Wednesday, 1 October 2008

ಒಂದು ದಿನದ ಘಟನೆಗಳ ಸುತ್ತ.....

ನಮ್ಮೂರಿನವರು, ಊರಿನಲ್ಲಿ ಪಕ್ಕದ ಮನೆಯವರು ಇಲ್ಲಿ ಏನೋ ಕೆಲಸದ ಮೇಲೆ ಬರುತ್ತಿದ್ದೆವೆಂದು ಹೇಳಿದಾಗ, ಅಷ್ಟೇನೂ ಪರಿಚಯವಿಲ್ಲದಿದ್ದರೂ ಇಷ್ಟು ದೂರ ಬಂದ ಮೇಲೆ ಮನೆಗೆ ಆಹ್ವಾನಿಸದಿದ್ದರೆ ಹೇಗೆಂದು, ಅವರ ಕೆಲಸವೆಲ್ಲವೂ ಮುಗಿದ ಮೇಲೆ ನಾವೇ ಅವರಲ್ಲಿಗೆ ಹೋಗಿ ನಮ್ಮ ಮನೆಗೆ ಕರೆತಂದಿದ್ದೆವು. ಆದರೆ ನಾವಂದುಕೊಂಡಂತೆ ಅವರಿರದಿದ್ದರಿಂದ " ಆ ನೆರೆಯವರು ನಮಗೆ ನಿಜಕ್ಕೂ ಒಂದು ರೀತಿಯಲ್ಲಿ ಹೊರೆಯೇ " ಆಗಿದ್ದರು. ಅನ್ನಲಾರದೇ ಅನುಭವಿಸಲಾರದೇ ಅವರಾಗಿಯೇ ಹೋಗುವವರೆಗೂ ತೆಪ್ಪಗಿದ್ದಿರಬೇಕಾಗಿತ್ತು. ನನಗಂತೂ ಇನ್ನು ಜನ್ಮದಲ್ಲಿ ಅವರನ್ನು ಕರೆಯುವುದೇ ಬೇಡವೆನಿಸುವಷ್ಟು ಸಾಕು ಸಾಕು ಮಾಡಿ ಬಿಟ್ಟಿದ್ದರು. ಹೊರಟವರನ್ನು ಬಾಯಿ ಮಾತಿಗೂ ಮತ್ತೊಮ್ಮೆ ಬನ್ನಿ, ಎಂದಾಗಲಿ, ಹೋಗಿ ಬನ್ನಿ ಎಂದೂ ಅನ್ನಲಿಲ್ಲ. ಇಲ್ಲಿದ್ದ ಸ್ನೇಹಿತರಂತೂ ನನ್ನ ಪರಿಸ್ಥಿತಿಯನ್ನು ಕಂಡು, ಅದು ಹೇಗೆ ಸಂಭಾಳಿಸಿದಿರೋ ಅವರನ್ನು ಎಂದು ಇನ್ನೂ ನನಗೆ ಛೇಡಿಸಿದ್ದರಿಂದ, ಒಂದು ರೀತಿಯಲ್ಲಿ ಅವಮಾನವಾದಂತಾಗಿ ಏನೂ ಹೇಳಲಾಗದೆ, ಯಾರ ಮನೆಗೂ ಹೋಗದೆ, ಯಾರ ಜೊತೆಗೂ ಮಾತನಾಡದೆ, ನನಗೆ ನಾನೇ ಘೋಷಾ ವಿಧಿಸಿಕೊಂಡಿದ್ದೆ.

ಯಜಮಾನರಿಗೆ ಆಕ್ಲೆಂಡಿನಲ್ಲಿ ಒಂದು ದಿನದ ವರ್ಕ್ ಶಾಪಿತ್ತು. ಆಕ್ಲೆಂಡ್ ಟ್ರಿಪ್ಪಿಗೆ ಖಾಯಂ ಗಿರಾಕಿಯಾಗಿದ್ದ ನನ್ನನ್ನು ಈ ಸಲ " ಬರುತ್ತೀಯಾ..." ಎಂದು ಕರೆದಿದ್ದರಿಂದ, ನನಗೂ ಒಬ್ಬಳೇ ಸಾಕಾಗಿದ್ದರಿಂದ " ಬರುತ್ತೇನೆಂದು ತಲೆಯಾಡಿಸಿ ಹೊರಟಿದ್ದೆ.



ಊಟ, ತಿಂಡಿ ಅವರೇ ಕೊಡುತ್ತಾರೆ ಎಂದಿದ್ದರೂ ನಾವು ಮನೆಯಿಂದ ಬುತ್ತಿ ಕಟ್ಟಿಕೊಂಡು ಹೊರಟಿದ್ದೆವು. ಟ್ರೈನಿಂಗ್ ಬಹುಷಃ ಬೇಗನೇ ಮುಗಿದರೂ ಮುಗಿಯಬಹುದು, ನಾನು ಬರುವವರೆಗೂ ಕಾರಿನಲ್ಲೇ ಕುಳಿತಿದ್ದರೆ ಮಾತ್ರ ಶಾಪಿಂಗ್ ಮಾಡಿಸುವುದಾಗಿ ಆಶ್ವಾಸನೆ ಕೊಟ್ಟಿದ್ದರಿಂದ, ಜಾಣೆಯಂತೆ ಮನೆಯಿಂದೊಯ್ದ ನನ್ನ ಕಸೂತಿ ಸಾಮಾಗ್ರಿ ಹಿಡಿದು ಕೂತಿದ್ದೆ. ಸಣ್ಣಗೆ ಬೀಳುತ್ತಿದ್ದ ಮಳೆ ನಿಂತು, ಬಿಸಿಲು ಸ್ವಲ್ಪ ಚುರುಕೆನಿಸುವಷ್ಟು ಬಂದ ಮೇಲೆ, ಕಾರಿನಲ್ಲಿ ಕೂತು ಬೋರೆನಿಸತೊಡಗಿತ್ತು. ಎದುರು ಇರುವ ಪಾರ್ಕಿನಲ್ಲಿ ಒಂದು ರೌಂಡ್ ಹೊಡೆಯೋಣವೆಂದು ಇಳಿದು, ಹಾಗೆ ಕಾಲಾಡಿಸುತ್ತಿದ್ದೆ. ಪಾರ್ಕಿನಲ್ಲಿ ಕುಳಿತವರ " ಹಲೋ, ಹಾಯ್ ಗಳಿಗೆ, ನಾನು ಕೈ ಬೀಸಿ ಪ್ರತಿಕ್ರಿಯಿಸುತ್ತಿದ್ದೆ. ಹಾಗೆಯೇ ಎದುರಿನಿಂದ ಬಂದ ಇಬ್ಬರು ತರಕಾರಿ, ಹಣ್ಣುಗಳನ್ನು ಹಿಡಿದು ಹೊರಟಿದ್ದು ಕಂಡ ನನಗೆ, ಇಲ್ಲೇ ಹತ್ತಿರ ಯಾವುದಾದರೂ ಅಂಗಡಿಯಿರಬಹುದು, ಸುಮ್ಮನೇ ಇಲ್ಲಿ ಸುತ್ತುವ ಬದಲು, ಹೋಗಿ ನೋಡಿದರೆ ಹೆಂಗೆ? ಎಂದು ಅಂದುಕೊಂಡವಳೇ, ದಾರಿಯನ್ನು ಗುರುತಿಟ್ಟುಕೊಳ್ಳುತ್ತಾ ಹೊರಟೆ.

ಹತ್ತಿರದಲ್ಲಿ ಯಾವುದೇ ಅಂಗಡಿಗಳ ಸಾಲು ಕಂಡು ಬರದಿದ್ದುದರಿಂದ, ಇನ್ನೊಂದು ಸ್ವಲ್ಪ ದೂರ ಹೋಗಿ ನೋಡೋಣವೆಂದು, ಹುಡುಕುತ್ತಾ ಹೊರಟ ನನಗೆ, ಇನ್ನೊಂದು ಸ್ವಲ್ಪ, ಇನ್ನೊಂದು ಹತ್ತು ಹೆಜ್ಜೆ, ಎಂದು ಲೆಕ್ಕ ಹಾಕುತ್ತಲೇ ಹೊರಟ ಮೇಲೆ ಯಾವುದೋ ಚೈನೀ ಅಂಗಡಿಯೊಂದು ಕಂಡಿತು. ಇಷ್ಟು ದೂರ ಬಂದ ಮೇಲೆ ಹೋಗಿ ನೋಡಿದರಾಯ್ತು, ತರಕಾರಿ ಇದ್ದರೂ ಇರಬಹುದು ಎಂದುಕೊಳ್ಳುತ್ತಲೇ ಒಳಹೊಕ್ಕೆ. ಫ್ರೆಶ್ ಅನ್ನಿಸುವಷ್ಟಿಲ್ಲದಿದ್ದರೂ, ಬಂದಿದ್ದಕ್ಕೆ ಇರಲಿ ಎಂದು ಬದನೇಕಾಯಿ( ಯಜಮಾನರ ಫೇವರಿಟ್!), ದ್ರಾಕ್ಷಿ ಹಣ್ಣುಗಳನ್ನು ಕೊಂಡು, ಚಿಂಗೀ ಹುಡುಗಿಗೆ ಕಾಸು ಕೊಟ್ಟು ಹೊರಬಂದೆ.


ಸ್ವಲ್ಪ ದೂರ ಹೆಜ್ಜೆ ಹಾಕಿದ ಮೇಲೆ, ಅದ್ಯಾಕೋ ಇದು ನಾನು ಬಂದ ದಾರಿಯಲ್ಲವೆಂದು ಅನ್ನಿಸತೊಡಗಿತ್ತು. ಅಂಗಡಿ ಹುಡುಕುವ ಭರದಲ್ಲಿ, ರೋಡು, ಕ್ರಾಸು ಎಂದು ನೋಡದೆ, ಸುಮ್ಮನೇ ಅಂದಾಜಿನಲ್ಲಿ ಹೊರಟಿದ್ದರಿಂದ, ಈಗ ವಾಪಸು ಹೋಗುತ್ತಿರುವ ದಾರಿ ಸರಿಯೇ ತಪ್ಪೇ ಒಂದೂ ಗೊತ್ತಾಗಲಿಲ್ಲ. ಎಲ್ಲ ಮನೆಗಳೂ ಒಂದೇ ರೀತಿಯಲ್ಲಿದ್ದರಿಂದ, ಎಲ್ಲ ರಸ್ತೆಗಳೂ ಒಂದೇ ತರಹ ಕಾಣುತ್ತಿತ್ತು. ಎಲ್ಲಿಗೇ ಆಗಲಿ, ಒಂದತ್ತು ಸಲ ಹೋಗಿ ಬಂದರಷ್ಟೇ ದಾರಿ ಗೊತ್ತಾಗುತ್ತಿದ್ದ ನನಗೆ, ಈಗ ದಾರಿ ತಪ್ಪಿದ್ದೇನೆಂದು ಗೊತ್ತಾದ ಕೂಡಲೇ ಮೈ ಬೆವರಿದಂತಾಗಿ ಕಾಲು ನಡುಗತೊಡಗಿತ್ತು. ಊರಿನಲ್ಲಿ, ಎದುರಿಗೆ ಸಿಕ್ಕವರನ್ನೋ, ಇಲ್ಲವೇ ಯಾವುದಾದರೂ ಮನೆ ಹೊಕ್ಕು, " ಸ್ವಲ್ಪ ಅಡ್ರೆಸ್ ಹೇಳುತ್ತಿರಾ " ಎಂದು ಸಲೀಸಾಗಿ ಕೇಳುತ್ತಿದ್ದ ನನಗೆ, ಇಲ್ಲಿ ಒಬ್ಬರೂ ಎದುರು ಸಿಕ್ಕದಿದ್ದುದು, ಇನ್ನು ಕಂಡವರ ಮನೆ ಹೊಕ್ಕು ಅಡ್ರೆಸ್ ಕೇಳುವುದಂತೂ ದೂರದ ಮಾತಾಯಿತು! ಅಂತೂ ಧೈರ್ಯ ಮಾಡಿ, ಯಾವುದೇ ಕ್ರಾಸ್ ರೋಡು, ಎಲ್ಲಾದರೂ ಮೇನ್ ರೋಡಿಗೆ ಹೋಗೇ ಹೋಗುತ್ತದೆ ಎಂದು ಸಿಕ್ಕ ಸಿಕ್ಕ ಸ್ಟ್ರೀಟು, ಕ್ರಾಸುಗಳೆಲ್ಲವನ್ನೂ ಹೊಕ್ಕ ಮೇಲೆ ಮೇನ್ ರೋಡೇನೋ ಸಿಕ್ಕಿತು, ಆದರೆ ಅದು ನಾನು ಬಂದದ್ದಲ್ಲ!

ಮೊಬೈಲನ್ನು ಮರೆತು ಕಾರಿನಲ್ಲೇ ಬಿಟ್ಟು ಬಂದಿದ್ದರಿಂದ, ಯಜಮಾನರಿಗೆ ಫೋನ್ ಮಾಡುವ ಹಾಗಿಲ್ಲ. ವಾಪಸ್ ಚಿಂಗೀ ಅಂಗಡಿಗೆ ಹೋಗಿ, ಅವಳಿಗೆ ಅಡ್ರೆಸ್ ಕೇಳಿದರಾಯ್ತು ಎಂದು ಕೊಂಡರೂ, ಮೇನ್ ರೋಡ್ ಹುಡುಕುವ ಭರದಲ್ಲಿ, ಈಗ ಚಿಂಗೀ ಅಂಗಡಿಯೂ ಮರೆತುಹೋಯಿತು. ಸುಮ್ಮನೇ ರಸ್ತೆಯಲ್ಲಿ ನಿಂತರೆ, ಕಾರಿನಲ್ಲಿ ಓಡಾಡುವರು ಏನೆಂದುಕೊಳ್ಳುತ್ತಾರೋ ಏನೋ , ತೆಪ್ಪಗೆ ಕಾರಿನಲ್ಲಿ ಕೂತಿದ್ದರೆ, ಈ ಅವಾಂತರವಿರುತ್ತಿತ್ತೇ? ತಪ್ಪೆಲ್ಲವೂ ನನ್ನದೇ ಆದ್ದರಿಂದ, ನನಗೆ ನಾನೇ ಬೈಯ್ದುಕೊಳ್ಳುತ್ತ ಹೊರಟಿದ್ದ ನನಗೆ, ದಾರಿಯ ಬದಿಯಲ್ಲಿ, ಕಳೆಯಂತೆ ಬೆಳೆದಿದ್ದ " ಗಣಕೆ ಸೊಪ್ಪ" ನ್ನು ಕಂಡು, ಹೇಗೂ ದಾರಿ ತಪ್ಪಿ ಸುತ್ತುತ್ತಿದ್ದೇನೆ, ಇದನ್ಯಾಕೆ ಬಿಡಲಿ, ಎಂದು ಎಲೆಗಳನ್ನು ಆರಿಸಿ ಕಿತ್ತು ನನ್ನ ತರಕಾರಿ ಕವರಿಗೆ ಸೇರಿಸಿದೆ.


ಸಣ್ಣಗೆ ಮಳೆ ಬೇರೆ ಶುರುವಾಗತೊಡಗಿತ್ತು. ಈಗ ಯಾರನ್ನಾದರೂ ಅಡ್ರೆಸ್ ಕೇಳದೇ ವಿಧಿಯಿರಲಿಲ್ಲ. ದೂರದಲ್ಲಿ ಪೆಟ್ರೋಲ್ ಬಂಕೊಂದು ಕಂಡಿದ್ದರಿಂದ, ಅಲ್ಲಿಯೇ ಹೋಗಿ ಕೇಳೋಣವೆಂದು ಅತ್ತ ಜೋರು ಹೆಜ್ಜೆ ಹಾಕತೊಡಗಿದ್ದೆ. ಅಷ್ಟರಲ್ಲಿ ಹಿಂದೆ ದಾಪ್!ದಾಪ್! ಎಂದು ಯಾರೋ ಓಡಿ ಬರುತ್ತಿರುವ ಸದ್ದಾಗಿದ್ದರಿಂದ, ತಿರುಗಿದರೆ, ಯಾರೋ ಇಂಡಿಯನ್ ರನ್ನಿಂಗ್ ಮಾಡಿಕೊಂಡು ಬರುತ್ತಿದ್ದಾಳೆ! ಅವಳು ಹತ್ತಿರ ಬರುತ್ತಿದ್ದಂತೆ, ಅವಳಿಗೆ ಹಲ್ಲು ಕಿರಿದು ನಿಂತೆ. ಅವಳೋ, ನಿಲ್ಲದೇ, ನನ್ನ ಕವರಿನಲ್ಲಿದ್ದ ಗಣಕೆ ಸೊಪ್ಪಿನ ಕಡೆ ಕೈ ತೋರಿಸುತ್ತಾ.." ಡೋಂಟ್ ಈಟ್, ದಟೀಸ್ ಪಾಯಿಸನಸ್ " ಎಂದು ಮುಖ ಗಂಟಿಕ್ಕಿಕೊಳ್ಳುತ್ತಾ ವದರಿ ಓಡಿಯೇ ಹೋದಳು. " ಇದೊಳ್ಳೆ ಕಥೆಯಾಯಿತಲ್ಲಾ, ನಾನು ನಕ್ಕರೆ ನಗುವುದಿರಲಿ, ನನ್ನ ಗಣಕೆ ಸೊಪ್ಪನ್ನು ವಿಷ ಎಂದು ಬೈಯ್ದಳಲ್ಲಾ, ಈ ರಂಭೆಗೇನು ಗೊತ್ತು? ಗಣಿಕೆ ಸೊಪ್ಪಿನ ಮಹಿಮೆ? ಜನ್ಮದಲ್ಲಿ ಒಮ್ಮೆಯಾದರೂ ತಿಂದಿದ್ದಾಳೊ ಇಲ್ಲವೋ? ಅಥವಾ ಇಲ್ಲಿಗೆ ಬಂದ ಮೇಲೆ ಇಂಡಿಯಾದ ಸೊಪ್ಪು ತರಕಾರಿಗಳೆಲ್ಲಾ ಅವಳಿಗೆ ವಿಷವೆನಿಸಿರಬೇಕು. ಬರ್ಗರ್, ಚೀಸು, ಮಣ್ಣು ಮಸಿ ಚೆನ್ನಾಗಿ ತಿಂದು ಈಗ ಮೈ ಕರಗಿಸಲು ರನ್ನಿಂಗ್ ಬೇರೆ! , ದೊಡ್ಡ ಮೇಧಾವಿ ತರ ಹೇಳಿಬಿಟ್ಟಳಲ್ಲಾ ...ಇವಳಿಗೆ ತೂಕ ಇಳಿಯದೇ ಇರಲಿ ಎಂದು ಶಾಪ ಕೊಟ್ಟು, ಇವಳು ಅಡ್ರೆಸ್ ಹೇಳದಿದ್ದರೆ, ಕತ್ತೆ ಬಾಲ...ಇವಳಲ್ಲದಿದ್ದರೆ ಇನ್ನೊಬ್ಬಳನ್ನು ನಿಲ್ಲಿಸಿ ಕೇಳಿದರಾಯ್ತು ಎಂದು ಸಿಟ್ಟಿನಿಂದಲೇ ಬೇಗ ಬೇಗ ಹೊರಟೆ.

ಯಜಮಾನರೇನಾದರೂ ಟ್ರೇನಿಂಗ್ ಬೇಗ ಮುಗಿಯತಲ್ಲಾ ಎಂದು ಹೊರಬಂದರೆ ಹೇಗಿರುತ್ತದೆ?! ಕಾರ್ ಕೀ ನನ್ನ ಹತ್ತಿರವೇ ಇದೆ. ಕಾರಿನಲ್ಲಿ ನಾನಿಲ್ಲದನ್ನು ಕಂಡರೆ, ಹೊರಗೆ ಸುತ್ತಾಡಬೇಡವೆಂದರೂ ಎಲ್ಲೋ ಸುತ್ತಲು ಹೋಗಿದ್ದಾಳೆ ಎಂದು ಮೊಬೈಲಿಗೆ ರಿಂಗ್ ಕೊಟ್ಟರೇ, ಮೊಬೈಲು ಕಾರಿನಲ್ಲೇ ಇದೆ..! ಎಲ್ಲಿ ಹೋದಳಪ್ಪಾ, ಎಂದು ಒಂದತ್ತು ನಿಮಿಷ ಕಾಯುತ್ತಾರೆ... ಆಗ ಅವರಿಗೆ ಏನೇನು ಆಲೋಚನೆಗಳು ಬರಬಹುದು..ಎಂದು ಯೋಚಿಸುತ್ತಾ, ಅಂತಹ ಸ್ಥಿತಿಯಲ್ಲೂ ನಗು ಬಂತು.


ನನ್ನದೇ ಲೋಕದಲ್ಲಿ ಚಿಂತಿಸುತ್ತಾ ನಡೆಯುತ್ತಾ ನನಗೆ ಎದುರಿನಿಂದ ಬರುತಿದ್ದ ಬಿಳಿಯನೊಬ್ಬ " ನಮಸ್ತೇ" ಎಂದಿದ್ದನ್ನು ಕೇಳಿ, ಇವನೇನಾದರೂ ನನಗೆ ಮಾತನಾಡಿಸಿದನೇ? ಅಥವಾ ಯಾರಾದರೂ ಸಿಕ್ಕಿದರೆ ಅಡ್ರೆಸ್ ಕೇಳುತ್ತೇನೆಂದು ಹೋಗುತ್ತಿರುವ ನನಗೆ ಭ್ರಮೆಯೇ? ಇಲ್ಲ! ಬಿಳಿಯ ಎರಡೂ ಕೈ ಮುಗಿದು ನಿಂತಿದ್ದನ್ನು ಕಂಡು, ನಾನು ಬ್ಬೆಬ್ಬೆಬ್ಬೆ ಎಂದು ನಿಂತೆ. ನಿಜಕ್ಕೂ ನಂಬಲಾಗುತ್ತಿಲ್ಲ! ಸ್ವಚ್ಛ ಹಿಂದಿಯಲ್ಲಿ, ಮತ್ತೊಮ್ಮೆ, " ನಮಸ್ಕಾರ್! ಮೇರಾ ನಾಮ್ ಆಂಡ್ರ್ಯೂ. ತುಮಾರಾ ನಾಮ್ ಕ್ಯಾ ಹೈ " ಅಂದಾಗ ನನಗೆ ಸ್ವರ್ಗ ಮೂರು ಗೇಣು!. ಎರಡೂ ಕೈಲಿದ್ದ ಪ್ಲಾಸ್ಟಿಕ್ ಕವರುಗಳನ್ನು ಬಿಟ್ಟು, ನಾನೂ ಎರಡು ಕೈ ಜೋಡಿಸಿ, " ನಮಸ್ಕಾರ್ !" ಎಂದೆ. ಮೊನ್ನೆ ಮೊನ್ನೆ ತಾನೇ ಕೆಲವೊಂದು ಬ್ಲಾಗುಗಳಲ್ಲಿ " ಹಿಂದೀ ವಿರೋಧ"ದ ಬಗ್ಗೆ ಓದಿದ್ದ ನಾನು, ಇನ್ನು ಮೇಲೆ ನನಗೆ ಬರುವ ಅರಬರೆ ಹಿಂದಿಯನ್ನು ಇಲ್ಲಿರುವ ನಾರ್ತಿಗಳ ಜೊತೆ ಮಾತನಾಡಬಾರದು, ಅವರಿಗೆ ಕನ್ನಡ ಕಲಿಸ ಬೇಕೆಂದು ಯಜಮಾನರಿಗೂ ಹೇಳಿದ್ದೆ. ಈಗ ನಮ್ಮವನಲ್ಲದವನೊಬ್ಬ ನಮ್ಮ ಭಾಷೆಯನ್ನು ಕಲಿತು, ಮಾತನಾಡಿದ್ದನ್ನು ಕಂಡು ನಿಜಕ್ಕೂ ಖುಷಿಯಾಯಿತು.


ಆಂಡ್ರ್ಯೂ ಇಂಗ್ಲೆಂಡಿನವನಂತೆ. ಅವನ ಭಾರತೀಯ (ಕೇರಳ ಮೂಲದ) ಸ್ನೇಹಿತ ಹಿಂದಿ ಕಲಿಸಿದ್ದಂತೆ. " ಪರವಾಗಿಲ್ಲವೇ! ಮಲಯಾಳಿಗಳೂ ಹಿಂದಿ ಮಾತನಾಡುತ್ತಾರೆಯೇ?! ಬರೀ ಕನ್ನಡದವರಷ್ಟೇ ಕನ್ನಡ ಬಿಟ್ಟು ಉಳಿದೆಲ್ಲಾ ಭಾಷೆ ಮಾತನಾಡುತ್ತಾರೆಂದುಕೊಂಡಿದ್ದೆನೆಲ್ಲಾ! ಪರದೇಶದವನಿಗೆ ಇದ್ದ ಆರು ತಿಂಗಳಲ್ಲಿ ಹಿಂದಿ ಕಲಿಸಿದ್ದಾನಲ್ಲ" ಎಂದು ಸಂತೋಷವಾಯಿತು. ಬಹುಷಃ ಮಲಯಾಳಿ ಭಾಷೆ ಕಲಿಸಲೂ ಪ್ರಯತ್ನ ಪಟ್ಟಿದ್ದನೋ ಏನೋ! ನಮಗೇ ಆ ಭಾಷೆ ಕಲಿಯಲು ನಾಲಿಗೆ ತಿರುಗಲು ಕಷ್ಟ! (ನನಗಂತೂ ಕಡು ಕಷ್ಟ!) ಅದಕ್ಕೆ ಸುಲಭವೆಂದು ಇವನಿಗೆ ಹಿಂದಿ ಕಲಿಸಿದ್ದಾನೆನಿಸಿತು. ನಾನೂ ನನ್ನ ಗ್ರಾಮರ್ ಇಲ್ಲದ ಹಿಂದಿಯಲ್ಲಿ ಅವನೊಂದಿಗೆ ಸಂಭಾಷಣೆ ನಡೆಸಿದ್ದೆ. ಪೆಟ್ರೋಲು ಬಂಕು ಹತ್ತಿರ ಬರುತ್ತಲೇ, ಅವರಿವರನ್ನು ಅಡ್ರೆಸ್ ಕೇಳುವ ಬದಲು ಆಂಡ್ರ್ಯೂಗೇ ಕೇಳಿದರಾಯ್ತು...ಎಂದು ನಾನು ಅಡ್ರೆಸ್ ತಪ್ಪಿ ಹುಡುಕಾಡುತ್ತಿದ್ದುದನ್ನು ಅವನಿಗೆ ಸಂಕೋಚದಿಂದಲೇ ಹೇಳಿದೆ. ಅವನೋ ನನ್ನ ಮುಖವನ್ನೇ ಒಂದೆರಡು ಕ್ಷಣ ದಿಟ್ಟಿಸಿ, ನಾನು ನಡೆದು ಬಂದಿದ್ದ ದಿಕ್ಕಿಗೆ ಸಂಪೂರ್ಣ ವಿರುದ್ಧ ದಿಕ್ಕಿಗೆ ನಡೆಯಲು ಹೇಳಿದ್ದನ್ನು ಕಂಡು, ಭಯವೆನಿಸಿತ್ತು. ಏನೋ, ನಮ್ಮ ಭಾಷೆಯಲ್ಲಿ ಮಾತನಾಡಿದ್ದಕ್ಕೆ ನಾನು ಖುಷಿಯಾಗಿದ್ದನ್ನು, ಇವನೇನಾದರೂ ಅಪಾರ್ಥಮಾಡಿಕೊಂಡನೋ, ಅಥವಾ ನಿಜಕ್ಕೂ ನನಗೆ ಅಡ್ರೆಸ್ ಹೇಳುತ್ತಿದ್ದಾನೋ ಮತ್ತೆ ಗೊಂದಲ ಶುರುವಾಯಿತು. ನಾನು ಕೇಳಿದ ಅಡ್ರೆಸ್ಸಿಗೆ ನನ್ನನ್ನು ಬಿಟ್ಟು ಹೋಗುವುದಾಗಿ ಹೇಳಿದಾಗ, ಸರಿ ಹೇಗೂ ನಡೆದುಕೊಂಡು ತಾನೇ ಹೋಗುವುದು...ಏನಾಗುತ್ತದೋ ನೋಡಿಯೇ ಬಿಡೋಣವೆಂದು ಹೆಜ್ಜೆ ಹಾಕಿದೆ. ಅವನಿಗೆ ಬಾಲಿವುಡ್ ಸಿನೆಮಾಗಳು ಇಷ್ಟವೆಂದೂ, ಮದುವೆಯೆಂದರೆ ಎಲ್ಲರೂ ಹಾಗೆಯೇ ಮಾಡುತ್ತಾರೆಯೇ? ನಿನ್ನ ಗಂಡನೂ ಮದುವೆ ದಿನ ಕುದುರೆಯ ಮೇಲೆ ಕೂತು ಬಂದನೇ? ಎಂದೆಲ್ಲಾ ಕೇಳಿದ ಅವನ ಪ್ರಶ್ನೆಗಳಿಗೆ ಉತ್ತರಿಸುತ್ತಾ, ನಾನೂ " ನೀವುಗಳು ಅದು ಹೇಗೆ ಅಮ್ಮ, ಅಪ್ಪಂದಿರನ್ನು ರೆಸ್ಟ್ ಹೋಮಿಗೆ ಬಿಡುತ್ತೀರಾ? ಮಿಸ್ ಮಾಡುವುದಿಲ್ಲವೇ?" ಎಂದು ಕೇಳಿದ್ದಕ್ಕೆ, " ರೆಸ್ಟ್ ಹೋಮ್, ಮೊದಲು ವಯಸ್ಸಾದವರನ್ನು ನೋಡಿಕೊಳ್ಳುವವರಿದ್ದರೆ, ಅನುಕೂಲವಾಗಲೆಂದು ಸರ್ಕಾರ ರೆಸ್ಟ್ ಹೋಮುಗಳನ್ನು ಶುರು ಮಾಡಿದ್ದು, ಬರ ಬರುತ್ತಾ ಅದು ಹೀಗಾಗಿರುವುದು, ಎಲ್ಲವೂ ಶುಚಿಯಾಗಿ ನಡೆಸುತ್ತಾರೆಂದು ಇಲ್ಲ. ಕೆಲವೊಂದು ರೆಸ್ಟ್ ಹೋಮ್ ಗಳಲ್ಲಿ ವಯಸ್ಸಾದವರನ್ನು ಸರಿಯಾಗಿ ನೋಡಿಕೊಳ್ಳುವುದೇ ಇಲ್ಲ. ಆಗೆಲ್ಲಾ ರೆಸ್ಟ್ ಹೋಮಿನಲ್ಲಿರುವ ಅಪ್ಪ ಅಮ್ಮನನ್ನು ನೆನಸಿಕೊಂಡು ಬೇಜಾರಾಗುತ್ತದೆ" , ಎಂದ.


ಸುಮಾರು ಒಂದರ್ಧ ಗಂಟೆ ನಡೆದ ಮೇಲೆ, ನನಗೇ ಸ್ವಲ್ಪ ರೋಡಿನ ಗುರುತು ಹತ್ತಿತು. ಆಂಡ್ರ್ಯೂಗೆ ನಾನು ಹಿಂದಿಯಲ್ಲೇ ಮಾತನಾಡಿದ್ದು ಖುಷಿಯಾಯಿತಂತೆ! ನಾನು ಹೇಳಿದೆ, ನಾವು ಭಾರತೀಯರು, ಕಡಿಮೆಯೆಂದರೂ ಮೂರು, ನಾಲ್ಕು ಭಾಷೆ ಮಾತನಾಡುತ್ತೇವೆ ಎಂದು ಜಂಭ ಕೊಚ್ಚಿಕೊಂಡೆ! ನಮ್ಮ ಕಾರನ್ನು ಕಂಡ ಮೇಲೆ ಸ್ವಲ್ಪ ಉಸಿರು ಬಂದಂತಾಯಿತು. ಅವನಿಗೆ ಧನ್ಯವಾದ ಹೇಳಿ, ಬಿಡುವಿದ್ದರೆ, ಯಜಮಾನರು ಬರುವವರೆಗೂ ಇರು, ಪರಿಚಯಿಸುತ್ತೇನೆ, ಎಂದಿದ್ದಕ್ಕೆ ’ ಫಿರ್ ಮಿಲೆಂಗೇ" ಎಂದು ನಕ್ಕು ಹೊರಟ.

ಅಬ್ಬಬ್ಬಾ ಎಂದರೆ ಒಂದೆರಡು ಗಂಟೆಗಳಷ್ಟೇ ಸುತ್ತಾಡಿದ್ದು, ಆದರೆ ದಾರಿ ತಪ್ಪಿಸಿಕೊಂಡಾಗ ಆದ ಗಾಬರಿ, ನಡುಕ ಮರೆಯಲಾರದಂತದು. ಅದೇ ವೇಳೆಗೆ ಆಂಡ್ರ್ಯೂ ತರದ ವ್ಯಕ್ತಿಯ ಪರಿಚಯವೂ ಮರೆಯಲಾಗದಂತದು.


ಕಾರಿನಲ್ಲಿ ಕೂತು ಮೆಲಕು ಹಾಕುತ್ತಿದ್ದ ನನಗೆ, ಯಾರೋ ಇಬ್ಬರು ಹೆಂಗಸರು, ನಮ್ಮ ಕಾರಿನ ಹತ್ತಿರ ಬಂದಿದ್ದನ್ನು ಕಂಡು ಗಾಜು ಕೆಳಗಿಳಿಸಿದೆ. ಒಬ್ಬಳು ಬಿಳಿ ಹೆಂಗಸು, ಮತ್ತೊಬ್ಬಳು ಫಿಜೀ ಇಂಡಿಯನ್ನು ಇರಬೇಕು. " ರಿವರ್ಸ್ ತೆಗೆದುಕೊಳ್ಳುವಾಗ, ನಿನ್ನ ಕಾರಿಗೆ ಸ್ವಲ್ಪ ತಾಗಿತು, ಆಗಿನಿಂದ ಇಲ್ಲೇ ಕಾಯುತ್ತಿದ್ದೆ, ಸಾರಿ...ಅದಕ್ಕೆ ಎಷ್ಟಾಗುತ್ತದೆ ಖರ್ಚು." ಎಂದು ಕೇಳಿದಾಗ, ಒಂದು ಕ್ಷಣ ಭಯವಾಯಿತು. ಇದು ಅನಿಲರ ಆಸ್ಪತ್ರೆಯ ಕಾರು. ಏನಾದರೂ ಹೆಚ್ಚು ಕಡಿಮೆಯಾದರೆ, ನಮ್ಮ ತಲೆಗೇ ಬರುತ್ತದೆ ಎಂದು ದಡಬಡಿಸಿ ಇಳಿದು ನೋಡಿದರೆ, ನಂಬರು ಪ್ಲೇಟಿನ ಮೇಲೆ ಎಲ್ಲೋ ಸ್ವಲ್ಪ ಕಂಡರೂ ಕಾಣದ ಹಾಗೆ ಸ್ವಲ್ಪ ಗೀಚಾಗಿತ್ತು. ಜೊತೆಯಲ್ಲಿದ್ದ ಫಿಜೀ ಇಂಡಿಯನ್ನಿಗೆ ನಾನು ಇಂಡಿಯನ್ನು ಎಂದು ಗೊತ್ತಾದ ಕೂಡಲೇ," ಅಷ್ಟೇನೂ ಕಾಣಿಸುವುದಿಲ್ಲ ಅಲ್ಲವೇ? ನಾವು ಹೇಳಿದ್ದಕ್ಕೆ ಗೊತ್ತಾಯಿತು.." ಎಂದಳು ಹಿಂದಿಯಲ್ಲಿ. ಅವಳ ಮಾತಿನ ಧೋರಣೆ ನೋಡಿ, " ಇದು ನನ್ನ ಕಾರಲ್ಲ, ಕೆಲಸದ ಕಾರು, ಏನಾದರೂ ಹೆಚ್ಚು ಕಡಿಮೆಯಾದರೆ ನಾವೇ ದಂಡ ತೆರಬೇಕು. ನನ್ನ ಕಾರಿದ್ದರೆ, ಹೋಗಲಿ ಬಿಡು ಅನ್ನಬಹುದಿತ್ತು" ಎಂದು ಸಿಡುಕಿದೆ. ಈಗ ತಾನೆ, ಒಬ್ಬ ಬಿಳಿಯ ನನಗೆ ಸಹಾಯ ನೀಡಿ ಹೋದ, ಈ ಫಿಜೀ ಇಂಡಿಯನ್ನು ಬಿಳೀ ಹೆಂಗಸಿನ ಪರವಾಗಿ ಮಾತನಾಡಿದ್ದು ಕಂಡು ಸಿಟ್ಟು ಬಂತು. ಆದರೂ ಬಿಳಿಯಳಿಗೆ ಏನನ್ನಿಸಿತೋ, ನನ್ನ ಮೊಬೈಲು ನಂಬರು ತೆಗೆದುಕೋ, ಅದೇನೇ ಖರ್ಚಿದ್ದರೂ ನಾನು ಕೊಡುತ್ತೇನೆ" ಎಂದಳು. " ಇರಲಿ ಬಿಡು, ಪರವಾಗಿಲ್ಲ" ಎಂದಿದಕ್ಕೆ, ಒಂದಷ್ಟು ಸಲ " ಥ್ಯಾಂಕ್ಸು...ಥ್ಯಾಂಕ್ಸು " ಹೇಳಿ ಹೋದಳು.


ಇಷ್ಟೆಲ್ಲಾ ನಡೆದರೂ, ಇನ್ನೂ ಯಜಮಾನರ ಸುಳಿವಿಲ್ಲದನ್ನು ಕಂಡು, ಬೇಗ ಮುಗಿಸಿ ಹೊರ ಬಂದು, ನನ್ನನ್ನು ಹುಡುಕುತ್ತಾ ಹೊರಟಿಲ್ಲವಷ್ಟೇ? ಎಂದು ಅವರ ಮೊಬೈಲಿಗೆ ರಿಂಗು ಕೊಟ್ಟೆ. ಕರೆಯನ್ನು ಮೊಟಕುಗೊಳಿಸಿದಾಗ, ಸರಿ ಇನ್ನೂ ಒಳಗಿದ್ದಾರೆ ಎಂದು ಸ್ವಲ್ಪ ಸಮಾಧಾನವಾಯಿತು.

ಅವರಿಗೆ ಇದೆಲ್ಲಾ ಹೇಳುವುದೇ ಬೇಡ, ಸುಮ್ಮನೇ ಬೈಸಿಕೊಳ್ಳಬೇಕಾಗುತ್ತದೆ, ಯಾವಾಗಲಾದರೂ ಹೇಳಿದರಾಯಿತು ಎಂದು ಸುಮ್ಮನೆ ಕೂತೆ. ಹೊರಬಂದ ಯಜಮಾನರಿಗೆ ನಾನು ಕಾರಿನಲ್ಲೇ ಕೂತಿದನ್ನು ಕಂಡು ಖುಷಿಯಾಗಿ, "ಈಗ ಯಾವ ಕಡೆ ಹೊರಡೋಣ" ಎಂದರು. ನನಗೋ ದಾರಿ ತಪ್ಪಿ ನಡೆದದ್ದು, ಗಾಬರಿ, ಖುಷಿ ಎಲ್ಲವೂ ಸೇರಿ, ಶಾಪಿಂಗೂ ಬೇಡ, ಏನೂ ಬೇಡ ಅನ್ನಿಸಿತ್ತು. " ಎಲ್ಲಿಗೂ ಬೇಡ, ನನಗೆ ನಡೆದೂ ನಡೆದೂ ಸುಸ್ತು, ಎನಾದರೂ ತಿಂದು ಹೊರಡೋಣ, ನನಗೆ ಸಾಕಾಗಿದೆ" ಎಂದು ಬಿಟ್ಟೆ! ಅದೆಲ್ಲಿಗೆ ನಡೆದುಕೊಂಡು ಹೋಗಿದ್ದೆ? ಸುಸ್ತಾಗುವಷ್ಟು? ಎಲ್ಲೂ ಹೋಗಬೇಡ ಎಂದಿರಲಿಲ್ಲವೇ?" ಎಂದು ಯಜಮಾನರ ಪ್ರಶ್ನೆಗಳಿಗೆ, ತಟ್ಟನೇ ನನ್ನ ತಪ್ಪಿನರಿವಾಯಿತು. " ಇಲ್ಲೇ ಪಾರ್ಕಿನಲ್ಲಿ ಸುತ್ತುತ್ತಿದ್ದೆ, ನೀವು ನೋಡಿದರೆ ಬೇಗ ಬರುತ್ತೇನೆಂದು ಇಷ್ಟು ಲೇಟಾ ಬರುವುದು? ಎಷ್ಟೂ ಅಂತ ಒಬ್ಬಳೇ ಕಾರಿನಲ್ಲಿ ಕೂರುವುದು? ಇದೇ ಕಡೆ, ಇನ್ನೊಮ್ಮೆ ನಾನು ಬರುವುದಿಲ್ಲ.." ಎಂದು ನಾನು ಎಲ್ಲ ಸಿಟ್ಟನ್ನೂ ಯಜಮಾನರ ಮೇಲೆ ಹಾಕಿದೆ. " ಆಯ್ತು ..ಆಯ್ತು...ನಡೆದೂ ಸುಸ್ತಾಯಿತು ಎಂದೆಯಲ್ಲಾ, ಅದಕ್ಕೇ ಕೇಳಿದೆ" ಎಂದ ಯಜಮಾನರಿಗೆ ಉತ್ತರಿಸಿದರೆ, ಮತ್ತೆಲ್ಲಿ ನನ್ನ ಬಂಡವಾಳ ಹೊರಬೀಳುವುದೋ ಎಂದು ಸುಮ್ಮನೇ ಕೂತೆ.


ಶಾಪಿಂಗೇನೂ ಬೇಡ ಎಂದಿದ್ದರಿಂದ ಸೀದಾ ಮನೆ ದಾರಿ ಹಿಡಿದಿದ್ದೆವು. ಸಬ್ ವೇನಲ್ಲಿ ಏನಾದರೂ ತಿಂದು ಹೊರಡೋಣವೆಂದ ಯಜಮಾನರ ಮಾತಿಗೆ ತಲೆಯಾಡಿಸಿ ಕೆಳಗಿಳಿದೆ. ಯಜಮಾನರು ಮೆನು ಸೆಲೆಕ್ಟ್ ಮಾಡಲು ಹೋದ್ದರಿಂದ ನಾನು ಖಾಲಿಯಿದ್ದ ಕುರ್ಚಿಗಳ ಕಡೆ ನಡೆದಿದ್ದೆ. ಅಷ್ಟರಲ್ಲೇ ಯಾರೋ ಬಿಳೀ ಹೆಂಗಸೊಬ್ಬಳು ಕೈ ಬೀಸಿದ್ದರಿಂದ, ಇದ್ಯಾರು? ಎಂದು ನೋಡಿದರೆ, ಕಾರಿಗೆ ಗುದ್ದಿದವಳು! ಯಾರೋ ಗಂಡಸಿನ ಜೊತೆ ಕೂತು ತಿನ್ನುತ್ತಿದ್ದವಳು, ನನ್ನನ್ನು ಗುರುತು ಹಿಡಿದು ಕೈ ಬೀಸಿದ್ದಳು. ನಾನು ಕೈ ಬೀಸಿ, ಖಾಲಿಯಿದ್ದ ಕುರ್ಚಿಯನ್ನೆಳೆದು ಕೂತೆ. ತಿಂಡಿ ಟ್ರೇ ಹಿಡಿದು ಬಂದ ಯಜಮಾನರು " ಅದ್ಯಾರು ನಿನ್ನ ಫ್ರೆಂಡು? " ಎಂದಿದ್ದಕ್ಕೆ, ಏನೂ ಅಲೋಚಿಸದೆ, " ಅವಳಾ? ನಮ್ಮ ಕಾರಿಗೆ ಗುದ್ದಿದವಳು" ಎಂದು ಬಿಟ್ಟೆ. " ನಮ್ಮ ಕಾರಿಗೆ ಯಾವಾಗ ಗುದ್ದಿದ್ದರು? ಯಾವ ಕಾರು? ಅಷ್ಟಕ್ಕೂ ಮಧ್ಯಾಹ್ನ ನೀನೆಲ್ಲಿ ಹೋಗಿದ್ದೆ ನಿಜ ಹೇಳು" ಎಂದ ಯಜಮಾನರ ಪ್ರಶ್ನೆಗಳಿಗೆ " ಇನ್ನು ಸುಳ್ಳು ಹೇಳಿ ದಕ್ಕಿಸಿಕೊಳ್ಳಲು ಸಾಧ್ಯವಿಲ್ಲ" ಎಂದು ನಿರ್ಧರಿಸಿ, ನಡೆದ ಸಂಗತಿಯೆಲ್ಲವನ್ನೂ ಚಾಚೂ ತಪ್ಪದೆ ಹೇಳಿ ಬಿಟ್ಟೆ. ಯಜಮಾನರೂ ಏನೂ ಮಾತನಾಡದೆ ಸೀರಿಯಸ್ಸಾಗಿ ಸುಮ್ಮನೇ ತಿನ್ನುತ್ತಿದ್ದರು. ಅವರೇನೂ ಮಾತನಾಡದಿದ್ದರಿಂದ ಯಾಕೋ ಪರಿಸ್ಥಿತಿ ಗಂಭೀರವಾಗಿದೆ ಎಂದೆನಿಸಿ, " ನಾನು ಕಾರಿನಲ್ಲೇ ತಿನ್ನುತ್ತೇನೆ, ಈಗ ಹಸಿವಿಲ್ಲ" ಎಂದು ತಿಂಡಿ ಪ್ಯಾಕೆಟು ಹಿಡಿದು ಎದ್ದೆ.


ದಾರಿಯಲ್ಲಿ ಬರುವಾಗ ಏನೂ ಮಾತನಾಡದೆ ಕೇಳಿದ್ದಕ್ಕೆ ಬರೀ ’ ಹಾಂ....ಹೂಂ’ ಎನ್ನುತ್ತಿದ್ದರಿಂದ ಅವರಿಗೆ ಸಿಟ್ಟು ಬಂದಿದೆಯೆಂದು ಅರಿವಾಗಿ ನಾನು ತೆಪ್ಪಗಿದ್ದೆ. ಮನೆಗೆ ಬಂದು ಊಟ ಮಾಡುವಾಗಲೂ ಸುಮ್ಮನಿದ್ದವರು, " ಇನ್ಮೇಲೆ ನನ್ನ ಕೆಲಸವಿದ್ದಾಗ ನೀನು ಅಕ್ಲೆಂಡಿಗೆ ಬರುವುದು ಬೇಡ, ಹೀಗೆ ಏನಾದರೂ ಮಾಡಿ ಒಂದು ದಿನ ನನ್ನ ತಲೆಗೆ ತಂದು ಇಡುತ್ತೀಯಾ.." ಎಂದಾಗ ನನಗೂ ಸಿಟ್ಟು ಬಂತು. " ನನಗೇನು ದಾರಿ ಗೊತ್ತಾಗದಿದ್ದರೆ, ಬಾಯಿಲ್ಲವೇ? ಕೇಳಲು? ಯಾರೂ ಸಿಕ್ಕದಿದ್ದರಿಂದ ಇಷ್ಟೆಲ್ಲಾ ಆಗಿದ್ದು, ಎಲ್ಲಿಗೂ ಕರೆದುಕೊಂಡು ಹೋಗದಿದ್ದರೆ ಅಷ್ಟೇ ಹೋಯಿತು, ನಾನೇ ಹೋಗುತ್ತೇನೆ" ಎಂದೆ. " ಅದ್ಯಾರಿಗೆ ಹೆದರಿಸುತ್ತೀಯಾ? ಹೀಗೆ ಆಡುತ್ತಿರು, ನೀನೇ ಹಾಡುತ್ತಿರುತ್ತೀಯಲ್ಲಾ, " ಎಲ್ಲರಂತಹವನಲ್ಲಾ ನನ ಗಂಡಾ....ಎಲ್ಲು ಹೋಗದ ಹಾಂಗ ಮಾಡಿಟ್ಟಾ, ಕಾಲ್ಮುರಿದು ಬಿಟ್ಟಾ! " ಅಂತ ಹಾಗೆಯೇ ಕಾಲು ಮುರಿದು ಕೂರಿಸುತ್ತೇನೆಂದು" ತಮಾಷೆ ಮಾಡಿದರು. " ಈ ದೇಶದಲ್ಲಿ ಇವೆಲ್ಲಾ ಆಗದ ಮಾತುಗಳು, ನನ್ನ ಕಾಲಿನ ತಂಟೆಗೆ ಬಂದರೆ " ಡೊಮೆಸ್ಟಿಕ್ ವೈಯಲೆನ್ಸಿಗೆ" ದೂರು ಕೊಡುತ್ತೇನೆಂದು ನಾನೂ ನಗುನಗುತ್ತಲೇ ಹೆದರಿಸಿದೆ.

ನಾಳೆ ಮತ್ತೆ ಆಕ್ಲೆಂಡಿಗೆ ಹೋಗಬೇಕಂತೆ. ಕಾರಿನಿಂದಿಳಿಯದಿದ್ದರೆ ಡಬಲ್ ಶಾಪಿಂಗ್ ಮಾಡಿಸುವುದಾಗಿ ಹೇಳಿದ್ದಾರೆ! ನಾನು ಬಲೇ ಖುಷಿಯಿಂದಲೇ " ಹೂಂ" ಅಂದಿದ್ದೇನೆ. ಯಾರಿಗೆ ಗೊತ್ತು ನಾಳೆ ಕಾರಿನಿಂದಿಳಿದು ಮತ್ತ್ಯಾವ ಕಡೆ ಹೋಗುತ್ತೇನೋ?;)

8 comments:

Anonymous said...

Chenagide Girija...aa ladies honest agi wait madutha idru...nimage... paapa.....nimma oorina Ganapathi chenagide...
rgds..
Sangeetha

Anonymous said...

LOL ನೀಲ್-ಗಿರಿ, ತುಂಬಾ ಚನ್ನಾಗಿದೆ ನಿಮ್ಮ ಈ ಘಟನೆಯ ವಿವರ.

ನನ್ನ ಅನುಭವದ ಮೇಲೆ ನಿಮಗೆ ಒಂದು ಉಪಾಯ ಹೇಳುತ್ತೇನೆ. ಇನ್ನೊಮ್ಮೆ ಹಾಗೆ ಕಾರ್ ಬಿಟ್ಟು ಒಬ್ಬರೇ ಎಲ್ಲಾದರೂ ಹೋದರೆ ಒಂದು handheld GPS ಅನ್ನು ತೆಗೆದುಕೊಂಡು ಹೋಗಿ. ನೀವು ಎಲ್ಲೇ ಹೋದರು ನಿಮ್ಮನ್ನು ಸುರಕ್ಷಿತವಾಗಿ ಈ GPS ನಿಮ್ಮ ಕಾರ್ ಎಲ್ಲಿ ಇರುವುದೋ ಅಲ್ಲಿಗೆ ತಲುಪಿಸುತ್ತದೆ. ಬೀದಿಯಲ್ಲಿ ಯಾರನ್ನು ರಸ್ತೆ ಕೇಳುವ ಮುಜುಗರದ(ಹೊರ ದೇಶದಲ್ಲಿ ಅದೊಂದು ಮುಜುಗರವೇ ಸರಿ) ಪರಿಸ್ಥಿತಿ ಬರುವುದೇ ಇಲ್ಲ.

ನಮ್ಮ ಮನೆಯವರು ಹೀಗೆ ನಾವು ಹೋದಲ್ಲೆಲ್ಲ ಡ್ರೈವ್ ಮಾಡ್ತಾ ಎಲ್ಲೆಲೋ ಕಳೆದೆ ಹೋಗ್ತಾ ಇದ್ರೂ. ಹೋದ ದಾರಿಯನ್ನು ಗುರುತು ಇಟ್ಟುಕೊಂಡು ಮತ್ತೆ ಅದೇ ದಾರಿಯಲ್ಲಿ ಬಾ ಅಂತ ಅದೆಷ್ಟು ಸರಿ ಹೇಳಿದೆನೋ ನೆನಪಿಲ್ಲ. ಪ್ರತಿ ಸಲ ದಾರಿ ತಪ್ಪುವುದು, ಗೊತಿಲ್ಲದ ಊರಿನಲ್ಲಿ ಕಳೆಯುವುದು, ನನಗೆ ನೆತ್ತಿಗೆರುವಷ್ಟು ಸಿಟ್ಟು ತರಿಸುವುದು! ಈ GPS ಒಂದು ನಿಜವಾದ ವರವಾಗಿ ಬಿಟ್ಟಿದೆ ನಮಗೆ. ಅದನ್ನು ಉಪಯೋಗಿಸಿದ ದಿನದಿಂದ ಒಮ್ಮೆಯೂ ನಾನು ಅವಳು ಎಲ್ಲಿ ಕಳೆದು ಹೋದಳು ಎಂದು ಯೋಚನೆ ಮಾಡಿದವನಲ್ಲ. ಈ GPS ಪ್ರತಿ ಸಲವೂ ನನ್ನವಳನ್ನು ನನ್ನ ಬಳಿ ಸುರಕ್ಷಿತವಾಗಿ ಕರೆದುಕೊಂಡು ಬಂದಿದೆ. :)

ಈ GPS ಇದ್ದಲ್ಲಿ ದಂಪತಿಗಳ ನಡುವೆ ಶಾಂತಿ,ನೆಮ್ಮದಿ ನೆಲೆಸುವುದರಲ್ಲಿ ಎಳ್ಳಷ್ಟು ಸಂದೇಹವಿಲ್ಲ! ಇದು ನನ್ನ ಅನುಭವ. :D

JH

bhadra said...

ಸ್ವಯಂ ಘೋಷಾ ಘೋಷಿಸಿಕೊಂಡು ಹೊರಗೆ ಹೋದರೆ - ಹೀಗೆಯೇ ಆಗೋದು :P
ಸಧ್ಯ ನೀವೊಬ್ರೇ ದಾರಿ ತಪ್ಪಿಸಿಕೊಂಡಿದ್ರಲ್ಲಾ! ಜೊತೆಗೆ ಎಂಡಿಯವರಿಗೂ ದಾರಿ ತಪ್ಪಿಸಿಬಿಟ್ರೆ ಗತಿ ಏನು? :o
ಪರದೇಶದಲ್ಲಿ ಹಿಂದಿಯಾದರೇನಂತೆ, ಮಲಯಾಳ ಆದರೇನಂತೆ, ಅವರೆಲ್ಲರೂ ಕನ್ನಡಮ್ಮ ಅಕ್ಕ ತಂಗಿಯರೇ! ನಿಮ್ಮನ್ನು ಕಾಪಾಡಿದಳಲ್ಲ!

ಆಸ್ಪತ್ರೆ ಕಾರಾದ್ದರಿಂದ, ಇತರ ಕಾರುಗಳಿಗೆ ಜಖಂ ಆದರೂ ಪರವಾಗಿಲ್ಲ ಬಿಡಿ. ಅವರಿಗೆ ಮದ್ದು ನೀಡಿ, ತೆಗೆದುಕೊಳ್ಳಬೇಕಾದ ಫೀಜಿಗೆ ಜಮಾ ಮಾಡಿದರಾಯ್ತು. ಎಂಡಿ ನಿಮ್ಮ ಕಾಲು ಮುರಿಯೋಲ್ಲ ಬಿಡಿ, ಹೆದರಬೇಡಿ. ಹಾಗೇನಾದರೂ ಮಾಡಿದರೆ ಅವರಿಗೇ ಕಷ್ಟ. ಆಗಲಾದ್ರೂ ಅಡುಗೆ ಮನೆ ಡ್ಯೂಟಿಯಿಂದ ನೀವು ಸ್ವಲ್ಪ ಕಾಲ ತಪ್ಪಿಸಿಕೊಳ್ಳಬಹುದು.

ಪರವಾಗಿಲ್ಲರೀ! ಎಂಡಿಯವರ ಪಾಲಿಗೆ ಟೆರರಿಸ್ಟ್ ಆಗಿದ್ದೀರಿ. ನಮ್ಮ ಮನೆಯಲ್ಲೂ ಒಂದಿದೆ, ಹುಂ! ಮೊದ್ದು ಗೂ* - ಓಹ್ ಇಲ್ಲೆಲ್ಲಾ ಹೇಳಬಾರದಲ್ವಾ - ಹಾಗೇನಾದರೂ ಅವಳಿಗೆ ತಿಳಿದ್ರೆ ನನ್ನ ...

ತಿಂಗಳಿಗೊಮ್ಮೆಯಾದರೂ ಸುಂದರ ಬರಹ ನೀಡ್ತಿದ್ದೀರಲ್ಲ - ವಂದನೆಗಳು :)

Anonymous said...

nim blog thumba chennagide...
hinde 2-3 sala nodidde...
comment madlikke pursott sikkirlilla...
nim hale barahagalannela kootkondu odbeku ondina

vijayraj

sunaath said...

ತುಂಬಾ ಆಪ್ತವಾದ ಬರವಣಿಗೆ.

Pranathi said...

LOL @ shaapa hakiddu ......odutta edu biddu nagutha idde girija

esto dina adamele nimma blog odutha idini.......tumba chennagi bardidira (as usual :))

naanu oble hagella shaapa hakvalu ankondidde........ega neevu shaapa hakadu keli swalpa samadana aitu.....yaake andre......namma MD yavaglu bita iruthare....gurtu parichaya ilde iravrigella shaapa hakutya antha :)

nimma baravanige odbekarella........nanagu nimagu compare madkothini.....namma ibrudu tumba honduthe......adre naanu matra yavade karnakku mobile nantu......mareyalla :)

NilGiri said...

@ Sangeetha,

ಹೌದು ಸಂಗೀತ. ಎಲ್ಲರೂ ಹೀಗೆಯೇ ಇರುತ್ತಾರಂತಲ್ಲ, ಕೆಲವರು ಬೇಕೆಂದೇ ಕಾರಿಗೆ ಗುದ್ದಿ ಹೋಗುವವರೂ ಇದ್ದಾರೆ.
******************
@ JH,

ನಿಮ್ಮ ಅನುಭವ ಚೆನ್ನಾಗಿದೆ. ಮೊಬೈಲನ್ನೇ ಮರೆತು ತಿರುಗಾಡುವವಳು ನಾನು. ಇನ್ನು GPS! ಆದರೂ ನಿಮ್ಮ ಸಲಹೆ ಯಜಮಾನರ ಮುಂದಿಟ್ಟಿದ್ದೇನೆ:D.

*********************
@ Sir,

ಯಜಮಾನರೇನೋ ಅಡಿಗೆ ಮಾಡುತ್ತಾರೆ. ಅಡಿಗೆ ಮನೆ ರಂಪ ಕ್ಲೀನ್ ಮಾಡವವರಾರು?? ನಿಮ್ಮವರಿಗೆ " ಮುದ್ದು ಗೊಂಬೆ"ಯೆಂದೇ ಕರೆದದ್ದೆಂದು ಅವರಿಗೆ ಸಾಧಿಸುತ್ತೇವೆ. ಏನೂ ಹೆದರಬೇಡಿ ಸಾರ್. ಬರಹ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು.

*********************

@ Vijayraj,

ತಾಣಕ್ಕೆ ಭೇಟಿ ನೀಡಿದ್ದಕ್ಕೆ ಥ್ಯಾಂಕ್ಸು ವಿಜಯರಾಜ್ ಅವರೆ. ನಿಮಗೆ ಸಮಯವಿದ್ದಾಗ ಓದಿ, ಕಮೆಂಟು ಹಾಕಿ :)

*******************
@ ಕಾಕಾ,

ಬರವಣಿಗೆ ಮೆಚ್ಚಿಕೊಂಡಿದ್ದಕ್ಕೆ ಥ್ಯಾಂಕ್ಸು.

***********************
@ Pranathi

ಆಗಿನ ನನ್ನ ಪಾಡು ನೆನಸಿಕೊಂಡರೆ, ನಂಗೂ ನಗು ಬರುತ್ತೆ :D

ಶಾಪ, ಗುರುತು ಪರಿಚಯವಿಲ್ಲದವರಿಗೇ ಕೊಡಬೇಕು ಅಂತ MDಗೆ ಹೇಳಿ ಪ್ರಣತಿ.

ಇನ್ನು ಮೊಬೈಲು! ನಂಗೂ ಅದಕ್ಕೂ ದೂರಾ ದೂರ. ಅದೊಂದು ದೊಡ್ಡ ಕಷ್ಟ ನನಗೆ. ಅದು ಸುಮ್ಮನಿದ್ದರೇ ಗಂಟೆಗೊಂದಷ್ಟು ಸಲ ತೆಗೆದೂ ತೆಗೆದೂ ನೋಡಬೇಕು! ಎಷ್ಟು ಕಷ್ಟ! ಬೇಡಪ್ಪಾ ಬೇಡ.

shivu.k said...

ರ್ರೀ... ಮೇಡಮ್,

ಇದೆನ್ರಿ ನಿಮ್ಮ ಕತೆಯನ್ನು ಓದುತ್ತಿದ್ದರೆ ಥೇಟ್ ನನ್ನ ಹೆಂಡತಿಯು ಹೀಗೆ ನಿಮ್ಮ ಹಾಗೆ ಮಾಡುವುದು. ಎಲ್ಲಿಗೆ ಕರೆದುಕೊಂಡು ಹೋದರೂ ಏನಾದರೂ ಒಂದು ಯಡವಟ್ಟು ಮಾಡಿಟ್ಟಿರುತ್ತಾಳೆ. ನಿಮ್ಮ ಈ ಲೇಖನ ಓದುತ್ತಿದ್ದರೆ ನನ್ನ ಹಳೆಯ ಘಟನೆಗಳೆಲ್ಲಾ ನೆನಪಿಗೆ ಬಂತು. ನಿಮ್ಮ ಬರವಣಿಗೆ ಬಹಳ ಆಪ್ತವಾಗಿದೆ. ಇನ್ನಷ್ಟು ಇಂತವೇ ಬರೆಯುತ್ತಿರಿ! ಇನ್ನಷ್ಟು ಯಡವಟ್ಟು ಮಾಡಿಕೊಳ್ಳುತ್ತಿರಿ!

ಶಿವು.ಕೆ