Thursday, 14 June 2007

ಕೆಲವು ಜಾನಪದ ಗೀತೆಗಳ ಸಾಹಿತ್ಯ

ಕೋಲು ಕೋಲಣ್ಣ ಕೋಲೆ


ಕೋಲು ಕೋಲಣ್ಣ ಕೋಲೆ
ಕೋಲು ಕೋಲಣ್ಣ ಕೋಲೆ


ಮಲ್ಲಯ್ಯನಿರುವುದು ಇಲ್ಲಿಗೆ ಗಾವುದ
ಮಲ್ಲಯ್ಯ್ನ ಮಡದಿ ಮರುಗಮ್ಮ | ಇರುವುದು
ಕಲ್ಲು ಮಾಳಿಗೆ ಕೈಲಾಸ||ಮಲ್ಲಯ್ಯ ಶಿವನೀ ವೆಲ್ಲಿಗಬಿಟ್ರೆ
ಮಲ್ಲಿಗೆ ಬೆಳಗೋ ಮತಿಘಟ್ಟನೆ ರಾಮಂದ್ರೆ
ಬೆಳಗಾಗಿ ಬಿಟ್ಟು ಪರುಸೆಯ||


ಒಕ್ಕಾಲ ಉರುಗೆಜ್ಜೆ ಒಕ್ಕಾಲ ಕಿರುಗೆಜ್ಜೆ
ಚೊಕ್ಕಾ ಬೆಳ್ಳಿ ಮಕರಂಭ
ಚೊಕ್ಕಾ ಬೆಳ್ಳೀಲಿ ಮಕರಂಭ ಕೀಲಕುದುರೆ
ಒಕ್ಕಾವು ಮಾರ್ನೊಮಿ ಪೌಜೀಗೆ||


ಆನೆ ಶೃಂಗಾರವಾಗಿ ಅಂಗಾಳದ ಗೈದಾವೆ
ಜಾಣ ತಾನೇಕೆ ಒರಟಾನೆ
ಜಾಣ ತಾನೇಕೆ ಒರಟಾನೆ ಲೋ ನಿನ್ನ
ಡೊಲು ಲಾಲಿಲಿ ಕರೆದಾವೆ||

~~~~~~~~~~~~~~~~~~~~~~~~~~~~~~~~~~~~~~~~~~~

ಎಲ್ಲೋ ಜೋಗಪ್ಪ ನಿನ್ನರಮನೆಕಿನ್ನೂರಿ ನುಡಿಸೋನಾ ದನಿ ಚೆಂದಾವೊ
ಕಿನ್ನೂರಿ ನುಡಿಸೋನಾ ಬೆರಳಿನಂದ ಚೆಂದವೋ....


ಚಿಕ್ಕಿಯುಂಗರಕೆ ನಾರಿ ಮನಸಿಟ್ಟಳೂ
ಬೆಳ್ಳಿಯುಂಗರಕೆ ನಾರಿ ಮನಸಿಟ್ಟಳೂ
ಎಲ್ಲೋ ಜೋಗಪ್ಪ ನಿನ್ನರಮನೆ
ಎಲ್ಲೊ ಜೋಗಪ್ಪ ನಿನ್ನ ತಳಮನೆ ||

ಅಲ್ಲಲ್ಲಿ ದಾನವೂ ಅಲ್ಲಲ್ಲಿ ಧರ್ಮವೂ
ತಂದಿಡೆ ನಾರಿ ನೀ ನೀ ಸುಖವ |

ಅತ್ತಿತ್ತ ಬಂದರೆ ಅತ್ತೆ ಮಾವಂದಿರು ಬೈತಾರೆ
ಕೊಳ್ಳೋ ಜೋಗಪ್ಪ ನಿನ್ನ ಪಡಿದಾನ |

ಇತ್ತಿತ್ತ ಬಂದರೆತ್ತ ಮಾವಂದಿರು ಬಯ್ಯಲಿಕ್ಕೆ
ಅನೆಸಾಲು ನಾನು ಕದ್ದೇನೇನೆ | ನಾರಿ
ಕುದುರೆ ಸಾಲು ನಾನು ಕದ್ದೇನೇನೆ
ಹೆರವಾ ಹೆಣ್ಣಿಗೆ ನಾನು ಬಿದ್ದೆನೇನೆ ||ಎಲ್ಲೋ ಜೋಗಪ್ಪ||


ಇದ್ದ ಬದ್ದ ಬಟ್ಟೆನೆಲ್ಲ ಗಂಟು ಮೂಟೆ ಕಟ್ಟಿಕೊಂಡು....ಓ..
ಹೊರಟಾಳೂ ಜೋಗಿಯ ಹಿಂದುಗೂಟಿ | ನಾರಿ
ಹೊರಟಾಳೂ ಜೋಗಿಯ ಹಿಂದುಗೂಟಿ..


ಹಾರುವರ ಕೇರಿಯ ಗಾರೆಜಗಲಿಯ ಮೇಲೆ
ಕೋಲು ಕಿನ್ನೂರಿ ಮಾಡಿ ನುಡಿಸೋನೇ | ಜೋಗಿ
ಹೂವಾಗಿ ಬಾರೋ ನನ್ನ ತುರುಬೀಗೆ


ಹುಳ್ಳಿ ಹೊಲವಾ ಬಿಟ್ಟು ಒಳ್ಳೆ ಗಂಡಾನ ಬಿಟ್ಟು
ಸುಳ್ಳಾಡೋ ಜೋಗಿ ಕೂಡೋಗಬಹುದೇ | ನಾರಿ
ಪೊಳ್ಳಂತ ಜೋಗಿ ಕೂಡೋಗಬಹುದೆ || ಎಲ್ಲೋ ಜೋಗಪ್ಪ||


ಎಲ್ಲಾನು ಬಿಟ್ಟ ಮೇಲೆ ನನ್ನನ್ಯಾಕೆ ಬಿಡಲೊಲ್ಲೆ
ನನ್ಮೇಲೆ ನಿನಗೆ ಮನಸ್ಯಾಕೆ | ನಾರಿ
ನನ್ಮೇಲೆ ನಿನಗೆ ಮನಸ್ಯಾಕೆ....


ನಿನ್ನ ಕಂಡಾಗಿನಿಂದ ಕಣ್ಣುರಿ ಕಾಣೂ ಜೋಗಿ
ನಿನ್ನ ಬಿಟ್ಟು ನಾನಿರಲಾರೆ ಜೋಗಿ
ನಿನ್ನ ಬಿಟ್ಟು ನಾನಿರಲಾರೆ ಜೋಗಿ ||ಎಲ್ಲೋ ಜೋಗಪ್ಪ||


ಅಂತರಘಟ್ಟ ಬೆಂತರಘಟ್ಟ ಹತ್ತಲಾರೆ ಇಳಿಯಲಾರೆ
ಎಲ್ಲೋ ಜೋಗಪ್ಪ ನಿನ್ನರಮನೆ ಎಲ್ಲೋ ಜೋಗಪ್ಪ ನಿನ ತಳಮಾನೆ

ಅಂತರಘಟ್ಟ ಬೆಂತರಘಟ್ಟ ಅಲ್ಲಿಗರವತ್ತು ಘಟ್ಟ
ಅಲ್ಲಿದೆ ಕಾಣೆ ನನ್ನರಮನೆ | ನಾರಿ
ಅಲ್ಲಿದೆ ಕಾಣೆ ನನ್ನರಮನೆ ನಾರಿ ||ಎಲ್ಲೋ ಜೋಗಪ್ಪ||


~~~~~~~~~~~~~~~~~~~~~~~~~~~~~~~~~~~~~~~~~~~~~

ಚನ್ನಪ್ಪ ಚನ್ನಗೌಡ


ಚನ್ನಪ್ಪ ಚನ್ನಗೌಡ | ಕುಂಬಾರ ಮಾಡಿದ ಕೊಡನವ್ವ

ಚಂದಕ ತಂದೇನ ತಂಗಿ | ನೀರಿಗೆ ಬಂದೇನೆಆರು ಮೂರು ಒಂಭತ್ತು | ತೂತಿನ ಕೊಡನವ್ವ

ಚಂದಕ ತಂದೇನ ತಂಗಿ | ನೀರಿಗೆ ಬಂದೇನೆ


ಬಾಳಿಯ ಬನದಾಗ ನಾ | ಹೆಂಗ ಬಾಗಿ ಬರಲೆವ್ವ

ಚೆಂದಕ ತಂದೇನೆ ತಂಗಿ | ನೀರಿಗೆ ಬಂದೇನೆ


ಲಿಂಬಿಯ ವನದಾಗ ನಾ ಹೆಂಗ ನಂಬಿ ಬರಲೆವ್ವ

ಚೆಂದಕ ತಂದೇನೆ ತಂಗಿ | ನೀರಿಗೆ ಬಂದೇನೆ


ದ್ಯಾಮವ್ವನ ಗುಡಿ ಮುಂದ ಒಬ್ಬ ಮುದುಕ ಕುಂತಿದ್ದಾ

ಗಾಂಜಾ ಸೇದತಿದ್ದಾ ಪಟಕಾ ಸುತ್ತಿದ್ದಾ


ಹುಯಿಲಗೋಳ ಕೇರಿಯಾಗ ನೀರು ತರುವಾಗ

ಕಲ್ಲು ತಾಕಿತ ತಂಗಿ ಕೊಡವು ಒಡೆಯಿತ


ಎವ್ವಾ ಇವನ್ಯಾರ ಮಂಚದ ಮ್ಯಾಲ ಮಲಗ್ಯಾನ

ಗೊತ್ತಿಲ್ಲೇನವ್ವಾ ತಂಗಿ ಶಿಶುನಾಳ ಶರೀಫಜ್ಜ


ಚೆಂದಕ ತಂದೇನೆ ತಂಗಿ | ನೀರಿಗೆ ಬಂದೇನೆ

~~~~~~~~~~~~~~~~~~~~~~~~~~~~~~~~~~~~~~~~~~~~~

ಮುಂಜಾನೆದ್ದು ಕುಂಬಾರಣ್ಣ

ಹಾಲು ಬಾನುಂಡಾನ

ಹಾರ್ಯರಿಮಣ್ಣಾ ತುಳಿದಾನ

ಹಾರಿ ಹಾರ್ಹಾರಿ ಮಣ್ಣ ತುಳಿದು ತಾ ಮಾಡ್ಯಾನ

ನಾರ್ಯಾರು ಹೊರುವಂತ ಐರಾಣಿ ||ಹೊತ್ತಾರೆದ್ದು ಕುಂಬಾರಣ್ಣ

ತುಪ್ಪ ಬಾನುಂಡಾನ

ಗಟ್ಟೀಸಿ ಮಣ್ಣಾ ತುಳಿದಾನ

ಗಟ್ಟೀಸಿ ಮಣ್ಣಾ ತುಳಿಯೂತ ಮಾಡ್ಯಾನ

ಮಿತ್ರೇರು ಹೊರುವಂತ ಐರಾಣಿ||


ಅಕ್ಕಿ ಹಿಟ್ಟು ನಾವು ತಕ್ಕೊಂಡು ತಂದೀವಿ

ಗಿಂಡೀಲಿ ತಂದೀವ್ನಿ ತಿಳಿದುಪ್ಪ

ಗಿಂಡೀಲಿ ತಂದೀವ್ನಿ ತಿಳಿದುಪ್ಪ ಕುಂಬಾರಣ್ಣ

ತಂದೀಡು ನಮ್ಮ ಐರಾಣಿ ||


ಕುಂಬಾರಣ್ಣನ ಮಡದಿ ಕಡಗಾದ ಕೈಯಿಕ್ಕಿ

ಕೊಡದಾ ಮ್ಯಾಲೇನ ಬರದಾಳ

ಕೊಡದಾ ಮ್ಯಾಲೇನಾ ಬರೆದಾಳ್ ಕಲ್ಯಾಣದ ಶರಣಾ ಬಸವನ ನಿಲಿಸ್ಯಾಳ ||

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

ಹೆಣ್ಣಿನ ಜನುಮಾಕೆಹೆಣ್ಣಿನ ಜನುಮಾಕೆ ಅಣ್ಣ ತಮ್ಮರು ಬೇಕು

ಬೆನ್ನು ಕಟ್ಟುವರು ಸಭೆಯೊಳಗೆ

ಬೆನ್ನು ಕಟ್ಟುವರು ಸಭೆಯೊಳಗೆ ಸಾವಿರ ಹೊನ್ನು ಕಟ್ಟುವರು ಉಡಿಯೊಳಗೆ||


ಎನಗೆ ಯಾರಿಲ್ಲಂತ ಮನದಾಗ ಮರುಗಿದರು

ಪರನಾಡಲೊಬ್ಬ ಪ್ರತಿಸೂರ್ಯ | ನನ್ನಣ್ಣ

ಬಿದಿಗೆ ಚಂದ್ರಾಮ ಉದಿಯಾದ


ಮನೆಯ ಹಿಂದಿಲ ಮಾವು ನೆನೆದಾರೆ ಘಮ್ಮೆಂದು

ನೆನೆದಂಗೆ ಬಂದ ನನ ಅಣ್ಣ| ಬಾಳೆ

ಗೊನೆಯಾಂಗೆ ತೋಳ ತಿರುವೂತ


ಸರದಾರ ಬರುವಾಗ ಸುರಿದಾವು ಮಲ್ಲಿಗೆ

ದೊರೆ ನನ್ನ ತಮ್ಮ ಬರುವಾಗ| ಯಾಲಕ್ಕಿ

ಗೊನೆ ಬಾಗಿಲ ಹಾಲು ಸುರಿದಾವು


ಅಣ್ಣ ಬರುತಾನಂತ ಅಂಗಳಕೆ ಕೈಕೊಟ್ಟು

ರನ್ನ ಬಚ್ಚಲಿಗೆ ಮಣೆ ಹಾಕಿ | ಕೇಳೇನು

ತಣ್ಣಗಿಹರಣ್ಣ ತವರವರು

~~~~~~~~~~~~~~~~~~~~~~~~~~~~~~~~~~~~~~~~~

ಚೆಲ್ವಿ ಚೆಲ್ವಿ ಎಂದು ಅತಿಯಾಸೆ ಪಡಬೇಡ
ಚೆಲ್ವು ಇದ್ದರೇನು ಗುಣವಿಲ್ಲ
ಹೊಳೆನೀರು ತಿಳಿ ಇದ್ದರೇನು ರುಚಿ ಇಲ್ಲಾ


ಕಪ್ಪು ಹೆಂಡತಿಯೆಂದು ಕಳವಳ ಪಡಬೇಡ
ನೇರಳೆ ಹಣ್ಣು ಬಲು ಕಪ್ಪು
ಇದ್ದರೂ ತಿಂದು ನೋಡಿದರೆ ರುಚಿ ಬಹಳ


ಕೆಂಪು ಹೆಂಡತಿಯೆಂದು ಸಂತೋಷ ಪಡಬೇಡ
ಹತ್ತಿಯ ಹಣ್ಣು ಬಲು ಕೆಂಪು
ಇದ್ದರೂ ಒಡೆದು ನೋಡಿದರೆ ಹುಳು ಬಹಳಾ


ಬಂಗಾರ ಬಳಿತೊಟ್ಟು ಬಡಿವಾರ ಬ್ಯಾಡ
ಬಂಗಾರ ನಿನಗೆ ಸ್ಥಿರವಲ್ಲ
ಮಧ್ಯಾಹ್ನ ಸಂಜೆಯಾಗುವುದು ತರವಲ್ಲ
~~~~~~~~~~~~~~~~~~~~~~~~~~~~~~~~~~~~~~~~~

ಅದು ಬೆಟ್ಟ ಇದು ಬೆಟ್ಟ


ಅದು ಬೆಟ್ಟ ಇದು ಬೆಟ್ಟವೋ ನಂಜುಂಡ

ನಂದ್ಯಾಲಗಿರಿ ಬೆಟ್ಟವೋ

ನಂದ್ಯಾಲಗಿರಿ ಬೆಟ್ಟಕೆ | ನಂಜುಂಡ

ದಾಸ್ವಾಳದ ಗಿಡ ಹುಟ್ಟಿತುದಾಸ್ವಾಳದ ಹೂವ ತಂದು | ನಂಜುಂಡ

ದಾರ್ಯಾಗ ಪೂಜೆ ಮಾಡಿ

ಹೂ ಬಾಡಿ ಹೋಗಿತಯ್ಯೋ | ನಂಜುಂಡ

ಎದ್ದು ಬಾರಯ್ಯ ಮನೆಗೆ


ಸ್ವಾತಿಯ ಮಳೆ ಹುಯ್ಯಿತೋ | ನಂಜುಂಡ

ಸಂಪಂಗಿ ಕೆರೆ ತುಂಬಿತೋ

ಸಂಪಂಗಿ ಕೆರೆಯ ಕೆಳಗೇ | ನಂಜುಂಡ

ಕೆಂಬತ್ತನೆಲ್ಲ ಬಿತ್ತಿ


ಸಾಲ್ಹಿಡಿದು ಕಬ್ಬ ನೆಟ್ಟು | ನಂಜುಂಡ

ಮುಂಭ್ಹಿಡಿದು ನೀರ ಕೊಟ್ಟು

ಜಲ ನೋಡಿ ಬಾವಿ ತೆಗೆಯೋ | ನಂಜುಂಡ

ಕುಲ ನೋಡಿ ಹೆಣ್ಣು ತೆಗೆಯೋ


ಮೂಡಲ ಸೀಮೆಯವನೇ | ನಂಜುಂಡ

ಮುತ್ತಿನ ಹಾರದವನೆ

ಬಡಗಲ ಸೀಮೆಯವನೇ | ನಂಜುಂಡ

ಬಯಲಾದ ರೂಪದವನೇ


ಸಾಲು ತೆಂಗಿನಮರವೋ | ನಂಜುಂಡ

ಮೇಲೆ ನಂಜಾನ ಗುಡಿಯು

ಹದಿನಾಲ್ಕು ಪರದಕ್ಷಿಣಾ | ನಂಜುಂಡ

ಹದಿನಾಲ್ಕು ಕಿರುದಕ್ಷಿಣಾ
~~~~~~~~~~~~~~~~~~~~~~~~~~~~~~~~~~~~~~~~~~~~~

ಭಾಗ್ಯದ ಬಳೆಗಾರ


ಭಾಗ್ಯದ ಬಳೆಗಾರ ಹೋಗಿ ಬಾ ನನ್ತವರಿಗೆ

ನಿನ್ನ ತವರೂರ ನಾನೇನು ಬಲ್ಲೇನು

ಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆ ಬಾಲೆ

ತೋರಿಸು ಬಾರೇ ತವರೂರಬಾಳೆ ಬಲಕ್ಕೆ ಬಿಡೊ, ಸೀಬೇ ಎಡಕ್ಕೆ ಬಿಡೊ

ನಟ್ಟ ನಡುವೇಲಿ ನೀ ಹೋಗೋ ಬಳೆಗಾರ

ಅಲ್ಲಿಹುದೇ ನನ್ನ ತವರೂರು

ಮುತ್ತೈದೆ ಎಲೆ ಹೆಣ್ಣೆ ತೋರುಬಾರೆ ತವರೂರ


ಅಂಚಿನ ಮನೆ ಕಾಣೊ ಕಂಚಿನ ಕದ ಕಾಣೊ

ಮಿಂಚಾಡೊವೆರಡು ಗಿಣಿ ಕಾಣೊ ಬಳೆಗಾರ

ಅಲ್ಲಿಹುದೇ ನನ್ನ ತವರೂರು

ಮುತ್ತೈಡೆ ಎಲೆ ಹೆಣ್ಣೆ ತೋರು ಬಾರೆ ತವರೂರ


ಆಲೆ ಆಡುತಾವೆ ಗಾಣ ತಿರುಗುತಾವೆ

ನವಿಲು ಸಾರಂಗ ನಲಿತಾವೆ ಬಳೆಗಾರ

ಅದೇ ಕಾಣೋ ನನ್ನ ತವರೂರು

ಮುತ್ತೈದೆ ಎಲೆ ಹೆಣ್ಣೆ ತೋರು ಬಾರೆ ತವರೂರಮುತ್ತೈದೆ ಹಟ್ಟೀಲಿ ಮುತ್ತೀನ ಚಪ್ಪರ ಹಾಕಿ

ನಟ್ಟ ನಡುವೇಲಿ ಪಗಡೆಯ ಆಡುತಾಳೆ

ಅವಳೆ ಕಾಣೊ ಎನ್ನ ಹಡೆದವ್ವಾ

ಮುತ್ತೈದೆ ಎಲೆ ಹೆಣ್ಣೆ ತೋರು ಬಾರೆ ತವರೂರ


ಅಚ್ಚ ಕೆಂಪಿನ ಬಳೆ ಹಸಿರು ಗೀರಿನ ಬಳೆ

ಎನ್ನ ಹಡೆದವ್ಗೆ ಬಲು ಆಸೆ ಬಳೆಗಾರ

ಕೊಂಡೋಗೋ ಎನ್ನ ತವರಿಗೆ

ಭಾಗ್ಯದ ಬಳೆಗಾರ ಹೋಗಿ ಬಾ ನನ್ತವರಿಗೆ

~~~~~~~~~~~~~~~~~~~~~~~~~~~~~~~~~~~~~~~~~~~

ಚೆಲ್ಲಿದರು ಮಲ್ಲಿಗೆಯ


ಚೆಲ್ಲಿದರು ಮಲ್ಲಿಗೆಯಾ...
ಬಾಣಾಸೂರೇರಿ ಮ್ಯಾಲೆ..
ಅಂದಾದ ಚೆಂದಾದ ಮಾಯ್ಗಾರ ಮಾದೇವ್ಗೆ
ಚೆಲ್ಲಿದರು ಮಲ್ಲಿಗೆಯ||

ಮಾದಪ್ಪ ಬರುವಾಗಾ..
ಮಾಳೆಪ್ಪ ಘಮ್ಮೆಂದಿತೊ
ಮಾಳದಲಿ ಗರುಕೆ ಚಿಗುರ್ಯಾವೆ
ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯ||


ಸಂಪಿಗೆ ಹೂವ್ನಂಗೇ
ಇಂಪಾದೊ ನಿನ್ನ ಪರುಸೆ
ಇಂಪಾದೊ ನಿನ್ನ ಪರುಸೆ
ಕೌದಳ್ಳಿ ಬಯಲಾಗಿ ಚೆಲ್ಲಿದರು ಮಲ್ಲಿಗೆಯ||


ಮಲ್ಲಿಗುವಿನ ಮಂಚಾ
ಮರುಗಾದ ಮೇಲೊದಪು
ತಾವರೆ ಹೂವು ತಲೆದಿಂಬು
ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯ||


ಹೊತ್ತು ಮುಳಿಗಿದರೇನೂ
ಕತ್ತಲಾದರೇನು
ಅಪ್ಪಾ ನಿನ್ನ ಪರುಸೆ
ಬರುವೇವು ನಾವು ಚೆಲ್ಲಿದರು ಮಲ್ಲಿಗೆಯಾ||

~~~~~~~~~~~~~~~~~~~~~~~~~~~~~~~~~~~~~~~

ಕೋಲು ಕೋಲಣ್ಣ ಕೋಲೆ


ಕೋಲು ಕೋಲಣ್ಣ ಕೋಲೆ
ಕೋಲು ಕೋಲಣ್ಣ ಕೋಲೆ


ಮಲ್ಲಯ್ಯನಿರುವುದು ಇಲ್ಲಿಗೆ ಗಾವುದ
ಮಲ್ಲಯ್ಯ್ನ ಮಡದಿ ಮರುಗಮ್ಮ | ಇರುವುದು
ಕಲ್ಲು ಮಾಳಿಗೆ ಕೈಲಾಸ||ಮಲ್ಲಯ್ಯ ಶಿವನೀ ವೆಲ್ಲಿಗಬಿಟ್ರೆ
ಮಲ್ಲಿಗೆ ಬೆಳಗೋ ಮತಿಘಟ್ಟನೆ ರಾಮಂದ್ರೆ
ಬೆಳಗಾಗಿ ಬಿಟ್ಟು ಪರುಸೆಯ||


ಒಕ್ಕಾಲ ಉರುಗೆಜ್ಜೆ ಒಕ್ಕಾಲ ಕಿರುಗೆಜ್ಜೆ
ಚೊಕ್ಕಾ ಬೆಳ್ಳಿ ಮಕರಂಭ
ಚೊಕ್ಕಾ ಬೆಳ್ಳೀಲಿ ಮಕರಂಭ ಕೀಲಕುದುರೆ
ಒಕ್ಕಾವು ಮಾರ್ನೊಮಿ ಪೌಜೀಗೆ||


ಆನೆ ಶೃಂಗಾರವಾಗಿ ಅಂಗಾಳದ ಗೈದಾವೆ
ಜಾಣ ತಾನೇಕೆ ಒರಟಾನೆ
ಜಾಣ ತಾನೇಕೆ ಒರಟಾನೆ ಲೋ ನಿನ್ನ
ಡೊಲು ಲಾಲಿಲಿ ಕರೆದಾವೆ||

~~~~~~~~~~~~~~~~~~~~~~~~~~~~~~~~~~~~~~~~~~~~

ಬಾಗಿ ಬಾಗಿ ಬಂಗಾರ ತೂಗಿ


ಬಾಗಿ ಬಾಗಿ ಬಂಗಾರ ತೂಗಿ
ಬೆಳ್ಳಿ ಮೂಡಿ ಬೆಳಗಾದವಮ್ಮ
ಗೋಕುಲ ಹೊಳಗೆ ಸಂಭ್ರಮವೆನ್ನಿರೆ
ನಂದಾನ ಕಂದ ಗೋವಿಂದ


ನಂದಾನ ಕಂದಾ ಗೋವಿಂದ ಕೃಷ್ಣನ
ಚಂದಾದಿ ತೊಟ್ಟಿಲೊಳಗಿಟ್ಟು
ಚಂದಾದಿ ತೊಟ್ಟಿಲೊಳಗಿಟ್ಟು ಗೋಪ್ಯಮ್ಮ
ನಂದಾದಿ ತೂಗುತ್ತ ಪಾಡಿದಳೆ

ಪೂತನಿಯ ಕೊಂದಾನೆ ಶಕಟನ ಮುರಿದಾನೆ
ಕಾಳಿಂಗ ಮಡುವ ಕಲಕಿದಾನೆ
ಕಾಳಿಂಗ ಮಡುವಾ ಕಲಕಿದ ಶ್ರೀ ಕೃಷ್ಣ
ರಕ್ಕಾಸರೆಲ್ಲರ ಮಡುವಿದಾನೆ


ಗೋವ್ಗಳ ಕಾಯ್ದಾನೆ ಬೆಣ್ಣೆಯ ಮೆದ್ದಾನೆ
ಬೆಟ್ಟಲ್ಲಿ ಬೆಟ್ಟಾವನೆತ್ತಿದ್ದನೆ
ಬೆಟ್ಟಲ್ಲಿ ಬೆಟ್ಟಾವನೆತ್ತಿದ ಶ್ರೀಕೃಷ್ಣ
ಗೋಪ್ಯಾರ ಸೀರೆ ಕದ್ದೊಯ್ದಾನೆ
~~~~~~~~~~~~~~~~~~~~~~~~~~~~~~~~~~~~~~~~~~~~
ಸರಕ್ಕ ಸರಿತಲ್ಲ


ಸರಕ್ಕ ಸರಿತಲ್ಲ
ಬೀಗರ ಸರೂಕ ತಿಳಿತಲ್ಲ||

ಆನೆ ಬರ್ತಾವಂತ ಆರು ಭಣವೆ ಕೊಂಡೆ
ಆನೆಲ್ಲಿ ನಿಮ್ಮ ದಳವೆಲ್ಲಿ | ಬೀಗ
ಬೋಳೋರಿ ಮ್ಯಾಲೆ ಬರುತಾನೆ||


ಒಂಟೆ ಬರ್ತಾವಂತ ಎಂತು ಭವಣೆಯ ಕೊಂಡೆ
ಒಂಟೆಲ್ಲಿ ನಿಮ್ಮ ದಳವೆಲ್ಲಿ |ಬೀಗ
ಕುಂಟೋರಿ ಮ್ಯಾಲೆ ಬರುತಾನೆ ||


ಬೀಗತಿ ಒಳ್ಳೆಯವಳೆಂದು ದೇವಾರ ಮನೆ ಕೊಟ್ಟಿ
ದೇವಾರ ಜಗುಲಿ ಬಿಟ್ಟುಕೊಟ್ಟೆ ಬೀಗುತಿ
ದೇವರಿಕ್ಕೊತಾಳೆ ಬಗಲೊಳಗೆ||


ಬೀಗುತಿ ಒಳ್ಳೆಯವಳೆಂದು ಅಡಿಗೆಯ ಮನೆ ಕೊಟ್ಟೆ
ಓಳೀಗೆ ಚೀಲ ಬಗಲಾಗಿ | ಅವರಣ್ಣ
ನಿಲಿಸಿ ನಂದು ಕೊಸುಗೊಂಡಾ||

ಎಲ್ಲಾರು ಕಟ್ಯಾರು ಮಲ್ಲಿಗೆ ಹೂವಿನ ದಂಡ
ಬೀಗುತಿ ಕಟ್ಯಾಳು ಹೊಲ್ಲೊರೆ| ಅವರಣ್ಣ
ಕುದುರೆಯಿಲ್ಲೆಂದು ಕಸುಗೊಂಡ||

~~~~~~~~~~~~~~~~~~~~~~~~~~~~~~~~~~~~~~~~~

ನಿಂಬಿಯಾ ಬನಾದ ಮ್ಯಾಗಳ


ನಿಂಬಿಯಾ ಬನಾದ ಮ್ಯಾಗಳ
ಚಂದ್ರಾಮ ಚೆಂಡಾಡಿದ|

ಎದ್ದೋನೆ ನಿಮಗ್ಯಾನ ಏಳುತಲಿ ನಿಮಗ್ಯಾನ
ಸಿದ್ಧಾರ ಗ್ಯಾನ ಶಿವೂ ಗ್ಯಾನ
ಸಿದ್ಧಾರ ಗ್ಯಾನ ಶಿವೂ ಗ್ಯಾನ ಮಾ ಶಿವನೆ
ನಿದ್ರೆಗಣ್ಣಾಗೆ ನಿಮಗ್ಯಾನ


ಆರೇಲಿ ಮಾವಿನ ಬೇರಾಗಿ ಇರುವೋಳೆ
ಓಲ್ಗಾದ ಸದ್ದಿಗೆ ಒದಗೋಳೆ
ಓಲ್ಗಾದ ಸದ್ದೀಗೆ ಒದಗೋಳೆ ಸರಸತಿಯೆ
ನಮ್ ನಾಲಿಗೆ ತೊಡಿರ ಬಿಡಿಸವ್ವಾ


ಎಂಟೆಲಿ ಮಾವಿನ ದಂಟಾಗಿ ಇರುವೋಳೆ
ಗಂಟೆ ಸದ್ದೀಗೆ ಒದಗೋಳೆ
ಗಂಟೆ ಸದ್ದೀಗೆ ಒದಗೊಳೆ ಸರಸತಿಯೆ
ನಮ್ ಗಂಟಾಲ ತೊಡರ ಬಿಡಿಸವ್ವಾ

ರಾಗಿ ಬೀಸೋಕಲ್ಲೆ ರಾಜಾನ ಒಡಿಗಲ್ಲೆ
ರಾಯ ಅಣ್ಣಯ್ನ ಅರಮನೆ
ರಾಯ ಅಣ್ಣಯ್ನ ಅರಮನೆಯ ಈ ಕಲ್ಲೆ
ನೀ ರಾಜಾ ಬೀದೀಲಿ ದನಿದೋರೆ


ಕಲ್ಲವ್ವಾ ಮಾತಾಯಿ ಮಲ್ಲವ್ವಾ ರಾಗೀಯ
ಜಲ್ಲಾ ಜಲ್ಲಾನೆ ಉದುರವ್ವಾ
ಜಲ್ಲಾ ಜಲ್ಲಾನೆ ಉದುರವ್ವ ನಾ ನಿನಗೆ
ಬೆಲ್ಲಾದಾರತಿಯ ಬೆಳಗೇನು
~~~~~~~~~~~~~~~~~~~~~~~~~~~~~~~~~~~~~~~~~~~~~~

ಮೂಡಲ್ ಕುಣಿಗಲ್ ಕೆರೆ


ಮೂಡಲ್ ಕುಣಿಗಲ್ ಕೆರೆ ನೋಡೋರ್ಗೋಂದೈಭೋಗ

ಮೂಡಿ ಬರ್ತಾನೆ ಚೆಂದಿರಾಮ|

ತಂತ್ರಿಗೆ ನೋಡೋರ್ಗೆ ಎಂಥಾ ಕುಣಿಗಲ್ ಕೆರೆ

ಸಂತೆ ಹಾದಿಲ್ ಕಲ್ಲುಕಟ್ಟೆ||ಬಾಳೆಯ ಹಣ್ಣಿನಂತೆ ಬಾಗಿದ ಕುಣಿಗಲ್ ಕೆರೆ

ಭಾವ ತಂದಾನು ಬಣ್ಣದ ಸೀರೆ| ತಾನಂದಾನೂ

ಭಾವ ತಂದಾನು ಬಣ್ಣದ ಸೀರೆ||


ಅಹಾ ನಿಂಬೆಯ ಹಣ್ಣಿನಂತೆ ತುಂಬಿದ್ ಕುಣಿಗಲ್ ಕೆರೆ

ಆಂದಾ ನೋಡಾಲು ಶಿವ ಬಂದ | ತಾನಂದನೋ

ಅಂದಾ ನೋಡಾಲು ಶಿವ ಬಂದ ||


ಅಂದಾನೆ ನೋಡಲು ಶಿವ ಬಂದು ಶಿವಯೋಗಿ

ಕಪ್ಫಕ್ಕಿ ಬಾಯ ಬಿಡುತಾವೆ | ತಾನಂದನೋ

ಕಪ್ಫಕ್ಕಿ ಬಾಯಿ ಬಿಡುತಾವೆ ಬಿಡದಿ

ಗಪ್ಪಾಗೊಂಬಾಳೆ ನಡುಗ್ಯಾವೆ||


ಹಾರಕ್ಕೊಂದೂರುಗೋಲು ನೂಕಾಕ್ಕೊಂದೂರುಗೋಲು

ಬೊಬ್ಬೆ ಹೊಡೆದಾವೆ ಬಾಳೆಮೀನು | ತಾನಂದನೋ

ಬೊಬ್ಬೆಯ ಹೊಡೆದಾವೆ ಬಾಳೆಮೀನು ಕೆರೆಯಾಗೆ

ದೊಪ್ಪಿಸಾರಂಗ ನಗುತಾವೆ ತಾನಂದನೋ

ದೊಪ್ಪಿಸಾರಂಗ ನಗುತಾವೆ||

~~~~~~~~~~~~~~~~~~~~~~~~~~~~~~~~~~~~~~~~~~~~~

ಕುಂತ್ರೆ ನಿಂತ್ರೆ ಅವನ್ದೆ ಧ್ಯಾನ


ಕುಂತ್ರೆ ನಿಂತ್ರೆ ಅವನ್ದೆ ಧ್ಯಾನ
ಜೀವಕ್ಕಿಲ್ರಿ ಸಮಾಧಾನ
ಅವನಿಗೆ ಎಂತ ಬಿಗುಮಾನ
ಅವನೆ ನನ್ನ ಗೆಣೆಕಾರ


ಇಂದ್ರ ಲೋಕ್ದಲಿಲ್ಲ ಕಣ್ರಿ
ಚಂದ್ರಲೋಕ್ದಲಿಲ್ಲ ಕಣ್ರಿ
ಮೂರು ಲೋಕ್ದಲಿಲ್ಲ ಕಣ್ರಿ
ಅವನೆ ನನ್ನ ಗೆಣೆಕಾರ

ರೂಪ್ದಲವನು ಚಂದ್ರ ಕಣ್ರಿ
ರೂಪ್ದಲವನು ಇಂದ್ರ ಕಣ್ರಿ
ಕೇರಿಗೆಲ್ಲ ಒಬ್ನೆ ಕಣ್ರೆ
ಅವನೆ ನನ್ನ ಗೆಣೆಕಾರ

ಜಾತ್ರೆಲ್ ಅವನ ಕಂಡೆ ಕಣ್ರಿ
ಛತ್ರಿ ಮುಚ್ಚಿ ನಿಂತ ಕಣ್ರಿ
ಪಕ್ಕಕ್ ಬಂದು ನಿಂತ ಕಣ್ರಿ
ಅವನೆ ನನ್ನ ಗೆಣೆಕಾರ

ಮೊಲ್ಲೆ ಹೂವ ತಂದ ಕಣ್ರಿ
ತುರುಬಿನಲ್ಲಿ ಇಟ್ಟ ಕಣ್ರಿ
ಮೈಯೆಲ್ಲ ಜುಂ ಅಂತ್ರಿ
ಅವನೆ ನನ್ನ ಗೆಣೆಕಾರ

ಚಾವಡಿಗ್ ಬಂದು ನಿಂತ ಕಣ್ರಿ
ತಾಳಿ ಚಿನ್ನ ತಂದ ಕಣ್ರಿ
ನಂಗು ಅವನ್ಗು ಮದುವೆ ಕಣ್ರಿ
ಅವನೆ ನನ್ನ ಯಜಮಾನ
~~~~~~~~~~~~~~~~~~~~~~~~~~~~~~~~~~~~~~~~~~~~~~

ಕಲಿತ ಹುಡುಗಿ ಕುದುರಿ ನಡಗಿ

ನಡದು ಬರತಿತ್ತ

ಅದನ್ನು ಕಂಡ ನಮ್ಮ ಹಳ್ಳಿಮಂದಿಗೆ

ದಿಕ್ಕ ತಪ್ಪಿಹೋತಉಟ್ಟ ಸೀರೆಯ ಕೆಳಗಿನ ದಡಿಯ ಕಸಾ ಹೊಡೆಯುತ್ತಿತ್ತಾ

ಮುನಸೀಪಾಲ್ಟಿ ಆಳಿನಕಿಂತ ಸ್ವಚ್ಛ ಮಾಡುತ್ತಿತ್ತ

ಜುಲುಪಿ ಬಿಟ್ಟ ಹಿಂಡ ರಿಬ್ಬನ್ನು ಬಾಚಿ ಕಟ್ಟಿತ್ತಾ

ಭರ್ರಂತ ನಡಿಯೋದ್ರಾಗ ರಿಬ್ಬನ್ನು ಢಿರಕಿ ಹೊಡಿತಿತ್ತಾಬಣ್ಣದ ಮುಖಕ ಬಡಿದ ಪೌಡರು ಹಾರ್ಯಾರಿ ಬರುತಿತ್ತಾ

ಹಣೆಗೆ ಹಚ್ಚಿದ ಕುಂಕುಮ ಸಣ್ಣಗ ಹಣಿಕಿ ಹಾಕತಿತ್ತಾ

ಬಳೆಯಿಲ್ಲದ ಬಲಗೈಯಂತೂ ಬಣಬಣ ಅಂತಿತ್ತಾ

ಎಡಗೈಯಾಗ ರಿಷ್ಟವಾಚ್ ಬಡಿದು ಕುಂತಿತ್ತಾ


ಎತ್ತರ ಹಿಮ್ಮಡಿ ಚಪ್ಪಲ್ಲೊಮ್ಮೊಮ್ಮೆ ತೊಡ್ರಗಾಲ ಬಡಿತಿತ್ತಾ

ಮೊಳಕೈಗೊಂಡು ರೊಕ್ಕದ ಪರ್ಸ್ ಜೋತು ಬಿದ್ದಿತ್ತಾ

ಕಣ್ಣಿನ ನೋಟಕ ಕಾಲಿನ ತಾಳಕ ಎಲ್ಲಿಯ ಪುರುಸೊತ್ತಾ

ಬಳ್ಳಿಯಾಂಗ ಬಳುಕೂ ನಡುವ ನರ್ತನ ನಡೆಸಿತ್ತಾ


ಕಮ್ಮಾರ ಹುಡುಗ ಕಬ್ಬಿಣಾ ಕಾಸಿ ಬಡಕೊಂಡ ಕುಂತಿತ್ತಾ

ಹಾದು ಹೋಗುವ ಹುಡುಗಿಮ್ಯಾಗ ಅವನ ನೆದರ ಬಿತ್ತ

ಮ್ಯಾಲ ಎತ್ತಿದ ಕಬ್ಬಿಣ ಸುತ್ತಿಗೆ ಪಟ್ಟಂತ ಕೆಳಗ ಬಿತ್ತ

ಕಬ್ಬಿಣ ಮ್ಯಾಗ ಕುಂದ್ರೋ ಹೊಡತಾ ಕೈಯಮ್ಯಾಲ ಬಿತ್ತ


ಕುಂಬಾರ ಹುಡುಗಾ ಗಿಡಿಗಿ ಮಾಡಾಕ ಮಣ್ಣ ಕಲಸತಿತ್ತಾ

ಚಕ್ಕಂತ ಬಂದ ಹುಡುಗಿ ಮ್ಯಾಲ ಬಿತ್ತ ಅವನ ಚಿತ್ತ

ಬುಡುಕ ಕುಂತ ಹುಡುಗನ ಹೆಂಡತಿ ನೀರ ಬೆರಸತಿತ್ತ

ಹೆಂಡತಿ ಖಬರ ಇಲ್ಲದ ತುಳದಾನ ಸೊಂಟ ಮುರುದ ಬಿತ್ತ


ಮ್ಯಾದರ ಹುಡುಗ ಮೆಳ್ಳಗಣ್ಣೆಲೆ ಬಿದರ ಸೀಳತಿತ್ತ

ಮೂಲಿ ಹೊರಳಿ ಹುಡುಗಿ ಹೋಗುವಾಗ ಅವನ ಕಣ್ಣ ಬಿತ್ತ

ಬಿದರ ಸೀಳಿ ಎರಡೋಳಾಗಿದ್ದರು ಚೂರಿ ಸೀಳಿ ಬಂತ

ಬಟ್ಟ ಕತ್ತರಿ ಬಿದ್ದರೂ ಅವಗಾಗಲಿಲ್ಲ ಗೊತ್ತ


ಶೆಟ್ಟರ ಹುಡುಗ ಯಾಲಕ್ಕಿ ತೂಗಾಕ ಚಕ್ಕಡಿ ಹಿಡಿದಿತ್ತ

ಗಿರಾಕಿ ಕೂಡ ಮಾತಾಡುವಾಗ ಹುಡುಗಿ ಎದುರು ಬಂತ

ಯಾಲಕ್ಕಿ ತೂಗು ಹಾಕುವ ಕೈಯಾ ಹಾಕೇ ಹಾಕುತಿತ್ತಾ

ಹುಡುಗಿ ಗುಂಗಿನಾಗ ಯಾಲಕ್ಕಿ ಡಬ್ಬಿ ಖಾಲಿ ಹೋಗಿ ಹೋತಾ


ಸಿಂಪಿಗ್ಯಾರ ಹುಡುಗ ಅಂಗಿ ಹೊಲಿದು ಕಿಸೆ ಹಚ್ಚತಿತ್ತ

ಕಿಸೆ ಕತ್ತರಿಸಿ ಹಚ್ಚೊಮುಂದ ಹುಡುಗಿ ಎದುರುಬಂತ

ಹುಡುಗಿನ ನೋಡಿನ ಹುಡುಗನ ಅಳತಿ ಹೇರ ಪೇರ ಆತ

ಎದೆಗೆ ಹಚ್ಚು ಕಿಸಾದ ತುಕುಡಿ ಡುಬ್ಬಕ ಹಚ್ಚಿತ್ತ


ಪೂಜಾರ ಹುಡುಗ ಹನುಮಂತ ದೇವರ ಪೂಜೆಗೆ ನಡದಿತ್ತ

ಪೂಜಿವ್ಯಾಳೆ ಮೀರಿ ಹೋಗೈತಂತ ಗಡಬಡ ಸೊಂಟಿತ್ತ

ಬೆಕ್ಕು ಅಡ್ಡ ಹಾದು ಹೋಗುವಂಗ ಹುಡುಗಿ ಅಡ್ಡ ಬಂತ

ಪೂಜಾ ಮರೆತು ಬಾಯಿ ತೆರೆದು ನಿಂತು ಜೊಲ್ಲ ಸೋರತಿತ್ತ
ಬಡಿಗ್ಯಾರ ಹುಡುಗ ಆಳಿನ ಕೂಡ ಉಜ್ಜಗೊಡ್ಡ ಹೊಡಿತಿತ್ತ

ಕೊಡ್ಡದ ಮ್ಯಾಲ ಉಚ್ಚಗೊಡ್ಡು ಹಿಂದ ಮುಂದಾಗತಿತ್ತ

ಬಡಗ್ಯಾನ ಮರೆತು ಆಳು ಆ ಹುಡುಗಿನ ಡೊಗ್ಗಿ ನೋಡಿತ್ತ

ಹುಡುಗ್ತಿ ಲಕ್ಷ್ಯಕ್ಕ ಆಳಿನ ಡುಬ್ಬಾ ಕೆತ್ತಿ ಕೆತ್ತಿ ಹೋತಾ


ಚಾದ ಅಂಗಡಿ ಹೊರಗ ಆಳೊಂದು ಭಜಿ ಮಾಡತಿತ್ತ

ಭಜಿ ಮಾಡಿ ಮಾಡಿ, ಹಾಕುವಾಗ ಹುಡುಗಿ ಹಾದ ಹೋತ

ಹುಡುಗಿನ ನೋಡಿದ ಆಳು ಹುಡುಗನ ಜೀವ ಝಲ್ ಅಂತ

ಹಿಟ್ಟಿನ ಬುಟ್ಯಾಗ ಹಾಕುವ ಕೈಯಾ ಎಣ್ಣೆಗೆ ಹಾಕಿತ್ತ


ನಾದಿಗಾರ ಹುಡುಗನ ಮುಂದೊಂದು ಹಣ್ಣಣ್ಣ ಮುದುಕ ಕುಂತಿತ್ತ

ಹುಡುಗನ ಕತ್ತಿ ಮುದುಕನ ಮೀಸೆ ಕಟ್ ಮಾಡುತಿತ್ತ

ಹಾದಿಲೆ ಹೋಗುವ ಹುಡುಗಿನ ನೋಡ್ತಾ ಮುದುಕನ್ನ ಮರೆತ

ಲೇ ಅಂತ ಒದರುವಾಗ ಮೂಗು ಜಿಗಿದು ಬಿತ್ತ
~~~~~~~~~~~~~~~~~~~~~~~~~~~~~~~~~~~~~~~~~~~~~~~~~~

ಕುದುರೇನ ತಂದೀನಿ


ಕುದುರೇನ ತಂದೀನಿ ಜೀನಾವ ಬಿಗಿದೀನಿ

ಬರಬೇಕು ತಂಗಿ ಮದುವೇಗೆಅಂಗ್ಳ ಗುಡಿಸೋರಿಲ್ಲ ಗಂಗ್ಳ ತೊಳೆಯೋರಿಲ್ಲ

ಹೆಂಗೆ ಬರಲಣ್ಣ ಮದುವೇಗೆ?

ಅಂಗ್ಳಾಕೆ ಆಳಿಡುವೆ ಗಂಗ್ಳಾಕೆ ತೊತ್ತಿಡುವೆ

ಬರಬೇಕು ತಂಗಿ ಮದುವೇಗೆ


ಮಳೆಯಾರ ಬಂದೀತು ಹೊಳೆಯಾರ ತುಂಬೀತು

ಹೆಂಗೆ ಬರಲಣ್ಣ ಮದುವೆಗೆ?


ಚಿನ್ನಾದ ಹರಿಗೋಲ್ಗೆ ರನ್ನಾದ ಹುಟ್ಟಾಕಿ

ಜೋಕೆಲಿ ನಿನ್ನ ಕರೆದೊಯ್ವೆ

ಬರಬೇಕು ತಂಗಿ ಮದುವೇಗೆ


ಅಪ್ಪಯಿದ್ದರೆ ಎನ್ನ ಸುಮ್ಮಾನೆ ಕಳುಹೋರೆ

ಅಮ್ಮಾ ಇಲ್ಲಾದ ಮನೆಯಲ್ಲಿ

ಬಂದಾರೆ ಬಂದೇನು ಅಂಗ್ಳದಾಗೆ ನಿಂದೇನು

ಕಣ್ದಾಗೆ ಧಾರೆ ಎರೆದೇನು
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

3 comments:

MD said...

ವಾಹ್ !!!
ಏನ್ರಿ ನೀಲಗಿರಿಯವರೆ... ಇಷ್ಟೊಂದು ಹಳೇಯ ಖಜಾನೆ ಮುಚ್ಚಿಟ್ಟಿದ್ದೀರಲ್ಲ
ಆಹಾ.. ಮನಸ್ಸಿಗೆ ಭಾಳ ಖುಶಿ ಆತು ನೋಡ್ರಿ ಈ ಜಾನಪದಾ ಓದಿ
ನನ್ನ ಫೆವರಿಟ್ಟು
'ಕಲಿತ್ ಹುಡುಗಿ...'

Blogaarthi Anitha said...

ಭಾವಗೀತೆ ಗಳನ್ನು ನೋಡಿ, ಒಮ್ಮೆ ಹಾಡಿ ತು೦ಬಾ ಕುಷಿ ಆಯಿತು.. :) ಗೀತೆಗಳ ಸಾಹಿತ್ಯವನ್ನು ತು೦ಬಾ ದಿನಗಳಿ೦ದ ಹುಡುಕುತ್ತಾ ಇದ್ದೆ.. ಧನ್ಯವಾದಗಳು

Ramesh Gabbur said...

ಸರ್ ನಮಸ್ಕಾರ. ಬಹಳ ಪ್ರಮುಖವಾದ ಜನಪದ ಗೀತೆಗಳು ಇಲ್ಲಿ ಸಿಕ್ಕವು.. ಧನ್ಯವಾದಗಳು..

ರಮೇಶ ಗಬ್ಬೂರು
ಕವಿಗಳು
ಗಂಗಾವತಿ..