ಸ್ನೇಹಿತರ ತಂಗಿ ಊರಿಗೆ ವಾಪಸ್ ಹೊರಟಿದ್ದರು. ನಮ್ಮೂರಿನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇಲ್ಲದಿರುವುದರಿಂದ ಆಕ್ಲೆಂಡಿಗೆ ನಾವೂ ಅವರಿಗೆ ಬೀಳ್ಕೊಡಲು ( ಚಾಕೊಲೇಟ್, ಮೊಬೈಲುಗಳನ್ನು ಮೈಸೂರಿಗೆ ಒಯ್ಯಲು ಅವರು ಒಪ್ಪಿದ್ದರಿಂದ :D) ಹೊರಟಿದ್ದೆವು.
ವಿಮಾನ ನಿಲ್ದಾಣದಲ್ಲಿ ಕಣ್ ಮನ ತಣಿಸುವ, ನಮ್ಮವರ ಪರ್ಸು ಹಗುರ ಮಾಡುವ ಅನೇಕ ಶಾಪಿಂಗ್ ಸೆಂಟರುಗಳಿರುವುದರಿಂದ, ನಾನೂ ಸ್ನೇಹಿತರು ಇಬ್ಬರೂ ಕೂಡಿ ಮಾಸ್ಟರ್ ಪ್ಲಾನ್ ಹಾಕಿದ್ದೆವು. ತಂಗಿಯ ಚೆಕ್-ಇನ್, ಮಣ್ಣು ಮಸಿಗಳೆಲ್ಲ ಮುಗಿದು ನಮಗೆ ಕೈ ಬೀಸಿ ಹೋದ ತಕ್ಷಣ, " ನಡಿ, ನಡಿ...ಬೇಗ ಲುಕ್ ಔಟ್ ಪಾಯಿಂಟ್ ಗೆ ಹೋಗೋಣ....ಥಾಯ್ ವಿಮಾನಕ್ಕೆ ಅಲ್ಲಿಂದ ಟಾಟಾ ಮಾಡೋಣ..." ಎಂದು ನಮ್ಮ ಪ್ಲಾನಿನ ಸುಳಿವು ಹತ್ತಿದವರಂತೆ ಇಬ್ಬರ ಗಂಡಂದಿರೂ ನಮ್ಮನ್ನು ಹೊರಡಿಸಿಯೇ ಬಿಟ್ಟರು. ಮನೆ ಬಿಟ್ಟಾಗಿನಿಂದ ಏರ್ ಪೋರ್ಟ್ ಲ್ಲಿ ಶಾಪಿಂಗ್ ಮಾಡಬೇಕೆಂದು ಕೊಂಡಿದ್ದ ನಮ್ಮ ಪ್ಲಾನ್ ಎಲ್ಲವೂ ಫ್ಲಾಪ್ ಆಯಿತು. ನಾನು ಮುಖ ಊದಿಸಿಕೊಂಡೇ ಹೊರಟೆ.
ತಂಗಿಯ ವಿಮಾನ ಹೊರಡುವವರೆಗೂ ಇಲ್ಲೇ ಕೂತರಾಯಿತು ಎಂದು ಅವರ ಅಕ್ಕ ಕಡೆಯ ಪ್ರಯತ್ನ ಮಾಡೇ ಬಿಡೋಣವೆಂದು ಹೇಳಿದರು. ನಾನೂ " ಹೂಂ" ಎಂದು ಕೂರಲು ಜಾಗ ಹುಡುಕ ತೊಡಗಿದೆ. ಕೂಡಲೇ ಇಬ್ಬರೂ ಗಂಡಸರು..." ಬೇಡ ಬೇಡ ಲುಕ್ ಔಟ್ ಪಾಯಿಂಟ್ ಗೇ ಹೋಗೋಣ...ಅಲ್ಲಾದರೇ ಪ್ಲೇನು ಇನ್ನೂ ಚೆನ್ನಾಗಿ ಕಾಣುತ್ತದೆ..." ಎಂದು ನಮಗೆ ಸಿಗಬಹುದಾಗಿದ್ದ ಕಡೇ ಅವಕಾಶವನ್ನೂ ಬಿಡಲಿಲ್ಲ. ಮತ್ತೇನು ಮಾಡುವುದೆಂದು ಇಬ್ಬರೂ ಹೊರಟೆವು. ಲುಕ್ ಔಟ್ ಪಾಯಿಂಟಿಗೆ ಅಲ್ಲಿಂದ ಎರಡು ಕಿಲೋಮೀಟರುಗಳಷ್ಟೇ.
