Saturday, 4 July 2009

ಕಾಣೆಯಾಗಿದ್ದಕ್ಕೆ ಕಾರಣ!

ಎಲ್ಲರಿಗೂ ನಮಸ್ಕಾರಗಳು. ದಿನಗಳು ಅದು ಹೇಗೆ ಓಡುತ್ತಿವೆಯೋ ಗೊತ್ತಾಗುತ್ತಿಲ್ಲ! ಇನ್ನೂ ಊರಿಂದ ಮೊನ್ನೆ ಮೊನ್ನೆ ವಾಪಸು ಬಂದಂತೆ ಇದೆ. ನಾವು ಊರಿಗೆ ಹೋಗಿ, ನಾದಿನಿಯ ಮದುವೆಗೆ ಓಡಾಡಿ ( ರೇಷ್ಮೆ ಸೀರೆ ವಸೂಲಿ ಮಾಡಿ:D) ನಾನು ಇಂಟರ್ವ್ಯೂನಲ್ಲಿ ಪಾಸಾಗಿ ನಂಗೆ ಕೆಲಸ ಸಿಕ್ಕಿ...ಭರ್ತಿ ನಾಲ್ಕು ತಿಂಗಳು!

ನನಗೇನೂ ಕೆಲಸ ಮಾಡುವ ಆಲೋಚನೆ ಮೊದಲಿನಿಂದಲೂ ಇರಲಿಲ್ಲ! ಆರಾಮಾವಾಗಿ ಮೂರು ಹೊತ್ತು ತಿಂದುಕೊಂಡು, ಮನಸಿಗೆ ಬಂದಾಗ ಮನೆ ಕೆಲಸ ಮಾಡಿಕೊಂಡು, ಬೆಳಿಗ್ಗೆ ಒಂದು ಮರಿನಿದ್ದೆ, ಮಧ್ಯಾಹ್ನ ಊಟವಾದ ಮೇಲೆ ಒಂದು ನಿದ್ದೆ, ಹೀಗೆ ಸೊಂಪಾಗಿ ಮೈ ಬೆಳಿಸಿಕೊಂಡಿದ್ದೆ. ಯಜಮಾನರು ನನಗೆ ಕೆಲಸ ಹುಡುಕೆಂದು ಯಾವುದೇ ಕಟ್ಟುಪಾಡುಗಳನ್ನು ವಿಧಿಸಿರಲಿಲ್ಲವಾದ್ದರಿಂದ, ನಮ್ಮ ನಮ್ಮ ಮನೆಗಳಲ್ಲೂ ಯಾರೂ ನನ್ನ ಸುದ್ದಿಗೇ ಬಂದಿರಲಿಲ್ಲ. " ಮನೆಯಲ್ಲೇ ಕೂತು ಬೋರಾಗುವುದಿಲ್ಲವೇ?" ಎಂದು ಕೇಳಿದವರಿಗೆ, " ನನಗೆಂಥದ್ದೂ ಅಗುವುದಿಲ್ಲವೆಂದು" ಹೇಳಿದ ಮೇಲೆ ಅವರುಗಳೂ ಸುಮ್ಮನಾಗಿದ್ದರು. ಆದರೆ ಹೊರಗೆ ಹೋದಲ್ಲಿ ಬಂದಲ್ಲಿ, " ನೀವೆಲ್ಲಿ ಕೆಲಸ ಮಾಡುತ್ತೀದ್ದೀರಿ?" ಎಂಬ ಪ್ರಶ್ನೆಗಳಿಗೆ " ನಾನು ಕೆಲಸ ಮಾಡುತ್ತಿಲ್ಲಾ, ಆರಾಮವಾಗಿ ಮನೆಯಲ್ಲಿದ್ದೇನೆ" ಎಂದು ಉತ್ತರಿಸಿದರೆ, ನನ್ನಡೆಗೊಂದು