Thursday 17 July 2008

ಸ್ವಯಂಕೃತಾಪರಾಧ!

ನನಗಿರುವ ಅನೇಕ ದುರಭಾಸ್ಯಗಳಲ್ಲಿ ಅತ್ಯಂತ ಕೆಟ್ಟ ಅಭ್ಯಾಸವೆಂದರೆ ಕೈಗೆ ಏನನ್ನು ಕೊಟ್ಟರೂ ಅದನ್ನು ಕೆಳಗೆ ಬೀಳಿಸಿಯೇ ತೆಗೆದುಕೊಳ್ಳುವುದು. ಚಿಕ್ಕವಳಿದ್ದಾಗಲಂತೂ ನಮ್ಮಮ್ಮನ ಹತ್ತಿರ ಬೈಸಿಕೊಂಡಿದ್ದು ಲೆಕ್ಕವಿಲ್ಲ. ಕೈಗೆ ತಿಂಡಿ ಕೊಟ್ಟರೂ ಬೀಳಿಸಿ ಕೊಂಡೇ ತಿನ್ನುತ್ತಿದ್ದಿದ್ದು. ಅದೇನೋ ನನ್ನ ಕೈಗೆ ಏನು ಕೊಟ್ಟರೂ ಅದು ನಿಲ್ಲುವುದಿಲ್ಲ, ಎಷ್ಟೇ ಜಾಗರೂಕಳಾಗಿದ್ದರೂ ಅದು ಹ್ಯಾಗೋ ಪಟಕ್ಕನೇ ಕೆಳಗೆ ಬಿದ್ದೇ ಬಿಡುತ್ತಿತ್ತು.

ನನ್ನ ಈ ಅಭ್ಯಾಸದಿಂದ ಯಾರಿಗೇನೂ ಲಾಭವಾಗದಿದ್ದರೂ ನಮ್ಮ ನಾಯಿಗೆ ಮಾತ್ರ ಸಿಕ್ಕಾಪಟ್ಟೆ ಲಾಭವಾಗುತ್ತಿತ್ತು. ನಮ್ಮಮ್ಮ ಎಲ್ಲರ ಕೈಗೂ ತಿಂಡಿ ಕೊಟ್ಟರೆ, ಎಲ್ಲರೂ ಚೂರೂ ಚೆಲ್ಲದೆ, ಬೀಳಿಸದೆ ನೇರವಾಗಿ ಬಾಯಿಗೆ ಹಾಕಿಕೊಂಡು, ಅಲ್ಲಿಂದಲೂ ಬೀಳದಂತೆ ಕೈ ಅಡ್ಡವಾಗಿಟ್ಟುಕೊಂಡು ತಿಂದು ಮುಗಿಸಿದರೆ, ನಾನು. ನಮ್ಮಮ್ಮ ಕೈಗೆ ಕೊಡುವುದೇ ತಡ. ಕೆಳಗೆ ಬೀಳಿಸಿಕೊಂಡಿರುತ್ತಿದ್ದೆ. ಬಗ್ಗಿ ಎತ್ತಿಕೊಳ್ಳುವ ಮೊದಲೇ ನಮ್ಮ ಟೈಗರ್ ಬಾಯಿ ಹಾಕಿ ಬಿಡುತ್ತಿತ್ತು.


ಎರಡು ಕತ್ತೆ ವಯಸ್ಸಾದರೂ ನನ್ನ ಈ ಅಭ್ಯಾಸ ಮಾತ್ರ ಹೋಗಲಿಲ್ಲ. ಮದುವೆಯಾದ ಮೇಲೆ ನಮ್ಮವರಿಗೆ ನನ್ನ ಈ ದುರಭ್ಯಾಸ ತಿಳಿದಿದ್ದರಿಂದ ( ಮೊದಲ ಭೇಟಿಯಲ್ಲಿ ಅವರಿತ್ತ ಹೂವಿನ ಬೊಕೆ ಸಹ ಕೆಳಗೆ ಬೀಳಿಸಿಯೇ ಎತ್ತಿಕೊಂಡಿದ್ದೆ) ನನ್ನ ಕೈಗೆ ಏನನ್ನೂ ದಾಟಿಸುತ್ತಿರಲಿಲ್ಲ.


ಎಲ್ಲವನ್ನು ಬೀಳಿಸುತ್ತೇನೆ ಎಂದಲ್ಲಾ, ನಾನೇ ಕೈಗೆತ್ತಿಕೊಳ್ಳುವಾಗ ಹುಷಾರಾಗಿಯೇ ತೆಗೆದುಕೊಳ್ಳುತ್ತೇನೆ. ತಟ್ಟೆ ಲೋಟಗಳನ್ನು ನನ್ನ ಕೈಯಾರೆ ಬೀಳಿಸಿಲ್ಲ, ಆದರೆ ಯಾರಾದರೂ ಹಿಡಿದು ಕೋ ಎಂದು ಕೊಟ್ಟರೆ ಮಾತ್ರ...ಢಂ!


ಶಾಪಿಂಗಿಗೆ ಹೊರಟರೆ ನನ್ನದೇನಿದ್ದರೂ ಯಾವ್ಯಾವುದು ಸಾಮಾನು ಬೇಕೆಂದು ಲಿಸ್ಟ್ ನೋಡುತ್ತಾ ಕೈ ಗಾಡಿಯನ್ನು ದೂಡುವ ಕೆಲಸ ಅಷ್ಟೇ. ನಾನೇನೂ ಬೀಳುಸುವದಿಲ್ಲವಾದರೂ ಯಜಮಾನರು ಯಾಕೋ ರಿಸ್ಕ್ ತೆಗೆದುಕೊಳ್ಳುವುದು ಬೇಡ ಅಂದಿದ್ದರಿಂದ, ನನ್ನದೇನಿದ್ದರೂ ಬೋರ್ಡ್ ಓದುವ ಕೆಲಸ ಅಷ್ಟೇ.


