Sunday, 6 April 2008

ಡೇ ಲೈಟ್ ಸೇವಿಂಗೂ ನನ್ನ ಡೇ ಸೇವಿಂಗೂ

ಇವತ್ತು ಬೆಳಿಗ್ಗೆ ಏಳಲೇ ಬೋರ್...ಭಾನುವಾರ ಬೇರೆ ಯಾರಾದರೂ ಬೇಗ ಎದ್ದರೆ ಅಪಚಾರವಲ್ಲವೇ..ಆದರೂ ಯಜಮಾನರು ವೀಕೆಂಡ್ಸ್ ಬಿಡುವಾದಾಗ ( ಹವಾಮಾನ ಹದಗೆಟ್ಟಾಗ :D) ಸೇಂಟ್ ಜಾನ್ ಗೆ ಸ್ವಯಂಸೇವಕ " ಅಂಬುಲೆನ್ಸ್ ಆಫೀಸರ್" ಅಗಿ ಕೆಲಸ ಮಾಡುತ್ತಿರುತ್ತಾರೆ. ನೆನ್ನೆಯೇ ಸೇಂಟ್ ಜಾನ್ ನವರು ಫೋನ್ ಮಾಡಿ ಇವತ್ತು ಬೆಳಿಗ್ಗೆ 8ಗಂಟೆಗೆ ಬರಬೇಕಿಂದಿದ್ದರಿಂದ ಭಾನುವಾರವಾದರೂ ಬೆಳಿಗ್ಗೆ ಏಳಲೇ ಬೇಕಾಗಿತ್ತು. ನಿಮ್ಮ ವಾಲೆಂಟರಿ ಕೆಲಸವೂ ಸಾಕು, ನಾನು ಬೆಳಗಾಗೆದ್ದು ( ಅದೂ ಭಾನುವಾರ ) ರೆಡಿ ಮಾಡುವುದು ಸಾಕು...ಈ ಚಳಿಯಲ್ಲಿ ಬೇಗ ಏಳುವ ಕರ್ಮ ನಂದು...ಹಾಗೆ ಹೀಗೆ ಗೊಣಗಿಕೊಂಡೇ ಎದ್ದೆ.

ಲಂಚ್ ಕೊಡುತ್ತೇವೆ ಎಂದರೂ ಅವರ ಪ್ರಕಾರ ಕೋಳಿ ಮೊಟ್ಟೆ, ಮೀನು ಎಲ್ಲವೂ ವೆಜಿಟೇರಿಯನ್ನೇ! ಆದ್ದರಿಂದ ಎಲ್ಲಿಗೇ ಹೋಗಲಿ ಮನೆಯಿಂದಲೇ ಡಬ್ಬಿ ಕಟ್ಟಿಬಿಡುತ್ತೇನೆ. ಇವತ್ತು ಅದಿಕ್ಕೆಯೇ ನನ್ನ ಗೊಣಗಾಟ. ತಿಂಡಿಯ ಚಿಂತೆಯೇನೋ ಇರಲಿಲ್ಲ. ಯಜಮಾನರಿಗೆ ಬೆಳಿಗ್ಗೆ ಬ್ರೆಡ್, ಟೀ ಕೊಟ್ಟರೆ ಮುಗಿಯಿತು. ಅನಂದವಾಗಿ ತಿಂದು ಹೊರಡುತ್ತಾರೆ. ಮಧ್ಯಾಹ್ನದ್ದೆ ಯೋಚನೆಯಿತ್ತು...ಏನು ಮಾಡುವುದು ಎಂದು ಹಲ್ಲುಜ್ಜಿ, ಮುಖ ತೊಳೆದು ಕನ್ನಡಿಯಲ್ಲಿ ನೋಡಿಕೊಂಡು ನನಗೇ ನಾನೇ " ಅಯ್ಯೋ, ಭಾನುವಾರ ಬೇಗ ಎದ್ದಿದ್ದಕ್ಕೆ ಕಣ್ಣೆಲ್ಲಾ ಕೆಂಪಗೆ ಊದಿಕೊಂಡಿವೆ, ನಿದ್ದೆ ಸಾಲಲೇ ಇಲ್ಲ..." ಅಂದುಕೊಳ್ಳುತ್ತಲೇ ಸಡನ್ ತಲೆಯ ಮೇಲೆ ಲೈಟ್ ಹೊತ್ತಿತು..." ಅರೇ ಇವತ್ತು ಡೇ ಲೈಟ್ ಸೇವಿಂಗ್ ಕೊನೆ! ಅಂದರೆ ಈಗಿನ್ನೂ ಆರೂವರೆ!" ಯಜಮಾನರು ಆಗಲೇ ಟೀ ಮಾಡಲು ಇಟ್ಟಿದ್ದರು.