ಕರುಣಾಜನಕ ದೃಷ್ಟಿ ಬೀರುತ್ತಿದ್ದವರೇ ಬಹಳ. ನಮ್ಮ ಸಂಸಾರದ ಕಷ್ಟ ಸುಖವನ್ನು ಗುತ್ತಿಗೆ ತೆಗೆದುಕೊಂಡವರ ಹಾಗೆ, " ಓಹೋ! ಅಲ್ಲಿ ಅಪ್ಲೈ ಮಾಡಿ, ಇಲ್ಲಿ ಅಪ್ಲೈ ಮಾಡಿ.." ಎಂದು ಉಪದೇಶ ಕೊಟ್ಟವರೂ ಇದ್ದರು. " ನಿಮಗೇನಂತೆ ಆರಾಮವಾಗಿ ಊಟ-ನಿದ್ದೆ ಮಾಡ್ಕೊಂಡು ಇರ್ತೀರಾ...ನಮ್ಮನ್ನು ನೋಡಿ, ಮನೆಯಲ್ಲೂ ಮಾಡಿ, ಹೊರಗೂ ಮಾಡಿ....." ಎಂದು ಅರ್ಧ ವ್ಯಂಗ್ಯವಾಗಿ, ಅರ್ಧ ಹೊಟ್ಟೆಉರಿಯಿಂದ ಮಾತನಾಡಿದವರೂ ಇದ್ದರು. ನನಗಂತೂ, ’ಕೆಲಸಕ್ಕೆ ಹೋಗು ಎಂದು ನನ್ನ ಗಂಡನೇ ನನಗೆ ಹೇಳಿಲ್ಲ...ಇವರೆಲ್ಲಾ ಯಾಕೆ ನನ್ನ ಬಗ್ಗೆ ಇಷ್ಟು ತಲೆಕೆಡಿಸಿಕೊಂಡಿದ್ದಾರೆ?’ ಎಂದು ನಗು ಬರುತ್ತಿತ್ತು.


ಅದರಲ್ಲೂ ಈಗಿನ ಹದಗೆಡುತ್ತಿರುವ ದೇಶದ ಆರ್ಥಿಕ ಪರಿಸ್ಥಿತಿಯಲ್ಲಿ, ನಾನು ಕೆಲಸ ಮಾಡುತ್ತೇನೆಂದರೂ ಸಿಗುವುದಂತೂ ಕಷ್ಟವಿತ್ತು. ಆದರೆ ಒಂದು ಕೈ ನೋಡೋಣವೆಂದು ಅಪ್ಲೈ ಮಾಡಿದ್ದ ಕೆಲಸಕ್ಕೆ, ನನ್ನ ಹೆಸರನ್ನು ಶಾರ್ಟ್ ಲಿಸ್ಟ್ ಮಾಡಿದ್ದೇವೆಂದು, ಇಂಟರ್ವ್ಯೂನ ದಿನಾಂಕದೊಂದಿಗೆ ಲೆಟರ್ ಬಂದಿದ್ದು ಅಚ್ಚರಿಯೆನಿಸಿತ್ತು. ಮೊದಲ ಇಂಟರ್ವ್ಯೂ ಆದ್ದರಿಂದ, ಮಾಮೂಲಿನಂತೆ ಯಜಮಾನರ ತಲೆ ತಿನ್ನತೊಡಗಿದ್ದೆ. "ಊರಿನಲ್ಲಿದ್ದ ಹಾಗೆ ಇಲ್ಲಿ ಇಂಟರ್ವ್ಯೂ ಇರುವುದಿಲ್ಲ, ಅಷ್ಟೇನೂ ಟೆನ್ಶನ್ ಮಾಡಿಕೊಳ್ಳಬೇಡವೆಂದಿದ್ದರೂ, ಒಳಗೊಳಗೇ ಪುಕಪುಕ! ಇಲ್ಲಿ ಇಂಟರ್ವ್ಯೂಗೆ ಬೇಕಿದ್ದರೆ " ಸಪೋರ್ಟಿಂಗ್ ಪರ್ಸನ್" ಕರೆದುಕೊಂಡು ಹೋಗಬಹುದು. ಅವರೂ ನಮ್ಮ ಜೊತೆಯಲ್ಲೇ ಕೂರಬಹುದು. ನಾವೇನಾದರೂ ತಡವರಿಸಿದರೆ, ನಮ್ಮ ಪರವಾಗಿ ಅವರೇ ಉತ್ತರಿಸಬಹುದು!! " ನಿನ್ನನ್ನು ತಯಾರಿ ಮಾಡಿ ಬಿಡುತ್ತೇನೆ, ನೀನೇ ಮ್ಯಾನೇಜ್ ಮಾಡುತ್ತೇಯೆಂಬ ಭರವಸೆಯಂತೂ ನನಗಿದೆ" ಎಂದು ನನ್ನ ಉಬ್ಬಿಸಿದ್ದರಿಂದ, " ಆಗಲಿ" ಎಂದು ತಲೆಯಾಡಿಸಿದ್ದೆ. ಅಷ್ಟಕ್ಕೂ ಏನೇನು ಪ್ರಶ್ನೆಗಳನ್ನು ಕೇಳುತ್ತಾರೆ ಎಂದೇ ಗೊತ್ತಿಲ್ಲವಲ್ಲ?! ಗೊತ್ತಿಲ್ಲದಿದ್ದರೇ ಒಳ್ಳೆಯದು, ಅವರು ಕೇಳಿದ್ದಕ್ಕೆ ಹೇಳುತ್ತಾ ಹೋಗು ಅಷ್ಟೇ " ಎಂದಿದ್ದರೂ, ಇಂಟರ್ವ್ಯೂ ದಿನ ಹತ್ತಿರ ಬರುತ್ತಿದ್ದಂತೆ ಡವಡವ!


ಯಜಮಾನರು ಹೇಳಿದಂತೆ, ನಾನು ಆತಂಕಪಡಬೇಕಾದ ವಾತಾವರಣವೇ ಇರಲಿಲ್ಲ. ಊರಿನಲ್ಲಿದ್ದಂತೆ ಅಭ್ಯರ್ಥಿಗಳ ಉದ್ದ ಕ್ಯೂ ಇರಲಿಲ್ಲ! ಸೀದಾ ಒಳ ಹೋದೆ. ಮೂವರು ನಗೆಮುಖದ ಬಿಳಿಹೆಂಗಸರು, " ಏನೂ ಟೆನ್ಶನ್ ಮಾಡಿಕೊಳ್ಳಬೇಡ, ನೀನು ರಿಲಾಕ್ಸ್ ಆಗುವವರೆಗೂ ನಾವೇನೂ ಕೇಳುವುದಿಲ್ಲ, ಕಾಫಿ-ಟೀ ಬೇಕಿದ್ದರೆ ಹೇಳು " ಎಂಬುದನ್ನು ಕೇಳೀಯೇ ನನಗಿದ್ದ ಅರ್ಧ ಮರ್ಧ ಗಾಬರಿಯನ್ನೂ ಓಡಿಸಿತ್ತು. " ನೀನೇನು ಓದಿ ಕಟ್ಟೆ ಹಾಕಿದ್ದೀಯಾ, ಎಂದಾಗಲಿ, ಅದೆಲ್ಲೆಲ್ಲಿ ಕೆಲಸ ಮಾಡಿ "ಶಭಾಶ್ ಗಿರಿ" ತೆಗೆದುಕೊಂಡಿದ್ದೀಯಾ ಎಂತಾಗಲೀ ಕೇಳಲೇ ಇಲ್ಲ! " ನೀನೇ ನಿನ್ನ ಬಗ್ಗೆ ಹೇಳು, ನಾವೇನೂ ಕೇಳುವುದಿಲ್ಲ, " ಎಂದರು. " ನಾನು ಎಲ್ಲಿಂದ, ಇಲ್ಲಿಗೆ ಹೇಗೆ ಬಂದೆ..." ಎಂಬುದನ್ನು ಹೇಳಿದೆ. ನಿನ್ನ ಟೈಮ್ ಮ್ಯಾನೇಜ್ ಮೆಂಟ್ ಹೇಗೆ, ಸ್ಟ್ರೆಸ್ ಆದರೆ ಏನು ಮಾಡುತ್ತೀಯಾ..?ಅಫೀಸಿನ ವಿಚಾರಗಳನ್ನು ಹೇಗೆ ಕಾಪಾಡುತ್ತಿಯಾ?? ಬರೀ ಇಂತದ್ದೇ ಪ್ರಶ್ನೆಗಳು. ನಾನೂ " ಹಾಗೆ...ಹೀಗೆ" ಎಂದೆಲ್ಲಾ ಒಗ್ಗರಣೆ ಮಾಡಿ ಹೇಳಿದೆ. ಕಡೆಗೊಂದು ಹದಿನೈದು ನಿಮಿಷದ ಸ್ಕಿಲ್ ಟೆಸ್ಟ್ ಕೊಟ್ಟರು. ಮುಂದಿನವಾರದಲ್ಲಿ ತಿಳಿಸುವುದಾಗಿ ನಗುಮುಖದಿಂದಲೇ ಬೀಳ್ಕೊಟ್ಟರು. " ಕೆಲಸ ಸಿಗುತ್ತದೋ, ಬಿಡುತ್ತದೋ! ಇಂಟರ್ವ್ಯೂ ಅನುಭವವಂತೂ ಚೆನ್ನಾಗಿತ್ತು. ಆದರೆ ಮರುದಿನವೇ ಫೋನ್ ಮಾಡಿ ಕೆಲಸ ಆಫರ್ ಮಾಡಿದರು. ನನಗಂತೂ ಒಮ್ಮೆಲೆ ಇದು ಕನಸೋ, ನನಸೋ?!!!ಯಜಮಾನರಿಗೂ ಖುಶಿ! ಪರವಾಗಿಲ್ಲವೆ? ಚಾನ್ಸ್ ಹೊಡೆದೆಯೆಲ್ಲಾ ಎಂದು:).


ಊರಿಂದ ಬಂದ ಮರುದಿನವೇ ಕೆಲಸಕ್ಕೆ ಜಾಯಿನ್ ಆದೆ. ಆಫೀಸಿನ ತುಂಬಾ ಹೆಂಗಸರದೇ ಸಾಮ್ರಾಜ್ಯ! ಹೊಸ ಕೆಲಸ ಹೇಗೆ ಮಾಡಬೇಕಪ್ಪಾ, ಹೇಗೆ ಹೊಂದಿಕೊಳ್ಳುವುದಪ್ಪಾ ...ಎಂದೆಲ್ಲಾ ಹೆದರಿಹೋಗಿದ್ದ ನನಗೆ ಎಲ್ಲರೂ ನಗುನಗುತ್ತಲೇ ಸ್ವಾಗತಿಸಿದ್ದು ಧೈರ್ಯ ಮೂಡಿಸಿತ್ತು. ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದಕ್ಕೂ ಇಲ್ಲಿಗೂ ಅದೆಷ್ಟು ವ್ಯತ್ಯಾಸ! ನಮಗಿಂತ ಮೊದಲೇ ಮ್ಯಾನೇಜರು ಬಂದು ಕೂತಿದ್ದಾನೆಂದರೆ, ಯಾರಿಗೋ ಏನೋ ಕಾದಿದೆಯೆಂದೇ ತಿಳಿದುಕೊಳ್ಳುತ್ತಿದ್ದೆವು. ಇಲ್ಲಿ ಸರ್, ಮ್ಯಾಡ್ಂಗಳ ಗೊಂದಲವಿಲ್ಲ. ಯಾರಿಗೂ, ಅವರು ಜನರಲ್ ಮ್ಯಾನೇಜರೇ ಆಗಿರಲಿ, ಎಲ್ಲರೂ ಹೆಸರಿಡಿದೇ ಮಾತನಾಡಬೇಕು. ಮನೆ, ಗಂಡ-ಮಕ್ಕಳ ಕೆಲಸಕ್ಕೆ ಮೊದಲ ಆದ್ಯತೆ! ಗಂಡನಿಗೆ/ಹೆಂಡತಿಗೆ, ಅಥವಾ ಮಕ್ಕಳಿಗೆ ಆರೋಗ್ಯ ತಪ್ಪಿದರೆ, ಹೆಂಡತಿಗೆ/ಗಂಡನಿಗೆ ರಜೆ ಸಿಕ್ಕುತ್ತದೆ. ವೀಕೆಂಡಿನಲ್ಲಿ ಏನು ಮಾಡಿದೆ ಎಂದು ಕೇಳಿದರೆ, ಶನಿವಾರವೆಲ್ಲಾ ಬಟ್ಟೆ ಒಗೆದದ್ದು, ಮನೆ ಕ್ಲೀನಿಂಗ್ ಮಾಡಿದ್ದು, ಅದರಲ್ಲೂ ಅಡಿಗೆ ಮನೆ ಕ್ಲೀನ್ ಮಾಡಿದ್ದೆಲ್ಲಾ ಹೇಳುತ್ತಿದ್ದೆ. " ನೀವೇನು ಮಾಡಿದಿರಿ " ಎಂಬ ನನ್ನ ಪ್ರಶ್ನೆಗೆ ಹೆಚ್ಚಿನವರೆಲ್ಲಾ, ಬೋಟಿಂಗ್ ಹೋಗಿದ್ದು, ಮೀನು ಹಿಡಿದದ್ದು, ಮೀನು ತಿಂದಿದ್ದು, ಬೆಟ್ಟ ಹತ್ತಿದ್ದು, ಬುಶ್ ವಾಕ್ ಮಾಡಿದ್ದು...ಇವೇ ಹೇಳುತ್ತಿದ್ದನ್ನು ಕೇಳಿ ಇವರು, ಪರವಾಗಿಲ್ಲವೇ? ಇಲ್ಲೂ ಕೆಲಸ ಮಾಡಿ, ಹೊರಗೂ ಸುತ್ತಾಡಿ, ಮನೆ ಕೆಲಸವನ್ನೂ ಅದು ಹೇಗೆ ಮಾಡುತ್ತಾರಪ್ಪಾ ಎನಿಸುತ್ತಿತ್ತು. ಮೊದಲೆಲ್ಲಾ ಯಜಮಾನರಿಗೆ ವೀಕೆಂಡ್ ಬರುವುದೇ ತಡ, ಅಲ್ಲಿಗೆ ಹೋಗೋಣ, ಇಲ್ಲಿಗೆ ಹೋಗೋಣವೆಂದೆಲ್ಲಾ ಪ್ಲಾನ್ ಹಾಕಿಕೊಂಡು ಕಾಯುತ್ತಿದ್ದ ನನಗೆ, ಈಗ ಸಿಗುವ ವೀಕೆಂಡಿನಲ್ಲಿ ಎಲ್ಲಿಗೂ ಹೋಗುವುದು ಬೇಡ, ಮನೆಯಲ್ಲಿರುವುದೇ ಆರಾಮ!


