Sunday 30 March 2008

ನ್ಯೂಜಿಲೆಂಡಿನ ಶರಣ ಸಾಹಿತ್ಯ ಸಮ್ಮೇಳನದ ಝಲಕುಗಳು



ನಮ್ಮಲ್ಲಿ " ಗುಡ್ ಫ್ರೈಡೇ" ಮತ್ತು " ಈಸ್ಟರ್ ಮನ್ ಡೇ" ಎರಡು ಹಬ್ಬಗಳಿಗೂ ರಜೆ ಕೊಟ್ಟಿದ್ದರಿಂದ, ಒಟ್ಟಿಗೆ 4 ದಿನಗಳ ರಜೆ ಸಿಕ್ಕಿದ ಹಾಗಾಗಿತ್ತು. ಭಾನುವಾರ ಆಕ್ಲೆಂಡಿಗೆ ಹೋಗುವ ಕಾರ್ಯಕ್ರಮ ಮೊದಲೇ ಫಿಕ್ಸ್ ಆಗಿದ್ದಿತು. ಮಳೆ ಬರುವ ಸಂಭವವೆಂದು ವಾರದ ಮೊದಲೇ ಸಾರಿದ್ದರಿಂದ ( ಮಳೆ ಬರಲಿಲ್ಲ :D) ಇಲ್ಲೇ ಸುತ್ತ ಮುತ್ತ ಹೋದರಾಯಿತು. ಅಷ್ಟಕ್ಕೂ ರಜೆ ಬಂದಾಗಲೆಲ್ಲ ಹೊರಗೆ ಹೋಗಲೇ ಬೇಕೇ? ಮನೆಯಲ್ಲೇ ಆರಾಮವಾಗಿ ಇರಬಹುದು ಎಂದೆಲ್ಲಾ ಯಜಮಾನರ ಮಾತುಗಳಿಗೆ.." ಹೌದು ಹೌದು..." ಎಂದು ಸುಮ್ಮನೆ ಗೋಣಾಡಿಸುತ್ತಿದ್ದೆ ಅಷ್ಟೇ.

" ಬಸವ ಸಮಿತಿ"ಯವರು ವರ್ಷಕ್ಕೆ ಒಮ್ಮೆ ಬರುವ " ಬಸವ ಜಯಂತಿ" ಮತ್ತು ಎರಡು ವರ್ಷಕ್ಕೊಮ್ಮೆ " ಶರಣ ಸಮ್ಮೇಳನವನ್ನು" ನಡೆಸುತ್ತಾರಂತೆ. ಈ ವರ್ಷ ಆಕ್ಲೆಂಡಿನಲ್ಲಿ. ಪ್ರಪಂಚದ ಎಲ್ಲಾ ಕಡೆಗಳಿಂದಲೂ ಜನ ಬಂದಿದ್ದರು. ಬರಲಾರದವರು ಮೆಸೇಜು ಕಳಿಸಿದ್ದರಂತೆ. ಅಲ್ಲಿದ್ದ ನಮ್ಮ ಕೆಲವೇ ಸ್ನೇಹಿತರ ಪೈಕಿ ಆತ್ಮೀಯರಾದವರೊಬ್ಬರು ಬರಲೇಬೇಕೆಂದು ಆಗ್ರಹಪಡಿಸಿದ್ದರಿಂದ ಬೆಳಿಗ್ಗೆಯೇ ಊರು ಬಿಟ್ಟೆವು.

ಬೆಳಿಗ್ಗೆ ಹೋದ ಕೂಡಲೇ ಬಿಸಿ ಬಿಸಿ ಉಪ್ಪಿಟ್ಟು, ಕೇಸರೀಬಾತ್ ಮತ್ತು ಕಾಫಿ ಸರಬರಾಜು ಆಯಿತು. ಎಲ್ಲರ ಮುಖದಲ್ಲೂ ಮದುವೆ ಮನೆಯ ಸಂಭ್ರಮ! ಸರಬರ ರೇಷ್ಮೆ ಸೀರೆಗಳ ಓಡಾಟ...ಗಂಡಸರನೇಕರು ಪಂಚೆ, ಜುಬ್ಬಾ! ಒಟ್ಟಿನಲ್ಲಿ ಮೈಸೂರಿಗೋ ಬೆಂಗಳೂರಿಗೋ ಬಂದಿದ್ದೇನೆಂಬ ಅನುಭವ!


ಮೈಸೂರಿನಿಂದ ಜೆ.ಎಸ್.ಎಸ್. ಸ್ವಾಮೀಜಿಗಳು ಮತ್ತು ಎಡೆಯೂರು ಸಂಸ್ಥಾನಮಠದಿಂದ ತೋಂಟದ ಸಿದ್ಧಗಂಗಾ ಸ್ವಾಮೀಜಿಗಳು ಬಂದಿದ್ದರು.