ಒಮ್ಮೆ ಡಿವಿಡಿ ಪ್ಲೇಯರ್ ಗಳ ಸೇಲ್ ಹಾಕಿದ್ದರು. ಒಂದೆರಡು ತೆಗೆದುಕೊಂಡು ಇಡೋಣ, ಊರಿಗೆ ಹೋದಾಗ ಯಾರಿಗಾದರೂ ಕೊಡಬಹುದಲ್ಲಾ ಎಂದು ಇಬ್ಬರೂ ಹೊರಟೆವು. ಸಿಕ್ಕಾಪಟ್ಟೆ ರಶ್ಯಿನ ಮಧ್ಯೆ ಎರಡು ಪ್ಲೇಯರ್ ಗಳ ಬಾಕ್ಸ್ ಹಿಡಿದುಕೊಂಡು ದುಡ್ಡು ಕೊಡಲು ಕ್ಯೂ ನಿಂತಿದ್ದೆವು. ಕೌಂಟರಿನ ರಂಭೆ, ಯಜಮಾನರು ಕಾರ್ಡು ಉಜ್ಜುತ್ತಾ ನಿಂತಿದ್ದರಿಂದ, ಪಕ್ಕದಲ್ಲೇ ಇದ್ದ ನನ್ನ ಕೈಗೆ ಪ್ಯಾಕೆಟ್ ಕೊಡಲು ಬಂದಳು. ನಾನೋ ಬಲೇ ಸಂತೋಷದಿಂದ ಎರಡೂ ಕೈ ಚಾಚಿ ಈಸಿಕೊಳ್ಳಲು ಹೋದೆ. ಯಜಮಾನರು ಕಾರ್ಡ್ ಉಜ್ಜುವುದನ್ನೂ ಬಿಟ್ಟು ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಲು ಅವರೇ ಕೈ ಚಾಚಿದರು. ಆದರೇನು ರಂಭೆ ನನ್ನ ಕೈಗೆ ಪ್ಯಾಕೆಟ್ ಕೊಡಲು ಬಾಗಿದ್ದರಿಂದ, ನಾನೂ ಈಸಿಕೊಳ್ಳಲು ಕೈ ನೀಡಿದ್ದರಿಂದ ಪ್ಯಾಕೆಟ್ ಅವಳ ಕೈಯಿಂದ ಜಾರಿ ನನ್ನ ಕೈಗೆ ಬರುವ ಬದಲು ದಡ್ ಎಂದು ಕೆಳಗೆ ಬಿತ್ತು. ಅವಾಕ್ಕಾದ ಕೌಂಟರಿನ ಹುಡುಗಿ ಕೂಡಲೇ ಸಾರಿ ಸಾರಿ ಎಂದಿದ್ದರಿಂದ, ಸದ್ಯ ನನ್ನ ತಪ್ಪಿಲ್ಲವಲ್ಲ ಎಂದು ನಿಂತೆ. ಯಜಮಾನರು ನನ್ನತ್ತ ಅರ್ಥಗರ್ಭಿತ ನೋಟ ಬೀರಿದರು. ಆ ಹುಡುಗಿ ಏನಂದು ಕೊಂಡಳೊ ಏನೋ, ಆ ಪ್ಯಾಕಿನ ಮೇಲೆ ಡ್ಯಾಮೇಜ್ ಎಂದು ಬರೆದು, ಬೇರೆಯೇ ಎರಡು ಡಿವಿಡಿ ಪ್ಲೇಯರ್ ಗಳನ್ನು ಚಕಾಚಕಾ ಎಂದು ಪ್ಯಾಕ್ ಮಾಡಿ ಯಜಮಾನರ ಕೈಗೆ ಕೊಟ್ಟಳು. " ಅಯ್ಯೋ ನಂಗೆ ಗ್ರೇ ಕಲರ್ ಬೇಡ, ಎರಡೂ ಬ್ಲ್ಯಾಕ್ ಕಲರ್ ಬೇಕು " ಎಂದು ನಾನು ವದರಲು ಶುರು ಮಾಡಿದೆ. " ಸುಮ್ಮನೆ ಇರು, ಅವಳು ಇಷ್ಟು ಕೊಟ್ಟಿದ್ದೇ ಹೆಚ್ಚು, ಎಲ್ಲಾ ನಿನ್ನಿಂದಲೇ. ಸುಮ್ಮನೆ ಇರೋದು ಬಿಟ್ಟು ಕೈ ಯಾಕೆ ಚಾಚಬೇಕಿತ್ತು?' ನೀನ್ಯಾಕೆ ಕೈ ನೀಡಲು ಹೋದೆ? ನೀನೇ ಬೀಳಿಸಿದ್ದು, ಪಾಪ ಆ ಹುಡುಗಿಗೇನು ಗೊತ್ತು ನಿನ್ನ ಕೈಗುಣ" ಎಂದು ಹೊರಗೆ ಬಂದಕೂಡಲೇ ಜೋರು ಮಾಡಿದ್ದರಿಂದ, " ನಂದೇನು ತಪ್ಪಿಲ್ಲ, ಅವಳಿಗೂ ನನ್ನ ತರಹವೇ ಎಲ್ಲವನ್ನೂ ಬೀಳಿಸಿಯೇ ಕೊಟ್ಟು ಅಭ್ಯಾಸವಿರಬೇಕು " ಎಂದು ತಪ್ಪೆಲ್ಲವನ್ನೂ ಅವಳ ಮೇಲೆ ಹಾಕಿ ಗೊಣಗಿಕೊಂಡು ಹೊರಟಿದ್ದೆ.

ನನ್ನ ಈ ದುರಭ್ಯಾಸದಿಂದ ಅಲ್ಲಲ್ಲಿ ಚಿಕ್ಕ ಪುಟ್ಟ ಅನಾಹುತಗಳು ಆಗುತ್ತಲೇ ಇದ್ದವು.