ಅವರೂ ಗಮನಿಸಿರಲಿಲ್ಲ, " ಹೋ ಹೌದಲ್ಲ! ಹಾಗಿದ್ದರೂ ಈಗಿನ್ನೂ ಆರೂವರೆ, ನಿಧಾನಕ್ಕೆ ತಯಾರಾದರಾಯಿತು...ನೀನು ತಿಂಡಿಯೇ ಮಾಡಿಬಿಡು, ಇವತ್ತು ಬ್ರೆಡ್ ಬೇಡ ಎಂದು ಉದಾರತನ ತೋರಿದರು. ಮತ್ತೇನು ಮಾಡುವುದು ಹೇಗಿದ್ದರೂ ಅವಲಕ್ಕಿ ಇದೆ, ಅದನ್ನೇ ಅಲಂಕರಿಸಿದರಾಯಿತು ಎಂದು ಅವಲಕ್ಕಿ ಒಗ್ಗರಣೆ ಮಾಡಿ ಅದನ್ನೇ ಡಬ್ಬಿಗೆ ಮೊಸರು, ಸಲಾಡ್ ಜೊತೆ ಕಟ್ಟಿದೆ.


ಮೊದಲು ನನಗೆ ಇಲ್ಲಿ ಬಂದಾಗ, ಇವರ ಒಂದು ಗಂಟೆ ಹಿಂದೆ ಹಾಕುವ, ಒಂದು ಗಂಟೆ ಮುಂದೆ ಹಾಕುವ ರೀತಿಯೇ ಗೊತ್ತಿರಲಿಲ್ಲ. ನಮ್ಮಲ್ಲಂತೂ ಈ ಗೊಂದಲವೇ ಇರಲಿಲ್ಲ. ಇಲ್ಲಿನವರು ಬೇಸಿಗೆಯಲ್ಲಿ ಒಂದು ಗಂಟೆ ಮುಂದೆ ಹಾಕುವುದು, ಚಳಿಗಾಲದಲ್ಲಿ ಒಂದು ಗಂಟೆ ಹಿಂದೆ ಹಾಕುವುದು ನೋಡಿ, ಹೇಗಪ್ಪಾ ಇವರ ಲೆಕ್ಕಾಚಾರ ಎನಿಸುತ್ತಿತ್ತು. ನಾವೇನೋ ಗಡಿಯಾರ ನೋಡಿ ಸಮಯ ತಿಳಿಯುತ್ತೇವೆ, ಈ ಹಕ್ಕಿಗಳು ಹೇಗೆ? ಅವೂ ಬೇಗ ಗೂಡಿಗೆ ಮರಳುತ್ತವೆಯೇ? ಒಂದು ಗಂಟೆ ಬೇಗ ಬರಬೇಕೆಂದು ಅವಕ್ಕೆ ಹೇಗೆ ಗೊತ್ತಾಗುತ್ತದೆ? ಹೂವುಗಳು ಸಂಜೆಯಾದಂತೆಲ್ಲಾ ಮುದುಡುವುದನ್ನು ಕಂಡಿದ್ದ ನನಗೆ, ಇವತ್ತಿನಿಂದ ಒಂದು ಗಂಟೆ ಬೇಗ, ಅಥವಾ ಲೇಟಾಗಿ ಮುದುಡಿಕೊಳ್ಳುತ್ತವೆಯೇ ಎಂದೆಲ್ಲಾ ತಲೆಕೆಡಿಸಿಕೊಂಡಿದ್ದ ನನಗೆ, ಆಮೇಲೆ ಗೊತ್ತಾಯಿತು. ಇದೆಲ್ಲಾ ನಮ್ಮ ಲೆಕ್ಕಕ್ಕಷ್ಟೇ. ಬೇಸಿಗೆಯಲ್ಲಿ ನಮಗೆ ರಾತ್ರಿ ಹತ್ತಾದರೂ ಇನ್ನೂ ಸಂಜೆ ಆರರ ಬಿಸಿಲಿನಂತೆ ಬೆಳಕಿರುತ್ತದೆ. ಇನ್ನು ಸಂಜೆ ಆರುಗಂಟೆಯಂತೂ ಮಧ್ಯಾಹ್ನದ ಬಿಸಿಲಿನಂತೆ ಮುಖಕ್ಕೆ ರಾಚುತ್ತಿರುತ್ತದೆ. ಆದರೆ ಈ ಹಕ್ಕಿಗಳಾಗಲಿ, ಹೂವುಗಳಾಗಲಿ ಯಾವುದೇ ಸೇವಿಂಗ್ ಗಳಿಗೆ ತಲೆಕೆಡಿಸಿಕೊಂಡಿಲ್ಲ. ಸೂರ್ಯನ ಬಿಸಿಲಿನಲ್ಲಿ ನಗುನಗುವ ಬಗೆಬಗೆಯ ಡೈಸಿಗಳು, ಸಂಜೆ ಆರಾಗುತ್ತಿದ್ದಂತೆ ಎಷ್ಟೆ ಬೆಳಕಿದ್ದರೂ ಎಲ್ಲವೂ ಮುದುಡಿಕೊಳ್ಳುತ್ತಿದ್ದವು. ಹಕ್ಕಿಗಳು ತಮ್ಮ ತಮ್ಮ ಗೂಡಿಗೆ ಮರಳಿ ಬಂದು, ವೈರಿನ ಮೇಲೆ ಉದ್ದಕ್ಕೂ ಕೂತು ಒಳ್ಳೆ ನರ್ಸರಿ ಮಕ್ಕಳ ಶಾಲೆಯಂತೆ ಗಿಜಿಗಿಜಿ ಎಂದು ಗಲಾಟೆಮಾಡುತ್ತಿದ್ದವು.


ಹಾಗಿದ್ದರೆ ಈ ಸೇವಿಂಗ್ ಗಳು ನಮಗೆ ಮಾತ್ರ! . ಬೇಸಿಗೆಯಲ್ಲಿ ಹೆಚ್ಚು ಬೆಳಕಿರುವುದರಿಂದ ಕಡಿಮೆ ವಿದ್ಯುಚ್ಛಕ್ತಿಯನ್ನು ಬಳಸುತ್ತೇವಂತೆ. ವಾರಾಂತ್ಯದ ದಿನಗಳು ಉದ್ದವಿವೆಯಲ್ಲ ಎಂದು ಖುಷಿಯೆನಿಸುತ್ತದೆ. ಊರಿಂದೂರಿಗೆ ಪ್ರಯಾಣ ಮಾಡುವಾಗ ಗಂಟೆ ಹತ್ತಾಗಿದ್ದರೂ " ನೈಟ್ ಜರ್ನಿ" ಎಂದು ಭಯಪಡಬೇಕಿರುವುದಿಲ್ಲ. ಲೇಟಾಗಿ ಕತ್ತಲಾಗುವುದರಿಂದ ಆರಾಮವಾಗಿ ಊರೆಲ್ಲಾ ಸುತ್ತಬಹುದು. ಪ್ರಪಂಚದ ಅನೇಕ ದೇಶಗಳು ಈ " ಡೇ ಲೈಟ್ ಸೇವಿಂಗ್ಸ್ ಪದ್ಧತಿಯನ್ನು ಅನುಸರಿಸುತ್ತವೆ.



ನಮ್ಮಲ್ಲಿ ಡೇ ಲೈಟ್ ಸೇವಿಂಗ್ಸ್ 30 ಸೆಪ್ಟಂಬರ್ 2007 ಇಂದ 6 ಏಪ್ರಿಲ್ 2008ಗೆ ಕೊನೆಗೊಂಡಿತು, ಮುಂದಿನ ಡೇ ಲೈಟ್ ಸೇವಿಂಗ್ 29 ಸೆಪ್ಟಂಬರ್ ರಿಂದ 5 ಏಪ್ರಿಲ್ 2009 ಅಂತೆ.

ಇವತ್ತಿನಿಂದ ಅಂದರೆ ಏಪ್ರಿಲ್ 6ರ ಬೆಳಿಗ್ಗೆಯಿಂದ ನಾವು ಒಂದು ಗಂಟೆ ಹಿಂದೆ! ನಮ್ಮ ನಮ್ಮ ಗಡಿಯಾರಗಳನ್ನು ಒಂದು ಗಂಟೆ ಹಿಂದೆ ಹಾಕಿದೆವು.

8 comments:

bhadra said...

ಅಯ್ಯೋ ಕರ್ಮವೇ! ಗಡಿಯಾರವನ್ನೇ ಹಿಂದೆ ತಿರುಗಿಸಬೇಕಾ? :o
ಕಾಲದೇವನಿಗೆ ಕೋಪ ಬರೋಲ್ವಾ?

ಅದೇನು ಡೇ ಸೇವಿಂಗೋ ನೈಟ್ ಶೇವಿಂಗೋ - ಒಂದೂ ಅರ್ಥ ಆಗೋಲ್ಲ

ಆದರೆ ಬರಹ ಮಾತ್ರ ಯಥಾ ಪ್ರಕಾರ ಸೂಪರ್ರೋ ಸೂಪರ್ರು.

ನಮ್ಮೂರೇ ಚಂದ, ನಮ್ಮವರೇ ಅಂದ - ಪರದೇಶದ ಕಡೆ ತಲೆಯಿಟ್ಟು ಕೂಡಾ ಮಲಗಿಕೊಳ್ಳೋದು ಬೇಡ ಅನ್ನಿಸುತ್ತಿದೆ