ಮುಕ್ಕಾಲು ಜನ ಗೊತ್ತಿದ್ದವರೇ! ಎಲ್ಲರೂ ಅವರವರ ಕೆಲಸದಲ್ಲಿ ಓಡಾಡಿಕೊಂಡಿದ್ದರಿಂದ, ಬಿಸಿ ಬಿಸಿ ತಿಂಡಿಯಿಂದ ಹೊಟ್ಟೆಯೂ ತುಂಬಿದ್ದರಿಂದ ನಾನೇ ಮುಂದೆ ಹೋಗಿ ಕುಳಿತೆ.






ನಮಗೆ ಸ್ಕೂಲಿನಲ್ಲಿದ್ದಾಗ ವಚನಗಳನ್ನು ಓದಿದಷ್ಟೇ ನೆನಪು. " ಕಳಬೇಡ ಕೊಲಬೇಡ......" "ಲೋಕದ ಡೊಂಕ ನೀವೇಕೆ ತಿದ್ದುವಿರಿ...." ಹೀಗೆ ಒಂದೆರಡು ಬಾಯಿಪಾಠ ಮಾಡಿದಷ್ಟೇ. ವೇದಿಕೆಯ ಮೇಲಿದ್ದವರು ಲೀಲಾಜಾಲವಾಗಿ ವಚನಗಳನ್ನು ಉದ್ಧರಿಸುತ್ತಿದ್ದರು.







ಪೂಜ್ಯ ಸ್ವಾಮೀಜಿಗಳವರಿಂದ Light of Devotion ಪುಸ್ತಕ ಬಿಡುಗಡೆ ಕಾರ್ಯಕ್ರಮವೂ ಇತ್ತು. ನಂತರ ಅಲ್ಲೇ ಪುಸ್ತಕ ಮಾರಾಟದ ವ್ಯವಸ್ಥೆಯನ್ನೂ ಸಮಿತಿಯವರು ಆಯೋಜಿಸಿದ್ದರು. ನಾವೂ ಒಂದು ಪುಸ್ತಕ ಖರೀದಿಸಿ, ಅಲ್ಲೇ ಸ್ವಾಮಿಜಿಗಳವರಿಂದ ಹಸ್ತಾಕ್ಷರ ಪಡೆದುಕೊಂಡೆವು. ಈ ಪುಸ್ತಕದಲ್ಲಿ ಪ್ರೊ. ಚಂದ್ರಶೇಖರಯ್ಯ ಅವರು, 101 ವಚನಗಳನ್ನು ಇಂಗ್ಲೀಷಿಗೆ ಅನುವಾದಿಸಿದ್ದಾರೆ. ಭಾಷೆಯ ತೊಡಕಾಗಬಾರದೆಂದು ಕನ್ನಡದಲ್ಲಿ ಮತ್ತು ಇಂಗ್ಲೀಷಿನಲ್ಲಿ ವಚನಗಳ ಅರ್ಥವನ್ನು ವಿವರಿಸಿದ್ದಾರೆ. ಪುಸ್ತಕದ ಲೇಖಕರಿಗೆ ವೀಸಾ ಸಿಗಲಿಲ್ಲವಾದ್ದರಿಂದ ಪುಸ್ತಕದ ಪ್ರಕಾಶಕರಷ್ಟೇ ಹಾಜರಿದ್ದರು.








Ethnic Affairs Minister, ಕ್ರಿಸ್ ಕಾರ್ಟರ್ ಮುಖ್ಯ ಅತಿಥಿಗಳಲ್ಲೊಬ್ಬರು. ನಮ್ಮಲ್ಲಿ ಮಿನಿಸ್ಟರ್ ಗಳು ಬರುತ್ತಾರೆಂದರೆ, ಅವರ ಹಿಂಬಾಲಕರು, ಸೆಕ್ಯೂರಿಟಿಯಂತೆಲ್ಲಾ ಬಡಬಡಿಸುವ ಪೊಲೀಸರನ್ನು ಕಂಡಿದ್ದ ನನಗೆ, ಕ್ರಿಸ್ ಕಾರ್ಟರ್ ಕೈ ಬೀಸಿಕೊಂಡು, ಯಾವ ಬಾಜಾ ಬಜಂತ್ರಿಗಳೂ ಇಲ್ಲದೆ, ಬಂದು ಹೂವಿನ ಹಾರ ಹಾಕಿಸಿಕೊಂಡು, ಭಾಷಣ ಮಾಡಿದ್ದನ್ನು ನೋಡಿ ಸೋಜಿಗ!










ಭಾರತ, ಅಸ್ಟ್ರೇಲಿಯಾದಿಂದ ಬಂದ ಬಸವ ಸಮಿತಿಯ ಸದಸ್ಯರುಗಳು ಒಂದೊಂದು ವಿಷಯದ ಮೇಲೆ ತಮ್ಮ ತಮ್ಮ ಅಭಿಪ್ರಾಯಗಳನ್ನು ಚರ್ಚಿಸಿದರು. ಕಡೆಗೆ ಪ್ರಶ್ನೋತ್ತರ ಕಾರ್ಯಕ್ರಮವೂ ಇದ್ದಿತು.










ಮಕ್ಕಳಿಗೆ ಬಸವ ಸಮಿತಿಯಿಂದ ಆಯೋಜಿಸಿದ್ದ " ರಂಗೋಲಿ ಸ್ಪರ್ಧೆಯಲ್ಲಿ" ಭಾಗವಹಿಸಿದ್ದ ಮಕ್ಕಳು ಬಿಡಿಸಿದ್ದ ರಂಗುರಂಗಿನ ರಂಗೋಲಿಗಳು.









ಸಂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳಿದ್ದವು. ಮೊದಲಿಗೆ ನ್ಯೂಜಿಲೆಂಡಿನ ಮಕ್ಕಳು ವಚನವನ್ನು ಸುಶ್ರಾವ್ಯವಾಗಿ ಹಾಡಿದರು.









ನಂತರ, ಆಸ್ಟ್ರೇಲಿಯಾ ಸದಸ್ಯರುಗಳು ವಚನವನ್ನು " ದೋಣಿ ಸಾಗಲಿ, ಮುಂದೆ ಹೋಗಲಿ " ಟ್ಯೂನ್ ನಲ್ಲಿ ಹಾಡಿದರು.






ಹಾಡಿನ ನಂತರ, ತನ್ನ ಈಸ್ಟರ್ ರಜೆಯ ಮಧ್ಯೆ ಬಿಡುವು ಮಾಡಿಕೊಂಡು ಬಂದ ನಮ್ಮ ರಕ್ಷಣಾ ಮಂತ್ರಿ, Phil Geoff. ಕೈಯಲ್ಲಿ ಯಾವುದೇ ಪೇಪರ್ ಹಿಡಿದುಕೊಳ್ಳದೇ " ಕಳಬೇಡ, ಕೊಲಬೇಡ..." ಎಂಬ ವಚನದ ಸಾಲುಗಳನ್ನು ಯೇಸು ಕ್ರಿಸ್ತನ Ten Commandments ಗೆ ಹೋಲಿಸಿ ಪಟಪಟನೆ ಭಾಷಣ ಮಾಡಿದರು. ಭಾಷಣದ ಮಧ್ಯೆ " ಬಸವೇಶ್ವರ, ವಚನಗಳು, ಬಸವಣ್ಣ " ಕನ್ನಡ ಪದಗಳನ್ನು ಅವರದೇ ಶೈಲಿಯಲ್ಲಿ ಹೇಳಿದುದು ನಿಜಕ್ಕೂ ಸಂತಸವಾಯಿತು.









ನ್ಯೂಜಿಲೆಂಡ್ ಸದಸ್ಯರುಗಳಿಂದ " ಆಯ್ದಕ್ಕಿ ಮಾರಯ್ಯ" ನಾಟಕದ ಒಂದು ದೃಶ್ಯ.



ಕಾರ್ಯಕ್ರಮಗಳೆಲ್ಲವೂ ಚೆನ್ನಾಗಿದ್ದುದರಿಂದ ಸಮಯ ಹೋದದ್ದೆ ಗೊತ್ತಾಗಿರಲಿಲ್ಲ. ಆದರೆ ನಾವು ಊರಿಗೆ ವಾಪಸ್ಸಾಗಬೇಕಾದ್ದರಿಂದ ಮನಸ್ಸಿಲ್ಲದಿದ್ದರೂ ರಾತ್ರಿ ಒಂಭತ್ತಕ್ಕೆ ಎದ್ದು ಹೊರಟೆವು.

Monday 17 March 2008

Kauri Museum

ಕಳೆದ ವಾರವೆಲ್ಲವೂ ' ಸುಡುವ ಬಿಸಿಲೆಂದು ಹೇಳಿ, ವಾರವಿಡೀ ಬಿಡದೆ ಮಳೆ ಸುರಿದಿತ್ತು. ಈ ವಾರವಾದರೂ ಎಲ್ಲಾದರೂ ಹೋಗೋಣವೆಂದು ಯಜಮಾನರ ತಲೆ ತಿನ್ನುತ್ತಿದ್ದೆ. " ನೀನು ವೆದರ್ ರಿಪೋರ್ಟ್ ' ನೋಡಿರು, ಬಿಸಿಲಿದ್ದರೆ ಹೊರಗೆ ಹೋಗೋಣವೆಂದು ಆಶ್ವಾಸನೆಯಿತ್ತರು. ಇಲ್ಲಿನವರು ಹೆಚ್ಚು ಕಡಿಮೆ ನಮ್ಮ ಊರಿನವರ ' ಹವಾಮಾನ ವರದಿ" ಯಂತೆ! ಶನಿವಾರ, ಭಾನುವಾರ ಧಾರಾಕಾರ ಮಳೆ ಎಂದು ಹೇಳಿ, ಶುಕ್ರವಾರದ ಹೊತ್ತಿಗೆ ' ಅಲ್ಲಲ್ಲಿ ಮಳೆ ಬೀಳುವ ಸಂಭವ ಹೇಳಿದ್ದರು. ಅಂತೂ ಶನಿವಾರ ಬೆಳಿಗ್ಗೆ ಮಳೆಯೂ ಇಲ್ಲ, ಬಿಸಿಲೂ ಇಲ್ಲ...ಬರೀ ಮೋಡವೆಂದು ಹೇಳಿ ಕೈ ತೊಳೆದುಕೊಂಡಿದ್ದರು.


ಶನಿವಾರ ಬೆಳಿಗ್ಗೆ, ಈ ಮೋಡದಲ್ಲಿ ಹೊರಗೆಲ್ಲಿ ಹೋಗುವುದು? ಇಲ್ಲೇ ಹತ್ತಿರದ ಊರು Matakohe ಅಲ್ಲಿರುವ ಮ್ಯೂಸಿಯಂ ಪ್ರಪಂಚದಲ್ಲೆ ಹೆಸರುವಾಸಿಯಂತೆ. ತುಂಬಾ ಚೆನ್ನಾಗಿದೆಯಂತೆ, ಎಂತೆಲ್ಲಾ ಉಬ್ಬಿಸಿದ್ದರು. ನಿಜ ಹೇಳಬೇಕೆಂದರೆ ನನಗೆ ಈ ಮ್ಯೂಸಿಯಂಗಳನ್ನು ನೋಡಲು ಸ್ವಲ್ಪವೂ ಇಷ್ಟವಿಲ್ಲ. ಮ್ಯೂಸಿಯಂಗಳ ಒಳಹೊಕ್ಕರೆ ನನಗೆ ಆ ಕಾಲದ ವಾಸನೆಯೇ ಬರುತ್ತದೆನೋ ಅನ್ನಿಸುತ್ತದೆ. ಸುಮ್ಮನೆ ಆ ಚಿತ್ರಗಳ ಮುಂದೆ ನಿಂತು ಮೆಲುಕು ಹಾಕುವುದು ನನಗೆ ಬೋರ್! " ಮ್ಯೂಸಿಯಂಗಾ? ನಾನು ಬರುವುದಿಲ್ಲ...ಸುತ್ತ ಮುತ್ತಲೂ ಅಷ್ಟು ಚೆನ್ನಾಗಿರುವ ಬೀಚುಗಳಿರುವಾಗ ಎಲ್ಲಾ ಬಿಟ್ಟು ಮ್ಯೂಸಿಯಂಗೆ ಯಾಕೆ?" ಅಂದೆ. " ಈ ಮೋಡದಲ್ಲಿ ಬೀಚು ಚೆನ್ನಾಗಿರುವುದಿಲ್ಲ...ಮಳೆ ಬಂದರೂ ಬರಬಹುದು...ಹೋಗೋಣವೆಂದರೆ ಮ್ಯೂಸಿಯಂ ಇಲ್ಲದಿದ್ದರೆ ಬೇಡ " ಅಂದು ಕಡ್ಡಿ ಮುರಿದಂತೆ ಅಂದಿದ್ದರಿಂದ ಗೊಣಗಿಕೊಂಡೇ ಹೊರಟೆ.



ಬೆಳಿಗ್ಗೆ ಟಿಕೇಟ್ ತೆಗೆದುಕೊಂಡು ಸಂಜೆವರೆಗೆ ಎಷ್ಟು ಸಲ ಬೇಕಾದರೂ ಹೊರಗೆ ಹೋಗಿ ಒಳಬರಬಹುದು ಎಂದಳು ಒಬ್ಬಳು ಬಿಳಿ ರಂಭೆ! ಅಷ್ಟು ಹೊತ್ತಿನವರೆಗೆ ಅದ್ಯಾರು ನೋಡುತ್ತರೆಂದು ಕೊಂಡರೂ ಅವಳಿಗೆ ತಲೆ ಅಲ್ಲಾಡಿಸಿ ಒಳಹೊಕ್ಕೆವು. ಮ್ಯೂಸಿಯಂ ಒಳಹೊಕ್ಕಾಗ ಆದ ಅನುಭವವೇ ಬೇರೆ! ಇಲ್ಲಿ ಒಂದು ಮಾತು ಹೇಳಬೇಕು. ನಮ್ಮಲ್ಲಿ ಕಾಪಾಡಿಕೊಳ್ಳಬೇಕಾದ ಎಷ್ಟೊಂದು ಅಮೂಲ್ಯವಾದ ವಸ್ತುಗಳಿದ್ದರೂ ಕಾಪಾಡಿಕೊಳ್ಳಲು ಬರುವುದಿಲ್ಲವೇನೋ ಅನ್ನಿಸುತ್ತದೆ. ಇವರು ಒಂದು " ಮರ" ಕ್ಕಾಗಿಯೇ ಮ್ಯೂಸಿಯಂ ಮಾಡಿದ್ದಾರೆ.


ಇಲ್ಲಿ ಮೊದಲು " ಕೌರಿ " ಮರಗಳಿದ್ದವಂತೆ. ಆ ಮರಗಳು ಬಹು ಕಾಲ ಬಾಳಿಕೆ ಬರುತ್ತಿತ್ತಂತೆ. ಆ ಮರದ ಗಮ್ ನಿಂದ ಅನೇಕ ವಸ್ತುಗಳನ್ನು ಮಾಡುತ್ತಿದ್ದರಂತೆ. ಮರದಿಂದ ದೋಣಿ ಮಾಡುತ್ತಿದ್ದರಂತೆ. ಕಾಲ ಬದಲಾದಂತೆ, ಮರಗಳ ಸಂಖ್ಯೆಯೂ ಕಡಿಮೆಯಾಗುತ್ತ ಬಂದಿತಂತೆ. ಕೂಡಲೇ ಸರ್ಕಾರ ಕೌರಿ ಮರವನ್ನು ಉಳಿಸಲು ಮುಂದಾಗಿ, ಯಾರೂ ಕೌರಿ ಮರ ಕಡಿಯಬಾರದೆಂದು ಹೇಳಿ, ಆ ಮರಗಳ ರಕ್ಷಣೆ ಮಾಡುತ್ತಿದೆಯಂತೆ. ಈಗ ಯಾರೂ ಆ ಮರಗಳನ್ನು ಕಡಿಯುವಂತಿಲ್ಲ. ನಮ್ಮ ಹಿತ್ತಲಿನಲ್ಲೇ ಕೌರಿ ಮರವಿದ್ದರೂ ಅದು ಸರ್ಕಾರಕ್ಕೆ ಸೇರಿದ್ದು. ಕೌರಿ ಗಿಡ ತಂದು ನೆಡಬಹುದು. ಗಿಡ ದೊಡ್ದದಾಗಿ ಮರವಾಗುವುದು ಬಹಳ ನಿಧಾನವಂತೆ. ಗಿಡವೇನಾದರೂ ಸತ್ತರೆ, ಅದರ ಜಾಗಕ್ಕೆ ಮತ್ತೊಂದು ಕೌರಿ ಗಿಡ ತಂದು ಹಾಕಲೇ ಬೇಕಂತೆ.

ಕೌರಿ ಮರದಿಂದ ತುಂಬಾ ಸುಂದರವಾದ ವಸ್ತುಗಳನ್ನು ಮಾಡಿದ್ದಾರೆ. ಮೊದಲೇ ಹೇಳಿದಂತೆ ರೇಟು ಮರದೆತ್ತರ!


ಬನ್ನಿ, ಮ್ಯೂಸಿಯಂಗೆ ಒಂದು ಸುತ್ತು ಹೊಡೆಸುತ್ತೇನೆ.




ಕೌರಿ ಗಿಡ. ಇದು ಬೆಳೆಯುವುದು ನಿಧಾನವಂತೆ. ಆದರೆ ಕಡಿಮೆಯೆಂದರೂ 100 ವರ್ಷ ಹಿಡಿದು 2000 ವರ್ಷಗಳ ವರೆಗೂ ಬದುಕುತ್ತವೆ. ಈ ಮರ ಬಹಳ ಗಟ್ಟಿಮುಟ್ಟಾಗಿರುವುದರಿಂದ, ಇದರಿಂದ ಕೆತ್ತನೆ ಸಾಮಾನುಗಳು, ಮನೆ - ದೋಣಿ ಕಟ್ಟಲು ಉಪಯೋಗಿಸುತ್ತಾರೆ.













ಕೌರಿ ಮರದ ಗಮ್ (ಅಂಟಿ)ನಿಂದ ಏನೇನು ಮಾಡಬಹುದೆಂದು ವಿವರಿಸಿದ್ದಾರೆ. ಭಾರತಕ್ಕೂ ರಫ್ತು ಮಾಡುತ್ತಿದ್ದರಂತೆ!
















ಎಷ್ಟೋ ಸಾವಿರ ವರ್ಷಗಳ ಹಿಂದಿನ ಹುಳುಗಳು ಮತ್ತು ಜೇಡ! ಕೌರಿ ಮರದ ಅಂಟಿನಲ್ಲಿ ಸಿಕ್ಕಿಬಿದ್ದಿವೆ!.










ಕೌರಿ ಮರವನ್ನು ಕಡಿದುರುಳಿಸಿ ಅದನ್ನು ತುಂಡು ತುಂಡುಗಳನ್ನಾಗಿ ಮಾಡಿ ಕಾಡಿನಿಂದ ಸಾಗಿಸುವುದೇ ಒಂದು ದೊಡ್ಡ ಕೆಲಸವಂತೆ. ಎತ್ತುಗಳನ್ನು ಹೀಗೆ ಮರದ ತುಂಡಿಗೆ ಕಟ್ಟಿ ಎಳೆಸುತ್ತಿದ್ದರಂತೆ. ಆಗಿನ ಕಾಲದ ಕಬ್ಬಿಣದ ಚೈನುಗಳನ್ನು ಇನ್ನೂ ಇಟ್ಟಿದ್ದಾರೆ.








ಕೌರಿ ಮರಕ್ಕೆ ರೆಂಬೆಗಳು ತುತ್ತತುದಿಯಲ್ಲಿರುವುದರಿಂದ ಮರ ಹತ್ತಲು ಕಷ್ಟವಂತೆ. ಮರದ ಸುತ್ತಲೂ ಕಬ್ಬಿಣದ ತಂತಿಗಳನ್ನು ಹೀಗೆ ಸುತ್ತಿ, ನೇತಾಡಿಕೊಂಡು ಮರದ ಅಂಟನ್ನು ಸಂಗ್ರಹಿಸಿತ್ತಿದ್ದರೆಂಬುದನ್ನು ಅಲ್ಲಲ್ಲಿ ಮರದ ಪ್ರತಿಕೃತಿಗಳನ್ನು ಮಾಡಿ ನಿಲ್ಲಿಸಿದ್ದಾರೆ. ತಟ್ಟನೆ ನೋಡಿದರೆ ಜೀವಂತ ಮನುಷ್ಯರೇ ನೇತಾಡುತ್ತಿದ್ದಾರೇನೋ ಅನ್ನಿಸುತ್ತದೆ.









ಕೌರಿ ಮರದ ಅಂಟಿನಿಂದ ತಯಾರಾದ ಕೆಲವು ಸುಂದರ ಕೃತಿಗಳಲ್ಲಿ ಈ ಕಿವಿ ಹಕ್ಕಿ-ಮರಿಯೂ ಒಂದು. ಎಷ್ಟು ವರ್ಷಗಳ ಹಿಂದಿನದೋ ಗೊತ್ತಿಲ್ಲ!









ಎಷ್ಟೋ ಕೌರಿ ಮರಗಳು ಭೂಕಂಪ ಮತ್ತಿತರ ವಿಕೋಪಗಳಿಗೆ ಸಿಕ್ಕಿ ಭೂಮಿಯಲ್ಲಿ ಹುದುಗಿ ಹೋಗಿವೆಯಂತೆ. ನೆಲವನ್ನು ಅಗೆದು, ಕುಟ್ಟಿ ಮರದ ಅಂಟನ್ನು ಸಂಗ್ರಹಿಸುತ್ತಿದ್ದರೆಂಬುದನ್ನು ಈ ಪ್ರತಿಕೃತಿಗಳಲ್ಲಿ ತಿಳಿಸುತ್ತಾರೆ. ಆಗಿನ ಕಾಲದ ಅವರ ಬೂಟುಗಳು, ಗುದ್ದಲಿ, ಸಲಾಕೆಗಳನ್ನು ಇಟ್ಟಿದ್ದಾರೆ. ನಾವು ಇವರ ಮುಂದೆ ನಿಂತರೆ, ' ಹಾಯ್! ಹಲೋ " ಕೂಡಾ ಹೇಳುತ್ತಾರೆ.










ಕೌರಿ ಮರದ ಒಂದು ತುಂಡು. ಅಂದಾಜು ನೂರು ಅಡಿಗಳಷ್ಟು ಉದ್ದ ಬೆಳೆಯುತ್ತದೆ ಅಂತೆ. ಇದರ ಮುಂದೆ ನಾವು ನಿಂತರೆ, ನಾವು ಏನೇನೂ ಅಲ್ಲ ಅನ್ನಿಸುತ್ತದೆ. ಆದರೆ ಮನುಷ್ಯನ ಆಸೆಗೆ ಮಿತಿಯೇ? ಎಷ್ಟೇ ದೊಡ್ಡದಿರಲಿ, ತನಗೆ ಬೇಕಾದಂತೆ ಕತ್ತರಿಸಿ ಉಪಯೋಗಿಸಿಕೊಳ್ಳಬಲ್ಲ!












ಈ ಮರದ ಆಯಸ್ಸನ್ನು ಹೀಗೆ ಗುರುತಿಸಿದ್ದಾರೆ. ಇದನ್ನು ನೋಡಿದರೆ ಈ ಮರಗಳು ಅದೆಷ್ಟು ವರ್ಷ ಬದುಕುತ್ತವೆಂಬುದು ನಮಗೊಂದು ಅಂದಾಜಾಗುತ್ತದೆ ಅಲ್ಲವೇ.















ಇದೊಂದು ಜೀವಂತ ಕೌರಿ ಮರ. "Tane Mahuta " ಎಂದು ಹೆಸರು. Largest living Kauri tree in NZ ante! 2000 ವರ್ಷಗಳ ಹಿಂದಿನದು. ಇನ್ನೂ ಬೆಳೆಯುತ್ತಿದೆಯಂತೆ. ಸುತ್ತ ಮುತ್ತಲಿರುವ ಮರಗಳೆಲ್ಲವೂ ಇದರ ಮುಂದೆ ಸಣ್ಣವೆನಿಸುತ್ತವೆ.






ಮ್ಯೂಸಿಯಂನಲ್ಲಿ ಸುತ್ತಾಡಿ ಸಮಯ ಹೋದದ್ದೇ ತಿಳಿಯಲಿಲ್ಲ. ರಂಭೆ ಮತ್ತೊಮ್ಮೆ ಬಂದು ಇನ್ನು ಹದಿನೈದು ನಿಮಿಷಗಳಲ್ಲಿ ಮ್ಯೂಸಿಯಂ ಮುಚ್ಚುವ ಸಮಯವಾಗುತ್ತದೆ ಎಂದು ಹೇಳಿದಾಗಲೇ ನಾವೆಷ್ಟು ಹೊತ್ತು ಮ್ಯೂಸಿಯಂ ನೋಡಿದೆವೆಂದು ತಿಳಿಯಿತು.

Monday 10 March 2008

ರಂಗೋಲಿ - 2

ಮೊದಲಿನಿಂದಲೂ ನನಗೆ ಚುಕ್ಕಿ ರಂಗೋಲಿಗಳಿಗಿಂತ, ಚುಕ್ಕಿ ಸೇರಿಸದ ಈ " ಸುತ್ತಿ ಬಳಸುವ" ರಂಗೋಲಿಗಳೇ ಇಷ್ಟ!


ಅಕ್ಕ- ಪಕ್ಕದ ಮನೆಯವರು ರಂಗೋಲಿ ಯಾವುದು ಬಿಟ್ಟಿದ್ದಾರೆ ಎಂದು ಕಣ್ಣಂಚಿನಲ್ಲೇ ನೋಡಿಕೊಂಡಿರುತ್ತಿದ್ದೆ. ಎಲ್ಲರೂ ಹೆಚ್ಚು ಕಡಿಮೆ ಚುಕ್ಕಿ ರಂಗೋಲಿಗಳೇ! ನೋಡಿದ ಕೂಡಲೇ " ಈ ರಂಗೋಲಿ ಎಷ್ಟರಿಂದ ಎಷ್ಟು ಚುಕ್ಕಿ" ಎಂದು ಗೊತ್ತಾಗಿ ಬಿಡುತ್ತಿತ್ತು. ನನ್ನ ತರಹ ಸುತ್ತಿಬಳಸುವ ರಂಗೋಲಿಗಳನ್ನು ಬಿಡುವುದಿಲ್ಲವಲ್ಲ, ಬಿಡುತ್ತೇವೆಂದರೂ ಬರಬೇಕಲ್ಲ! ಎಂದು ಕೊಂಡು ಒಳಗೊಳಗೇ ಖುಶಿ.


ಊರಿನಲ್ಲಿ ಪಕ್ಕದ ಮನೆ ಹುಡುಗಿ, ನಾನು ಬಿಡುವ ರಂಗೋಲಿಗಳನ್ನು ನೋಡಿ, ತಾನೂ ದಿನಕ್ಕೊಂದು ಬಿಡಲು ಶುರು ಮಾಡಿದ್ದಳು. ಅವಳ ರಂಗೋಲಿಗಳೆಲ್ಲವೂ ಚುಕ್ಕಿಯವು. ಅವಳು ಬಿಡುವ ರಂಗೋಲಿಗಳು ನನಗೆ ಗೊತ್ತೆಂದು ತೋರಿಸಿಕೊಳ್ಳಲು ಅವಳು ಬಿಟ್ಟ ರಂಗೋಲಿಯನ್ನೇ ನಾನೂ ಮನೆಯ ಮುಂದೆ ಬಿಡುತ್ತಿದ್ದೆ. ಅವಳಿಗೂ ಗೊತ್ತಾಗಿ ನಾನು ಬಿಡುವ ರಂಗೋಲಿಗಳನ್ನೇ ತಾನೂ ಅವರ ಮನೆ ಮುಂದೆ ಬಿಡಲು ಶುರುಮಾಡಿದ್ದಳು. ನಾನು ಬೇಕಂತಲೇ ಚುಕ್ಕಿಗಳನ್ನು ಕಾಣದ ಹಾಗೆ ಗೆರೆ ಸೇರಿಸಿಯೋ, ಇಲ್ಲವೇ ಸುಮ್ಮನೆ ರಂಗೋಲಿ ಬಿಟ್ಟಾದ ಮೇಲೆ " ಡಿಸೈನ್" ತರಹವೆಂದೋ ಎಕ್ಸ್ಟ್ರಾ ಚುಕ್ಕಿ ಇಟ್ಟುಬಿಡುತ್ತಿದ್ದೆ :D ನನ್ನದೂ ಅವಳದೂ ಮಾತಿಲ್ಲ ಕಥೆಯಿಲ್ಲ! ಕೇವಲ ರಂಗೋಲಿಯಲ್ಲೇ ನಮ್ಮಿಬ್ಬರ ಸಂಭಾಷಣೆ.


ಒಮ್ಮೊಮ್ಮೆ ಸ್ಪರ್ಧೆಗೆ ಬಿದ್ದವಳಂತೆ ಒಂದೆರಡು ಸುತ್ತಿ ಬಳಸುವ ರಂಗೋಲಿಗಳನ್ನು ಬಿಡಹತ್ತಿದಳು. ನಾನು ಸುಮ್ಮನಿರುತ್ತೇನೆಯೇ??! ನಮ್ಮಮ್ಮನ ರಂಗೋಲಿ ಪುಸ್ತಕ ನೋಡಿಕೊಂಡು ಬಿಡ ಹತ್ತಿದೆ!, ಅವಳಿಗೆ ಹೇಗೆ ಗೊತ್ತಾಗಬೇಕು ಆ ಹಳೆ ಕಾಲದ ಸುತ್ತಿ ಬಳಸುವ ರಂಗೋಲಿಗಳು??!!

ಸುತ್ತಿ ಬಳಸುವ ರಂಗೋಲಿಗಳು ನೋಡಿದಾಗ ಕಷ್ಟವೆನಿಸಿದರೂ, ಬಿಡಲು ಕೈ ಹಚ್ಚಿದರೆ " ಅಯ್ಯೋ ಇಷ್ಟೇನಾ" ಅನ್ನಿಸುತ್ತದೆ. ನೋಡಿ ಈ ರಂಗೋಲಿಗಳು ಅದೆಷ್ಟು ಸುಲಭ ಅಲ್ಲವೆ?!
































ಎಲ್ಲಾ ರಂಗೋಲಿಗಳಿಗೂ ಒಂದೇ ತರಹ ಚುಕ್ಕಿಗಳು, ಆದರೆ ಸುತ್ತಿ ಬಳಸುವ ವಿಧಾನ ಸ್ವಲ್ಪ ಬೇರೆಯಷ್ಟೇ.

Tuesday 4 March 2008

ಸೂರ್ಯೋದಯ - 2

ಮೊನ್ನೆ ಯಜಮಾನರು ಕಾರ್ಯನಿಮಿತ್ತ ಪರವೂರಿಗೆ ಹೊರಟಿದ್ದರು, ಎಂದಿನಂತೆ ಕ್ಯಾಮರ ಕೈಗೆ ಕೊಟ್ಟು ಕಳಿಸಿದ್ದೆ. " ಕ್ಯಾಮರ ಯಾಕೆ? ಅಲ್ಲಿ ನನಗೇನೂ ಊರು ಸುತ್ತಲು ಕರೆದಿಲ್ಲ, ಬೆಳಿಗ್ಗೆ ಹೋಗಿ ಕೂತರೆ, ಇನ್ನು ಸಂಜೆಯೇ ಬರುವುದು, ಇಲ್ಲಿಗಿಂತ ಆ ಊರಿನಲ್ಲಿ ಚಳಿ, ಮಳೆ ಜಾಸ್ತಿ, ಕ್ಯಾಮೆರ ಬೇಡ!" ಎಂದು ಅವರ ವಾದ. ಕಡೆಗೆ ಅಂತೂ ಒಪ್ಪಿಸಿ ಕೈಗೆ ಕೊಟ್ಟು ಕಳಿಸಿದ್ದೆ.


ಎರಡು ದಿನಗಳ ಕೆಲಸ ಮುಗಿಸಿ ಬಂದ ಅವರು ಕ್ಯಾಮೆರಾ ಕೈಗೆ ಕೊಡುತ್ತಾ, ನೋಡು " ಎಷ್ಟು ಸುಂದರ ಹುಡುಗಿಯರ ಫೋಟೋ ತೆಗೆದುಕೊಂಡು ಬಂದಿದ್ದೇನೆ...ಇನ್ನೊಮ್ಮೆ ನೀನು ಊರಿಗೆ ಹೋಗುತ್ತೀಯಾ ಅಂದರೆ ನಾನೇನೂ ನಿನಗೆ ಬಲವಂತ ಮಾಡುವುದಿಲ್ಲ! ಅವರಲ್ಲಿ ಯಾರಾದರೂ ಒಬ್ಬರನ್ನು ಕಟ್ಟಿಕೊಳ್ಳುತ್ತೇನೆ" ಎಂದರು. ಎಲ್ಲವೂ ಹೇಳುವಷ್ಟು ಸುಲಭವಾಗಿ ಬಿಟ್ಟಿದ್ದರೆ, ಅಲ್ಲವೆ?! " ಆಯ್ತು ಕರೆ ತನ್ನಿ, ನನಗೂ ಅಡಿಗೆ ಕೆಲಸ, ಮನೆ ಕೆಲಸ ಮಾಡಿ ಮಾಡಿ ಸಾಕಾಗಿದೆ, ಬಂದವಳ ಹತ್ತಿರ ನಾನು ಕೆಲಸ ತೆಗೆಸುತ್ತೇನೆ " ಎಂದು ಹಾಸ್ಯ ಮಾಡುತ್ತ ಫೋಟೋಗಳನ್ನು ನನ್ನ ಕಂಪ್ಯೂಟರಿಗೆ ಏರಿಸಿದೆ. ಫೋಟೋಗಳು ನೋಡಿ ಶಾಕ್! ನೀವೇ ನೋಡಿ :)






























ನಮ್ಮ ಊರಿನ ಮೇಲಿಂದ ಕಂಡು ಬಂದ ಸೂರ್ಯೋದಯ! ನನಗೆ ಬಣ್ಣಿಸಲು ಬರುವುದಿಲ್ಲವಾದ್ದರಿಂದ ನೀವೇ ಊಹಿಸಿಕೊಳ್ಳಿ :)