ಹುಟ್ಟಿದಾಗಿನಿಂದ ತರಕಾರಿಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಅಮ್ಮ ಮಾಡಿ ಹಾಕುತ್ತಿದ್ದ ತರಕಾರಿಗಳಿಗೆಲ್ಲಾ ಒಂದೊಂದು ಹೆಸರಿಟ್ಟು " ನನಗಿದು ಬೇಡ, ಅದನ್ಯಾರದರೂ ಮನುಷ್ಯರು ತಿನ್ನುತ್ತಾರೆಯೇ.??" ಎಂದೆಲ್ಲಾ ಕಥೆ ಹೊಡೆಯುತ್ತಿದ್ದ ನನಗೆ New Zealand ಗೆ ಬಂದ ಮೇಲೆ ತರಕಾರಿಗಳ ಬೆಲೆ ಅರಿವಾಯಿತು.
ಮೊದಲಿದ್ದ Invercargill ನಲ್ಲಿ ಆಲೂಗೆಡ್ಡೆ, ಎಲೆಕೋಸು ಎರಡೇ ತರಕಾರಿಗಳು! ಇವತ್ತು ಆಲೂಗೆಡ್ಡೆ, ನಾಳೆ ಕ್ಯಾಬೇಜು...ಇವತ್ತು ಕ್ಯಾಬೇಜು...ನಾಳೆ ಆಲೂಗೆಡ್ಡೆ! ಹೀಗೆ ದಿನ ತಳ್ಳಬೇಕಾದ ಸ್ಥಿತಿ. ಯಾವಾಗಲೋ ಒಮ್ಮೆ ಪಾಲಾಕ್ ಸೊಪ್ಪಿನ ದರ್ಶನ. frozen ಸಿಗುತ್ತಿತ್ತಾದರೂ ತಾಜಾ ತರಕಾರಿ ತಿಂದು ಅಭ್ಯಾಸವಾಗಿದ್ದ ನನಗೆ ಅದೇಕೋ ಇಷ್ಟವಿಲ್ಲ. ಏನೂ ಸಿಗದಿದ್ದಾಗ ಅದೇ ಗತಿ! ಅದು ಬೇರೆ ವಿಷಯ.
Invercargil ನಿಂದ Auckland ಗೆ ಬಂದ ಮೇಲೆ, ಅಲ್ಲಿ ವಾರಕ್ಕೆ ಒಮ್ಮೆ veggie ಮಾರುಕಟ್ಟೆಯಲ್ಲಿ ನಮ್ಮ ತರಕಾರಿಗಳನ್ನು ಕಂಡು ಸ್ವರ್ಗಕ್ಕೆ ಮೂರೇ ಗೇಣು! ಕ್ಯಾಬೇಜು, ಆಲೂಗೆಡ್ಡೆಗಳನ್ನು ಮುಟ್ಟಲೇ ಬಾರದು ಎಂದು ನಿರ್ಧರಿಸಿಬಿಟ್ಟೆ. ಅಲ್ಲಿಯವರೆಗೂ ಊರಿನಲ್ಲಿ ಹೀರೇಕಾಯಿ, ಸೋರೆಕಾಯಿ, ಬದನೇಕಾಯಿ, ಮೂಲಂಗಿ ಎಂದರೆ ಒಂದೊಂದು ಹೆಸರಿಟ್ಟು ಅದನ್ನೆಲ್ಲಾ ಮನುಷ್ಯರು ತಿನ್ನಲು ಸಾದ್ಯವೇ ಇಲ್ಲಾ ಎಂದು ಅರಚುತ್ತಿದ್ದವಳು, ಇಲ್ಲಿ ಅವನ್ನೆಲ್ಲಾ ಕಂಡು, ಚಕಾರವೆತ್ತದೆ ಬ್ಯಾಗು ತುಂಬಿಸುಕೊಳ್ಳತೊಡಗಿದೆ. Auckland ನ ನೀರಿನ ಋಣ ಸ್ವಲ್ಪ ದಿನ ಮಾತ್ರವೇ. ನಂತರ Whangarei ಗೆ ಬಂದ ಮೇಲೆ, ಇಲ್ಲೂ veggie ಮಾರುಕಟ್ಟೆ ನಡೆಯುತ್ತಿತ್ತಾದ್ದಾರೂ ರೇಟು ಸೂಪರ್ ಮಾರ್ಕೆಟ್ಟಿನದೇ! ಅಕ್ಲೆಂಡಿನಷ್ಟು ತರಾವರಿ ತರಕಾರಿಗಳೂ ಇಲ್ಲ! ಕಡೆಗೆ ನಾನೇ ಯಾಕೆ ಮನೆ ಸುತ್ತ ಮುತ್ತ ಬೆಳೆದುಕೊಳ್ಳಬಾರದು? ಹೇಗೂ ಮನೆ ಸುತ್ತ ಜಾಗವಿದೆ, ಸ್ವಲ್ಪ ಜಾಗ ಹಸನು ಮಾಡಿದರೆ ಈ ಬೇಸಿಗೆಯಲ್ಲೇ ಏನೂ ಬೆಳೆಯದಿದ್ದರೂ ಒಂದಷ್ಟು ಕೊತ್ತಂಬರಿ, ಹಸಿಮೆಣಸಿನಕಾಯಿಯನ್ನಾದರೂ ಬೆಳೆಯಬಹುದಲ್ಲಾ..ಎಂದೆಲ್ಲಾ ಪ್ಲಾನ್ ಮಾಡಿ ಯಜಮಾನರ ಕೈಗೆ ಗುದ್ದಲಿ ಕೊಟ್ಟು ಶುರು ಮಾಡಿಸಿಯೇ ಬಿಟ್ಟೆ!.
ಬನ್ನಿ ನಮ್ಮ ಮನೆಯ ಕೈತೋಟವನ್ನು ನೋಡಿ. ಇಡೀ ವರ್ಷವೆಲ್ಲ ತರಕಾರಿ ಸಿಗದಿದ್ದರೂ ಯೋಚನೆಯಿಲ್ಲ, ಬೀನ್ಸ್, ಕ್ಯಾರೆಟ್, ಬೀಟ್ ರೂಟ್, ಪಾಲಾಕ್, ಹಸಿಮೆಣಸಿನಕಾಯಿ ಎಲ್ಲವನ್ನೂ ಬೆಳೆದುಕೊಂಡು ನಾನೇ freeze ಮಾಡಿ ಇಟ್ಟುಕೊಂಡಿದ್ದೇನೆ. ಯಾವ ಗೊಬ್ಬರವೂ ಇಲ್ಲ! " ಸ್ಪ್ರೇ ಫ್ರೀ" ಹುಳಗಳನ್ನು ಕಂಡಲ್ಲಿ ಹತ್ಯೆ ಮಾಡುತ್ತಿದ್ದರಿಂದ ಅವುಗಳ ಕಾಟ ಕಡಿಮೆಯೇ. ಅಕ್ಕಿ-ಬೇಳೆ ತೊಳೆದ ನೀರು, ತರಕಾರಿ-ಹಣ್ಣುಗಳ ಸಿಪ್ಪೆ, ಇವೇ ನನ್ನ ಗಿಡಕ್ಕೆ ಗೊಬ್ಬರ! ಊರಿನಿಂದ ಅಮ್ಮ ಬೆಳ್ಳುಳ್ಳಿ ಜಜ್ಜಿ ನೀರಿನಲ್ಲಿ ಕಲಸಿ ಗಿಡಕ್ಕೆ ಹಾಕಿದರೆ ಹುಳ ಬರುವುದಿಲ್ಲವೆಂದು ಹೇಳಿದ್ದರಿಂದ, ಎಲ್ಲಾ ಗಿಡಕ್ಕೂ
" ಬೆಳ್ಳುಳ್ಳಿ ಸ್ಪ್ರೇ ".
ಆದರೂ ಯಾಕೋ ಕರಿಬೇವಿನ ಗಿಡ ನನಗೆ ಒಲಿಯಲಿಲ್ಲ. ಮನೆಯೊಳಗೆ ಇಟ್ಟುಕೊಂಡು ಸಾಕಿ ಸಲಹಿದರೂ ಬದುಕಲಿಲ್ಲ. ಆದರೂ ಬಿಡುವುದಿಲ್ಲ, ಮುಂದಿನ ವರ್ಷದೊಳಗೆ ಹೇಗಾದರೂ ಬದುಕಿಸುವ ಛಲ ನನ್ನದು.
