Friday, 14 November 2008

ದೀಪಾವಳಿ ಹಬ್ಬ ಮತ್ತು ಜ್ಯೂರಿ ಕೆಲಸ!

ಈ ಸಲ ದೀಪಾವಳಿಗೆ, ನಮಗೆ ಗೊತ್ತಿರುವ ಕನ್ನಡದವರನ್ನು ಮನೆಗೆ ಕರೆಯೋಣವೆಂದುಕೊಂಡಿದ್ದೆವು. ಒಬ್ಬರಲ್ಲ ಒಬ್ಬರು ಒಂದೊಂದು ಕಾರಣಕ್ಕೆ ಅವರವರ ಮನೆಗೆ ಊಟಕ್ಕೆ ಕರೆದಿದ್ದರಿಂದ, ಈ ಸಲ ಒಟ್ಟಿಗೆ ಎಲ್ಲರನ್ನೂ ಊಟಕ್ಕೆ ಕರೆದು ಬಿಡು ಎಂದಿದ್ದರು ಯಜಮಾನರು. ಅದರಂತೆ ಮೊದಲೇ ಬೇಕಾದ ಎಲ್ಲಾ ತಯಾರಿ ನಡೆಸಿದ್ದೆ. ಗಾಳಿ, ಮಳೆಯೂ ಸ್ವಲ್ಪ ಕಡಿಮೆಯಾಗಿದ್ದಿದು, ನನ್ನ ಉತ್ಸಾಹಕ್ಕೆ ಮತ್ತೊಂದು ಕಾರಣವಾಗಿತ್ತು. ಹಬ್ಬದ ದಿನ ಮಳೆ ಬರದಿದ್ದರೆ ದೊಡ್ಡ ರಂಗೋಲಿ ಬಿಟ್ಟು ಬಣ್ಣ ತುಂಬುವ ನನ್ನ ಕಾರ್ಯಕ್ರಮವನ್ನೂ ಹಾಕಿಕೊಂಡಿದ್ದೆ. ಸೋಮವಾರ ಇಲ್ಲಿ ಲೇಬರ್ ಡೇ ಎಂದು ರಜೆ ಕೊಟ್ಟಿದ್ದರಿಂದ, ಶನಿವಾರ, ಭಾನುವಾರಕ್ಕೆ ಸೋಮವಾರದ ರಜೆಯೂ ಸೇರಿದ್ದು ಒಂದು ರೀತಿಯಲ್ಲಿ ಒಳಿತೇ ಆಗಿತ್ತು. ಪ್ರತಿಸಲವೂ ನಮ್ಮ ದೀಪಾವಳಿಯ ಸಮಯಕ್ಕೆ ಇಲ್ಲಿಯವರ ಗೈ ಫಾಕ್ಸ್ ಹಬ್ಬವೂ ಬರುತ್ತಿತ್ತು. ನಾವು ನಮ್ಮ ಹಬ್ಬ ಮಾಡಿಕೊಂಡು ಪಟಾಕಿ ಹೊಡೆದುಕೊಳ್ಳುತ್ತಿದ್ದೆವು, ಅವರುಗಳು ಅವರ ಹಬ್ಬ ಮಾಡಿಕೊಂಡು ಪಟಾಕಿ ಹೊಡೆಯುತ್ತಿದ್ದರು. ಈ ಸಲ ನಮ್ಮ ದೀಪಾವಳಿ ಒಂದು ವಾರ ಮೊದಲೇ ಬಂದು, ನಮಗೆ ಹಬ್ಬದ ಸಮಯಕ್ಕೆ ಸರಿಯಾಗಿ ಪಟಾಕಿಯೇ ಇರಲಿಲ್ಲ.

ಊರಿನಲ್ಲಿ ಬಗೆಬಗೆಯ ಪಟಾಕಿಗಳನ್ನು ಸಿಡಿಸಿ ಹಬ್ಬ ಮಾಡುತ್ತಿದ್ದ ನಮಗೆ, ಇಲ್ಲಿದ್ದ ಮೂರು ಮತ್ತೊಂದು ಪಟಾಕಿಗಳನ್ನೂ, ಅದಕ್ಕಿದ್ದ ಬೆಲೆಯನ್ನೂ ನೋಡಿ, ಏನೂ ಬೇಡ ಎನ್ನಿಸಿತ್ತು. ದೀಪಾವಳಿ ಹಬ್ಬಕ್ಕೆಂದೇ ಕಟ್ಟುತ್ತಿದ್ದ ಚೀಟಿ ದುಡ್ಡು, ಹಬ್ಬಕ್ಕೆ ಸರಿಯಾಗಿ ಮಾರ್ವಾಡಿ ಕೊಡುತ್ತಿದ್ದ ಪಟಾಕಿಗಳು, ಜೊತೆಗೊಂದು ಬೆಳ್ಳಿಯ ಬಟ್ಟಲು! ( ಆಮೇಲೆ ಬೆಳ್ಳಿ ಬೆಲೆ ಹೆಚ್ಚಾಯಿತೆಂದು ಸ್ಟೀಲಿನ ದೀಪ ಕೊಟ್ಟಿದ್ದ ಸೇಟು ) ಹಬ್ಬಕ್ಕೆ ಒಂದು ವಾರ ಮೊದಲೇ ಟೌನ್ ಹಾಲಿನಲ್ಲಿ, ಬೀಡು ಬಿಡುತ್ತಿದ್ದ ಪಟಾಕಿ ಅಂಗಡಿಗಳು, ಅವುಗಳ ಮುಂದೆ ಪೈಪೋಟಿ ಎಂಬಂತೆ ಡಿಸ್ಕೌಂಟಿನ ಬೋರ್ಡುಗಳು, ಪಟಾಕಿ ಮಾರುವವರ, ಖರೀದಿಸುವವರ ಸಡಗರ, ಒಂದೇ ಎರಡೇ..?! ಇಲ್ಲಿ ಅಬ್ಬೇಪಾರಿಗಳಂತೆ ಒಂದಷ್ಟು ಡಬ್ಬಿಗಳಲ್ಲಿ ಪಟಾಕಿಗಳನ್ನು ಮಾರಲು ಇಟ್ಟಿದ್ದರು. 18 ವರ್ಷಕ್ಕಿಂತ ಮೇಲ್ಪಟ್ಟವರಷ್ಟೇ ಪಟಾಕಿ ಖರೀದಿಸಬೇಕು ಎಂಬ ನೋಟೀಸು ಬೋರ್ಡು! ಯಾರೆಷ್ಟೇ ಕೊಳ್ಳಲಿ, ಡಿಸ್ಕೌಂಟೂ ಇಲ್ಲಾ, ಎಂಥದ್ದೂ ಇಲ್ಲ! ಶಾಸ್ತ್ರಕ್ಕಾದರೂ ಇರಲಿ ಎಂದು, ನಕ್ಷತ್ರಕಡ್ಡಿಗಳ ಒಂದು ಪ್ಯಾಕ್ ತೆಗೆದುಕೊಂಡು ಕೌಂಟರಿನಲ್ಲಿ ದುಡ್ಡು ತೆತ್ತು ಹೊರಟೆವು.

