ವಿಮಾನ ನಿಲ್ದಾಣದಲ್ಲಿ ಕಣ್ ಮನ ತಣಿಸುವ, ನಮ್ಮವರ ಪರ್ಸು ಹಗುರ ಮಾಡುವ ಅನೇಕ ಶಾಪಿಂಗ್ ಸೆಂಟರುಗಳಿರುವುದರಿಂದ, ನಾನೂ ಸ್ನೇಹಿತರು ಇಬ್ಬರೂ ಕೂಡಿ ಮಾಸ್ಟರ್ ಪ್ಲಾನ್ ಹಾಕಿದ್ದೆವು. ತಂಗಿಯ ಚೆಕ್-ಇನ್, ಮಣ್ಣು ಮಸಿಗಳೆಲ್ಲ ಮುಗಿದು ನಮಗೆ ಕೈ ಬೀಸಿ ಹೋದ ತಕ್ಷಣ, " ನಡಿ, ನಡಿ...ಬೇಗ ಲುಕ್ ಔಟ್ ಪಾಯಿಂಟ್ ಗೆ ಹೋಗೋಣ....ಥಾಯ್ ವಿಮಾನಕ್ಕೆ ಅಲ್ಲಿಂದ ಟಾಟಾ ಮಾಡೋಣ..." ಎಂದು ನಮ್ಮ ಪ್ಲಾನಿನ ಸುಳಿವು ಹತ್ತಿದವರಂತೆ ಇಬ್ಬರ ಗಂಡಂದಿರೂ ನಮ್ಮನ್ನು ಹೊರಡಿಸಿಯೇ ಬಿಟ್ಟರು. ಮನೆ ಬಿಟ್ಟಾಗಿನಿಂದ ಏರ್ ಪೋರ್ಟ್ ಲ್ಲಿ ಶಾಪಿಂಗ್ ಮಾಡಬೇಕೆಂದು ಕೊಂಡಿದ್ದ ನಮ್ಮ ಪ್ಲಾನ್ ಎಲ್ಲವೂ ಫ್ಲಾಪ್ ಆಯಿತು. ನಾನು ಮುಖ ಊದಿಸಿಕೊಂಡೇ ಹೊರಟೆ.
ತಂಗಿಯ ವಿಮಾನ ಹೊರಡುವವರೆಗೂ ಇಲ್ಲೇ ಕೂತರಾಯಿತು ಎಂದು ಅವರ ಅಕ್ಕ ಕಡೆಯ ಪ್ರಯತ್ನ ಮಾಡೇ ಬಿಡೋಣವೆಂದು ಹೇಳಿದರು. ನಾನೂ " ಹೂಂ" ಎಂದು ಕೂರಲು ಜಾಗ ಹುಡುಕ ತೊಡಗಿದೆ. ಕೂಡಲೇ ಇಬ್ಬರೂ ಗಂಡಸರು..." ಬೇಡ ಬೇಡ ಲುಕ್ ಔಟ್ ಪಾಯಿಂಟ್ ಗೇ ಹೋಗೋಣ...ಅಲ್ಲಾದರೇ ಪ್ಲೇನು ಇನ್ನೂ ಚೆನ್ನಾಗಿ ಕಾಣುತ್ತದೆ..." ಎಂದು ನಮಗೆ ಸಿಗಬಹುದಾಗಿದ್ದ ಕಡೇ ಅವಕಾಶವನ್ನೂ ಬಿಡಲಿಲ್ಲ. ಮತ್ತೇನು ಮಾಡುವುದೆಂದು ಇಬ್ಬರೂ ಹೊರಟೆವು. ಲುಕ್ ಔಟ್ ಪಾಯಿಂಟಿಗೆ ಅಲ್ಲಿಂದ ಎರಡು ಕಿಲೋಮೀಟರುಗಳಷ್ಟೇ.
ಲುಕ್ ಔಟ್ ಪಾಯಿಂಟಿನಲ್ಲಿ ಏರೋ ಪ್ಲೇನುಗಳು ಹಾರುವ, ಹಾಗೂ ಇಳಿಯುವ ದೃಶ್ಯ ತುಂಬಾ ಚೆನ್ನಾಗಿ ಕಾಣುತ್ತದೆ. ಅಲ್ಲಿ ನಿಂತರೆ, ವಿಮಾನಗಳು ಇಳಿಯುವ, ಹಾರುವ ಸುಂದರ ದೃಶ್ಯ ಹತ್ತಿರದಿಂದ ನೋಡಬಹುದು. ಬಗೆಬಗೆಯ ಬಣ್ಣ ಬಣ್ಣದ, ಒಂದೊಂದು ದೇಶದ ವಿಮಾನ ಒಂದೊಂದು ಕಲರ್!
ನಾವು ಬಂದು ಕೂರುತ್ತಿದ್ದಂತೆ ಗಗನಕ್ಕೆ ಚಿಮ್ಮಿದ " ಏರ್ ನ್ಯೂಝಿಲೆಂಡ್" ಪುಟಾಣಿ ವಿಮಾನ...ಇಲ್ಲೇ ಹತ್ತಿರದ ಊರಿಗೆ ಹೊರಟಿರುವುದು.
ಏರ್ ನ್ಯೂಝಿಲೆಂಡ್ ಹಾರಿದಂತೆ, ಅದಕ್ಕಾಗಿಯೇ ಕಾಯುತ್ತಿದ್ದು ಧರೆಗಿಳಿದ ದೊಡ್ಡ ವಿಮಾನ "ಏರ್ ಪೆಸಿಫಿಕ್ ".
ಏರ್ ಪೆಸಿಫಿಕ್ ಇಳಿಯುವುದನ್ನೇ ಕಾಯುತ್ತಿದ್ದು, ಗಗನಕ್ಕೆ ಹಾರಿತು ಮತ್ತೊಂದು ಪುಟಾಣಿ ಏರ್ ನ್ಯೂಝಿಲೆಂಡ್. ಒಂದು ಇಳಿದರೆ ನಾಲಕ್ಕು ಇಂತಹ ಪುಟಾಣಿಗಳು ಹಾರುತ್ತಿದ್ದವು.
ಏರ್ ನ್ಯೂಝಿಲೆಂಡಿನ ವಿಮಾನ ನೆಲಕ್ಕಿಳಿದು ನಿಲ್ಲಲು ಜಾಗ ಹುಡುಕುತ್ತಿದ್ದಂತೆ, ಹೊರಡಲು ರೆಡಿಯಾದ ಕಾಂಟಾಸ್, ಹಿನ್ನೆಲೆಯಲ್ಲಿ ಲೈಟ್ ಹಾಕಿಕೊಂಡು ಇಳಿಯುತ್ತಿರುವ ಎಮಿರೇಟ್ಸ್!
ಒಂದರ ಹಿಂದೆ ಒಂದರಂತೆ ಆಕಾಶಕ್ಕೆ ಹಾರಿದ ಕ್ಯಾಥೇ ಪೆಸಿಫಿಕ್, ಮಲೇಶಿಯನ್ ಏರ್ ಲೈನ್ಸ್, ಕಾಂಟಾಸ್!
ಎಲ್ಲರಿಗೂ ಕೂತಲ್ಲೇ ಟಾಟಾ ಮಾಡಿ ಮುಗಿಸಿದರೂ ಥಾಯ್ ನ ಸುಳಿವೇ ಇಲ್ಲ...ಒಂದು ಗಂಟೆಗೆ ಹೊರಡುತ್ತದೆಂದು ಹೇಳಿದ್ದರಲ್ಲ, ಎಂದು ಅಂದುಕೊಳ್ಳುತ್ತಿರುವಾಗಲೇ ಹೊರಬಂದ ಥಾಯ್ ಏರ್ ವೇಸ್.
ಎಲ್ಲ ವಿಮಾನಗಳು ಹೊರಟ ನಂತರ ಕಡೆಗೆ ಹೊರಟ ಥಾಯ್ ಏರ್ ವೇಸ್.
ವಿಮಾನ ಕಣ್ಮರೆಯಾಗುವವರೆಗೂ ನೋಡಿ ಹೊರಡಲು ಅಣಿಯಾದೆವು. ನಮ್ಮ ಕೋಪಗಳನ್ನು ಶಮನಗೊಳಿಸಲೆಂದೋ ಏನೋ, ಊಟ ಮಾಡಲು ಶಾಪಿಂಗ್ ಮಾಲುಗಳಿಗೆ ಹೋಗೋಣವೆಂದರು. ಒಳಗೇ ಖುಷಿಯಾದರೂ ತೋರಗೊಡಬಾರದೆಂದು," ಎಂಥದ್ದೂ ಬೇಕಿಲ್ಲ, ನಡೆಯಿರಿ ವಾಪಸು ಮನೆಗೆ ಹೋಗಿ ಊಟ ಮಾಡಿದರಾಯಿತು..." ಎಂದು ಒಣ ಜಂಭ ತೋರಿದೆವು.
ಕಡೆಗೆ ಸೆಂಟ್ ಲೂಕ್ಸ್ ಶಾಪಿಂಗ್ ಮಾಲ್ ನ ಇಂಡಿಯನ್ ರೆಸ್ಟೋರೆಂಟಿನಲ್ಲಿ ಊಟ ಮಾಡಿ, ಒಂದೆರಡು ಬಣ್ಣಗೆಟ್ಟ ( ನಮ್ಮವರ ಭಾಷೆಯಲ್ಲಿ) ಇಯರ್ ರಿಂಗ್ ಗಳನ್ನು ತೆಗೆದುಕೊಂಡು, ಮನೆ ದಾರಿ ಹಿಡಿದೆವು. " ಇಲ್ಲಿಗಿಂತ, ಇಂಡಿಯಾದಲ್ಲೇ ಚೆನ್ನಾಗಿರುವುದು ಸಿಗುವುದಿಲ್ಲವೆ? ಇಲ್ಲಿ ಸಿಗುವ 9 ಕ್ಯಾರೆಟ್ ಚಿನ್ನಾಭರಣಗಳನ್ನು ನೋಡಿದರೆ, ನಮ್ಮ ಫ್ಯಾನ್ಸಿ ಸ್ಟೋರಿನ ಗೋಲ್ಡ್ ಕವರಿಂಗೇ ಎಷ್ಟೋ ಝಗಮಗ ಅನ್ನುತ್ತವೆ...ಅದೂ ಅಲ್ಲದೇ ಇಲ್ಲಿ ಸಿಗುವುದೆಲ್ಲವೂ ಮೇಡ್ ಇನ್ ಚೈನಾಗಳೇ...ಅದನ್ನೇನು ಶಾಪಿಂಗ್ ಮಾಡುವುದು..." ಎಂದು ಉದ್ದಕೂ ಭಾಷಣ ಬಿಗಿದುಕೊಂಡೇ ಬಂದರು. ನಮಗೇನು ಇವೇನು ಗೊತ್ತಿಲ್ಲದಿಲ್ಲ, ಅಂದರೂ ಹೋದಲ್ಲಿ ಬಂದಲ್ಲಿ ಶಾಪಿಂಗ್ ಮಾಡಿಲ್ಲವೆಂದರೆ ನಮ್ಮ ಜನ್ಮ ಸಾರ್ಥಕವಾಗುವುದಾದರೂ ಹೇಗೆ ;-).