ಬನ್ನಿ ನಮ್ಮ ಕೈತೋಟದ ಪರಿಚಯ ಮಾಡಿಕೊಡುತ್ತೇನೆ.
ಸಿಲ್ವರ್ ಬೀಟ್ : ಕಬ್ಬಿಣಾಂಶ ಹೆಚ್ಚು ಇದೆಯಂತೆ. ಬೇಳೆ ಜೊತೆ, ಮತ್ತು ಇದರದೇ ಪಲ್ಯ ಚೆನ್ನಾಗಿರುತ್ತದೆ. ಸಿಲ್ವರ್ ಬೀಟ್ ಮತ್ತು ಆಲೂಗೆಡ್ಡೆ ನನ್ನ ಫೇವರಿಟ್ ಕಾಂಬಿನೇಷನ್ :)
ಮೆಂತ್ಯಸೊಪ್ಪು: ಮೆಂತ್ಯಸೊಪ್ಪಿನ ಬಗ್ಗೆ ಹೇಳುವುದೇ ಬೇಡ! ಮೆಂತ್ಯಸೊಪ್ಪಿನ ಹುಳಿ, ಅನ್ನಕ್ಕೆ ಮೆಂತ್ಯಸೊಪ್ಪಿನ ಒಗ್ಗರಣೆ, ಚಪಾತಿ ಹಿಟ್ಟಿಗೆ ಮೆಂತ್ಯ, ಹಸಿಮೆಣಸಿನಕಾಯಿ, ಶುಂಠಿ, ರುಬ್ಬಿ ಸೇರಿಸಿ ಚಪಾತಿ ಮಾಡಿದರೆ ಪಲ್ಯ ಇಲ್ಲದಿದ್ದರೂ ಮೊಸರಿನ ಜೊತೆ ಸಕತ್ ನಡೆಯುತ್ತದೆ!
ಕೊತ್ತಂಬರಿ ಸೊಪ್ಪು: ಕೊತ್ತಂಬರಿ ಬೀಜಗಳನ್ನು ಉದುರಿಸಿ 10 - 15 ದಿನಗಳ ನಂತರ ಕಣ್ಣುಬಿಡುತ್ತಿವೆ! ಪಲ್ಯ, ಹುಳಿ, ಸಾಂಬಾರಿಗೆ ಕೊತ್ತಂಬರಿ ಇಲ್ಲದಿದ್ದರೇ ನಡೆಯುವುದೇ??!
ಪುದೀನ: ಪುದೀನ ಚಟ್ನಿ, ಪಲಾವ್ ಗೆ ಪುದೀನದ ಒಂದೆರಡು ಎಲೆಗಳನ್ನು ಹಾಕಿದರೆ ಅದರ ಗಮವೇ ಬೇರೆ! ಪಲಾವ್, ಮಸಾಲೆವಡೆ, ಬೇಳೆ ಸಾರಿಗೆ ಎಲ್ಲದಕ್ಕೂ ಎರಡು ಪುದೀನ ಎಲೆ ಹಾಕುವುದು ನನ್ನ ಶೈಲಿ :)
ಪಾರ್ಸ್ಲೀ: ಇಲ್ಲಿ ಹೇರಳವಾಗಿ ಬೆಳೆಸುತ್ತಾರೆ. ಕೊತ್ತಂಬರಿಯ ಬದಲು ಹಾಕಿದರೂ ನಡೆಯುತ್ತದೆ. ಸಲಾಡ್ ನ ಜೊತೆ ಪಾರ್ಸ್ಲೀಯನ್ನು ಹಸಿ ತಿನ್ನಬಹುದು.
ಕೊತ್ತಂಬರಿ: ಕೊತ್ತಂಬರಿ ಬೀಜಗಳನ್ನು ಹಾಕಿ ಮೊಳಕೆ ಬರಿಸಿ ನೆಡುತ್ತಿದ್ದ ನನಗೆ, ಮಾರುಕಟ್ಟೆಯಲ್ಲಿ ಕೊತ್ತಂಬರಿಗಿಡ ಕಂಡು, ಕೊಂಡು ತಂದು ನೆಟ್ಟಿದ್ದೇನೆ.
