" ಈ ವೀಕೆಂಡು ಎಲ್ಲಿಯೂ ಹೋಗುವ ಹಾಗಿಲ್ಲ, ಭಾರೀ ಮಳೆ ಬರುವ ಸಂಭವವೆಂದು ಎಲ್ಲ ಕಡೆಯೂ ವಾರ್ನಿಂಗ್ ಕೊಟ್ಟಿದ್ದಾರೆ, ಆದ್ದರಿಂದ ತೆಪ್ಪಗೆ ಮನೆಯಲ್ಲಿ ಇರೋಣ" ಎಂದು ಯಜಮಾನರು ಇನ್ನೂ ಗುರುವಾರ ಇದ್ದಾಗಲೇ ಹೇಳಿದ್ದರು. ಇವರ ಭಾರೀ ಮಳೆ ಬರುತ್ತದೆನ್ನುವ ಮುನ್ಸೂಚನೆ, ನಂತರ ಮಳೆ, ಕಡೆಕಡೆಗೆ ತುಂತುರು ಹನಿಗಳ ಮಳೆಯೆಂದು ಸಾಬೀತಾಗುತ್ತಿದುದರಿಂದ ನಾನೇನೂ ನನ್ನ ವೀಕೆಂಡ್ ಕಾರ್ಯಕ್ರಮ ತಯಾರಿಸುವುದು ಬಿಡಲಿಲ್ಲ.
ಶುಕ್ರವಾರ ವಾತಾವರಣವದಲ್ಲಿ ಏನೂ ಬದಲಾವಣೆಯಾಗಿರದಿದ್ದರಿಂದ, " ನೋಡಿದಿರಾ! ಹೆಂಗೆ" ಎನ್ನುವಂತೆ ಹುಬ್ಬು ಹಾರಿಸಿದ್ದೆ. ಶುಕ್ರವಾರ ರಾತ್ರಿ ಸಿನೆಮಾ ನೋಡಿ, ಮನೆಯವರಿಗೆಲ್ಲಾ ಮಾತನಾಡಿ, ಮುಂಬಾಗಿಲನ್ನು ಮತ್ತೊಮ್ಮೆ ಭದ್ರಮಾಡಿ, ಮೇಲೆ ನೋಡಿದರೆ, ನಕ್ಷತ್ರಗಳ ರಾಶಿಯಲ್ಲಿ ಒಂದೂ ಮೋಡವಿಲ್ಲದಿದ್ದನ್ನು ಕಂಡು, ಇವರ " ಭಾರೀ ಮಳೆ" ಎಲ್ಲಿ ಹೋಯಿತೋ...ಎಂದೆನ್ನುಕೊಳ್ಳುತ್ತಲೇ ಮಲಗಿದ್ದೆ. ಶನಿವಾರ ಬೆಳಗಿನ ಜಾವ " ಜ್ಯೋಯ್......" ಎಂದು ಕಿವಿಯ ಹತ್ತಿರವೇ ಜೋರು ಸದ್ದಾಗುತಿದೆ ಎನಿಸಿ ಎಚ್ಚರವಾಯಿತು. ಮೊದಲು ಯಾವನೋ ಬೆಳಬೆಳಿಗ್ಗೆಯೋ lawn mow ಮಾಡುತ್ತಿರಬೇಕು, ಎಲ್ಲವೂ ನಿಶ್ಯಬ್ಧವಿರುವುದರಿಂದ ಸದ್ದು ತಲೆ ಮೇಲೆ ಬಡಿದಂತೆ ಕೇಳಿಸುತ್ತಿದೆ ಎಂದುಕೊಂಡು, ನಿದ್ದೆ ಹಾಳುಮಾಡಿದವನಿಗೆ ಶಾಪಕೊಟ್ಟು ಮತ್ತೆ ಮುಸುಕು ಬೀರಿದ್ದೆ. ಆದರೆ ಸ್ವಲ್ಪ ಹೊತ್ತಿನಲ್ಲಿ " ಭರ್ರ್..." ಎಂದು ಬೀಸಿದ ಗಾಳಿಗೆ ನಮ್ಮ ಮನೆಯೇ ಅಲುಗಾಡಿದಂತಾಗಿ ದಡಬಡಿಸಿ ಎದ್ದು ಬಂದರೆ, ಎಲ್ಲೆಲ್ಲೂ ಮಳೆ....ನೀರು...ಗಾಳಿ..! ಅಕ್ಕಪಕ್ಕದ ಮರಗಳೆಲ್ಲಾ ಬಾಗಿ ಬಾಗಿ ತೂಗುತ್ತಲಿವೆ, ಎಲ್ಲ ಕಡೆಗಳಿಂದಲೂ ಗಾಳಿ ತನ್ನ ಶಕ್ತಿ ಮೀರಿ ಬೀಸುತ್ತಲಿದೆ...