ಅದಿರ್ಲಿ, ರಜಾ ದಿನವೂ ಮನೆಯಲ್ಲಿ ಇರಬಾರದೇ? ಇದೇ ನೋಡಿ - ವಿಚಿತ್ರ ಜೀವನ

ಚಿಕ್ಕ ವಯಸ್ಸಿನಲ್ಲಿ ಜೀವನವನ್ನು ಸವಿಯಬೇಕು, ಆದರೆ ಈ ಸಿಹಿ ಘಳಿಗೆಯಲ್ಲಿ ಹೆಸರು ಮಾಡದೇ ಕಾಲಹರಣ ಮಾಡಿದರೆ, ಮುಂದೆ ಜೀವನ ದುಸ್ತರವಾಗುವುದು. ಮುಪ್ಪಾದ ಮೇಲೆ ಸವಿಯೋಕ್ಕೇನಿರತ್ತೆ, ವಾಕಿಂಗ್ ಸ್ಟಿಕ್ಕು, ಮಾರ್ನಿಂಗ್ ವಾಕು, ಬೀದಿ ನಾಯಿಗಳನ್ನು ಓಡಿಸೋದು, ರಸ್ತೆಯಲ್ಲಿ ಕಳ್ಳ ಕಾಕರು ಬರದಂತೆ ಕಾವಲು ಕಾಯೋದು (ಇದು ನನ್ನ ಅನುಭವ - ಮತ್ತೆ ಅವರ ಕಿವಿ ಹಿಂಡೋಕ್ಕೆ ಹೋಗಬೇಡಿ). ಅವರಿಗೆ ಮಾತ್ರ ಇದನ್ನು ಓದೋಕ್ಕೆ ಅವಕಾಶ ಕೊಡಬೇಡಿ, ದಮ್ಮಯ್ಯ ಅಂತೀನಿ. ಇವನ್ಯಾವನಯ್ಯಾ ಫಿಟ್ಟಿಂಗ್ ಮಾಸ್ತರು ಅಂತ ಬಿದುರು ಕೊಟ್ಟಾರು.

ಹೇಗೋ ತೂಗಿಸಿಕೊಂಡು ಹೋಗೋದೇ ಜೀವನ.

ವಾರಕ್ಕೊಂದು ಲೇಖನ ಏರಿಸ್ಬೇಕು ಅಂತ ಮನಸ್ಸು ಮಾಡಿರೋ ಹಾಗಿದೆ :P

Sumeru said...

Hello Girija! Yedda mele matte malagidra?
Tumba chenagi baredideera,,,:)
regards............
Sangeetha

maddy said...

olle grip sikkide nimge baravanige mele... hindina posts galiginta idu bhinnavagide...

keep it up..

Madhu

US said...

ಹಲೋ ಗಿರಿಜಾ

ತುಂಬಾ ಚೆನ್ನಾಗಿದೆ ನಿಮ್ಮ ಲೇಖನ...

ನಾವು ಇಲ್ಲಿ ಮಾರ್ಚ್ ತಿಂಗಳ ಎರಡನೇ ಭಾನುವಾರ ಗಡಿಯಾರ ಹಿಂದಕ್ಕೆ ತಿರುಗಿಸಿದೆವು.

ಯಾವಾಗಲೂ "ದುಡ್ಡು ಸೇವ್" ಮಾಡು ಅಂತ ಬುದ್ಡಿ ಹೇಳೊ ಯಜಮಾನರು "ಲೈಟ್ ಸೇವಿಂಗ್" ಅಂದಾಗ ನನಗೆ ಸ್ವಲ್ಪ ಗಾಬರಿ ಆಗಿತ್ತು....

ನಿಮ್ಮ ಅಭಿಮಾನಿ
ಉಮಾ

Anonymous said...

ಹಲೋ ಗಿರಿಜಾ,
ತುಂಬಾನೇ ಚೆನ್ನಾಗಿ ಬರೆದಿದ್ದೀರ. ಮೊದಲೇ ಹೇಳಿದ ಹಾಗೆ ನಿಮ್ಮ ಬರವಣಿಗೆ ಶೈಲಿ ಅಂತು ತುಂಬಾನೇ ಚೆನ್ನಾಗಿದೆ. ಇದೇ ರೀತಿ ಲೇಖನಗಳನ್ನ ಬರೀತಾ ಇರಿ:-)

ಧನ್ಯವಾದಗಳು,
ಮಲ್ಲಿಗೆ

Anonymous said...

Good narration Nilgiri.

For those of us living in the Northern hemisphere and had to turn the clock ahead by one hour to begin Daylight Saving Time the experience was exactly opposite!

I woke up an hour late and got to work an hour late. This year it was even worse because Daylight Saving Time in US started full 4 weeks early than it used to be in the past on March 9(second Sunday of March) instead of the usual April 6(first Sunday of April). It took nearly 3 weeks for me to get used to getting up early in the morning.

Keep blogging.

