ಮಡಿಕೇರೀಲಿ ಮಂಜು
ಬೂಮೀನ್ ತಬ್ಬಿದ್ ಮೋಡ್ ಇದ್ದಂಗೆ
ಬೆಳ್ಳಿ ಬಳಿದಿದ್ ರೋಡ್ ಇದ್ದಂಗೆ
ಸಾಫಾಗ್ ಅಳ್ಳ ತಿಟ್ಟಿಲ್ದಂಗೆ
ಮಡಿಕೇರೀಲಿ ಮಂಜು !
ಮಡಗಿದ್ ಅಲ್ಲೇ ಮಡಗಿದ್ದಂಗೆ
ಲಂಗರ್ ಬಿದ್ದಿದ್ ಅಡಗಿದ್ದಂಗೆ
ಸೀತಕ್ ಸಕ್ತಿ ಉಡಗೋದಂಗೆ
ಅಳ್ಳಾಡಾಲ್ದು ಮಂಜು !
ತಾಯಿ ಮೊಗೀನ್ ಎತ್ಕೊಂಡಂಗೆ
ಒಂದಕ್ಕೊಂದು ಅತ್ಕೊಂಡಂಗೆ
ಮಡಕೇರೀನ ಎದೆಗೊತ್ಕೊಂಡಿ
ಜೂಗೀಡ್ಸಿತ್ತು ಮಂಜು !
ಮಲಗಾಕ್ ಸೊಳ್ಳೆ ಪರದೆ ಕಟ್ಟಿ
ಒದಿಯಾಕ್ ಒಗದಿದ್ ದುಬಟಿಕೊಟ್ಟಿ
ಪಕ್ದಾಗ್ ಗಂದದ್ ದೂಪ ಆಕ್ದಂಗ್
ಮಡಕೇರೀ ಮೇಲ್ ಮಂಜು !
ಮಂಜೀನ್ ಮಸಕಿಕ್ ಕಾವಲ್ನಲ್ಲಿ
ಒದಗಿದ್ ಉದ್ದಾನೆ ವುಲ್ನಲ್ಲಿ
ಒಳಗೇ ಏನೋ ಸರದೋದಂಗೆ
ಅಲಗಾಡ್ತಿತ್ತು ಮಂಜು !
ನಡಿಯೋ ದೊಡ್ದೊಡ್ ದೇವಲ್ನಂಗೆ
ಪಟ್ಣದ್ ಸುತ್ತಿನ್ ಕಾವಲ್ನಂಗೆ
ಅಲ್ಲಲ್ಲೇನೆ ಅಂಗಂಗೇನೆ
ಗಸ್ತಾಕ್ತಿತ್ತು ಮಂಜು !
ಸೂರ್ಯನ್ ಕರೆಯಾಕ್ ಬಂದ್ ನಿಂತೋರು
ಕೊಡಗಿನ್ ಎಲ್ಲಾ ಪೂವಮ್ನೋರು
ತೆಳ್ನ ಬೆಳ್ನೆ ಬಟ್ಟೇನಾಕಿ
ಬಂದಂಗಿತ್ತು ಮಂಜು !
ಚಿಮ್ತಾನಿದ್ರು ಎಳಬಿಸಲಿನ್ ಕೆಂಪು
ಮಂಜಿನ್ ಬಣ್ಣ ಕಣ್ಗೆ ತಂಪು
ಕೊಡಗಿನ್ ಲಸ್ಮೀರ್ ಪೂವಮ್ನೋರ್ಗೆ
ಆಲಿನ್ ಸೌಂದ್ರೀ ಮಂಜು !
ಅಗಲೇ ಬರಲಿ ರಾತ್ರೇ ಬರಲಿ
ಬಿಸಲು ನೆಳ್ಳು ಏನೇ ಇರಲಿ
ಕಣ್ಮರೆಯಾಗಕ್ ತಾವ್ ಕೊಡಾಲ್ದು
ಮಡಿಕೇರಿಗೆ ಮಂಜು !
ತೈಲ ನೀರಿನ್ ಮೇಗಿದ್ದಂಗೆ
ಪೂವಮ್ಮ- ನನ್ ತಂಗೀದ್ದಂಗೆ
ಬಿಟ್ಟೂಬಿಡದಂಗ್ ಇಡಕೋಂತಿತ್ತು
ಮಡಕೇರೀಗೆ ಮಂಜು !
~~~~~~~~~~~~~~~~~~~~~~~~~~~~~~~~~~~~~~
ನಂಜೆ ನನ್ ಅಪರಂಜೀ
ನೋಡಿದ್ರಾ ನಂ ನಂಜೀನಾವ
ನಂ ಗಜನಿಂಬೆ ನಂಜೀನಾವ
ಅವ್ಳ್ ನಕ್ರೆ ಗುಂಡ್ಗೆ ಗುಡಗ್ತೈತೆ ಜುಂ ಜುಂ ಜುಂ
ಅವ್ಳ್ ವಾರ್ಗಣ್ಣಿನ್ ನೋಟಕ್ಕೇವ
ಅವ್ಳ್ ಕೀಟ್ಳ್ ಆಟದ್ ಕಾಟಕ್ಕೇವ
ನಂ ಅಳ್ಳೀಲಿರೋ ಐದರೆಲ್ಲ ಗುಂ ಗುಂ ಗುಂ
ನಂಜಿ ನೀರಿಗ್ ಬರೊ ಝೋಕ್ನಾವ
ನೀರ್ ಸೇದೋ ಷೋಕ್ನಾವ
ಮೀರ್ಸಿದ್ ಉಡಿಗೀರ್ ಅಳ್ಳೀಲೇ ಇಲ್ಲಾ
ಅವ್ಳ್ ಅಟ್ಟಿ ಸೊರ್ಸೊ ಅಂದಾನಾವ
ಅವ್ಳ್ ತಟ್ಟಿದ್ ಬೆರ್ಣಿ ಚಂದಾನಾವ
ನೋಡಿ ನೋಡಿ ಸುಸ್ತಾಗಿವ್ನಿ - ನಾನೇನೇಳ್ಲಿ
ಚಿನ್ನದ್ ಗೊಂಬೆ ನಂಜಿ
ರನ್ನದ್ ಗೊಂಬೆ ನಂಜಿ
ನೀನ್ ಕಣ್ಣು ಮೋರೆ ತಾವ್ರೆ ಕಾರಂಜಿ
ನಿನ್ ಮೂತಿಗೆ ನಾನು ವುಚ್ಚು
ನಿನ್ ಮಾತಿಗೆ ನಾ ಬೆಚ್ಚು
ನಂಜೀ ನನ್ ಅಪರಂಜೀ
ನೋಡಿದ್ರಾ ನಂ ನಂಜೀನಾವ
ನಂ ಗೌಡನ್ ಮಗಲ್ ನಂಜೀನಾವ
ಅವ್ಳ್ ಅಟ್ಟೀಲೆಲ್ಲಾ ಅವಳ್ದೇ ದರ್ಬಾರ್
ಅವ್ಳ್ ಐನೆಟ್ಲೆ ರೇಗ್ಲಿ
ಅವ್ಳ್ ಅವ್ವೆ ಎಟ್ಟೆ ಕೂಗ್ಲಿ
ನಂಜಿ ಬುಟ್ರೆ ಬಾಯಿ ಅಳ್ಳಿ ಅಳ್ಳೀನೆ ಉಜಾರ್
ನಂಜೀನ್ ಮದ್ವೆ ಮಾಡ್ಕಳ್ಯಾಕೆ
ನಂಜೀನ್ ಅಟ್ಟೀಗ್ ತಂದ್ಕಳ್ಯಾಕೆ
ನಾನ್ ಪಟ್ಟಿದ್ದೆಲ್ಲಾ ಸಿವನೇ ಬಲ್ಲಾ
ಈಗ್ ನನ್ನೂ ನನ್ ನಂಜೀನೂವೇ
ನಮ್ಮಿಬ್ರೈದ್ಲು ಪುಟ್ನಂಜೀನ್ವೆ
ಮೀರ್ಸಿದ್ ಅಟ್ಟಿ ಅಳ್ಳಿಲೇ ಇಲ್ಲಾ
ಚಿನ್ನದ್ ಗೊಂಬೆ ದೊಡ್ನಂಜಿ
ರನ್ನದ್ ಗೊಂಬೆ ಪುಟ್ನಂಜಿ
ನಿಮ್ಮಿಬ್ಬರ್ ಮೋರೆ ತಾವ್ರೆ ಕಾರಂಜಿ
ನಿಮ್ ಮೂತಿಗೆ ನಾ ವುಚ್ಚು
ನಿಮ್ ಮಾತಿಗೆ ನಾ ಬೆಚ್ಚು
ಇಬ್ರೂ ನನ್ ಅಪರಂಜೀ....
-ಕೈಲಾಸಂ
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಪ್ರಾರ್ತನೆ
ಬ್ರಮ್ಮ! ನಿಂಗೆ ಜೋಡಿಸ್ತೀನಿ
ಯೆಂಡ ಮುಟ್ಟಿದ್ ಕೈನ!
ಬೂಮೀ ಉದ್ಕು ಬೊಗ್ಗಿಸ್ತೀನಿ
ಯೆಂಡ ತುಂಬ್ಕೊಂಡ್ ಮೈನ!
ಬುರ್ ಬುರ್ ನೊರೆ ಬಸಿಯೋವಂತ
ಒಳ್ಳೆ ವುಳಿ ಯೆಂಡ
ಕೊಡ್ರೀನ್ ನನ್ದು ಪ್ರಾತ್ನ್ ಕೇಳು
ಸರಸೋತಮ್ಮನ್ ಗಂಡ!
ಸರಸೋತಮ್ಮ ಮುನಸ್ಕೊಂಡೌಳೆ
ನೀನಾರ್ ಒಸ್ಸಿಯೋಳು;
ಕುಡದ್ಬುಟ್ ಆಡ್ದ್ರೆ ತೋದಲ್ತಾದಣ್ಣ
ನಾಲ್ಗೆ - ಬಾಳ ಗೋಳು !
ಅಕ್ಸ್ರಾನೆಲ್ಲಾ ಸರಸೋತಮ್ಮ
ಪಟ್ಟಾಗ್ ಇಡಕೊಂಬುಟ್ಟಿ
ಮುನಿಯ ಯೆಂಡ ಬುಡೂವಂಗೇನೆ
ಬುಡತಾಳ್- ಔಳ್ ಕೈ ಗಟ್ಟಿ!
ಮುನಿಯಂಗಾರ ಕಾಸ್ ಔಗ್ತೈತೆ
ಯೆಚ್ಗೆ ಯೆಂಡ ಬುಟ್ರೆ;
ಸರಸೋತಮ್ಮಂಗ್ ಏನೋಗ್ತೈತೆ
ಮಾತ್ ಸಲೀಸಾಗ್ ಕೊಟ್ರೆ?
ನಂಗೆ ನೀನು ಲಾಯ್ರಿಯಾಗಿ
ನನ್ ಕೇಸ್ ಗೆದ್ ಗಿದ್ ಕೊಟ್ರೆ
ಮಾಡ್ತೀನಣ್ಣ ನಿನ್ ವೊಟ್ಟೇನ
ವುಳೀ ಯೆಂಡಕ್ ಪೊಟ್ರೆ!
ಕಮಲದ್ ಊವಿನ್ ಕುರ್ಚಿ ಮ್ಯಾಗೆ
ಜೋಕಾಗ್ ಕುಂತ್ಕೊ ನೀನು
ನಾಕೂ ಬಾಯ್ಗೂ ನಾಕು ಬುಂಡೆ
ಯೆಂಡ ತತ್ತೀನ್ ನಾನು!
ಸರಸೋತಮ್ಮಂಗೆ ಯೋಳಾಕಿಲ್ಲ-
ನೀನೇನ್ ಎದರ್ಕೊ ಬೇಡ;
ಕೇಳಿದ್ ವರಾನ್ ವೊಂದಿಸ್ಕೊಟ್ರೆ
ತಕ್ಕೋ! ಯೆಂಡದ್ ಫೇಡ!
- ಜಿ.ಪಿ. ರಾಜರತ್ನಂ
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ದೋಣಿ ಹಾಡು
ದೋಣಿ ಸಾಗಲಿ, ಮುಂದೆ ಹೋಗಲಿ, ದೂರ ತೀರವ ಸೇರಲಿ !
ಬೀಸು ಗಾಳಿಗೆ ಬೀಳು ತೇಳುವ ತೆರೆಯ ಮೇಗಡೆ ಹಾರಲಿ !
ಹೊನ್ನ ಗಿಂಡಿಯ ಹಿಡಿದು ಕೈಯೊಳು ಹೇಮವಾರಿಯ ಚಿಮುಕಿಸಿ
ಮೇಘಮಾಲೆಗೆ ಬಣ್ಣವೀಯುತ ಯಕ್ಷಲೋಕವ ವಿರಚಿಸಿ,
ನೋಡಿ, ಮೂಡಣದಾ ದಿಗಂತದಿ ಮೂಡುವೆಣ್ಣಿನ ಮೈಸಿರಿ
ರಂಜಿಸುತ್ತಿದೆ ! ಚೆಲುವೆಯಾಕೆಗೆ ಸುಪ್ರಭಾತವ ಬಯಸಿರಿ !
ಕೆರೆಯ ಅಂಚಿನ ಮೇಲೆ ಮಿಂಚಿನ ಹನಿಗಳಂದದಿ ಹಿಮಮಣಿ
ಮಿಂಚುತಿರ್ಪುವು ಮೂಡುತೈತರೆ ಬಾಲಕೋಮಲ ದಿನಮಣಿ!
ಹಸುರು ಜೋಳದ ಹೊಲದ ಗಾಳಿಯು ತೀಡಿ ತಣ್ಣಗೆ ಬರುತಿದೆ,
ಹುದುಗಿ ಹಾಡುವ ಮತ್ತಕೋಕಿಲ ಮಧುರವಾಣಿಯ ತರುತಿದೆ!
ದೂರ ಬೆಟ್ಟದ ಮೇಲೆ ತೇಲುವ ಬಿಳಿಯ ಮೋಡವ ನೋಡಿರಿ
ಅದನೆ ಹೋಲುತ, ಅಂತೆ ತೇಲುತ ದೋಣಿಯಾಟವ ನೋಡಿರಿ
ನಾವು ಲೀಲಾಮಾತ್ರ ಜೀವರು, ನಮ್ಮ ಜೀವನ ಲೀಲೆಗೆ
ನೆನ್ನೆ ನೆನ್ನೆಗೆ, ಇಂದು ಇಂದಿಗೆ, ಇರಲಿ ನಾಳೆಯು ನಾಳೆಗೆ.
~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಯುಗಾದಿ:
ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ
ಹೊಂಗೆ ಹೂವ ತೊಂಗಲಲ್ಲಿ
ಭೃಂಗದ ಸಂಗೀತ ಕೇಳಿ
ಮತ್ತೆ ಕೇಳ ಬರುತಿದೆ
ಬೇವಿನ ಕಹಿ ಬಾಳಿನಲಿ
ಹೂವಿನ ನಸುಗಂಪು ಸೂಸಿ
ಜೀವ ಕಳೆಯ ತರುತಿದೆ
ಕಮ್ಮನೆ ಬಾಣಕೆ ಸೋತು
ಜಮ್ಮನೆ ಮಾಮರವು ಹೂತು
ಕಾಮಗಾಗಿ ಕಾದಿದೆ
ಸುಗ್ಗಿ ಸುಗ್ಗಿ ಸುಗ್ಗಿ ಎಂದು
ಹಿಗ್ಗಿ ಗಿಳಿಯ ಸಾಲು ಸಾಲು
ತೋರಣದೊಲು ಕಾದಿದೆ
ವರುಷಕೊಂದು ಹೊಸತು ಜನ್ಮ
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವ ಜಾತಕೆ!
ಒಂದೆ ಒಂದು ಜನ್ಮದಲ್ಲಿ
ಒಂದೆ ಬಾಲ್ಯ ಒಂದೆ ಹರೆಯ
ನಮಗದಷ್ಟೆ ಏತಕೆ?
ನಿದ್ದೆಗೊಮ್ಮೆ ನಿತ್ಯ ಮರಣ
ಎದ್ದ ಸಲ ನವೀನ ಜನನ,
ನಮಗೆ ಏಕೆ ಬಾರದೋ?
ಎಲೆ ಸನತ್ಕುಮಾರ ದೇವ!
ಎಲೆ ಸಾಹಸಿ ಚಿರಂಜೀವ
ನಿನಗೆ ಲೀಲೆ ಸೇರದೋ?
ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ವರುಷದ
ಹೊಸತು ಹೊಸತು ತರುತಿದೆ
ನಮ್ಮನ್ನಷ್ಟೆ ಮರಿತಿದೆ.
- ದ.ರಾ. ಬೇಂದ್ರೆ
~~~~~~~~~~~~~~~~~~~~~~~~~~~~~~~~~~~~~~~~~~~~~~~~
ಮೋಹನ ಮುರಲಿ:
ಯಾವ ಮೋಹನ ಮುರಲಿ ಕರೆಯಿತು ದೂರ ತೀರಕೆ ನಿನ್ನನು?
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು?
ಹೂವು ಹಾಸಿಗೆ ಚಂದ್ರ, ಚಂದನ, ಬಾಹು ಬಂಧನ. ಚುಂಬನ
ಬಯಕೆ ತೋಟದ ಬೇಲಿಯೊಳಗೆ ಕರಣಗಣದೀ ರಿಂಗಣ:
ಒಲಿದ ಮಿದುವೆದೆ, ರಕ್ತ ಮಾಂಸದ ಬಿಸಿದು ಸೋಕಿನ ಪಂಜರ
ಇಷ್ಟೆ ಸಾಕೆಂದಿದ್ದೆಯಲ್ಲೋ ಇಂದು ಏನಿದು ಬೇಸರ?
ಏನಿದೇನಿದು ಹೊರಳುಗಣ್ಣಿನ ತೇಲುನೋಟದ ಸೂಚನೆ?
ಯಾವ ಸುಮಧುರ ಯಾತನೆ? ಯಾವ ದಿವ್ಯದ ಯಾಚನೆ?
ಮರದೊಳಗಿಡಗಿದ ಬೆಂಕಿಯಂತೆ ಎಲ್ಲೊ ಮಲಗಿದೆ ಬೇಸರ
ಏನೋ ತೀಡಲು ಏನೊ ತಾಗಲು ಹೊತ್ತಿ ಉರಿವುದು ಕಾತರ
ಸಪ್ತಸಾಗರದಚೆಯೆಲ್ಲೋ ಸುಪ್ತ ಸಾಗರ ಕಾದಿದೆ,
ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗು ಹಾಯಿತೆ?
ವಿವಶವಾಯಿತು ಪ್ರಾಣ; ಹಾ! ಪರವಶವು ನಿನ್ನೀ ಚೇತನ
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ?
ಯಾವ ಮೋಹನ ಮುರಲಿ ಕರೆಯಿತು ಇದ್ದಕಿದ್ದೊಲೆ ನಿನ್ನನು
ಯಾವ ಬೃಂದಾವನವು ಚಾಚಿತು ತನ್ನ ಮಿಂಚಿನ ಕೈಯನು?
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ನಿತ್ಯೋತ್ಸವ:
ಜೋಗದ ಸಿರಿ ಬೆಳಕಿನಲಿ, ತುಂಗೆಯ ತೆನೆ ಬಳುಕಿನಲ್ಲಿ,
ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲಿ,
ನಿತ್ಯ ಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ...
ನಿತ್ಯೋತ್ಸವ, ತಾಯಿ ನಿತ್ಯೋತ್ಸವ ನಿನಗೆ.....
ಇತಿಹಾಸದ ಹಿಮದಲ್ಲಿನ ಸಿಂಹಾಸನ ಮೂಲೆಯಲ್ಲಿ
ಗತ ಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ,
ಓಲೆಗರಿಯ ಸಿರಿಗಳಲ್ಲಿ, ದೇಗುಲಗಳ ಭಿತ್ತಿಗಳಲ್ಲಿ....
ನಿತ್ಯೋತ್ಸವ, ತಾಯಿ ನಿತ್ಯೋತ್ಸವ ನಿನಗೆ.....
ಹಲವೆನ್ನದ ಹಿರಿಮೆಯೆ, ಕುಲವೆನ್ನದ ಗರಿಮೆಯೆ,
ಸದ್ವಿಕಾಸಶೀಲ ನುಡಿಯ ಲೋಕಾವೃತ ಸೀಮೆಯೆ,
ಈ ವತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ-
ನಿತ್ಯೋತ್ಸವ, ತಾಯಿ ನಿತ್ಯೋತ್ಸವ ನಿನಗೆ.....
~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಜಯ ಭಾರತ ಜನನಿಯ ತನುಜಾತೆ!
ಜಯ ಹೇ ಕರ್ನಾಟಕ ಮಾತೆ!
ಜಯ ಸುಂದರ ನದಿ ವನಗಳ ನಾಡೆ,
ಜಯ ಹೇ ರಸ ಋಷಿಗಳ ಬೀಡೇ!
ಭೂದೇವಿಯ ಮಕುಟದ ನವಮಣಿಯೆ,
ಗಂಧದ ಚಂದದ ಹೊನ್ನಿನ ಗಣಿಯೆ;
ರಾಘವ ಮಧುಸೂದನವತರಿಸಿದ
ಭಾರತ ಜನನಿಯ ತನುಜಾತೆ!
ಜಯ ಹೇ ಕರ್ನಾಟಕ ಮಾತೆ!
ಜನನಿಯ ಜೋಗುಳ ವೇದದ ಘೋಷ,
ಜನನಿಗೆ ಜೀವವು ನಿನ್ನಾವೇಶ.
ಹಸುರಿನ ಗಿರಿಗಳ ಸಾಲೆ
ನಿನ್ನಯ ಕೊರಳಿನ ಮಾಲೆ
ಕಪಿಲ ಪತಂಜಲ ಗೌತಮ ಜಿನನುತ
ಭಾರತ ಜನನಿಯ ತನುಜಾತೆ!
ಜಯ ಹೇ ಕರ್ನಾಟಕ ಮಾತೆ!
ಶಂಕರ ರಾಮನುಜ ವಿದ್ಯಾರಣ್ಯ
ಬಸವೇಶ್ವರ ಮಧ್ವರ ದಿವ್ಯಾರಣ್ಯ
ರನ್ನ ಷಡಕ್ಷರಿ ಪೊನ್ನ
ಪಂಪ ಲಕುಮಿಪತಿ ಜನ್ನ
ಕಬ್ಬಿಗರುದಿಸಿದ ಮಂಗಳಧಾಮ
ಕವಿ ಕೋಗಿಲೆಗಳ ಪುಣ್ಯಾರಾಮ!
ನಾನಕ ರಮಾನಂದ ಕಬೀರರ
ಭಾರತ ಜನನಿಯ ತನುಜಾತೆ!
ಜಯ ಹೇ ಕರ್ನಾಟಕ ಮಾತೆ!
ತೈಲಪ ಹೊಯ್ಸಳರಾಳಿದ ನಾಡೆ,
ಡಂಕಣ ಜಕಣರ ನೆಚ್ಚಿನ ಬೀಡೆ,
ಕೃಷ್ಣ ಶರಾವತಿ ತುಂಗಾ
ಕಾವೇರಿಯ ವರ ರಂಗ!
ಚೈತನ್ಯ ಪರಮಹಂಸರ ವಿವೇಕರ
ಭಾರತ ಜನನಿಯ ತನುಜಾತೆ!
ಜಯ ಹೇ ಕರ್ನಾಟಕ ಮಾತೆ!
ಸರ್ವ ಜನಾಂಗದ ಶಾಂತಿಯ ನೋಟ
ರಸಿಕರ ಕಂಗಳ ಸೆಳೆಯುವ ನೋಟ,
ಹಿಂದೂ ಕ್ರೈಸ್ತ ಮುಸಲ್ಮಾನ
ಪಾರಸಿಕ ಜೈನರುದ್ಯಾನ,
ಜನಕನ ಹೋಲುವ ದೊರೆಗಳ ಧಾಮ
ಗಾಯಕ ವೈಣಿಕರಾರಾಮ!
ಕನ್ನಡ ನುಡಿ ಕುಣಿದಾಡುವ ಗೇಹ,
ಕನ್ನಡ ತಾಯಿಯ ಮಕ್ಕಳ ದೇಹ!
ಜಯ ಭಾರತ ಜನನಿಯ ತನುಜಾತೆ!
ಜಯ ಹೇ ಕರ್ನಾಟಕ ಮಾತೆ!
ಜಯ ಸುಂದರ ನದಿ ವನಗಳ ನಾಡೆ,
ಜಯ ಹೇ ರಸಋಷಿಗಳ ಬೀಡೆ
~~~~~~~~~~~~~~~~~~~~~~~~~~~~~~~~~~~~~~~
ಎದೆ ತುಂಬಿ ಹಾಡಿದೆನು ಅಂದು ನಾನು
ಮನವಿಟ್ಟು ಕೇಳಿದಿರಿ ಅಲ್ಲಿ ನೀವು
ಇಂದು ನಾ ಹಾಡಿದರು ಅಂದಿನಂತೆಯೆ ಕುಳಿತು
ಕೇಳುವಿರಿ ಸಾಕೆನೆಗೆ ಅದುವೆ ಬಹುಮಾನ
ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ?
ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ,
ಹಾಡುವುದು ಅನಿವಾರ್ಯ ಕರ್ಮ ನನಗೆ
ಕೇಳುವವರಿಹರೆಂದು ನಾ ಬಲ್ಲೆನದರಿಂದ
ಹಾಡುವೆನು ಮೈದುಂಬಿ ಎಂದಿನಂತೆ
ಯಾರು ಕಿವಿ ಮುಚ್ಚಿದರು ನನಗಿಲ್ಲ ಚಿಂತೆ.
~~~~~~~~~~~~~~~~~~~~~~~~~~~~~~~~~~~~~~~~~~~~~
ಹುಬ್ಬಳ್ಳಿಯಾಂವಾ:
ಇನ್ನೂ ಯಾಕ ಬರಲಿಲ್ಲವಾ ಹುಬ್ಬಳ್ಳಿಯಾಂವಾ
ವಾರದಾಗ ಮೂರು ಸರತಿ ಬಂದು ಹೋದಾಂವಾ
ಭಾರಿ ಜರದ ವಾರಿರುಮ್ಮಾಲಾ ಸುತ್ತಿಕೊಂಡಾಂವಾ
ತುಂಬ ಮೀಸಿ ತೀಡಿಕೋತ ಹುಬ್ಬ ಹಾರಸಾಂವಾ
ಮಾತು ಮಾತಿಗೆ ನಕ್ಕ ನಗಿಸಿ ಆಡಿಸ್ಯಾಡಾಂವಾ
ಏನೊ ಅಂದರ ಏನೋ ಕಟ್ಟಿ ಹಾಡ ಹಾಡಾಂವಾ
ಇನ್ನು ಯಾಕ....
ತಾಳೀ ಮಣಿಗೆ ಬ್ಯಾಳಿಮಣೆ ನಿನಗೆ ಬೇಕೇನಂದಾಂವಾ
ಬಂಗಾರ-ಹುಡಿಲೇ ಭಂಡಾರನ ಬೆಳಸೇನಂದಾಂವಾ
ಕಸಬೇಕ ಕಳೆದು ಬಸವೇರ ಬಿಟ್ಟು ದಾಟಿ ಬಂದಾಂವಾ
ಜೋಗತೇರಿಗೆ ಮೂಗುತಿ ಅಂತ ನನಗ ಅಂದಾಂವಾ
ಇನ್ನು ಯಾಕ.....
ಇರು ಅಂದರ ಬರತೇನಂತ ಎದ್ದು ಹೊರಡಾಂವಾ
ಮಾರೀ ತೆಳಗೆ ಹಾಕಿತೆಂದರೆ ಇದ್ದುಬಿಡಾಂವಾ
ಹಿಡಿ ಹಿಡೀಲೆ ರೊಕ್ಕಾ ತಗದು ಹಿಡಿ ಹಿಡಿ ಅನ್ನಾಂವಾ
ಖರೇ ಅಂತ ಕೈ ಮಾಡಿದರೆ ಹಿಡಿದ ಬಿಡಾಂವಾ
ಇನ್ನು ಯಾಕ......
ಚಹಾದ ಜೋಡಿ ಚೂಡಾಧಾಂಗ ನೀ ನನಗಂದಾಂವಾ
ಚೌಡಿಯಲ್ಲ ನೀ ಚೂಡಾಮಣಿಯಂತ ರಮೀಸ ಬಂದಾಂವಾ
ಬೆರಳಿಗುಂಗುರಾ ಮೂಗಿನಾಗ ಮುಗಬಟ್ಟಿಟ್ಟಾಂವಾ
ಕಣ್ಣಿನಾಗಿನ ಗೊಂಬೀ ಹಾಂಗ ಎದ್ಯಾಗ ನಟ್ಟಾಂವಾ
ಇನ್ನು ಯಾಕಾ......
ಹುಟ್ಟಾ ಯಾಂವಾ ನಗೀಕ್ಯಾದಿಗೆ ಮುಡಿಸಿಕೊಂಡಾಂವಾ
ಕಂಡ ಹೆಣ್ಣಿಲೇ ಪ್ರೀತಿ ವೀಳ್ಳೆ ಮಡಚಿಕೊಂಡಾಂವಾ
ಜಲ್ಮ ಜಲ್ಮಕ ಗೆಣ್ಯಾ ಆಗಿ ಬರತೇನಂದಾಂವಾ
ಎದಿಮ್ಯಾಗಿನ ಗೆಣತಿನ ಮಾಡಿ ಇಟ್ಟುಕೊಂಡಾಂವಾ
ಇನ್ನು ಯಾಕ......
ಯಲ್ಲಿ ! ಮಲ್ಲಿ ॑ ಪಾರೀ ! ತಾರೀ ! ನೋಡೀರೇನ್ರೆವ್ವಾ?
ನಿಂಗೀ ! ಸಂಗೀ ! ಸಾವಂತರೀ ! ಎಲ್ಲ್ಹಾನ ನನ್ನಾಂವಾ?
ಸೆಟ್ಟರ ಹುಡುಗ ಸೆಟಗೊಂಡಾದಾ ಅಂತ ನನ್ನ ಜೀಂವಾ
ಹಾದೀಬೀದೀ ಹುಡಕತೈತ್ರೆ ಬಿಟ್ಟ ಎಲ್ಲಾ ಹ್ಯಾಂವಾ
ಇನ್ನು ಯಾಕ.........
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ತೆರೆದಿದೆ ಮನೆ, ಓ , ಬಾ ಅತಿಥಿ!:
ತೆರಿದಿದೆ ಮನೆ, ಓ, ಬಾ ಅತಿಥಿ!
ಹೊಸಬೆಳಕಿನ ಹೊಸಗಾಳಿಯ ಹೊಸಬಾಳನು ತಾ, ಅತಿಥಿ!
ಎಲ್ಲಾ ಇದೆ ಇಲ್ಲಿ;
ಉಲ್ಲಾಸವೆ ಹಾ ಕುಡಿಮುರಿಟಿದ ಬಳ್ಳಿ!
ದೈನಂದಿನದತಿಪರಿಚಯ ಮಂದಲತೆಯನು ತಳ್ಳಿ
ಬಾ, ಚಿರನೂತನತೆಯ ಕಿಡಿ ಚೆಲ್ಲಿ,
ಓ, ನವಜೀವನ ಅತಿಥಿ!
ಆವ ರೂಪದೊಳು ಬಂದರು ಸರಿಯೆ
ಬಾ ಅತಿಥಿ!
ಆವ ವೇಷದಲಿ ನಿಂತರು ಸರಿಯೆ
ನೀನತಿಥಿ!
ನೇಸರುದಯದೊಲು ಬಹೆಯಾ? ಬಾ ಅತಿಥಿ!
ತಿಂಗಳಂದದಲಿ ಬಹೆಯಾ? ಬಾ ಅತಿಥಿ!
ಇಷ್ಟ ಮಿತ್ರರೊಲು? ಬಂಧು ಬಳಗದೊಲು?
ಸುಸ್ವಾಗತ ನಿನಗತಿಥಿ!
ಕಷ್ಟದಂದದಲಿ? ನಷ್ಟದಂದದಲಿ?
ಸ್ವಾಗತವದಕೂ ಬಾ, ಅತಿಥಿ!
ಇಂತಾದರೂ ಬಾ; ಅಂತಾದರೂ ಬಾ;
ಎಂತಾದರೂ ಬಾ; ಬಾ, ಅತಿಥಿ!
ಬೇಸರವಿದನೋಸರಿಸುವ ಹೊಸ ಬಾಳುಸಿರಾಗಿ,
ಬಾ, ಅತಿಥಿ!
ಹಾಡುವ ಹಕ್ಕಿಯ ಗೆಲುವಾಗಿ,
ಬಾ, ಅತಿಥಿ!
ಮೂಡುವ ಚುಕ್ಕಿಯ ಚೆಲುವಾಗಿ,
ಬಾ, ಅತಿಥಿ!
ಕಡಲಾಗಿ, ಬಾನಾಗಿ,
ಗಿರಿಯಾಗಿ, ತಾನಾಗಿ,
ಚಿರನವತೇತನ ಝರಿಯಾಗೆ
ಬೇಸರವನು ಕೊಚ್ಚುತೆ ಬಾ, ಅತಿಥಿ!
ಉಲ್ಲಾಸದ ರಸಬುಗ್ಗೆಯ ಚಿಮ್ಮಿಸಿ ಬಾ, ಅತಿಥಿ!
ವಿಷಣ್ಣತೆಯನು ಪರಿಹರಿಸಿ
ಪ್ರಸನ್ನತೆಯಾ ಸೊಡರುರಿಸಿ
ಮನಮಂದಿರದಲಿ ಮಧುರತಿಯಾರತಿಯೆತ್ತುತೆ
ಬಾ, ಅತಿಥಿ!
ತೆರೆದಿದೆ ಮನೆ, ಓ , ಬಾ ಅತಿಥಿ!
ಹೊಸತಾನದ ಹೊಸಗಾನದ ರಸಜೀವನ ತಾ, ಅತಿಥಿ!
~~~~~~~~~~~~~~~~~~~~~~~~~~~~~~~~~~~~~~~~~~~~~~~~
ಜೋಗದ ಝೋಕ್:
ಮಾನವನಾಗಿ ಹುಟ್ಟಿದ ಮ್ಯಾಲೆ ಏನೇನ್ ಕಂಡಿ|
ಸಾಯೋತನಕ ಸಂಸಾರ್ ದೊಳಗೆ ಗಂಡಾಗುಂಡಿ|
ಹೇರಿಕೊಂಡು ಹೋಗೋದಿಲ್ಲ ಸತ್ತಾಗ್ ಬಂಡಿ|
ಇರೋದರೊಳಗೆ ನೋಡು ಒಮ್ಮೆ ಜೋಗದ ಗುಂಡಿ|
ತಾಲಗುಪ್ಪಿ ತಾರಕವೆಂಬ ಬೊಂಬಾಯ್ ಮರ|
ಸಾಲಗುಡ್ಡದ ಮ್ಯಾಲೆ ನೋಟಕ ಭಟ್ಕಳ್ ಮರ|
ದಾರ ಕಡಿದು ಮಾಡಿದಾಗ ಗುಡ್ಡ ಬೆಟ್ಟ|
ಪಶ್ಚಿಮ ಘಟ್ಟದ ಮ್ಯಾಲೆ ನೋಡು ಮೈಸೂರ್ ಬಾವುಟ|
ನಾಡಿನೊಳಗೆ ನಾಡು ಚೆಲುವು ಕನ್ನಡ ನಾಡು|
ಬೆಳ್ಳಿ ಬಂಗಾರ ಬೆಳಿಯುತಾವೆ ಬೆಟ್ಟ ಕಾಡು|
ಭೂಮಿತಾಯಿ ಮುಡಿದು ನಿಂತಾಳ್ ಬಾಸಿಂಗ ಜೋಡು|
ಬಾಣಾವತಿ ಬೆಡಗಿನಿಂದ ಬರ್ತಾಳ್ ನೋಡು
ಅಂಕು ಡೊಂಕು ವಂಕಿ ಮುರಿ ರಸ್ತೆ ದಾರಿ|
ಹತ್ತಿ ಇಳಿದು ಸುತ್ತಿದಂಗೆ ಹಾವಿನ ಮರಿ|
ತೊಟ್ಟಿಲ ಜೀಕಿ ಆಡಿಧ್ಹಾಂಗ ಮನಸಿನ ಲಹರಿ|
ನಡೆಯುತದೆ ಮೈಸೂರೊಳಗೆ ದರಂದುರಿ
ಹೆಸರು ಮರ್ತಿ ಶರಾವತಿ ಅದೇನ್ ಕಷ್ಟ|
ಕಡೆದ ಕಲ್ಲ ಕಂಬದ ಮ್ಯಾಲೆ ಪೂಲಿನಕಟ್ಟ|
ಎಷ್ಟು ಮಂದಿ ಎದೆಯ ಮುರಿದು ಪಡುತಾರೆ ಕಷ್ಟ|
ಸಣ್ಣದರಿಂದ ದೊಡ್ಡದಾಗಿ ಕಾಣೋದ್ ಬೆಟ್ಟ
ಬುತ್ತಿ ಉಣುತಿದ್‍ರುಣ್ಣು ಇಲ್ಲಿ ಸೊಂಪಾಗಿದೆ|
ಸೊಂಪು ಇಂಪು ಸೇರಿ ಮನಸು ಕಂಪಾಗ್ತದೆ|
ಕಂಪಿನಿಂದ ಜೀವಕ್ಕೊಂದು ತಂಪಾಗ್ತದೆ|
ತಂಪಿನೊಳಗೆ ಮತ್ತೊದೇನೋ ಕಾಣಸ್ತದೆ
ಅಡ್ಡ ಬದಿ ಒಡ್ಡು ನಿಲಿಸಿ ನೀರಿನ ಮಿತಿ|
ಇದರ ಒಳಗೆ ಇನ್ನು ಒಂದು ಹುನಾರೈತಿ|
ನೀರ ಕೆಡವಿ ರಾಟೆ ತಿರುವಿ ಮಿಂಚಿನ ಶಕ್ತಿ|
ನಾಡಿಗೆಲ್ಲ ಕೊಡ್ತಾರಂತೆ ದೀಪದ ತಂತಿ
ಊಟ ಮುಗಿದಿದ್ದೇಳು ಮುಂದೆ ನೋಡೋದದೆ|
ನೋಡುತ್ತಿದ್ರೆ ಬುದ್ಧಿ ಕೆಟ್ಟು ಹುಚ್ಚಾಗ್ತದೆ|
ಬೇಕಾದ್ರಲ್ಲಿ ಉಡುಪಿ ಮಾವನ ಮನೆಯೊಂದಿದೆ|
ಉಳಿಯೋದಾದ್ರೆ ಮಹರಾಜ್ರ ಬಂಗ್ಲೆ ಅದೆ
ನೋಡು ಗೆಳೆಯ ಜೋಕೆ ಪಾತಾಳ ಗುಂಡಿ|
ಹಿಂದಕೆ ಸರಿದು ನಿಲ್ಲು ತುಸು ಕೈತಪ್ಪಿಕೊಂಡಿ|
ಕೈಗಳಳ್ತಿ ಕಾಣಸ್ತದೆ ಬೊಂಬಾಯ್ ದಂಡೀ
ನಮ್ಮದಂದ್ರೆ ಹೆಮ್ಮೆಯಲ್ಲ ಜೋಗದ ಗುಂಡೀ
ಶಿಸ್ತುಗಾರ ಶಿವಪ್ಪ ನಾಯ್ಕ ಕೆಳದಿಯ ನಗರ|
ಚಿಕ್ಕದೇವ ದೊಡ್ಡದೇವ ಮೈಸೂರಿನವರ|
ಹಿಂದಕ್ಕಿಲ್ಲಿ ಬಂದಿದ್ರಂತೆ ಶ್ರೀರಾಮರ|
ಎಲ್ಲ ಕಥೆ ಹೇಳುತದೆ ಕಲ್ಪಾಂತರ
ರಾಜಾ, ರಾಕೆಟ್, ರೋರರ್, ಲೇಡಿ ಚತುರ್ಮುಖ|
ಜೋಡಿಗೂಡಿ ಹಾಡಿತಾವೆ ಹಿಂದಿನ ಸುಖ|
ತಾನು ಬಿದ್ರೆ ಆದಿತೇಳು ತಾಯಿಗೆ ಬೆಳಕ|
ಮುಂದಿನವರು ಕಂಡರೆ ಸಾಕು ಸ್ವಂತ ಸುಖ
ಒಂದು, ಎರಡು, ಮೂರು ನಾಲ್ಕು ಆದಾವ ಮತ|
ಹಿಂದಿನಿಂದ ಹರಿದು ಬಂದದ್ದೊಂದೇ ಮತ|
ಗುಂಡಿ ಬಿದ್ದು ಹಾಳಾಗಲಿಕ್ಕೆ ಸಾವಿರ ಮತ|
ಮುಂದೆ ಹೋಗಿ ಸೇರುವಲ್ಲಿಗೊಂದೇ ಮತ
ಶಹಜಹಾನ ತಾಜಮಹಲು ಕೊಹಿನೂರ್ ಮಣಿ|
ಸಾವಿರಿದ್ರು ಸಲ್ಲವಿದಕೆ ಚೆಲುವಿನ ಕಣಿ|
ಜೀವವಂತ ಶರಾವತಿಗಿನ್ನಾವ್‍ದೆಣೆ|
ಹೊಟ್ಟೆಗಿಚ್ಚಿಗಾಡಿಕೊಂಡ್ರೆ ಅದಕಾರ್ ಹೊಣೆ
ಶರಾವತಿ ಕನ್ನಡ ನಾಡ ಭಾಗೀರಥಿ|
ಪುಣ್ಯವಂತ್ರು ಬರ್ತಾರಿಲ್ಲಿ ದಿನಂಪ್ರತಿ
ಸಾವು ನೋವು ಸುಳಿಯದಿಲ್ಲಿಯ ಕರಾಮತಿ|
ಮಲ್ಲೇಶನ ನೆನೆಯುತ್ತಿದ್ರೆ ಜೀವನ್ಮುಕ್ತಿ
~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಹೌದೇನೇ ಉಮಾ
ಹೌದೇನೇ ಉಮಾ ಹೌದೇನೆ,
ಜನವೆನ್ನುವುದಿದು ನಿಜವೇನೇ?
ಮಸಣದ ಬೂದಿಯ ಮೈಗೆ ಬಳಿದು ಶಿವ
ಎಲ್ಲೆಲ್ಲೋ ತಿರುಗುವನಂತೆ |
ಹೊಟ್ಟೆಬಟ್ಟೆಗೂ ಗತಿಯಿಲ್ಲದರೊಲು
ಊರೂರಲು ತಿರಿದುಂಬವನಂತೆ |
ನೀನು ಕೂಡ ಬಂಗಾರದ ಮೈಯಿಗೆ
ಆ ಬೂದಿಯನೇ ಬಳಿಯುವೆಯಂತೆ |
ನಿನ್ನ ತಾಯಿ ನಾನಾಗಿಹ ತಪ್ಪಿಗೆ
ಸಹಿಸಬೇಕೆ ಅವಮಾನವನು?
ಮತ್ತೆ ನಿನ್ನ ಶಿವ ಕರೆಯಲು ಬರಲಿ,
" ಮನೆಯೊಳಿಲ್ಲ ಉಮೆ"- ಎನ್ನುವೆನು.
- ಜಿ. ಎಸ್. ಶಿವರುದ್ರಪ್ಪ
~~~~~~~~~~~~~~~~~~~~~~~~~~~~~~~~~~~~~~~~~~~
ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು
ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು
ಬದುಕು ಬಲುಹೀನ ನಿಧಿಯು ಸದಭಿಮಾನದ ಗೂಡು
ರಾಜನ್ಯರಿಪು ಪರಶುರಾಮನಮ್ಮನ ನಾಡು
ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು
ಓಜೆಯಿಂ ಮೆರೆದರಸುಗಳ ಸಾಹಸದ ಸೂಡು
ತೇಜವನು ನಮಗೀವ ವೀರವೃಂದದ ಬೀಡು
ಲೆಕ್ಕಿಗ ಮಿತಾಕ್ಷರರು ಬೆಳೆದು ಮೆರೆದಿಹ ನಾಡು
ಜಕ್ಕಣನ ಶಿಲ್ಪಕಲೆಯಚ್ಚರಿಯ ಕರುಗೋಡು
ಚೊಕ್ಕ ಮತಗಳ ಸಾರಿದವರಿಗಿದು ನೆಲೆವೀಡು
ಬೊಕ್ಕಸದ ಕಣಜವೈ ವಿದ್ವತ್ತೆಗಳ ಕಾಡು
ಪಾವನೆಯರಾ ಕೃಷ್ಣೆ ಭೀಮೆಯರ ತಾಯ್ನಾಡು
ಕಾವೇರಿ ಗೋದೆಯರು ಮೈದೊಳೆವ ನಲುನಾಡು
ಆವಗಂ ಸ್ಫೂರ್ತಿಸುವ ಕಬ್ಬಿಗರ ನಡೆಮಾಡು
ಕಾವ ಗದುಗಿನ ವೀರನಾರಾಯಣನ ಬೀಡು.
~~~~~~~~~~~~~~~~~~~~~~~~~~~~~~~~~~~~~~~~~~~
ವನಸುಮ
ವನಸುಮದೊಳೆನ್ನ ಜೀ
ವನವು ವಿಕಸಿಸುವಂತೆ
ಮನವನನುಗೊಳಿಸು ಗುರುವೇ - ಹೇ ದೇವ
ಜನಕೆ ಸಂತಸವೀವ
ಘನನು ನಾನೆಂದೆಂಬ
ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ ಬಿಡದೆ
ಕಾನನದಿ ಮಲ್ಲಿಗೆಯು
ಮೌನದಿಂ ಬಿರಿದು ನಿಜ
ಸೌರಭವ ಸೂಸಿ ನಲವಿಂ
ತಾನೆಲೆಯ ಪಿಂತಿರ್ದು
ದೀನತೆಯ ತೋರಿ ಅಭಿ
ಮಾನವನು ತೊರೆದು ಕೃತಕೃತ್ಯತೆಯ ಪಡೆವಂತೆ
ಉಪಕಾರಿ ನಾನು ಎ
ನ್ನುಪಕೃತಿಯು ಜಗಕೆಂಬ
ವಿಪರೀತ ಮತಿಯನುಳಿದು
ವಿಪುಲಾಶ್ರಯವನೀವ
ಸುಫಲ ಸುಮಭರಿತ ಪಾ
ದಪದಂತೆ ನೈಜಮಾದೊಳ್ಪಿನಿಂ ಬಾಳ್ವವೊಲು
- ಡಿ.ವಿ.ಗುಂಡಪ್ಪ.
~~~~~~~~~~~~~~~~~~~~~~~~~~~~~~~~~~~~~~~~~~~~
ಅನಂತ ಪ್ರಣಯ
ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ
ಚುಂಬಕ ಗಾಳಿಯು ಬೀಸುತಿದೆ.
ಸೂರ್ಯನ ಬಿಂಬಕೆ ಚಂದ್ರನ ಬಿಂಬವು
ರಂಬಿಸಿ ನಗೆಯಲಿ ಮೀಸುತಿದೆ.
ಭೂರಂಗಕೆ ಅಭಿಸಾರಕೆ ಕರೆಯುತ
ತಿಂಗಳು ತಿಂಗಳು ನವೆಯುತಿದೆ
ತುಂಬುತ ತುಳುಕಿತ ತೀರುತ ತನ್ನೊಳು
ತಾನೇ ಸವಿಯನು ಸವಿಯುತಿದೆ.
ಭೂವನ ಕುಸುಮಿಸಿ ಪುಲಕಿಸಿ ಮರಳಿಸಿ
ಕೋಟಿ ಕೋಟಿ ಸಲ ಹೊಸಯಿಸಿತು
ಮಿತ್ರನ ಮೈತ್ರಿಯ ಒಸಗೆ ಮಸಗದಿದೆ
ಮರುಕದ ಧಾರೆಯ ಮಸೆಯಿಸಿತು.
ಅಕ್ಷಿ ನಿಮೀಲನ ಮಾಡದೆ ನಕ್ಷ-
ತ್ರದ ಗಣ ಗಗನದಿ ಹಾರದಿದೆ
ಬಿದಿಗೆಯ ಬಿಂಬಾಧರದಲಿ ಇಂದಿಗು
ಮಿಲನದ ಚಿಹ್ನವು ತೋರದಿದೆ.
- ದ.ರಾ.ಬೇಂದ್ರೆ.
~~~~~~~~~~~~~~~~~~~~~~~~~~~~~~~~~~~~~~~~~~~~~
ಕನ್ನಡ್ ಪದಗೊಳು
ಯೆಂಡ ಯೆಡ್ತಿ ಕನ್ನಡ್ ಪದಗೊಳ್
ಅಂದ್ರೆ ರತ್ನಂಗ್ ಪ್ರಾಣ!
ಬುಂಡೇನ್ ಎತ್ತಿ ಕುಡುದ್ಬುಟ್ಟಾಂದ್ರೆ-
ತಕ್ಕೊ ! ಪದಗೊಳ್ ಬಾಣ!
ಬಗವಂತ್ ಏನ್ರ ಬೂಮೀಗ್ ಇಳದು
ನನ್ ತಾಕ್ ಬಂದಾಂತ್ ಅನ್ನು
ಪರ್ ಗಿರಿಕ್ಸೆ ಮಾಡ್ತಾನ್ ಔನ್
ಬಕ್ತನ್ ಮೇಲ್ ಔನ್ ಕಣ್ಣು!
ಯೆಂಡ ಕುಡಿಯಾದ್ ಬುಟ್ ಬುಡ್ ರತ್ನ!
ಅಂತ ಔನ್ ಏನಾರ್ ಅಂದ್ರೆ-
ಮೂಗ್ ಮೂರ್ ಚೂರಾಗ್ ಮೂರಸ್ಕೋಂತೀನಿ
ದೇವರ್ ಮಾತ್ಗ್ ಅಡ್ಬಂದ್ರೆ!
ಯೆಂಡ ಬುಟ್ಟೆ ಯೇಡ್ತೀನ್ ಬುಟ್ ಬುಡ್!
ಅಂತ ಔನ್ ಏನಾರ್ ಅಂದ್ರೆ-
ಕಳದೋಯ್ತ್ ಅಂತ ಕುಣದಾಡ್ತೀನಿ
ದೊಡ್ಡ್ ಒಂದು ಕಾಟ ! ತೊಂದ್ರೆ!
' ಕನ್ನಡ್ ಪದಗೊಳ್ ಆಡೋದ್ನೇಲ್ಲ
ನಿಲ್ಲೀಸ್ ಬುಡಬೇಕ್ ರತ್ನ!
ಅಂತ್ ಔನ್ ಅಂದ್ರೆ-ದೇವ್ರೆ ಆದ್ರ್ ಏನು!
ಮಾಡ್ತೀನ್ ಔನ್ಗೆ ಖತ್ನ!
ಆಗ್ನೆಮಾಡೋ ಐಗೋಳ್ ಎಲ್ಲಾ
ದೇವ್ರೆ ಆಗ್ಲಿ - ಎಲ್ಲ!
ಕನ್ನಡ್ ಸುದ್ದೀಗ್ ಏನ್ರ ಬಂದ್ರೆ
ಮಾನಾ ಉಳಸಾಕಿಲ್ಲ!
ನರಕಕ್ಕ್ ಇಳ್ಸಿ ನಾಲ್ಗೆ ಸೀಳ್ಸಿ
ಬಾಯ್ ಒಲಿಸಾಕಿದ್ರೂನೆ-
ಮೂಗ್ನಲ್ ಕನ್ನಡ್ ಪದವಾಡ್ತೀನಿ
ನನ್ ಮನಸನ್ ನೀ ಕಾಣೆ!
ಯೆಂಡ ವೋಗ್ಲಿ ! ಯೆಡ್ತಿ ವೋಗ್ಲಿ!
ಎಲ್ಲಾ ಕೊಚ್ಕೊಂಡ್ ವೋಗ್ಲಿ!
ಪರ್ಪಂಚ್ ಇರೋ ತನಕ ಮುಂದೆ
ಕನ್ನಡ್ ಪದಗೊಳ್ ನುಗ್ಲಿ!
-ಜಿ. ಪಿ. ರಾಜರತ್ನಂ
~~~~~~~~~~~~~~~~~~~~~~~~~~~~~~~~~~~~~~~~~~~~~
ನನ್ನವಳು ನನ್ನೆದೆಯ ಹೊನ್ನಾಡನಾಳುವಳು
ನನ್ನವಳು ನನ್ನೆದೆಯ ಹೊನ್ನಾಡನಾಳುವಳು
ಬೆಳಗುಗೆನ್ನೆಯ ಚೆನ್ನೆ ನನ್ನ ಮಡದಿ
ಹೊಳೆಯ ಸುಳಿಗಳಿಗಿಂತ ಆಳ ಕಣ್ಣಿನ ಚೆಲುವು
ಅವಳೊಮ್ಮೆ ಹೆರಳ ಕೆದರಿ
ಕಪ್ಪುಗುರುಳನು ಬೆನ್ನ ಮೇಲೆಲ್ಲಾ ಹರಡಿದರೆ
ದೂರದಲಿ ಗಿರಿಯ ಮೇಲೆ
ಇಳಿದಂತೆ ಇರುಳ ಮಾಲೆ.
ಕರೆದಾಗ ತೌರುಮನೆ, ನೆನೆದಾಗ ನನ್ನ ಮನೆ
ಹಳ್ಳಿಯೆರಡರ ಮುದ್ದು ಬಳ್ಳಿಯವಳು.
ಮುಚ್ಚುಮರೆಯಿಲ್ಲದೆಯೆ ಅಚ್ಚಮಲ್ಲಿಗೆಯಂತೆ
ಅರಳುತಿಹುದವಳ ಬದುಕು.
ಬಂಗಾರದೊಡವೆಗಳ ಬಯಸಿಲ್ಲ ಮನಸಿನಲಿ
ಬಂಗಾರದಂಥ ಹುಡುಗಿ
ನನ್ನೊಡವೆ, ನನ್ನ ಬೆಡಗಿ,
ಹಸುರು ಸೀರೆಯನುಟ್ಟು ಕೆಂಪು ಬಳೆಗಳ ತೊಟ್ಟು
ತುಂಬುದನಿಯಲಿ ಕರೆವಳೆನ್ನ ಚೆಲುವೆ
ಹಣೆಯನಾಳುವುದವಳ ಕುಂಕುಮದ ನಿಡುಬಟ್ಟು
ಲಕ್ಷ್ಮಿಯವಳೆನ್ನ ಮನೆಗೆ
ನಮಗಿದುವೆ ಸೊಗಸು ಬದುಕಿನ ಬಣ್ಣಗಳ ಸಂತೆ
ನಮಗಿಲ್ಲ ನೂರು ಚಿಂತೆ
ನಾವು ಗಂಧರ್ವರಂತೆ
ತೆಂಗುಗರಿಗಳ ಮೇಲೆ ತುಂಬುಚಂದಿರ ಬಂದು
ಬೆಳ್ಳಿ ಹಸುಗಳ ಹಾಲು ಕರೆಯುವಂದು
ಅಂಗಳದ ನಡುವೆ ಬೃಂದಾವನದ ಬಳಿ ನಿಂದು
ಹಾಡುವೆವು ಸಿರಿಯ ಕಂಡು,
ತಾರೆಗಳ ಮೀಟುವೆವು, ಚಂದಿರನ ದಾಟುವೆವು;
ಒಲುಮೆಯೊಳಗೊಂದು ನಾವು;
ನಮಗಿಲ್ಲ ನೋವು, ಸಾವು.
- ಕೆ. ಎಸ್. ನರಸಿಂಹಸ್ವಾಮಿ.
~~~~~~~~~~~~~~~~~~~~~~~~~~~~~~~~~~~~~~~~~~~
ಕರುಣಾಳು, ಬಾ, ಬೆಳಕೆ, ಮುಸುಕಿದೀ ಮಬ್ಬಿನಲಿ,
ಕರುಣಾಳು, ಬಾ, ಬೆಳಕೆ, ಮುಸುಕಿದೀ ಮಬ್ಬಿನಲಿ,
ಕೈ ಹಿಡಿದು ನಡಸೆನ್ನನು.
ಇರಳು ಕತ್ತಲೆಯ ಗವಿ; ಮನೆ ದೂರ; ಕನಿಕರಿಸಿ
ಕೈ ಹಿಡಿದು ನಡಸೆನ್ನನು.
ಹೇಳಿ ನನ್ನಡಿಯಿಡಿಸು; ಬಲು ದೂರ ನೋಟವನು
ಕೇಳಿದೊಡನೆಯೆ-ಸಾಕು ನನಗೊಂದು ಹೆಜ್ಜೆ.
ಮುನ್ನ ಇಂತಿರದಾದೆ; ನಿನ್ನ ಬೇಡದೆ ಹೋದೆ,
ಕೈ ಹಿಡಿದು ನಡಸು ಎನುತ.
ನನ್ನ ದಾರಿಯ ನಾನೆ ನೋಡಿ ಹಿಡಿದೆನು; ಇನ್ನು,
ಕೈ ಹಿಡಿದು ನಡಸು ನೀನು.
ಮಿರುಗು ಬಣ್ಣಕೆ ಬೆರೆತು ಭಯ ಮರೆತು ಕೊಬ್ಬಿದೆನು;
ಮೆರೆದಾಯ್ತು; ನೆನೆಯದಿರು ಹಿಂದಿನದೆಲ್ಲ.
ಇಷ್ಟು ದಿನ ಸಲಹಿರುವೆ ಮೂರ್ಖನನು; ಮುಂದೆಯೂ
ಕೈ ಹಿಡಿದು ನಡೆಸದಿಹೆಯಾ?
ಕಷ್ಟದಡವಿಯ ಕಳೆದು, ಬೆಟ್ಟಹೊಳೆಗಳ ಹಾದು,
ಇರುಳನ್ನು ನೂಕದಿಹೆಯಾ?
ಬೆಳಗಾಗ ಹೊಳೆಯದೇ ಹಿಂದೊಮ್ಮೆ ನಾನೊಲಿದು
ಈ ನಡುವೆ ಕಳೆಕೊಂಡ ದಿವ್ಯಮುಖ ನಗುತ?
- ಬಿ.ಎಂ. ಶ್ರೀಕಂಠಯ್ಯ.
~~~~~~~~~~~~~~~~~~~~~~~~~~~~~~~~~~~~~~
ಕನ್ನಡಿಗರ ತಾಯಿ
ತಾಯೆ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೆ |
ಹರಸು ತಾಯೆ, ಸುತರ ಕಾಯೆ, ನಮ್ಮ ಜನ್ಮದಾತೆಯೆ |
ನಮ್ಮ ತಪ್ಪನೆನಿತೊ ತಾಳ್ವೆ
ಅಕ್ಕರೆಯಿಂದೆಮ್ಮ ನಾಳ್ವೆ
ನೀನೆ ಕಣಾ ನಮ್ಮ ಬಾಳ್ವೆ
ನಿನ್ನ ಮರೆಯಲಮ್ಮೆವು
ತನು ಕನ್ನಡ, ಮನ ಕನ್ನಡ, ನುಡಿ ಕನ್ನಡವೆಮ್ಮವು
ಹಣ್ಣ ನೀವ ಕಾಯನೀವ ಪರಿಪರಿಯ ಮರಂಗಳೊ,
ಪತ್ರಮೀವ ಪುಷ್ಪಮೀವ ಲತೆಯ ತರತರಂಗಳೂ,
ತೆನೆಯ ಕೆನೆಯ ಗಾಳಿಯೊ
ಖಗಮೃಗೋರಗಾಳಿಯೊ
ನದಿನಗರ ನಗಾಳಿಯೊ!
ಇಲ್ಲಿಲ್ಲದುದುಳಿದುದೆ?-
ಜೇನು ಸುರಿವ ಹಾಲು ಹರಿವ ದಿವಂ ಭೂಮಿಗಿಳಿದುದೆ?
ಬುಗುರಿಯೀಯೆ ಶಬರಿ ಕಾಯೆ ರಾಮನಿಲ್ಲಿ ಬಂದನೆ?
ಕನ್ನಡ ದಳ ಕೂಡಿಸಿ ಖಳ ದುಶ್ಯಾಸನಂ ಕೊಂದನೆ?
ಪಾಂಡವರಜ್ನಾತಮಿದ್ದ,
ವಲಲಂ ಕೀಚಕನ ಗೆದ್ದ,
ಕುರುಕುಲ ಮುಂಗದನಮೆದ್ದ
ನಾಡು ನೋಡಿದಲ್ಲವೆ?
ನಂದನಂದನನಿಲ್ಲಿಂದ ಸಂಧಿಗಯ್ದನಲ್ಲವೆ?
ಶಕ ವಿಜೇತನಮರ ಶಾತವಾಹಾನಾಖ್ಯನೀ ಶಕಂ
ನಿನ್ನೊಳಂದು ತೊಡಗಿ ಸಂದುದರ್ಧ ಭರತದೇಶಕಂ !
ಚಾಳುಕ್ಯ ರಾಷ್ಟ್ರಕೂಟರೆಲ್ಲಿ,
ಗಂಗರಾ ಕದಂಬರೆಲ್ಲಿ,
ಹೊಯ್ಸಳ ಕಳಚುರ್ಯರೆಲ್ಲಿ
ವಿಜಯನಗರ ಭೂಪರು
ಆಳ್ದರಿಲ್ಲಿಯಲ್ಲದೆಲ್ಲಿ ತಾಯೆ ಮೇಣುಲೂಪರು?
ಜೈನರಾದ ಪೂಜ್ಯಪಾದ ಕೊಂಡಕುಂದವರ್ಯರ,
ಮಧ್ವಯತಿಯೆ ಬಸವಪತಿಯೆ ಮುಖ್ಯ ಮತಾಚಾರ್ಯರ,
ಶರ್ವ ಪಂಪ ರನ್ನರ,
ಲಕ್ಷ್ಮೀಪತಿ ಜನ್ನರ,
ಷಡಕ್ಷರಿ ಮುದ್ದಣರ,
ಪುರಂದರವರೇಣ್ಯರ
ತಾಯೆ, ನಿನ್ನ ಬಸಿರ ಹೊನ್ನಗನಿ ವಿದ್ಯಾರಣ್ಯರ!
ಹಳೆಯ ಬೀಡ ಬೇಲನಾಡ ಮಾಡಮೆನಿತೊ ಸುಂದರಂ!
ಬಿಳಿಯ ಕೊಳದ ಕಾರಕಳದ ನಿಡುಕರೆನಿತೊ ಬಂಧುರಂ!
ಇಲ್ಲಿಲ್ಲದ ಶಿಲ್ಪವಿಲ್ಲ!
ನಿನ್ನ ಕಲ್ಲೆ ನುಡಿವುದಲ್ಲ!
ಹಿಂಗತೆಯಿನಿವಾಲ ಸೊಲ್ಲ
ನೆಮ್ಮ ತೃಷೆಗೆ ದಕ್ಕಿಸು
ಹೊಸತು ಕಿನ್ನರಿಯಲಿ ನಿನ್ನ ಹಳೆಯ ಹಾಡನುಕ್ಕಿಸು !
ಆರ್ಯರಿಲ್ಲಿ ಬಾರದಿಲ್ಲಿ ಬಾಸೆ ಎಲ್ಲಿ ಸಕ್ಕದಂ?
ನಿನ್ನ ನುಡಿಯನಚ್ಚುಪಡಿಯನಾಂತರೆನಿತೂ ತಕ್ಕುದಂ!
ಎನಿತೊ ಹಳೆಯ ಕಾಲದಿಂದ
ಬರ್ದಿಲಮೀ ಬಾಸೆಯಿಂದ
ಕಾಲನ ಮೂದಲಿಸಿ ನಿಂದ
ನಿನಗೆ ಮರವೆ ಹೊಡೆವುದೆ?
ನಿನ್ನ ನುಡಿಗೆ ನಿನ್ನ ನಡೆಗೆ ಮುದುಪುಮೆಂದುಮೊದೆವುದೆ?
ತನ್ನ ಮರೆಯ ಕಂಪನರಿಯದದನೆ ಹೊರಗೆ ಹುಡುಕುವ
ಮೃಗದ ಸೇಡು ನಮ್ಮ ಪಾಡು ಪರರ ನುಡಿಗೆ ಮಿಡುಕುವ!
ಕನ್ನಡ ಕಸ್ತೂರಿಯನ್ನ
ಹೊಸತು ಸಿರಿಂ ತೀಡದನ್ನ
ಸುರಭಿ ಎಲ್ಲಿ? ನೀನದನ್ನ
ನವಶಕ್ತಿಯನೆಬ್ಬಿಸು-
ಹೊಸ ಸುಗಂಧದೊಸಗೆಯಿಂದ ಜಗದಿ ಹೆಸರ ಹಬ್ಬಿಸು!
ನಿನ್ನ ಪಡೆಯ ಕತೆಯ ಕಡೆಯ ನುಡಿಯೆ ತಾಳಿಕೋಟೆಯು?
ಕಡಲಿನೊರೆತಗೊಳವೆ ಕೊರತೆ? ಬತ್ತದು ನಿನ್ನೂಟಿಯು!
ಸೋಲಗೆಲ್ಲವಾರಿಗಿಲ್ಲ?
ಸೋತು ನೀನೆ ಗೆದ್ದೆಯಲ್ಲ!
ನಿನ್ನನಳಿವು ತಟ್ಟಲೊಲ್ಲ!
ತಾಳಿಕೋಟೆ ಸಾಸಿರಂ
ಬಾಹುಬಲದಿ ಮನೋಬಲದಿ ತಾಯೆ ಗೆಲುವೆ ಭಾಸುರಂ!
ಕುಗ್ಗದಮ್ತೆ ಹಿಗ್ಗಿಪಂತೆ ನಿನ್ನ ಹೆಸರ ಟೆಕ್ಕೆಯಂ,
ನೀಗದಂತೆ ಸಾಗಿಪಂತೆ ನಿನ್ನ ನುಡಿಯ ಢಕ್ಕೆಯಂ,
ನಮ್ಮೆದೆಯೆಂ ತಾಯೆ ಬಲಿಸು,
ಎಲ್ಲರ ಬಾಯಲ್ಲಿ ನೆಲಸು,
ನಮ್ಮ ಮನನೊಂದೆ ಕಲಸು!
ಇದನೊಂದನೆ ಕೋರುವೆ-
ನಿನ್ನ ಮೂರ್ತಿ ಜಗತ್ಕೀರ್ತಿ ಎಂದಿಗೆಮಗೆ ತೋರುವೆ?
- ಎಂ. ಗೋವಿಂದ ಪೈ.
~~~~~~~~~~~~~~~~~~~~~~~~~~~~~~~~~~~~~~~~~~~~~
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ನನಗದೆ ಕೋಟಿ ರುಪಾಯಿ
ಹೆಂಡತಿಯೊಬ್ಬಳು ಹತ್ತಿರವಿದ್ದರೆ
ನಾನೂ ಒಬ್ಬ ಸಿಪಾಯಿ
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ಹುಣ್ಣಿಮೆ, ಹೋಳಿಗೆ, ದೀಪ
ಹೆಂಡತಿ ತೌರಿಗೆ ಹೊರಡುವೆನೆಂದರೆ
ನನಗಿನ್ನಿಲ್ಲದ ಕೋಪ
ಭರಣಿಯ ತೆರೆದರೆ ಅರಸಿನ ಕುಂಕುಮ
ಅವಳದು ಈ ಸಂಪತ್ತು
ತುಟಿಗಳ ತೆರೆದರೆ ತುಳುಕುವುವಿಂಪಿನ
ಎರಡೋ ಮೂರೋ ಮುತ್ತು
ಯುದ್ಧದ ಬೇಗೆಯನರಿತವಳಲ್ಲ
ಮುತ್ತಿಗೆ ಪಡಿತರವಿಲ್ಲ
ತುರುಬಿಗೆ ಮಲ್ಲಿಗೆ ತಪ್ಪುವುದಿಲ್ಲ
ಹೂವಿಗೆ ಬಡತನವಿಲ್ಲ
ಕೈ ಬಳೆ, ತಾಳಿ, ಓಲೆ, ಮೂಗುತಿ-
ಬಡವರ ಮಗಳೀ ಬಾಲೆ
ತಿಂಗಳ ಚೆಲುವಿನ ಮಂಗಳ ಮೂರುತಿ
ಶೀಲದ ಧವಳ ಜ್ವಾಲೆ
ಕೈ ಹಿಡಿದವಳು ಕೈ ಬಿಡದವಳು
ಮಾಡಿದಡಿಗೆಯೇ ಚೆಂದ
ನಾಗರ ಕುಚ್ಚಿನ ನಿಡುಜಡೆಯವಳು
ಈಕೆ ಬಂದುದೆಲ್ಲಿಂದ
ಎಲ್ಲಿಯ ಹಾಡಿದು? ಏನಿದು ಗಡಿಬಿಡಿ?
ಏಕಿದು ಹಸುರು ಮತಾಪು?
ಒಲುವೆಯು ತಂಗಿತು ಬಡತನ ಮನೆಯಲಿ;
ಕಂಬಳಿಯೇ ಕಿನಕಾಪು
ಕಬ್ಬಿಗನೂರಿಗೆ ದಾರಿಗಳಿದ್ದರೆ
ಕನಸೇ ಇರಬೇಕು
ಅಲ್ಲಿಯ ದೊರೆತನ ಸಿಗುವಂತಿದ್ದರೆ
ನನಗೇ ಸಿಗಬೇಕು
ತಾರೆಯ ಬೆಳಕಿನ ತುಂಬಿದ ಸಭೆಯಲಿ
ಸುಂದರಿ ಮೆರೆದಾಳು
ನನ್ನೊಡನವಳೂ ಸಿಂಹಾಸನದಲಿ
ಮೆಲ್ಲನೆ ನಕ್ಕಾಳು
ಚಂದಿರನೂರಿಗೆ ಅರಮನೆಯಿಂದ
ಬಂದವರೀಗೆಲ್ಲಿ
ಬೆಳ್ಳಿಯ ಕೋಟೆಯ ಬಾಗಿಲಿನಿಂದ
ಬಂದವರೀಗೆಲ್ಲಿ?
ಹೆಂಡತಿಯೊಂದಿಗೆ ಬಡತನ, ದೊರೆತನ
ಏನೂ ಭಯವಿಲ್ಲ
ಹೆಂಡತಿಯೊಲುಮೆಯ ಭಾಗ್ಯವನರಿಯದ
ಗಂಡಿಗೆ ಜಯವಿಲ್ಲ
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ನನಗದೆ ಕೋಟಿ ರುಪಾಯಿ
ಹೆಂಡತಿಯೊಬ್ಬಳು ಹತ್ತಿರವಿದ್ದರೆ
ನಾನೂ ಒಬ್ಬ ಸಿಪಾಯಿ!
- ಕೆ. ಎಸ್. ನರಸಿಂಹಸ್ವಾಮಿ
~~~~~~~~~~~~~~~~~~~~~~~~~~~~~~~~~~~~~~~~~~~~~
ಕಾಶೀಗ್ ಹೋದ ನಂ ಬಾವ:
ಕಾಶೀಗ್ ಹೋದ ನಂ ಬಾವ
ಕಬ್ಣದ್ ದೋಣೀಲಿ
ರಾಶೀ ರಾಶೀ ಗಂಗೆ ತರೋಕ್
ಸೊಳ್ಳೆ ಪರದೇಲಿ
ತಂಗಿ ಯಮುನಾದೇವಿಯಳ
ಸಂಗವಾಯ್ತೆಂದುಬ್ಬಿ ಉಬ್ಬಿ
ಗಂಗಾದೇವಿ ಉಕ್ಕಿ ಉಕ್ಕಿ
ಬೀಸಿ ಬೀಸಿ ದೋಣಿ ಕುಕ್ಕಿ
ಬಾವ ಅತ್ತು ಬಿಕ್ಕಿ ಬಿಕ್ಕಿ
ಕಾಶೀಗ್ ಹೋದ ನಂ ಬಾವ
ಕಬ್ಣದ್ ದೋಣೀಲಿ
ರಾಶೀ ರಾಶೀ ಗಂಗೆ ತರೋಕ್
ಸೊಳ್ಳೆ ಪರದೇಲಿ
ಬಂಡೆ ತಾಕಿ ದೋಣಿ ಒಡ್ದು
ಸೊಳ್ಳೆ ಪರದೆ ಬಾವನ್ ಬಡ್ದು
ಮಂಡೆ ದವಡೆ ಪಟ್ಟಾಗೊಡ್ದು
ಕಾಶೀ ಆಸೆ ನಾಶವಾಗಿ
ಮೀಸೇ ಉಳಿದದ್ ಎಷ್ಟೋ ವಾಸೀಂತ್
ಕಾಶೀಂದ್ ಬಂದ ನಂ ಬಾವ,!
~~~~~~~~~~~~~~~~~~~~~~~~~~~~~~~~~~~~
ತಿಪ್ಪಾರ್ ಹಳ್ಳಿ:
ಬೋರೆಗೌಡನೆಂಬೊ ಗೌಡ ಬಂದ ಬೆಂಗ್ಳೂರ್*ಗೆ
ಬಳೇಪೇಟೆ ಬಾಟಿ ಮೇಲೆ ಬರುತ್ತಿದ್ದಾಗ
ಪೌಡರ್ ಗಿವ್ಡರ್ ಹಾಕಿಕೊಂಡ ಮನುಷ್ಯಳೊಬ್ಬಳು
ಕಣ್ಣು ಗಿಣ್ಣು ಮಿಟಿಕ್ಸಿ ಗಿಟಕ್ಸಿ ನೋಡಿ ನಕ್ಕಾಗ--
ತಿಪ್ಪಾರಳ್ಳಿ ಬಲುದೂರ
ನಡಿಯಾಕ್ ಬಲುದೂರ
ನಮ್ಮ ತಿಪ್ಪಾರಳ್ಳಿ ಬಲುದೂರ
ಆದರ್ ಅಲ್ವ್*ವ್ಳೆ ನಂಬಸ್ವಿ
ಬೇಡವ್ವಾ ಬಳೇಪೇಟೆ
ನಮಸ್ಕಾರ ನಗರ್ತ್ ಪೇಟೆ
ನಂ ತಿಪ್ಪಾರಳ್ಳಿ ಬಲುದೂರ-
ಆದರ್ ಅಲ್ವ್*ವ್ಳೆ ನಂಬಸ್ವಿ
ತಮಾಷೆ ನೋಡಾಕ್ ಬೋರ ವೊಂಟ ಲಾಲ್ ಬಾಗ್ ತೋಟಕ್ಕೆ
ವುಲೀನ್ ನೋಡಿ ಬರೆ ಆಕಿದ್ ದೊಡ್ ಬೆಕ್ ಅನ್ಕೊಂಡ
ಬೋನ್ನೊಳಕ್ ನುಗ್ಗಿ ವುಲೀನ್ ಸವರ್*ತ ಪುಸ್ ಪುಸ್ ಅಂತಿದ್ದ
-ಬೋರ ಪುಸ್ ಪುಸ್ ಅಂತಿದ್ದ
ವುಲೀ ರೇಕ್ಕೊಂಡ್ ಬೋರನ್ ಕೆಡವ್ಕೊಂಡ್ ಅಲ್ಗಳ್ ಬುಟ್ಟಾಗ
ಬೋರ ಬೆದರ್*ಕೊಂಡ್ ಕಣ್ಣೀರ್ ಸುರುಸ್ತ ಕೈ ಮುಗ್ದ್ ಕಿರುಚ್ಡ-
ಬುಟ್ಬುಡಪ್ಪಾ ಬೆಕ್ಕಿನ್ ರಾಯಾ
ನಮಸ್ಕಾರ ನನ್ ಒಡೆಯಾ
ನಮ್ಮ ತಿಪ್ಪಾರಳ್ಳಿ ಬಲುದೂರ-
ನಡಿಯಾಕ್ ಬಲುದೂರ
ನಂ ತಿಪ್ಪಾರಳ್ಳಿ ಬಲುದೂರ-
ಆದರ್ ಅಲ್ವ್*ವ್ಳೆ ನಂಬಸ್ವಿ
ಬಸ್ವೀನ್ ಕರ್ಕೊಂಡ್ ಮೈಸೂರ್ಗ್ ಬಂದ ಯೀಜೀದಸ್ಮೀಗೆ
ಅರ್ಮನ್ ಗೇಟ್ಮ್ಂದ್ ಅಂಬಾರ್ ಕಟ್ಟಿದ್ ಆನೇನ್ ನೋಡಿದಾ
ಅಂಬಾರ್ ಮೆಟ್ಲ್ ಮೇಲ್ ಬಸ್ವೀನ್ ಅತ್ಸ್ ಬುಟ್ ತಾನೂ ಅತ್ಬುಟ್ಟ
-ಬೋರ ಬುರ್ ಬುರ್*ನ್ ಅತ್ಬುಟ್ಟ
ಮಾವ್ತರ್ ಮಂಕಾಗ್ ಗುರಿಕಾರ್ ಗುಮ್ಮಗ್ ಇಳೀಂತ ಕಿರ್ಚ್ದಾಗ್
ಆನೆ ಕೊರಳಾಗ್ ಒದೀತ್ ನಡಸ್ತ್ ಆಡ್ತ ಓಗ್ತಿದ್ದ--
ಗಂಟ್ಳ್ ಉಳಿಸ್ಕೊಳ್ರಪ್ಪಾ ಗುರುಕಾರ್ರ
ಮನೆಗೋಗಿ ಮವುತ್ ಸಾಬರ್ರ್
ತಿಪ್ಪಾರಳ್ಳಿ ಬಲುದೂರ-
ಅಲ್ಲಿಗ್ ನಲಿವೊಲ್ಳು ನಂ ಬಸ್ವಿ....
~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಕೋ....ಳೀಕೆ ರಂಗಾ:
ನಾನ್ ಕೋ...ಳೀಕೆ ರಂಗಾ....
'ಕೋ' ನು 'ಳೀ' ನು 'ಕೇ' ನು 'ರಾ' ನು 'ಸೊನ್ನೆ' 'ಗಾ'
ನಾನು ಉಟ್ಟಿದ್ದು ಒಡ್ಡ್ ರಳ್ಳಿ
ಬೆಳೆದದ್ದು ಬ್ಯಾಡ್ ರಳ್ಳಿ
ಮದವನೆ ಮಾದನ್ ಅಳ್ ನನ್ ಒಲಗೊಳ್ ಅರನ್ನಳ್ಳಿ
ನಂ ಶ್ಯಾನ್ ಬೋಗಯ್ಯ
ಅಲ್ದ್ ಸೇಕ್ ದಾರಪ್ಪ
ಇವ್ರ್ ಎಲ್ರೂ ಕಂಡವ್ರೆ ನನ್ನಾ.....
ಇನ್ ದನಗೊಳ್ನು ಮಕ್ಕಳ್ನೂ ಎಂಡರ್*ನೂವೆ
ಅಟ್ಟಿ ಅವ್ವೇನೂ ಬುಟ್ಟು
ಬಂದಿವ್ನಿ ನಿಮ್ಮುಂದ್ ನಿಂತಿವ್ನ್ ನಾ
ನಮ್ಮಳ್ಳಿ ಕಿಲಾಡಿ ವುಂಜಾ
ನಾನ್ ಕೋ...ಳೀಕೆ ರಂಗಾ....
'ಕೋ' ನು 'ಳೀ' ನು 'ಕೇ' ನು 'ರಾ' ನು 'ಸೊನ್ನೆ' 'ಗಾ'
ನಂ ತಿಪ್ಪಾರಳ್ಳಿ, ಬೋರನ್ ಅಣ್ಣನ್ ತಮ್ಮನ್ ದೊಡ್ಮಗಾ
ಕಕೋತ್ವ-ಳೀ, ಕಕೇತ್ವ-ರ, ಮತ್ತೊನ್ನೆಯೂನು-ಗಾ
ಇದ್ನ ಆಡಾಕ್ ಬರ್ದೆ ಬಾಯ್ ಬುಡಾನು ಬೆಪ್ಪುನನ್ಮಗಾ
ಕೋ...ಳೀಕೆ ರಂಗಾ....
'ಕೋ' ನು 'ಳೀ' ನು 'ಕೇ' ನು 'ರಾ' ನು 'ಸೊನ್ನೆ' 'ಗಾ'
ಎತ್ತು ಕುದುರೆ ಇಲ್ದ್ ಗಾಡಿಗ್ಳೊವೆ
ಬತ್ತಿ ಯೆಣ್ಣೇ ಇಲ್ದ್ ದೀಪಗ್ಳೊವೆ
ಕುದ್ರೆಯಿಲ್ ಗಾಡಿಗ್ಳು ಎಣ್ಣೆ ಇಲ್ದ್ ದೀಪಗ್ಳು
ತುಂಬಿದ್ ಮೈಸೂರಿಗ್ ಬಂದೆ
ದೊಡ್ ಚೌಕದ್ ಮುಂದೆ
ಗಡಿಯಾರದ್ ಹಿಂದೆ
ಕಟ್ ತಂದಿದ್ದ್ ಬುತ್ತೀನ್ ತಿಂತಿದ್ದೆ
ಅಲ್ಲ್ ಕುದುರೆ ಮೇಲ್ ಕುಂತಿದ್ದೊಬ್ ಸವಾರ್*ದಯ್ಯ
ಕೆದ್ರಿದ್ ತನ್ ಮೀಸೆ ಮೇಲ್ ಆಕ್ತ ಕೈಯ
ಬೆದ್ರಿಸ್ತಾಲೀ....ನನ್
ಗದ್ರಿಸ್ತಾಲೀ.....
"ನೀನ್ ಯಾರೋ....ನೀನ್ ಯಾರೋ...
ನಾನು.....ನಾನ್ ಕೋ....ಳೀಕೆ ರಂಗಾ--
'ಕೋ' ನು 'ಳೀ' ನು 'ಕೇ' ನು 'ರಾ' ನು 'ಸೊನ್ನೆ' 'ಗಾ'
~~~~~~~~~~~~~~~~~~~~~~~~~~~~~~~~~~~~~~~~~~~~~~
ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಿದರೆ ನನ್ನ ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ
ಸಂಸಾರ ಸಾಗರದಾಗ,ಲೆಕ್ಕವಿರದಷ್ಟು ದುಃಖದ ಬಂಡಿ
ನಾ ಬಲ್ಲೆ ನನಗೆ ಗೊತ್ತಿಲ್ಲದಿದ್ದರೂ ಎಲ್ಲಿ ಆಚೆಯಾ ದಂಡಿ
ಮಲಗಿರುವ ಕೂಸು ಮಲಗಿರಲಿ ಅಲ್ಲಿ, ಮುಂದಿನದು ದೇವರ ಚಿತ್ತ
ನಾ ತಡೀಲಾರೆ ಅದು ಯಾಕ ನೋಡತಿ ಮತ್ತ ಮತ್ತ ನೀ ಇತ್ತ?
ತಂಬಲ ಹಾಕದ ತುಂಬ ಕೆಂಪು ಗಿಣಿಗಡಕ ಹಣ್ಣಿನ ಹಾಂಗ
ಇದ್ದಂಥ ತುಟಿಯ ಬಣ್ಣೆತ್ತ ಹಾರಿತು? ಯಾವ ಗಾಳಿಗೆ, ಹೀಂಗ
ಈ ಗದ್ದ, ಗಲ್ಲ, ಹಣೆ ಕಣ್ಣು ಕಂಡು ಮಾರೀಗೆ ಮಾರಿಯ ರೀತಿ
ಸಾವನ ತನ್ನ ಕೈ ಸವರಿತಿಲ್ಲಿ, ಬಂತೆನಗ ಇಲ್ಲದ ಭೀತಿ.
ದಾರೀಲೆ ನೆನೆದ ಕೈ ಹಿಡಿದೆ ನೀನು, ತಣ್ಣಗ ಅಂತನ ತಿಳಿದು
ಬಿಡವಲ್ಲಿ ಇನ್ನುನೂ, ಬೂದಿ ಮುಚ್ಚಿದ ಕೆಂಡ ಇದಂತ ಹೊಳೆದು
ಮುಗಿಲ ನ ಕಪ್ಪರಿಸಿ, ನೆಲಕ ಬಿದ್ದರ ನೆಲಕ ನೆಲಿ ಎಲ್ಲಿನ್ನ
ಆ ಗಾದಿ ಮಾತು ನಂಬಿ, ನಾನು ದೇವರಂತ ತಿಳಿದಿಯೇನ ನೀ ನನ್ನ.
ಇಬ್ಬನ್ನಿ ತೊಳೆದರೂ ಹಾಲು ಮೆತ್ತಿದಾ ಕವಳಿಕಂಟಿಯಾ ಹಣ್ಣು
ಹೊಳೆ ಹೊಳೆವ ಹಾಂಗ ಕಣ್ಣಿರುವ ಹೆಣ್ಣ, ಹೇಳು ನಿನ್ನನೇನ ಈ ಕಣ್ಣು?
ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡು ಒಮ್ಮಿಗಿಲ
ಹುಣ್ಣಿವೀ ಚೆಂದಿರನ ಹೆಣಾ ಬಂತೊ ಮುಗಿಲಾಗ ತೇಲುತ ಹಗಲ!
ನಿನ್ನ ಕಣ್ಣಿನ್ಯಾಗ ಕಾಲೂರಿ ಮಳೆಯು, ನಡನಡಕ ಹುಚ್ಚನಗಿ ಯಾಕ
ಹನಿ ಒಡೆಯಲಿಕ್ಕೆ ಬಂದಂಥ ಮೋಡ, ತಡಧಾಂಗ ಗಾಳಿಯ ನೆವಕ
ಅತ್ತಾರೆ ಅತ್ತುಬಿಡು, ಹೊನಲು ಬರಲಿ, ನಕ್ಕ್ಯಾಕ ಮರಸತೀ ದುಕ್ಕ?
ಎವೆ ಬಿಡಿಸಿ ಕೆಡವು, ಬಿರಿಗಣ್ಣು ಬ್ಯಾಡ, ತುಟಿಕಚ್ಚಿ ಹಿಡಿಯದಿರು ಬಿಕ್ಕ.
~~~~~~~~~~~~~~~~~~~~~~~~~~~~~~~~~~~~~~~~~~~~~~~~
ಎಲ್ಲ ಮರೆತಿರುವಾಗ
ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ
ಹೂಡಿ ಬರದಿರು ಮತ್ತೆ ಹಳೆಯ ನೆನಪೇ;
ಕಲ್ಲಿನಂದದಿ ಬಿದ್ದು ತಿಳಿಯಾದ ಎದೆಗೊಳವ
ರಾಡಿಗೊಳಿಸುವೆ ಏಕೆ, ಮಧುರ ನೆನಪೇ?
ಕಪ್ಪು ಕಪ್ಪಿನ ನೆಟ್ಟ ನೋಟದರೆ ಚಣವನ್ನೆ
ತೊಟ್ಟು ಬಾಣದ ಹಾಗೆ ಬಾರದಿರು ನೆನಪೇ;
ಬಿರಿದ ತುಟಿಗಳ ತುಂಬುನಗೆಯ ಕಾರಣವನ್ನೆ
ಹಿರಿದು ಕೊಲ್ಲಲು ಬಳಿಗೆ ಸಾರದಿರು ನೆನಪೇ,
ಸತ್ತ ಭೂತವನೆತ್ತಿ ಹದ್ದಿನಂದದಿ ತಂದು
ನನ್ನ ಮನದಂಗಳಕೆ ಹಾಕದಿರು ನೆನಪೇ;
ಭವ್ಯ ಭವಿತ್ಯಕ್ಕೆ ಮೊಗ ಮಾಡಿ ನಿಂತಿರುವೆ,
ಬೆನ್ನಲ್ಲೆ ಇರಿಯದಿರು ಓ ! ಚೆನ್ನ ನೆನಪೇ
-ಕೆ.ಎಸ್. ನಿಸಾರ್ ಅಹಮದ್
~~~~~~~~~~~~~~~~~~~~~~~~~~~~~~~~~~~~~~~~~
ಯಾವ ಜನ್ಮದ ಮೈತ್ರಿ
ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು
ನಮ್ಮಿಬ್ಬರನು ಮತ್ತೆ ಬಂಧಿಸಿಹುದೋ ಕಾಣೆ!
ಎಲ್ಲಿದ್ದರೇನಂತೆ, ನಿನ್ನನೊಲಿಯದೆ ಮಾಣೆ,
ಗುರುದೇವನಾಣೆ, ಓ ನನ್ನ ನೆಚ್ಚಿನ ಬಂಧು!
ವಿಶ್ವ ಜೀವನವೊಂದು ಪಾರವಿಲ್ಲದ ಸಿಂಧು!
ಮೇಲೆ ತೆರೆನೊರೆಯೆದ್ದು ಭೋರ್ಗರೆಯುತಿರೆ ರೇಗಿ,
ಅದರಂತರಾಳದಲಿ ಗುಪ್ತಗಾಮಿನಿಯಾಗಿ;
ಹೃದಯಗಳು ನಲಿಯುತಿವೆ ಪ್ರೇಮ ತೀರ್ಥದಿ ಮಿಂದು!
ಅದರರ್ಥಗಿರ್ಥಗಳು ಸೃಷ್ಟಿಕರ್ತನಿಗಿರಲಿ;
ವ್ಯರ್ಥ ಜಿಜ್ನಾಸೆಯಲಿ ಕಾಲಹರಣವದೇಕೆ?
ಕುರುಡನಾದಗೆ ದಾರಿಯರ್ಥ ತಿಳಿಯಲೆ ಬೇಕೆ?
ಹಾದಿ ಸಾಗಿದರಾಯ್ತು? ಬರುವುದೆಲ್ಲಾ ಬರಲಿ!
ಬಾರಯ್ಯ, ಮಮಬಂಧು, ಜೀವನಪಥದೊಳಾವು
ಒಂದಾಗಿ ಮುಂದುವರಿಯುವ; ಹಿಂದಿರಲಿ ಸಾವು
- ಕುವೆಂಪು
~~~~~~~~~~~~~~~~~~~~~~~~~~~~~~~~~~~~~~~~~
ಬೆಳಗು
ಮೂಡಲ ಮನೆಯಾ ಮುತ್ತಿನ ನೀರಿನ
ಎರಕಾವ ಹೊಯ್ದಾ
ನುಣ್ಣ -ನ್ನೆರಾವ ಹೊಯ್ದಾ
ಬಾಗಿಲ ತೆರೆದೂ ಬೆಳಕು ಹರಿದೂ
ಜಗವೆಲ್ಲಾ ತೊಯ್ದಾ
ಹೋಯ್ತೋ- ಜಗವೆಲ್ಲಾ ತೊಯ್ದಾ
ರತ್ನದ ರಸದಾ ಕಾರಂಜೀಯೂ
ಪುಟಪುಟನೇ ಪುಟಿದು
ತಾನೇ - ಪುಟಪುಟನೇ ಪುಟಿದು
ಮಘಮಘಿಸುವಾ ಮುಗಿದ ಮೊಗ್ಗೀ
ಪಟಪಟನೇ ಒಡೆದು
ತಾನೇ - ಪಟಪಟನೇ ಒಡೆದು
ಎಲೆಗಳ ಮೇಲೆ ಹೂಗಳ ಒಳಗೇ
ಅಮೃತಾದ ಬಿಂದು
ಕಂಡವು - ಅಮೃತಾದ ಬಿಂದು
ಯಾರಿರಿಸಿರುವರು ಮುಗಿಲಾ ಮೇಲಿಂ-
ದಿಲ್ಲೀಗೇ ತಂದು
ಈಗ - ಇಲ್ಲೆಗೇ ತಂದು
ತಂಗಾಳಿಯಾ ಕೈಯೊಳಗಿರಿಸೀ
ಎಸಳಿನಾ, ಚವರಿ
ಹೂವಿನ - ಎಸಳಿನಾ ಚವರಿ
ಹಾರಿಸಿಬಿಟ್ಟರು ತುಂಬಿಯ ದಂಡು
ಮೈಯೆಲ್ಲಾ ಸವರಿ.
ಗಂಧಾ - ಮೈಯೆಲ್ಲಾ ಸವರಿ.
ಗಿಡಗಂಟಿಯಾ ಕೊರಳೊಳಗಿಂದ
ಹಕ್ಕಿಗಳಾ ಹಾಡು
ಹೊರಟಿತು - ಹಕ್ಕಿಗಳಾ ಹಾಡು.
ಗಂಧರ್ವರ ಸೀಮೆಯಾಯಿತು
ಕಾಡಿನ ನಾಡು
ಕ್ಷಣದೊಳು - ಕಾಡಿನ ನಾಡು
ಕಂಡಿತು ಕಣ್ಣು ಸವಿದಿತು ನಾಲಗೆ
ಪಡೆದಿತೀ ದೇಹ
ಸ್ಪರ್ಶಾ - ಪಡೆದಿತೀ ದೇಹ
ಕೇಳಿತು ಕಿವಿಯು ಮೂಸಿತು ಮೂಗು
ತನ್ಮಯವೀ ಗೇಹ
ದೇವರ - ದೀ ಮನಸಿನ ಗೇಹಾ
ಅರಿಯದು ಅಳವು ತಿಳಿಯದು ಮನವು
ಕಾಣದೋ ಬಣ್ಣಾ
ಕಣ್ಣಿಗೆ - ಕಾಣದೋ ಬಣ್ಣಾ-
ಶಾಂತೀರಸವೇ ಪ್ರೀತಿಯಿಂದಾ
ಮೈದೋರೀತಣ್ಣಾ
ಇದು ಬರಿ ಬೆಳಗಲ್ಲೋ ಅಣ್ಣಾ
- ದ.ರಾ. ಬೇಂದ್ರೆ.
~~~~~~~~~~~~~~~~~~~~~~~~~~~~~~~~~~~~~~~~~~~~~
1 comment:
ನಮಸ್ತೆ ಅಣ್ಣ ಈ ಹಾಡುಗಳ ಆಡಿಯೋ ಇದ್ದರೆ ನನಗೂ ಕಲಿಯುವುದಕ್ಕೆ ಅನುಕೂಲವಾಗುತಿತ್ತು
Post a Comment