ಮನೆಗೆ ಹೊಸ ಫರ್ನೀಚರ್ ಗಳನ್ನು ಕೊಂಡಿದ್ದರಿಂದ ಎಲ್ಲವನ್ನೂ ಎಳೆದು ಜೋಡಿಸಿ, ಅದು ಅಲ್ಲಿ ಸರಿಯಿಲ್ಲ, ಇದು ಇಲ್ಲಿ ಸರಿಯಲ್ಲ, ಇದು ಸ್ಟಡೀ ರೂಮಿಗೆ ಸರಿ, ಎಂದೆಲ್ಲಾ ಸಾಮಾನುಗಳನ್ನು ಎಳೆದು, ಸರಿಸಿ, ಜೋಡಿಸಿ ಮಾಡುತ್ತಿದ್ದೆವು. ಕಂಪ್ಯೂಟರಿಗೆಂದೇ ಹೊಸ ಟೇಬಲ್ ಕೊಂಡಿದ್ದರಿಂದ, ಅಲ್ಲಿಯೇ ಲ್ಯಾಪ್ ಟಾಪ್ ಇಟ್ಟುಕೊಂಡು ನಿನ್ನ ಘನಂದಾರಿ ಕೆಲಸ ಮಾಡು, ಎಲ್ಲೆಂದರಲ್ಲಿ ಇಡಬೇಡ ಎಂದು ಯಜಮಾನರು ಹೇಳಿದ್ದರಿಂದ ಆಗಲಿ ಎಂದು ತಲೆಯಾಡಿಸಿದ್ದೆ. ಚಾಟ್ ಮಾಡುವಾಗ ಮಧ್ಯೆ ಮಧ್ಯೆ ಅದ್ಯಾರು ಓಡಾಡುತ್ತಾರೆ ಎಂದು ಲ್ಯಾಪ್ ಟಾಪನ್ನು ಕಿಚನ್ ಟೇಬಲಿನ ಮೇಲೆ ಇಟ್ಟುಕೊಳ್ಳುತ್ತಿದ್ದೆ ಒಮ್ಮೆಮ್ಮೆ ಒಗ್ಗರಣೆಯೋ, ಮತ್ತೇನೋ ಹಾರುತ್ತಿರುತ್ತಿದುದರಿಂದ ಯಜಮಾನರು, " ನಿನ್ನ ಅಡಿಗೆ ಲೇಟಾದರೂ ಚಿಂತೆಯಿಲ್ಲ, ನಿನ್ನ ಫ್ರೆಂಡ್ಸ್ ಜೊತೆ ಮಾತು ಮುಗಿಸಿಯೇ ಅಡಿಗೆ ಮಾಡು, ಕೀ ಬೋರ್ಡ್ ಗಳಿಗೆಲ್ಲಾ ಎಣ್ಣೆ ಹಾರಿಸಿ ನೀನು ಎರಡೆರಡು ಕೆಲಸ ಒಟ್ಟಿಗೆ ಮಾಡುವುದು ಬೇಡ ಎಂದಿದ್ದರೂ ಅವರಿಲ್ಲದಾಗ ಲ್ಯಾಪ್ ಟಾಪನ್ನು ಕಿಚನ್ ಟೇಬಲಿನ ಮೇಲೆಯೇ ಇಟ್ಟುಕೊಳ್ಳುತ್ತಿದ್ದೆ. ಈಗ ಲ್ಯಾಪ್ ಟಾಪಿಗಾಗಿಯೇ ಕಂಪ್ಯೂಟರ್ ಟೇಬಲ್ ತಂದಿದ್ದರಿಂದ, ನಾನೂ ಉತ್ಸಾಹಿತಳಾಗಿಯೇ ಅವರಿಗೆ ಸಹಾಯ ಮಾಡಲು ನಿಂತಿದ್ದೆ. ಪ್ರಿಂಟರ್, ಸ್ಕ್ಯಾನರ್, ವೈಟ್ ಪೇಪರುಗಳು, ಸ್ಕೆಚ್ ಪೆನ್ನುಗಳು ಹೀಗೆ ಎಲ್ಲವನ್ನೂ ನೀಟಾಗಿ ಜೋಡಿಸಿ, ಲ್ಯಾಪ್ ಟಾಪನ್ನು ಪ್ರತಿಷ್ಠಾಪಿಸಿದೆವು. ಒಂದೆಡೆ ರ್‍ಯಾಕಿನಲ್ಲಿ ಅವರ ಮೆಡಿಕಲ್ ಪುಸ್ತಕಗಳು, ಇನ್ನೊಂದೆಡೆ ನನ್ನ ಕನ್ನಡ ಪುಸ್ತಕಗಳು ಎಲ್ಲವನ್ನೂ ನೀಟಾಗಿ ಜೋಡಿಸಿ ಆನಂದ ಪಡುತ್ತಿರುವಾಗಲೇ ಯಜಮಾನರಿಗೆ ಅದ್ಯಾಕೋ ಲ್ಯಾಪ್ ಟಾಪು ಸರಿಯಾಗಿ ಕೂತಿಲ್ಲ ಅನ್ನಿಸಿತೋ ಎನೋ, " ಇದನ್ನು ಸ್ವಲ್ಪ ಹಾಗೆ ಹಿಡಿದು ಕೊಂಡಿರು, ನಾನು ಈ ವೈರುಗಳೆಲ್ಲವನ್ನೂ ಸರಿಯಾಗಿ ಹಿಂದೆ ಜೋಡಿಸುತ್ತೇನೆ ಎಂದು ಲ್ಯಾಪ್ ಟಾಪನ್ನು ಅನಾಮತ್ತಾಗಿ ಎತ್ತಿ ನನ್ನ ಕೈಗೆ ಕೊಟ್ಟರು. ನಾನೆಷ್ಟೇ ಹುಷಾರಾಗಿ ಹಿಡಿದುಕೊಳ್ಳಬೇಕೆಂದು ಎರಡೂ ಕೈಯಿಂದ ಹಿಡಿದುಕೊಳ್ಳಲು ಕೈ ನೀಡಿದ್ದರೂ ಲ್ಯಾಪ್ ಟಾಪ್ ಕೆಳಗೆ ಬಿದ್ದೇ ಬಿಟ್ಟಿತು.