ಲುಕ್ ಔಟ್ ಪಾಯಿಂಟಿನಲ್ಲಿ ಏರೋ ಪ್ಲೇನುಗಳು ಹಾರುವ, ಹಾಗೂ ಇಳಿಯುವ ದೃಶ್ಯ ತುಂಬಾ ಚೆನ್ನಾಗಿ ಕಾಣುತ್ತದೆ. ಅಲ್ಲಿ ನಿಂತರೆ, ವಿಮಾನಗಳು ಇಳಿಯುವ, ಹಾರುವ ಸುಂದರ ದೃಶ್ಯ ಹತ್ತಿರದಿಂದ ನೋಡಬಹುದು. ಬಗೆಬಗೆಯ ಬಣ್ಣ ಬಣ್ಣದ, ಒಂದೊಂದು ದೇಶದ ವಿಮಾನ ಒಂದೊಂದು ಕಲರ್!
ನಾವು ಬಂದು ಕೂರುತ್ತಿದ್ದಂತೆ ಗಗನಕ್ಕೆ ಚಿಮ್ಮಿದ " ಏರ್ ನ್ಯೂಝಿಲೆಂಡ್" ಪುಟಾಣಿ ವಿಮಾನ...ಇಲ್ಲೇ ಹತ್ತಿರದ ಊರಿಗೆ ಹೊರಟಿರುವುದು.
ಏರ್ ನ್ಯೂಝಿಲೆಂಡ್ ಹಾರಿದಂತೆ, ಅದಕ್ಕಾಗಿಯೇ ಕಾಯುತ್ತಿದ್ದು ಧರೆಗಿಳಿದ ದೊಡ್ಡ ವಿಮಾನ "ಏರ್ ಪೆಸಿಫಿಕ್ ".
ಏರ್ ಪೆಸಿಫಿಕ್ ಇಳಿಯುವುದನ್ನೇ ಕಾಯುತ್ತಿದ್ದು, ಗಗನಕ್ಕೆ ಹಾರಿತು ಮತ್ತೊಂದು ಪುಟಾಣಿ ಏರ್ ನ್ಯೂಝಿಲೆಂಡ್. ಒಂದು ಇಳಿದರೆ ನಾಲಕ್ಕು ಇಂತಹ ಪುಟಾಣಿಗಳು ಹಾರುತ್ತಿದ್ದವು.
ಏರ್ ನ್ಯೂಝಿಲೆಂಡಿನ ವಿಮಾನ ನೆಲಕ್ಕಿಳಿದು ನಿಲ್ಲಲು ಜಾಗ ಹುಡುಕುತ್ತಿದ್ದಂತೆ, ಹೊರಡಲು ರೆಡಿಯಾದ ಕಾಂಟಾಸ್, ಹಿನ್ನೆಲೆಯಲ್ಲಿ ಲೈಟ್ ಹಾಕಿಕೊಂಡು ಇಳಿಯುತ್ತಿರುವ ಎಮಿರೇಟ್ಸ್!
ಒಂದರ ಹಿಂದೆ ಒಂದರಂತೆ ಆಕಾಶಕ್ಕೆ ಹಾರಿದ ಕ್ಯಾಥೇ ಪೆಸಿಫಿಕ್, ಮಲೇಶಿಯನ್ ಏರ್ ಲೈನ್ಸ್, ಕಾಂಟಾಸ್!
ಎಲ್ಲರಿಗೂ ಕೂತಲ್ಲೇ ಟಾಟಾ ಮಾಡಿ ಮುಗಿಸಿದರೂ ಥಾಯ್ ನ ಸುಳಿವೇ ಇಲ್ಲ...ಒಂದು ಗಂಟೆಗೆ ಹೊರಡುತ್ತದೆಂದು ಹೇಳಿದ್ದರಲ್ಲ, ಎಂದು ಅಂದುಕೊಳ್ಳುತ್ತಿರುವಾಗಲೇ ಹೊರಬಂದ ಥಾಯ್ ಏರ್ ವೇಸ್.
ಎಲ್ಲ ವಿಮಾನಗಳು ಹೊರಟ ನಂತರ ಕಡೆಗೆ ಹೊರಟ ಥಾಯ್ ಏರ್ ವೇಸ್.
ವಿಮಾನ ಕಣ್ಮರೆಯಾಗುವವರೆಗೂ ನೋಡಿ ಹೊರಡಲು ಅಣಿಯಾದೆವು. ನಮ್ಮ ಕೋಪಗಳನ್ನು ಶಮನಗೊಳಿಸಲೆಂದೋ ಏನೋ, ಊಟ ಮಾಡಲು ಶಾಪಿಂಗ್ ಮಾಲುಗಳಿಗೆ ಹೋಗೋಣವೆಂದರು. ಒಳಗೇ ಖುಷಿಯಾದರೂ ತೋರಗೊಡಬಾರದೆಂದು," ಎಂಥದ್ದೂ ಬೇಕಿಲ್ಲ, ನಡೆಯಿರಿ ವಾಪಸು ಮನೆಗೆ ಹೋಗಿ ಊಟ ಮಾಡಿದರಾಯಿತು..." ಎಂದು ಒಣ ಜಂಭ ತೋರಿದೆವು.
ಕಡೆಗೆ ಸೆಂಟ್ ಲೂಕ್ಸ್ ಶಾಪಿಂಗ್ ಮಾಲ್ ನ ಇಂಡಿಯನ್ ರೆಸ್ಟೋರೆಂಟಿನಲ್ಲಿ ಊಟ ಮಾಡಿ, ಒಂದೆರಡು ಬಣ್ಣಗೆಟ್ಟ ( ನಮ್ಮವರ ಭಾಷೆಯಲ್ಲಿ) ಇಯರ್ ರಿಂಗ್ ಗಳನ್ನು ತೆಗೆದುಕೊಂಡು, ಮನೆ ದಾರಿ ಹಿಡಿದೆವು. " ಇಲ್ಲಿಗಿಂತ, ಇಂಡಿಯಾದಲ್ಲೇ ಚೆನ್ನಾಗಿರುವುದು ಸಿಗುವುದಿಲ್ಲವೆ? ಇಲ್ಲಿ ಸಿಗುವ 9 ಕ್ಯಾರೆಟ್ ಚಿನ್ನಾಭರಣಗಳನ್ನು ನೋಡಿದರೆ, ನಮ್ಮ ಫ್ಯಾನ್ಸಿ ಸ್ಟೋರಿನ ಗೋಲ್ಡ್ ಕವರಿಂಗೇ ಎಷ್ಟೋ ಝಗಮಗ ಅನ್ನುತ್ತವೆ...ಅದೂ ಅಲ್ಲದೇ ಇಲ್ಲಿ ಸಿಗುವುದೆಲ್ಲವೂ ಮೇಡ್ ಇನ್ ಚೈನಾಗಳೇ...ಅದನ್ನೇನು ಶಾಪಿಂಗ್ ಮಾಡುವುದು..." ಎಂದು ಉದ್ದಕೂ ಭಾಷಣ ಬಿಗಿದುಕೊಂಡೇ ಬಂದರು. ನಮಗೇನು ಇವೇನು ಗೊತ್ತಿಲ್ಲದಿಲ್ಲ, ಅಂದರೂ ಹೋದಲ್ಲಿ ಬಂದಲ್ಲಿ ಶಾಪಿಂಗ್ ಮಾಡಿಲ್ಲವೆಂದರೆ ನಮ್ಮ ಜನ್ಮ ಸಾರ್ಥಕವಾಗುವುದಾದರೂ ಹೇಗೆ ;-).
4 comments:
ಮತ್ತೊಂದು ಸುಂದರವಾದ ಸಚಿತ್ರ ಲೇಖನ!
ಬಣ್ಣ ಬಣ್ಣದ ಕುಂಯ್ ಸುರ್ರ್ ಅಂತ ಏರಿ ಇಳಿಯುವ ವಿಮಾನ ಚಿತ್ರಗಳನ್ನು ನೋಡ್ತಿದ್ರೆ, ಈ ಬ್ಲಾಗನ್ನೇ ಕತ್ತರಿಸಿ ನನ್ನ ಬ್ಲಾಗಿಗೆ ಯಾಕೆ ಹಾಕಬಾರದು, ಅಥವಾ ಇಲ್ಲಿ ಕಾಣಿಸ್ತಿರೋ ಸ್ಕ್ರೀನನ್ನೇ ನನ್ನ ಪಿಸಿಯಲ್ಲಿ ಉಳಿಸಿ, ನನ್ನ ಬ್ಲಾಗಿನಲ್ಲಿ ಏರಿಸಬಾರದು ಅನ್ನೋ ದೂರಾಲೋಚನೆ ಬಂದರೂ, ’ಏ, ತಂಗಿ ಇಂತಹ ಸುಂದರ ಚಿತ್ರ ತೋರಿಸ್ತಿರೋವಾಗ, ಮೆಚ್ಚೋದು ಬಿಟ್ಟು, ಕೃತಿ ಚೌರ್ಯ ಮಾಡ್ತೀಯ’ ಅಂತ ನನ್ನ ಒಳಮನಸ್ಸು ಅಂದಾಗ, ತೆಪ್ಪಗಾದೆ.
ನೀವೇನೇ ಹೇಳಿ - ಬಹಳ ಬೇಗ ಸೋಲೊಪ್ಪಿಕೊಳ್ತಿದ್ದೀರ.
ಅಲ್ಲ - ನೀವು ಚಾಪೆ ಕೆಳಗೆ ನುಸುಳೋವ್ರು ಅಂತ ಗೊತ್ತಿದ್ದ, ನಿಮ್ಮವರು ರಂಗೋಲಿ ಕೆಳಗೆ ನುಸುಳೋದನ್ನು ಕಲಿಯುತ್ತಿರುವಾಗ, ಅದಕ್ಕೆ ಸಡ್ಡುಹೊಡೆಯೋಂಥ ಇನ್ನೊಂದು ಚಾಣಾಕ್ಷ ಮಂತ್ರ ತೋರಿಸಬಾರದಾ? ಛೇ! ನಮ್ಮ ಶತ್ರುಗಳಿಗೂ ಇಂತಹ ಸ್ಥಿತಿ ಬರಬಾರದಪ್ಪಾ :P
ಅದಿರ್ಲಿ, ಈಗಲೂ ಶ್ರೀ ಗೋಲ್ಡ್ ಕವರಿಂಗ್ ಚಿಕ್ಕಪೇಟೆಯೇ ವಿಶ್ವದ ಶ್ರೇಷ್ಠ ಚಿನ್ನ ಅಂತ ಗೊತ್ತಾಯ್ತಾ? ನಿಮ್ಮ ಮನೆಯವರಿಗೆ ನೇರವಾಗಿ ಚಿನ್ನ ಕೊಡಿಸಿ ಅಂತ ಕೇಳಬೇಡ್ರೀ
ನೀನೇ ಚಿನ್ನ
ನೀನೇ ರನ್ನ
ನಿನ್ನ ಚಿನ್ನದಂತದ ಮೊಗದ ಮುಂದೆ
ಇನ್ಯಾವ ಚಿನ್ನವೇ ಚೆನ್ನ
ಅಂತ ಹೇಳಿಬಿಟ್ಟಾರು
(ಗುಟ್ಟಿನಲ್ಲಿ - ಇದೇ ರೀತಿ ನಾನು ಮದುವೆಯಾದ ಹೊಸತರಲ್ಲಿ ಹೇಳಿ, ಇನ್ನೂ ನನ್ನ ಪತ್ನಿಯ ಹಂಗಿಸುವಿಕೆಗೆ ವಿಷಯವಾಗ್ತಿದ್ದೀನಿ - ಇದು ನೆನಪಾದಾಗಲೆಲ್ಲಾ ಒಂದೊಪ್ಪತ್ತು ಉಪವಾಸ [ನಾನು ಮಾಡ್ತಿಲ್ಲ, ಅವಳು ಮಾಡಿಸ್ತಿದ್ದಾಳೆ] - ಬಿಕ್ಕುವಿಕೆ)
ಬೆಳಗಾಗೆದ್ದು ಮನಸ್ಸು ಪ್ರಫುಲ್ಲಗೊಳಿಸಿದ್ದಕ್ಕೆ ಮತ್ತೊಮ್ಮೆ ವಂದನೆಗಳು - ನನ್ನ ಕುಹಕ ಮಾತಿಗೆ ಗ್ರಾಸವಾಗಿ ಸುಮ್ಮನೇ ಇರುವ ಅನಿಲರಿಗೆ ಶರಣೋ ಶರಣು - ಅನಿಲರಿಗೆ ನನ್ನ ಬಗ್ಗೆ ಹೇಳ್ಬೇಡಿ ಪ್ಲೀಸ್!
very nice pics girja..
nimma blog tumba begane chikka 'memvoir' agodralli samshaya illa..