ಒಟ್ಟಿನಲ್ಲಿ ಇವರು ಮೊದಲೇ ಕೊಟ್ಟಿದ್ದ ಮುನ್ಸೂಚನೆಯಂತೆ, ಆಸ್ಟ್ರೇಲಿಯಾ ಕಡೆಯಿಂದ ಬಂದ ದೊಡ್ಡ ಬಿರುಗಾಳಿ, ಮಳೆ ಸಮೇತ ನಮ್ಮನ್ನು ಕುಕ್ಕಿ ಕುಕ್ಕಿ ಅಪ್ಪಳಿಸುತ್ತಲಿದೆ! ಮಳೆ ಹೆಚ್ಚೋ, ಗಾಳಿ ಹೆಚ್ಚೋ ಒಂದೂ ತಿಳಿಯುತ್ತಿಲ್ಲ! ಮನೆಯೇ ನಡುಗುತ್ತಿದೆಯೇನೋ ಅನ್ನಿಸುತ್ತಿದೆ! ನೆನ್ನೆ ರಾತ್ರಿ ಶುಭ್ರವಾಗಿ ಹೊಳೆಯುತ್ತಿದ್ದ ಆಕಾಶ, ಈಗ ಮೋಡ ಕವಿದುಕೊಂಡು ಏನೂ ಕಾಣುತ್ತಿಲ್ಲ! ಮಳೆ, ಗಾಳಿಯ ಸದ್ದು ಬಿಟ್ಟರೆ ಮತ್ತೊಂದು ಸದ್ದಿಲ್ಲ! ಈ ಮಳೆ, ಗಾಳಿಗೆ ನೀರು ಒಳ ನುಗ್ಗಿದರೆ ದೇವರೆ ಗತಿ! ಮುಂದಿನ ವೆರಾಂಡವೆಲ್ಲವೂ ಟೈಲ್ಸ್ ಆದ್ದರಿಂದ ನೀರು ಒಳಬಂದರೂ ಹಿಂಡಿ ಹಿಂಡಿ ತೆಗೆಯಬಹುದಿದ್ದರಿಂದ ಅಷ್ಟು ಭಯವಿರಲಿಲ್ಲ, ಆದರೆ ಮಧ್ಯದ ಹಾಲಿನ ಗ್ಲಾಸ್ ಡೋರಿನ ಸಂದಿಯಿಂದ ನೀರು ಒಳನುಗ್ಗಿದರೆ, ಕಾರ್ಪೆಟ್ ಇರುವುದರಿಂದ ಒದ್ದೆಯಾದರೆ ಏನು ಮಾಡುವುದು? ಒಂದೂ ಹೊಳೆಯುತ್ತಿಲ್ಲ! ಅದೂ ಮಳೆ ಗಾಳಿ ಎರಡೂ ಪೂರ್ವದ ಕಡೆಯಿಂದಲೇ ಬರುತ್ತಿದ್ದುದರಿಂದ, ನಮ್ಮ ಮನೆಯೂ ಪೂರ್ವಾಕ್ಕೇ ಮುಖ ಮಾಡಿದ್ದರಿಂದ ಅಪಾಯವಂತೂ ಗ್ಯಾರಂಟಿಯಾಗಿದ್ದಿತು.
ಮನೆ ಮುಂದೆ ಅಲಂಕಾರವೆಂದು ಇಟ್ಟಿದ್ದ ಹೂಕುಂಡಗಳೆಲ್ಲವೂ ಉರುಳಿ ಹೋಗಿದ್ದವು. ಅಂತೂ ಶನಿವಾರ ಬೆಳಿಗ್ಗೆ ಬೇಗ ಎದ್ದು ಊರು ಸುತ್ತಲು ಹೋಗ ಬೇಕೆಂದಿದ್ದ ನನ್ನ ಪ್ಲಾನ್, ಎಲ್ಲೆಲ್ಲಿ ನೀರು ನುಗ್ಗುಬಹುದು ಎಂದು ಯೋಚಿಸಿ ಮುಂಜಾಗ್ರತೆಯಾಗಿ ಟವಲು, ಬಕೆಟುಗಳನ್ನು ಹಿಡಿದು ಕೂರುವಂತೆ ಮಾಡಿತ್ತು. ಒಮ್ಮೆ ಬೀಸಿದ ಗಾಳಿಗೆ ಮುಂಬಾಗಿಲ ಮೆಶ್ ಡೋರ್ ಕಿತ್ತುಕೊಂಡು ರಸ್ತೆಗೆ ಹಾರಿತು! ಹಿಂದೆಯೇ ಕೆಳಗಿನಿಂದ ಬೀಸಿದ ಜೋರು ಗಾಳಿಗೆ ಕಡಿಮೆಯೆಂದರೂ ಇಪ್ಪತ್ತು ಕೆಜಿಯಷ್ಟು ಭಾರವಿದ್ದ ಸಿಮೆಂಟ್ ಹೂ ಕುಂಡ ಮುಂಬಾಗಿಲ ಹತ್ತಿರ ಉರುಳಿ, ಸ್ವಲ್ಪದರಲ್ಲಿ ಗಾಜಿಗೆ ಬಡಿಯುವುದು ತಪ್ಪಿತು! ಅಲ್ಲಿಯವರೆಗೂ ಮಳೆಯ ಬಗ್ಗೆ ತಮಾಷೆ ಮಾಡಿಕೊಳ್ಳುತ್ತಿದ್ದ ನಾವು ಈಗ ಗಂಭೀರವಾಗಿ ಯೋಚಿಸಬೇಕಿತ್ತು. ಮಳೆ ಹನಿಗಳು ಚಟಚಟನೆ ಮುಂಬಾಗಿಲ ಗ್ಲಾಸಿಗೆ ಬಡಿಯುತ್ತಿದ್ದಿದು ಬೇರೆ ಭಯತರಿಸಿತ್ತು. ರಸ್ತೆಯ ಅಕ್ಕಪಕ್ಕ ದೊಡ್ಡ ದೊಡ್ಡ ಪೈಪುಗಳಿದ್ದು ನೀರು ಹರಿದು ಹೋಗುವ ವ್ಯವಸ್ಥೆಯಿದ್ದರಿಂದ, ಮಳೆ ನೀರು ಹಿಂದಿನಿಂದ ಮನೆಗೆ ನುಗ್ಗುವ ಭಯವಿರಲಿಲ್ಲ. ಆದರೂ ಬಿಡದೇ ಸುರಿಯುತ್ತಿದ್ದ ಈ ಮಳೆಗೆ ಪೈಪುಗಳೆರಡೂ ತುಂಬಿ ಹರಿಯುತ್ತಿದ್ದು, ನಮ್ಮ ಮನೆಮುಂದೆಯೇ ಗೇಣಿನಷ್ಟು ನೀರು ನಿಲ್ಲುತ್ತಿದ್ದುದು ಸ್ವಲ್ಪ ಹೆದರಿಕೆಯುಂಟು ಮಾಡುತ್ತಿತ್ತು.
" ಊರಿನಲ್ಲಿ ಮನೆ ಕೊಂಡಿದ್ದರೆ ಈ ಗತಿ ಬರುತ್ತಿತ್ತೇ? ಇಲ್ಲಿಂದ ವ್ಯೂ ಚೆನ್ನಾಗಿದೆ, ಹಾಗೆ...ಹೀಗೆ...ಎಂದೆಲ್ಲ ಕತೆ ಹೊಡೆದು ಈ ಮನೆ ಸೆಲೆಕ್ಟ್ ಮಾಡಿದೆಯೆಲ್ಲಾ..ಈಗ ವ್ಯೂ ನೋಡುತ್ತಾ ಕೂರು ...ಎಲ್ಲ ಕಡೆಯಿಂದಲೂ ಗಾಳಿ, ಮಳೆ ಮನೆಗೆ ಬಂದು ಬಡಿಯುತ್ತಿದೆ..ಈಗ ಸುಮ್ಮನೇ ಕಾಲು ಸುಟ್ಟ ಬೆಕ್ಕಿನ ತರ ಅಲ್ಲಿಗೂ ಇಲ್ಲಿಗೂ ತಿರುಗಾಡಿದರೇನು ಬಂತು?...ನಡೀ..ನಡೀ ಚಹಾ ಮಾಡು" ಎಂದು ಯಜಮಾನರು ಗೊಣಗಾಟ ನಡೆಸಿದ್ದರು. ನೋಡು ನೋಡುತ್ತಿದ್ದಂತೆ ಮುಂದಿನ ಗಾಜಿನ ಡೋರಿನ ಅಡಿಯಿಂದ ನೀರು ಒಳಬರಹತ್ತಿತು! ಟವಲುಗಳನ್ನು ಅಡ್ಡ ಹಾಕಿ, ಒಂದು ಹಸಿಯಾದ ಕೂಡಲೇ ಮತ್ತೊಂದು ಹಾಕಿ, ಹಿಂಡಿ, ನೀರು ತಡೆಯುವ ವ್ಯರ್ಥ ಪ್ರಯತ್ನ ನಡೆಸಿದ್ದೆವು. ಅಂತೂ ನಮ್ಮಿಬ್ಬರ ಎಡಬಿಡದ ಈ ಕೆಲಸದಿಂದ, ಕಡಿಮೆಯೆಂದರೂ ಒಂದೈದು ಬಕೆಟ್ ನೀರನ್ನಾದರೂ ಹಿಂಡಿ ಹಿಂಡಿ ತಡೆದಿದ್ದರಿಂದಲೋ, ಅಥವಾ ಮಳೆಯೇ ಕಡಿಮೆಯಾಯಿತೋ ಏನೋ ನೀರು ಒಳಬರುವುದು ತಗ್ಗಿತು. ನಮ್ಮ ಮನೆಯಿಂದ ಸ್ವಲ್ಪ ಕೆಳಗಿನ ಮನೆಯವನ ಬೆಡ್ ರೂಮಿಗೆ ನೀರು ನುಗ್ಗಿದ್ದರಿಂದ ಅವರುಗಳು ಮರಳಿನ ಚೀಲಗಳನ್ನು ಅಡ್ಡಡ್ಡ ಜೋಡಿಸಿ, ನೀರು ತಡೆಯಲು ಯತ್ನಿಸುತ್ತಿದ್ದರು.
ನಮ್ಮ ಮನೆ ಊರಿನಿಂದ ಸ್ವಲ್ಪ ದೂರದಲ್ಲಿ, ಅದೂ ಬೆಟ್ಟದ ಮೇಲಿರುವುದರಿಂದ ನಾವೇ ಸ್ವಲ್ಪ ಸೇಫ್ ಅನ್ನುವ ಸ್ಥಿತಿಯಲ್ಲಿದ್ದೆವು. ಊರಿನಲ್ಲಿ ಹಲವೆಡೆ ಮನೆಗಳಿಗೆ ನೀರು ನುಗ್ಗಿತ್ತು, ಮ್ಯಾನ್ ಹೋಲುಗಳು ತುಂಬಿ ಹರಿಯತೊಡಗಿದ್ದವು. ಸಿ.ಬಿಡಿ.ಯಂತೂ ನೀರಿನಲ್ಲಿ ನಿಂತಂತೆ ಇತ್ತು! ಪುಣ್ಯಕ್ಕೆ ಕರೆಂಟು ಹೋಗಿರಲಿಲ್ಲ. ಗಾಳಿಯ ಆರ್ಭಟವೇ ಜೋರು! ಗಂಟೆಗೆ 120-150ಕಿ.ಮೀ ವೇಗದಲ್ಲಿ ಬೀಸುತ್ತಿದ್ದ ಗಾಳಿ, ತೆಕ್ಕೆಗೆ ಸಿಕ್ಕದ್ದನ್ನೆಲ್ಲಾ ತೂರಿಕೊಂಡು ಸಿಕ್ಕವರ ಮನೆಯ ಕಿಟಕಿ ಬಾಗಿಲುಗಳನ್ನು ನುಗ್ಗಿದ್ದವು. ಊರಿನಲ್ಲಿ ಕಂಬಗಳ ಮೇಲೆ ಮರಗಳು ಬಿದ್ದಿದ್ದರಿಂದ ಊರು ಪೂರಾ ನೀರುಮಯ, ಕತ್ತಲುಮಯ! ಟಿವಿಯಲ್ಲಂತೂ, ಯಾರೂ ರಸ್ತೆಗೆ ಹೋಗಬೇಡಿ, ನಿಮ್ಮ ನಿಮ್ಮ ಮನೆಯಲ್ಲಿಯೇ ಇರಿ, ಎಂದೆಲ್ಲಾ ವಾರ್ನಿಂಗ್ ಕೊಡುತ್ತಿದ್ದರು. ಮುನ್ನೆಚ್ಚರಿಕೆ ಕೊಟ್ಟಿದ್ದರೂ ಕೆಲ ಪ್ರತಿಷ್ಠೆಯ ಜನ ಲೆಕ್ಕಿಸದೆ ನದಿ ದಾಟಲು ಹೋಗಿದ್ದರಿಂದ ಕೊಚ್ಚಿ ಹೋದ ಅವರುಗಳನ್ನು ಹುಡುಕ ಬೇಕಾಯಿತು. ಅಂತೂ ಮಳೆ ನಿಂತ ಮೂರು ದಿನಗಳ ಮೇಲೆ ಅವರುಗಳ ಶವ ಪತ್ತೆಯಾಯಿತು. ಮನೆಯೇ ಉರುಳಿ ಬೀಳುತ್ತಿದ್ದರೆ ಜನ ಎಲ್ಲಿ ಹೋಗಬೇಕು? ರಸ್ತೆಗಳೇ ಕುಸಿದು ಬೀಳುತ್ತಿದ್ದವು. ಬೆಟ್ಟದ ಸಂದಿಗೊಂದಿಯೆಲ್ಲೆಲ್ಲಾ ಮನೆ ಕಟ್ಟಿ ಕೊಂಡಿರುವವರು ತಮ್ಮ ತಮ್ಮ ಮನೆಗಳು ಮಳೆ, ಗಾಳಿಗೆ ಮಣ್ಣು ಕುಸಿದು, ಜಾರಿ ಬೀಳುತ್ತಿದ್ದುದ್ದನ್ನು ಅಸಹಾಯಕರಾಗಿ ನೋಡುತ್ತಿದ್ದ ದೃಶ್ಯವಂತೂ ಮನಕಲಕುವಂತಿತ್ತು. ಇವರ ಹವಾಮಾನ ಮುನ್ನೆಚ್ಚರಿಕೆಯ ಬಗ್ಗೆ ಹಗುರವಾಗಿ ಮಾತನಾಡಿದ್ದ ನಾನೇ, " ಇವರ ಮಳೆಯೇನು ಲೆಕ್ಕ? ಹೋಗುವುದು...ಬರುವುದು ಕಾರಿನಲ್ಲಿ ತಾನೆ? ನಾವೇನು ಮಳೆಯಲ್ಲಿ ನೆನೆಯುತ್ತಾ ಹೋಗಬೇಕೇ?" ಎಂದೆಲ್ಲಾ ಹಿಂದಿನ ರಾತ್ರಿ ಯಜಮಾನರನ್ನು ಒಪ್ಪಿಸಿದ್ದು ನೆನಪಿಗೆ ಬಂದು, "ಸದ್ಯ! ನಾವು ಹೊರಗೆ ಹೋಗಲಿಲ್ಲವಲ್ಲ..ಹೋಗಿದ್ದರೆ ನಮಗೂ ಇದೇ ಗತಿಯಾಗುತ್ತಿತ್ತೋನೋ ಏನೋ?!" ಎಂದೆನ್ನಿಸಿದ್ದಂತೂ ನಿಜ.
ಹೆಚ್ಚು ಕಡಿಮೆ ಎರಡು ವರ್ಷಗಳಿಂದಲೂ ನಾನು ಇಲ್ಲಿದ್ದರೂ ಈ ಪರಿಯ ಮಳೆ ಗಾಳಿಯನ್ನಂತೂ ಕಂಡಿರಲಿಲ್ಲ. ಅದರಲ್ಲೂ ಇಲ್ಲಿನ ನೆಲಕ್ಕೆ, ಮಳೆ ಬರುವ ಮೊದಲು ಬೀಸುವ ಬಿಸಿಗಾಳಿ, ನಾಲ್ಕು ಹನಿ ಬಿದ್ದ ಕೂಡಲೇ ಸೂಸುವ ಮಣ್ಣ ಘಮ, ಯಾವುದೂ ಇರದಿದ್ದರಿಂದ, " ಏನು ಊರೋ...ಏನು ಮಳೆಯೋ.." ಎಂದು ಅನ್ನಿಸುತ್ತಿತ್ತು. ಮೈಸೂರಿನಲ್ಲಿದ್ದಾಗ.." ಎಲ್ಲೊ..ಆ ಕಡೆ ಮಳೆಯಾಗ್ತಿರಬೇಕು, ಅದಿಕ್ಕೆ ನಮಗೆ ತಣ್ಣಗೆ ಗಾಳಿ ಬೀಸುತ್ತಿದೆ.." ಎಂದೆಲ್ಲಾ ಮಾತನಾಡಿಕೊಳ್ಳುತ್ತಿದ್ದ ನಮಗೆ, ಇಲ್ಲಿ ಬಂದ ಮೇಲೆ ಬೀಸೋ ಗಾಳಿಯೇ ತಣ್ಣಗಿರುವುದರಿಂದ ಇನ್ನು " ತಂಪು ಗಾಳಿ" ಎಲ್ಲಿಂದ ಬರಬೇಕು? ಊರಿನಲ್ಲಿ ಮಳೆ ಸುರಿದ ನಂತರ ಅಲ್ಲಲ್ಲಿ ನಿಲ್ಲುವ ಟೀ ಕಲರಿನ ನೀರು, ಬಟ್ಟೆಗೆ ಎಲ್ಲಾದರೂ ನೀರು ಸಿಡಿದರೆ ಎಂದು ಎಚ್ಚರಿಕೆಯಿಂದ, ಆ ಕಡೆ ಈ ಕಡೆ ನೋಡುತ್ತಾ, ಹೆಜ್ಜೆಯಿಡುತ್ತಿದ್ದ ನನಗೆ, ಇಲ್ಲಿ ಅದೆಷ್ಟೇ ದೊಡ್ಡ ಮಳೆ ಬಂದರೂ ಕ್ಷಣಾರ್ಧದಲ್ಲಿ ನೀರೆಲ್ಲವೂ ಹರಿದು ಹೋಗುವ ವ್ಯವಸ್ಥೆಯಿರುವುದರಿಂದ, "ಎಲ್ಲಿ ಬಿತ್ತು ಮಳೆ?" ಎಂದೆನಿಸುತ್ತಿತ್ತು.