ಯಜಮಾನರು ಏನನ್ನೂ ಹೇಳದೆ, ನಿನ್ನ ಕೈಗೆ ಕೊಟ್ಟಿದ್ದು ನನ್ನದೇ ತಪ್ಪು ಎಂದು ಲ್ಯಾಪ್ ಟಾಪನ್ನು ಸರಿಯಿದೇಯೋ ನೋಡೋಣವೆಂದು ಆನ್ ಮಾಡಿದರು. ನಾನು ನಿಂತಲ್ಲಿಯೇ ಎಲ್ಲ ದೇವರಿಗೂ ಅಡ್ಡಬಿದ್ದು ತೆಂಗಿನಕಾಯಿ ಒಡೆದು, ದೇವರೇ ಲ್ಯಾಪ್ ಟಾಪಿಗೆ ಏನೂ ಆಗದಿದ್ದರೆ ಸಾಕಪ್ಪ ಎಂದು ಬೇಡಿಕೊಳ್ಳುತ್ತಿದ್ದೆ. ಆನ್ ಆದ ಸ್ವಲ್ಪ ಹೊತ್ತಿಗೇ ಅದ್ಯಾಕೋ ಗರ್ರ್ ಎಂದು ಸದ್ದು ಮಾಡತೊಡಗಿ ಆಫ್ ಆಯಿತು. ಮುಗಿಯಿತು ನನ್ನ ಕಥೆ ಎಂದು ಕೊಂಡು ಸುಮ್ಮನೇ ನಿಂತೆ. ಯಜಮಾನರು ಏನೇ ಸರ್ಕಸ್ ಮಾಡಿದರೂ ಆನ್ ಆಗುತ್ತಿದ್ದ ಲ್ಯಾಪ್ ಟಾಪ್ ಸ್ವಲ್ಪ ಹೊತ್ತಿಗೆ ಕರ್ರೂ ಎಂದು ಸದ್ದು ಮಾಡುತ್ತಾ ಹ್ಯಾಂಗ್ ಆಗುತ್ತಿತ್ತು. ಇನ್ನು ರಿಪೇರಿ ಮಾಡುವುದು ವೀಕೆಂಡಿನಲ್ಲೇ ಎಂದು ಯಜಮಾನರು ಘೋಷಿಸಿದ್ದರಿಂದ ಅಲ್ಲಿಯವರೆಗೂ ನಾನೇಗೆ ಇರುವುದು? ಚಾಟಿಂಗ್ ಇರಲಿ, ಮನೆಗೆ ಫೋನ್ ಮಾಡುವುದು ಹೇಗೆ, ನನ್ನ ಬಂಧು ಬಳಗದವರನ್ನು ವಿಚಾರಿಸುವುದು ಹೇಗೆ? ನನ್ನ ಬ್ಲಾಗನ್ನು ಅಪ್ ಡೇಟ್ ಮಾಡುವುದು ಯಾವಾಗ ಎಂದೆಲ್ಲಾ ಪ್ರಶ್ನೆಗಳಿಗೆ ಉತ್ತರ, " ನೀನು ಬೀಳಿಸಿದ್ದರಿಂದಲೇ ಆಗಿದ್ದು, ಈಗಂತೂ ರಿಪೇರಿ ಮಾಡಲು ಟೈಮ್ ಇಲ್ಲ" ಎಂದಿದ್ದರಿಂದ ತಪ್ಪು ನನ್ನದೇ ಆದ್ದರಿಂದ ಸುಮ್ಮನಾದೆ. ಮೊದಲಿದ್ದ ಹಳೇ ಕಂಪ್ಯೂಟರನ್ನು, ಲ್ಯಾಪ್ ಟಾಪ್ ಇರುವಾಗ ಮತ್ತೊಂದು ಯಾಕೆ ಎಂದು ಯಾರಿಗೋ ದಾನ ಮಾಡಿದ್ದರಿಂದ, ನನ್ನ ಕಾಲು ಕೈ ಮುರಿದು ಕೂರಿಸಿದಂತೆ ಆಗಿತ್ತು.

ಯಜಮಾನರಿಗೆ ವೀಕೆಂಡಿನಲ್ಲಿ ಅಂಬ್ಯುಲೆನ್ಸ್ ಕೆಲಸವಿರುತ್ತಿದ್ದುದರಿಂದ, ಲ್ಯಾಪ್ ಟಾಪಿಗೆ ಏನಾಗಿದೆ ಎಂದು ನೋಡಲು ಸಮಯವೇ ಸಿಕ್ಕಿರಲಿಲ್ಲ. ಅವರ ಪ್ರೆಸೆಂಟೇಷನ್ನುಗಳು, ಕಾನ್ಫರೆನ್ಸುಗಳು, ಊರಿಂದೂರಿಗೆ ಹೋಗಲೇ ಬೇಕಿದ್ದ ಮೀಟಿಂಗುಗಳು, ಇವೆಲ್ಲಾ ಸಾಲದೇ ಆಸ್ಟ್ರೇಲಿಯಾದಿಂದ ಬಂದಿದ್ದ ಇವರ ಗೆಳೆಯರು ಒಂದು ವಾರ ನಮ್ಮ ಮನೆಯಲ್ಲಿಯೇ ಇದ್ದುದರಿಂದ ನನ್ನನ್ನೂ ನನ್ನ ಲ್ಯಾಪ್ ಟಾಪಿನ ಗೋಳನ್ನು ಕೇಳುವವರಿಲ್ಲವಾದರು.


