ನಮ್ಮಲ್ಲಿ " ಗುಡ್ ಫ್ರೈಡೇ" ಮತ್ತು " ಈಸ್ಟರ್ ಮನ್ ಡೇ" ಎರಡು ಹಬ್ಬಗಳಿಗೂ ರಜೆ ಕೊಟ್ಟಿದ್ದರಿಂದ, ಒಟ್ಟಿಗೆ 4 ದಿನಗಳ ರಜೆ ಸಿಕ್ಕಿದ ಹಾಗಾಗಿತ್ತು. ಭಾನುವಾರ ಆಕ್ಲೆಂಡಿಗೆ ಹೋಗುವ ಕಾರ್ಯಕ್ರಮ ಮೊದಲೇ ಫಿಕ್ಸ್ ಆಗಿದ್ದಿತು. ಮಳೆ ಬರುವ ಸಂಭವವೆಂದು ವಾರದ ