್ಕ ಪುಟ್ಟ ಅನಾಹುತಗಳು ಆಗುತ್ತಲೇ ಇದ್ದವು.


ಮನೆಗೆ ಹೊಸ ಫರ್ನೀಚರ್ ಗಳನ್ನು ಕೊಂಡಿದ್ದರಿಂದ ಎಲ್ಲವನ್ನೂ ಎಳೆದು ಜೋಡಿಸಿ, ಅದು ಅಲ್ಲಿ ಸರಿಯಿಲ್ಲ, ಇದು ಇಲ್ಲಿ ಸರಿಯಲ್ಲ, ಇದು ಸ್ಟಡೀ ರೂಮಿಗೆ ಸರಿ, ಎಂದೆಲ್ಲಾ ಸಾಮಾನುಗಳನ್ನು ಎಳೆದು, ಸರಿಸಿ, ಜೋಡಿಸಿ ಮಾಡುತ್ತಿದ್ದೆವು. ಕಂಪ್ಯೂಟರಿಗೆಂದೇ ಹೊಸ ಟೇಬಲ್ ಕೊಂಡಿದ್ದರಿಂದ, ಅಲ್ಲಿಯೇ ಲ್ಯಾಪ್ ಟಾಪ್ ಇಟ್ಟುಕೊಂಡು ನಿನ್ನ ಘನಂದಾರಿ ಕೆಲಸ ಮಾಡು, ಎಲ್ಲೆಂದರಲ್ಲಿ ಇಡಬೇಡ ಎಂದು ಯಜಮಾನರು ಹೇಳಿದ್ದರಿಂದ ಆಗಲಿ ಎಂದು ತಲೆಯಾಡಿಸಿದ್ದೆ. ಚಾಟ್ ಮಾಡುವಾಗ ಮಧ್ಯೆ ಮಧ್ಯೆ ಅದ್ಯಾರು ಓಡಾಡುತ್ತಾರೆ ಎಂದು ಲ್ಯಾಪ್ ಟಾಪನ್ನು ಕಿಚನ್ ಟೇಬಲಿನ ಮೇಲೆ ಇಟ್ಟುಕೊಳ್ಳುತ್ತಿದ್ದೆ ಒಮ್ಮೆಮ್ಮೆ ಒಗ್ಗರಣೆಯೋ, ಮತ್ತೇನೋ ಹಾರುತ್ತಿರುತ್ತಿದುದರಿಂದ ಯಜಮಾನರು, " ನಿನ್ನ ಅಡಿಗೆ ಲೇಟಾದರೂ ಚಿಂತೆಯಿಲ್ಲ, ನಿನ್ನ ಫ್ರೆಂಡ್ಸ್ ಜೊತೆ ಮಾತು ಮುಗಿಸಿಯೇ ಅಡಿಗೆ ಮಾಡು, ಕೀ ಬೋರ್ಡ್ ಗಳಿಗೆಲ್ಲಾ ಎಣ್ಣೆ ಹಾರಿಸಿ ನೀನು ಎರಡೆರಡು ಕೆಲಸ ಒಟ್ಟಿಗೆ ಮಾಡುವುದು ಬೇಡ ಎಂದಿದ್ದರೂ ಅವರಿಲ್ಲದಾಗ ಲ್ಯಾಪ್ ಟಾಪನ್ನು ಕಿಚನ್ ಟೇಬಲಿನ ಮೇಲೆಯೇ ಇಟ್ಟುಕೊಳ್ಳುತ್ತಿದ್ದೆ. ಈಗ ಲ್ಯಾಪ್ ಟಾಪಿಗಾಗಿಯೇ ಕಂಪ್ಯೂಟರ್ ಟೇಬಲ್ ತಂದಿದ್ದರಿಂದ, ನಾನೂ ಉತ್ಸಾಹಿತಳಾಗಿಯೇ ಅವರಿಗೆ ಸಹಾಯ ಮಾಡಲು ನಿಂತಿದ್ದೆ. ಪ್ರಿಂಟರ್, ಸ್ಕ್ಯಾನರ್, ವೈಟ್ ಪೇಪರುಗಳು, ಸ್ಕೆಚ್ ಪೆನ್ನುಗಳು ಹೀಗೆ ಎಲ್ಲವನ್ನೂ ನೀಟಾಗಿ ಜೋಡಿಸಿ, ಲ್ಯಾಪ್ ಟಾಪನ್ನು ಪ್ರತಿಷ್ಠಾಪಿಸಿದೆವು. ಒಂದೆಡೆ ರ್‍ಯಾಕಿನಲ್ಲಿ ಅವರ ಮೆಡಿಕಲ್ ಪುಸ್ತಕಗಳು, ಇನ್ನೊಂದೆಡೆ ನನ್ನ ಕನ್ನಡ ಪುಸ್ತಕಗಳು ಎಲ್ಲವನ್ನೂ ನೀಟಾಗಿ ಜೋಡಿಸಿ ಆನಂದ ಪಡುತ್ತಿರುವಾಗಲೇ ಯಜಮಾನರಿಗೆ ಅದ್ಯಾಕೋ ಲ್ಯಾಪ್ ಟಾಪು ಸರಿಯಾಗಿ ಕೂತಿಲ್ಲ ಅನ್ನಿಸಿತೋ ಎನೋ, " ಇದನ್ನು ಸ್ವಲ್ಪ ಹಾಗೆ ಹಿಡಿದು ಕೊಂಡಿರು, ನಾನು ಈ ವೈರುಗಳೆಲ್ಲವನ್ನೂ ಸರಿಯಾಗಿ ಹಿಂದೆ ಜೋಡಿಸುತ್ತೇನೆ ಎಂದು ಲ್ಯಾಪ್ ಟಾಪನ್ನು ಅನಾಮತ್ತಾಗಿ ಎತ್ತಿ ನನ್ನ ಕೈಗೆ ಕೊಟ್ಟರು. ನಾನೆಷ್ಟೇ ಹುಷಾರಾಗಿ ಹಿಡಿದುಕೊಳ್ಳಬೇಕೆಂದು ಎರಡೂ ಕೈಯಿಂದ ಹಿಡಿದುಕೊಳ್ಳಲು ಕೈ ನೀಡಿದ್ದರೂ ಲ್ಯಾಪ್ ಟಾಪ್ ಕೆಳಗೆ ಬಿದ್ದೇ ಬಿಟ್ಟಿತು.


ಯಜಮಾನರು ಏನನ್ನೂ ಹೇಳದೆ, ನಿನ್ನ ಕೈಗೆ ಕೊಟ್ಟಿದ್ದು ನನ್ನದೇ ತಪ್ಪು ಎಂದು ಲ್ಯಾಪ್ ಟಾಪನ್ನು ಸರಿಯಿದೇಯೋ ನೋಡೋಣವೆಂದು ಆನ್ ಮಾಡಿದರು. ನಾನು ನಿಂತಲ್ಲಿಯೇ ಎಲ್ಲ ದೇವರಿಗೂ ಅಡ್ಡಬಿದ್ದು ತೆಂಗಿನಕಾಯಿ ಒಡೆದು, ದೇವರೇ ಲ್ಯಾಪ್ ಟಾಪಿಗೆ ಏನೂ ಆಗದಿದ್ದರೆ ಸಾಕಪ್ಪ ಎಂದು ಬೇಡಿಕೊಳ್ಳುತ್ತಿದ್ದೆ. ಆನ್ ಆದ ಸ್ವಲ್ಪ ಹೊತ್ತಿಗೇ ಅದ್ಯಾಕೋ ಗರ್ರ್ ಎಂದು ಸದ್ದು ಮಾಡತೊಡಗಿ ಆಫ್ ಆಯಿತು. ಮುಗಿಯಿತು ನನ್ನ ಕಥೆ ಎಂದು ಕೊಂಡು ಸುಮ್ಮನೇ ನಿಂತೆ. ಯಜಮಾನರು ಏನೇ ಸರ್ಕಸ್ ಮಾಡಿದರೂ ಆನ್ ಆಗುತ್ತಿದ್ದ ಲ್ಯಾಪ್ ಟಾಪ್ ಸ್ವಲ್ಪ ಹೊತ್ತಿಗೆ ಕರ್ರೂ ಎಂದು ಸದ್ದು ಮಾಡುತ್ತಾ ಹ್ಯಾಂಗ್ ಆಗುತ್ತಿತ್ತು. ಇನ್ನು ರಿಪೇರಿ ಮಾಡುವುದು ವೀಕೆಂಡಿನಲ್ಲೇ ಎಂದು ಯಜಮಾನರು ಘೋಷಿಸಿದ್ದರಿಂದ ಅಲ್ಲಿಯವರೆಗೂ ನಾನೇಗೆ ಇರುವುದು? ಚಾಟಿಂಗ್ ಇರಲಿ, ಮನೆಗೆ ಫೋನ್ ಮಾಡುವುದು ಹೇಗೆ, ನನ್ನ ಬಂಧು ಬಳಗದವರನ್ನು ವಿಚಾರಿಸುವುದು ಹೇಗೆ? ನನ್ನ ಬ್ಲಾಗನ್ನು ಅಪ್ ಡೇಟ್ ಮಾಡುವುದು ಯಾವಾಗ ಎಂದೆಲ್ಲಾ ಪ್ರಶ್ನೆಗಳಿಗೆ ಉತ್ತರ, " ನೀನು ಬೀಳಿಸಿದ್ದರಿಂದಲೇ ಆಗಿದ್ದು, ಈಗಂತೂ ರಿಪೇರಿ ಮಾಡಲು ಟೈಮ್ ಇಲ್ಲ" ಎಂದಿದ್ದರಿಂದ ತಪ್ಪು ನನ್ನದೇ ಆದ್ದರಿಂದ ಸುಮ್ಮನಾದೆ. ಮೊದಲಿದ್ದ ಹಳೇ ಕಂಪ್ಯೂಟರನ್ನು, ಲ್ಯಾಪ್ ಟಾಪ್ ಇರುವಾಗ ಮತ್ತೊಂದು ಯಾಕೆ ಎಂದು ಯಾರಿಗೋ ದಾನ ಮಾಡಿದ್ದರಿಂದ, ನನ್ನ ಕಾಲು ಕೈ ಮುರಿದು ಕೂರಿಸಿದಂತೆ ಆಗಿತ್ತು.

ಯಜಮಾನರಿಗೆ ವೀಕೆಂಡಿನಲ್ಲಿ ಅಂಬ್ಯುಲೆನ್ಸ್ ಕೆಲಸವಿರುತ್ತಿದ್ದುದರಿಂದ, ಲ್ಯಾಪ್ ಟಾಪಿಗೆ ಏನಾಗಿದೆ ಎಂದು ನೋಡಲು ಸಮಯವೇ ಸಿಕ್ಕಿರಲಿಲ್ಲ. ಅವರ ಪ್ರೆಸೆಂಟೇಷನ್ನುಗಳು, ಕಾನ್ಫರೆನ್ಸುಗಳು, ಊರಿಂದೂರಿಗೆ ಹೋಗಲೇ ಬೇಕಿದ್ದ ಮೀಟಿಂಗುಗಳು, ಇವೆಲ್ಲಾ ಸಾಲದೇ ಆಸ್ಟ್ರೇಲಿಯಾದಿಂದ ಬಂದಿದ್ದ ಇವರ ಗೆಳೆಯರು ಒಂದು ವಾರ ನಮ್ಮ ಮನೆಯಲ್ಲಿಯೇ ಇದ್ದುದರಿಂದ ನನ್ನನ್ನೂ ನನ್ನ ಲ್ಯಾಪ್ ಟಾಪಿನ ಗೋಳನ್ನು ಕೇಳುವವರಿಲ್ಲವಾದರು.


ಕಡೆಗೊಂದು ದಿನ ಲ್ಯಾಪ್ ಟಾಪನ್ನು ರಿಪೇರಿ ಮಾಡಲು ಕೂತರು. ಕರ್ರ್ ಎನ್ನುವ ಶಬ್ಧ ಬಿಟ್ಟರೆ ಮತ್ತೇನೂ ಮಾಡುತ್ತಿರಲಿಲ್ಲವಾದ್ದರಿಂದ, ಬಹುಷಃ ಹಾರ್ಡ್ ಡಿಸ್ಕಿಗೇನಾದರೂ ಆಯಿತೇನೋ ಎಂದುಕೊಂಡು ಅದನ್ನು ಬಿಚ್ಚಿ, ಅವರ ಸ್ನೇಹಿತರ ಲ್ಯಾಪ್ ಟಾಪಿಗೆ ಜೋಡಿಸಿ ನೋಡಿದಾಗ ಅಲ್ಲೂ ಕರ್ರ್ ಅನ್ನತೊಡಗಿತು. ಬೇರೆ ಹಾರ್ಡ್ ಡಿಸ್ಕ್ ಹಾಕಿದರೆ ತೆಪ್ಪಗೆ ಕೆಲಸ ಮಾಡುತ್ತಿದುದರಿಂದ ಹಾರ್ಡ್ ಡಿಸ್ಕ್ ಹೋಗಿದೆ ಎಂದು ತೀರ್ಮಾನಕ್ಕೆ ಇವರೂ ಇವರ ಗೆಳೆಯರೂ ಬಂದರು. ಬೇರೆ ಹಾರ್ಡ್ ಡಿಸ್ಕ್ ಹಾಕುವುದೇನು ದೊಡ್ಡ ಕೆಲಸವಲ್ಲದಿದ್ದರೂ ಇದರಲ್ಲಿ ಸೇವ್ ಆಗಿದ್ದವುಗಳನ್ನು ತೆಗೆಯುವುದು ಹೇಗೆ ಎನ್ನುವುದು ದೊಡ್ಡ ಪ್ರಶ್ನೆಯಾಯಿತು. ಕಡೆಗೆ ಗೂಗಲ್ ಮಾಡಿ ಏನಾದರೂ ಸಲಹೆ ಸಿಗಬಹುದೇನೋ ಎಂದು ನೋಡಿದರೆ, ಯಾರೋ ಪುಣ್ಯಾತ್ಮ, ಹಾರ್ಡ್ ಡಿಸ್ಕನ್ನು ಮೂರು-ನಾಲಕ್ಕು ಗಂಟೆ freezerನಲ್ಲಿಟ್ಟು ನಂತರ ಚೆಕ್ ಮಾಡಲು ತಿಳಿಸಿದ್ದ. ಅಂತೆಯೇ ಮಾಡಿದಾಗ, ಲ್ಯಾಪ್ ಟಾಪ್ ನಿಜಕ್ಕೂ ಯಾವ ಸದ್ದು ಹೊರಡಿಸದೇ ಆನ್ ಆಯಿತು. ಕೂಡಲೇ ಅದರಲ್ಲಿದ್ದ ಎಲ್ಲಾ ಫೈಲುಗಳನ್ನು ಬೇರೆ ಹಾರ್ಡ್ ಡಿಸ್ಕಿಗೆ ಕಾಪಿ ಮಾಡಿದರು. ಸದ್ಯ ಅಂತೂ ನನ್ನ ಲ್ಯಾಪ್ ಟಾಪ್ ಸರಿ ಹೋಯಿತಲ್ಲಾ ಎಂಬ ಸಂತಸ ಬಹಳ ಕಾಲ ಉಳಿಯಲಿಲ್ಲ. ಕೇವಲ ಒಂದು ದಿನ ಕೆಲಸ ಮಾಡಿದ ನನ್ನ ಲ್ಯಾಪ್ ಟಾಪ್ ಮತ್ತೆ ಗೋಗರೆಯಲು ಶುರು ಮಾಡಿತು. ಈ ಸಲ ಹಾರ್ಡ್ ಡಿಸ್ಕನ್ನು ಒಂದಿನ ಪೂರ್ತಿ freezerನಲ್ಲಿ ಇಟ್ಟು ನೋಡಿದರೂ ಕರ್ರ್ ಅನ್ನುವುದು ಬಿಡಲಿಲ್ಲ. ಸರಿ ಇದರ ಆಯಸ್ಸು ಮುಗಿದಿರಬೇಕು ಎಂದು ಅದರ ಆಸೆ ಬಿಟ್ಟೆವು.

ಲ್ಯಾಪ್ ಟಾಪಿಗೆ ಬೇರೆ ಹಾರ್ಡ್ ಡಿಸ್ಕ್ ಹಾಕಿದ ಮೇಲೆ ಸರಿಯಾಯಿತು. ಮೊದಲಿದ್ದ 40ಜಿಬಿಗೆ ಬದಲಾಗಿ 160ಜಿಬಿ ಹಾರ್ಡ್ ಡಿಸ್ಕ್ ಹಾಕಿಸಿದ್ದರಿಂದ ಮೊದಲಿಗಿಂತ ಜಾಸ್ತಿ ಆನ್ಲೈನ್ ಸಿನೆಮಾಗಳನ್ನು ನೋಡಿ, ಇಷ್ಟವಾದವುಗಳನ್ನು ಕಾಪಿಮಾಡಿಟ್ಟುಕೊಳ್ಳಬಹುದು. ಒಟ್ಟಿನಲ್ಲಿ ಆದುದೆಲ್ಲಾ ಒಳ್ಳೆಯದಕ್ಕೆ ಅಂದುಕೊಂಡಿದ್ದರಿಂದ ಹೊಸ ಹುರುಪು ಬಂದಂತಾಗಿ ಅದೇ ಖುಷಿಯ ಮೇಲೆ ಬ್ಲಾಗು ಕುಟ್ಟುತ್ತಿದ್ದೇನೆ.