ಆದರೆ ಅವರ ಜೀವನ ಕ್ರಮವೇ ಬೇರೆ, ಅವರಂತೆ ನಮಗಿರಲು, ಅದರಲ್ಲೂ ನನಗಂತೂ ಸಾಧ್ಯವಿಲ್ಲ! ಮಧ್ಯಾಹ್ನ ಲಂಚ್ ರೂಮಿನಲ್ಲಿ ಎಲ್ಲರದೂ ಡಬ್ಬದ ಆಹಾರಗಳು, ಮೀನು, ಮೊಟ್ಟೆ-ಮಾಂಸಗಳ ಊಟ ಮೈಕ್ರೋವೇವ್ ನಲ್ಲಿಟ್ಟು ಬಿಸಿಮಾಡಿಕೊಂಡು ತಿನ್ನುವಂತವುಗಳು. ನಮಗಂತೂ ರುಚಿಕಟ್ಟಾಗಿ ಚಪಾತಿ ದಿನಕ್ಕೊಂದು ಪಲ್ಯ, ಸಾರುಗಳು ಬೇಕು. ಇವರುಗಳ ಕ್ಯಾನ್ ಫುಡ್ ನನಗೆ ಸರಿ ಹೋಗುವುದೇ ಇಲ್ಲ! ನಮ್ಮಂತೆ ಮೈ ಕೈ ಮಸಿಮಾಡಿಕೊಂಡು ಅಡಿಗೆ ಮಾಡುತ್ತಾರೆಯೇ? ಅದೂ ದಿನ ಬೆಳಗಾಗೆದ್ದು?!

ಆದರೆ, ಇಷ್ಟು ದಿನ ಆರಾಮಾಗಿ ಊಟ-ತಿಂಡಿ, ನಿದ್ದೆಗಳೆಲ್ಲವನ್ನು ಸಾಂಗವಾಗಿ ನೆರವೇರಿಸಿಕೊಳ್ಳುತ್ತಿದ್ದ ನನಗೆ, ಈಗ ಬೆಳಿಗ್ಗೆ ಐದಕ್ಕೆ ಎದ್ದು, ತಿಂಡಿ, ಊಟದ ಡಬ್ಬಿ ಕಟ್ಟಿಕೊಂಡು ಏಳಕ್ಕೆ ಮನೆ ಬಿಟ್ಟು, ಸಂಜೆ ಮನೆಗೆ ಬರುತ್ತಿದ್ದಂತೆ ಮತ್ತೆ ರಾತ್ರಿಗೆ ಅಡಿಗೆಯ ತಯಾರಿ, " ಯಪ್ಪಾ...ಸಾಕು ಸಾಕು ಎನಿಸುತ್ತದೆ. ಊರಿಗೆ ಫೋನ್ ಮಾಡಿದಾಗ, ಅಕ್ಕಂದಿರು ಮನೆ ಕೆಲಸದ ಲಿಸ್ಟ್ ಹೇಳಿದರೆ, " ಅದೇನು ಯಾವಾಗ ನೋಡಿದರೂ, ಕೆಲ್ಸ..ಕೆಲ್ಸ ಎನ್ನುತ್ತೀರಲ್ಲೇ? ಇರೋ ನಾಲ್ಕು ಜನಕ್ಕೆ ಅದೆಷ್ಟು ಕೆಲಸವಿರುತ್ತದೆ ಎಂದು ಆಡಿಕೊಂಡಿದ್ದು ನೆನಪಿಗೆ ಬರುತ್ತದೆ. ಈಗ ನನ್ನದೂ ಅದೇ ಪಾಡಾಗಿದೆ. ಹೊಸದರಲ್ಲಿ ಅಗಸ ಗೋಣಿ ಎತ್ತಿ ಒಗೆದಂತೆ, ಮೊದಲ ಕೆಲಸವೆಂದು ಎಲ್ಲದಕ್ಕೂ ತಲೆಯಾಡಿಸಿ ಕೆಲಸ ಮಾಡಿದ್ದಕ್ಕೆ, ಮೆಲ್ಲಗೆ ಕೆಲಸವೂ ಜಾಸ್ತಿಯಾಗುತ್ತಿದೆ. ಶನಿವಾರ ಬರಲು ಇನ್ನೆಷ್ಟು ದಿನ ಎಂದು ದಿನ ಬೆಳಿಗ್ಗೆ ಏಳುವಾಗಲೇ ಲೆಕ್ಕ ಹಾಕಿಕೊಂಡು ಏಳುತ್ತೇನೆ. ಯಾರಿಗೂ ನನ್ನ ಕಷ್ಟ ಮರುಕ ತರಿಸುತ್ತಿಲ್ಲ, " ಸ್ವಲ್ಪ ಅಡ್ಜಸ್ಟ್ ಆಗುವವರೆಗೂ ಅಷ್ಟೇ" ಎಂದು ಎಲ್ಲರೂ ಬುದ್ಧಿ ಹೇಳುವವರೇ. ಅದೆಷ್ಟು ದಿನ ನನ್ನ ಅದೃಷ್ಟವನ್ನು ಕಂಡು ಕರುಬಿದ್ದರೋ, ಈಗ ನನ್ನ ಪರಿಸ್ಥಿತಿಯನ್ನು ಕಂಡು ನಗುತ್ತಿದ್ದಾರೆ ಎನಿಸುತ್ತದೆ. ಯಜಮಾನರು ಕೆಲಸಕ್ಕೆ ಹೋದನಂತರ ಮಾಡುತ್ತಿದ್ದ ಮರಿನಿದ್ದೆಗಳಿಗೆಲ್ಲಾ ಪುಲ್ ಸ್ಟಾಪ್:( ನನ್ನ ಹರಿಕಥೆ, ಭಜನೆಗಳನ್ನೆಲ್ಲಾ ಬ್ಲಾಗಿನಲ್ಲಿ ಬರೆದುಕೊಂಡು, ಎಲ್ಲರ ಬ್ಲಾಗು ಓದುತ್ತಾ, ನನ್ನದೂ ಒಂದೆರಡು ಕೊಸರುಗಳನ್ನು ಅವರಿವರ ಬ್ಲಾಗಿನಲ್ಲಿ ಕಮಂಟಿಸುತ್ತಾ ಅದೆಷ್ಟು ಹಾಯಾಗಿದ್ದೆ. ಈಗ ನೆನಸಿಕೊಂಡರೆ ಹೊಟ್ಟೆ ಉರಿದುಹೋಗುತ್ತದೆ. ಸಿಗುವ ವಾರಾಂತ್ಯಗಳಿಗೆ ಚಾತಕ ಪಕ್ಷಿಯಂತೆ ಕಾಯಬೇಕು. ಯಜಮಾನರಿಗೂ ಕಷ್ಟ! ಮೂರು ಹೊತ್ತೂ ಬಿಸಿ ಬಿಸಿಯಾಗಿ ಊಟ ಸಿಗುತ್ತಿತ್ತು. ಮನೆಕೆಲಸಕ್ಕೆ ಅವರನ್ನು ಅಷ್ಟಾಗಿ ಕರೆಯುತ್ತಿರಲಿಲ್ಲ. ಈಗ ಅವರೂ ಮನೆಕೆಲಸಕ್ಕೆ ಕೈ ಜೋಡಿಸಬೇಕು!


ದಿನಕಳೆದಂತೆಲ್ಲಾ ಅಫೀಸಿನ ಕೆಲಸಕ್ಕೂ ಮನೆಕೆಲಸಕ್ಕೂ ಸಮಯ ಹೊಂದಿಸಿಕೊಳ್ಳುವುದನ್ನು ಕಲಿಯುತ್ತಿದ್ದೇನೆ. ಕೆಲಸಕ್ಕೆ ಸೇರಿದಂದಿನದಿಂದ ಊರಿಗೂ ಸರಿಯಾಗಿ ಫೋನ್ ಮಾಡಲಾಗುತ್ತಿಲ್ಲ, ಬ್ಲಾಗನಂತೂ ಕೇಳುವುದೇ ಬೇಡ! ಈಗ ಎಲ್ಲವನ್ನೂ ನಿಭಾಯಿಸಬಲ್ಲನೆಂಬ ಧೈರ್ಯ ಬಂದಿದ್ದರಿಂದ, ಬ್ಲಾಗಿನ ಕಡೆ ಬಂದಿದ್ದೇನೆ. ಅದ್ಸರಿ ಬರೀ ನನ್ನ ಪುರಾಣವೇ ಆಯಿತಲ್ಲ, ನೀವೆಲ್ಲ ಹೇಗಿದ್ದೀರಾ?!