Good going..
Madhu.
ವಿಮಾನ ನಿಲ್ದಾಣದಲ್ಲಿ ಬಂಧು ಮಿತ್ರರನ್ನು ಬೀಳ್ಕೊಡುವುದನ್ನು ನಾವೆಲ್ಲ ಎಷ್ಟೋ ಸರಿ ಮಾಡಿದ್ದೇವೆ, ಅದು ಒಂದು ಸರಳ ವಿಷಯ. ಆದರೆ ಆ ಒಂದು ಸರಳ ವಿಷಯದ ಬಗ್ಗೆ ಇಷ್ಟೊಂದು ಸವಿಸ್ತಾರವಾಗಿ ಮುಂದೇನು ಆಗುತ್ತದೆ ಅನ್ನುವಂತೆ, ಕುತೂಹಲ ಕೆರಳಿಸುವಂತೆ ಬರೆಯಲು ನಮ್ಮಲ್ಲಿ ಅನೇಕರಿಗೆ ಆಗದ ಕೆಲಸ(ಅವರಲ್ಲಿ ನಾನು ಒಬ್ಬವನು :D) ನಿಮ್ಮಲ್ಲಿ ಆ ಪ್ರತಿಭೆ ಸ್ವಾಭಾವಿಕ ಅನಿಸುತ್ತದೆ.
ನೀಲಿ ಆಕಾಶದ ಹಿನ್ನೆಲೆಯಲ್ಲಿ ಬೃಹದಾಕಾರದ ವಿಮಾನಗಳು ಆಕಾಶಕ್ಕೆ ಹಾರುವ ಚಿತ್ರಗಳು ತುಂಬಾ ಚನ್ನಾಗಿ ಮೂಡಿ ಬಂದಿವೆ.
ನಿಮ್ಮ ವಾರಾಂತ್ಯದ ಒಂದು ದಿನವನ್ನು ಇಲ್ಲಿ ಹಂಚಿಕೊಂಡಿರುವುದಕ್ಕೆ ಧನ್ಯವಾದಗಳು ನೀಲ್ ಗಿರಿ.
ಜೆ ಹೆಚ್
@ Srinivas Sir,
" ಬೆಣ್ಣೆ ಎಂದು ಸುಣ್ಣ ಕೊಟ್ಟರೂ ಸುಮ್ಮನಿರುತ್ತಿದ್ದ ಯಜಮಾನರು ಈಗ ನನ್ನನ್ನೇ ಏಮಾರಿಸುವುದನ್ನು ನೋಡಿದರೆ, ೩ ಶ್ರೀಗಳು ಯಜಮಾನರೊಂದಿಗೆ ಸೇರಿ ಏನಾದರೂ ಕರಾಮತ್ತು ನಡೆಸುತ್ತಿದ್ದಾರಾ? ಎಂಬ ಸಂದೇಹ ನನಗೆ :D
" ಓಹೋ ಗೊತ್ತಾಯಿತು ಈಗ! ಚಿನ್ನ, ರನ್ನಗಳೆಂದು ಶುರು ಮಾಡಿದರೆ ಉಪವಾಸ ಕೆಡವಬೇಕು ಎಂದು! " ಸುಳುಹು ಕೊಟ್ಟಿದ್ದಕ್ಕೆ ನಿಮ್ಮ ಮನೆಯವರಿಗೆ ನನ್ನ ನಮಸ್ಕಾರಗಳನ್ನು ತಿಳಿಸಿ ಸಾರ್ ;-)
``````````````````````````````
@ Madhu,
ಬರಹ ಮತ್ತು ಚಿತ್ರಗಳನ್ನು ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು.
``````````````````````````
@ JH,
ಬರಹವನ್ನು ಹೊಗಳಿದ್ದಕ್ಕೆ ಧನ್ಯವಾದಗಳು ಜೆ.ಹೆಚ್.
ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಪ್ರತಿಭಾವಂತರೇ! ನೀವೂ ಬರೆಯಬಹುದು, ಅದೇನು ಬ್ರಹ್ಮವಿದ್ಯೆಯೇ? ನಮಗೆ ತೋಚಿದಂತೆ ಬರೆದುಕೊಂಡು ಹೋದರಾಯಿತು. ನೀವು ಬರೆಯಿರಿ, ಓದಲು ನಾವಿದ್ದೇವೆ!
Post a Comment