ಅಂತೂ ಬೆಳಿಗ್ಗೆಯಿಂದ ಬಿಡದೆ ಸುರಿದ ಮಳೆ ಸಂಜೆಯಾಗುತ್ತಿದ್ದಂತೆ ನಮಗೆ ಕಡಿಮೆಯಾಗಿ ಆಕ್ಲೆಂಡಿನ ಕಡೆ ಹೋಯಿತು. ಅಲ್ಲೂ ಇವೇ ದೃಶ್ಯಗಳ ಪುನರಾವರ್ತನೆ! ಅಲ್ಲೂ ಕೆಲ ಮನೆಗಳು ಕುಸಿದವಂತೆ. ನಮ್ಮೆಲ್ಲರಿಗಿಂತ ಅತೀ ನಷ್ಟವನ್ನು ಅನುಭವಿಸಿದವರು Christchurchನವರು. ಗದ್ದೆಗಳೆಲ್ಲಾ ನೀರಿನಲ್ಲಿ ಮುಳುಗಿ ಹೋದವು, ಅದೆಷ್ಟೋ ಹಸು, ಕುರಿಗಳು ಕೊಚ್ಚಿಕೊಂಡು ಹೋದವು, ತೀವ್ರ ಚಳಿ ತಡೆಯಲಾರದೆ ಲೆಕ್ಕವಿಲ್ಲದಷ್ಟು ಕುರಿಮರಿಗಳು ಸತ್ತವು. ಮಿಲಿಯನ್ನುಗಟ್ಟಲೆ ಹಾನಿಯುಂಟು ಮಾಡಿದ ಮಳೆ-ಬಿರುಗಾಳಿ ಎರಡು ದಿನ ಇಡೀ ದೇಶವನ್ನು ನೆನೆಸಿ ತೊಪ್ಪೆಯಾಗಿಸಿತು.
ಊರಿಗೆ ಫೋನ್ ಮಾಡಿ ಇವೆಲ್ಲಾ ಹೇಳಿ ಅವರಿಗೆ ಇನ್ನೂ ಗಾಬರಿ ಪಡಿಸಬೇಡ ಎಂದು ಯಜಮಾನರು ತಾಕೀತು ಮಾಡಿದ್ದರೂ, ಎರಡು ದಿನಗಳ ನಂತರ ಮನೆಗೆ ಫೋನ್ ಮಾಡಿದ್ದೆ. " ಯಾಕೆ ಶನಿವಾರ, ಭಾನುವಾರ ಫೋನ್ ಮಾಡ್ಲಿಲ್ಲ?" ಎಂದ ನಮ್ಮಮ್ಮನಿಗೆ " ನಮಗೆ ಸಿಕ್ಕಾಪಟ್ಟೆ ಮಳೆ ಗೊತ್ತಾ?...ಎಷ್ಟು ಕಷ್ಟ ಆಯ್ತು ಗೊತ್ತಾ..." ಎಂದು ನಾನು ಹೇಳುತ್ತಿದ್ದರೆ, ನಮ್ಮಮ್ಮ..." ಅಯ್ಯೋ....ನಮಗೂ ಮೊನ್ನೆಯಿಂದ ಹಿಡಿದ ಮಳೆ ಬಿಟ್ಟೇ ಇಲ್ಲಾ ಕಣೇ! ಬೆಳಿಗ್ಗೆಯೆಲ್ಲಾ ಬಿಸಿಲು, ಸಂಜೆಯಾಗ್ತಾ ಆಗ್ತಾ ಮಳೆ ಶುರುವಾಗುತ್ತೆ, ನೆನ್ನೆ ಅಣ್ಣ ಛತ್ರಿ ಹಿಡ್ಕೊಂಡು ಹೋಗಿದ್ರೂ ನೆನಕ್ಕೊಂಡು ಬಂದ್ರು " ಎಂದು ಅವರು ತಣ್ಣಗೆ ಹೇಳಿದ್ದು ಕೇಳಿ, ಅವರಿಗೆ ಮೈಸೂರಿನ ಮಳೆಯೇ ದೊಡ್ಡದಿರುವಾಗ ಈ ಮಳೆಯ ಬಗ್ಗೆ ಹೇಳಿ ಏನೂ ಉಪಯೋಗವಿಲ್ಲ ಎನಿಸಿ, " ಹೌದಾ..ಆಮೇಲೆ...?" ಎಂದು ಅವರ ಪುರಾಣವನ್ನೇ ಕೇಳಿದೆ.
11 comments:
ಮನುಷ್ಯ ತನ್ನ ಮುಂದೆ ನಗಣ್ಯ ಎಂದು ಪ್ರಕೃತಿ ಮತ್ತೆ ಮತ್ತೆ ಮನದಟ್ಟು ಮಾಡಿಸುತ್ತದೆ..
ಕಣ್ಣಿಗೆ ಕಟ್ಟುವಂತೆ ಬರೆದಿದ್ದೀರಿ..
bahala chennagi baredidira.....adu kannadallli odi bahala santhoshavaythu..
...ಶುಕ್ರವಾರ ವಾತಾವರಣವದಲ್ಲಿ ಏನೂ ಬದಲಾವಣೆಯಾಗಿರದಿದ್ದರಿಂದ, "ನೋಡಿದಿರಾ! ಹೆಂಗೆ" ಎನ್ನುವಂತೆ ಹುಬ್ಬು ಹಾರಿಸಿದ್ದೆ. ……… LOL, little things like this which gives a personal touch makes your blog so unique and fun to read. :)
ಮನುಷ್ಯ ತಾಂತ್ರಿಕವಾಗಿ ಎಷ್ಟೇ ಅಭಿವೃಧ್ಧಿಯಾಗಿದ್ದರು ಪ್ರಕೃತಿ ವಿಕೋಪದ ಎದಿರು ಅವನು ಎಷ್ಟು ಅಸಹಾಯಕನು ಅನ್ನುವ ವಿಷಯವನ್ನು ಮನ ಮುಟ್ಟುವಂತೆ ಯಾವುದೇ ಚಿತ್ರಗಳ ಸಹಾಯವಿಲ್ಲದೆ ನಿಮ್ಮ ಲೇಖನದಲ್ಲಿ ಬರೆದಿದ್ದೀರಿ, ತುಂಬಾ ಚನ್ನಾಗಿದೆ.
ನಿಮ್ಮ ಈ ಬ್ಲಾಗ್ ಗೆ ಬೇಕಾದ ಚಿತ್ರಗಳನ್ನು ಕ್ಯಾಮೆರಾ ದಲ್ಲಿ ಸೆರೆ ಹಿಡಿದಿದ್ದರು ನಂತರ ಆ ಚಿತ್ರಗಳು ಕ್ಯಾಮರಾದಿಂದ ಮಂಗ ಮಾಯವಾದ ಕಥೆ ತುಂಬ ಸ್ವಾರಸ್ಯವಾಗಿತ್ತು :D
JH
ವಾವಾವಾ! ನಿಮ್ಮೂರಲ್ಲೂ ಇಂತಹ ಮಳೆ ಬರತ್ತೇನ್ರೀ? :o
ನಮ್ಮೂರಲ್ಲಿ ಮಾತ್ರ ಹೀಗೆ ಅಂತ ಅಂದುಕೊಂಡಿದ್ದೆ
ಹೇಳದೇ ಕೇಳದೇ, ಅನ್‍ವಾರೆಂಟೆಡ್ ಗೆಸ್ಟ್ಸ್ ತರಹ ಮಳೆ ಬಂತಾ
ಅಥವಾ ನಿಮ್ಮ ನಿರೂಪಣೆ ಹಾಗಿದೆಯಾ? :P
ನೀವೇನೇ ಹೇಳಿ, ನಿರೂಪಣೆಯ ಸ್ವರೂಪ ಮಾತ್ರ ಬಹಳ ಬಹಳ ಸೊಗಸಾಗಿದೆ
ಏನೇ, ಕ್ಷುಲ್ಲಕ ಸಂಗತಿ ಕೊಟ್ಟರೂ ಸೊಗಸಾಗಿ ನಿರೂಪಿಸುತ್ತೀರ. ಭಾರತೀಯ
ಕ್ರಿಕೆಟ್ ಮಂಡಳಿಗೆ ನಿಮ್ಮನ್ನು ವರದಿಗಾರರಾಗಿ ಆಯ್ಕೆ ಮಾಡಲು ಕೇಳಿಕೊಳ್ಳುವೆ
ನೀವು ಅನುಭವಿಸಿದ ಮಳೆಯ ಆರ್ಭಟವನ್ನು ಕಡೆಗೂ ನಿಮ್ಮ ತಾಯಿಗೆ ಹೇಳಿದ್ರೋ ಇಲ್ವೋ?
ಹೇಳ್ಬೇಡಿ, ಹೇಳಿ ಕೇಳಿ ತಾಯಿ ಹೃದಯ ಬಹಳ ಮೃದು. ಶಾನೇ ತನ್ಲಾಡ್ಸಾರು!
ಎಲಾ! ಮಳೆ ನೀರು ಮನೆ ಒಳಗೆ ನುಗ್ಗೋದು ನಮ್ಮಲ್ಲಷ್ಟೇ ಅಂತ ತಿಳಕೊಂಡಿದ್ದೆ.
Hello Girija.......thumba dinagalinda kayutha ide nimma writing ge...frequently i was checking your blog :)very nicely written...thnq..
rgds
Sangeetha
ಸೊಗಸಾದ ನಿರೂಪಣೆ ಗಿರಿಜಾ ಅವರೆ.. ಇದು ಮೊನ್ನೆ ಬಂದ "ಫೇ"ಯ ಪ್ರಭಾವವೇ?
ನಮ್ಮೂರಲ್ಲಿ ಪ್ರತಿ ವರ್ಷ ಈ ರೀತಿ ಮಳೆ ಬರುವುದುಂಟು.
Wishing you and your family a very happy Gowri and Ganesha Habba.
Tumba chenangi bareddidra girija... Nijavagloo nane aa maneyalli kulita haage anisuttitu oduvaaga...
Olle hurricane madhyadallikootu horge banda haage... illiya maLe adakke saatiye illa bidi....
ನವಿರಾದ ನಿರೂಪಣೆ. ಬಹಳ ದಿನಗಳಾಗಿತ್ತು ಇತ್ತ ಬಂದು.
ಫ್ರೆಂಡ್ಸ್ ಲಿಸ್ಟಿನಲ್ಲಿ ಸೇರಿಸಲಾಗುತ್ತಿಲ್ಲ ಅಂತ ಕಮೆಂಟಿಸಿದ್ದೀರಿ. ಅದೇನಾಗಿದೆಯೋ ನೋಡುವಾ ಅಂತ ಬಂದೆ. ಇಲ್ಲಿ ನೋಡಿದರೆ ಎರೆಡೆರಡೂ ಸರಿ ಸೇರಿಸಿದ್ದೀರಿ. ಖುಷಿಯಾಯಿತು...!
ಹೊಸ ಲೇಖನ ಯಾವಾಗ ಬರೆಯುತ್ತೀರಿ...
-ಜಿತೇಂದ್ರ
@ Harish,
ಪ್ರಕೃತಿಯ ಮುಂದೆ ನಮ್ಮದೇನೂ ನಡೆಯುವುದಿಲ್ಲವೆಂಬ ನಿಮ್ಮ ಮಾತು ಒಪ್ಪಿಕೊಂಡೆ. ಮೆಚ್ಚುಗೆಗಾಗಿ ಧನ್ಯವಾದಗಳು.
************************
@lg,
ನೀವು ಮೆಚ್ಚಿಕೊಂಡಿದ್ದು ನಂಗೂ ಸಂತೋಷ!
************************
@JH
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು. ಚಿತ್ರಗಳು ಕಾಣೆಯಾದದ್ದೊಂದು ದೊಡ್ಡ ಕಥೆ :D
**************************
@ Sir,
ಮುಂಬೈ ಮಳೆಗೂ, ಇಲ್ಲಿದನಕ್ಕೂ ಎಲ್ಲಿಯ ಹೋಲಿಕೆ ಸಾರ್?! ನನ್ನ ನಿರೂಪಣೆ ಕೆಲಸಕ್ಕೆ ಬಾರದ್ದು, ನೀವು ಅನುಭವಿಸಿಯೇ ತಿಳಿಯಬೇಕು! ನಮ್ಮಮ್ಮ ಹೆದರುವವರಲ್ಲ! " ಎಲ್ಲರಿಗೂ ಆಗುವುದೇ ನಿನಗೂ ಆಗೋದು " ಅನ್ನುವ ಸ್ವಭಾವದವರು:D
**************************
@ ಕಾಕಾ,
ಮಾಮೂಲಿ ಮಳೆಗೆ ನಾವು ಹೆದರುವವರಲ್ಲಾ! ಆದರೆ ಇದು ನಮ್ಮ ಎಣಿಕೆಗೂ ಮೀರಿದ್ದ ಮಳೆ!
*************************
@ ರೂಪ,
ನಿರೂಪಣೆ ಮೆಚ್ಚಿಕೊಂಡಿದ್ದಕ್ಕೆ ಥ್ಯಾಂಕ್ಸ್ ರೂಪ. ನಮ್ಮೂರಿನವರು ನಿಮ್ಮೂರಿನವರ ಹಾಗೆ ಚಂದ ಚಂದದ " ಹೆಸರಿಡುವುದಿಲ್ಲ"!
************************
@lg,
ನಿಮಗೂ ನವರಾತ್ರಿಯ ಶುಭಾಶಯಗಳು ಲಕ್ಷೀ :)
**************************
@ಶುಭಾ,Sangeetha,
ಮೆಚ್ಚಿಕೊಂಡಿದ್ದಕ್ಕೆ ಥ್ಯಾಂಕ್ಸ್ :)
**************************
@ ಜಿತೇಂದ್ರ,
ನಿರೂಪಣೆ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು ಜಿತೇಂದ್ರ. ಲಿಂಕು ಬರದಿದ್ದರಿಂದ ನಿಮ್ಮಲ್ಲಿ ಬಂದು ಕಮೆಂಟಿಸಿದೆ. ಆಮೇಲೆ ನೋಡಿದರೆ ಎರಡೆರಡು ಲಿಂಕು!
Post a Comment