Friday, 28 November 2008

ನಾನು ತೂಕ ಇಳಿಸಿದ ಸಪ್ತಾಹ!

ಮೊನ್ನೆ ಹಬ್ಬಕ್ಕೆ, ನಮ್ಮಮ್ಮ ಊರಿನಿಂದ ಕಳಿಸಿದ್ದ ಡ್ರೆಸ್ಸು ಯಾಕೋ ಟೈಟಾಗಿದೆ ಎನ್ನಿಸಿತ್ತು. ಟೈಲರಿಗೆ ಇಲ್ಲಿದ್ದ ನಿನ್ನ ಹಳೇ ಡ್ರೆಸ್ಸಿನ ಅಳತೆಯನ್ನೇ ಕೊಟ್ಟು ಹೊಲಿಸಿದ್ದೇನೆಂದು ಹೇಳಿದ್ದರು. ಅಂದರೂ ಇಷ್ಟು ಬಿಗಿಯೇಕಾಯಿತು? ನನ್ನ ಪ್ರಕಾರ ನಾನೇನೂ ಭಾರೀ ತೂಕದವಳಲ್ಲ! ಊರಿನಿಂದ ಇಲ್ಲಿಗೆ ತಂದಿದ್ದ, ಕೇವಲ ಒಂದೇ ವರ್ಷದ ಹಿಂದಿನ ಬಟ್ಟೆಗಳೂ " ನಾ ತಾಳಲಾರೆ" ಎಂಬಂತೆ ಬಿಗಿಯಾಗುತ್ತಿದೂ, ನೆನಪಿಗೆ ಬಂದು, ’ ಓಹೋ ನಾನು ದಪ್ಪವಾಗುತ್ತಿದ್ದೇನೆ! ಹೇಗಾದರೂ ಮೈ ಭಾರ ಕಡಿಮೆ ಮಾಡಲೇ ಬೇಕು 'ಇಲ್ಲದಿದ್ದರೆ ನನಗೂ ಡ್ರಮ್,ಮಿನಿ ಡ್ರಮ್ ಎಂದು ಹೆಸರಿಡುತ್ತಾರೆಷ್ಟೇ ’ ಎನಿಸಿತು. ದಪ್ಪವಾಗಿದ್ದೇನೆ ಎಂದು ಮೊದಲಿಗೆ ಗೊತ್ತಿದ್ದರೂ ಅಷ್ಟೇನೂ ತಲೆಕೆಡಿಸಿಕೊಂಡಿರಲಿಲ್ಲ. ಮನಸ್ಸಿಗೆ ದಪ್ಪ ಅನ್ನಿಸಿದ ದಿನ ಒಂದೊತ್ತು ಊಟ ಬಿಟ್ಟು ಶೋಕ ಆಚರಿಸಿಕೊಂಡು ಮುಂದಿನ ಹೊತ್ತಿಗೆ ಸರಿಯಾಗಿ ಬಾರಿಸುತ್ತಿದ್ದರಿಂದ ನನ್ನ ಸೋರಿ ಹೋದ ತೂಕ ಅಷ್ಟೇ ವೇಗದಲ್ಲಿ ತುಂಬಿಕೊಳ್ಳುತ್ತಿತ್ತು.

ನನ್ನ ದುಃಖವನ್ನು ಸ್ನೇಹಿತರ ಬಳಿ ತೋಡಿಕೊಂಡರೆ ಅವರೋ " ನೀವು ಅನ್ನ ತಿನ್ನುವುದು ಕಡಿಮೆ ಮಾಡಿ.." ಎಂದು ನನ್ನ ಅತೀ ಪ್ರಿಯವಾದ ಅನ್ನದ ಮೇಲೆ ಕಲ್ಲು ಹಾಕುವ ಸಲಹೆ ಕೊಟ್ಟಿದ್ದು ನನಗೇನೋ ಇಷ್ಟವಾಗಲಿಲ್ಲ. ದಿನಕ್ಕೊಂದು ಪಲಾವ್, ಭಾತ್ , ಚಿತ್ರಾನ್ನ, ಪುಳಿಯೋಗರೆ ಮಾಡಿಕೊಂಡು ತಿನ್ನುತ್ತಿದ್ದ ನನಗೆ, ಅನ್ನ ತಿನ್ನಬೇಡಿ ಎಂದರೆ ಮತ್ತೇನು ತಿನ್ನುವುದು? ನಮ್ಮ ಮನೆಯಲ್ಲಂತೂ ನನ್ನನ್ನು " ರೈಸ್ ಮೆಷೀನ್ " ಎಂದೇ ಕರೆಯುತ್ತಿದುದು:) ರಾತ್ರಿ ಊಟಕ್ಕೆ ಮುದ್ದೆ ಅಥವಾ ಚಪಾತಿ ಮಾಡಿದರೂ ನನಗೆ ಒಂದು ಬಟ್ಟಲು ಅನ್ನವಂತೂ ಬೇಕೇ ಬೇಕು. ಅಂತಹುದರಲ್ಲಿ " ಅನ್ನವನ್ನು ಬಿಟ್ಟು ಬಿಡಿ" ಎಂದರೆ ಅವರಿಗಿನ್ನೆಂತ ಶಾಪ ಹಾಕಲಿ?


ಮೈಸೂರಿನಲ್ಲಿದ್ದಾಗ ಬೆಳಗಿನ ತಿಂಡಿಗೆ, ಚಿತ್ರಾನ್ನ, ಟೊಮೋಟೋ ಭಾತ್ , ವೆಜಿಟೇಬಲ್ ಭಾತ್ , ಹುಳಿಯನ್ನ...ಹೀಗೆ ಬರೀ ಅನ್ನಗಳದ್ದೇ ಸಾಲು ಸಾಲು. ಬೆಳಿಗ್ಗೆ ತಿಂಡಿಗೂ ಅನ್ನ, ಮಧ್ಯಾಹ್ನ ಅನ್ನ-ಸಾರು, ರಾತ್ರಿಗೆ ಮುದ್ದೆ/ಚಪಾತಿ- ಪಲ್ಯ, ಅನ್ನ-ಸಾರು ಹೀಗೆಯೇ ಆರಾಮವಾಗಿ ಅಮ್ಮ ಮಾಡಿಹಾಕುತ್ತಿದ್ದನ್ನು ತಿಂದುಕೊಂಡಿದ್ದೆ. ಆದರೂ ಇಂತಾ ಪರಿ ದಪ್ಪಗಾಗಿರಲಿಲ್ಲ. ಸಣ್ಣಗೆ ಒಣಕಲ ಕಡ್ಡಿಯಂತಿದ್ದೆ. " ಸೀರೆ ಉಟ್ಟುಕೊಂಡರೆ, ಮಡಿಕೋಲಿಗೆ ಸುತ್ತಿದಂತಿರುತ್ತದೆ, ಸ್ವಲ್ಪ ದಪ್ಪವಾಗೆ" ಎಂದು ಅಕ್ಕಂದಿರು ನನಗೆ ಸೀರೆ ಉಡಿಸುವುದನ್ನು ಕಲಿಸುವಾಗಲೂ ಬೈಯುತ್ತಿದ್ದರು. ಸಣ್ಣಗಿದ್ದರೇನು, ದಪ್ಪವಿದ್ದರೇನು ಒಟ್ಟಿನಲ್ಲಿ ಆರೋಗ್ಯದಿಂದರಷ್ಟೇ ಸಾಕು ಎಂಬ ಪಾಲಿಸಿ ನಂದಾಗಿದ್ದರಿಂದ, ಬಹುಷಃ ನಾನು ಇನ್ನು ಜನ್ಮದಲ್ಲಿ ದಪ್ಪವಾಗುವುದಿಲ್ಲವೇನೋ ಅನ್ನಿಸಿತ್ತು.

ಮದುವೆಯಾದ ಮೇಲೆಯೇ ನನಗೆ ನಿಜಕ್ಕೂ ಸಂಕಟಕಾಲ ಶುರುವಾಗಿದ್ದು. ಮದುವೆಯಾಗಿದ್ದು ಗುಲ್ಬರ್ಗದ ಗಂಡಿಗೆ! ಅಲ್ಲಿ ಬೆಳಗಿನ ತಿಂಡಿಗೆ ಅನ್ನದ ಸುದ್ದಿಯೇ ಇಲ್ಲ! ಬೆಳಿಗ್ಗೆ ಅವಲಕ್ಕಿ ಇಲ್ಲವೇ ಉಪ್ಪಿಟ್ಟು, ಮಧ್ಯಾಹ್ನಕ್ಕೆ ಜೋಳದ ರೊಟ್ಟಿ ಇಲ್ಲವೇ ಚಪಾತಿ- ಬದನೇಕಾಯಿ, ಅಥವಾ ಪುಂಡೀ ಪಲ್ಯ, ರಾತ್ರಿಗೂ ಡಿಟ್ಟೋ! ನಮ್ಮಲ್ಲಿ ಬೆಳಗಿನ ತಿಂಡಿಗೆ ಚಪಾತಿ ತಿಂದಷ್ಟೇ ಅಭ್ಯಾಸ. ಇಲ್ಲಿ ಅವಲಕ್ಕಿ ಬಿಟ್ಟರೆ ಉಪ್ಪಿಟ್ಟು ಅದೂ ಬಿಟ್ಟರೆ, ಸೂಸಲ! ಅವಲಕ್ಕಿ, ಉಪ್ಪಿಟ್ಟಿಗೆ ತರಾವರೀ ಹೆಸರುಗಳನ್ನಿಟ್ಟು ಅವುಗಳನ್ನು ವಾರಕ್ಕೊಮ್ಮೆಯಷ್ಟೇ ಮಾಡಬೇಕು ಎಂದು ಅಮ್ಮನಿಗೆ ಜೋರು ಮಾಡುತ್ತಿದ್ದುದೆಲ್ಲಾ ನೆನಪಿಸಿಕೊಂಡು " ದೇವರೇ ಇದೆಲ್ಲಿಗೆ ನನ್ನನ್ನು ತಂದು ಬಿಟ್ಟೆ" ಎಂದು ಹಲುಬುತ್ತಿದ್ದೆ. ಊಟಕ್ಕೆ ಕೂತಾಗ, ಎಲ್ಲರೂ ರೊಟ್ಟಿ, ಚಪಾತಿಗಳನ್ನು ತಿಂದು ಕಡೆಗೆ ಅನ್ನ ಬರುತ್ತಿದ್ದರೂ ಎಲ್ಲರೂ ತಿನ್ನುವ ಅನ್ನದ ಪ್ರಮಾಣ ಕಡಿಮೆಯಿರುತ್ತಿದ್ದರಿಂದ , ಅನಿವಾರ್ಯವಾಗಿ ನಾನೂ ತಟ್ಟೆ ಬಿಟ್ಟು ಏಳಲೇ ಬೇಕಾಗುತ್ತಿತ್ತು. ಒಮ್ಮೊಮ್ಮೆ ಯಜಮಾನರಿಗೆ ನಾನು " ಅನ್ನದ ಪ್ರಿಯೆ" ಎಂದು ನೆನಪಿಗೆ ಬಂದು, ನನಗೆ ಅನ್ನವನ್ನೇ ಬಡಿಸಲು ಹೇಳಿದುದೂ ಉಂಟು! ಮೈಸೂರಿನಲ್ಲಿ ಬಗೆಬಗೆಯ ಅನ್ನಗಳಿಗೆ ಒಗ್ಗಿಹೋಗಿದ್ದ ನನ್ನ ನಾಲಿಗೆಗೆ ಅನ್ನ-ಬೇಳೆ ಸಾರು ಯಾವುದಕ್ಕೂ ಸಾಲುತ್ತಿರಲಿಲ್ಲ. ಹಾಗೆಂದು ನನಗಿಷ್ಟವಾದ ಅಡಿಗೆಗಳನ್ನು ಮಾಡಿಸಿಕೊಳ್ಳಲೂ ಭಯ. ಹೇಳಿ ಕೇಳಿ ಒಟ್ಟು ಸಂಸಾರ. ನನಗೊಬ್ಬಳಿಗೆ ಮಾಡಿಹಾಕುವುದಂತೂ ಸಾಧ್ಯವಿಲ್ಲ, ನಾನೇ ಮಾಡಿಕೊಳ್ಳೋಣವೆಂದರೆ ನನಗೆ ಅಡಿಗೆಯೇ ಬರುತ್ತಿರಲಿಲ್ಲ!


ಇಲ್ಲಿಗೆ ಬಂದ ಮೇಲೆ ಹಾಗೂ ಹೀಗೂ ಅಡಿಗೆ ಕಲಿತು,(ಯಜಮಾನರ ಮೇಲೆ ಪ್ರಯೋಗ ಮಾಡಿ :D) ಅನ್ನದ ಬರವನ್ನು ನೀಗಿಸಿಕೊಳ್ಳುವಂತೆ ತಿನ್ನುತ್ತಿದ್ದರಿಂದ, ದಿನದಿನಕ್ಕೆ ದುಂಡಾಗುತ್ತಾ ಹೋದೆ. "ಈ ಜನ್ಮದಲ್ಲಿ ನೀನು ದಪ್ಪವಾಗಲ್ಲ ಬಿಡು" ಎಂದು ಹೇಳಿದವರೆಲ್ಲಾ, " ಪರವಾಗಿಲ್ಲವೇ, ಕೆಲವರಿಗೆ ಅವರವರ ಕೈ ಅಡಿಗೆ ಒಗ್ಗುವುದಿಲ್ಲ, ನಿನಗೇ ಸರಿಯಾಗಿ ಒಗ್ಗಿಹೋದಂತಿದೆ," ಎನ್ನುವಂತಾದೆ. ಸಿಕ್ಕಾಪಟ್ಟೆ ಚಳಿಯೂ ಇರುತ್ತಿದ್ದರಿಂದ, ವಾಕಿಂಗೂ ಇಲ್ಲಾ ! ಊರಲ್ಲಿ, ಅತ್ತೆಮನೆಯಲ್ಲಿ ಅಷ್ಟೋ ಇಷ್ಟೋ ಕೆಲಸವಾದರೂ ಇರುತ್ತಿತ್ತು. ಇಲ್ಲಿ ನನ್ನದೇ ಮನೆ, ಹೇಳುವವರೂ ಇಲ್ಲ, ಕೇಳುವವರೂ ಇಲ್ಲ! ಬಿಸಿ ಬಿಸಿ ಅಡಿಗೆ ಮಾಡಿಕೊಂಡು ತಿನ್ನುವುದು, ಚಳಿಗೆ ಹೊದ್ದು ಮಲಗುವುದು ಇದೇ ನನ್ನ ದಿನಚರಿಯನ್ನಾಗಿ ಮಾಡಿಕೊಂಡಿದ್ದರಿಂದ ನೋಡು ನೋಡುತ್ತಲೇ ಕುತ್ತಿಗೆಯ ಸುತ್ತ, ಸೊಂಟದ ಸುತ್ತ ಟೈರುಗಳು ಬರತೊಡಗಿದ್ದವು. ಊರಿನಿಂದ ಬರುವಾಗ ತಂದಿದ್ದ ಡ್ರೆಸ್ಸುಗಳು " ನಾ ಒಲ್ಲೆ" ಅನ್ನತೊಡಗಿದ್ದವು. ಒಂದತ್ತು ಹೆಜ್ಜೆ ನಡೆಯುವಷ್ಟರಲ್ಲಿ ಉಸ್ಸ್ ಉಸ್ಸೆಂದು ಏದುಸಿರು ಬಿಡುವ ಹಾಗಾಗುತ್ತಿತ್ತು. ನನಗೂ ನನ್ನ ಮುಖ ಕನ್ನಡಿಯಲ್ಲಿ ನೋಡಿಕೊಳ್ಳಲು ಮುಜುಗರವಾದರೂ, ಸಣ್ಣವಾಗುವುದು ಹೇಗೆ? ಊಟ ಬಿಟ್ಟರೆ ಯಾರೂ ಸಣ್ಣವಾಗುವುದಿಲ್ಲವೆಂದು ಎಲ್ಲೋ ಓದಿದ್ದರಿಂದ ಊಟ ಬಿಡುವ ವಿಚಾರ ಅಲ್ಲಿಗೇ ಬಿಟ್ಟಿದ್ದೆ. ಇನ್ನು ತಿಂಗಳಿಗೊಮ್ಮೆ ಮಾಡುವ ಸಂಕಷ್ಟಿ ಉಪವಾಸ! ಅದಾದರೂ ಏನು? ಅನ್ನ ಒಂದು ಬಿಟ್ಟು ಮಿಕ್ಕೆಲ್ಲಾ ತಿನ್ನುತ್ತಿದ್ದರಿಂದ ಅಂತಹ ಭಾರೀ ವ್ಯತ್ಯಾಸವೇನೂ ಆಗುತ್ತಿರಲಿಲ್ಲ. ಅಲ್ಲಲ್ಲಿ ತೂಕ ಇಳಿಸುವ ಲೇಖನಗಳನ್ನು ಓದಿದಾಗ, " ನಾನೂ ಸಣ್ಣವಾಗಲೇ ಬೇಕು," ಎಂದುಕೊಂಡರೂ ಮರುಕ್ಷಣದಲ್ಲಿ ಮರೆತೂ ಹೋಗುತ್ತಿದ್ದೆ.


ಅದೇ ಸಮಯಕ್ಕೆ ದಟ್ಸ್ ಕನ್ನಡದಲ್ಲಿ "ಮಾಡಿ ನೋಡಿ ತೂಕ ಇಳಿಸು ಸಪ್ತಾಹ" ಲೇಖನ ಓದಿದಾಗ, ಟ್ರೈ ಮಾಡಿಯೇ ಬಿಡೋಣವೆಂದು ನಿರ್ಧರಿಸಿದೆ. ಯಜಮಾನರಿಗೂ ನನ್ನ ನಿರ್ಧಾರವನ್ನು ಸಾರಿದೆ. ಅವರೂ ಇಂತಹ ಅದೆಷ್ಟೋ ನನ್ನ ತೂಕ ಇಳಿಸಿದ್ದ, ಅಷ್ಟೇ ವೇಗದಲ್ಲಿ ತೂಕ ಏರಿಸಿಕೊಂಡಿದ್ದ " ನಿರ್ಧಾರ"ಗಳನ್ನು ನೋಡಿದ್ದರಿಂದ, ಇದೂ ಹತ್ತರಲ್ಲಿ ಒಂದು ಎಂಬಂತೆ ತಲೆಯಾಡಿಸಿದ್ದರು. ಲೇಖಕರು ಉಪವಾಸ ಮಾಡಬೇಕಿಲ್ಲವೆಂದು ಹೇಳಿದ್ದೂ ನನ್ನ ನಿರ್ಧಾರಕ್ಕೆ ಮುಖ್ಯ ಕಾರಣವಾಗಿತ್ತು. ವಾರದ ಏಳು ದಿನಗಳಲ್ಲಿ ಏನೇನೇನು ತಿನ್ನಬೇಕೆಂದು ಅವರು ಹೇಳಿದ್ದೆಲ್ಲವನ್ನೂ ಬರೆದಿಟ್ಟುಕೊಂಡೆ. ಒಂದು ವಾರ ಕಟ್ಟುನಿಟ್ಟಾಗಿ ಮಾಡಿಯೇ ಬಿಡೋಣ, ನೀನು ಸಣ್ಣವಾಗೋಲ್ಲ ಬಿಡು, ಎಂದು ಛೇಡಿಸಿದವರಿಗೆ ಬುದ್ಧಿ ಕಲಿಸಿಯೇ ಬಿಡೋಣ...ಹಾಗೆ....ಹೀಗೆ ಎಂದೆಲ್ಲಾ ಮನಸ್ಸನ್ನು ಗಟ್ಟಿಮಾಡಿಕೊಂಡೆ. ಶನಿವಾರದ ಮಾರುಕಟ್ಟೆಯಲ್ಲಿ ಸಿಗುವ ಹಣ್ಣು-ತರಕಾರಿಗಳನ್ನು ತರಲು ಬೆಳಿಗ್ಗೆ ಬೇಗ ಎದ್ದು ಯಜಮಾನರಿಗೂ ಚಹಾ ಆಸೆ ತೋರಿಸಿ ಎಬ್ಬಿಸಿದೆ. ಇಲ್ಲಿ ಬೆಳಿಗ್ಗೆ ಎಂಟಕ್ಕೆಲ್ಲಾ ಮಾರುಕಟ್ಟೆ ಖಾಲಿಯಾಗುವುದರಿಂದ ಆದಷ್ಟೂ ಬೇಗ ಹೋದರೆ ಒಳ್ಳೆಯದು. ಯಜಮಾನರಿಗೂ ನನ್ನ ಸಡಗರ ನೋಡಿ ಸ್ವಲ್ಪ ನಂಬಿಕೆ ಬಂತೆನೋ, ಅವರೂ ಉತ್ಸಾಹದಿಂದಲೇ ಏನೇನು ತರಕಾರಿ, ಏನೇನು ಹಣ್ಣು ಎಂದು ಲಿಸ್ಟ್ ಓದುತ್ತಾ ರೆಡಿಯಾದರು. ಮೊದಲನೇ ದಿನ ಕರಬೂಜ ಅಥವಾ ಕಲ್ಲಂಗಡಿ ಹಣ್ಣನ್ನು ತಿನ್ನಿ ಎಂದಿದ್ದರಿಂದ, ಇಲ್ಲಿ ಕಲ್ಲಂಗಡಿ ಕಾಲ ಇನ್ನೂ ಬಂದೇ ಇಲ್ಲ! ಸರಿ ಕರಬೂಜ ಕೊಳ್ಳುವ ಎಂದು ಇದ್ದಿದುದರಲ್ಲೇ ದೊಡ್ಡ ಸೈಜಿನ ಕರಬೂಜ ಕೊಂಡೆ. ಎಲ್ಲಾ ಹಣ್ಣುಗಳೂ, ತರಕಾರಿಗಳ ವ್ಯಾಪರವೂ ಆಯಿತು. ಇನ್ನು ನನ್ನ ಸಪ್ತಾಹ ಆಚರಿಸುವುದೊಂದೇ ಬಾಕಿ! ಶನಿವಾರ-ಭಾನುವಾರ ಪೂರ್ತಿ ಏನೇನು ಆಸೆಗಳಿದ್ದವೋ ಅದೆಲ್ಲವನ್ನೂ ತಿಂದು ಪೂರೈಸಿಕೊಂಡೆ.


ಸೋಮವಾರ- ಮೊದಲನೆ ದಿನ - ಬೆಳಿಗ್ಗೆ ಏಳುವಾಗಲೇ ಇವತ್ತಿಂದ ನನ್ನ ನಾನ್ ಸ್ಟಾಪ್ ತಿನ್ನಾಟವಿಲ್ಲ, ಇವತ್ತು ಬರೀ ಕರಬೂಜ ಹಣ್ಣು ಎಂದು ಚಿಂತಿಸುತ್ತಲೇ ಎದ್ದೆ. ದೊಡ್ಡ ಸೈಜಿನ ಹಣ್ಣು ತಂದಿದ್ದರಿಂದ ಹೊಟ್ಟೆಗೇನೂ ಮೋಸವಾಗಲಾರದು ಎಂದು ಸಮಾಧಾನ ಮಾಡಿಕೊಂಡೆ. ಮೂರು ಹೊತ್ತಿಗೂ ಹಣ್ಣನ್ನೇ ತಿಂದು ಯಶಸ್ವಿಯಾಗಿ ಮೊದಲನೇ ದಿನ ಮುಗಿಸಿದೆ. " ಹೇ...ಇಷ್ಟೇ ತಾನೆ? ಸಕತ್ ಈಸಿ..." ಎನಿಸಿತು. ಯಜಮಾನರೂ , " ನೀನೇನು ಅಡಿಗೆ ಮಾಡಬೇಡ, ಏನಾದರೂ ನೂಡಲ್ಸ್ ನಾನೇ ಮಾಡಿಕೊಳ್ಳುತ್ತೇನೆಂದು" ನನ್ನ ಸಪ್ತಾಹಕ್ಕೆ ಬೆಂಬಲ ಕೊಟ್ಟಿದ್ದರು.

ಮಂಗಳವಾರ - ಎರಡನೇ ದಿನ - ಇವತ್ತು ಯಾವುದಾದರೂ ತರಕಾರಿಗಳನ್ನು ಹಸಿಯಾಗಿ ಅಥವಾ ಬೇಯಿಸಿ ತಿನ್ನಿರೆಂದು ಹೇಳಿದ್ದರು. ಹಸಿಯಾಗಿ ತಿನ್ನಲೆಂದು ಕ್ಯಾರೆಟ್, ಬೀನ್ಸ್ ( ನನ್ನ ಕೈತೋಟದ್ದೇ ಇತ್ತು ), ಲೆಟ್ಯೂಸ್, ಸೌತೆಕಾಯಿ ರೆಡಿಮಾಡಿಕೊಂಡೆ. ಆಲೂಗೆಡ್ಡೆ, ಕ್ಯಾಬೇಜುಗಳನ್ನು ಬೇಯಿಸಿ ತಿಂದರಾಯಿತು ಎಂದುಕೊಂಡೆ. ಬೆಳಿಗ್ಗೆಗೆ ಆಲೂಗೆಡ್ಡೆ ಬೇಯಿಸಿ ತಿಂದೆ. ಎರಡನೇ ದಿನ ಸ್ವಲ್ಪ ಕುಂಟುತ್ತಲೇ ಸಾಗುತ್ತಿದೆ ಅನ್ನಿಸಿತು. ಯಜಮಾನರು ಪಾಸ್ತಾಕ್ಕೆ ಗಮ್ ಎನ್ನುವ ಬಗೆಬಗೆಯ ಮಸಾಲೆಗಳನ್ನು ಮಿಕ್ಸು ಮಾಡಿಕೊಂಡು ತಿನ್ನುತ್ತಿದ್ದನ್ನು ಕಂಡು, " ನಾನ್ಯಾಕೆ ಹೀಗೆ ದನ ತಿಂದಂತೆ ಹಸೀ ತರಕಾರಿಗಳನ್ನು ತಿನ್ನಬೇಕು? ಎಂದು ಸಿಟ್ಟುಬರತೊಡಗಿತ್ತು. ಆದರೂ ಮನಸಲ್ಲಿದ್ದ ನಿರ್ಧಾರ ಇಷ್ಟಕ್ಕೆಲ್ಲಾ ಬಿಟ್ಟರೆ ಹೇಗೆಂದು ಇನ್ನಷ್ಟು ಗಟ್ಟಿ ಮಾಡಿಕೊಂಡು, ತಟ್ಟೆ ಖಾಲಿ ಮಾಡಿದೆ. ಎರಡನೇ ದಿನವೂ ಮುಗಿದಾಗ " ಇನ್ನು ಗೆದ್ದೆ!" ಎನಿಸಿತು.


ಬುಧವಾರ - ಮೂರನೆಯ ದಿನ - ಇವತ್ತು ಅಲೂಗೆಡ್ಡೆ ಬಿಟ್ಟು ಹಣ್ಣು ಮತ್ತು ತರಕಾರಿಗಳನ್ನು ತಿನ್ನುವ ದಿನ. ಆದರೆ ನನಗೆ ಮೊದಲೆರಡು ದಿನ ಹಣ್ಣು, ತರಕಾರಿಗಳನ್ನು ತಿಂದು, ಇವತ್ತೂ ಇದೇ ತಿನ್ನಬೇಕು ಎನಿಸಿದಾಗ, ನಾನ್ಯಾಕೆ ಸಣ್ಣವಾಗಬೇಕು? ತೂಕ ಜಾಸ್ತಿಯಾದರೆ ಮೈ ಹೊತ್ತುಕೊಂಡು ತಿರುಗುವವಳು ನಾನು ತಾನೆ? ಈ ಸಪ್ತಾಹನೂ ಬೇಡ, ಗಿಪ್ತಾಹನೂ ಬೇಡ, ಅಚ್ಚುಕಟ್ಟಾಗಿ ಅನ್ನ-ಸಾರು-ಪಲ್ಯಗಳನ್ನು ತಿನ್ನವುದು ಬಿಟ್ಟು ಇದೆಂತಹ ವನವಾಸ ನನ್ನದು? ಎನಿಸತೊಡಗಿತ್ತು. ಆದರೂ ಮಧ್ಯದಲ್ಲೇ ಬಿಟ್ಟರೆ ನನ್ನ ಘೋಷಣೆಗಳೆಲ್ಲಾ ಮಣ್ಣುಪಾಲು ಮಾಡಿದಂತಾಗುವುದಿಲ್ಲವೇ? ಒಂದು ಸೊಟ್ಟ ಸಪ್ತಾಹ ಮಾಡಲೂ ನಿನ್ನಿಂದ ಆಗಲಿಲ್ಲ ಎಂದು ಯಜಮಾನರು ಆಡಿಕೊಳ್ಳುವುದಿಲ್ಲವೇ? ಕೂಡದು...ಕೂಡದು...ಸಪ್ತಾಹ ಬಿಡಕೂಡದು ಎಂದು ಇನ್ನೂ ಗಟ್ಟಿಯಾದೆ. ಪರಿಣಾಮ, ಸಣ್ಣ ಪುಟ್ಟದಕ್ಕೆಲ್ಲಾ ಯಜಮಾನರ ಮೇಲೆ ರೇಗತೊಡಗಿದ್ದೆ. ನನ್ನ ಸಪ್ತಾಹದ ವಿಷಯ ಗೋಪ್ಯವಾಗಿಟ್ಟದ್ದರಿಂದ, ಊರಿಗೆ ಫೋನ್ ಮಾಡಿದರೆ ನಮ್ಮಮ್ಮ ಹಸೀ ತೊಗರಿಕಾಯಿ ಹುಳಿಯನ್ನು ಬಣ್ಣಿಸಿ ಬಣ್ಣಿಸಿ ಹೇಳುತ್ತಿದ್ದರೆ ನನಗೆ ಸಿಟ್ಟು ಒದ್ದುಕೊಂಡು ಬರುತ್ತಿತ್ತು. ರಾತ್ರಿ ಮಲಗಿದರೆ ಬರೀ ರಾಶಿ ರಾಶಿ ಚಿತ್ರಾನ್ನ, ಪುಳಿಯೋಗರೆ ತಿಂದಂತೆ ಕನಸು.

ಗುರುವಾರ - ನಾಲ್ಕನೆಯ ದಿನ - ಇವತ್ತು ಬರೀ ಬಾಳೆಹಣ್ಣುಗಳು ಜೊತೆಗೆ ತರಕಾರಿ ಸೂಪು ತಿನ್ನುವ ದಿನ - ಆದರೆ ಮೊದಲಿನಂತೆ ಮನಸ್ಸಿನಲ್ಲಿ ಏನೇನೋ ತಿಂದು ಬಿಡಬೇಕೆನ್ನುವ ಆಸೆ ಬರುತ್ತಿಲ್ಲ. ಬಾಯಿ ಚಪಲ ನಿಜಕ್ಕೂ ಕಡಿಮೆಯಾಗಿದೆ. ಯಜಮಾನರು ಪಕ್ಕದಲ್ಲೇ ಚಿಪ್ಸು ತಿನ್ನುತ್ತಿದ್ದರೂ ನಾನೂ ಕೈ ಹಾಕಬೇಕೆಂದೆನಿಸುತ್ತಿಲ್ಲ! ರಾತ್ರಿಗೆ ತರಕಾರಿ ಸೂಪು ಕುಡಿದು, ಆರಾಮವಾಗಿ ಮಲಗಿದೆ.


ಶುಕ್ರವಾರ- ಐದನೇ ದಿನ - ಇವತ್ತು ಒಂದು ಬಟ್ಟಲು ಅನ್ನ, ಆರು ಟೊಮೋಟೊಗಳು. ಮನಸ್ಸಿಗೆ, ದೇಹಕ್ಕೆ ನಿಜಕ್ಕೂ ಬದಲಾವಣೆಯಾಗಿದೆ. ಕುತ್ತಿಗೆಯ ಸುತ್ತ ಇದ್ದ ಕೊಬ್ಬು ಇಳಿದಂತೆ ಕಾಣಿಸುತ್ತಿದೆ! ಹೀಗೆಯೇ ಮಾಡಿದರೆ ಇನ್ನುಳಿದ ಕೊಬ್ಬೂ ಕರಗುವುದರಲ್ಲಿ ಸಂಶಯವೇ ಇಲ್ಲ! ಆದರೆ ವೀಕ್ ನೆಸ್ ಗೆ ಇರಬೇಕು, ಕೈ ಬೆರಳುಗಳು ಒಮ್ಮೊಮ್ಮೆ ಅದುರುತ್ತಿದ್ದವು. ಇಲ್ಲಿಯ ಚಳಿಯೂ ಜೊತೆಗೆ ಸೇರಿದ್ದರಿಂದ, ಈ ದಿನದ ಮೆನುಗೆ ಯಜಮಾನರ ಸಲಹೆಯಂತೆ, ರಾತ್ರಿ ಒಂದು ಗ್ಲಾಸು ಬಿಸಿ ಹಾಲು ಕುಡಿಯುವ ಅಭ್ಯಾಸ ಮಾಡಿಕೊಂಡೆ. ಒಂದು ದಿನವನ್ನೂ ನೀನು ನೆಟ್ಟಗೆ ಮಾಡುವುದಿಲ್ಲ ಬಿಡು ಎಂದು ನನ್ನನ್ನು ಛೇಡಿಸಿದ್ದ ಯಜಮಾನರೇ ’ ಪರವಾಗಿಲ್ವೆ? ನೋಡು ನೋಡುತ್ತಿದ್ದಂತೆ ಐದು ದಿನ ಕಳೆದೇ ಬಿಟ್ಟಲ್ಲಾ’ ಎನ್ನುವಂತಾದರು.

ಶನಿವಾರ - ಆರನೇ ದಿನ - ಒಂದು ಬಟ್ಟಲು ಅನ್ನದೊಂದಿಗೆ ಇಷ್ಟ ಬಂದ ತರಕಾರಿಗಳನ್ನು ಹಸಿಯಾಗಿ ಮತ್ತು ಬೇಯಿಸಿ ತಿನ್ನುವ ದಿನ. ಅನ್ನ ಬೇರೆ ತರಕಾರಿ ಬೇರೆ ಯಾಕೆ ಬೇಯಿಸುವುದೆಂದು ಅಕ್ಕಿಯೊಟ್ಟಿಗೆ, ಕ್ಯಾರೆಟ್, ಬೀನ್ಸ್, ಹಸಿ ಬಟಾಣಿಯನ್ನು ಸ್ವಲ್ಪ ಉಪ್ಪು ಹಾಕಿ ಕುಕ್ಕರ್ ಕೂಗಿಸಿದೆ. ಆಶ್ಚರ್ಯ! ಮಸಾಲೆ ಬೇಕೆಂದು ನಾಲಿಗೆ ಬೇಡುತ್ತಿಲ್ಲ! ಒಂದು ರೀತಿಯಲ್ಲಿ ದೇಹ ಮೊದಲಿಂದಲೂ ಹೀಗೆಯೇ ಇದ್ದಿತೇನೋ ಎಂಬಂತೆ ಒಗ್ಗಿಹೋಗುತ್ತಿದೆ.

ಭಾನುವಾರ- ಏಳನೇ ದಿನ - ಒಂದು ಬಟ್ಟಲು ಅನ್ನದೊಂದಿಗೆ ಹಣ್ಣಿನ ಜ್ಯೂಸು, ಹಾಗೂ ತರಕಾರಿಗಳನ್ನು ತಿನ್ನುವ ದಿನ. ಆರು ದಿನಗಳನ್ನು ಮುಗಿಸಿದ ಮೇಲೆ ಏಳನೆ ದಿನವೇನು ಲೆಕ್ಕವೇ? ಲೀಲಾಜಾಲವಾಗಿ ಮುಗಿಸುತ್ತೇನೆಂಬ ಆತ್ಮವಿಶ್ವಾಸ! ಹಣ್ಣಿನ ಜ್ಯೂಸಿಗೆ ಇಲ್ಲಿನ ಕಿತ್ತಳೆಹಣ್ಣುಗಳನ್ನು ನಾನು ತಿನ್ನುತ್ತಿಲ್ಲವಾದ್ದರಿಂದ, ಅಂಗಡಿಯಿಂದ ತಂದಿದ್ದ ಆಪೆಲ್ ಜ್ಯೂಸಿಗೆ ಮೊರೆ ಹೋದೆ. ಒಂದು ವಾರದ ಹಿಂದೆ ಮಾರುಕಟ್ಟೆಯಿಂದ ತಂದಿದ್ದ ಹಣ್ಣು- ತರಕಾರಿಗಳೆಲ್ಲವೂ ಫಿನಿಶ್! ಬಿಸಿಲು ಬಿದ್ದ ದಿನ ವಾಕಿಂಗೂ ಹೋಗುತ್ತಿದ್ದರಿಂದ, ನೋಡಿದವರಿಗೆ " ಸಣ್ಣವಾಗಿದ್ದಾಳೆ" ಎನ್ನುವಷ್ಟರಮಟ್ಟಿಗಾದೆ.


ಲೇಖಕರು ಎರಡು ಸಪ್ತಾಹಗಳ ನಡುವೆ ನಾಲ್ಕು ದಿನ ಅಂತರ ಕೊಡುವುದು ಉತ್ತಮವೆಂದು ಹೇಳಿದ್ದಾರೆ. ನಾನು ಒಂದು ವಾರ ಗ್ಯಾಪ್ ಕೊಟ್ಟು ಮತ್ತೆ ಒಂದು ವಾರ ಮಾಡಿದೆ. ಮೊದಲಿನ ಸಪ್ತಾಹದಷ್ಟು ಎರಡನೆ ವಾರ ಕಷ್ಟವಾಗಲಿಲ್ಲ. ಮುಂಚಿನಂತೆ ಬಗೆಬಗೆಯ ಅನ್ನಗಳನ್ನು ಮಾಡಿಕೊಂಡು ತಿನ್ನಬೇಕೆನಿಸುತ್ತಿಲ್ಲ. ಎಣ್ಣೆ ಪದಾರ್ಥಗಳು ಮೊದಲಿಂದಲೂ ಎಷ್ಟು ಬೇಕೋ ಅಷ್ಟೇ ತಿನ್ನುತ್ತಿದ್ದರಿಂದ, ಈಗ ಆದಷ್ಟೂ ಚಪಲ ಕಡಿಮೆಯಾಗಿದೆ. ಕೊಬ್ಬು ಕೊಂಚ ಕರಗಿ, ಮುಖ ನಳನಳಿಸುವಂತಿದೆ :). ಮುಖ್ಯವಾಗಿ, ಈಗ ದಿನವೂ ತೂಕ ನೋಡಿಕೊಳ್ಳಲು ನಾಚಿಕೆಯಾಗುವುದಿಲ್ಲ! ನಮ್ಮ ಸ್ನೇಹಿತರಿಗೂ ಈ ಸಪ್ತಾಹವನ್ನು ತಿಳಿಸಿ ಹೇಳಿಕೊಟ್ಟೆ. ಅವರೂ ಉತ್ಸಹದಿಂದ ಮಾಡಿ 4 ಕೆ.ಜಿ ಕಳೆದರಂತೆ! ದೊಡ್ಡ ಥ್ಯಾಂಕ್ಸ್ ಹೇಳಿದರು.

ಬಹುಷಃ ನಾವಿಬ್ಬರೇ ಇರುವುದರಿಂದ, ನನ್ನ ಸಪ್ತಾಹಕ್ಕೆ ಯಜಮಾನರ ಬೆಂಬಲವೂ ಇದ್ದರಿಂದ ಯಶಸ್ವಿಯಾಯಿತೆಂದು ಅನ್ನಿಸುತ್ತದೆ. ಇಲ್ಲದಿದ್ದರೆ " ನಿನ್ನ ಸಪ್ತಾಹ ನೀನು ಮಾಡಿಕೋ, ಉಳಿದವರಿಗೆ ಅಡಿಗೆ ಮಾಡು " ಎಂದಿದ್ದರೆ ನನ್ನ ತೂಕ ಇಳಿಸುವ ಕೆಲಸ ಮೊದಲನೇ ದಿನವೇ ಟುಸ್ ಅನ್ನುತ್ತಿತ್ತೋ ಏನೋ?!


ಲೇಖಕರಿಗೆ ವೈಯುಕ್ತಿಕವಾಗಿ ಧನ್ಯವಾದಗಳನ್ನು ಅರ್ಪಿಸೋಣವೆಂದರೆ ಅವರ ವಿಳಾಸ ನನ್ನಲ್ಲಿಲ್ಲ. ಆದ್ದರಿಂದ ಬರೆದ ಲೇಖಕರಿಗೆ, ಪ್ರಕಟಿಸಿದ ದಟ್ಸ್ ಕನ್ನಡದ ಸಂಪಾದಕರಿಗೆ ಇಲ್ಲಿಂದಲೇ ನನ್ನ ವಂದನೆಗಳು.

26 comments:

bhadra said...

ಅಡುಗೆ ಮಾಡುವವರು ಊಟ ಮಾಡುವುದರಲ್ಲಿ ಹಿಂದೆ ಎಂದು ಕೇಳಿದ್ದೆ - ಬಹುಶಃ ನಿಮ್ಮ ಮನೆಯಲ್ಲಿ ಅಡುಗೆ ಮಾಡುವುದು ನೀವಲ್ಲ ಎಂಬ ಈಗ ಅನುಮಾನ ಬರುತ್ತಿದೆ. :D

ಅನ್ನದ ಮೇಲೆ ಕಲ್ಲು ಹಾಕಿದರೇನಂತೆ ಬಿಡಿ, ಅದು ಅಜ್ಜಿ ಬಜ್ಜಿ ಗೊಜ್ಜಾಗಿ, ದೋಸೆನೋ ಇಡ್ಲಿನೋ ಮಾಡಿ ತಿನ್ನಬಹುದು :P - ಅನ್ನ ತಿಂದರೆ ದಪ್ಪಗಾಗೋಲ್ಲ, ದಿನನಿತ್ಯದ ಜೀವನದಲ್ಲಿ ಸುಖ ತೃಪ್ತಿಯನ್ನು ಕಂಡರೆ ದಪ್ಪಗಾಗುತ್ತಾರಂತೆ, ಬಹುಶಃ ನೀವು ಸುಖವಾಗಿದ್ದು, ಅಕ್ಕ ಪಕ್ಕದ ಎಲ್ಲರಿಗೂ ಹೊಟ್ಟೆ ಉರಿ ಬಂದಿದ್ದು, ನಿಮ್ಮನ್ನು ಹತ್ತಿಕ್ಕುವ ತವಕ ಇದಿರಬಹುದು - ಅನ್ನ ಮಾತ್ರ ಬಿಡಬೇಡಿ. ಅಟ್‍ಲೀಸ್ಟ್ ಬರಿ ಅನ್ನ ಆದ್ರೂ ತಿನ್ನಿ :)
ಅದು ಬಾತ್ ಅಲ್ಲ ಭಾತ್ - ಮರಾಠಿಯಲ್ಲಿ ವಾಂಗಿ ಅಂದರೆ ಬದನೆಕಾಯಿ ಭಾತ್ ಎಂದರೆ ಅನ್ನ - ಬದನೆಕಾಯಿ ಅನ್ನಕ್ಕೆ ವಾಂಗೀಭಾತ್ ಎನ್ನುವರು :)
ಓಹ್! ಕಲ್ಬುರ್ಗಾದ ಭಾಕ್ರಿ ಎಣ್ಣಿಗಾಯಿ :o - ಅದರದ್ದೇ ಕಿತಾಪತಿ - ಸರಿ ಸರಿ, ತಪ್ಪು ಅನ್ನದಲ್ಲ ಬಿಡಿ

ಹ ಹ ಹ ಕಲ್ಬುರ್ಗಿಗೂ ಕರಬೂಜಕ್ಕೂ ಇರುವ ನಂಟು ಗೊತ್ತಾಗ್ಲಿಲ್ವಾ? ಅಯ್ಯೋ ಎರಡೂ ನೀರಿಲ್ಲದಿದ್ದರೂ ಬೆಳೆಯುವವು - ಎಲ್ಲಿಯೂ ಸಲ್ಲುವವರು - ಎಲ್ಲರಿಗೂ ಪ್ರೀತಿ ಪಾತ್ರರು :)

ಲೆಟ್ಯೂಸ್ ಎಂದರೇನು? ನನಗೇನೋ ಇದರದ್ದೇ ಕೈವಾಡ ಇರಬಹುದು ಅನ್ನಿಸುತ್ತಿದೆ!

ಹುಂ! ಒಳ್ಳೆಯ ಲೇಖನ - ಇದು ಷಟ್ಕಾರವಲ್ಲ, ಅಷ್ಟಕಾರ - ಒಂದೇ ಎಸೆತಕ್ಕೆ ಎಂಟು ಉದ್ದರಿಗಳು :)

ಅದೇನೇ ಮಾಡಿದರೂ - ಆರೋಗ್ಯ ಕೆಡಿಸಿಕೊಳ್ಳಬೇಡಿ - ದಪ್ಪ ಆಗುವುದು ಊಟದಿಂದಲ್ಲ, ವಯೋಮಾನಕ್ಕೆ ತಕ್ಕನಾದ ಬೆಳವಣಿಗೆ. ಎಲ್ಲೆಲ್ಲೋ ಏನೇನೋ ಓದಿ, ಅನ್ನಾಹಾರಗಳನ್ನು ಕಡೆಗಣಿಸಬೇಡಿ

ಒಳ್ಳೆಯದಾಗಲಿ

ಗುರುದೇವ ದಯಾ ಕರೊ ದೀನ ಜನೆ

Unknown said...

ನಿಮಗೆ ಅಭಿನಂದನೆಗಳು, ತೂಕ ಇಳಿಸಿಕೊಂಡಿದ್ದಕ್ಕೆ.
ತೂಕ ಜಾಸ್ತಿ ಮಾಡೋಕೆ ಏನಾದ್ರೂ ಉಪಾಯ ಇದ್ರೆ ಹೇಳ್ರಿ ನನಗೆ, ನಾನು ಈ ಜನ್ಮದಲ್ಲಿ ದಪ್ಪಾಗೋ ಲಕ್ಷಣವೇನೂ ಕಾಣ್ತಾ ಇಲ್ಲ ನನಗೆ :-(
ಮತ್ತೆ, ನೀವೇ ಅಡುಗೆ ಮಾಡ್ಕೋಳಿ ಅಂತ ಹೇಳ್ಬೇಡಿ, ನಂಗೇನೂ ಮಾಡಕ್ಕೆ ಬರಲ್ಲ :-)

Lakshmi Shashidhar Chaitanya said...

:) :) :) :) all the best mundina saptaahakke !

shivu.k said...

ಮೇಡಮ್,
ನಿಮ್ಮ ಆಡುಗೆ ಪುರಾಣ ತುಂಬಾ ಚೆನ್ನಾಗಿದೆ. ಮತ್ತು ಅದಕ್ಕಿಂತ ನಿಮ್ಮ ಡಯಟಿಂಗ್ ವಿಚಾರವಂತೂ ನಾವು ಯೋಚಿಸುವಂತಿದೆ. ನೀವು ಪ್ರತಿದಿನ ದೈರ್ಯ ಮಾಡಿ ಪ್ರಯತ್ನಿಸಿದ ಪ್ರಯೋಗವಂತೂ ನಾವು[ನಾನು ನನ್ನಾಕೆ]ಪ್ರಯತ್ನಿಸಬಹುದೇನೊ ಅನ್ನಿಸುತ್ತೆ.
ಇನ್ನು ಬರಹದ ವಿಚಾರಕ್ಕೆ ಬಂದಾಗ ತುಂಬಾ ಸರಳವಾಗಿ ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ. ಮತ್ತು ಚೆನ್ನಾಗಿದೆ.

Anonymous said...

ತುಂಬಾ ಚನ್ನಾಗಿದೆ ನಿಮ್ಮ ತೂಕ ಇಳಿಸಿದ ಸಪ್ತಾಹದ ವಿವರಣೆ.

ನೀವೂ ತೂಕ ಇಳಿಸಿದ್ದು ಅಲ್ಲದೆ ನಿಮ್ಮ ಸ್ನೇಹಿತರಿಗೂ ತೂಕ ಇಳಿಸಲು ಪ್ರೇರಣೆ ಕೊಟ್ಟಿದ್ದಿರಿ, ಭೇಷ್! :)

ಆದರು ನಿಮ್ಮಿಬ್ಬರ ಮೈ-ಗು ಭಾಷೆ ಹೇಗಿರುತ್ತೆ ಎಂದು ಕುತೂಹಲ! ಉತ್ತರ ಕರ್ನಾಟಕದವರು ಕೇವಲ ಲೌಕಿಕವಾಗಿ ಮಾತನಾಡಿದರೆ ಮೈಸೂರು-ಬೆಂಗಳೂರು ಜನರಿಗೆ ಬಾಯಿಗೆ ಬಂದಂತೆ ಬೈದ ಹಾಗೆ ಅನಿಸುತ್ತದೆ.:D

ನಿಮ್ಮ ಅನುಭವ ಹಂಚಿಕೊಂಡದಕ್ಕೆ ಧನ್ಯವಾದಗಳು.

JH

Ittigecement said...

ನಿಮ್ಮಿಂದ ನಾನು ಸ್ಪೂರ್ತಿ ಪಡೆದಿದ್ದೇನೆ.. ನನ್ನಾಕೆ ಕೂಡ ಸಹಾಯ ಮಾಡುತ್ತೇನೆ ಎಂದಿದ್ದಾಳೆ..( ನನ್ನಾಕೆ ಬಳುಕುವ ಬಳ್ಳಿ, ಕೆಲವುಸಾರಿ ಹೊಟ್ಟೆಕಿಚ್ಚು ಬರುತ್ತದೆ)
ನಿಮ್ಮ ಮುಂದಿನವಾರಕ್ಕೆ ಯಶಸ್ಸು ಕೋರುತ್ತೇನೆ...

NilGiri said...

@ Sir,
ಅಡುಗೆ ಮನೆಗೆ ಯಜಮಾನರ ಪ್ರವೇಶವಿಲ್ಲ! ಅವರು ಯಾವಾಗಲೋ ಒಮ್ಮೆ ಮಾಡಿದ್ದ " ಪಲಾವ್"ವನ್ನು ನನ್ನೆಲ್ಲಾ ಅಡುಗೆಗೆ ಹೋಲಿಸಿ ಚಪ್ಪರಿಸಿ ಚಪ್ಪರಿಸಿ ತಿಂದಿದ್ದಕ್ಕೆ ಅವರಿಗೆ ಶಿಕ್ಷೆ!

ಲೆಟ್ಯೂಸ್ ಎಂದರೆ ಅದೊಂದು ಬರೀ ಎಲೆಗಳಿರುವ, ಹೂ ಕೋಸಿನಂತಿರುವ ಒಂದು ತರಕಾರಿ. ಸಲಾಡಿನಂತೆ ತಿನ್ನಬಹುದು.

ಲೇಖನ ತಿದ್ದಿ, ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು ಸಾರ್.
******************************
@ಮಧು,

ನೀವೇನೂ ಯೋಚನೆ ಮಾಡಬೇಡಿ. ನಿಮಗೆ ನನ್ನ ತರಹ ಅಡುಗೆ ಬರದ ಹುಡುಗಿಯೇ ಹೆಂಡತಿಯಾಗಿ ಸಿಗಲಿ! ದಿನಕ್ಕೊಂದು ಅಡುಗೆ ಮಾಡುತ್ತಾ, ನಿಮ್ಮ ಕರ ಕೌಶಲ್ಯಕ್ಕೆ ನೀವೇ ಮೆಚ್ಚುತ್ತಾ ಉಬ್ಬಿ ಉಬ್ಬಿ ದಪ್ಪವಾಗುತ್ತೀರ :D
****************************
@ Lakshmi,
ಥ್ಯಾಂಕ್ಸು ಲಕ್ಷ್ಮೀ :)

****************************
@ Shivu,
ಧಾರಾಳವಾಗಿ ಟ್ರೈ ಮಾಡಿ. ಇಬ್ಬರಿಗೂ all the best!!! ಬರಹ ಮೆಚ್ಚಿಕೊಂಡಿದ್ದಕ್ಕೆ ಥ್ಯಾಂಕ್ಸ್.
*****************************
@ JH,
ನಮ್ಮಿಬ್ಬರ ಮೈಸೂರು-ಗುಲ್ಬರ್ಗದ ಭಾಷೆಗಳೆರಡೂ ಸೇರಿ ನಮ್ಮದೇ ಬೇರೆ ಕನ್ನಡವಾಗಿದೆ. ಮದುವೆಯಾದ ಹೊಸದರಲ್ಲಿ ಮಾವನವರ ಮಾತಿನ ಅಬ್ಬರಕ್ಕೆ ಹೆದರಿದ್ದೂ ಉಂಟು!

ಪ್ರೋತ್ಸಾಹಕರ ಪ್ರತಿಕ್ರಿಯೆಗೆ ಧನ್ಯವಾದಗಳು.
*******************************
@ ಇಂಜನೀಯರರಿಗೆ,

ಸ್ಫೂರ್ತಿಯ ಸೆಲೆ ಬೆಂಬಲ ಕೊಡುತ್ತೇನೆಂದಾಗ ಇನ್ನು ತಡವೇಕೆ?!!;) ಶುರು ಹಚ್ಚಿಕೊಳ್ಳಿ.

ನಿಮ್ಮ ಹಾರೈಕೆಗೆ ಧನ್ಯವಾದಗಳು.

ರೂpaश्री said...

ನೀವೂ ನನ್ನ್ ಹಾಗೆ ವೆರೈಟಿ ಅನ್ನ ಪ್ರಿಯರು ಅಂತ ತಿಳಿದು ಖುಶಿ ಆಯಿತು. ತೂಕ ಇಳಿಸಿಕೊಂಡಿದಕ್ಕೆ ಅಭಿನಂದನೆಗಳು ಗಿರಿಜಾ!! ಮುಂದಿನ ಸಪ್ತಾಹ ಬೆಸ್ಟ್ ಆಫ್ ಲಕ್ !!

ಈ ಜೆನೆರಲ್ ಮೋಟಾರ್ಸ್ ನವರ ಡಯಟ್ ಚಾರ್ಟ್ ನನ್ನ ಕೈ ಸೇರಿ ೬ ತಿಂಗಳುಗಳ ಮೇಲಾಯಿತು, ಇನ್ನೂ ಅದನ್ನ ಟ್ರೈ ಮಾಡೋಕೆ ಆಗಿಲ್ಲ ನಂಗೆ:(

NilGiri said...

ಒಳ್ಳೇ ಕೆಲಸಕ್ಕೆ ನೂರೆಂಟು ವಿಘ್ನಗಳು ಬರುತ್ತವಂತೆ ರೂಪ :D ನಿಧಾನಕ್ಕೆ ಟ್ರೈ ಮಾಡಿ. ನಿಮ್ಮ ಹಾರೈಕೆಗೆ ಧನ್ಯವಾದಗಳು :).

sunaath said...

ನಿಮ್ಮ ತೂಕ ಇಳಿಸುವ ಸೂಚನೆಗಳು ಬಾಯಲ್ಲಿ ನೀರು ಬರಿಸುವಂತೆ ಇವೆಯಲ್ಲ!

Harisha - ಹರೀಶ said...

ನಾನೂ ಅನ್ನ ಪ್ರಿಯ :-)

ಚೆನ್ನಾಗಿ ಬರೆದಿದ್ದೀರ. ಆದರೆ ಎಷ್ಟು ಕೆಜಿ ತೂಕ ಇಳಿಸಿಕೊಂಡಿರಿ ಅಂತ ಬರೆದೇ ಇಲ್ಲ!

ನಾನೂ ಒಂದು ಕುಂಬಳಕಾಯಿ ಥರ ಇದ್ದೇನೆ.. ಆದರೆ ಇಂಥ ಪ್ರಯೋಗ ಮಾಡುವ ಆಲೋಚನೆ ಸದ್ಯಕ್ಕಿಲ್ಲ :D

ಸುಪ್ತದೀಪ್ತಿ suptadeepti said...

ನಿಮ್ಮ ನರೇಶನ್ ಚೆನ್ನಾಗಿದೆ. ಸ್ವಾರಸ್ಯಕರವಾಗಿದೆ.

ಈ ಡಯಟ್ ಪ್ರಯೋಗ ನಾನೂ ಮಾಡಿದ್ದೆ, ೨೦೦೨ರಲ್ಲಿ. ಆಗ (2001-2002) ಇದು ಅಂತರ್ಜಾಲದಲ್ಲಿ ಬಹಳವೇ ಪ್ರಚಲಿತದಲ್ಲಿತ್ತು. ನನ್ನ ಬಹಳಷ್ಟು ಸ್ನೇಹಿತರು, ಸ್ನೇಹಿತೆಯರು ಇದನ್ನು ಪ್ರಯೋಗಿಸಿದ್ದರು, ಹಗುರಾಗಿದ್ದರು. ಅನ್ನ ಇಷ್ಟವೇ ಆದರೂ, ವೆರೈಟಿ ಪ್ರಿಯೆ ಆದ್ದರಿಂದ ಅಷ್ಟೇನೂ ಕಷ್ಟ ಆಗಿರಲಿಲ್ಲ. ಗಂಡ, ಮಕ್ಕಳಿಗೆ ಅಡುಗೆ ಮಾಡಿಟ್ಟು ನನಗಾಗಿ ಹಣ್ಣು ತರಕಾರಿ ಹೆಚ್ಚಿ-ಕೊಚ್ಚಿ ತಿನ್ನುತ್ತಿದ್ದೆ. 'ದಿನವಿಡೀ ಅಡುಗೆ ಮನೆಯಲ್ಲೇ ಇದ್ದೇನೆ' ಅನ್ನಿಸಿದರೂ 'ಒಂದೇ ವಾರ ತಾನೇ' ಅನ್ನುವ ಸಮಾಧಾನವೂ ಇತ್ತು!! ಮೊದಲ ಸಲವೇ ೬ ಕಿಲೋ ತೂಕ ಕಳಕೊಂಡೆ.

ಖುಷಿಯಿಂದ ಒಂದು ತಿಂಗಳ ಬಳಿಕ ಇನ್ನೊಮ್ಮೆ ಮಾಡಿದಾಗ, ನಾಲ್ಕನೇ ದಿನಕ್ಕೆ ತಲೆಗೂದಲು, ಹುಬ್ಬಿನ ಕೂದಲು, ಕಣ್ಣರೆಪ್ಪೆಗೂದಲು ಕೂಡಾ ಉದುರಲು ಶುರುವಾಗಿದ್ದವು. ಭಯವಾದರೂ- ಇನ್ನು ಮೂರು ದಿನವಷ್ಟೇ ಅಂದುಕೊಂಡು- ಮುಗಿಸಿಯೇ ಬಿಟ್ಟೆ, ಮತ್ತೆ ೪ ಕಿಲೋ ಹಗುರವಾಗಿದ್ದೆ. ಆಗ ಕಳೆದುಕೊಂಡ ತೂಕ ಮತ್ತೆ ನಾಲ್ಕು ವರ್ಷಗಳಲ್ಲಿ ಮೈಯೇರಿದ್ದರೂ, ತಲೆಗೂದಲು ಮಾತ್ರ ಮೊಳೆಯಲೇ ಇಲ್ಲ.

ಅದೇ ಭಯಕ್ಕೆ ಅದನ್ನು ಮತ್ತೆ ಪ್ರಯೋಗಿಸಲು ಧೈರ್ಯವೂ ಬಂದಿಲ್ಲ.

shivu.k said...

ಗಿರಿಜಾ ಮೇಡಮ್,
ಮತ್ತೊಮ್ಮೆ ಓದಿದೆ. ಏಕೆಂದರೆ ನಾವು ಇಂದಿನಿಂದ ಸ್ವಲ್ಪ ನಿಮ್ಮ ಪ್ರಯೋಗವನ್ನು ಮಾಡೋಣವೆಂದು. ಅಂದಹಾಗೆ ನಾನು ನನ್ನಾಕೆ ದಪ್ಪಗಿಲ್ಲ. ಅದರೂ ಆರೋಗ್ಯದ ದೃಷ್ಠಿಯಿಂದ ಒಳ್ಳೆಯದೆನಿಸುತ್ತಿದೆ.
ಆಹಾಂ! ನನ್ನ ಎರಡು ಬ್ಲಾಗುಗಳಲ್ಲೂ ಹೊಸ ಲೇಖನಗಳಿವೆ. ಕ್ಯಾಮೆರಾ ಹಿಂದೆಗೆ ಒಬ್ಬ ಹಿರಿಯಜ್ಜ ಬಂದಿದ್ದಾನೆ. ಹಾಗೆ ಮದುವೆ ಮನೆಯ ಹೊಸದೃಶ್ಯಗಳಿಗಾಗಿ ಛಾಯಾ ಕನ್ನಡಿ ಬೇಟಿ ಕೊಡಿ.

shivu.k said...

ಗಿರಿಜಾ ಮೇಡಮ್,
thanks for comment.
ಮೊದಲೇ ಹೇಳಿದ್ದೇನೆ. ತಲೆಮೇಲೆ ಹಾಕಿದ್ದನ್ನೆಲ್ಲಾ ಟೋಪಿ ಅಂತ ಪರಿಗಣಿಸಿ ನೋಡಬೇಕಾಗಿ ವಿನಂತಿ.


ಗಿರಿಜಾ ಮೇಡಮ್,
ಈ ಲೇಖನವನ್ನು ಮೊದಲು ಹಾಕಿದ್ದೆ. ಅದು ಹೆಚ್ಚು ಜನ ಬ್ಲಾಗಿಗರಿಗೆ ತಲುಪಿರಲಿಲ್ಲವಾದ್ದರಿಂದ ಮತ್ತೊಮ್ಮೆ ಫೋಟೋಸಮೇತ ಹಾಕಿದ್ದೇನೆ ಆಷ್ಟೆ. ಇನ್ನು ಮುಂದೆ ಹೊಸ ಲೇಖನಗಳು ಮಾತ್ರ ಬರುತ್ತವೆಂದು ಭರವಸೆ ಕೊಡುತ್ತೇನೆ.

Ittigecement said...

girijaaravare....

naanu yashasviyaagi mugisiddEne...
5 kilo kaDime aade...
oMduvaara biTTu matte shuru maaDONa aMdukoMDiddEne...
tuMbaa...tuMbaa dhanyavaadagaLu.....

NilGiri said...

@ ಕಾಕಾ,

ಸೂಚನೆಗಳೇನೋ ಓದಲು " ಚೆನ್ನಾಗಿವೆ" ಆಚರಿಸಲು ಸ್ವಲ್ಪ ಕಷ್ಟ :D!

***********************
@ ಹರೀಶ್,

ಎರಡು ಸಪ್ತಾಹಗಳಿಂದ ಒಟ್ಟು 8 ಕೆ.ಜಿ.ತೂಕ ಇಳಿಸಿದೆ! ಕುಂಬಳಕಾಯಿ ತರಹ ಇದ್ದರೆ, ನಮಗೇನಂತೆ "ಕುಂಬಳಕಾಯಿ ತರಹ ಇರೋ ಹುಡುಗಿನೇ ಸಿಕ್ಕುತ್ತಾಳೆ! j/k :D.

ಬರಹ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು.

****************************
@ ಸುಪ್ತದೀಪ್ತಿ,

ನೀವು " ಸಪ್ತಾಹ"ದ ಅಡ್ಡಪರಿಣಾಮಗಳನ್ನು ಹೇಳಿದ ಮೇಲೆ ನಾನೂ ಒಂದಷ್ಟು ಗೂಗಲಿಸಿ ನೋಡಿದೆ. ಕೆಲವರು ಕೂದಲು ಉದುರುತ್ತದೆ, ಚರ್ಮ ಒಣಗಿದಂತಾಗುತ್ತದೆ ಎಂದೆಲ್ಲಾ ಬರೆದಿದ್ದಾರೆ :(

ಆದರೆ ನನ್ನ ಮೇಲೆ ಇವು ಯಾವ ಅಡ್ಡಪರಿಣಾಮಗಳು ಬೀರಲೇ ಇಲ್ಲ :D. ಊರಿಗೆ ಹೋಗುವಷ್ಟರಲ್ಲಿ ಆದಷ್ಟು ಸಣ್ಣವಾಗಲೇಬೇಕು ;-)
*************************

NilGiri said...

@ಶಿವು,

ದಪ್ಪಗಿಲ್ಲಾ ಅಂದ ಮೇಲೆ ಈ ರೀತಿಯ ವನವಾಸವೇಕೆ?! ಮೊದಲು ಚೆನ್ನಾಗಿ ತಿಂದೂ ತಿಂದೂ ತಿಂದೂ ದಪ್ಪವಾಗಿ, ಆಮೇಲೆ ಸಪ್ತಾಹ ಮಾಡಬೇಕು :D.

***********************
@ ಸಿವಿಲ್ ಇಂಜನೀಯರರೆ,

ನಾವು ಇಲ್ಲಿಂದ, ನಿಮ್ಮ ಸಪ್ತಾಹಕ್ಕೆ ಶುಭ ಕೋರಿ ಆಶೀರ್ವದಿಸಿದಕ್ಕೇ ಅದು ಯಶಸ್ವಿಯಾದದ್ದು:D.ಇನ್ನೊಂದು ವಾರ ಬಿಡುವು ಕೊಟ್ಟು ಮತ್ತೆ ಮಾಡಿ ನೋಡಿ, ಎಚ್ಚರಿಕೆ: ಚರ್ಮ ಒಣಗಿದಂತಿರುವುದು, ಕೂದಲು ಉದುರುವುದು ಹೀಗೆ ಸಪ್ತಾಹದ ಅಡ್ಡಪರಿಣಾಮಗಳೂ ಇವೆಯಂತೆ. ಹುಷಾರಾಗಿರಿ.

ಅಂತರ್ವಾಣಿ said...

ಗಿರಿಜಾ ಅವರೆ,
ತುಂಬಾ ಚೆನ್ನಾಗಿ ಬರೆದಿದ್ದೀರ :)
ಮಾಡುತ್ತೀನಿ ಎಂಬ ಛಲವಿದ್ದಿದ್ದರಿಂದಲೇ ಇದನ್ನು ಸಾಧಿಸಿದ್ದೀರ.

NilGiri said...

ತೂಕ ಇಳಿಸಲೇ ಬೇಕಿತ್ತು ಜಯ ಶಂಕರ್! ಇಲ್ಲದಿದ್ದರೆ ಊರಿಗೆ ಹೋದಾಗ ನಮ್ಮಮ್ಮ ನನ್ನೆಲ್ಲಾ ತಿನ್ನಾಟಕ್ಕೆ ಕಡಿವಾಣ ಹಾಕಿಬಿಡುತ್ತಾರೆ.

ಬರಹ ಮೆಚ್ಚಿಕೊಂಡಿದ್ದಕ್ಕೆ ಥ್ಯಾಂಕ್ಸ್!

ಅಂತರ್ವಾಣಿ said...

namma geLati lilly yavarige ee vishya tiLidideeya ;)

ತೇಜಸ್ವಿನಿ ಹೆಗಡೆ said...

ತೂಕ ಇಳಿಸುವುದರ ಕುರಿತಾಗಿ ದಟ್ಸ್‌ಕನ್ನಡದಲ್ಲಿ ಬಂದ ಲೇಖನದ ಲಿಂಕ್ ಇದೆಯೇ? ಇದ್ದರಿ ದಯವಿಟ್ಟು ಕೊಡುವಿರಾ? ನಾನೂ ಸಪ್ತಾಹವನ್ನು ಶುರುಮಾಡಬೇಕಾಗಿದೆ...:)

Ittigecement said...

ಗಿರಿಜಾರವರೆ...

ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು...

ಸುಖ, ಶಾಂತಿ , ಸಮ್ರುದ್ಧಿಯನ್ನು ತರಲಿ...

ನಿಮ್ಮೆಲ್ಲ ಕನಸು ನನಸಾಗಲಿ...

ಶುಭ ಹಾರೈಕೆಗಳು...

NilGiri said...

@ಜಯಶಂಕರ್ : ಲಿಲ್ಲಿಗೆ ಇದೆಲ್ಲಾ ಬೇಡವಂತೆ :D.

**************

@ತೇಜಸ್ವಿನಿ : " ಆಚರಿಸಿ ನೋಡಿ ತೂಕ ಇಳಿಸಿ ಸಪ್ತಾಹ"ದ ಮೇಲೆ ಕ್ಲಿಕ್ ಮಾಡಿ.ಅದೇ ಲಿಂಕು. ಸಪ್ತಾಹದ ಗುಂಪಿಗೆ ಸ್ವಾಗತ:D

**************

@ಇಂಜನಿಯರಿಗೆ : ನಿಮಗೂ ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು. ನಿಮ್ಮ ಹಾರೈಕೆಗೆ ಧನ್ಯವಾದಗಳು.
(ಅಂದ ಹಾಗೆ ಎಷ್ಟು ತೂಕ ಇಳಿಸಿದಿರಿ????)

Ittigecement said...
This comment has been removed by the author.
Chaitra said...

Nanna preethiya girija avre neevu nam mysorinavarendu thilidu thumba santhosh aithu nanu mandyada hudgi, nimma sapthahakke thumba dhanyavadhagalu nanu 61 kg agiddini, ee varadinda nimma sapthahana nanu madona andkondidini, ivattu modalane dina somavara nanna geyarella nanna geli madthidare, adre nan bidolla neeve nange spoorthi nodi, ea sapthahana made madthini adre idna eshtu dina madbeku antha enu neevu thilisikottilvalla dayamade eshtu dina madbeku antha thilisi kodthira

inthi
Chaitra.S.Gowda

NilGiri said...

ಚೈತ್ರರವರೇ,

ಮೈಸೂರಿಗೂ ಮಂಡ್ಯಕ್ಕೂ ಏನು ಮಹಾ ದೂರ ಅಲ್ವ?! ನಿಮ್ಮ ಸ್ನೇಹಿತರು ಗೇಲಿ ಮಾಡುತ್ತಾರೆಂದು ಸಪ್ತಾಹ ಮಾಡಬೇಡಿ. ನಿಮಗೇ ನೀವು ದಪ್ಪ ಅನಿಸಿದರಷ್ಟೇ ಸಪ್ತಾಹ ಮಾಡಿ. ಸಪ್ತಾಹ ಅಂದರೆ ಏಳು ದಿನ ಅಲ್ಲವೆ?!! ಸೋಮವಾರದಿಂದ ಭಾನುವಾರದವರೆಗೆ ನಾನು ಮಾಡಿದ್ದು. ಸಪ್ತಾಹದಿಂದ ಅಡ್ಡ ಪರಿಣಾಮಗಳೂ ಇವೆಯಂತೆ, ಹುಷಾರಾಗಿರಿ.