ಕಡೆಗೊಂದು ದಿನ ಲ್ಯಾಪ್ ಟಾಪನ್ನು ರಿಪೇರಿ ಮಾಡಲು ಕೂತರು. ಕರ್ರ್ ಎನ್ನುವ ಶಬ್ಧ ಬಿಟ್ಟರೆ ಮತ್ತೇನೂ ಮಾಡುತ್ತಿರಲಿಲ್ಲವಾದ್ದರಿಂದ, ಬಹುಷಃ ಹಾರ್ಡ್ ಡಿಸ್ಕಿಗೇನಾದರೂ ಆಯಿತೇನೋ ಎಂದುಕೊಂಡು ಅದನ್ನು ಬಿಚ್ಚಿ, ಅವರ ಸ್ನೇಹಿತರ ಲ್ಯಾಪ್ ಟಾಪಿಗೆ ಜೋಡಿಸಿ ನೋಡಿದಾಗ ಅಲ್ಲೂ ಕರ್ರ್ ಅನ್ನತೊಡಗಿತು. ಬೇರೆ ಹಾರ್ಡ್ ಡಿಸ್ಕ್ ಹಾಕಿದರೆ ತೆಪ್ಪಗೆ ಕೆಲಸ ಮಾಡುತ್ತಿದುದರಿಂದ ಹಾರ್ಡ್ ಡಿಸ್ಕ್ ಹೋಗಿದೆ ಎಂದು ತೀರ್ಮಾನಕ್ಕೆ ಇವರೂ ಇವರ ಗೆಳೆಯರೂ ಬಂದರು. ಬೇರೆ ಹಾರ್ಡ್ ಡಿಸ್ಕ್ ಹಾಕುವುದೇನು ದೊಡ್ಡ ಕೆಲಸವಲ್ಲದಿದ್ದರೂ ಇದರಲ್ಲಿ ಸೇವ್ ಆಗಿದ್ದವುಗಳನ್ನು ತೆಗೆಯುವುದು ಹೇಗೆ ಎನ್ನುವುದು ದೊಡ್ಡ ಪ್ರಶ್ನೆಯಾಯಿತು. ಕಡೆಗೆ ಗೂಗಲ್ ಮಾಡಿ ಏನಾದರೂ ಸಲಹೆ ಸಿಗಬಹುದೇನೋ ಎಂದು ನೋಡಿದರೆ, ಯಾರೋ ಪುಣ್ಯಾತ್ಮ, ಹಾರ್ಡ್ ಡಿಸ್ಕನ್ನು ಮೂರು-ನಾಲಕ್ಕು ಗಂಟೆ freezerನಲ್ಲಿಟ್ಟು ನಂತರ ಚೆಕ್ ಮಾಡಲು ತಿಳಿಸಿದ್ದ. ಅಂತೆಯೇ ಮಾಡಿದಾಗ, ಲ್ಯಾಪ್ ಟಾಪ್ ನಿಜಕ್ಕೂ ಯಾವ ಸದ್ದು ಹೊರಡಿಸದೇ ಆನ್ ಆಯಿತು. ಕೂಡಲೇ ಅದರಲ್ಲಿದ್ದ ಎಲ್ಲಾ ಫೈಲುಗಳನ್ನು ಬೇರೆ ಹಾರ್ಡ್ ಡಿಸ್ಕಿಗೆ ಕಾಪಿ ಮಾಡಿದರು. ಸದ್ಯ ಅಂತೂ ನನ್ನ ಲ್ಯಾಪ್ ಟಾಪ್ ಸರಿ ಹೋಯಿತಲ್ಲಾ ಎಂಬ ಸಂತಸ ಬಹಳ ಕಾಲ ಉಳಿಯಲಿಲ್ಲ. ಕೇವಲ ಒಂದು ದಿನ ಕೆಲಸ ಮಾಡಿದ ನನ್ನ ಲ್ಯಾಪ್ ಟಾಪ್ ಮತ್ತೆ ಗೋಗರೆಯಲು ಶುರು ಮಾಡಿತು. ಈ ಸಲ ಹಾರ್ಡ್ ಡಿಸ್ಕನ್ನು ಒಂದಿನ ಪೂರ್ತಿ freezerನಲ್ಲಿ ಇಟ್ಟು ನೋಡಿದರೂ ಕರ್ರ್ ಅನ್ನುವುದು ಬಿಡಲಿಲ್ಲ. ಸರಿ ಇದರ ಆಯಸ್ಸು ಮುಗಿದಿರಬೇಕು ಎಂದು ಅದರ ಆಸೆ ಬಿಟ್ಟೆವು.

ಲ್ಯಾಪ್ ಟಾಪಿಗೆ ಬೇರೆ ಹಾರ್ಡ್ ಡಿಸ್ಕ್ ಹಾಕಿದ ಮೇಲೆ ಸರಿಯಾಯಿತು. ಮೊದಲಿದ್ದ 40ಜಿಬಿಗೆ ಬದಲಾಗಿ 160ಜಿಬಿ ಹಾರ್ಡ್ ಡಿಸ್ಕ್ ಹಾಕಿಸಿದ್ದರಿಂದ ಮೊದಲಿಗಿಂತ ಜಾಸ್ತಿ ಆನ್ಲೈನ್ ಸಿನೆಮಾಗಳನ್ನು ನೋಡಿ, ಇಷ್ಟವಾದವುಗಳನ್ನು ಕಾಪಿಮಾಡಿಟ್ಟುಕೊಳ್ಳಬಹುದು. ಒಟ್ಟಿನಲ್ಲಿ ಆದುದೆಲ್ಲಾ ಒಳ್ಳೆಯದಕ್ಕೆ ಅಂದುಕೊಂಡಿದ್ದರಿಂದ ಹೊಸ ಹುರುಪು ಬಂದಂತಾಗಿ ಅದೇ ಖುಷಿಯ ಮೇಲೆ ಬ್ಲಾಗು ಕುಟ್ಟುತ್ತಿದ್ದೇನೆ.