ಸುಪ್ತದೀಪ್ತಿ suptadeepti said...

ನಾವಿರುವ ಈ ದೇಶದಲ್ಲಿಯೂ ಡೇ-ಲೈಟ್-ಸೇವಿಂಗ್ಸ್ ಮಾಡ್ತಾರೆ. ಇದರ ತಲೆ-ಬುಡ ಅರ್ಥವಾಗಬೇಕಾದರೆ ಕೆಲವು ವರ್ಷಗಳೇ ಬೇಕಾದವು. ಇದನ್ನು ಸುಲಭವಾಗಿ ನೆನಪಿಡಲು ಇಲ್ಲಿ "Spring Forward, Fall Back" ಅಂತ ಹೇಳುತ್ತಾರೆ. ಈಗ ಮಾರ್ಚ್-ಎಪ್ರಿಲ್ ಸಮಯದಲ್ಲಿ ದಿನಗಳು ಉದ್ದವಾಗುವಾಗ ಗಡಿಯಾರ ಮುಂದಕ್ಕೆ,ಅಕ್ಟೋಬರ್-ನವೆಂಬರ್ ಸಮಯದಲ್ಲಿ ಮತ್ತೆ ಸ್ವಾಭಾವಿಕ ಸಮಯಕ್ಕೆ ತಿರುಗಿಕೊಳ್ಳುವ ಪರಿಪಾಠ.

NilGiri said...

@ Srinivas sir,

ಬರಹ ಮೆಚ್ಚಿಕೊಂಡು ಪ್ರೋತ್ಸಾಹಿಸಿದಕ್ಕೆ ಧನ್ಯವಾದಗಳು ಸರ್.

```````````````

@ Sangeetha,

ಒಮ್ಮೆ ಎದ್ದು ಮನೆಕೆಲಸ ಶುರು ಮಾಡಿದ ಮೇಲೆ ಮಲಗಲು ಸಮಯವೇ ಸಿಗಲಿಲ್ಲ :(

~~~~~~~~~~~~~~~~~

@ Madhu,

ಅಬ್ಬಾ! ಅಂತೂ ನಿಮ್ಮ ಮಟ್ಟಕ್ಕೆ ಬರೆಯಲು ನನಗೆ ಬಂದಿತಲ್ಲಾ! ಥ್ಯಾಂಕ್ಸ್ ಮಧು.

``````````````````
@ Uma,

ಒಹೋ ನೀವು ನಮಗಿಂತಾ ಮೊದಲೇ ಒಂದು ಗಂಟೆ ಹಿಂದೆ ಹೋದಿರಾ?!! ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು.

```````````````````````````
@ Mallige,

ಬರವಣಿಗೆ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು. ನೀವು ಒಂದು ಬ್ಲಾಗು ಶುರು ಮಾಡಿ :)

`````````````````````````

@ JH,

ನಮಗೂ ಒಂದು ಗಂಟೆ ಮುಂದೆ ಹಾಕಿದ್ದಾಗ ಹೀಗೆ ಅನುಭವವಾಗಿತ್ತು. ನಿಮ್ಮ ಅನುಭವವನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

`````````````````````

@ Suptadeepti

ನಂಗೂ ಈಗೀಗ ಅರ್ಥವಾಗುತ್ತಲಿದೆ ಇವರ ಸೇವಿಂಗ್ ಗಳು. ನನಗಿಂತ ಮೊದಲೇ ನಮ್ಮ ಕಂಪ್ಯೂಟರುಗಳು ಅರ್ಥ ಮಾಡಿಕೊಂಡಿವೆ! ಮನೆ ಗಡಿಯಾರಗಳನ್ನಷ್ಟೇ ಹಿಂದಕ್ಕೆ ಹಾಕಿದೆವು. ಕಂಪ್ಯೂಟರುಗಳು ಅವೇ ಹಿಂದೆ ಹೋಗಿದ್ದವು.