ದಪ್ಪಮೆಣಸಿನಕಾಯಿ: ಇದು ದೊಡ್ದದಾದ ನಂತರ ಕೆಂಪು ಕಲರ್ ಬರುತ್ತದಂತೆ! ಗಿಡ ತಂದು ನೆಟ್ಟಿದ್ದು, ಇನ್ನೂ ದೊಡ್ಡದಾಗಬೇಕು. ಆಲೂ ಜೊತೆ ಪಲ್ಯ, ಇಲ್ಲವೇ ಬೋಂಡ ಮಾಡಿ ಹೊಡೆಯಬಹುದು!
ಹಸಿಮೆಣಸಿನಕಾಯಿ: ತಂದು ನೆಟ್ಟದ್ದು ಒಂದೇ ಪುಟಾಣಿ ಗಿಡ. ಈಗ ಗಿಡದ ತುಂಬಾ ಕಾಯಿಗಳು.
ಪಲಾವ್ ಎಲೆ: bayleaves ಗೆ ನಾವು ಪಲಾವ್ ಎಲೆ ಎನ್ನುತ್ತೇವೆ. ಇದಕ್ಕೆ ಸರಿಯಾದ ಹೆಸರು ನನಗೆ ಗೊತ್ತಿಲ್ಲ :) ಅಂಗಡಿಗಳಲ್ಲಿ ಒಣಗಿಸಿದ ಪಲಾವ್ ಎಲೆಗಳು ಸಿಗುತ್ತವೆ. ನಾನಿನ್ನೂ ಒಣಗಿಸಲು ಶುರು ಮಾಡಿಲ್ಲ! ಸದ್ಯಕ್ಕೆ ಹಸಿ ಎಲೆಗಳನ್ನೇ ಪಲಾವ್/ಭಾತ್ ಗೆ ಉಪಯೋಗಿಸುತ್ತಿದ್ದೇನೆ.
ಸೌತೆಕಾಯಿ: ಸೌತೆಕಾಯಿತರವೇ ಆದರೆ ಆಕಾರ ಚಿಕ್ಕದು. ಸರಿಯಾದ ಪದ ನನಗೆ ಗೊತ್ತಿಲ್ಲ. ಹೇಗಿರುತ್ತದೋ ಏನೋ ಎಂದು ಸಣ್ಣ ಗಿಡ ತಂದು ನೆಟ್ಟಿದ್ದು, ಇಡೀ ಬೇಲಿಯನ್ನು ಆವರಿಸಿ ಬೆಳೆದಿದೆ. ಇದರಿಂದ ಪಲ್ಯ, ಮಜ್ಜಿಗೆ ಹುಳಿ, ಬಟಾಣಿ ಮತ್ತು ಗರ್ಕಿನ್ ಭಾತ್ ಸಹ ಮಾಡಬಹುದೆಂದು ತಿಳಿಸಿಕೊಟ್ಟವರು ಶುಭಾ ಮತ್ತು ಸಂಗೀತ ಅವರು. ಕಾಯಿಗಳನ್ನು ಕಿತ್ತು ಎಲ್ಲರಿಗೂ ಹಂಚಿ, ಇನ್ನೇನು ಗಿಡವನ್ನೇ ಕೀಳೋಣವೆನ್ನುವಷ್ಟರಲ್ಲಿ ಮತ್ತೊಂದು ಕಾಯಿ!
ಟೊಮೋಟೋ ಮತ್ತು ಬೀನ್ಸ್: ಇಲ್ಲಿಯ ಗಾಳಿಗೆ ಎಲ್ಲವೂ ಟೊಂಕ ಮುರಿದುಕೊಂಡು ಬೀಳುತ್ತಿದ್ದರಿಂದ ಈ ಗಿಡಗಳಿಗೆ ಕಡ್ಡಿಯ ಆಧಾರವನ್ನು ಕೊಟ್ಟಿದ್ದಾರೆ ಯಜಮಾನರು.
ಬೀಟ್ ರೂಟ್ ಮತ್ತು ಕ್ಯಾರೆಟ್: ಎರಡನೆಯ ಬೆಳೆಗೆ ತಂದು ನೆಟ್ಟ ಗಿಡಗಳು. ಇನ್ನೂ ಚಿಕ್ಕವು. ಇನ್ನೊಂದು 15 ದಿನಕ್ಕೆ ಬೀಟ್ ರೂಟ್ ಮತ್ತು ಕ್ಯಾರೆಟ್ ರೆಡಿ.
Dwarf beans: ಗಿಡದ ಬುಡದಲ್ಲಿ ಬಿಡುತ್ತವೆ. ಬಳ್ಳಿಯಂತೆ ಹಬ್ಬುವುದಿಲ್ಲ. ಆದರೆ ಮುಂದಿನ ಸಲ ಈ ಬೀನ್ಸ್ ತರಬಾರದೆಂದು ತೀರ್ಮಾನಿಸಿದ್ದೇನೆ. ಗಿಡದ ಬುಡದಲ್ಲಿ ಬಿಡುವುದರಿಂದ ಮಣ್ಣಿನ ಜೊತೆ ಸೇರಿ ಬೇಗ ಹಾಳಾಗುತ್ತಿವೆ.

ಈ ಗಿಡದಲ್ಲಿ ಹಸಿಮೆಣಸಿನಕಾಯಿ ಅಲ್ಲೆ ಒಣಗಲು ಬಿಟ್ಟಿದ್ದೇನೆ. ಈಗ ನನಗೆ ಕೆಂಪು ಸಾರು ಮಾಡಲು ಕೆಂಪು ಮೆಣಸಿನಕಾಯಿ!

ಎಳೆ ಹಸಿಮೆಣಸಿನಕಾಯಿಗಳು. ಇನ್ನೂ ಬಲಿತಿಲ್ಲ. ಗಿಡ ಇನ್ನೂ ಬೆಳೆಯುತ್ತಿದೆ.
ಬದನೇಕಾಯಿ: ಇದಕ್ಕೆ ಯಜಮಾನರ ಆರೈಕೆ ಬಹಳ. ಅವರ ಫೇವರಿಟ್ ತರಕಾರಿ. ಇನ್ನೂ ಹೂವು ಬಿಟ್ಟಿಲ್ಲ, ಗಿಡ ಮಾತ್ರ ಎಲೆಗಳನ್ನು ಅರಳಿಸಿಕೊಂಡು ನಗುತ್ತಿದೆ.
ದಪ್ಪಮೆಣಸಿನಕಾಯಿ: ಇದಕ್ಕೆ ನಮ್ಮವರಿಟ್ಟ ಹೆಸರು "ನೂಕ್ಲಿಯರ್ ಬಾಂಬ್". ಹೇಳಲಾರದಷ್ಟು ಖಾರ! ಒಮ್ಮೆ ತಿಳಿಯದೇ ಒಂದೀಡೀ ಈ ಮೆಣಸಿನಕಾಯಿಯನ್ನು ನೂಡಲ್ಸ್ ಗೆ ಹಾಕಿ ಕುಣಿದಾಡಿದ್ದನ್ನು ಇನ್ನೂ ಮರೆತಿಲ್ಲ!
ಟೊಮೋಟೋ: ಹೂವು ಕಾಯಾಗುತ್ತಿರುವ ಟೋಮೋಟೋ. ಟೋಮೋಟೋ ಕಾಯಿ ಚಟ್ನಿ ನಮ್ಮವರ ಫೇವರಿಟ್!
ಬೀನ್ಸ್: ಬಳ್ಳಿಯಂತೆ ಹಬ್ಬುವ ಬೀನ್ಸ್. ಗಿಡದ ತುಂಬಾ ಬೀನ್ಸ್ ಗಳೇ ಬೀನ್ಸ್ ಗಳು:)
ಇನ್ನೂ, ಹೂಕೋಸು, ಎಲೆಕೋಸು, ಆಲೂಗೆಡ್ಡೆ, ಲೆಟ್ಯೂಸ್ ಗಳು ಬಾಲ್ಯಾವಸ್ಥೆಯಲ್ಲಿರುವುದರಿಂದ ಅವುಗಳ ಪರಿಚಯ ಮತ್ತೊಮ್ಮೆ.