9 comments:

Anonymous said...

ನಿಮ್ಮ "ನೆಗಡಿ ಎಂಬ ಮಹಾರೋಗ" ಬ್ಲಾಗ್ ಪೋಸ್ಟ್ ನಂತರ ಬಹಳ ದಿನಗಳಾದರೂ ಯಾವುದೇ update ಇರಲಿಲ್ಲ. ಇನ್ನೇನು ಬಹಳ ಬ್ಲಾಗ್ ಗಳ ಹಾಗೆ ನಿಮ್ಮ ಬ್ಲಾಗ್ ಗೆ ಕೂಡ time ಆಯಿತು ಅನ್ನುವಷ್ಟರಲ್ಲಿ ಈ ದಿನ ನನ್ನ RSS Feed Reader ನಲ್ಲಿ ನಿಮ್ಮ ಬ್ಲಾಗ್ update ಆಗಿದೆ ಹಾಗು ಒಂದು ಹೊಸ ಪೋಸ್ಟ್ ಇದೆ ಅಂತ ನೋಡಿ ತುಂಬಾ ಸಂತೋಷ ಆಯಿತು.

ನಿಮ್ಮ "ಸ್ವಯಂಕೃತಾಪರಾಧ" ತುಂಬಾ ಚನ್ನಾಗಿದೆ. hard disk ಅನ್ನು ಕೆಟ್ಟರೆ ದಿನಗಟ್ಟಲೆ freezer ನಲ್ಲಿ ಇಡುವುದನ್ನು ನಾನು ನನ್ನ ವೃತ್ತಿಪರ ಜೀವನದಲ್ಲಿ ಈವರೆಗೆ ಕೇಳಿರಲಿಲ್ಲ, ಮುಂದೆ ಒಂದು ದಿನ ನನ್ನ hard disk ಕೈ ಕೊಟ್ಟರೆ ಈ ಪ್ರಯೋಗವನ್ನು ಮಾಡುತ್ತೇನೆ.

ನನಗೂ ಒಂದು ತರ ನಿಮ್ಮ ಹಾಗೆ ಒಂದು ಅನುಭವವಿದೆ, ನಾನು ಎಷ್ಟೇ ಪ್ರಯತ್ನ ಪಟ್ಟರು ಊಟ ಮಾಡುವಾಗ ಪಾತ್ರೆ ಇಂದ ತಟ್ಟೆಗೆ ಬಡಿಸಿಕೊಳ್ಳುವಾಗ ಒಂದಿಷ್ಟು table ಮೇಲೆ ಬೀಳಲೇ ಬೇಕು! ಚಿಕ್ಕಂದಿನಿಂದಲೂ ಅದೇಕೋ ತಿಳಿಯದು ಅಡುಗೆಯಲ್ಲಿ ನೀರಿನ ಅಂಶ ಇದ್ದರೆ ಬಡಿಸಿಕೊಳ್ಳುವಾಗ ಅದು table ಮೇಲೆ ಬೀಳುವುದು ಸೂರ್ಯ ಚಂದ್ರರಷ್ಟೇ ಸತ್ಯ! ಇದನ್ನು ನೋಡಿ ಅಮ್ಮ ಅದೆಷ್ಟೋ ಬಾರಿ ಬೈದು ಬೈದು ಸುಸ್ತಾಗಿದ್ದು ಉಂಟು. ಬಡಿಸಿಕೊಳ್ಳುವಾಗ ಚಮಚವನ್ನು ಪಾತ್ರೆಯಲ್ಲಿ ಹಾಕಿ ಅದನ್ನು ಪಾತ್ರೆಯ ಕಂಠದ ಮೇಲೆ ಸ್ವಲ್ಪ ಹೊತ್ತು ಇರಿಸಿ ಒಂದು ನಿಟ್ಟುಸಿರು ಬಿಟ್ಟ ನಂತರ ಚಮಚವನ್ನು ತಟ್ಟೆಯ ಕಡಗೆ ತರುವುದು ನಾನು. ಪಾತ್ರೆ ಇಂದ ತಟ್ಟೆಯವರೆಗೂ ಚಮಚ ಬರುವಷ್ಟರಲ್ಲಿ ನನಗೆ ಬೋರ್ಗೆರೆಯುವ ಜಲಪಾತವನ್ನು ಒಂದು ಕಡೆ ಇಂದ ಇನ್ನೊಂದು ಕಡೆಗೆ ಹಾರುವಾಗ ಎಲ್ಲಿ ನೀರಿನಲ್ಲಿ ಬೀಳುವೇನೋ ಎನ್ನುವಷ್ಟು ಭಯ, ಎಲ್ಲಿಯಾದರೂ ಅಡುಗೆ table ಮೇಲೆ ಬಿದ್ದರೆ ಅಂತ. ಒಟ್ಟಿನಲ್ಲಿ table ಗೆ ನೈವೇದ್ಯ ಆಗದೆ ನನ್ನ ಬಾಯಿಗೆ ಏನು ಬರುವುದಿಲ್ಲ. ಪಾತ್ರೆ ಇಂದ ತಟ್ಟೆಗೆ ನೇರವಾಗಿ ಬರುವುದು ಎಂದರೆ ಚಪಾತಿ,ಇಡ್ಲಿ ಇತ್ಯಾದಿ, ಇತ್ಯಾದಿ! :D

JH

maddy said...

abba esht chennagi nim aparadha opkondidira nodi.. very good....
:D

Clumsy hand inda eshtella radhanta aitu..

