Thursday 16 October 2008

ಮಾತಿನಲ್ಲೇ ಮಣೆ ಹಾಕುವವರು

" ಊರಿನಿಂದ ಹೊಸಬರು ಇಲ್ಲಿಗೆ ಬಂದಿದ್ದಾರೆ, ಹೋಗಿ ಮಾತನಾಡಿಸಿಕೊಂಡು ಬರೋಣ" ಎಂದು ಸ್ನೇಹಿತರು ಫೋನ್ ಮಾಡಿದ್ದರು. ನಾನೂ " ಹೂಂ, ಹೋಗೋಣ.."ಇವತ್ತು, ನಾಳೆ" ಎಂದು ದಿನ ತಳ್ಳುತ್ತಲೇ ಬರುತ್ತಿದ್ದೆ. ಗುರುತು ಪರಿಚಯವಿಲ್ಲದವರ ಮನೆಗೆ ಏನೆಂದು ಹೋಗುವುದು? ನಮ್ಮ ಮನೆಗೆ ಕರೆಯೋಣ" ಎಂಬ ನನ್ನ ಮಾತಿಗೆ ಸ್ನೇಹಿತರು, " ಸುಮ್ಮನೆ ಹೋಗಿ ಬರುವಾ, ಹೋಗುವ ಮೊದಲು ಫೋನ್ ಮಾಡಿದರಾಯಿತಲ್ಲ ಎಂದಿದ್ದರೂ ನನಗೆ ಅದ್ಯಾಕೋ ಸರಿಯಲ್ಲ ಅನ್ನಿಸುತ್ತಿತ್ತು. ಊರಿನಲ್ಲಾದರೆ, ಸೀದಾ ಬಾಗಿಲು ತಟ್ಟಿ, ನಾವು ಇಂತಹವರು, ನೀವು ಎಲ್ಲಿಂದ? ಎಂತೆಲ್ಲಾ ನಮ್ಮ ಕಂತೆ ಪುರಾಣ ಒದರಿ ಫ್ರೆಂಡ್ಸ್ ಮಾಡಿಕೊಳ್ಳಬಹುದಿತ್ತು. ಇಲ್ಲಿ ಬಂದ ನಂತರ ಊರಲ್ಲಿ ಇದ್ದ ಹಾಗೆಯೇ ಇರುತ್ತಾರೆಯೇ? ಊರಿಗೆ ಬಂದವರು ನೀರಿಗೆ ಬರದಿರುತ್ತಾರೆಯೇ? ಹಾಗೆಯೇ ಊರಿಗೆ ಬಂದವರು ವಾರಕ್ಕೊಮ್ಮೆ ನಡೆಯುವ veggie ಮಾರುಕಟ್ಟೆಗೆ ಬರಲೇಬೇಕು. ಆಗ ಸಿಕ್ಕಿ ಮಾತನಾಡಿಸಿದರೆ....., ಮನೆಗೆ ಕರೆದರೆ......, ಹೋಗೋಣ ಎಂದಿದ್ದೆ.



ಅಂತೂ ಒಂದು ಶನಿವಾರ ಬೆಳಿಗ್ಗೆ ಮಾರುಕಟ್ಟೆಯಲ್ಲಿ ಸಿಕ್ಕರು. ಅವರನ್ನು ಮುಖತಃ ನೋಡಿರದಿದ್ದರೂ ಮಾರುಕಟ್ಟೆಗೆ ಹೊಸಬರೆಂಬುದಂತೂ ಗೊತ್ತಾಯಿತು. ಯಜಮಾನರು, " ನೀನು ಈಗ ಮೇಲೆ ಬಿದ್ದು ಫ್ರೆಂಡ್ ಮಾಡಿಕೊಳ್ಳುವುದೂ ಬೇಡ, ಅಮೇಲೆ ಅವರೇನೋ ಅಂದರು ಅಂತ ಪ್ರಪಂಚ ತಲೆಯ ಮೇಲೆ ಬಿದ್ದವರ ತರಹ ಶೋಕಾಚರಣೆ ಮಾಡುವುದೂ ಬೇಡ" ಎಂದು ನನ್ನನ್ನು ತಡೆದಿದ್ದರಿಂದ, ನಾನು ಸುಮ್ಮನಿದ್ದೆ. ಗಂಡ ಹೆಂಡತಿ ವ್ಯಾಪಾರ ಮುಗಿಸಿ ನಮ್ಮ ಎದುರಿಗೇ ಸಿಕ್ಕರು. ನಾವು ಇನ್ನೂ ಬರೀ ಕೈನಲ್ಲಿ ಸುತ್ತುತ್ತಿದ್ದುದನ್ನು ಕಂಡು, ನಾವು ಲೇಟಾಗಿ ಬಂದೆವೇನೋ ಎಂಬಂತೆ, " ಟೊಮೋಟೋ ಮತ್ತು ದಪ್ಪ ಮೆಣಸಿನಕಾಯಿ ಮುಗಿದೇ ಹೋಯಿತು" ಎಂದು ಹಿಂದಿಯಲ್ಲಿ ಮಾತನಾಡಿಸಿದರು. " ಟೋಮೋಟೋ ಬೇಡ ನಮಗೆ, ಸುಮ್ಮನೇ ಯಾವುದಾದರೂ ಹೂವಿನ ಗಿಡಗಳು ಸಿಗುತ್ತವೇನೋ, ಎಂದು ನೋಡುತ್ತಿದ್ದೇವೆ" ಎಂದು ಯಜಮಾನರು ಉತ್ತರಿಸಿದರು. " ಇಲ್ಲೇನೂ ತರಕಾರಿಗಳು ಸಿಗುವುದೇ ಇಲ್ಲವಲ್ಲ, ರೇಟೂ ಜಾಸ್ತಿ" ಎಂದು ನಾನು ಇಲ್ಲಿಗೆ ಬಂದ ಹೊಸತರಲ್ಲಿ ಗೊಣಗಿದಂತೆ ಅವರೂ ಕಷ್ಟ ತೋಡಿಕೊಂಡರು. " ಹೌದು, ಒಮ್ಮೊಮ್ಮೇ ಸೂಪರ್ ಮಾರುಕಟ್ಟೆಯಲ್ಲೇ ಕಡಿಮೆ ಸಿಗುತ್ತದೆ, ಕೆಲವು ತರಕಾರಿ, ಸೊಪ್ಪುಗಳನ್ನು ಮನೆಯ ಕೈತೋಟದಲ್ಲಿ ಬೆಳೆದುಕೊಳ್ಳುತ್ತೇವೆ." ಎಂದು ನಾನು ಸ್ವಲ್ಪ ಜಂಭ ಕೊಚ್ಚಿಕೊಂಡೆ. " ಓಹ್ ಹೌದಾ! ಒಮ್ಮೆ ನೋಡಬೇಕು " ಎಂದು ಅವರ ಹೆಂಡತಿಯೂ ಉತ್ಸಾಹ ತೋರಿದ್ದರಿಂದ, " ಮನೆಗೆ ಬನ್ನಿ, ಹೇಗೂ ನಾಳೆ ಭಾನುವಾರ" ಎಂದು ನಾವು ಆಹ್ವಾನವಿತ್ತೆವು. ಅವರೂ ಒಂದೆರಡು ಕ್ಷಣ ಸುಮ್ಮನಿದ್ದವರು, "ಸುಮ್ಮನೇ ನಿಮಗ್ಯಾಕೆ ತೊಂದರೆ " ಎಂದರು." ನಮಗೇನೂ ತೊಂದರೆಯಿಲ್ಲ, ನೀವು ನಾಳೆ ಮಧ್ಯಾಹ್ನ ನಮ್ಮ ಮನೆಗೆ ಬನ್ನಿ ಎಂದು" ಅವರಿಗೆ ನಮ್ಮ ಅಡ್ರೆಸ್ ಹೇಳಿ ಹೊರಟೆವು.


ಸ್ನೇಹಿತರು ಇಂಡಿಯಾಗೆ ಹೋಗಿದ್ದರಿಂದ, ಇವರ ಬಗ್ಗೆ ನನಗೇನು ಗೊತ್ತಿರಲಿಲ್ಲ. ಮನೆಗೆ ಕರೆದ ಮೇಲೆ, ಮನೆ ನೀಟಾಗಿ ಇರಬೇಡವೆ? ಹಾಗೆಂದು ನನ್ನ ಮನೆಯನ್ನು ಕ್ಲೀನಾಗಿ ಇಟ್ಟುಕೊಂಡಿಲ್ಲವೆಂತಲ್ಲ! ಆದರೂ ಯಾರಾದರೂ ಬರುತ್ತಾರೆಂದರೆ, ಮನೆ ಇನ್ನೂ ಫಳಫಳ ಎನಿಸಬೇಡವೇ? ಊಟಕ್ಕೆ ಏನು ಅಡಿಗೆ ಮಾಡುವುದೆಂದು ತೀರ್ಮಾನವಾಯಿತು. ಮೊದಲ ಭೇಟಿಯಲ್ಲಿ ಅಷ್ಟೇನೂ ಸ್ನೇಹಮಯಿಗಳೆಂದು ನನಗೆ ಅನಿಸಿಲ್ಲವಾದ್ದರಿಂದ, ಈಗ ಹೇಗೂ ಬರುತ್ತಾರಲ್ಲ, ಅವರ ಸ್ವಭಾವ ಹೇಗೆಂದು ಗೊತ್ತಾಗುತ್ತದೆ. ನನಗೆ ಸರಿ ಅನ್ನಿಸಿದರೆ ಫ್ರೆಂಡ್ ಮಾಡಿಕೊಂಡರಾಯಿತು, ಇಲ್ಲದಿದ್ದರೆ ನನ್ನ ಪಾಡಿಗೆ ಸುಮ್ಮನೇ ಇರುವುದು ಎಂದುಕೊಂಡಿದ್ದೆ.


ಮರುದಿನ ಅವರು ಹೇಳಿದ ಸಮಯಕ್ಕೆ ಸರಿಯಾಗಿಯೂ ಬಂದರು. ಯಜಮಾನರು ಬಲೇ ಉತ್ಸಾಹದಿಂದ, ಗೋಬಿ ಮಂಚೂರಿ, ಪಲಾವ್ ಮಾಡಿದ್ದರು. ನಾನು ಚಪಾತಿ, ಪಲ್ಯ, ಅನ್ನ ಸಾರು ಎಂದು ಎಲ್ಲವನ್ನೂ ನೀಟಾಗಿ ಜೋಡಿಸಿಟ್ಟಿದ್ದೆ. ಬಂದವರು, ನನ್ನನ್ನೂ, ನನ್ನ ಕೈತೋಟವನ್ನೂ, ನನ್ನ ಅಡಿಗೆಯನ್ನೂ ಹಾಡಿ ಹೊಗಳಿದ್ದರಿಂದ ಅಟ್ಟ ಏರಿದ್ದೆ! ನಮ್ಮ ತೋಟದ ಪಾಲಾಕ್, ಮೆಂತ್ಯ, ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ ಎಲ್ಲವನ್ನೊ ಕಿತ್ತು ಕವರಿಗೆ ಹಾಕಿ ಕೊಟ್ಟೆ. ಆದರೂ ಅವರುಗಳ ಮಾತು ಒಮ್ಮೊಮ್ಮೆ ಅತೀ ಎನಿಸಿದ್ದರೂ, ಹೊಗಳಿಕೆಯಲ್ಲಿ ತೇಲುತ್ತಿದ್ದ ನನಗೆ " ಪರವಾಗಿಲ್ಲ" ಅನ್ನಿಸಿತ್ತು. ರಾತ್ರಿ ಏಳರವರೆಗೂ ಅವರುಗಳು ಕೂತದ್ದರಿಂದ, ಇನ್ನು ಇಷ್ಟು ಹೊತ್ತಿದ್ದ ಮೇಲೆ, ರಾತ್ರಿ ಊಟ ಮಾಡಿಕೊಂಡೇ ಹೋಗಿ ಅನ್ನದೇ ವಿಧಿಯಿರಲಿಲ್ಲ. ಅವರುಗಳೂ " ಓಹೋ! ನೀವು ನಮಗೆ ಇಷ್ಟು ಉಪಚಾರ ಮಾಡಿದರೆ ನಾವು ಪ್ರತೀವಾರವೂ ಇಲ್ಲಿಗೇ ಬರುತ್ತೇವೆ" ಎಂದಿದ್ದನ್ನು ನಾನು ತಮಾಷೆಯಾಗಿಯೇ ತೆಗೆದುಕೊಂಡೆ. ಅಂತೂ ರಾತ್ರಿ ಊಟ ಮುಗಿಸಿ, ಇನ್ನೊಮ್ಮೆ ಹೊಗಳಿ ಹೊರಟರು.


ನನ್ನನ್ನು ಹೊಗಳಿದ್ದರಿಂದಲೋ ಏನೋ, ಮಧ್ಯಾಹ್ನ ಊಟಕ್ಕೆ ಬಂದವರು, ರಾತ್ರಿಯದೂ ಮುಗಿಸಿ ಹೋದ ಅವರುಗಳು ಮೇಲೆ ಏನೂ ಗೊಣಗದೆ, " ಮಾಡಿದ್ದ ಅಡಿಗೆಯೆಲ್ಲವೂ ಖಾಲಿಯಾಯಿತು, ಬಹುಷಃ ನನ್ನ ಅಡಿಗೆ ನಿಜವಾಗಿಯೂ ಚೆನ್ನಾಗಿದ್ದರಬೇಕು" ಎಂದು ನನ್ನ ಬೆನ್ನು ನಾನೇ ಚಪ್ಪರಿಸಿಕೊಂಡೆ. " ನನಗೇನೋ, ಒಳ್ಳೆಯವರಂತೆ ಕಾಣಿಸಿದರು, ಸ್ವಲ್ಪ ಮಾತು ಜಾಸ್ತಿ ಅಷ್ಟೇ, ನಿಮ್ಮ ಫ್ರೆಂಡ್ ಊರಿಂದ ಬಂದ ಮೇಲೆ ಇವರ ಬಗ್ಗೆ ಹೇಳಬೇಕು." ಎಂಬ ನನ್ನ ಮಾತಿಗೆ ಯಜಮಾನರೇನೂ ಪ್ರತಿಯಾಡಿರಲಿಲ್ಲ. " ಜಾಸ್ತಿ ಹಚ್ಚಿಕೊಳ್ಳಬೇಡ ಇವರನ್ನು " ಎಂದರಷ್ಟೇ.

ಒಂದೆರಡು ದಿನಗಳಾದ ಮೇಲೆ, ಸಂಜೆ ಫೋನ್ ಮಾಡಿ, ಈ ವೀಕೆಂಡು ಎಲ್ಲಿಗೂ ಹೋಗದಿದ್ದರೆ ನಮ್ಮ ಮನೆಗೆ ಬನ್ನಿ ಎಂದು ಕರೆಯಿತ್ತರು. ನಮಗೂ, ವಾರವೆಲ್ಲ ಬಿಸಿಲಿದ್ದು, ವೀಕೆಂಡುಗಳಲ್ಲಿ ಮಳೆ, ಗಾಳಿ ಜೋರಾಗಿರುತ್ತಿದ್ದರಿಂದ ಎಲ್ಲಿಯೂ ಹೋಗುವ ಪ್ಲಾನ್ ಹಾಕಿರಲಿಲ್ಲ. " ಆಗಲಿ ಬರುತ್ತೇವೆ, ಏನಾದರೂ ಅಡಿಗೆ ಮಾಡಿಕೊಂಡು ಬರಲೇ " ಎಂಬ ನನ್ನ ಪ್ರಶ್ನೆಗೆ " ನಿಮ್ಮಿಷ್ಟ" ಎಂದಿದ್ದರಿಂದ, ಏನಾದರೂ ಸ್ವೀಟ್ಸ್ ಮಾಡಿಕೊಂಡು ಹೋದರಾಯಿತು ಎಂದುಕೊಂಡೆ.


ಅವರ ಮನೆ ಊರಿನ ಆ ದಿಕ್ಕಿಗೆ ಇದ್ದರಿಂದ ಬೇಗನೆ ಹೊರಡುವ ಎಂದಿದ್ದರು ಯಜಮಾನರು. ಕ್ಯಾರೆಟ್ ಪಾಯಸ ಮಾಡಿಕೊಂಡು ಎಷ್ಟೇ ಬೇಗ ಹೊರಡ ಬೇಕೆಂದರೂ ನನ್ನ ಸಿಂಗಾರ, ಬಂಗಾರ ಮುಗಿಸಿ ಮನೆ ಬಿಡುವ ಹೊತ್ತಿಗೆ ಸ್ವಲ್ಪ ಲೇಟೇ ಆಗಿತ್ತು. " ಶೆಟ್ಟಿ ಸಿಂಗಾರವಾಗೋ ವೇಳೆಗೆ ಊರೇ ಮುಳುಗಿತ್ತಂತೆ!" ಎಂದ ಯಜಮಾನರ ಗೊಣಗಾಟ ಕೀವಿಗೆ ಬೀಳದವಳಂತೆ, " ಹೋಗುತ್ತಿರುವುದು ಊಟಕ್ಕೆ ತಾನೇ, ಇಂಟರ್ವ್ಯೂಗಲ್ಲವಲ್ಲ! " ಎಂದು ಕೇಳಿಸದವಳಂತೆ ಕಾರು ಹತ್ತಿದೆ.


ಮನೆ ಸಾಕಷ್ಟು ದೊಡ್ಡದಾಗಿದ್ದು, ನೀಟಾಗಿ ಇಟ್ಟಿದ್ದರು. ಮನೆಯಲ್ಲಿ ಹೇಳಿಕೊಳ್ಳುವಂತಹ ಸಾಮಾನುಗಳೇನೂ ಕಣ್ಣಿಗೆ ಬೀಳದಿದ್ದರಿಂದ ಇನ್ನೂ ಹೊಸಬರಲ್ಲವೇ, ಸಮಯ ಬೇಕಾಗುತ್ತದೆ ಎಂದುಕೊಂಡೆ. ಕೈತೋಟಕ್ಕಾಗಿ ನೆಲವನ್ನು ಅಗೆದು ರೆಡಿ ಮಾಡಿದ್ದನ್ನೂ ತೋರಿಸಿದರು. " ಇಬ್ಬರೂ ಒಳ್ಳೆಯ ಕೆಲಸದಲ್ಲಿದ್ದರೂ, ಮನೆಗೆ ಎಷ್ಟು ಖರ್ಚಾಯಿತು, ಹೇಗೆ ಉಳಿತಾಯ ಮಾಡಬೇಕು, ದಿವಾಳಿ ಏಳುತ್ತಿರುವ ಕಂಪನಿಗಳಿಗೆ ಸರ್ಕಾರ ಹೇಗೆ ಸಹಾಯ ಮಾಡಬೇಕು, ಬೀಳುತ್ತಿರುವ ಷೇರು ಮಾರುಕಟ್ಟೆ.....ಹೀಗೆ ಎಲ್ಲ ಸುದ್ದಿಗಳನ್ನೂ ಗಂಡ ಹೆಂಡತಿ ಉತ್ಸಾಹದಿಂದಲೇ ವಿವರಿಸುತ್ತಿದ್ದಿದು ನನಗೆ ತಲೆಗೇನೂ ಹೋಗುತ್ತಿರಲಿಲ್ಲ. ಇವರ ಮನೆಗೆ ಬರುವ ಸಂಭ್ರಮದಲ್ಲಿ ಬರೀ ಒಂದು ಕಪ್ ಟೀ ಕುಡಿದಿದ್ದಷ್ಟೇ. ಬಂದು ಅರ್ಧಗಂಟೆಯಾದರೂ ಏನೂ ಕೊಡದೇ ಪ್ರಪಂಚದ ಸುದ್ದಿಯೆಲ್ಲವನ್ನೂ ಗುತ್ತಿಗೆ ತೆಗೆದುಕೊಂಡವರ ಹಾಗೆ ಒದರುತ್ತಿದ್ದಿದು ಮೊದ ಮೊದಲು ಆಸಕ್ತಿಯೆನಿಸಿದ್ದು ಬರಬರುತ್ತಾ ತಲೆನೋವು ಬರಿಸತೊಡಗಿತ್ತು.


ಇವರೇನು ನಮಗೆ ಸುಮ್ಮನೇ ಬನ್ನಿ ಅಂದರೆ, ಅಥವಾ ಊಟಕ್ಕೆ ಬನ್ನಿ ಅಂದಿದ್ದರೇ? ಎಂದು ನನಗೆ ಹೊಸ ಅಲೋಚನೆಯೊಂದು ಬರತೊಡಗಿತ್ತು. ಕೂತಲ್ಲೇ ಮಿಡುಕಾಡತೊಡಗಿದ್ದ ನನ್ನನ್ನು ಕಂಡು, ಯಜಮಾನರಿಗೂ ಏನ್ನನಿಸಿತೋ, " ಸರಿ ಹೊರಡುತ್ತೇವೆ," ಎಂದು ಎದ್ದರು. " ಅದೆಲ್ಲಾ ಆಗುವುದಿಲ್ಲ, ಊಟ ಮಾಡಿಕೊಂಡು ಹೋಗಬೇಕು" ಎಂದರು. ಬಂದು ಹೆಚ್ಚುಕಡಿಮೆ ಒಂದೂವರೆ ಗಂಟೆಯಾಗಿದ್ದರೂ ಗಂಡ ಹೆಂಡತಿ ಮಾತಿನಲ್ಲೇ ಉಪಚಾರ ನಡೆಸಿದ್ದರು. ನಾನಂತೂ ಅವರುಗಳ ಮಾತಿಗೆ " ಹೂಂ" ಗುಡುವುದನ್ನೇ ಬಿಟ್ಟಿದ್ದೆ. ಊಟಕ್ಕೂ ಎಬ್ಬಿಸುವುದಿಲ್ಲ, ಹೋಗಲಿ ನಾವು ಹೊರಡುತ್ತೇವೆ ಎಂದರೆ ಬಿಡುವುದೂ ಇಲ್ಲ! ಅವರ ತಂದೆ ತಾಯಿಗಳು ಅದೆಷ್ಟು ಬುದ್ಧಿವಂತರೆಂತಲೂ, ಬೆಂಗಳೂರೊಂದರಲ್ಲೇ ನಾಲ್ಕು ಮನೆ ಕಟ್ಟಿ ಬಾಡಿಗೆಗೆ ಬಿಟ್ಟಿದ್ದಾರೆಂದೂ, ಅವರ ಸಂಬಂಧಿಕರೆಲ್ಲರೂ ಇಂಗ್ಲೆಂಡು, ಅಮೇರಿಕಾದಲ್ಲಿದ್ದಾರೆಂತಲೂ...ಹೀಗೆ ಬೇಕಿದ್ದು, ಬೇಡವಾದ್ದು ಎಲ್ಲವನ್ನೂ ಕೊರೆದು, ಅಂತೂ ಊಟಕ್ಕೆ ಎಬ್ಬಿಸಿದರು. ಡೈನಿಂಗ್ ಟೇಬಲಿನ ಮೇಲೆ ಜೋಡಿಸಿಟ್ಟಿದ್ದನ್ನು ಕಂಡಿದ್ದೇ ನನ್ನ ಹೊಟ್ಟೆ ತುಂಬಿ ಹೋಯಿತು.

’ ಒಂದು ಗಾಜಿನ ಬೋಗುಣಿಯಲ್ಲಿ ತಲೆಗೆ ಎರಡೆರಡು ಬರುವಂತೆ ಚಿಕ್ಕ ಮಕ್ಕಳ ಅಂಗೈಯಗಲದ ಸಣ್ಣ ಸಣ್ಣ ಪೂರಿಗಳು. ಅದಕ್ಕಿಂತಲೂ ಚಿಕ್ಕ ಗಾಜಿನ ಬಟ್ಟಲಿನಲ್ಲಿ ಅಲೂಗೆಡ್ಡೆ ಪಲ್ಯ! ಸುಮಾರಾದ ಪಾತ್ರೆಯಲ್ಲಿ ಬಾತ್, ಪಲ್ಯದ ಬಟ್ಟಲಿನ ಸೈಜಿನಲ್ಲಿ ಅನ್ನ-ಸಾರು, ಮೊಸರು, ಉಪ್ಪಿನಕಾಯಿ ಬಾಟಲು, 4 ದ್ರಾಕ್ಷಿ, 4 ಸೇಬಿನ ಚೂರು, 4 ಕಿತ್ತಳೆತೊಳೆ, ಒಂದು ಬಾಳೆಹಣ್ಣಿನ ನಾಲ್ಕು ಚೂರು. ನಾಲ್ಕು ಜನರಿಗೆ ಸಾಕಲ್ಲ ಈ ಅಡಿಗೆ! ಅಡಿಗೆ ನಾವು ವೇಸ್ಟ್ ಮಾಡುವುದಿಲ್ಲ, ಅದಕ್ಕೆ ಅಳತೆಗೆ ಸರಿಯಾಗಿಯೇ ಮಾಡುತ್ತೇನೆ ಎಂದರು. ನೋಡಿಯೇ ಹೊಟ್ಟೆ ತುಂಬಿದ ಮೇಲೆ, ಇನ್ನು ಊಟಕ್ಕೆಲ್ಲಿ ಜಾಗ? ಯಜಮಾನರ ಮುಖ ನೋಡಿದರೆ, ಅವರು ಗಂಭೀರವಾಗಿ ತಟ್ಟೆಗೆ ಒಂದು ಪೂರಿ-ಪಲ್ಯ, ಅನ್ನ ಸಾರು ಬಡಿಸಿಕೊಂಡಿದ್ದಾರೆ. ಅವರನ್ನು ನೋಡಿ ನಾನೂ ಹಾಗೆಯೇ ಬಡಿಸಿಕೊಂಡೆ. " ನೋಡಿ ಎಷ್ಟು ಅಳತೆಯಿಟ್ಟು ಮಾಡಿದರೂ ಇನ್ನೂ ಉಳಿದುಬಿಟ್ಟಿತು, ನಾಳೆಗೆ ನಿಮಗೇ ಇದನ್ನು ಊಟದ ಡಬ್ಬಿಗೆ ಹಾಕಿಕೊಡುತ್ತೇನೆ" ಎಂದು ಗಂಡನಿಗೆ ಹೇಳಿದರು. ಆ ಪ್ರಾಣಿ " ಹಾಗೆಯೇ ಮಾಡು, " ಎಂದು ತಲೆಯಾಡಿಸಿದರು.


ನಾನೇನೂ ಊಟಮಾಡುವವರ ಅಳತೆಯಿಡುವುದಿಲ್ಲ. ಸ್ವಲ್ಪ ಹೆಚ್ಚಿಗೇ ಅನ್ನುವಂತೆ ಮಾಡಿರುತ್ತೇನೆ. ನಮ್ಮ ಮನೆಗೆ ಬಂದಾಗ ಸರಿಯಾಗಿಯೇ ನಾಲ್ಕು ನಾಲ್ಕು ಚಪಾತಿ, ಪಲಾವ್, ಅನ್ನ ಸಾರು ಯಾವುದನ್ನೂ ಬಿಡದೇ ಎಲ್ಲವನ್ನೂ ಎರಡೆರಡು ಸಲ ನೀಡಿಸಿಕೊಂಡು ಉಂಡಿದ್ದ ಇವರುಗಳ ರೀತಿ ನಿಜಕ್ಕೂ ಅಶ್ಚರ್ಯವೆನಿಸಿತು. ನಾನು ಒಯ್ದಿದ್ದ ಪಾಯಸವನ್ನೂ ಅವರಿಬ್ಬರೂ ಸುರಿದುಕೊಂಡು ತಿಂದಿದ್ದು ನೋಡಿ, " ಇವರದೇನಿದ್ದರೂ ತಿನ್ನಲಷ್ಟೇ ದೊಡ್ಡ ಕೈ " ಅನ್ನಿಸಿತ್ತು. "ಊಟ"ವಾದ ಬಳಿಕ, ಅವರೆಷ್ಟೇ ಮಾತಿಗೆ ಕೂತರೂ, ನಾವುಗಳು ಮನೆಗೆ ಫೋನ್ ಮಾಡಬೇಕು ಎಂದು ನೆಪವೊಡ್ಡಿ ಹೊರಟೆವು.

ಮನೆಗೆ ಬಂದು, ಹುರಿದಿದ್ದ ರವೆಯಿದ್ದರಿಂದ ಅದನ್ನೇ ಕೆದಕಿ ಉಪ್ಪಿಟ್ಟು ಮಾಡಿ ತಿಂದ ಮೇಲಷ್ಟೇ ಸ್ವಲ್ಪ ಗೆಲುವೆನಿಸಿತು. ಎಷ್ಟೋ ಜನರ ಸ್ವಭಾವದ ಪರಿಚಯವಿದ್ದ ನಮಗೆ ಈ ರೀತಿಯ ಅನುಭವ ಇದೇ ಮೊದಲ ಸಲ! ಜಿಪುಣತನ ಮಾಡಲಿ, ಆದರೆ ಅದಕ್ಕೊಂದು ಮಿತಿ ಬೇಡವೆ? ಅಷ್ಟಕ್ಕೂ ಉಳಿತಾಯ ಮಾಡುವವರು ಊಟಕ್ಕಾದರೂ ಯಾಕೆ ಕರೆಯಬೇಕು? ಅಳತೆಯಿಟ್ಟು ಮಾಡುತ್ತೇವೆಂದರೆ ಏನರ್ಥ? ನಮ್ಮ ನಮ್ಮ ಮನೆಗಳಲ್ಲೂ ಅಳತೆ ಪ್ರಕಾರವೇ ಮಾಡುವುದು. ನಾವೇನು ಬೇಕಾಬಿಟ್ಟಿ ಅಡಿಗೆ ಮಾಡಿ ಹೊರಗೆ ಸುರಿಯುತ್ತೇವೆಯೇ? ಮನೆಗೆ ಯಾರದರೂ ಬರುತ್ತಾರೆಂದರೆ ಇನ್ನೂ ಸ್ವಲ್ಪ ಹೆಚ್ಚಿಗೆ ಅನ್ನುವಷ್ಟೇ ಮಾಡುತ್ತಾರೆಯೇ ಹೊರತು, ಹೀಗಂತೂ ಮಾಡುವುದಿಲ್ಲ. ನಮ್ಮಮ್ಮ ರಾತ್ರಿ ಎಲ್ಲರ ಊಟವಾದ ಮೇಲೂ ಒಬ್ಬರಿಗೆ ಊಟಕ್ಕಾಗುವಷ್ಟು ಮಿಗಿಸುತ್ತಲೇ ಇರುತ್ತಿದ್ದರು. ಯಾರು ಬರುತ್ತಾರೋ ಬಿಡುತ್ತಾರೋ, ಒಬ್ಬರಿಗಾಗುವಷ್ಟು ಊಟವಂತೂ ಇರುತ್ತಿತ್ತು. ಅತ್ತೆ ಮನೆಯಲ್ಲಂತೂ, ಬಂದವರು ಅದೆಷ್ಟೇ ಸರಿರಾತ್ರಿಯಿರಲಿ, ಬಿಸಿ ಬಿಸಿ ರೊಟ್ಟಿ, ಶೇಂಗಾ ಚಟ್ನಿ, ಮೊಸರಂತೂ ಗ್ಯಾರಂಟಿ!


ನಮ್ಮ ಸ್ನೇಹಿತರು ಊರಿನಿಂದ ಬಂದಿದ್ದೇವೆಂದು, ಮೊಬೈಲಿಗೆ ಟ್ರೈ ಮಾಡಿ ಸಿಗದಿದ್ದರಿಂದ, ಅವರಮ್ಮ ನಮಗೂ ಸೇರಿಸಿ, ರವೆಉಂಡೆ, ಚಕ್ಕುಲಿ, ಕೋಡುಬಳೆ ಕಳಿಸಿದ್ದಾರೆಂದು, ನಾಳೆ ಮನೆಗೆ ಬರುತ್ತಿದ್ದೇವೆಂದು ಫೋನಿನಲ್ಲಿ ಮೆಸೇಜು ಬಿಟ್ಟಿದ್ದರು.

ಸ್ನೇಹಿತರಿಗೆ ಇದೆಲ್ಲವನ್ನೂ ಹೇಳಿದ ಮೇಲೆ, " ಅಯ್ಯೋ! ನಿಮಗೆ ಅವರು ಸಿಗುತ್ತಾರೆಂದು ಮೊದಲೇ ಗೊತ್ತಿದ್ದರೆ ನಾನೇ ಹೇಳಿರುತ್ತಿದ್ದೆ. ಅವರಿಗೆ ಕರೆಯಲೂ ಬೇಡಿ, ಕರೆದರೆ ನೀವೂ ಹೋಗಬೇಡಿರೆಂದು". ಅವರ ಮನೆ ಪೂಜೆಗೆ ಹೋದವರೊಬ್ಬರು ಇವರಿಗೆ ಹೇಳಿದ್ದರಂತೆ. ರೈಸ್ ಕುಕ್ಕರಿನಲ್ಲಿ ಅನ್ನ ಮಾಡಿ, ಪಕ್ಕದಲ್ಲಿ ಒಂದು ಬಟ್ಟಲಿನಲ್ಲಿ ಸಾರು, ಬಡಿಸಿಕೊಳ್ಳಲು ಒಂದೊಂದು ಸ್ಪೂನ್, ಅದರ ಪಕ್ಕ ಚಿಕ್ಕ ಚಿಕ್ಕ ಪ್ಲಾಸ್ಟಿಕ್ ಪ್ಲೇಟುಗಳನ್ನಿಟ್ಟಿರಂತೆ, ಬಂದವರು ಬಡಿಸಿಕೊಳ್ಳಬೇಕು. ಅದು ಊಟ! ರೈಸ್ ಕುಕ್ಕರಿನಲ್ಲಿ ಅನ್ನ ಮುಗಿದರೆ, ಅನ್ನವಾಗುವವರೆಗೂ ಊಟ ಬೇಕೆನ್ನುವವರು ಕಾಯಬೇಕಂತೆ! ನೀವೇ ಪುಣ್ಯವಂತರು, ಪೂರಿ-ಪಲ್ಯವಾದರೂ ಇದ್ದಿತಲ್ಲಾ ಎಂದು ಛೇಡಿಸಿದರು.

ಆಗೊಮ್ಮೆ, ಈಗೊಮ್ಮೆ ಸೂಪರ್ ಮಾರ್ಕೆಟ್ಟಿನಲ್ಲಿ ಇವರುಗಳು ಎದುರಿಗೇ ಸಿಕ್ಕರೂ ಮಾತಿಗೆ ನಿಲ್ಲದೆ ನಕ್ಕು ಕೈ ಬೀಸಿ ಹೊರಟುಬಿಡುತ್ತಿದ್ದೆವು.

ಕಳೆದ ಭಾನುವಾರ ಬೆಳಿಗ್ಗೆ ಸ್ವಲ್ಪ ಬಿಸಿಲಿದ್ದರಿಂದ, ಬಟ್ಟೆ ಒಗೆಯುವ ಕಾರ್ಯಕ್ರಮದಲ್ಲಿದ್ದೆ. ತಲೆಗೆ ಹರಳೆಣ್ಣೆ ಮೆತ್ತಿಕೊಂಡು, ಯಜಮಾನರ ತಲೆಗೂ ಅಷ್ಟು ಮೆತ್ತಿದ್ದೆ. ಅವರು ಕೈತೋಟ ಕೆದಕುವ ಕೆಲಸದಲ್ಲಿದ್ದರು. ಫೋನ್ ರಿಂಗಾದದ್ದು ಕೇಳಿ, " ಯಾರಿರಬಹುದು ಇಷ್ಟು ಬೆಳಿಗ್ಗೆ ಫೋನ್ ಮಾಡುವವರು" ಎಂದುಕೊಳ್ಳುತ್ತಲೇ ಫೋನ್ ಎತ್ತಿದರೆ, ನಮ್ಮ ಜಿಪುಣಾಗ್ರೇಸರು! " ನಿಮ್ಮ ಮನೆಕಡೆಯೇ ಬರುತ್ತಿದ್ದೇವೆ, ನೀವು ಫ್ರೀ ಇದ್ದರೆ, ಬರುತ್ತೇವೆ", ಎಂದರು. " ನೀವು ಫೋನ್ ಮಾಡಿದ್ದು ಒಳ್ಳೆಯದೇ ಆಯಿತು, ಈಗಷ್ಟೇ ನಾವು ಆಕ್ಲೆಂಡಿಗೆ ಹೊರಟಿದ್ದೆವು. ಲಾಕ್ ಮಾಡುತ್ತಿದ್ದೆ, ಫೋನ್ ರಿಂಗಾದ್ದರಿಂದ ಒಳಬಂದೆ ಎಂದೆ. ಅವರೇನಾದರೂ ಮಾತನಾಡುವ ಮೊದಲೇ, ಮತ್ತೆಂದಾದರೂ ಸಿಗೋಣ"ವೆಂದು ಹೇಳಿ ಫೋನಿಟ್ಟೆ.

" ಒಂದೇ ಸಲಕ್ಕೆ ಅವರಿಗೆ ಮನೆಗೆ ಕರೆದು ಉಪಚಾರ ಮಾಡಿ ಸುಸ್ತಾಯಿತಾ, ಅವರಾದರೂ ಬಂದಿದ್ದರೆ ಈ ಕೆಲಸದಿಂದ ತಪ್ಪಿಸಿಕೊಳ್ಳಬಹುದಿತ್ತು. ಭಾನುವಾರವೂ ಆರಾಮವಾಗಿ ಮಲಗಲು ಬಿಡದೇ ಎಬ್ಬಿಸಿ ಎಣ್ಣೆ ಬೇರೆ ಮೆತ್ತಿದ್ದೀಯಾ...ಇನ್ನು ಈ ಕೆಲಸ ಮುಗಿಯುವವರೆಗೂ ನನ್ನ ತಲೆನೆಂದಿಲ್ಲವೆಂದೇ ಸಾಧಿಸುತ್ತೀಯಾ.." ಎಂದು ಯಜಮಾನರು ಗೊಣಗಾಡುತ್ತಿದ್ದರು. ನಮ್ಮ ಮನೆಗೆ ಇದೂವರೆಗೆ ಯಾರಿಗೂ ಬರಬೇಡಿ ಎಂದಿರಲಿಲ್ಲ ನಾನು. ಯಾರೇ ಆಗಿರಲಿ ಅವರನ್ನು ನಮ್ಮವರೆಂದುಕೊಂಡು ಉಪಚರಿಸುತ್ತೇವೆ. ಆದರೆ,ನಮ್ಮ ಒಳ್ಳೆಯತನವನ್ನು ದುರುಪಯೋಗಪಡಿಸಿಕೊಳ್ಳುವವರಿಗಂತೂ ನಮ್ಮ ಮನೆ ಮುಚ್ಚಿದ ಬಾಗಿಲು.

14 comments:

Unknown said...

ಓಹೋ! ಇದೇನಾ ಕುಕ್ಕರ್ ನೆಕ್ಕೋ ಬಾಬ್ತು :P

ಹೊಸ ಗಾದೆ - ಊರಿಗೆ ಬಂದವರು veggie ಮಾರುಕಟ್ಟೆಗೆ ಬರಲೇಬೇಕು :)

ನಿಮ್ಮ ಹೊಸ ಸ್ನೇಹಿತರು ಕನ್ನಡದವರಾ? ಕನ್ನಡ ಓದೋಕ್ಕೆ ಬರತ್ತಾ? ಹಾಗಿದ್ರೆ ಅಪ್ಪಿ ತಪ್ಪಿಯೂ ನಿಮ್ಮ ಬ್ಲಾಗಿನ ಬಗ್ಗೆ ಅವರಿಗೆ ಹೇಳಬೇಡಿ - ಅವರ ಭಾವಚಿತ್ರ ಇದ್ದರೆ ಕಳುಹಿಸಿ - ಭೂತಯ್ಯನ ವಂಶಜರನ್ನು ಬೆಳಗಿನ ಜಾವ ಪೂಜಿಸಿದ್ರೆ, ಸಿರಿವೃದ್ಧಿಯಾಗುವುದಂತೆ :D

ನಮ್ಮ ಮನೆಗೆ ಮಾತ್ರ ಬಾರದಿರಬೇಡಿ - ಕನ್ನಡಮ್ಮನ ಮಕ್ಕಳಿಗೆ ಹೊಟ್ಟೆ ತುಂಬಾ ಉಣ್ಣಲು ಇತ್ತು, ಕೈ ತುಂಬಾ ಕೊಂಡೊಯ್ಯಲು ಕೊಡುವುದು ನನ್ನ ಪತ್ನಿಯ ಧರ್ಮ :) - ನಿಮ್ಮ ಬರುವಿಕೆ ಕಾಯುತ್ತಿರುವ

123

Anonymous said...

ಒಳ್ಳೆ ಕಥೆ ಜಿಪುಣಾಗ್ರೇಸರ ದಂಪತಿಗಳದ್ದು!

ನಾವು ಕೂಡ ಈ ರೀತಿ ಅತಿಥಿ ಸತ್ಕಾರ ಮಾಡುವವರ ಮನೆಗೆ ಊಟಕ್ಕೆ ಹೋಗುವ ದುರಾದೃಷ್ಟ ಕೆಲವೊಮ್ಮೆ ಒದಗಿ ಬಂದಿದೆ :D ಆದರೆ ಏನು ಮಾಡುವುದು? ಮನುಷ್ಯರೆಲ್ಲರಲ್ಲೂ ಏನಾದರೊಂದು ಲೋಪ, ದೋಷ ಇರಲೇಬೇಕು. ಕೆಲವರು ಇನ್ನೊಬ್ಬರನ್ನು ನೋಡಿ ತಮ್ಮ ವರ್ತನೆಯನ್ನು ತಿದ್ದಿಕೊಳ್ಳುತ್ತಾರೆ ಇನ್ನು ಕೆಲವರು ತಿದ್ದಿಕೊಳ್ಳದೆ ಇರುವುದು ತುಂಬಾ ವಿಷಾದಕರ(ಇಲ್ಲಿ ವಿಷಾದಕರ ನೋ ಇಲ್ಲ ವಿಶಾದಕರ ನೋ ಸ್ವಲ್ಪ confusion ತಪ್ಪಿದ್ದರೆ ಕ್ಷಮೆ ಇರಲಿ) :).

Veggie market ಮತ್ತು ಹೂವಿನ ಗಿಡಗಳು ಅಂದರೆ ದಕ್ಷಿಣದಲ್ಲಿ ನಿಮಗೆ ವಸಂತಾಗಮನ ಆಗಿದೆ ಅಂದಹಾಗಾಯ್ತು! Enjoy those upcoming longer days and warm summer.

JH

Anonymous said...

Hello Girija! i too had a friend...similar to this....:) once i had invited them for dinner..previous day phone maadi...neenu dahi vada chenagi madthiya...adu maadu..idu madu antha list was getting big...yaradru chenagi madtheya andrene saaku...kelode beda lol, they enjoyed the food....bye antha heli...next week namma manege banni antha helidru....so nanu kayutha ide... yaradru karedare saaku antha ....saturday banthu... that morning phone maadi.. nan friend uu neenu yestu chapathi thinthiya... nimma husband yestu thintare antha heli ashte chapathi madidlu...nange adu nenepy aythu.....chengagi baredideera Girija...

Anonymous said...

OOps! name ee barilla nanu, nimage gothu nane idu antha..
Sangeetha

shivu.k said...

ಇದೊಳ್ಳೆ ಜಿಪುಣ ಗ್ರೇಸರ ದಂಪತಿಗಳ ಕತೆಯಾಯ್ತು!. ಚೆನ್ನಾಗಿದೆ. ಬರೀತಾ ಇರಿ. ಹಾಗೆ ನನ್ನ ಬ್ಲಾಗಿಗೊಮ್ಮೆ ಬನ್ನೀ ಅಲ್ಲಿ ನಿಮಗಿಷ್ಟವಾಗುವ ಫೋಟೊಗಳು ಮತ್ತು ಲೇಖನಗಳು ಸಿಗಬಹುದು.

ಶಿವು.ಕೆ

Lakshmi Shashidhar Chaitanya said...

namaskaara,

ide thara anubhava bahala varshagala kelage namagu aagittu. oorininda banda obbarannu namma manege ootakke karediddaaga bisibele baath mattu gasagase paayasavannu suridu suridukondu tinda atithigalu, naavu avara manege hodaaga 3 ghante kaala maataadisi, kadege, "hotel nalle oota allava nimmadu ?" anta keLibiTTaru!!!

adakke naavu bere oorige hodaga nentarishtarannu nodabekaadre oota maadikonde hoguva paddhati belesikondubittiddeve.

baraha manassige tattuvantide.

Lakshmi said...

madam, doorada snehitraru yake namma chikkama ide jaatige seridavaru. Helalikku nachikeyaguthe adre yen madodu neeve "alathe oota" nenpisidri..illi barayale bakyaithu. hmm..kelavarannu dooraidode vasi nodi

ಸಂಭವಾಮಿ ಯುಗೇ ಯುಗೇ said...

ಲೇಖನ ಚೆನ್ನಾಗಿದೆ.ನಾನೂ ಒಂದು ಬ್ಲಾಗ್ ಆರಂಭಿಸಿದ್ದೇನೆ. ಸಂಭವಾಮಿ ಯುಗೇ ಎಂದು ಹೆಸರು. ಬಿಡುವಾದಾಗ ಓದಿ

Ittigecement said...

ನಿಮ್ಮ ಲೆಖನ ನಮ್ಮ ಅನುಭವದಂತೆ ಇದೆ. ನಾವೂ ಕೂಡ ಹೀಗೆ ಮೋಸ ಹೋಗಿದ್ದೇವೆ. ಅದರೆ ಸಂಬಂಧ ಇನ್ನೂ ಇಟ್ಟುಕೊಂಡಿದ್ದೇವೆ. ತುಂಬ ಚೆನ್ನಗಿ ಬರೆದಿದ್ದೀರಿ. ನಾವೂ ಕೂಡ ನಿಮ್ಮ ಹಾಗೆ ಪರಿತಪಿಸಿದ್ದೇವೆ.. ಧನ್ಯವಾದಗಳು...

Harisha - ಹರೀಶ said...

ಇಂಥ ಅನುಭವ ನಂಗೆ ಇನ್ನೂ ಆಗಿಲ್ಲ. ಆದರೆ ಹುಷಾರಾಗಿರೋದು ಒಳ್ಳೇದು. ಎಚ್ಚರಿಸಿದ್ದಕ್ಕೆ ಧನ್ಯವಾದಗಳು :-)

sunaath said...

ಅಹಾ,ಕಲಿಕಾಲದಲ್ಲಿ ಪರೀಕ್ಷೆ ಮಾಡದೇ ಯಾರನ್ನೂ ನಂಬಕೂಡದು ಎನ್ನುವದು ಈ ಕತೆಯ ನೀತಿಪಾಠ!

ShaK said...

Man :D This is why island life is fun. :P innobbara kATa illa. Cautionary tale ge thanks!

Good one. Took me a while to read the Unicode but was totally worth it. :)

ShaKri

Harisha - ಹರೀಶ said...

@ShaKri: You may have to install Complex scripts to view Unicode characters properly..

Please see this. This might help

NilGiri said...

@ Sir,
ಕನ್ನಡದವರಲ್ಲ ಸಾರ್! ಭಾವಚಿತ್ರ ಕೊಡಲು ನಿಮ್ಮ ಮನೆಗೇ ಬಂದು ಬಿಡುತ್ತಾರವರು. ಈ ಸಲ ನಿಮ್ಮೂರಿಗೆ ಬರುವುದಂತೂ ಗ್ಯಾರಂಟಿ. ನಿಮ್ಮವರಿಗೆ ಎಲ್ಲಾ ರೆಡಿ ಇಟ್ಟುಕೊಂಡಿರಲು ಹೇಳಿ :D.

********************
@ಥ್ಯಾಂಕ್ಸ್ Jh. ನಾವು ಆಗಲೇ DLS ಶುರು ಮಾಡಿಕೊಂಡಿದ್ದೇವೆ! ನನ್ನ ಕೈತೋಟವೂ ನಿಧಾನಕ್ಕೆ ಚಿಗುರುತ್ತಿದೆ. "ವಿಷಾದಕರ" ನೇ ಸರಿ.

*******************
@ Sangeetha,
ಏನು ಮಾಡೋದು ಇಂತಹವರೂ ಇರುತ್ತಾರೆ. ಲೇಖನ ಮೆಚ್ಚಿಕೊಂಡಿದ್ದಕ್ಕೆ ಥ್ಯಾಂಕ್ಸ್.

*******************
@Shivu,
ಥ್ಯಾಂಕ್ಸ್ ಶಿವು. ನಿಮ್ಮ ಬ್ಲಾಗಿಗೆ ಬರುತ್ತಲೇ ಇದೀನಿ.
********************

@ Lakshmi,
ಓಹೋ ನಿಮಗೆ ನೆಂಟರಿಂದಲೇ ಈ ರೀತಿ ಅನುಭವವೇ? ಸ್ನೇಹಿತರಾದ್ರೆ ಬೈದುಕೊಂಡು ಸುಮ್ಮನಿರಬಹುದು, ಈ ನೆಂಟರಿಗೆ ಅನ್ನುವ ಹಾಗಿಲ್ಲ ಅನುಭವಿಸುವ ಹಾಗಿಲ್ಲ! ಬರಹ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು.

********************
@ Lakshmi (TOM),
ಅದೇನೋ ಕೆಲವರ ಕೈ " ಚಿಕ್ಕದು" ಅದಿಕ್ಕೆ ಚಿಕ್ಕಮ್ಮ?! ಹೋಗಲಿ ಬಿಡಿ ಬೇಸರಿಸಿಕೊಳ್ಳಬೇಡಿ. ಕೆಲವರ ಕೈ ಗುಣ ಸರಿಪಡಿಸಲಾರದಂತದು.

**********************
@ಮಂದಾರ,

ತಾಣಕ್ಕೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು.

************************
@ ಸಿವಿಲ್ ಇಂಜನೀಯರರಿಗೆ,

ಸ್ನೇಹ ಬೇರೆ, ವ್ಯವಹಾರ ಬೇರೆ ಎನ್ನುವ ನೀತಿಯವರು ನೀವು ಅನ್ನಿಸುತ್ತದೆ! ತಾಣಕ್ಕೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು.

**********************
@ ಹರೀಶ,

ನೀವಿನ್ನೂ ಸಂಸಾರಸ್ಥರಾಗಿಲ್ಲವಲ್ಲ ಅದಕ್ಕೇ ಇನ್ನೂ ಅನುಭವವಿಲ್ಲ! ನಿಮಗಿನ್ನೂ ಸಮಯವಿದೆ ;)

*********************
@ ಕಾಕಾ,

ಪೆಟ್ಟು ತಿಂದ ಮೇಲೆ ಬುದ್ಧಿ ಬಂದಿದೆ ನಮಗೆ :(
********************
@ SK,
ಶಶೀ ಇಷ್ಟೊಂದು ಖುಷಿ ಪಡಬೇಡಿ. ಸಿಗುತ್ತಾರೆ ನಿಮಗೂ ಇಂತಹವರು! ಭೇಟಿ ಕೊಟ್ಟಿದ್ದಕ್ಕೆ ಥ್ಯಾಂಕ್ಸ್.
*****************
ಹರೀಶ, SK ಕಡೆಯಿಂದ ಥ್ಯಾಂಕ್ಸು :).

*******************