Monday 17 March 2008

Kauri Museum

ಕಳೆದ ವಾರವೆಲ್ಲವೂ ' ಸುಡುವ ಬಿಸಿಲೆಂದು ಹೇಳಿ, ವಾರವಿಡೀ ಬಿಡದೆ ಮಳೆ ಸುರಿದಿತ್ತು. ಈ ವಾರವಾದರೂ ಎಲ್ಲಾದರೂ ಹೋಗೋಣವೆಂದು ಯಜಮಾನರ ತಲೆ ತಿನ್ನುತ್ತಿದ್ದೆ. " ನೀನು ವೆದರ್ ರಿಪೋರ್ಟ್ ' ನೋಡಿರು, ಬಿಸಿಲಿದ್ದರೆ ಹೊರಗೆ ಹೋಗೋಣವೆಂದು ಆಶ್ವಾಸನೆಯಿತ್ತರು. ಇಲ್ಲಿನವರು ಹೆಚ್ಚು ಕಡಿಮೆ ನಮ್ಮ ಊರಿನವರ ' ಹವಾಮಾನ ವರದಿ" ಯಂತೆ! ಶನಿವಾರ, ಭಾನುವಾರ ಧಾರಾಕಾರ ಮಳೆ ಎಂದು ಹೇಳಿ, ಶುಕ್ರವಾರದ ಹೊತ್ತಿಗೆ ' ಅಲ್ಲಲ್ಲಿ ಮಳೆ ಬೀಳುವ ಸಂಭವ ಹೇಳಿದ್ದರು. ಅಂತೂ ಶನಿವಾರ ಬೆಳಿಗ್ಗೆ ಮಳೆಯೂ ಇಲ್ಲ, ಬಿಸಿಲೂ ಇಲ್ಲ...ಬರೀ ಮೋಡವೆಂದು ಹೇಳಿ ಕೈ ತೊಳೆದುಕೊಂಡಿದ್ದರು.


ಶನಿವಾರ ಬೆಳಿಗ್ಗೆ, ಈ ಮೋಡದಲ್ಲಿ ಹೊರಗೆಲ್ಲಿ ಹೋಗುವುದು? ಇಲ್ಲೇ ಹತ್ತಿರದ ಊರು Matakohe ಅಲ್ಲಿರುವ ಮ್ಯೂಸಿಯಂ ಪ್ರಪಂಚದಲ್ಲೆ ಹೆಸರುವಾಸಿಯಂತೆ. ತುಂಬಾ ಚೆನ್ನಾಗಿದೆಯಂತೆ, ಎಂತೆಲ್ಲಾ ಉಬ್ಬಿಸಿದ್ದರು. ನಿಜ ಹೇಳಬೇಕೆಂದರೆ ನನಗೆ ಈ ಮ್ಯೂಸಿಯಂಗಳನ್ನು ನೋಡಲು ಸ್ವಲ್ಪವೂ ಇಷ್ಟವಿಲ್ಲ. ಮ್ಯೂಸಿಯಂಗಳ ಒಳಹೊಕ್ಕರೆ ನನಗೆ ಆ ಕಾಲದ ವಾಸನೆಯೇ ಬರುತ್ತದೆನೋ ಅನ್ನಿಸುತ್ತದೆ. ಸುಮ್ಮನೆ ಆ ಚಿತ್ರಗಳ ಮುಂದೆ ನಿಂತು ಮೆಲುಕು ಹಾಕುವುದು ನನಗೆ ಬೋರ್! " ಮ್ಯೂಸಿಯಂಗಾ? ನಾನು ಬರುವುದಿಲ್ಲ...ಸುತ್ತ ಮುತ್ತಲೂ ಅಷ್ಟು ಚೆನ್ನಾಗಿರುವ ಬೀಚುಗಳಿರುವಾಗ ಎಲ್ಲಾ ಬಿಟ್ಟು ಮ್ಯೂಸಿಯಂಗೆ ಯಾಕೆ?" ಅಂದೆ. " ಈ ಮೋಡದಲ್ಲಿ ಬೀಚು ಚೆನ್ನಾಗಿರುವುದಿಲ್ಲ...ಮಳೆ ಬಂದರೂ ಬರಬಹುದು...ಹೋಗೋಣವೆಂದರೆ ಮ್ಯೂಸಿಯಂ ಇಲ್ಲದಿದ್ದರೆ ಬೇಡ " ಅಂದು ಕಡ್ಡಿ ಮುರಿದಂತೆ ಅಂದಿದ್ದರಿಂದ ಗೊಣಗಿಕೊಂಡೇ ಹೊರಟೆ.



ಬೆಳಿಗ್ಗೆ ಟಿಕೇಟ್ ತೆಗೆದುಕೊಂಡು ಸಂಜೆವರೆಗೆ ಎಷ್ಟು ಸಲ ಬೇಕಾದರೂ ಹೊರಗೆ ಹೋಗಿ ಒಳಬರಬಹುದು ಎಂದಳು ಒಬ್ಬಳು ಬಿಳಿ ರಂಭೆ! ಅಷ್ಟು ಹೊತ್ತಿನವರೆಗೆ ಅದ್ಯಾರು ನೋಡುತ್ತರೆಂದು ಕೊಂಡರೂ ಅವಳಿಗೆ ತಲೆ ಅಲ್ಲಾಡಿಸಿ ಒಳಹೊಕ್ಕೆವು. ಮ್ಯೂಸಿಯಂ ಒಳಹೊಕ್ಕಾಗ ಆದ ಅನುಭವವೇ ಬೇರೆ! ಇಲ್ಲಿ ಒಂದು ಮಾತು ಹೇಳಬೇಕು. ನಮ್ಮಲ್ಲಿ ಕಾಪಾಡಿಕೊಳ್ಳಬೇಕಾದ ಎಷ್ಟೊಂದು ಅಮೂಲ್ಯವಾದ ವಸ್ತುಗಳಿದ್ದರೂ ಕಾಪಾಡಿಕೊಳ್ಳಲು ಬರುವುದಿಲ್ಲವೇನೋ ಅನ್ನಿಸುತ್ತದೆ. ಇವರು ಒಂದು " ಮರ" ಕ್ಕಾಗಿಯೇ ಮ್ಯೂಸಿಯಂ ಮಾಡಿದ್ದಾರೆ.


ಇಲ್ಲಿ ಮೊದಲು " ಕೌರಿ " ಮರಗಳಿದ್ದವಂತೆ. ಆ ಮರಗಳು ಬಹು ಕಾಲ ಬಾಳಿಕೆ ಬರುತ್ತಿತ್ತಂತೆ. ಆ ಮರದ ಗಮ್ ನಿಂದ ಅನೇಕ ವಸ್ತುಗಳನ್ನು ಮಾಡುತ್ತಿದ್ದರಂತೆ. ಮರದಿಂದ ದೋಣಿ ಮಾಡುತ್ತಿದ್ದರಂತೆ. ಕಾಲ ಬದಲಾದಂತೆ, ಮರಗಳ ಸಂಖ್ಯೆಯೂ ಕಡಿಮೆಯಾಗುತ್ತ ಬಂದಿತಂತೆ. ಕೂಡಲೇ ಸರ್ಕಾರ ಕೌರಿ ಮರವನ್ನು ಉಳಿಸಲು ಮುಂದಾಗಿ, ಯಾರೂ ಕೌರಿ ಮರ ಕಡಿಯಬಾರದೆಂದು ಹೇಳಿ, ಆ ಮರಗಳ ರಕ್ಷಣೆ ಮಾಡುತ್ತಿದೆಯಂತೆ. ಈಗ ಯಾರೂ ಆ ಮರಗಳನ್ನು ಕಡಿಯುವಂತಿಲ್ಲ. ನಮ್ಮ ಹಿತ್ತಲಿನಲ್ಲೇ ಕೌರಿ ಮರವಿದ್ದರೂ ಅದು ಸರ್ಕಾರಕ್ಕೆ ಸೇರಿದ್ದು. ಕೌರಿ ಗಿಡ ತಂದು ನೆಡಬಹುದು. ಗಿಡ ದೊಡ್ದದಾಗಿ ಮರವಾಗುವುದು ಬಹಳ ನಿಧಾನವಂತೆ. ಗಿಡವೇನಾದರೂ ಸತ್ತರೆ, ಅದರ ಜಾಗಕ್ಕೆ ಮತ್ತೊಂದು ಕೌರಿ ಗಿಡ ತಂದು ಹಾಕಲೇ ಬೇಕಂತೆ.

ಕೌರಿ ಮರದಿಂದ ತುಂಬಾ ಸುಂದರವಾದ ವಸ್ತುಗಳನ್ನು ಮಾಡಿದ್ದಾರೆ. ಮೊದಲೇ ಹೇಳಿದಂತೆ ರೇಟು ಮರದೆತ್ತರ!


ಬನ್ನಿ, ಮ್ಯೂಸಿಯಂಗೆ ಒಂದು ಸುತ್ತು ಹೊಡೆಸುತ್ತೇನೆ.




ಕೌರಿ ಗಿಡ. ಇದು ಬೆಳೆಯುವುದು ನಿಧಾನವಂತೆ. ಆದರೆ ಕಡಿಮೆಯೆಂದರೂ 100 ವರ್ಷ ಹಿಡಿದು 2000 ವರ್ಷಗಳ ವರೆಗೂ ಬದುಕುತ್ತವೆ. ಈ ಮರ ಬಹಳ ಗಟ್ಟಿಮುಟ್ಟಾಗಿರುವುದರಿಂದ, ಇದರಿಂದ ಕೆತ್ತನೆ ಸಾಮಾನುಗಳು, ಮನೆ - ದೋಣಿ ಕಟ್ಟಲು ಉಪಯೋಗಿಸುತ್ತಾರೆ.













ಕೌರಿ ಮರದ ಗಮ್ (ಅಂಟಿ)ನಿಂದ ಏನೇನು ಮಾಡಬಹುದೆಂದು ವಿವರಿಸಿದ್ದಾರೆ. ಭಾರತಕ್ಕೂ ರಫ್ತು ಮಾಡುತ್ತಿದ್ದರಂತೆ!
















ಎಷ್ಟೋ ಸಾವಿರ ವರ್ಷಗಳ ಹಿಂದಿನ ಹುಳುಗಳು ಮತ್ತು ಜೇಡ! ಕೌರಿ ಮರದ ಅಂಟಿನಲ್ಲಿ ಸಿಕ್ಕಿಬಿದ್ದಿವೆ!.










ಕೌರಿ ಮರವನ್ನು ಕಡಿದುರುಳಿಸಿ ಅದನ್ನು ತುಂಡು ತುಂಡುಗಳನ್ನಾಗಿ ಮಾಡಿ ಕಾಡಿನಿಂದ ಸಾಗಿಸುವುದೇ ಒಂದು ದೊಡ್ಡ ಕೆಲಸವಂತೆ. ಎತ್ತುಗಳನ್ನು ಹೀಗೆ ಮರದ ತುಂಡಿಗೆ ಕಟ್ಟಿ ಎಳೆಸುತ್ತಿದ್ದರಂತೆ. ಆಗಿನ ಕಾಲದ ಕಬ್ಬಿಣದ ಚೈನುಗಳನ್ನು ಇನ್ನೂ ಇಟ್ಟಿದ್ದಾರೆ.








ಕೌರಿ ಮರಕ್ಕೆ ರೆಂಬೆಗಳು ತುತ್ತತುದಿಯಲ್ಲಿರುವುದರಿಂದ ಮರ ಹತ್ತಲು ಕಷ್ಟವಂತೆ. ಮರದ ಸುತ್ತಲೂ ಕಬ್ಬಿಣದ ತಂತಿಗಳನ್ನು ಹೀಗೆ ಸುತ್ತಿ, ನೇತಾಡಿಕೊಂಡು ಮರದ ಅಂಟನ್ನು ಸಂಗ್ರಹಿಸಿತ್ತಿದ್ದರೆಂಬುದನ್ನು ಅಲ್ಲಲ್ಲಿ ಮರದ ಪ್ರತಿಕೃತಿಗಳನ್ನು ಮಾಡಿ ನಿಲ್ಲಿಸಿದ್ದಾರೆ. ತಟ್ಟನೆ ನೋಡಿದರೆ ಜೀವಂತ ಮನುಷ್ಯರೇ ನೇತಾಡುತ್ತಿದ್ದಾರೇನೋ ಅನ್ನಿಸುತ್ತದೆ.









ಕೌರಿ ಮರದ ಅಂಟಿನಿಂದ ತಯಾರಾದ ಕೆಲವು ಸುಂದರ ಕೃತಿಗಳಲ್ಲಿ ಈ ಕಿವಿ ಹಕ್ಕಿ-ಮರಿಯೂ ಒಂದು. ಎಷ್ಟು ವರ್ಷಗಳ ಹಿಂದಿನದೋ ಗೊತ್ತಿಲ್ಲ!









ಎಷ್ಟೋ ಕೌರಿ ಮರಗಳು ಭೂಕಂಪ ಮತ್ತಿತರ ವಿಕೋಪಗಳಿಗೆ ಸಿಕ್ಕಿ ಭೂಮಿಯಲ್ಲಿ ಹುದುಗಿ ಹೋಗಿವೆಯಂತೆ. ನೆಲವನ್ನು ಅಗೆದು, ಕುಟ್ಟಿ ಮರದ ಅಂಟನ್ನು ಸಂಗ್ರಹಿಸುತ್ತಿದ್ದರೆಂಬುದನ್ನು ಈ ಪ್ರತಿಕೃತಿಗಳಲ್ಲಿ ತಿಳಿಸುತ್ತಾರೆ. ಆಗಿನ ಕಾಲದ ಅವರ ಬೂಟುಗಳು, ಗುದ್ದಲಿ, ಸಲಾಕೆಗಳನ್ನು ಇಟ್ಟಿದ್ದಾರೆ. ನಾವು ಇವರ ಮುಂದೆ ನಿಂತರೆ, ' ಹಾಯ್! ಹಲೋ " ಕೂಡಾ ಹೇಳುತ್ತಾರೆ.










ಕೌರಿ ಮರದ ಒಂದು ತುಂಡು. ಅಂದಾಜು ನೂರು ಅಡಿಗಳಷ್ಟು ಉದ್ದ ಬೆಳೆಯುತ್ತದೆ ಅಂತೆ. ಇದರ ಮುಂದೆ ನಾವು ನಿಂತರೆ, ನಾವು ಏನೇನೂ ಅಲ್ಲ ಅನ್ನಿಸುತ್ತದೆ. ಆದರೆ ಮನುಷ್ಯನ ಆಸೆಗೆ ಮಿತಿಯೇ? ಎಷ್ಟೇ ದೊಡ್ಡದಿರಲಿ, ತನಗೆ ಬೇಕಾದಂತೆ ಕತ್ತರಿಸಿ ಉಪಯೋಗಿಸಿಕೊಳ್ಳಬಲ್ಲ!












ಈ ಮರದ ಆಯಸ್ಸನ್ನು ಹೀಗೆ ಗುರುತಿಸಿದ್ದಾರೆ. ಇದನ್ನು ನೋಡಿದರೆ ಈ ಮರಗಳು ಅದೆಷ್ಟು ವರ್ಷ ಬದುಕುತ್ತವೆಂಬುದು ನಮಗೊಂದು ಅಂದಾಜಾಗುತ್ತದೆ ಅಲ್ಲವೇ.















ಇದೊಂದು ಜೀವಂತ ಕೌರಿ ಮರ. "Tane Mahuta " ಎಂದು ಹೆಸರು. Largest living Kauri tree in NZ ante! 2000 ವರ್ಷಗಳ ಹಿಂದಿನದು. ಇನ್ನೂ ಬೆಳೆಯುತ್ತಿದೆಯಂತೆ. ಸುತ್ತ ಮುತ್ತಲಿರುವ ಮರಗಳೆಲ್ಲವೂ ಇದರ ಮುಂದೆ ಸಣ್ಣವೆನಿಸುತ್ತವೆ.






ಮ್ಯೂಸಿಯಂನಲ್ಲಿ ಸುತ್ತಾಡಿ ಸಮಯ ಹೋದದ್ದೇ ತಿಳಿಯಲಿಲ್ಲ. ರಂಭೆ ಮತ್ತೊಮ್ಮೆ ಬಂದು ಇನ್ನು ಹದಿನೈದು ನಿಮಿಷಗಳಲ್ಲಿ ಮ್ಯೂಸಿಯಂ ಮುಚ್ಚುವ ಸಮಯವಾಗುತ್ತದೆ ಎಂದು ಹೇಳಿದಾಗಲೇ ನಾವೆಷ್ಟು ಹೊತ್ತು ಮ್ಯೂಸಿಯಂ ನೋಡಿದೆವೆಂದು ತಿಳಿಯಿತು.

8 comments:

maddy said...

good info...
chennagide girija...

bhadra said...

ಕೌರಿ ಮರದ ಬಗ್ಗೆ ಬಹಳ ವಿಷಯಗಳನ್ನು ವಿಶದೀಕರಿಸಿದ್ದೀರಿ - ನಿಮ್ಮ ಬ್ಲಾಗನ್ನು ನೋಡಿದರೆ, ಇಷ್ಟೆಲ್ಲಾ ಆ ಪುಟ್ಟ ದೇಶದಲ್ಲಿ ಇದೆಯಾ ಅಂತ ಆಶ್ಚರ್ಯ ಆಗುತ್ತಿದೆ. ಈ ಕೌರಿ ಮರದ ಬಗ್ಗೆ ವೀರಪ್ಪನ್‍ಗೆ ಏಕೆ ತಿಳಿಯದಾಗಿತ್ತು?

ಅಂದ ಹಾಗೆ ದೋಸೆ ಪರಿಣತರು ತಮ್ಮ ಬ್ಲಾಗನ್ನು ತುಂಬಿಸೋಕ್ಕೆ ಸ್ವಲ್ಪ ಹೇಳಿ

Sumeru said...

Very informative Girija.. thnq! for sharing..(:
Warm rgds....

snakez said...

ಏನ್ರೀ ನಿಲ್‌ಗಿರಿ ಅವರೆ,ನಿಮ್ಗೆ ಕಾಣೋರೆಲ್ಲ ಬರೀ ರಂಭೆ ಮಾತ್ರನಾ. ಮೇನಕೆ, ಊರ್ವಶಿ,ತಿಲೋತ್ತಮೆ, ಯಾರೂ ಇಲ್ಲ್ವಾ?;) ಕೋಪಿಸ್ಕೋಬೇಡಿ!!

ನಿಮ್ಮ ಲೇಖನ ತುಂಬಾ ಸೊಗಸಾಗಿದೆ ರೀ. ಈ ಥರದ ಮರ ಇದೆ, ಎಂಬುದು ನಿಮ್ಮಿಂದ ತಿಳಿಯತು. amber ಅನ್ನೋ ಪದಾರ್ಥದಲ್ಲ್ಲಿ ಹುಳು ಹುಪ್ಪಟೆ ಸೇರಿ ಹಾಗೆ preserve ಮಾಡಲ್ಪಡುವುದೆಂದು ಓದಿದ್ದೆ(Jurassic Park ಚಿತ್ರ ನೆನಪಿಸಿಕೊಳ್ಳಿ). ಈಗ ನಿಮ್ಮ ಕ್ಯಾಮೆರದಿಂದ ನಮಗೂ ನೋಡೋ ಭಾಗ್ಯ ಸಿಕ್ಕಿತು. ಇನ್ನೂ ಹಾಗೆ ಸುತ್ತಾಡಿ, NZ ನೋಡಲಾಗದ ನನ್ನಂಥಾ ನಿರ್ಭಾಗ್ಯನಿಗೆ ಸ್ವಲ್ಪ ನಿಮ್ಮ ದೇಶ ತೊರಿಸಿ(ಜಿಪುಣ ಅನ್ಕೊಂಡ್ರೂ ಚಿಂತೆ ಇಲ್ಲ ;))

Anonymous said...

Hi nilgiri tumba sogasagi varnisidira...nave allige bandu musium suttadida anumbahava aaithu...Thanks

Mallige:-)

ಅಮರ said...

ನನ್ಗು ಈ ಮ್ಯೂಜಿಯಂಗಳ ಅಲರ್ಜಿ ಇದ್ದದ್ದು ನಿಜ, ಸ್ಕೂಲಿನ ಪ್ರವಾಸಗಳ ಕೆಂದ್ರವಾಗಿದ್ದ ಇವಕ್ಕೆ ಶಾಪ ಹಾಕಿದ್ದು ಉಂಟು.... ಈಗ ನೋಡಿದ್ರೆ!!!! ನೆನ್ನೆಯ ನೆನಪುಗಳನ್ನ ಬೆಚ್ಚಗೆ ಮಾಡುತ್ತ ಕುತೂಹಲ ಮೂಡಿಸೊದಂತು ದಿಟ....... ಸಚಿತ್ರ ಸಮೇತ ಬರಹ ಹಲವಾರು ಕೊನಗಳತ್ತ ಬೆಳಕು ಚಲ್ಲುತ್ತೆ.....

ಅಲ್ಲಿ ಇಲ್ಲಿ ಸ್ಪೆಲಿಂಗೂ ಮಿಸ್ಟೇಕ್ ಇದ್ದರೆ ..... ಹೊಟ್ಟೆಗಾಕ್ಕಳೀ...... :)

-ಅಮರ

ಸುಪ್ತದೀಪ್ತಿ suptadeepti said...

ಗಿರಿಜ, ಒಳ್ಳೆಯ ಮಾಹಿತಿ ಪೂರ್ಣ ಬರಹ, ಚಿತ್ರಗಳು.

ಇಲ್ಲಿ, ಕ್ಯಾಲಿಫೋರ್ನಿಯಾದಲ್ಲಿ ರೆಡ್-ವುಡ್ ಅಂತ ಮರಗಳಿವೆ, ಅದರ ಬಗ್ಗೆಯೂ ಹೀಗೇ ಮಮತೆ ಇಲ್ಲಿನವರಿಗೆ. ಅವುಗಳೂ ಸಾವಿರಾರು ವರ್ಷ ಬಾಳುತ್ತವಂತೆ. ಮೂರೂವರೆ ಸಾವಿರ ವರ್ಷದ ಮರವೊಂದು ಇನ್ನೂ ನಿಂತಿದೆ. ಪ್ರಕೃತಿ ವಿಶೇಷಗಳು ಇವೆಲ್ಲ. ನೋಡಿದಾಗ ಖುಷಿಯಾಗತ್ತೆ.

NilGiri said...

Thanks @ Madhu, Sangeetha, Mallige.

**************

@ srinivas sir

ಕೌರಿ ಮರ " ಗಮ " ಕೊಡದೇ ಬರೀ " ಗಮ್" ಕೊಡುತ್ತಾದುದರಿಂದ ವೀರಪ್ಪನ್ ಈ ಕಡೆ ಬಂದಿಲ್ಲ!

ದೋಸೆ ಪರಿಣತರು, ಶ್ರೀಕೃಷ್ಣನ ಪೂಜೆಯೊಂದಿಗೆ blog ಶುರುಮಾಡಿದ್ದಾರೆ.


***************
@ snakez

ಕೌಂಟರಿನಲ್ಲಿ ಇದ್ದದ್ದು ಒಬ್ಬಳೇ ಅದಿಕ್ಕೆ ರಂಭೆ ಯೆಂದದ್ದು.

ಜುರಾಸಿಕ್ ಪಾರ್ಕ್ ಚಿತ್ರ ನೆನಪಿಸಿದ್ದಕ್ಕೆ ಥ್ಯಾಂಕ್ಸು.
ಲೇಖನವನ್ನು ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು. ಹೀಗೆ ಬರುತ್ತಿರಿ.

**************
@ ಅಮರ,
ಸ್ಪೆಲ್ಲಿಂಗ್ ಮಿಸ್ಟೇಕುಗಳನ್ನು ಇಡ್ಲಿ ಸಾಂಬಾರ್ ಎಂದುಕೊಂಡು ಹೊಟ್ಟೆಗೆ ಹಾಕಿಕೊಂಡೆವು :D

ತಾಣಕ್ಕೆ ಭೇಟಿ ನೀಡಿದ್ದಕ್ಕೆ ವಂದನೆಗಳು.

**************

@ ಸುಪ್ತದೀಪ್ತಿ.

ನಮ್ಮಲ್ಲೂ ಅಂದರೆ ಭಾರತದಲ್ಲೂ ಹೀಗೆ ಬಹುಕಾಲ ಬಾಳುವ ಮರಗಳಿರಬಹುದೆಂದು ನನ್ನ ಸಂದೇಹ. ನಮ್ಮಗಳಿಗೆ ಇಲ್ಲಿನವರ ಹಾಗೆ ಹೇಳಿಕೊಳ್ಳಲು ಬರುವುದಿಲ್ಲವೇನೋ?!

ಲೇಖನ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು ಸುಪ್ತದೀಪ್ತಿ.