Sumar dina admele updated blog nodi kushi aitu Girija.. Chennagide baraha..

Madhu.

Anonymous said...

ನಿಮ್ಮ ‘ಕೈಗುಣ’ದ ವಿಚಾರ ನವಿರಾದ ನಿರೂಪಣೆಯೊಂದಿಗೆ ಮೂಡಿಬಂದಿದೆ. ಪೂರ್ತಿ ಓದಿಸಿಕೊಂಡು ಹೋಗುವಂತಿದೆ.

ಅಂದ ಹಾಗೆ ಕನ್ನಡದಲ್ಲಿ ಮುಗಿಲ ಕಂಪು ಅಂತ ನನ್ನದೊಂದು ಬ್ಲಾಗಿದೆ.
http://mugilakampu.wordpress.com/

ಬಿಡುವಾದಾಗ ಭೇಟಿ ಕೊಡಿ.

ವಂದನೆಗಳೊಂದಿಗೆ
ಜಿತೇಂದ್ರ

Unknown said...

ನಿಮ್ಮ ಟೋಪಿಗೆ ಮತ್ತೊಂದು ಗರಿ, ಆ ಟೋಪಿಯ ಮುಂದೆ ನನ್ನ ಡೊಗ್ಗ ಸಲಾಮು - ಇನ್ನೊಂದು ಷಟ್ಕಾರಕ್ಕೆ ವಂದನೆಗಳು :)

ನಿಮ್ಮ ಲ್ಯಾಪ್ ಟಾಪ್ ಅನ್ನು ದೇವರ ಫೋಟೋ ಪಕ್ಕದಲ್ಲಿಟ್ಟು, ಪ್ರತಿದಿನವೂ ಬೆಳಗ್ಗೆ ಸ್ನಾನ ಮಾಡಿದ ನಂತರ ಅದಕ್ಕೆ ಒಂದೆರಡು ಹೂವನೇರಿಸಿ, ಊದಿನಕಡ್ಡಿ ಹಚ್ಚಿ ದೀಪ ಬೆಳಗಿ, ಅರಿಶಿನ ಕುಂಕುಮ ಇರಿಸಿ, ಬಾಳೆ ಹಣ್ಣು ನೈವೇದ್ಯ ಮಾಡಿದ ನಂತರ ಆನ್ ಮಾಡಿ ನೋಡಿ. ಇದಕ್ಕಿಂತ ಬೇರೆ ಸುಲಭೋಪಾಯದಿಂದ ಲ್ಯಾಪ್ ‍ಟಾಪ್ ಸರಿಹೋಗಲಾರದು ಎಂಬುದು ನನ್ನ ಅನಿಸಿಕೆ. ಹಾಂ! ಹಾಗೆಯೇ ವಾರಕ್ಕೊಮ್ಮೆಯಾದರೂ ದೂರದೂರಿನಲ್ಲಿರುವ ಬ್ರಾಹ್ಮಣ ದಂಪತಿಗಳಿಗೆ ದಾನ ಅಂತ ಡಾಲರ್ ರೆಮಿಟೆನ್ಸ್ ಕಳುಹಿಸಿದರೆ ಇನ್ನೂ ಒಳ್ಳೆಯದು - ನನಗೇ ಕಳುಹಿಸಿ ಅಂತ ನಾನು ಕೇಳೋದು ಸರಿ ಇಲ್ಲ. ಇದರಿಂದ ನಿಮ್ಮ ಆಯುರಾರೋಗ್ಯಗಳೂ ಉತ್ತಮವಾಗುವುದು. ಬೇಕಿದ್ದರೆ ವೈದ್ಯ ದೇವರನ್ನು ಕೇಳಿ ನೋಡಿ - ಬೇರೆ ಯಾವ ಔಷಧಿಗಳೂ ನಿಮ್ಮ ಮನೆಗೆ ಒಗ್ಗೋದಿಲ್ಲ. :D :P

ವಿ.ಸೂ.: ನಮ್ಮ ಮನೆ ವಿಳಾಸ ಬೇಕಾದಲ್ಲಿ ಪಕ್ಕಕ್ಕೆ ಬಂದು ಕೇಳಿ, ಪುಕ್ಕಟೆಯಾಗಿ ಕೊಡುವೆ - ಅದಕ್ಕೆ ಛಾರ್ಜ್ ಮಾಡೋಲ್ಲ

Anonymous said...

Hello Girija ...swalpa dina nanu hinge ide...(college days nalli) adake nanna thaye kai badra illa antha helutha idru....amele swalpa dina admele sari hoythu....nice written Girija...
rgds
Sangeetha..

Harisha - ಹರೀಶ said...

ಮೊನ್ನೆ ನನ್ನ UPS ನಿಂದ ಹೊಗೆ ಬಂತು.. ಅದನ್ನೆಲ್ಲಾದರೂ ಇಟ್ಟರೆ ಸರಿ ಆಗಬಹುದೇ?

ತುಂಬಾ ನವಿರಾದ ನಿರೂಪಣೆ... ಹೀಗೇ ಬರೆಯುತ್ತಿರಿ.

Roopa said...

ನಮಸ್ಕಾರ ನೀಲ್ಗಿರಿಯವರೆ,
ನಿಮ್ಮ ಬ್ಲಾಗ್ ಬಹಳ ಚೆನ್ನಾಗಿ ಬರುತ್ತಿದೆ. ಹೀಗೆ ಬರೆಯುತ್ತಿರಿ.

snakez said...

ಕೈಗೆ ಏನೇ ಕೊಟ್ಟರೂ ಭೂಸ್ಪರ್ಶ ಮಾಡಿಸಿಯೇ ಎತ್ತಿಕೊಳ್ಳೋ ಅದ್ಭುತ ವ್ಯಕ್ತಿ ನನೋಬ್ಬನೇನಾ ಪ್ರಪಂಚದಲ್ಲಿ ಅನ್ನೋ ಕೊರಗು ಇತ್ತು ನಂಗೆ. ನಿಮ್ಮ ಬ್ಲಾಗ್ ಓದಿದ ಮೇಲೆ ಹಾಲು ಕುಡಿದಷ್ಟು ಸಂತಸ, ಸಮಾಧಾನ!ನಾನು ಒಂಟಿಯಲ್ಲ, ನನ್ನ ಜೊತೆ ಇನ್ನೂ ಒಬ್ರು ಇದ್ದಾರಲ್ಲ:P

ನಂದೂ ಅದೇ ಕಥೆ ರೀ, ನನ್ ಕೈಗೆ ಏನೇ ಕೊಟ್ರೂ ಬೀಳೀಸಿಯೇ ಎತ್ತಿಕೊಳ್ಳಬೇಕು. ನನ್ನ cellphone ಅಂತೂ ಬೀಳಿಸಿದ್ದು ಲೆಕ್ಕವೇ ಇಲ್ಲ. ಪುಣ್ಯಕ್ಕೆ ಅದು ಇನ್ನೂ ನನ್ನ ಮೇಲೆ ಸಿಟ್ಟು ಮಾಡಿಕೊಂಡಿಲ್ಲ.
ಹೋಟೇಲಿಗೆ ಹೋದಾಗ ಅಂತೂ ನನ್ನ ಮುಜುಗರ ಹೇಳತೀರದು. spoon ಅಥವಾ fork ಬೀಳೀಸಿವುದಂತೂ ೧೦೦ರಕ್ಕೆ ೨೦೦ ಭಾಗ ಖಚಿತ! ಗೋಬಿ ಮಂಚೂರಿ ತಿನ್ನೋವಾಗ ೧ piece ಬೀಳೀಸೋದು ಗ್ಯಾರಂಟೀ!!!

ಇನ್ನೂ ಒಮ್ಮೆಯೂ ಬೀಳೀಸದೇ ಇರೋದು ನನ್ನ ಲ್ಯಾಪ್‌ಟಾಪ್ ಮಾತ್ರಾನೇ. ಅದೂ ನಮ್ಮ ಕಂಪನಿಯವರು ಕೊಟ್ಟಿರೋದು. ಬಿದ್ರೆ ನಾನೇ ನಷ್ಟ ಭರಿಸಿಕೊಡಬೇಕು ಎಂಬ ಭಯದಿಂದ ಇರಬಹುದು.

ನಿಮ್ಮ ಲೇಖನ ತುಂಬಾ ಸೊಗಸಾಗಿದೆ. ಆದ್ರೇ HDDನ freezerನಲ್ಲಿ ಇಟ್ಟು ಗುಣಪಡಿಸುವ ವಿಷಯ ಮಾತ್ರಾ unique.ಎಲ್ಲೂ ಕೇಳೀರಲಿಲ್ಲ!!!

PS: ನೀವು HDD ಹಾಳಾಗಿದೆ ಅಂತ ಹೇಳಿದಾಗ ಸುಮ್ಮನೆ ಹೇಳ್ತಾ ಇದ್ದೀರಿ ಅನ್ಕೊಂಡಿದ್ದೆ. ಈಗ ಸತ್ಯ ಅನ್ನೋದು ಮನದಟ್ಟಾಯಿತು:)

NilGiri said...

@ Jh, Snakez, Sangeetha:

ನನ್ನಂತೆ ನೀವೆಲ್ಲರೂ ಇರುವುದು ಕೇಳಿ ಬಹಳ ಸಂತೋಷವಾಯಿತು :)

-------------
@ ಮಧು, ಜಿತೇಂದ್ರ,

ಮೆಚ್ಚುಗೆಗೆ ಧನ್ಯವಾದಗಳು :)

-------------
@ ಶ್ರೀಶ್ರೀಶ್ರೀ ತಿರುಕ ಮಹಾಸ್ವಾಮಿಗಳಿಗೆ,

ನಿಮ್ಮ ಸಲಹೆ ಸೂಚನೆಗಳನ್ನೂ ಚಾಚೂ ತಪ್ಪದೆ ಆಚರಿಸಲು ನಾವು ನಿರ್ಧರಿಸಿದ್ದೇವೆ. ದೂರದೂರಿನಲ್ಲಿರುವ ಬ್ರಾಹ್ಮಣ ದಂಪತಿಗಳಿಗೆ ನಾವು ಕಳಿಸಿದ್ದ ಡಾಲರ್ ದಾನ, ದಂಪತಿಗಳು ಸಿಂಗಾಪುರವನ್ನು ಉದ್ಧಾರ ಮಾಡಲು ಹೋಗಿದ್ದರಿಂದ, ಬ್ಯಾಂಕ್ ಚಾರ್ಚು ಮುರಿದುಕೊಂಡು ನಮಗೇ ವಾಪಸ್ ಬಂತು. ವಿಳಾಸ ಪುಕ್ಕಟೆ ಸಿಗುತ್ತದೆಂದು ಕೇಳಿ ಬಹಳ ಸಂತೋಷವಾಯಿತು. ದಯವಿಟ್ಟು ಕೊಡಿ, ಆಗಾಗ್ಗೆ ನಿಮಗೆ ಲಾಟರಿ ಬಂದಿದೆ, ವಿಳಾಸ ಕೊಟ್ಟರೆ ಹಣ ಕೊಡುವುದಾಗಿ ಹೇಳುವ ಬಹಳಷ್ಟು ನೀಗ್ರೊ ಪ್ರಜೆಗಳಿಗೆ ಅಡ್ರೆಸ್ಸು ಕೊಟ್ಟು ನಾವೂ ಪುಣ್ಯ ಕಟ್ಟಿಕೊಳ್ಳುತ್ತೇವೆ. :D

---------------
@ Harish, ಸವರನ್ ,

ಬರಹ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು :)