Thursday, 16 October 2008

ಮಾತಿನಲ್ಲೇ ಮಣೆ ಹಾಕುವವರು

" ಊರಿನಿಂದ ಹೊಸಬರು ಇಲ್ಲಿಗೆ ಬಂದಿದ್ದಾರೆ, ಹೋಗಿ ಮಾತನಾಡಿಸಿಕೊಂಡು ಬರೋಣ" ಎಂದು ಸ್ನೇಹಿತರು ಫೋನ್ ಮಾಡಿದ್ದರು. ನಾನೂ " ಹೂಂ, ಹೋಗೋಣ.."ಇವತ್ತು, ನಾಳೆ" ಎಂದು ದಿನ ತಳ್ಳುತ್ತಲೇ ಬರುತ್ತಿದ್ದೆ. ಗುರುತು ಪರಿಚಯವಿಲ್ಲದವರ ಮನೆಗೆ ಏನೆಂದು ಹೋಗುವುದು? ನಮ್ಮ ಮನೆಗೆ ಕರೆಯೋಣ" ಎಂಬ ನನ್ನ ಮಾತಿಗೆ ಸ್ನೇಹಿತರು, " ಸುಮ್ಮನೆ ಹೋಗಿ ಬರುವಾ, ಹೋಗುವ ಮೊದಲು ಫೋನ್ ಮಾಡಿದರಾಯಿತಲ್ಲ ಎಂದಿದ್ದರೂ ನನಗೆ ಅದ್ಯಾಕೋ ಸರಿಯಲ್ಲ ಅನ್ನಿಸುತ್ತಿತ್ತು. ಊರಿನಲ್ಲಾದರೆ, ಸೀದಾ ಬಾಗಿಲು ತಟ್ಟಿ, ನಾವು ಇಂತಹವರು, ನೀವು ಎಲ್ಲಿಂದ? ಎಂತೆಲ್ಲಾ ನಮ್ಮ ಕಂತೆ ಪುರಾಣ ಒದರಿ ಫ್ರೆಂಡ್ಸ್ ಮಾಡಿಕೊಳ್ಳಬಹುದಿತ್ತು. ಇಲ್ಲಿ ಬಂದ ನಂತರ ಊರಲ್ಲಿ ಇದ್ದ ಹಾಗೆಯೇ ಇರುತ್ತಾರೆಯೇ? ಊರಿಗೆ ಬಂದವರು ನೀರಿಗೆ ಬರದಿರುತ್ತಾರೆಯೇ? ಹಾಗೆಯೇ ಊರಿಗೆ ಬಂದವರು ವಾರಕ್ಕೊಮ್ಮೆ ನಡೆಯುವ veggie ಮಾರುಕಟ್ಟೆಗೆ ಬರಲೇಬೇಕು. ಆಗ ಸಿಕ್ಕಿ ಮಾತನಾಡಿಸಿದರೆ....., ಮನೆಗೆ ಕರೆದರೆ......, ಹೋಗೋಣ ಎಂದಿದ್ದೆ.



ಅಂತೂ ಒಂದು ಶನಿವಾರ ಬೆಳಿಗ್ಗೆ ಮಾರುಕಟ್ಟೆಯಲ್ಲಿ ಸಿಕ್ಕರು. ಅವರನ್ನು ಮುಖತಃ ನೋಡಿರದಿದ್ದರೂ ಮಾರುಕಟ್ಟೆಗೆ ಹೊಸಬರೆಂಬುದಂತೂ ಗೊತ್ತಾಯಿತು. ಯಜಮಾನರು, " ನೀನು ಈಗ ಮೇಲೆ ಬಿದ್ದು ಫ್ರೆಂಡ್ ಮಾಡಿಕೊಳ್ಳುವುದೂ ಬೇಡ, ಅಮೇಲೆ ಅವರೇನೋ ಅಂದರು ಅಂತ ಪ್ರಪಂಚ ತಲೆಯ ಮೇಲೆ ಬಿದ್ದವರ ತರಹ ಶೋಕಾಚರಣೆ ಮಾಡುವುದೂ ಬೇಡ" ಎಂದು ನನ್ನನ್ನು ತಡೆದಿದ್ದರಿಂದ, ನಾನು ಸುಮ್ಮನಿದ್ದೆ. ಗಂಡ ಹೆಂಡತಿ ವ್ಯಾಪಾರ ಮುಗಿಸಿ ನಮ್ಮ ಎದುರಿಗೇ ಸಿಕ್ಕರು. ನಾವು ಇನ್ನೂ ಬರೀ ಕೈನಲ್ಲಿ ಸುತ್ತುತ್ತಿದ್ದುದನ್ನು ಕಂಡು, ನಾವು ಲೇಟಾಗಿ ಬಂದೆವೇನೋ ಎಂಬಂತೆ, " ಟೊಮೋಟೋ ಮತ್ತು ದಪ್ಪ ಮೆಣಸಿನಕಾಯಿ ಮುಗಿದೇ ಹೋಯಿತು" ಎಂದು ಹಿಂದಿಯಲ್ಲಿ ಮಾತನಾಡಿಸಿದರು. " ಟೋಮೋಟೋ ಬೇಡ ನಮಗೆ, ಸುಮ್ಮನೇ ಯಾವುದಾದರೂ ಹೂವಿನ ಗಿಡಗಳು ಸಿಗುತ್ತವೇನೋ, ಎಂದು ನೋಡುತ್ತಿದ್ದೇವೆ" ಎಂದು ಯಜಮಾನರು ಉತ್ತರಿಸಿದರು. " ಇಲ್ಲೇನೂ ತರಕಾರಿಗಳು ಸಿಗುವುದೇ ಇಲ್ಲವಲ್ಲ, ರೇಟೂ ಜಾಸ್ತಿ" ಎಂದು ನಾನು ಇಲ್ಲಿಗೆ ಬಂದ ಹೊಸತರಲ್ಲಿ ಗೊಣಗಿದಂತೆ ಅವರೂ ಕಷ್ಟ ತೋಡಿಕೊಂಡರು. " ಹೌದು, ಒಮ್ಮೊಮ್ಮೇ ಸೂಪರ್ ಮಾರುಕಟ್ಟೆಯಲ್ಲೇ ಕಡಿಮೆ ಸಿಗುತ್ತದೆ, ಕೆಲವು ತರಕಾರಿ, ಸೊಪ್ಪುಗಳನ್ನು ಮನೆಯ ಕೈತೋಟದಲ್ಲಿ ಬೆಳೆದುಕೊಳ್ಳುತ್ತೇವೆ." ಎಂದು ನಾನು ಸ್ವಲ್ಪ ಜಂಭ ಕೊಚ್ಚಿಕೊಂಡೆ. " ಓಹ್ ಹೌದಾ! ಒಮ್ಮೆ ನೋಡಬೇಕು " ಎಂದು ಅವರ ಹೆಂಡತಿಯೂ ಉತ್ಸಾಹ ತೋರಿದ್ದರಿಂದ, " ಮನೆಗೆ ಬನ್ನಿ, ಹೇಗೂ ನಾಳೆ ಭಾನುವಾರ" ಎಂದು ನಾವು ಆಹ್ವಾನವಿತ್ತೆವು. ಅವರೂ ಒಂದೆರಡು ಕ್ಷಣ ಸುಮ್ಮನಿದ್ದವರು, "ಸುಮ್ಮನೇ ನಿಮಗ್ಯಾಕೆ ತೊಂದರೆ " ಎಂದರು." ನಮಗೇನೂ ತೊಂದರೆಯಿಲ್ಲ, ನೀವು ನಾಳೆ ಮಧ್ಯಾಹ್ನ ನಮ್ಮ ಮನೆಗೆ ಬನ್ನಿ ಎಂದು" ಅವರಿಗೆ ನಮ್ಮ ಅಡ್ರೆಸ್ ಹೇಳಿ ಹೊರಟೆವು.


ಸ್ನೇಹಿತರು ಇಂಡಿಯಾಗೆ ಹೋಗಿದ್ದರಿಂದ, ಇವರ ಬಗ್ಗೆ ನನಗೇನು ಗೊತ್ತಿರಲಿಲ್ಲ. ಮನೆಗೆ ಕರೆದ ಮೇಲೆ, ಮನೆ ನೀಟಾಗಿ ಇರಬೇಡವೆ? ಹಾಗೆಂದು ನನ್ನ ಮನೆಯನ್ನು ಕ್ಲೀನಾಗಿ ಇಟ್ಟುಕೊಂಡಿಲ್ಲವೆಂತಲ್ಲ! ಆದರೂ ಯಾರಾದರೂ ಬರುತ್ತಾರೆಂದರೆ, ಮನೆ ಇನ್ನೂ ಫಳಫಳ ಎನಿಸಬೇಡವೇ? ಊಟಕ್ಕೆ ಏನು ಅಡಿಗೆ ಮಾಡುವುದೆಂದು ತೀರ್ಮಾನವಾಯಿತು. ಮೊದಲ ಭೇಟಿಯಲ್ಲಿ ಅಷ್ಟೇನೂ ಸ್ನೇಹಮಯಿಗಳೆಂದು ನನಗೆ ಅನಿಸಿಲ್ಲವಾದ್ದರಿಂದ, ಈಗ ಹೇಗೂ ಬರುತ್ತಾರಲ್ಲ, ಅವರ ಸ್ವಭಾವ ಹೇಗೆಂದು ಗೊತ್ತಾಗುತ್ತದೆ. ನನಗೆ ಸರಿ ಅನ್ನಿಸಿದರೆ ಫ್ರೆಂಡ್ ಮಾಡಿಕೊಂಡರಾಯಿತು, ಇಲ್ಲದಿದ್ದರೆ ನನ್ನ ಪಾಡಿಗೆ ಸುಮ್ಮನೇ ಇರುವುದು ಎಂದುಕೊಂಡಿದ್ದೆ.


ಮರುದಿನ ಅವರು ಹೇಳಿದ ಸಮಯಕ್ಕೆ ಸರಿಯಾಗಿಯೂ ಬಂದರು. ಯಜಮಾನರು ಬಲೇ ಉತ್ಸಾಹದಿಂದ, ಗೋಬಿ ಮಂಚೂರಿ, ಪಲಾವ್ ಮಾಡಿದ್ದರು. ನಾನು ಚಪಾತಿ, ಪಲ್ಯ, ಅನ್ನ ಸಾರು ಎಂದು ಎಲ್ಲವನ್ನೂ ನೀಟಾಗಿ ಜೋಡಿಸಿಟ್ಟಿದ್ದೆ. ಬಂದವರು, ನನ್ನನ್ನೂ, ನನ್ನ ಕೈತೋಟವನ್ನೂ, ನನ್ನ ಅಡಿಗೆಯನ್ನೂ ಹಾಡಿ ಹೊಗಳಿದ್ದರಿಂದ ಅಟ್ಟ ಏರಿದ್ದೆ! ನಮ್ಮ ತೋಟದ ಪಾಲಾಕ್, ಮೆಂತ್ಯ, ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ ಎಲ್ಲವನ್ನೊ ಕಿತ್ತು ಕವರಿಗೆ ಹಾಕಿ ಕೊಟ್ಟೆ. ಆದರೂ ಅವರುಗಳ ಮಾತು ಒಮ್ಮೊಮ್ಮೆ ಅತೀ ಎನಿಸಿದ್ದರೂ, ಹೊಗಳಿಕೆಯಲ್ಲಿ ತೇಲುತ್ತಿದ್ದ ನನಗೆ " ಪರವಾಗಿಲ್ಲ" ಅನ್ನಿಸಿತ್ತು. ರಾತ್ರಿ ಏಳರವರೆಗೂ ಅವರುಗಳು ಕೂತದ್ದರಿಂದ, ಇನ್ನು ಇಷ್ಟು ಹೊತ್ತಿದ್ದ ಮೇಲೆ, ರಾತ್ರಿ ಊಟ ಮಾಡಿಕೊಂಡೇ ಹೋಗಿ ಅನ್ನದೇ ವಿಧಿಯಿರಲಿಲ್ಲ. ಅವರುಗಳೂ " ಓಹೋ! ನೀವು ನಮಗೆ ಇಷ್ಟು ಉಪಚಾರ ಮಾಡಿದರೆ ನಾವು ಪ್ರತೀವಾರವೂ ಇಲ್ಲಿಗೇ ಬರುತ್ತೇವೆ" ಎಂದಿದ್ದನ್ನು ನಾನು ತಮಾಷೆಯಾಗಿಯೇ ತೆಗೆದುಕೊಂಡೆ. ಅಂತೂ ರಾತ್ರಿ ಊಟ ಮುಗಿಸಿ, ಇನ್ನೊಮ್ಮೆ ಹೊಗಳಿ ಹೊರಟರು.


ನನ್ನನ್ನು ಹೊಗಳಿದ್ದರಿಂದಲೋ ಏನೋ, ಮಧ್ಯಾಹ್ನ ಊಟಕ್ಕೆ ಬಂದವರು, ರಾತ್ರಿಯದೂ ಮುಗಿಸಿ ಹೋದ ಅವರುಗಳು ಮೇಲೆ ಏನೂ ಗೊಣಗದೆ, " ಮಾಡಿದ್ದ ಅಡಿಗೆಯೆಲ್ಲವೂ ಖಾಲಿಯಾಯಿತು, ಬಹುಷಃ ನನ್ನ ಅಡಿಗೆ ನಿಜವಾಗಿಯೂ ಚೆನ್ನಾಗಿದ್ದರಬೇಕು" ಎಂದು ನನ್ನ ಬೆನ್ನು ನಾನೇ ಚಪ್ಪರಿಸಿಕೊಂಡೆ. " ನನಗೇನೋ, ಒಳ್ಳೆಯವರಂತೆ ಕಾಣಿಸಿದರು, ಸ್ವಲ್ಪ ಮಾತು ಜಾಸ್ತಿ ಅಷ್ಟೇ, ನಿಮ್ಮ ಫ್ರೆಂಡ್ ಊರಿಂದ ಬಂದ ಮೇಲೆ ಇವರ ಬಗ್ಗೆ ಹೇಳಬೇಕು." ಎಂಬ ನನ್ನ ಮಾತಿಗೆ ಯಜಮಾನರೇನೂ ಪ್ರತಿಯಾಡಿರಲಿಲ್ಲ. " ಜಾಸ್ತಿ ಹಚ್ಚಿಕೊಳ್ಳಬೇಡ ಇವರನ್ನು " ಎಂದರಷ್ಟೇ.

ಒಂದೆರಡು ದಿನಗಳಾದ ಮೇಲೆ, ಸಂಜೆ ಫೋನ್ ಮಾಡಿ, ಈ ವೀಕೆಂಡು ಎಲ್ಲಿಗೂ ಹೋಗದಿದ್ದರೆ ನಮ್ಮ ಮನೆಗೆ ಬನ್ನಿ ಎಂದು ಕರೆಯಿತ್ತರು. ನಮಗೂ, ವಾರವೆಲ್ಲ ಬಿಸಿಲಿದ್ದು, ವೀಕೆಂಡುಗಳಲ್ಲಿ ಮಳೆ, ಗಾಳಿ ಜೋರಾಗಿರುತ್ತಿದ್ದರಿಂದ ಎಲ್ಲಿಯೂ ಹೋಗುವ ಪ್ಲಾನ್ ಹಾಕಿರಲಿಲ್ಲ. " ಆಗಲಿ ಬರುತ್ತೇವೆ, ಏನಾದರೂ ಅಡಿಗೆ ಮಾಡಿಕೊಂಡು ಬರಲೇ " ಎಂಬ ನನ್ನ ಪ್ರಶ್ನೆಗೆ " ನಿಮ್ಮಿಷ್ಟ" ಎಂದಿದ್ದರಿಂದ, ಏನಾದರೂ ಸ್ವೀಟ್ಸ್ ಮಾಡಿಕೊಂಡು ಹೋದರಾಯಿತು ಎಂದುಕೊಂಡೆ.


ಅವರ ಮನೆ ಊರಿನ ಆ ದಿಕ್ಕಿಗೆ ಇದ್ದರಿಂದ ಬೇಗನೆ ಹೊರಡುವ ಎಂದಿದ್ದರು ಯಜಮಾನರು. ಕ್ಯಾರೆಟ್ ಪಾಯಸ ಮಾಡಿಕೊಂಡು ಎಷ್ಟೇ ಬೇಗ ಹೊರಡ ಬೇಕೆಂದರೂ ನನ್ನ ಸಿಂಗಾರ, ಬಂಗಾರ ಮುಗಿಸಿ ಮನೆ ಬಿಡುವ ಹೊತ್ತಿಗೆ ಸ್ವಲ್ಪ ಲೇಟೇ ಆಗಿತ್ತು. " ಶೆಟ್ಟಿ ಸಿಂಗಾರವಾಗೋ ವೇಳೆಗೆ ಊರೇ ಮುಳುಗಿತ್ತಂತೆ!" ಎಂದ ಯಜಮಾನರ ಗೊಣಗಾಟ ಕೀವಿಗೆ ಬೀಳದವಳಂತೆ, " ಹೋಗುತ್ತಿರುವುದು ಊಟಕ್ಕೆ ತಾನೇ, ಇಂಟರ್ವ್ಯೂಗಲ್ಲವಲ್ಲ! " ಎಂದು ಕೇಳಿಸದವಳಂತೆ ಕಾರು ಹತ್ತಿದೆ.


ಮನೆ ಸಾಕಷ್ಟು ದೊಡ್ಡದಾಗಿದ್ದು, ನೀಟಾಗಿ ಇಟ್ಟಿದ್ದರು. ಮನೆಯಲ್ಲಿ ಹೇಳಿಕೊಳ್ಳುವಂತಹ ಸಾಮಾನುಗಳೇನೂ ಕಣ್ಣಿಗೆ ಬೀಳದಿದ್ದರಿಂದ ಇನ್ನೂ ಹೊಸಬರಲ್ಲವೇ, ಸಮಯ ಬೇಕಾಗುತ್ತದೆ ಎಂದುಕೊಂಡೆ. ಕೈತೋಟಕ್ಕಾಗಿ ನೆಲವನ್ನು ಅಗೆದು ರೆಡಿ ಮಾಡಿದ್ದನ್ನೂ ತೋರಿಸಿದರು. " ಇಬ್ಬರೂ ಒಳ್ಳೆಯ ಕೆಲಸದಲ್ಲಿದ್ದರೂ, ಮನೆಗೆ ಎಷ್ಟು ಖರ್ಚಾಯಿತು, ಹೇಗೆ ಉಳಿತಾಯ ಮಾಡಬೇಕು, ದಿವಾಳಿ ಏಳುತ್ತಿರುವ ಕಂಪನಿಗಳಿಗೆ ಸರ್ಕಾರ ಹೇಗೆ ಸಹಾಯ ಮಾಡಬೇಕು, ಬೀಳುತ್ತಿರುವ ಷೇರು ಮಾರುಕಟ್ಟೆ.....ಹೀಗೆ ಎಲ್ಲ ಸುದ್ದಿಗಳನ್ನೂ ಗಂಡ ಹೆಂಡತಿ ಉತ್ಸಾಹದಿಂದಲೇ ವಿವರಿಸುತ್ತಿದ್ದಿದು ನನಗೆ ತಲೆಗೇನೂ ಹೋಗುತ್ತಿರಲಿಲ್ಲ. ಇವರ ಮನೆಗೆ ಬರುವ ಸಂಭ್ರಮದಲ್ಲಿ ಬರೀ ಒಂದು ಕಪ್ ಟೀ ಕುಡಿದಿದ್ದಷ್ಟೇ. ಬಂದು ಅರ್ಧಗಂಟೆಯಾದರೂ ಏನೂ ಕೊಡದೇ ಪ್ರಪಂಚದ ಸುದ್ದಿಯೆಲ್ಲವನ್ನೂ ಗುತ್ತಿಗೆ ತೆಗೆದುಕೊಂಡವರ ಹಾಗೆ ಒದರುತ್ತಿದ್ದಿದು ಮೊದ ಮೊದಲು ಆಸಕ್ತಿಯೆನಿಸಿದ್ದು ಬರಬರುತ್ತಾ ತಲೆನೋವು ಬರಿಸತೊಡಗಿತ್ತು.


ಇವರೇನು ನಮಗೆ ಸುಮ್ಮನೇ ಬನ್ನಿ ಅಂದರೆ, ಅಥವಾ ಊಟಕ್ಕೆ ಬನ್ನಿ ಅಂದಿದ್ದರೇ? ಎಂದು ನನಗೆ ಹೊಸ ಅಲೋಚನೆಯೊಂದು ಬರತೊಡಗಿತ್ತು. ಕೂತಲ್ಲೇ ಮಿಡುಕಾಡತೊಡಗಿದ್ದ ನನ್ನನ್ನು ಕಂಡು, ಯಜಮಾನರಿಗೂ ಏನ್ನನಿಸಿತೋ, " ಸರಿ ಹೊರಡುತ್ತೇವೆ," ಎಂದು ಎದ್ದರು. " ಅದೆಲ್ಲಾ ಆಗುವುದಿಲ್ಲ, ಊಟ ಮಾಡಿಕೊಂಡು ಹೋಗಬೇಕು" ಎಂದರು. ಬಂದು ಹೆಚ್ಚುಕಡಿಮೆ ಒಂದೂವರೆ ಗಂಟೆಯಾಗಿದ್ದರೂ ಗಂಡ ಹೆಂಡತಿ ಮಾತಿನಲ್ಲೇ ಉಪಚಾರ ನಡೆಸಿದ್ದರು. ನಾನಂತೂ ಅವರುಗಳ ಮಾತಿಗೆ " ಹೂಂ" ಗುಡುವುದನ್ನೇ ಬಿಟ್ಟಿದ್ದೆ. ಊಟಕ್ಕೂ ಎಬ್ಬಿಸುವುದಿಲ್ಲ, ಹೋಗಲಿ ನಾವು ಹೊರಡುತ್ತೇವೆ ಎಂದರೆ ಬಿಡುವುದೂ ಇಲ್ಲ! ಅವರ ತಂದೆ ತಾಯಿಗಳು ಅದೆಷ್ಟು ಬುದ್ಧಿವಂತರೆಂತಲೂ, ಬೆಂಗಳೂರೊಂದರಲ್ಲೇ ನಾಲ್ಕು ಮನೆ ಕಟ್ಟಿ ಬಾಡಿಗೆಗೆ ಬಿಟ್ಟಿದ್ದಾರೆಂದೂ, ಅವರ ಸಂಬಂಧಿಕರೆಲ್ಲರೂ ಇಂಗ್ಲೆಂಡು, ಅಮೇರಿಕಾದಲ್ಲಿದ್ದಾರೆಂತಲೂ...ಹೀಗೆ ಬೇಕಿದ್ದು, ಬೇಡವಾದ್ದು ಎಲ್ಲವನ್ನೂ ಕೊರೆದು, ಅಂತೂ ಊಟಕ್ಕೆ ಎಬ್ಬಿಸಿದರು. ಡೈನಿಂಗ್ ಟೇಬಲಿನ ಮೇಲೆ ಜೋಡಿಸಿಟ್ಟಿದ್ದನ್ನು ಕಂಡಿದ್ದೇ ನನ್ನ ಹೊಟ್ಟೆ ತುಂಬಿ ಹೋಯಿತು.

’ ಒಂದು ಗಾಜಿನ ಬೋಗುಣಿಯಲ್ಲಿ ತಲೆಗೆ ಎರಡೆರಡು ಬರುವಂತೆ ಚಿಕ್ಕ ಮಕ್ಕಳ ಅಂಗೈಯಗಲದ ಸಣ್ಣ ಸಣ್ಣ ಪೂರಿಗಳು. ಅದಕ್ಕಿಂತಲೂ ಚಿಕ್ಕ ಗಾಜಿನ ಬಟ್ಟಲಿನಲ್ಲಿ ಅಲೂಗೆಡ್ಡೆ ಪಲ್ಯ! ಸುಮಾರಾದ ಪಾತ್ರೆಯಲ್ಲಿ ಬಾತ್, ಪಲ್ಯದ ಬಟ್ಟಲಿನ ಸೈಜಿನಲ್ಲಿ ಅನ್ನ-ಸಾರು, ಮೊಸರು, ಉಪ್ಪಿನಕಾಯಿ ಬಾಟಲು, 4 ದ್ರಾಕ್ಷಿ, 4 ಸೇಬಿನ ಚೂರು, 4 ಕಿತ್ತಳೆತೊಳೆ, ಒಂದು ಬಾಳೆಹಣ್ಣಿನ ನಾಲ್ಕು ಚೂರು. ನಾಲ್ಕು ಜನರಿಗೆ ಸಾಕಲ್ಲ ಈ ಅಡಿಗೆ! ಅಡಿಗೆ ನಾವು ವೇಸ್ಟ್ ಮಾಡುವುದಿಲ್ಲ, ಅದಕ್ಕೆ ಅಳತೆಗೆ ಸರಿಯಾಗಿಯೇ ಮಾಡುತ್ತೇನೆ ಎಂದರು. ನೋಡಿಯೇ ಹೊಟ್ಟೆ ತುಂಬಿದ ಮೇಲೆ, ಇನ್ನು ಊಟಕ್ಕೆಲ್ಲಿ ಜಾಗ? ಯಜಮಾನರ ಮುಖ ನೋಡಿದರೆ, ಅವರು ಗಂಭೀರವಾಗಿ ತಟ್ಟೆಗೆ ಒಂದು ಪೂರಿ-ಪಲ್ಯ, ಅನ್ನ ಸಾರು ಬಡಿಸಿಕೊಂಡಿದ್ದಾರೆ. ಅವರನ್ನು ನೋಡಿ ನಾನೂ ಹಾಗೆಯೇ ಬಡಿಸಿಕೊಂಡೆ. " ನೋಡಿ ಎಷ್ಟು ಅಳತೆಯಿಟ್ಟು ಮಾಡಿದರೂ ಇನ್ನೂ ಉಳಿದುಬಿಟ್ಟಿತು, ನಾಳೆಗೆ ನಿಮಗೇ ಇದನ್ನು ಊಟದ ಡಬ್ಬಿಗೆ ಹಾಕಿಕೊಡುತ್ತೇನೆ" ಎಂದು ಗಂಡನಿಗೆ ಹೇಳಿದರು. ಆ ಪ್ರಾಣಿ " ಹಾಗೆಯೇ ಮಾಡು, " ಎಂದು ತಲೆಯಾಡಿಸಿದರು.


ನಾನೇನೂ ಊಟಮಾಡುವವರ ಅಳತೆಯಿಡುವುದಿಲ್ಲ. ಸ್ವಲ್ಪ ಹೆಚ್ಚಿಗೇ ಅನ್ನುವಂತೆ ಮಾಡಿರುತ್ತೇನೆ. ನಮ್ಮ ಮನೆಗೆ ಬಂದಾಗ ಸರಿಯಾಗಿಯೇ ನಾಲ್ಕು ನಾಲ್ಕು ಚಪಾತಿ, ಪಲಾವ್, ಅನ್ನ ಸಾರು ಯಾವುದನ್ನೂ ಬಿಡದೇ ಎಲ್ಲವನ್ನೂ ಎರಡೆರಡು ಸಲ ನೀಡಿಸಿಕೊಂಡು ಉಂಡಿದ್ದ ಇವರುಗಳ ರೀತಿ ನಿಜಕ್ಕೂ ಅಶ್ಚರ್ಯವೆನಿಸಿತು. ನಾನು ಒಯ್ದಿದ್ದ ಪಾಯಸವನ್ನೂ ಅವರಿಬ್ಬರೂ ಸುರಿದುಕೊಂಡು ತಿಂದಿದ್ದು ನೋಡಿ, " ಇವರದೇನಿದ್ದರೂ ತಿನ್ನಲಷ್ಟೇ ದೊಡ್ಡ ಕೈ " ಅನ್ನಿಸಿತ್ತು. "ಊಟ"ವಾದ ಬಳಿಕ, ಅವರೆಷ್ಟೇ ಮಾತಿಗೆ ಕೂತರೂ, ನಾವುಗಳು ಮನೆಗೆ ಫೋನ್ ಮಾಡಬೇಕು ಎಂದು ನೆಪವೊಡ್ಡಿ ಹೊರಟೆವು.

ಮನೆಗೆ ಬಂದು, ಹುರಿದಿದ್ದ ರವೆಯಿದ್ದರಿಂದ ಅದನ್ನೇ ಕೆದಕಿ ಉಪ್ಪಿಟ್ಟು ಮಾಡಿ ತಿಂದ ಮೇಲಷ್ಟೇ ಸ್ವಲ್ಪ ಗೆಲುವೆನಿಸಿತು. ಎಷ್ಟೋ ಜನರ ಸ್ವಭಾವದ ಪರಿಚಯವಿದ್ದ ನಮಗೆ ಈ ರೀತಿಯ ಅನುಭವ ಇದೇ ಮೊದಲ ಸಲ! ಜಿಪುಣತನ ಮಾಡಲಿ, ಆದರೆ ಅದಕ್ಕೊಂದು ಮಿತಿ ಬೇಡವೆ? ಅಷ್ಟಕ್ಕೂ ಉಳಿತಾಯ ಮಾಡುವವರು ಊಟಕ್ಕಾದರೂ ಯಾಕೆ ಕರೆಯಬೇಕು? ಅಳತೆಯಿಟ್ಟು ಮಾಡುತ್ತೇವೆಂದರೆ ಏನರ್ಥ? ನಮ್ಮ ನಮ್ಮ ಮನೆಗಳಲ್ಲೂ ಅಳತೆ ಪ್ರಕಾರವೇ ಮಾಡುವುದು. ನಾವೇನು ಬೇಕಾಬಿಟ್ಟಿ ಅಡಿಗೆ ಮಾಡಿ ಹೊರಗೆ ಸುರಿಯುತ್ತೇವೆಯೇ? ಮನೆಗೆ ಯಾರದರೂ ಬರುತ್ತಾರೆಂದರೆ ಇನ್ನೂ ಸ್ವಲ್ಪ ಹೆಚ್ಚಿಗೆ ಅನ್ನುವಷ್ಟೇ ಮಾಡುತ್ತಾರೆಯೇ ಹೊರತು, ಹೀಗಂತೂ ಮಾಡುವುದಿಲ್ಲ. ನಮ್ಮಮ್ಮ ರಾತ್ರಿ ಎಲ್ಲರ ಊಟವಾದ ಮೇಲೂ ಒಬ್ಬರಿಗೆ ಊಟಕ್ಕಾಗುವಷ್ಟು ಮಿಗಿಸುತ್ತಲೇ ಇರುತ್ತಿದ್ದರು. ಯಾರು ಬರುತ್ತಾರೋ ಬಿಡುತ್ತಾರೋ, ಒಬ್ಬರಿಗಾಗುವಷ್ಟು ಊಟವಂತೂ ಇರುತ್ತಿತ್ತು. ಅತ್ತೆ ಮನೆಯಲ್ಲಂತೂ, ಬಂದವರು ಅದೆಷ್ಟೇ ಸರಿರಾತ್ರಿಯಿರಲಿ, ಬಿಸಿ ಬಿಸಿ ರೊಟ್ಟಿ, ಶೇಂಗಾ ಚಟ್ನಿ, ಮೊಸರಂತೂ ಗ್ಯಾರಂಟಿ!


ನಮ್ಮ ಸ್ನೇಹಿತರು ಊರಿನಿಂದ ಬಂದಿದ್ದೇವೆಂದು, ಮೊಬೈಲಿಗೆ ಟ್ರೈ ಮಾಡಿ ಸಿಗದಿದ್ದರಿಂದ, ಅವರಮ್ಮ ನಮಗೂ ಸೇರಿಸಿ, ರವೆಉಂಡೆ, ಚಕ್ಕುಲಿ, ಕೋಡುಬಳೆ ಕಳಿಸಿದ್ದಾರೆಂದು, ನಾಳೆ ಮನೆಗೆ ಬರುತ್ತಿದ್ದೇವೆಂದು ಫೋನಿನಲ್ಲಿ ಮೆಸೇಜು ಬಿಟ್ಟಿದ್ದರು.

ಸ್ನೇಹಿತರಿಗೆ ಇದೆಲ್ಲವನ್ನೂ ಹೇಳಿದ ಮೇಲೆ, " ಅಯ್ಯೋ! ನಿಮಗೆ ಅವರು ಸಿಗುತ್ತಾರೆಂದು ಮೊದಲೇ ಗೊತ್ತಿದ್ದರೆ ನಾನೇ ಹೇಳಿರುತ್ತಿದ್ದೆ. ಅವರಿಗೆ ಕರೆಯಲೂ ಬೇಡಿ, ಕರೆದರೆ ನೀವೂ ಹೋಗಬೇಡಿರೆಂದು". ಅವರ ಮನೆ ಪೂಜೆಗೆ ಹೋದವರೊಬ್ಬರು ಇವರಿಗೆ ಹೇಳಿದ್ದರಂತೆ. ರೈಸ್ ಕುಕ್ಕರಿನಲ್ಲಿ ಅನ್ನ ಮಾಡಿ, ಪಕ್ಕದಲ್ಲಿ ಒಂದು ಬಟ್ಟಲಿನಲ್ಲಿ ಸಾರು, ಬಡಿಸಿಕೊಳ್ಳಲು ಒಂದೊಂದು ಸ್ಪೂನ್, ಅದರ ಪಕ್ಕ ಚಿಕ್ಕ ಚಿಕ್ಕ ಪ್ಲಾಸ್ಟಿಕ್ ಪ್ಲೇಟುಗಳನ್ನಿಟ್ಟಿರಂತೆ, ಬಂದವರು ಬಡಿಸಿಕೊಳ್ಳಬೇಕು. ಅದು ಊಟ! ರೈಸ್ ಕುಕ್ಕರಿನಲ್ಲಿ ಅನ್ನ ಮುಗಿದರೆ, ಅನ್ನವಾಗುವವರೆಗೂ ಊಟ ಬೇಕೆನ್ನುವವರು ಕಾಯಬೇಕಂತೆ! ನೀವೇ ಪುಣ್ಯವಂತರು, ಪೂರಿ-ಪಲ್ಯವಾದರೂ ಇದ್ದಿತಲ್ಲಾ ಎಂದು ಛೇಡಿಸಿದರು.

ಆಗೊಮ್ಮೆ, ಈಗೊಮ್ಮೆ ಸೂಪರ್ ಮಾರ್ಕೆಟ್ಟಿನಲ್ಲಿ ಇವರುಗಳು ಎದುರಿಗೇ ಸಿಕ್ಕರೂ ಮಾತಿಗೆ ನಿಲ್ಲದೆ ನಕ್ಕು ಕೈ ಬೀಸಿ ಹೊರಟುಬಿಡುತ್ತಿದ್ದೆವು.

ಕಳೆದ ಭಾನುವಾರ ಬೆಳಿಗ್ಗೆ ಸ್ವಲ್ಪ ಬಿಸಿಲಿದ್ದರಿಂದ, ಬಟ್ಟೆ ಒಗೆಯುವ ಕಾರ್ಯಕ್ರಮದಲ್ಲಿದ್ದೆ. ತಲೆಗೆ ಹರಳೆಣ್ಣೆ ಮೆತ್ತಿಕೊಂಡು, ಯಜಮಾನರ ತಲೆಗೂ ಅಷ್ಟು ಮೆತ್ತಿದ್ದೆ. ಅವರು ಕೈತೋಟ ಕೆದಕುವ ಕೆಲಸದಲ್ಲಿದ್ದರು. ಫೋನ್ ರಿಂಗಾದದ್ದು ಕೇಳಿ, " ಯಾರಿರಬಹುದು ಇಷ್ಟು ಬೆಳಿಗ್ಗೆ ಫೋನ್ ಮಾಡುವವರು" ಎಂದುಕೊಳ್ಳುತ್ತಲೇ ಫೋನ್ ಎತ್ತಿದರೆ, ನಮ್ಮ ಜಿಪುಣಾಗ್ರೇಸರು! " ನಿಮ್ಮ ಮನೆಕಡೆಯೇ ಬರುತ್ತಿದ್ದೇವೆ, ನೀವು ಫ್ರೀ ಇದ್ದರೆ, ಬರುತ್ತೇವೆ", ಎಂದರು. " ನೀವು ಫೋನ್ ಮಾಡಿದ್ದು ಒಳ್ಳೆಯದೇ ಆಯಿತು, ಈಗಷ್ಟೇ ನಾವು ಆಕ್ಲೆಂಡಿಗೆ ಹೊರಟಿದ್ದೆವು. ಲಾಕ್ ಮಾಡುತ್ತಿದ್ದೆ, ಫೋನ್ ರಿಂಗಾದ್ದರಿಂದ ಒಳಬಂದೆ ಎಂದೆ. ಅವರೇನಾದರೂ ಮಾತನಾಡುವ ಮೊದಲೇ, ಮತ್ತೆಂದಾದರೂ ಸಿಗೋಣ"ವೆಂದು ಹೇಳಿ ಫೋನಿಟ್ಟೆ.

" ಒಂದೇ ಸಲಕ್ಕೆ ಅವರಿಗೆ ಮನೆಗೆ ಕರೆದು ಉಪಚಾರ ಮಾಡಿ ಸುಸ್ತಾಯಿತಾ, ಅವರಾದರೂ ಬಂದಿದ್ದರೆ ಈ ಕೆಲಸದಿಂದ ತಪ್ಪಿಸಿಕೊಳ್ಳಬಹುದಿತ್ತು. ಭಾನುವಾರವೂ ಆರಾಮವಾಗಿ ಮಲಗಲು ಬಿಡದೇ ಎಬ್ಬಿಸಿ ಎಣ್ಣೆ ಬೇರೆ ಮೆತ್ತಿದ್ದೀಯಾ...ಇನ್ನು ಈ ಕೆಲಸ ಮುಗಿಯುವವರೆಗೂ ನನ್ನ ತಲೆನೆಂದಿಲ್ಲವೆಂದೇ ಸಾಧಿಸುತ್ತೀಯಾ.." ಎಂದು ಯಜಮಾನರು ಗೊಣಗಾಡುತ್ತಿದ್ದರು. ನಮ್ಮ ಮನೆಗೆ ಇದೂವರೆಗೆ ಯಾರಿಗೂ ಬರಬೇಡಿ ಎಂದಿರಲಿಲ್ಲ ನಾನು. ಯಾರೇ ಆಗಿರಲಿ ಅವರನ್ನು ನಮ್ಮವರೆಂದುಕೊಂಡು ಉಪಚರಿಸುತ್ತೇವೆ. ಆದರೆ,ನಮ್ಮ ಒಳ್ಳೆಯತನವನ್ನು ದುರುಪಯೋಗಪಡಿಸಿಕೊಳ್ಳುವವರಿಗಂತೂ ನಮ್ಮ ಮನೆ ಮುಚ್ಚಿದ ಬಾಗಿಲು.

Wednesday, 1 October 2008

ಒಂದು ದಿನದ ಘಟನೆಗಳ ಸುತ್ತ.....

ನಮ್ಮೂರಿನವರು, ಊರಿನಲ್ಲಿ ಪಕ್ಕದ ಮನೆಯವರು ಇಲ್ಲಿ ಏನೋ ಕೆಲಸದ ಮೇಲೆ ಬರುತ್ತಿದ್ದೆವೆಂದು ಹೇಳಿದಾಗ, ಅಷ್ಟೇನೂ ಪರಿಚಯವಿಲ್ಲದಿದ್ದರೂ ಇಷ್ಟು ದೂರ ಬಂದ ಮೇಲೆ ಮನೆಗೆ ಆಹ್ವಾನಿಸದಿದ್ದರೆ ಹೇಗೆಂದು, ಅವರ ಕೆಲಸವೆಲ್ಲವೂ ಮುಗಿದ ಮೇಲೆ ನಾವೇ ಅವರಲ್ಲಿಗೆ ಹೋಗಿ ನಮ್ಮ ಮನೆಗೆ ಕರೆತಂದಿದ್ದೆವು. ಆದರೆ ನಾವಂದುಕೊಂಡಂತೆ ಅವರಿರದಿದ್ದರಿಂದ " ಆ ನೆರೆಯವರು ನಮಗೆ ನಿಜಕ್ಕೂ ಒಂದು ರೀತಿಯಲ್ಲಿ ಹೊರೆಯೇ " ಆಗಿದ್ದರು. ಅನ್ನಲಾರದೇ ಅನುಭವಿಸಲಾರದೇ ಅವರಾಗಿಯೇ ಹೋಗುವವರೆಗೂ ತೆಪ್ಪಗಿದ್ದಿರಬೇಕಾಗಿತ್ತು. ನನಗಂತೂ ಇನ್ನು ಜನ್ಮದಲ್ಲಿ ಅವರನ್ನು ಕರೆಯುವುದೇ ಬೇಡವೆನಿಸುವಷ್ಟು ಸಾಕು ಸಾಕು ಮಾಡಿ ಬಿಟ್ಟಿದ್ದರು. ಹೊರಟವರನ್ನು ಬಾಯಿ ಮಾತಿಗೂ ಮತ್ತೊಮ್ಮೆ ಬನ್ನಿ, ಎಂದಾಗಲಿ, ಹೋಗಿ ಬನ್ನಿ ಎಂದೂ ಅನ್ನಲಿಲ್ಲ. ಇಲ್ಲಿದ್ದ ಸ್ನೇಹಿತರಂತೂ ನನ್ನ ಪರಿಸ್ಥಿತಿಯನ್ನು ಕಂಡು, ಅದು ಹೇಗೆ ಸಂಭಾಳಿಸಿದಿರೋ ಅವರನ್ನು ಎಂದು ಇನ್ನೂ ನನಗೆ ಛೇಡಿಸಿದ್ದರಿಂದ, ಒಂದು ರೀತಿಯಲ್ಲಿ ಅವಮಾನವಾದಂತಾಗಿ ಏನೂ ಹೇಳಲಾಗದೆ, ಯಾರ ಮನೆಗೂ ಹೋಗದೆ, ಯಾರ ಜೊತೆಗೂ ಮಾತನಾಡದೆ, ನನಗೆ ನಾನೇ ಘೋಷಾ ವಿಧಿಸಿಕೊಂಡಿದ್ದೆ.

ಯಜಮಾನರಿಗೆ ಆಕ್ಲೆಂಡಿನಲ್ಲಿ ಒಂದು ದಿನದ ವರ್ಕ್ ಶಾಪಿತ್ತು. ಆಕ್ಲೆಂಡ್ ಟ್ರಿಪ್ಪಿಗೆ ಖಾಯಂ ಗಿರಾಕಿಯಾಗಿದ್ದ ನನ್ನನ್ನು ಈ ಸಲ " ಬರುತ್ತೀಯಾ..." ಎಂದು ಕರೆದಿದ್ದರಿಂದ, ನನಗೂ ಒಬ್ಬಳೇ ಸಾಕಾಗಿದ್ದರಿಂದ " ಬರುತ್ತೇನೆಂದು ತಲೆಯಾಡಿಸಿ ಹೊರಟಿದ್ದೆ.



ಊಟ, ತಿಂಡಿ ಅವರೇ ಕೊಡುತ್ತಾರೆ ಎಂದಿದ್ದರೂ ನಾವು ಮನೆಯಿಂದ ಬುತ್ತಿ ಕಟ್ಟಿಕೊಂಡು ಹೊರಟಿದ್ದೆವು. ಟ್ರೈನಿಂಗ್ ಬಹುಷಃ ಬೇಗನೇ ಮುಗಿದರೂ ಮುಗಿಯಬಹುದು, ನಾನು ಬರುವವರೆಗೂ ಕಾರಿನಲ್ಲೇ ಕುಳಿತಿದ್ದರೆ ಮಾತ್ರ ಶಾಪಿಂಗ್ ಮಾಡಿಸುವುದಾಗಿ ಆಶ್ವಾಸನೆ ಕೊಟ್ಟಿದ್ದರಿಂದ, ಜಾಣೆಯಂತೆ ಮನೆಯಿಂದೊಯ್ದ ನನ್ನ ಕಸೂತಿ ಸಾಮಾಗ್ರಿ ಹಿಡಿದು ಕೂತಿದ್ದೆ. ಸಣ್ಣಗೆ ಬೀಳುತ್ತಿದ್ದ ಮಳೆ ನಿಂತು, ಬಿಸಿಲು ಸ್ವಲ್ಪ ಚುರುಕೆನಿಸುವಷ್ಟು ಬಂದ ಮೇಲೆ, ಕಾರಿನಲ್ಲಿ ಕೂತು ಬೋರೆನಿಸತೊಡಗಿತ್ತು. ಎದುರು ಇರುವ ಪಾರ್ಕಿನಲ್ಲಿ ಒಂದು ರೌಂಡ್ ಹೊಡೆಯೋಣವೆಂದು ಇಳಿದು, ಹಾಗೆ ಕಾಲಾಡಿಸುತ್ತಿದ್ದೆ. ಪಾರ್ಕಿನಲ್ಲಿ ಕುಳಿತವರ " ಹಲೋ, ಹಾಯ್ ಗಳಿಗೆ, ನಾನು ಕೈ ಬೀಸಿ ಪ್ರತಿಕ್ರಿಯಿಸುತ್ತಿದ್ದೆ. ಹಾಗೆಯೇ ಎದುರಿನಿಂದ ಬಂದ ಇಬ್ಬರು ತರಕಾರಿ, ಹಣ್ಣುಗಳನ್ನು ಹಿಡಿದು ಹೊರಟಿದ್ದು ಕಂಡ ನನಗೆ, ಇಲ್ಲೇ ಹತ್ತಿರ ಯಾವುದಾದರೂ ಅಂಗಡಿಯಿರಬಹುದು, ಸುಮ್ಮನೇ ಇಲ್ಲಿ ಸುತ್ತುವ ಬದಲು, ಹೋಗಿ ನೋಡಿದರೆ ಹೆಂಗೆ? ಎಂದು ಅಂದುಕೊಂಡವಳೇ, ದಾರಿಯನ್ನು ಗುರುತಿಟ್ಟುಕೊಳ್ಳುತ್ತಾ ಹೊರಟೆ.

ಹತ್ತಿರದಲ್ಲಿ ಯಾವುದೇ ಅಂಗಡಿಗಳ ಸಾಲು ಕಂಡು ಬರದಿದ್ದುದರಿಂದ, ಇನ್ನೊಂದು ಸ್ವಲ್ಪ ದೂರ ಹೋಗಿ ನೋಡೋಣವೆಂದು, ಹುಡುಕುತ್ತಾ ಹೊರಟ ನನಗೆ, ಇನ್ನೊಂದು ಸ್ವಲ್ಪ, ಇನ್ನೊಂದು ಹತ್ತು ಹೆಜ್ಜೆ, ಎಂದು ಲೆಕ್ಕ ಹಾಕುತ್ತಲೇ ಹೊರಟ ಮೇಲೆ ಯಾವುದೋ ಚೈನೀ ಅಂಗಡಿಯೊಂದು ಕಂಡಿತು. ಇಷ್ಟು ದೂರ ಬಂದ ಮೇಲೆ ಹೋಗಿ ನೋಡಿದರಾಯ್ತು, ತರಕಾರಿ ಇದ್ದರೂ ಇರಬಹುದು ಎಂದುಕೊಳ್ಳುತ್ತಲೇ ಒಳಹೊಕ್ಕೆ. ಫ್ರೆಶ್ ಅನ್ನಿಸುವಷ್ಟಿಲ್ಲದಿದ್ದರೂ, ಬಂದಿದ್ದಕ್ಕೆ ಇರಲಿ ಎಂದು ಬದನೇಕಾಯಿ( ಯಜಮಾನರ ಫೇವರಿಟ್!), ದ್ರಾಕ್ಷಿ ಹಣ್ಣುಗಳನ್ನು ಕೊಂಡು, ಚಿಂಗೀ ಹುಡುಗಿಗೆ ಕಾಸು ಕೊಟ್ಟು ಹೊರಬಂದೆ.


ಸ್ವಲ್ಪ ದೂರ ಹೆಜ್ಜೆ ಹಾಕಿದ ಮೇಲೆ, ಅದ್ಯಾಕೋ ಇದು ನಾನು ಬಂದ ದಾರಿಯಲ್ಲವೆಂದು ಅನ್ನಿಸತೊಡಗಿತ್ತು. ಅಂಗಡಿ ಹುಡುಕುವ ಭರದಲ್ಲಿ, ರೋಡು, ಕ್ರಾಸು ಎಂದು ನೋಡದೆ, ಸುಮ್ಮನೇ ಅಂದಾಜಿನಲ್ಲಿ ಹೊರಟಿದ್ದರಿಂದ, ಈಗ ವಾಪಸು ಹೋಗುತ್ತಿರುವ ದಾರಿ ಸರಿಯೇ ತಪ್ಪೇ ಒಂದೂ ಗೊತ್ತಾಗಲಿಲ್ಲ. ಎಲ್ಲ ಮನೆಗಳೂ ಒಂದೇ ರೀತಿಯಲ್ಲಿದ್ದರಿಂದ, ಎಲ್ಲ ರಸ್ತೆಗಳೂ ಒಂದೇ ತರಹ ಕಾಣುತ್ತಿತ್ತು. ಎಲ್ಲಿಗೇ ಆಗಲಿ, ಒಂದತ್ತು ಸಲ ಹೋಗಿ ಬಂದರಷ್ಟೇ ದಾರಿ ಗೊತ್ತಾಗುತ್ತಿದ್ದ ನನಗೆ, ಈಗ ದಾರಿ ತಪ್ಪಿದ್ದೇನೆಂದು ಗೊತ್ತಾದ ಕೂಡಲೇ ಮೈ ಬೆವರಿದಂತಾಗಿ ಕಾಲು ನಡುಗತೊಡಗಿತ್ತು. ಊರಿನಲ್ಲಿ, ಎದುರಿಗೆ ಸಿಕ್ಕವರನ್ನೋ, ಇಲ್ಲವೇ ಯಾವುದಾದರೂ ಮನೆ ಹೊಕ್ಕು, " ಸ್ವಲ್ಪ ಅಡ್ರೆಸ್ ಹೇಳುತ್ತಿರಾ " ಎಂದು ಸಲೀಸಾಗಿ ಕೇಳುತ್ತಿದ್ದ ನನಗೆ, ಇಲ್ಲಿ ಒಬ್ಬರೂ ಎದುರು ಸಿಕ್ಕದಿದ್ದುದು, ಇನ್ನು ಕಂಡವರ ಮನೆ ಹೊಕ್ಕು ಅಡ್ರೆಸ್ ಕೇಳುವುದಂತೂ ದೂರದ ಮಾತಾಯಿತು! ಅಂತೂ ಧೈರ್ಯ ಮಾಡಿ, ಯಾವುದೇ ಕ್ರಾಸ್ ರೋಡು, ಎಲ್ಲಾದರೂ ಮೇನ್ ರೋಡಿಗೆ ಹೋಗೇ ಹೋಗುತ್ತದೆ ಎಂದು ಸಿಕ್ಕ ಸಿಕ್ಕ ಸ್ಟ್ರೀಟು, ಕ್ರಾಸುಗಳೆಲ್ಲವನ್ನೂ ಹೊಕ್ಕ ಮೇಲೆ ಮೇನ್ ರೋಡೇನೋ ಸಿಕ್ಕಿತು, ಆದರೆ ಅದು ನಾನು ಬಂದದ್ದಲ್ಲ!

ಮೊಬೈಲನ್ನು ಮರೆತು ಕಾರಿನಲ್ಲೇ ಬಿಟ್ಟು ಬಂದಿದ್ದರಿಂದ, ಯಜಮಾನರಿಗೆ ಫೋನ್ ಮಾಡುವ ಹಾಗಿಲ್ಲ. ವಾಪಸ್ ಚಿಂಗೀ ಅಂಗಡಿಗೆ ಹೋಗಿ, ಅವಳಿಗೆ ಅಡ್ರೆಸ್ ಕೇಳಿದರಾಯ್ತು ಎಂದು ಕೊಂಡರೂ, ಮೇನ್ ರೋಡ್ ಹುಡುಕುವ ಭರದಲ್ಲಿ, ಈಗ ಚಿಂಗೀ ಅಂಗಡಿಯೂ ಮರೆತುಹೋಯಿತು. ಸುಮ್ಮನೇ ರಸ್ತೆಯಲ್ಲಿ ನಿಂತರೆ, ಕಾರಿನಲ್ಲಿ ಓಡಾಡುವರು ಏನೆಂದುಕೊಳ್ಳುತ್ತಾರೋ ಏನೋ , ತೆಪ್ಪಗೆ ಕಾರಿನಲ್ಲಿ ಕೂತಿದ್ದರೆ, ಈ ಅವಾಂತರವಿರುತ್ತಿತ್ತೇ? ತಪ್ಪೆಲ್ಲವೂ ನನ್ನದೇ ಆದ್ದರಿಂದ, ನನಗೆ ನಾನೇ ಬೈಯ್ದುಕೊಳ್ಳುತ್ತ ಹೊರಟಿದ್ದ ನನಗೆ, ದಾರಿಯ ಬದಿಯಲ್ಲಿ, ಕಳೆಯಂತೆ ಬೆಳೆದಿದ್ದ " ಗಣಕೆ ಸೊಪ್ಪ" ನ್ನು ಕಂಡು, ಹೇಗೂ ದಾರಿ ತಪ್ಪಿ ಸುತ್ತುತ್ತಿದ್ದೇನೆ, ಇದನ್ಯಾಕೆ ಬಿಡಲಿ, ಎಂದು ಎಲೆಗಳನ್ನು ಆರಿಸಿ ಕಿತ್ತು ನನ್ನ ತರಕಾರಿ ಕವರಿಗೆ ಸೇರಿಸಿದೆ.


ಸಣ್ಣಗೆ ಮಳೆ ಬೇರೆ ಶುರುವಾಗತೊಡಗಿತ್ತು. ಈಗ ಯಾರನ್ನಾದರೂ ಅಡ್ರೆಸ್ ಕೇಳದೇ ವಿಧಿಯಿರಲಿಲ್ಲ. ದೂರದಲ್ಲಿ ಪೆಟ್ರೋಲ್ ಬಂಕೊಂದು ಕಂಡಿದ್ದರಿಂದ, ಅಲ್ಲಿಯೇ ಹೋಗಿ ಕೇಳೋಣವೆಂದು ಅತ್ತ ಜೋರು ಹೆಜ್ಜೆ ಹಾಕತೊಡಗಿದ್ದೆ. ಅಷ್ಟರಲ್ಲಿ ಹಿಂದೆ ದಾಪ್!ದಾಪ್! ಎಂದು ಯಾರೋ ಓಡಿ ಬರುತ್ತಿರುವ ಸದ್ದಾಗಿದ್ದರಿಂದ, ತಿರುಗಿದರೆ, ಯಾರೋ ಇಂಡಿಯನ್ ರನ್ನಿಂಗ್ ಮಾಡಿಕೊಂಡು ಬರುತ್ತಿದ್ದಾಳೆ! ಅವಳು ಹತ್ತಿರ ಬರುತ್ತಿದ್ದಂತೆ, ಅವಳಿಗೆ ಹಲ್ಲು ಕಿರಿದು ನಿಂತೆ. ಅವಳೋ, ನಿಲ್ಲದೇ, ನನ್ನ ಕವರಿನಲ್ಲಿದ್ದ ಗಣಕೆ ಸೊಪ್ಪಿನ ಕಡೆ ಕೈ ತೋರಿಸುತ್ತಾ.." ಡೋಂಟ್ ಈಟ್, ದಟೀಸ್ ಪಾಯಿಸನಸ್ " ಎಂದು ಮುಖ ಗಂಟಿಕ್ಕಿಕೊಳ್ಳುತ್ತಾ ವದರಿ ಓಡಿಯೇ ಹೋದಳು. " ಇದೊಳ್ಳೆ ಕಥೆಯಾಯಿತಲ್ಲಾ, ನಾನು ನಕ್ಕರೆ ನಗುವುದಿರಲಿ, ನನ್ನ ಗಣಕೆ ಸೊಪ್ಪನ್ನು ವಿಷ ಎಂದು ಬೈಯ್ದಳಲ್ಲಾ, ಈ ರಂಭೆಗೇನು ಗೊತ್ತು? ಗಣಿಕೆ ಸೊಪ್ಪಿನ ಮಹಿಮೆ? ಜನ್ಮದಲ್ಲಿ ಒಮ್ಮೆಯಾದರೂ ತಿಂದಿದ್ದಾಳೊ ಇಲ್ಲವೋ? ಅಥವಾ ಇಲ್ಲಿಗೆ ಬಂದ ಮೇಲೆ ಇಂಡಿಯಾದ ಸೊಪ್ಪು ತರಕಾರಿಗಳೆಲ್ಲಾ ಅವಳಿಗೆ ವಿಷವೆನಿಸಿರಬೇಕು. ಬರ್ಗರ್, ಚೀಸು, ಮಣ್ಣು ಮಸಿ ಚೆನ್ನಾಗಿ ತಿಂದು ಈಗ ಮೈ ಕರಗಿಸಲು ರನ್ನಿಂಗ್ ಬೇರೆ! , ದೊಡ್ಡ ಮೇಧಾವಿ ತರ ಹೇಳಿಬಿಟ್ಟಳಲ್ಲಾ ...ಇವಳಿಗೆ ತೂಕ ಇಳಿಯದೇ ಇರಲಿ ಎಂದು ಶಾಪ ಕೊಟ್ಟು, ಇವಳು ಅಡ್ರೆಸ್ ಹೇಳದಿದ್ದರೆ, ಕತ್ತೆ ಬಾಲ...ಇವಳಲ್ಲದಿದ್ದರೆ ಇನ್ನೊಬ್ಬಳನ್ನು ನಿಲ್ಲಿಸಿ ಕೇಳಿದರಾಯ್ತು ಎಂದು ಸಿಟ್ಟಿನಿಂದಲೇ ಬೇಗ ಬೇಗ ಹೊರಟೆ.

ಯಜಮಾನರೇನಾದರೂ ಟ್ರೇನಿಂಗ್ ಬೇಗ ಮುಗಿಯತಲ್ಲಾ ಎಂದು ಹೊರಬಂದರೆ ಹೇಗಿರುತ್ತದೆ?! ಕಾರ್ ಕೀ ನನ್ನ ಹತ್ತಿರವೇ ಇದೆ. ಕಾರಿನಲ್ಲಿ ನಾನಿಲ್ಲದನ್ನು ಕಂಡರೆ, ಹೊರಗೆ ಸುತ್ತಾಡಬೇಡವೆಂದರೂ ಎಲ್ಲೋ ಸುತ್ತಲು ಹೋಗಿದ್ದಾಳೆ ಎಂದು ಮೊಬೈಲಿಗೆ ರಿಂಗ್ ಕೊಟ್ಟರೇ, ಮೊಬೈಲು ಕಾರಿನಲ್ಲೇ ಇದೆ..! ಎಲ್ಲಿ ಹೋದಳಪ್ಪಾ, ಎಂದು ಒಂದತ್ತು ನಿಮಿಷ ಕಾಯುತ್ತಾರೆ... ಆಗ ಅವರಿಗೆ ಏನೇನು ಆಲೋಚನೆಗಳು ಬರಬಹುದು..ಎಂದು ಯೋಚಿಸುತ್ತಾ, ಅಂತಹ ಸ್ಥಿತಿಯಲ್ಲೂ ನಗು ಬಂತು.


ನನ್ನದೇ ಲೋಕದಲ್ಲಿ ಚಿಂತಿಸುತ್ತಾ ನಡೆಯುತ್ತಾ ನನಗೆ ಎದುರಿನಿಂದ ಬರುತಿದ್ದ ಬಿಳಿಯನೊಬ್ಬ " ನಮಸ್ತೇ" ಎಂದಿದ್ದನ್ನು ಕೇಳಿ, ಇವನೇನಾದರೂ ನನಗೆ ಮಾತನಾಡಿಸಿದನೇ? ಅಥವಾ ಯಾರಾದರೂ ಸಿಕ್ಕಿದರೆ ಅಡ್ರೆಸ್ ಕೇಳುತ್ತೇನೆಂದು ಹೋಗುತ್ತಿರುವ ನನಗೆ ಭ್ರಮೆಯೇ? ಇಲ್ಲ! ಬಿಳಿಯ ಎರಡೂ ಕೈ ಮುಗಿದು ನಿಂತಿದ್ದನ್ನು ಕಂಡು, ನಾನು ಬ್ಬೆಬ್ಬೆಬ್ಬೆ ಎಂದು ನಿಂತೆ. ನಿಜಕ್ಕೂ ನಂಬಲಾಗುತ್ತಿಲ್ಲ! ಸ್ವಚ್ಛ ಹಿಂದಿಯಲ್ಲಿ, ಮತ್ತೊಮ್ಮೆ, " ನಮಸ್ಕಾರ್! ಮೇರಾ ನಾಮ್ ಆಂಡ್ರ್ಯೂ. ತುಮಾರಾ ನಾಮ್ ಕ್ಯಾ ಹೈ " ಅಂದಾಗ ನನಗೆ ಸ್ವರ್ಗ ಮೂರು ಗೇಣು!. ಎರಡೂ ಕೈಲಿದ್ದ ಪ್ಲಾಸ್ಟಿಕ್ ಕವರುಗಳನ್ನು ಬಿಟ್ಟು, ನಾನೂ ಎರಡು ಕೈ ಜೋಡಿಸಿ, " ನಮಸ್ಕಾರ್ !" ಎಂದೆ. ಮೊನ್ನೆ ಮೊನ್ನೆ ತಾನೇ ಕೆಲವೊಂದು ಬ್ಲಾಗುಗಳಲ್ಲಿ " ಹಿಂದೀ ವಿರೋಧ"ದ ಬಗ್ಗೆ ಓದಿದ್ದ ನಾನು, ಇನ್ನು ಮೇಲೆ ನನಗೆ ಬರುವ ಅರಬರೆ ಹಿಂದಿಯನ್ನು ಇಲ್ಲಿರುವ ನಾರ್ತಿಗಳ ಜೊತೆ ಮಾತನಾಡಬಾರದು, ಅವರಿಗೆ ಕನ್ನಡ ಕಲಿಸ ಬೇಕೆಂದು ಯಜಮಾನರಿಗೂ ಹೇಳಿದ್ದೆ. ಈಗ ನಮ್ಮವನಲ್ಲದವನೊಬ್ಬ ನಮ್ಮ ಭಾಷೆಯನ್ನು ಕಲಿತು, ಮಾತನಾಡಿದ್ದನ್ನು ಕಂಡು ನಿಜಕ್ಕೂ ಖುಷಿಯಾಯಿತು.


ಆಂಡ್ರ್ಯೂ ಇಂಗ್ಲೆಂಡಿನವನಂತೆ. ಅವನ ಭಾರತೀಯ (ಕೇರಳ ಮೂಲದ) ಸ್ನೇಹಿತ ಹಿಂದಿ ಕಲಿಸಿದ್ದಂತೆ. " ಪರವಾಗಿಲ್ಲವೇ! ಮಲಯಾಳಿಗಳೂ ಹಿಂದಿ ಮಾತನಾಡುತ್ತಾರೆಯೇ?! ಬರೀ ಕನ್ನಡದವರಷ್ಟೇ ಕನ್ನಡ ಬಿಟ್ಟು ಉಳಿದೆಲ್ಲಾ ಭಾಷೆ ಮಾತನಾಡುತ್ತಾರೆಂದುಕೊಂಡಿದ್ದೆನೆಲ್ಲಾ! ಪರದೇಶದವನಿಗೆ ಇದ್ದ ಆರು ತಿಂಗಳಲ್ಲಿ ಹಿಂದಿ ಕಲಿಸಿದ್ದಾನಲ್ಲ" ಎಂದು ಸಂತೋಷವಾಯಿತು. ಬಹುಷಃ ಮಲಯಾಳಿ ಭಾಷೆ ಕಲಿಸಲೂ ಪ್ರಯತ್ನ ಪಟ್ಟಿದ್ದನೋ ಏನೋ! ನಮಗೇ ಆ ಭಾಷೆ ಕಲಿಯಲು ನಾಲಿಗೆ ತಿರುಗಲು ಕಷ್ಟ! (ನನಗಂತೂ ಕಡು ಕಷ್ಟ!) ಅದಕ್ಕೆ ಸುಲಭವೆಂದು ಇವನಿಗೆ ಹಿಂದಿ ಕಲಿಸಿದ್ದಾನೆನಿಸಿತು. ನಾನೂ ನನ್ನ ಗ್ರಾಮರ್ ಇಲ್ಲದ ಹಿಂದಿಯಲ್ಲಿ ಅವನೊಂದಿಗೆ ಸಂಭಾಷಣೆ ನಡೆಸಿದ್ದೆ. ಪೆಟ್ರೋಲು ಬಂಕು ಹತ್ತಿರ ಬರುತ್ತಲೇ, ಅವರಿವರನ್ನು ಅಡ್ರೆಸ್ ಕೇಳುವ ಬದಲು ಆಂಡ್ರ್ಯೂಗೇ ಕೇಳಿದರಾಯ್ತು...ಎಂದು ನಾನು ಅಡ್ರೆಸ್ ತಪ್ಪಿ ಹುಡುಕಾಡುತ್ತಿದ್ದುದನ್ನು ಅವನಿಗೆ ಸಂಕೋಚದಿಂದಲೇ ಹೇಳಿದೆ. ಅವನೋ ನನ್ನ ಮುಖವನ್ನೇ ಒಂದೆರಡು ಕ್ಷಣ ದಿಟ್ಟಿಸಿ, ನಾನು ನಡೆದು ಬಂದಿದ್ದ ದಿಕ್ಕಿಗೆ ಸಂಪೂರ್ಣ ವಿರುದ್ಧ ದಿಕ್ಕಿಗೆ ನಡೆಯಲು ಹೇಳಿದ್ದನ್ನು ಕಂಡು, ಭಯವೆನಿಸಿತ್ತು. ಏನೋ, ನಮ್ಮ ಭಾಷೆಯಲ್ಲಿ ಮಾತನಾಡಿದ್ದಕ್ಕೆ ನಾನು ಖುಷಿಯಾಗಿದ್ದನ್ನು, ಇವನೇನಾದರೂ ಅಪಾರ್ಥಮಾಡಿಕೊಂಡನೋ, ಅಥವಾ ನಿಜಕ್ಕೂ ನನಗೆ ಅಡ್ರೆಸ್ ಹೇಳುತ್ತಿದ್ದಾನೋ ಮತ್ತೆ ಗೊಂದಲ ಶುರುವಾಯಿತು. ನಾನು ಕೇಳಿದ ಅಡ್ರೆಸ್ಸಿಗೆ ನನ್ನನ್ನು ಬಿಟ್ಟು ಹೋಗುವುದಾಗಿ ಹೇಳಿದಾಗ, ಸರಿ ಹೇಗೂ ನಡೆದುಕೊಂಡು ತಾನೇ ಹೋಗುವುದು...ಏನಾಗುತ್ತದೋ ನೋಡಿಯೇ ಬಿಡೋಣವೆಂದು ಹೆಜ್ಜೆ ಹಾಕಿದೆ. ಅವನಿಗೆ ಬಾಲಿವುಡ್ ಸಿನೆಮಾಗಳು ಇಷ್ಟವೆಂದೂ, ಮದುವೆಯೆಂದರೆ ಎಲ್ಲರೂ ಹಾಗೆಯೇ ಮಾಡುತ್ತಾರೆಯೇ? ನಿನ್ನ ಗಂಡನೂ ಮದುವೆ ದಿನ ಕುದುರೆಯ ಮೇಲೆ ಕೂತು ಬಂದನೇ? ಎಂದೆಲ್ಲಾ ಕೇಳಿದ ಅವನ ಪ್ರಶ್ನೆಗಳಿಗೆ ಉತ್ತರಿಸುತ್ತಾ, ನಾನೂ " ನೀವುಗಳು ಅದು ಹೇಗೆ ಅಮ್ಮ, ಅಪ್ಪಂದಿರನ್ನು ರೆಸ್ಟ್ ಹೋಮಿಗೆ ಬಿಡುತ್ತೀರಾ? ಮಿಸ್ ಮಾಡುವುದಿಲ್ಲವೇ?" ಎಂದು ಕೇಳಿದ್ದಕ್ಕೆ, " ರೆಸ್ಟ್ ಹೋಮ್, ಮೊದಲು ವಯಸ್ಸಾದವರನ್ನು ನೋಡಿಕೊಳ್ಳುವವರಿದ್ದರೆ, ಅನುಕೂಲವಾಗಲೆಂದು ಸರ್ಕಾರ ರೆಸ್ಟ್ ಹೋಮುಗಳನ್ನು ಶುರು ಮಾಡಿದ್ದು, ಬರ ಬರುತ್ತಾ ಅದು ಹೀಗಾಗಿರುವುದು, ಎಲ್ಲವೂ ಶುಚಿಯಾಗಿ ನಡೆಸುತ್ತಾರೆಂದು ಇಲ್ಲ. ಕೆಲವೊಂದು ರೆಸ್ಟ್ ಹೋಮ್ ಗಳಲ್ಲಿ ವಯಸ್ಸಾದವರನ್ನು ಸರಿಯಾಗಿ ನೋಡಿಕೊಳ್ಳುವುದೇ ಇಲ್ಲ. ಆಗೆಲ್ಲಾ ರೆಸ್ಟ್ ಹೋಮಿನಲ್ಲಿರುವ ಅಪ್ಪ ಅಮ್ಮನನ್ನು ನೆನಸಿಕೊಂಡು ಬೇಜಾರಾಗುತ್ತದೆ" , ಎಂದ.


ಸುಮಾರು ಒಂದರ್ಧ ಗಂಟೆ ನಡೆದ ಮೇಲೆ, ನನಗೇ ಸ್ವಲ್ಪ ರೋಡಿನ ಗುರುತು ಹತ್ತಿತು. ಆಂಡ್ರ್ಯೂಗೆ ನಾನು ಹಿಂದಿಯಲ್ಲೇ ಮಾತನಾಡಿದ್ದು ಖುಷಿಯಾಯಿತಂತೆ! ನಾನು ಹೇಳಿದೆ, ನಾವು ಭಾರತೀಯರು, ಕಡಿಮೆಯೆಂದರೂ ಮೂರು, ನಾಲ್ಕು ಭಾಷೆ ಮಾತನಾಡುತ್ತೇವೆ ಎಂದು ಜಂಭ ಕೊಚ್ಚಿಕೊಂಡೆ! ನಮ್ಮ ಕಾರನ್ನು ಕಂಡ ಮೇಲೆ ಸ್ವಲ್ಪ ಉಸಿರು ಬಂದಂತಾಯಿತು. ಅವನಿಗೆ ಧನ್ಯವಾದ ಹೇಳಿ, ಬಿಡುವಿದ್ದರೆ, ಯಜಮಾನರು ಬರುವವರೆಗೂ ಇರು, ಪರಿಚಯಿಸುತ್ತೇನೆ, ಎಂದಿದ್ದಕ್ಕೆ ’ ಫಿರ್ ಮಿಲೆಂಗೇ" ಎಂದು ನಕ್ಕು ಹೊರಟ.

ಅಬ್ಬಬ್ಬಾ ಎಂದರೆ ಒಂದೆರಡು ಗಂಟೆಗಳಷ್ಟೇ ಸುತ್ತಾಡಿದ್ದು, ಆದರೆ ದಾರಿ ತಪ್ಪಿಸಿಕೊಂಡಾಗ ಆದ ಗಾಬರಿ, ನಡುಕ ಮರೆಯಲಾರದಂತದು. ಅದೇ ವೇಳೆಗೆ ಆಂಡ್ರ್ಯೂ ತರದ ವ್ಯಕ್ತಿಯ ಪರಿಚಯವೂ ಮರೆಯಲಾಗದಂತದು.


ಕಾರಿನಲ್ಲಿ ಕೂತು ಮೆಲಕು ಹಾಕುತ್ತಿದ್ದ ನನಗೆ, ಯಾರೋ ಇಬ್ಬರು ಹೆಂಗಸರು, ನಮ್ಮ ಕಾರಿನ ಹತ್ತಿರ ಬಂದಿದ್ದನ್ನು ಕಂಡು ಗಾಜು ಕೆಳಗಿಳಿಸಿದೆ. ಒಬ್ಬಳು ಬಿಳಿ ಹೆಂಗಸು, ಮತ್ತೊಬ್ಬಳು ಫಿಜೀ ಇಂಡಿಯನ್ನು ಇರಬೇಕು. " ರಿವರ್ಸ್ ತೆಗೆದುಕೊಳ್ಳುವಾಗ, ನಿನ್ನ ಕಾರಿಗೆ ಸ್ವಲ್ಪ ತಾಗಿತು, ಆಗಿನಿಂದ ಇಲ್ಲೇ ಕಾಯುತ್ತಿದ್ದೆ, ಸಾರಿ...ಅದಕ್ಕೆ ಎಷ್ಟಾಗುತ್ತದೆ ಖರ್ಚು." ಎಂದು ಕೇಳಿದಾಗ, ಒಂದು ಕ್ಷಣ ಭಯವಾಯಿತು. ಇದು ಅನಿಲರ ಆಸ್ಪತ್ರೆಯ ಕಾರು. ಏನಾದರೂ ಹೆಚ್ಚು ಕಡಿಮೆಯಾದರೆ, ನಮ್ಮ ತಲೆಗೇ ಬರುತ್ತದೆ ಎಂದು ದಡಬಡಿಸಿ ಇಳಿದು ನೋಡಿದರೆ, ನಂಬರು ಪ್ಲೇಟಿನ ಮೇಲೆ ಎಲ್ಲೋ ಸ್ವಲ್ಪ ಕಂಡರೂ ಕಾಣದ ಹಾಗೆ ಸ್ವಲ್ಪ ಗೀಚಾಗಿತ್ತು. ಜೊತೆಯಲ್ಲಿದ್ದ ಫಿಜೀ ಇಂಡಿಯನ್ನಿಗೆ ನಾನು ಇಂಡಿಯನ್ನು ಎಂದು ಗೊತ್ತಾದ ಕೂಡಲೇ," ಅಷ್ಟೇನೂ ಕಾಣಿಸುವುದಿಲ್ಲ ಅಲ್ಲವೇ? ನಾವು ಹೇಳಿದ್ದಕ್ಕೆ ಗೊತ್ತಾಯಿತು.." ಎಂದಳು ಹಿಂದಿಯಲ್ಲಿ. ಅವಳ ಮಾತಿನ ಧೋರಣೆ ನೋಡಿ, " ಇದು ನನ್ನ ಕಾರಲ್ಲ, ಕೆಲಸದ ಕಾರು, ಏನಾದರೂ ಹೆಚ್ಚು ಕಡಿಮೆಯಾದರೆ ನಾವೇ ದಂಡ ತೆರಬೇಕು. ನನ್ನ ಕಾರಿದ್ದರೆ, ಹೋಗಲಿ ಬಿಡು ಅನ್ನಬಹುದಿತ್ತು" ಎಂದು ಸಿಡುಕಿದೆ. ಈಗ ತಾನೆ, ಒಬ್ಬ ಬಿಳಿಯ ನನಗೆ ಸಹಾಯ ನೀಡಿ ಹೋದ, ಈ ಫಿಜೀ ಇಂಡಿಯನ್ನು ಬಿಳೀ ಹೆಂಗಸಿನ ಪರವಾಗಿ ಮಾತನಾಡಿದ್ದು ಕಂಡು ಸಿಟ್ಟು ಬಂತು. ಆದರೂ ಬಿಳಿಯಳಿಗೆ ಏನನ್ನಿಸಿತೋ, ನನ್ನ ಮೊಬೈಲು ನಂಬರು ತೆಗೆದುಕೋ, ಅದೇನೇ ಖರ್ಚಿದ್ದರೂ ನಾನು ಕೊಡುತ್ತೇನೆ" ಎಂದಳು. " ಇರಲಿ ಬಿಡು, ಪರವಾಗಿಲ್ಲ" ಎಂದಿದಕ್ಕೆ, ಒಂದಷ್ಟು ಸಲ " ಥ್ಯಾಂಕ್ಸು...ಥ್ಯಾಂಕ್ಸು " ಹೇಳಿ ಹೋದಳು.


ಇಷ್ಟೆಲ್ಲಾ ನಡೆದರೂ, ಇನ್ನೂ ಯಜಮಾನರ ಸುಳಿವಿಲ್ಲದನ್ನು ಕಂಡು, ಬೇಗ ಮುಗಿಸಿ ಹೊರ ಬಂದು, ನನ್ನನ್ನು ಹುಡುಕುತ್ತಾ ಹೊರಟಿಲ್ಲವಷ್ಟೇ? ಎಂದು ಅವರ ಮೊಬೈಲಿಗೆ ರಿಂಗು ಕೊಟ್ಟೆ. ಕರೆಯನ್ನು ಮೊಟಕುಗೊಳಿಸಿದಾಗ, ಸರಿ ಇನ್ನೂ ಒಳಗಿದ್ದಾರೆ ಎಂದು ಸ್ವಲ್ಪ ಸಮಾಧಾನವಾಯಿತು.

ಅವರಿಗೆ ಇದೆಲ್ಲಾ ಹೇಳುವುದೇ ಬೇಡ, ಸುಮ್ಮನೇ ಬೈಸಿಕೊಳ್ಳಬೇಕಾಗುತ್ತದೆ, ಯಾವಾಗಲಾದರೂ ಹೇಳಿದರಾಯಿತು ಎಂದು ಸುಮ್ಮನೆ ಕೂತೆ. ಹೊರಬಂದ ಯಜಮಾನರಿಗೆ ನಾನು ಕಾರಿನಲ್ಲೇ ಕೂತಿದನ್ನು ಕಂಡು ಖುಷಿಯಾಗಿ, "ಈಗ ಯಾವ ಕಡೆ ಹೊರಡೋಣ" ಎಂದರು. ನನಗೋ ದಾರಿ ತಪ್ಪಿ ನಡೆದದ್ದು, ಗಾಬರಿ, ಖುಷಿ ಎಲ್ಲವೂ ಸೇರಿ, ಶಾಪಿಂಗೂ ಬೇಡ, ಏನೂ ಬೇಡ ಅನ್ನಿಸಿತ್ತು. " ಎಲ್ಲಿಗೂ ಬೇಡ, ನನಗೆ ನಡೆದೂ ನಡೆದೂ ಸುಸ್ತು, ಎನಾದರೂ ತಿಂದು ಹೊರಡೋಣ, ನನಗೆ ಸಾಕಾಗಿದೆ" ಎಂದು ಬಿಟ್ಟೆ! ಅದೆಲ್ಲಿಗೆ ನಡೆದುಕೊಂಡು ಹೋಗಿದ್ದೆ? ಸುಸ್ತಾಗುವಷ್ಟು? ಎಲ್ಲೂ ಹೋಗಬೇಡ ಎಂದಿರಲಿಲ್ಲವೇ?" ಎಂದು ಯಜಮಾನರ ಪ್ರಶ್ನೆಗಳಿಗೆ, ತಟ್ಟನೇ ನನ್ನ ತಪ್ಪಿನರಿವಾಯಿತು. " ಇಲ್ಲೇ ಪಾರ್ಕಿನಲ್ಲಿ ಸುತ್ತುತ್ತಿದ್ದೆ, ನೀವು ನೋಡಿದರೆ ಬೇಗ ಬರುತ್ತೇನೆಂದು ಇಷ್ಟು ಲೇಟಾ ಬರುವುದು? ಎಷ್ಟೂ ಅಂತ ಒಬ್ಬಳೇ ಕಾರಿನಲ್ಲಿ ಕೂರುವುದು? ಇದೇ ಕಡೆ, ಇನ್ನೊಮ್ಮೆ ನಾನು ಬರುವುದಿಲ್ಲ.." ಎಂದು ನಾನು ಎಲ್ಲ ಸಿಟ್ಟನ್ನೂ ಯಜಮಾನರ ಮೇಲೆ ಹಾಕಿದೆ. " ಆಯ್ತು ..ಆಯ್ತು...ನಡೆದೂ ಸುಸ್ತಾಯಿತು ಎಂದೆಯಲ್ಲಾ, ಅದಕ್ಕೇ ಕೇಳಿದೆ" ಎಂದ ಯಜಮಾನರಿಗೆ ಉತ್ತರಿಸಿದರೆ, ಮತ್ತೆಲ್ಲಿ ನನ್ನ ಬಂಡವಾಳ ಹೊರಬೀಳುವುದೋ ಎಂದು ಸುಮ್ಮನೇ ಕೂತೆ.


ಶಾಪಿಂಗೇನೂ ಬೇಡ ಎಂದಿದ್ದರಿಂದ ಸೀದಾ ಮನೆ ದಾರಿ ಹಿಡಿದಿದ್ದೆವು. ಸಬ್ ವೇನಲ್ಲಿ ಏನಾದರೂ ತಿಂದು ಹೊರಡೋಣವೆಂದ ಯಜಮಾನರ ಮಾತಿಗೆ ತಲೆಯಾಡಿಸಿ ಕೆಳಗಿಳಿದೆ. ಯಜಮಾನರು ಮೆನು ಸೆಲೆಕ್ಟ್ ಮಾಡಲು ಹೋದ್ದರಿಂದ ನಾನು ಖಾಲಿಯಿದ್ದ ಕುರ್ಚಿಗಳ ಕಡೆ ನಡೆದಿದ್ದೆ. ಅಷ್ಟರಲ್ಲೇ ಯಾರೋ ಬಿಳೀ ಹೆಂಗಸೊಬ್ಬಳು ಕೈ ಬೀಸಿದ್ದರಿಂದ, ಇದ್ಯಾರು? ಎಂದು ನೋಡಿದರೆ, ಕಾರಿಗೆ ಗುದ್ದಿದವಳು! ಯಾರೋ ಗಂಡಸಿನ ಜೊತೆ ಕೂತು ತಿನ್ನುತ್ತಿದ್ದವಳು, ನನ್ನನ್ನು ಗುರುತು ಹಿಡಿದು ಕೈ ಬೀಸಿದ್ದಳು. ನಾನು ಕೈ ಬೀಸಿ, ಖಾಲಿಯಿದ್ದ ಕುರ್ಚಿಯನ್ನೆಳೆದು ಕೂತೆ. ತಿಂಡಿ ಟ್ರೇ ಹಿಡಿದು ಬಂದ ಯಜಮಾನರು " ಅದ್ಯಾರು ನಿನ್ನ ಫ್ರೆಂಡು? " ಎಂದಿದ್ದಕ್ಕೆ, ಏನೂ ಅಲೋಚಿಸದೆ, " ಅವಳಾ? ನಮ್ಮ ಕಾರಿಗೆ ಗುದ್ದಿದವಳು" ಎಂದು ಬಿಟ್ಟೆ. " ನಮ್ಮ ಕಾರಿಗೆ ಯಾವಾಗ ಗುದ್ದಿದ್ದರು? ಯಾವ ಕಾರು? ಅಷ್ಟಕ್ಕೂ ಮಧ್ಯಾಹ್ನ ನೀನೆಲ್ಲಿ ಹೋಗಿದ್ದೆ ನಿಜ ಹೇಳು" ಎಂದ ಯಜಮಾನರ ಪ್ರಶ್ನೆಗಳಿಗೆ " ಇನ್ನು ಸುಳ್ಳು ಹೇಳಿ ದಕ್ಕಿಸಿಕೊಳ್ಳಲು ಸಾಧ್ಯವಿಲ್ಲ" ಎಂದು ನಿರ್ಧರಿಸಿ, ನಡೆದ ಸಂಗತಿಯೆಲ್ಲವನ್ನೂ ಚಾಚೂ ತಪ್ಪದೆ ಹೇಳಿ ಬಿಟ್ಟೆ. ಯಜಮಾನರೂ ಏನೂ ಮಾತನಾಡದೆ ಸೀರಿಯಸ್ಸಾಗಿ ಸುಮ್ಮನೇ ತಿನ್ನುತ್ತಿದ್ದರು. ಅವರೇನೂ ಮಾತನಾಡದಿದ್ದರಿಂದ ಯಾಕೋ ಪರಿಸ್ಥಿತಿ ಗಂಭೀರವಾಗಿದೆ ಎಂದೆನಿಸಿ, " ನಾನು ಕಾರಿನಲ್ಲೇ ತಿನ್ನುತ್ತೇನೆ, ಈಗ ಹಸಿವಿಲ್ಲ" ಎಂದು ತಿಂಡಿ ಪ್ಯಾಕೆಟು ಹಿಡಿದು ಎದ್ದೆ.


ದಾರಿಯಲ್ಲಿ ಬರುವಾಗ ಏನೂ ಮಾತನಾಡದೆ ಕೇಳಿದ್ದಕ್ಕೆ ಬರೀ ’ ಹಾಂ....ಹೂಂ’ ಎನ್ನುತ್ತಿದ್ದರಿಂದ ಅವರಿಗೆ ಸಿಟ್ಟು ಬಂದಿದೆಯೆಂದು ಅರಿವಾಗಿ ನಾನು ತೆಪ್ಪಗಿದ್ದೆ. ಮನೆಗೆ ಬಂದು ಊಟ ಮಾಡುವಾಗಲೂ ಸುಮ್ಮನಿದ್ದವರು, " ಇನ್ಮೇಲೆ ನನ್ನ ಕೆಲಸವಿದ್ದಾಗ ನೀನು ಅಕ್ಲೆಂಡಿಗೆ ಬರುವುದು ಬೇಡ, ಹೀಗೆ ಏನಾದರೂ ಮಾಡಿ ಒಂದು ದಿನ ನನ್ನ ತಲೆಗೆ ತಂದು ಇಡುತ್ತೀಯಾ.." ಎಂದಾಗ ನನಗೂ ಸಿಟ್ಟು ಬಂತು. " ನನಗೇನು ದಾರಿ ಗೊತ್ತಾಗದಿದ್ದರೆ, ಬಾಯಿಲ್ಲವೇ? ಕೇಳಲು? ಯಾರೂ ಸಿಕ್ಕದಿದ್ದರಿಂದ ಇಷ್ಟೆಲ್ಲಾ ಆಗಿದ್ದು, ಎಲ್ಲಿಗೂ ಕರೆದುಕೊಂಡು ಹೋಗದಿದ್ದರೆ ಅಷ್ಟೇ ಹೋಯಿತು, ನಾನೇ ಹೋಗುತ್ತೇನೆ" ಎಂದೆ. " ಅದ್ಯಾರಿಗೆ ಹೆದರಿಸುತ್ತೀಯಾ? ಹೀಗೆ ಆಡುತ್ತಿರು, ನೀನೇ ಹಾಡುತ್ತಿರುತ್ತೀಯಲ್ಲಾ, " ಎಲ್ಲರಂತಹವನಲ್ಲಾ ನನ ಗಂಡಾ....ಎಲ್ಲು ಹೋಗದ ಹಾಂಗ ಮಾಡಿಟ್ಟಾ, ಕಾಲ್ಮುರಿದು ಬಿಟ್ಟಾ! " ಅಂತ ಹಾಗೆಯೇ ಕಾಲು ಮುರಿದು ಕೂರಿಸುತ್ತೇನೆಂದು" ತಮಾಷೆ ಮಾಡಿದರು. " ಈ ದೇಶದಲ್ಲಿ ಇವೆಲ್ಲಾ ಆಗದ ಮಾತುಗಳು, ನನ್ನ ಕಾಲಿನ ತಂಟೆಗೆ ಬಂದರೆ " ಡೊಮೆಸ್ಟಿಕ್ ವೈಯಲೆನ್ಸಿಗೆ" ದೂರು ಕೊಡುತ್ತೇನೆಂದು ನಾನೂ ನಗುನಗುತ್ತಲೇ ಹೆದರಿಸಿದೆ.

ನಾಳೆ ಮತ್ತೆ ಆಕ್ಲೆಂಡಿಗೆ ಹೋಗಬೇಕಂತೆ. ಕಾರಿನಿಂದಿಳಿಯದಿದ್ದರೆ ಡಬಲ್ ಶಾಪಿಂಗ್ ಮಾಡಿಸುವುದಾಗಿ ಹೇಳಿದ್ದಾರೆ! ನಾನು ಬಲೇ ಖುಷಿಯಿಂದಲೇ " ಹೂಂ" ಅಂದಿದ್ದೇನೆ. ಯಾರಿಗೆ ಗೊತ್ತು ನಾಳೆ ಕಾರಿನಿಂದಿಳಿದು ಮತ್ತ್ಯಾವ ಕಡೆ ಹೋಗುತ್ತೇನೋ?;)