" ಹಬ್ಬಕ್ಕೆ ಈಗಿನಿಂದಲೇ ನಿನ್ನ ತಯಾರಿ ಅತೀಯಾಯಿತು, ನೀನು ಈಗಲೇ ಅವರೆಲ್ಲರಿಗೂ ಊಟಕ್ಕೆ ಕರೆದರೆ, ಅವರೆಲ್ಲರೂ ಹಬ್ಬದ ದಿನ ಮರೆತೇ ಹೋಗುತ್ತಾರೆ, ಹಬ್ಬಕ್ಕೆ ಇನ್ನೊಂದು ನಾಲ್ಕು ದಿನವಿರುವಾಗ ಹೇಳಿದರಾಯಿತು" ಎಂದು ಯಜಮಾನರು ನನ್ನ ಉತ್ಸಾಹಕ್ಕೆ ಕಡಿವಾಣ ಹಾಕಲೆತ್ನಿಸಿದರೂ, ನನ್ನ ಸಡಗರವೇನೂ ಕಡಿಮೆಯಾಗಿರಲಿಲ್ಲ. ಆದರೆ ಇದೆಲ್ಲಾ ಸಡಗರದ ಮಧ್ಯೆ ನನಗೆ ಬಂದಿದ್ದ ಜ್ಯೂರಿ ಕೆಲಸವನ್ನು ಮರೆತೇ ಬಿಟ್ಟಿದ್ದೆ. ಎರಡು ತಿಂಗಳ ಮೊದಲೇ ಮಿನಿಸ್ಟ್ರಿ ಅಫ್ ಜಸ್ಟೀಸಿನಿಂದ ನನಗೆ ಜ್ಯೂರಿ ಕೆಲಸಕ್ಕೆ ಕರೆ ಬಂದಿತ್ತು. ಅನಿವಾರ್ಯ ಕಾರಣಗಳಿದ್ದರಷ್ಟೇ ಜ್ಯೂರಿ ಕೆಲಸಕ್ಕೆ ಗೈರುಹಾಜರಾಗುವ ಅನುಮತಿಯಿದ್ದರಿಂದ, ಹೇಳಿಕೊಳ್ಳುವಂತಹ ಅನಿವಾರ್ಯ ಕಾರಣಗಳೇನೂ ನನಗೆ ಇರದಿದ್ದರಿಂದ ನಾನೂ ಖುಷಿಯಿಂದಲೇ ಇದ್ದೆ.

ಇಲ್ಲಿರುವ ಎಲ್ಲರೂ ಒಂದಲ್ಲಾ ಒಂದು ಸಲ ಜ್ಯೂರಿ ಕೆಲಸ ಮಾಡಲೇ ಬೇಕು. ಎರಡು ತಿಂಗಳು ಮೊದಲೇ, ಜ್ಯೂರಿ ಕೆಲಸದ ದಿನಾಂಕ ಮತ್ತು ಸ್ಥಳವನ್ನೂ ನಮೂದಿಸಿ ಲೆಟರ್ ಕಳಿಸುತ್ತಾರೆ. ಅವರು ತಿಳಿಸಿದ ದಿನ ನಮಗೆ ಹೋಗಲಾಗದಿದ್ದರೆ, ಅದಕ್ಕೆ ಸರಿಯಾದ ಕಾರಣ ಕೊಡಲೇ ಬೇಕು. ಕಳೆದಬಾರಿ ಯಜಮಾನರಿಗಷ್ಟೇ ಜ್ಯೂರಿ ಕೆಲಸ ಬಂದಿತ್ತು. ಅದೇ ಸಮಯಕ್ಕೆ ನಾವು ಊರಿಗೆ ಬರುವ ಪ್ಲಾನ್ ಇದ್ದರಿಂದ, ಅವರಿಗೆ ವಿನಾಯಿತಿ ಕೊಟ್ಟಿದ್ದರು. ಜ್ಯೂರಿ ಕೆಲಸವೇನೂ " ಹೇಳಿಕೊಳ್ಳುವಂತಹ" ದೊಡ್ಡ ಕೆಲಸವಲ್ಲದಿದ್ದರೂ, ನನಗೇನೋ ದೊಡ್ಡ ನ್ಯಾಯಾಧೀಶಳೇ ಆದಷ್ಟು ಖುಷಿಯಾಗಿತ್ತು. ಜ್ಯೂರಿ ಕೆಲಸಕ್ಕೆ ಎಲ್ಲರಿಗೂ ಕರೆಬಂದಿದ್ದರೂ ಎಲ್ಲರನ್ನೂ ಅವರುಗಳು ಸೆಲೆಕ್ಟ್ ಮಾಡುವುದಿಲ್ಲವೆಂದು ಹೇಳಿದ್ದರೂ ಕರೆ ಬಂದಿರುವುದೇ ನನಗೆ ದೊಡ್ಡ ವಿಷಯವಾಗಿತ್ತು.

ಹಬ್ಬದ ಸಡಗರದಲ್ಲಿ ಮರೆತೇ ಹೋಗಿದ್ದಿದು, ಯಜಮಾನರ ಸಡನ್ ನೆನಪು ತರಿಸಿದ್ದಿದು, ನನ್ನ ಉತ್ಸಾಹವನ್ನು ಕಡಿಮೆ ಮಾಡುವ ಬದಲು, ಇನ್ನೂ ನನ್ನ ತಯಾರಿ ಜೋರಿನಿಂದಲೇ ನಡೆಸಿದೆ. ಸ್ನೇಹಿತರೆಲ್ಲರಿಗೂ ಸಂಜೆ ಮನೆಗೆ ಬರಲು ಆಹ್ವಾನವಿತ್ತೆವು. ಹಬ್ಬದ ದಿನ ಬೆಳಿಗ್ಗೆ ಗಾಳಿ, ಮಳೆಯ ಸುಳಿವಿಲ್ಲದ್ದರಿಂದ, ರಂಗೋಲಿ ಬಿಟ್ಟು ಬಣ್ಣ ತುಂಬಿದೆ. ಮೆನು ಹಬ್ಬಕ್ಕೆ ಮೊದಲೇ ರೆಡಿಮಾಡಿಕೊಂಡಿದ್ದೆ! ಯಜಮಾನರಿಗೂ ಲೇಬರ್ ಡೇ ಪ್ರಯುಕ್ತ ರಜೆ ಕೊಟ್ಟಿದ್ದು, ನನ್ನ ಅಡಿಗೆ ಕೆಲಸವೆಲ್ಲವೂ ಬೇಗ ಬೇಗ ಮುಗಿಯಿತು. ಸಂಜೆಯಾಗುತ್ತಿದ್ದಂತೆ, ರಂಗೋಲಿಯ ಮೇಲೆ ದೀಪಗಳನ್ನು ಹಚ್ಚಿಟ್ಟೆ. ಸ್ನೇಹಿತರೆಲ್ಲಾ ಬರುವವರೆಗೆ ದೀಪಗಳೆಲ್ಲಾ ಗಾಳಿ ಬೀಸಿದಾಗಲೆಲ್ಲ ಆರುವುದು ನಾನು ಹಚ್ಚುವುದು ನಡೆದೇ ಇತ್ತು. ಎಲ್ಲರೂ ಅವರವರ ಮನೆಗಳಿಂದ ಒಂದೊಂದು ತಿನಿಸನ್ನು ಮಾಡಿಕೊಂಡು ಬಂದಿದ್ದರು ( ನಾನು ಬೇಡವೆಂದು ಹೇಳಿದ್ದರೂ!). ಮರುದಿನವೇ ಬೆಳಿಗ್ಗೆ ಒಂಭತ್ತಕ್ಕೇ ನನ್ನ ಜ್ಯೂರಿ ಕೆಲಸವಿದ್ದರಿಂದ, ಹೇಗೆ ಮಾಡುತ್ತೇನೋ, ನನ್ನನ್ನ ಸೆಲೆಕ್ಟ್ ಮಾಡುತ್ತಾರೋ ಇಲ್ಲವೋ, ಸೆಲೆಕ್ಟ್ ಮಾಡಿದರೆ ಹೇಗೆ ಕೆಲಸ ಮಾಡಬೇಕು, ಇವೇ ಯೋಚನೆಗಳು ತಲೆಯಲ್ಲಿ ಸುತ್ತುತ್ತಿದ್ದರಿಂದ, ಸ್ನೇಹಿತರ ಮಾತುಗಳಿಗೆ ಸುಮ್ಮನೇ ತಲೆದೂಗುತ್ತಿದ್ದೆ. " ಬೆಳಿಗ್ಗೆನಿಂದ ಒಂದೇ ಸಮ ಕೆಲಸ ಮಾಡಿ ಸುಸ್ತಾಗಿರಬೇಕು, ನೀವು ರೆಸ್ಟ್ ಮಾಡಿ" ಎಂದು ಅಂತೂ ಅತಿಥಿಗಳೆಲ್ಲರೂ ಹೊರಟಿದ್ದು ಗಂಟೆ ಹನ್ನೊಂದಾದ ಮೇಲೆಯೇ.

ಜ್ಯೂರಿ ಕೆಲಸಕ್ಕೆ ಹೇಗೆ ಹೋಗಬೇಕೆಂದು, ಅಲ್ಲಿ ಹೇಗೆ ವರ್ತಿಸಬೇಕೆಂದು, ಯಜಮಾನರಿಗೆ ಸಿಟ್ಟು ಬರುವಷ್ಟು ತಲೆ ತಿಂದೆ. " ಬೆಳಿಗ್ಗೆಯಿಂದ ಕೆಲಸ ಮಾಡಿ ಸಾಕಾಗಿದೆ, ನನಗೂ ನಾಳೆ ಬೆಳಿಗ್ಗೆಯೇ ಮುಖ್ಯವಾದ ಮೀಟಿಂಗಿಗೆ ರೆಡಿಯಾಗಬೇಕು " ಎಂದು ಯಜಮಾನರೂ ಅವರ ಲ್ಯಾಪ್ ಟಾಪಿನಲ್ಲಿ ಮುಳುಗಿಬಿಟ್ಟರು. ನನಗೋ ಮರುದಿನದ ಅಲೋಚನೆಯಲ್ಲಿ ನಿದ್ದೆಯೇ ಬರಲಿಲ್ಲ. ಯಜಮಾನರು ನನ್ನನ್ನು ಕೋರ್ಟಿನ ಬಳಿ ಬಿಟ್ಟು ಕೆಲಸಕ್ಕೆ ಹೋಗುವವರಿದ್ದರಿಂದ ಬೆಳಿಗ್ಗೆ ಎಂಟಕ್ಕೇ ರೆಡಿಯಾದೆ. ’ ಒಬ್ಬೊಬ್ಬರನ್ನೇ ಒಳಗೆ ಕರೆದು, ಅದೇನೇನು ಪ್ರಶ್ನೆಗಳನ್ನು ಕೇಳುತ್ತಾರೋ, ಯಾವುದಾದರೂ ಕೇಸಿನ ಬಗ್ಗೆ ನಿನ್ನ ಅಭಿಪ್ರಾಯವೇನೆಂದು ಕೇಳುತ್ತಾರೋ, ಆಗ ಏನು ಹೇಳಬೇಕಪ್ಪಾ....ಹೀಗೆ ಕೇಳಿದರೆ ಹೇಗೆ, ಹಾಗೆ ಕೇಳಿದರೆ ಹೇಗೆ..." ಬರೀ ಇಂತಹದೇ ನಾನು ಊಹಿಸಿಕೊಂಡು ಒಳಗೊಳಗೇ ಸ್ವಲ್ಪ ಭಯವಿತ್ತು. ಅಲ್ಲಿ ನೋಡಿದರೆ ಒಂದು ನರಪಿಳ್ಳೆಯೂ ಇಲ್ಲ! " ಎಲ್ಲರೂ ನಿನ್ನ ಹಾಗೆ ಊರಿಗೆ ಮುಂಚೆ ಬಂದು ಕೂರುತ್ತಾರೆಯೇ?, ಬರುತ್ತಾರೆ ಇರು, " ಎಂದು ನನ್ನನ್ನು ಕೋರ್ಟಿನ ಬಳಿ ಬಿಟ್ಟು ಹೊರಟರು. ಸಮಯ ಹೋದಂತೆಲ್ಲಾ ಒಬ್ಬೊಬ್ಬರಾಗಿ ಬರತೊಡಗಿದರು. ಹೆಚ್ಚು ಕಡಿಮೆ ಒಂದು ಮಿನಿ ಸಂತೆಯಷ್ಟು ಅಭ್ಯರ್ಥಿಗಳು! ಕೆಲವರು ಸ್ನೇಹದ ನಗು ಬೀರಿದ್ದರಿಂದ ಸ್ವಲ್ಪ ಧೈರ್ಯ ಬಂತು. " ಯಾರಾದರೂ ಮಾತಾಡಿಸಿದರೆ, ಮೂಕಿಯಂತೆ ನಿಲ್ಲಬೇಡ " ಎಂದು ಯಜಮಾನರು ಹೇಳಿದ್ದು ನೆನಪಿಗೆ ಬಂದು, ನಾನೂ ನಗುತ್ತಲೇ ಮಾತನಾಡಿ ಒಂದಿಬ್ಬರ ಸ್ನೇಹ ಸಂಪಾದಿಸಿದೆ. ಬಂದಿದ್ದವರೆಲ್ಲ ಹೆಸರನ್ನೂ ಒಂದು ಲಿಸ್ಟ್ ಮಾಡಿದರು. ಒಂದಿಬ್ಬರು ಸ್ಟೂಡೆಂಟುಗಳೂ ಬಂದಿದ್ದನ್ನು ನೋಡಿ, ಇವರೇನು ತೀರ್ಮಾನ ಮಾಡುತ್ತಾರೆಂದು ಇವರುಗಳನ್ನೂ ಕರೆದಿದ್ದಾರೆ? ಎನಿಸಿತು. ನನ್ನ ಜೊತೆಯಲ್ಲಿದ್ದ ಟೀಚರು ಒಬ್ಬರು ಎರಡು ಸಲ ರಿಜೆಕ್ಟ್ ಆಗಿದ್ದರಂತೆ, ಈ ಸಲವೂ ರಿಜೆಕ್ಟ್ ಆದರೆ ಸಾಕು ಅಂದರು. ಅದ್ಯಾಕೆ ರಿಜೆಕ್ಟ್ ಮಾಡಿದರು ಎಂದು ಕೇಳಬೇಕೆನ್ನುವ ನನ್ನ ಕೆಟ್ಟ ಕುತೂಹಲವನ್ನು ಪ್ರಯತ್ನ ಪಟ್ಟು ತಡೆದುಕೊಂಡೆ. " ನೀನೂ ಆಗುವುದಿಲ್ಲ ಬಿಡು!" ಎಂದು ಭವಿಷ್ಯ ನುಡಿದವರಂತೆ ಹೇಳಿ ಬಿಟ್ಟಳು. ’ ಇದೇನಿದು? ’ ಏನೋ ನಕ್ಕರಲ್ಲಾ, ಎಂದು ಮಾತನಾಡಿಸಿದರೆ, ತಾನೂ ಸೆಲೆಕ್ಟ್ ಆಗಲಿಲ್ಲ ಎಂದ ಮಾತ್ರಕ್ಕೆ ನನ್ನನ್ನೂ " ಆಗುವುದಿಲ್ಲ" ಎನ್ನುತ್ತಾಳಲ್ಲ ’ ಎಂದು ಸಿಟ್ಟೇ ಬಂತು. ಅವರನ್ನು ಬಿಟ್ಟು ಸ್ವಲ್ಪ ದೂರ ಹೋಗಿ ನಿಂತೆ.

ಎಲ್ಲಾ ಜ್ಯೂರಿಗಳು ಬಂದ ಮೇಲೆ, ಹೇಗೆ ಸೆಲೆಕ್ಟ್ ಮಾಡುತ್ತಾರೆಂದು, ಸೆಲೆಕ್ಟ್ ಆದವರು ಹೇಗೆ ಕೆಲಸ ಮಾಡಬೇಕಾಗುತ್ತೆಂದು ಒಂದು ಸಣ್ಣ ವಿಡಿಯೋ ಡಾಕ್ಯುಮೆಂಟರಿ ತೋರಿಸಿದರು. ಬಹಳ ಸಂಖ್ಯೆಯಲ್ಲಿ ಅಭ್ಯರ್ಥಿಗಳಿದ್ದರಿಂದ, ಎಲ್ಲರ ಹೆಸರುಗಳನ್ನೂ ಬರೆದುಕೊಂಡು ಲಾಟರಿ ಎತ್ತುವುದಾಗಿ ಹೇಳಿದರು. ನಮ್ಮ ಹೆಸರು ಲಾಟರಿಯಲ್ಲಿ ಬಂದರೂ ಆಪಾದಿತನ ಪರ ಹಾಗೂ ವಿರೋಧಿ ಲಾಯರುಗಳಿಗೆ ನಾವು " ಬೇಕು ಅಥವಾ ಬೇಡ "ವೆನ್ನ ಬಹುದು. ಅವರು ಹೆಸರು ಕೂಗಿದಾಗ ಎಲ್ಲರ ಮುಂದೆ ನಡೆದುಕೊಂಡು ಹೋಗಿ ಜ್ಯೂರಿಗಳಿಗೆಂದೇ ಇರುವ ಜಾಗದಲ್ಲಿ ಕೂರಬೇಕು. ಅಭ್ಯರ್ಥಿ ಎಲ್ಲರ ಮುಂದೆ ನಡೆದುಕೊಂಡು ಬರುವಾಗ, ಆರೋಪಿಯ ಪರ ಮತ್ತು ವಿರೋಧಿ ಲಾಯರುಗಳು ಅವರನ್ನು " ಅಳೆಯುತ್ತಾರೆ" . ಅವರಿಗೆ ಬೇಡವೆನ್ನಿಸಿದರೆ " ಚಾಲೆಂಜ್ " ಅನ್ನುತ್ತಾರೆ. ಅಂದರೆ ರಿಜೆಕ್ಟ್ ಆದಂತೆ! ಅದರಂತೆ ಮೊದಲು ಬಂದ ಹೆಸರು ಯಾರೋ ಸ್ಟೂಡೆಂಟಿನದು. ನೋಡಿದರೆ ಹದಿನೆಂಟು ವಯಸ್ಸಿನವಳಿರಬಹುದು. ಅವಳೂ ರಿಜೆಕ್ಟ್ ಆದಳು. ನಮ್ಮ " ಟೀಚರೂ " ರಿಜೆಕ್ಟು!. ನನ್ನ ಹೆಸರು ಬಂದಾಗ ನಾನೂ ಗಂಭೀರದಿಂದಲೇ ಎಲ್ಲರ ಮುಂದೆ ನಡೆದು ಬಂದೆ, " ನಾನೂ ರಿಜೆಕ್ಟ್! ".


ಬಂದಿದ್ದಕ್ಕೆ ಪೆಟ್ರೋಲ್ ಖರ್ಚು ಕೊಟ್ಟಿದ್ದನ್ನು ತೆಗೆದುಕೊಂಡು ಯಜಮಾನರಿಗೆ ಸ್ವಲ್ಪ ಬೇಸರದಿಂದಲೇ ಪೋನ್ ಮಾಡಿದೆ. " ಹೋಗಲಿ ಬಿಡು, ನಿನ್ನ ಹೆಸರು ನೋಡಿ ಅವರಿಗೆ ಬೇಡವೆನಿಸಿರಬೇಕು" ಎಂದು ಸಮಾಧಾನ ಮಾಡಲೆತ್ನಿಸಿದರೂ, ನನ್ನ ಜೊತೆಯಲ್ಲಿದ್ದ ಮತ್ತೊಬ್ಬ ಇಂಡಿಯನ್ ಸೆಲೆಕ್ಟ್ ಆದುದು ಹೇಳಿ ನನ್ನ ದುಃಖ ಮತ್ತಷ್ಟು ತೋಡಿಕೊಂಡೆ. " ಸರಿ ...ಸರಿ...ದಾರಿಯಲ್ಲಿ ಅತ್ತೂ ಕರೆದು ಮಾಡುವುದು ಬೇಡ, ಇನ್ನೇನು ಹೊರಟೆ, ನಿನ್ನನ್ನು ಮನೆಗೆ ಬಿಟ್ಟು, ನಾನು ವಾಪಸ್ ಕೆಲಸಕ್ಕೆ ಬರುತ್ತೇನೆಂದು" ಯಜಮಾನರು ನನ್ನನ್ನು ತಿರುಗಿ ಮನೆಗೆ ಬಿಟ್ಟರು.


ನನ್ನ " ಟೀಚರು" ಮೊದಲೇ ನಾನು ಸೆಲೆಕ್ಟ್ ಆಗುವುದಿಲ್ಲವೆಂದು ಹೇಳಿದ್ದನ್ನು ಯಜಮಾನರಿಗೆ ಹೇಳಿದೆ. " ಹೌದು ಅವರು ಹೇಳಿದ್ದು ಸರಿ. ಇಲ್ಲಿ ಹೆಚ್ಚಿನವರಿಗೆ ಜ್ಯೂರಿ ಕೆಲಸ ಮಾಡಲು ಮನಸ್ಸಿರುವುದಿಲ್ಲ. ಅದಕ್ಕಾಗಿಯೇ ತಮ್ಮನ್ನು ಸೆಲೆಕ್ಟ್ ಮಾಡದಿರಲಿ ಎಂದು ಟಿಪ್ ಟಾಪಾಗಿ ಬರುತ್ತಾರೆ, ಆರೋಪಿಗಳ ಪರ ಅಥವಾ ವಿರೋಧಿಗಳಲ್ಲಿ ಯಾರಾದರೂ " ಬೇಡ"ವೆಂದು ಹೇಳಿಯೇ ಹೇಳುತ್ತಾರೆ. ಹಾಗೆ ನೋಡಿದರೆ, ನೀನೇ ರಿಜೆಕ್ಟ್ ಆದುದಕ್ಕೆ ಮುಖ ಬಾಡಿಸಿಕೊಂಡಿರುವುದು, ನನಗೂ ಇಷ್ಟವಿಲ್ಲ ಜ್ಯೂರಿ ಡ್ಯೂಟಿ ಮಾಡುವುದು" ಎಂದರು. " ಮೊದಲೇ ಹೇಳಿದ್ದರೆ, ಇಷ್ಟೆಲ್ಲಾ ರೆಡಿಯಾಗುತ್ತಲೇ ಇರಲಿಲ್ಲ, ಸುಮ್ಮನೇ ನಾನೂ ಹೇಗಿರುತ್ತದೋ, ಏನೋ ಎಂದೆಲ್ಲಾ ತಲೆ ಕೆಡಿಸಿಕೊಂಡಿದ್ದಾಯಿತು ಎಂದು ಹರಿಹಾಯ್ದೆ. " ಜ್ಯೂರಿ ಕೆಲಸ ಬಂತು, ಬಂತು ಎಂದು ಕುಣೀತಿದ್ದಲ್ಲಾ, ಕುಣಿದು ಕೋ, ನಿನಗೂ ಸ್ವಲ್ಪ ಅನುಭವವಾಗಲೆಂದು ಸುಮ್ಮನಿದ್ದೆ" ಎಂದರು.


ಮರುದಿನ ಸಂಜೆ, ಮನೆ ಮುಂದೆ ದೀಪ ಹಚ್ಚಿಸಿ, ಇಬ್ಬರೂ ನಕ್ಷತ್ರಕಡ್ಡಿಗಳನ್ನು ಹಚ್ಚಿಸಿಕೊಂಡು, ಊರಿನಲ್ಲಿ ಹಬ್ಬದ ದಿನ ನಮ್ಮೆಲ್ಲರ ಸಡಗರ, ಹೊಸ ಬಟ್ಟೆ, ಹಬ್ಬದ ಅಡಿಗೆ, ಸಂಜೆ ದೀಪ ಹತ್ತಿಸುವುದನ್ನೇ ಕಾಯುತ್ತಿದ್ದು, ಪಟಾಕಿ ಹೊಡೆಯುತ್ತಿದ್ದ ಮಜಾ, ಯಾರ ಮನೆ ಮುಂದೆ ಹೆಚ್ಚು ಪೇಪರ್ ಬಿದ್ದಿರುತ್ತದೋ, ಅವರೇ ಜಾಸ್ತಿ ಪಟಾಕಿ ಹೊಡೆದವರೆಂದು ತೀರ್ಮಾನಿಸುತ್ತಿದುದು, ಆದಷ್ಟು ಪಟಾಕಿ ಪೇಪರಗಳನ್ನು ಮನೆಯ ಮುಂದೆಯೇ ಬೀಳುವಂತೆ ಜಾಗ್ರತೆ ವಹಿಸುತ್ತಿದು, ಎಲ್ಲವನ್ನೂ ಮೆಲುಕು ಹಾಕಿಕೊಂಡು ಕೂತಿದ್ದೆವು. ಮನೆಗೆ ಫೋನ್ ಮಾಡಿದರೆ, ಹಿನ್ನೆಲೆಯಲ್ಲಿ ಬರೀ " ಢಾಂ ಢೂಂ"ಗಳೇ! ಮಳೆ, ಗಾಳಿಯಿದ್ದರೂ ರಂಗೋಲಿ ಬಿಟ್ಟು, ಬಣ್ಣ ತುಂಬಿದ್ದ ಫೋಟೋ ನೋಡಿ ಇಬ್ಬರ ಮನೆಯವರಿಂದಲೂ " ಪಟಾಕಿ ಇಲ್ಲದಿದ್ದರೇನಂತೆ? ನಮಗಿಂತ ನೀವೇ ಚೆನ್ನಾಗಿ ಹಬ್ಬ ಮಾಡಿದ್ದೀರಲ್ಲ!" ಎಂದು ಹೊಗಳಿಸಿಕೊಂಡೆವು.

ನನ್ನ ದೀಪಾವಳಿಯ ರಂಗೋಲಿಗಳು.
12 comments:

tiruka said...

ಆಕೆ ನಿಮ್ಮ ಟೀಚರಮ್ಮ ಅಲ್ಲ! ಚೀಟರಮ್ಮ :(
ಹೋಗಲಿ ಬಿಡಿ, ಇದೊಂದು ಅನುಭವ ಆದ ಹಾಗಾಯ್ತು - ಹಾಗೇನಾದರೂ ನೀವು ಜ್ಯೂರಿಯಾಗಿ ಸೆಲೆಕ್ಟಾಗಿದ್ದರೆ, ಬ್ಲಾಗಿನ ಗತಿ :o
ಬ್ಲಾಗಿನ ಬಾಗಿಲನ್ನು ಪ್ರತಿ ಬಡಿದೂ ಬಡಿದೂ, ಆಗುವ ನಮ್ಮ ಕೈಗಳ ಗತಿ
ದೀಪಾವಳಿ ಸಂಚಿಕೆಗಾಗಿ ವರ್ಷವಿಡೀ ಕಾಯ್ದು ಕುಳಿತುಕೊಳ್ಳುವ ಈ ಓದುಗರನ್ನು ಎಂದೂ ಮರೆಯಬೇಡಿ

ಎಲ್ಲೂ ಹೋಗ್ಬೇಡಿ ಅಕ್ಕಮ್ಮೋ ಎಲ್ಲೂ ಹೋಗ್ಬೇಡಿ
ಬ್ಲಾಗನು ಬಿಟ್ಟು ಅಲ್ಲಿ ಇಲ್ಲಿ ಎಲ್ಲೂ ಹೋಗ್ಬೇಡಿ ... :P

ಈ ಸಲ ಬರಹದಲ್ಲಿ ಚತ್ಕಾರ ಷಟ್ಕಾರಗಳಿಲ್ಲದಿದ್ದರೂ, ರೋಚಕ ಓಟವಂತೂ ಇದ್ದೆ ಇದೆ. ಬಹಳ ಸಂತಸ ತಂದದ್ದೇನೆಂದರೆ, ಸುಂದರ ರಂಗೋಲಿಗಳು, ಅದರಲ್ಲಿಟ್ಟು ಜಗತ್ತಿಗೆ ತೋರಿಸಿರುವ ದೀಪಗಳು.

ನಿಮ್ಮಿಂದ ಜಗವು ಚಿರಂತನ ದೇದೀಪ್ಯಮಾನವಾಗಿರಲಿ

ರೂpaश्री said...

ಸುಂದರವಾದ ರಂಗೋಲಿಗಳು ಗಿರಿಜ ಅವರೆ. ಜ್ಯೂರಿ ಕೆಲಸಕ್ಕೆ ಕರೆ ಬಂದಿದಕ್ಕೆ ಅಭಿನಂದನೆಗಳು !! ಇಲ್ಲಿ, US ಪ್ರಜೆಗಳಿಗೆ ಮಾತ್ರ ಆ ಅವಕಾಶವಿದೆ.

Lakshmi S said...

ಮನಸ್ಸಿಗೆ ಬೇಜಾರ್ ಮಾಡ್ಕೋಬೇಡಿ ಜ್ಯೂರಿಗೆ ಸೆಲೆಕ್ಟ್ ಆಗ್ಲಿಲ್ಲ ಅಂತ...there is always a next time ಅಲ್ವಾ ? ರಂಗೋಲಿಗಳು ತುಂಬಾ ಚೆನ್ನಾಗಿವೆ.ನಿಜ್ವಾಗ್ಲೂ..ಭಾರತದಲ್ಲಿದ್ದು ನಾವು ಈ ಥರ ದೀಪಾವಳಿ ಆಚರಿಸಲಿಲ್ಲ...ನೀವು ಮೀರಿಸಿಬಿಟ್ಟಿರಿ ಬಿಡಿ :-)

shivu K said...

ರಂಗೋಲಿಗಳು ಅವುಗಳಿಗೆ ಇಟ್ಟ ದೀಪಗಳು ತುಂಬಾ ಚೆನ್ನಾಗಿವೆ. ನೀವು ನಿಜಕ್ಕೂ ಅಲ್ಲಿ ನಮ್ಮ ರಂಗೋಲಿ ಬಿಟ್ಟು ನಮ್ಮ ದೇಶೀತನವನ್ನು ಮೆರೆದಿದ್ದೀರಿ. very good.
ಇನ್ನು ನಿಮ್ಮ ಜ್ಯೂರಿ ಕೆಲಸ ಎರಡು ಹೊಸ ವಿಚಾರಗಳೆನಿಸಿದವು. ನಿಮ್ಮ ದೀಪಾವಳಿಗೆ ನನ್ನ ಶುಭಾಷಯಗಳು.

Anonymous said...

ದೀಪಾವಳಿ ಹಬ್ಬದ ರಂಗೋಲಿ ಚಿತ್ರಗಳನ್ನು ನೋಡಿದರೆ ಹಬ್ಬವನ್ನು ಚನ್ನಾಗಿ ಆಚರಿಸಿದಂತಿದೆ. ಚಿತ್ರಗಳು ತುಂಬಾ ಚನ್ನಾಗಿವೆ. ನಮ್ಮ ಮನೆಯಿಂದ ನಿಮ್ಮ ಮನೆಗೆ,ತಡವಾಗಿಯಾದರೂ,ದೀಪಾವಳಿ ಹಬ್ಬದ ಹಾರ್ಧಿಕ ಶುಭಾಶಯಗಳು.

ಪಂಚಾಯತನಾಗಿ(Juror) ನ್ಯಾಯ ದೊರಕಿಸಿಕೊಡುವುದು ಪ್ರತಿಯೊಬ್ಬರ ನಾಗರಿಕ ಕರ್ತವ್ಯ, ಅವಕಾಶ ಒದಗಿ ಬಂದರೆ ಪ್ರತಿಯೊಬ್ಬರೂ ಭಾಗವಹಿಸಲೇಬೇಕು ಎಂಬುದು ನನ್ನ ಅಭಿಪ್ರಾಯ. Ministry of Justice ಕರೆಗೆ ಸಮ್ಮತಿಸಿ ನ್ಯಾಯಾಲಯಕ್ಕೆ ತೆರಳಿ ನೀವು ನಿಮ್ಮ ನಾಗರಿಕ ಕರ್ತವ್ಯವನ್ನು ಮಾಡಿದ್ದಿರಿ. ನಿಮ್ಮನ್ನು ಅರಿಸಲ್ಲಿಲ್ಲ ಅದು ಬೇರೆ ವಿಷಯ.

ಅಂತರ್ಜಾಲದಲ್ಲಿ ಹಲವರ ಅನುಭವ ಓದಿದಾಗ New Zealand ನಲ್ಲಿ ನೀವು ಹಾಕಿರುವ ಬಟ್ಟೆ ಹಾಗು ಕಾಣುವ ರೀತಿಯಿಂದ ನೀವು ಸುಸಂಕೃತರು, ಓದಿದವರು, ವಿದ್ಯಾವಂತರ ಹಾಗೆ ಕಂಡರೆ ನಿಮ್ಮನ್ನು challenge ಮಾಡುತ್ತಾರೆ ಎಂದು ಅನಿಸುತ್ತದೆ. ಇದು ಹಸ್ಯವೋ ಇಲ್ಲ ನಿಜವೋ ಗೊತ್ತಿಲ್ಲ. ಹಾಸ್ಯವಿದ್ದರೆ ಒಳ್ಳೆಯದು!

JH

NilGiri said...

@ Sir,
ರಂಗೋಲಿ, ದೀಪಗಳನ್ನು ಮೆಚ್ಚಿಕೊಂಡು ನಮ್ಮನ್ನು ಆಶೀರ್ವದಿಸಿದಕ್ಕೆ ಧನ್ಯವಾದಗಳು.

**********************
@ Roopa,
ಥ್ಯಾಂಕ್ಸ್ ರೂಪ. ಇಲ್ಲಿಯೂ ಅಷ್ಟೇ citizens ಮತ್ತು PR ( Permanent Resident) ಆದವರಿಗೆ ಮಾತ್ರ ಕರೆಯುತ್ತಾರೆ.
********************
@ Lakshmi,
ಬೇಜಾರು ಮೊದಲು ಆಗಿದ್ದು ನಿಜ! ಆಮೇಲೆ ಇಲ್ಲಿ ಕೆಲವರ ಅನುಭವ ಕೇಳಿದ ಮೇಲೆ ಸರಿಯಾದೆ :D. ರಂಗೋಲಿಗಳನ್ನು ಮೆಚ್ಚಿಕೊಂಡಿದ್ದಕ್ಕೆ ಥ್ಯಾಂಕ್ಸ್.
********************
@ Shivu,
ಥ್ಯಾಂಕ್ಸ್ ಶಿವು ಅವರೇ. ನನ್ನ ರಂಗೋಲಿ ನೋಡಿ, ಪಕ್ಕದ ಮನೆಯವನು ಅವನ ಕ್ರಿಸ್ ಮಸ್ಸಿಗೆ ಬಿಟ್ಟುಕೊಡು ಎಂದು ಕೇಳಿದ್ದಾನೆ :)
******************
@ Jh,

ಹಾಸ್ಯ ಅಲ್ಲ JH. ಇಲ್ಲಿ ನಿಜವಾಗಿಯೂ ಹಾಗೆಯೇ ಮಾಡುತ್ತಾರಂತೆ. ಬಹಳ ಜನರ ಅಭಿಪ್ರಾಯವೂ ಇದೇ ಆಗಿದೆ.

ನಿಮಗೂ ನಮ್ಮ ಶುಭಾಶಯಗಳು.

******************

Anonymous said...

CHengide Girija!...and Rongoli too...
rgds
Sangeetha

ಸಿಮೆಂಟು ಮರಳಿನ ಮಧ್ಯೆ said...

ಬೇಜಾರು ಮಾಡ್ಕೊಬೇಡಿ.. ಮುಂದಿನ ಸಾರಿ ನೀವೆ ಸಿಲೆಕ್ಟ್ ಅಗುತ್ತೀರಿ. ತಡವಾಗಿಯಾದರೂ ದೀಪವಳಿಯ ಶುಭಾಶಯಗಳು.. ಲೇಖನ ಚೆನ್ನಾಗಿದೆ..

Shubha said...

You have written it very well Girija. Deepavaliya sadagara nijakko nammoralle chenda.....Jury kelasa nijavagaloo easy alla... adraoo adakke kare bandude khushi... opputtene....

keep writing.It is always a pleasure to read your work.

sunaath said...

ಗಿರಿಜಾ,
ಈ ಹೊಸ ಅನುಭವವನ್ನು ಓದಿ ವಿಸ್ಮಯವಾಯಿತು.NZನಲ್ಲಿ ಹೀಗೂ ಇದೆಯಾ!
ವಿದೇಶಿ ನೆಲದಲ್ಲಿ ಸುಂದರವಾದ ರಂಗೋಲಿ ಬೆಳಗಿಸಿದ್ದಕ್ಕಾಗಿ ಅಭಿನಂದನೆಗಳು.

Harish - ಹರೀಶ said...

ಗಿರಿಜಾ ಅವರೇ, ನಿಮ್ಮ ದೀಪಾವಳಿಯ ಸಡಗರ ನೋಡಿ ಅಸೂಯೆಯೆನಿಸಿತು :-(

ವಿದೇಶದಲ್ಲಿದ್ದರೂ ನಮಗಿಂತ ಚೆನ್ನಾಗಿ ದೀವಳಿಗೆಯನ್ನಾಚರಿಸಿರುವ ನಿಮಗೆ ಹ್ಯಾಟ್ಸಾಫ್!

NilGiri said...

@, ಸಿವಿಲ್ ಇಂಜನೀಯರರಿಗೆ,

ಈಗ ಬೇಜಾರಿಲ್ಲ! ಮತ್ತೊಮ್ಮ ನನ್ನ ಟರ್ನ್ ಬರಲು ಸಿಕ್ಕಾಪಟ್ಟೆ ಟೈಮಿದೆ :D ಲೇಖನ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು.

*************************
@ ಸಂಗೀತಾ, ಶುಭಾ - ಧನ್ಯವಾದಗಳು.

*************************
@ ಕಾಕಾ, ಧನ್ಯವಾದಗಳು. ಇಲ್ಲಿಯವರದು ಇಲ್ಲಿರುವವರೆಗಷ್ಟೇ ಚಂದ. ನಾವಂತೂ ಇಲ್ಲಿ ನೆಲೆ ನಿಲ್ಲುವವರಲ್ಲ!

**********************
@ Harish,
ನಿಮ್ಮೆಲ್ಲರ ಢಾಂ ಢೂಂ ಪಟಾಕಿಯ ಹಬ್ಬ ನೋಡಿ ನಾನು ಹೊಟ್ಟೆ ಉರಿದುಕೊಂಡರೆ, ನೀವೊಳ್ಳೆ!

ಅದೇನೋ ಹೇಳುತ್ತಾರಲ್ಲ ಹಂಗೆ ನಾವು. ಬಿಟ್ಟ ಬಂದ ಮೇಲೆಯೇ ಅಕ್ಕರೆ ಜಾಸ್ತಿ.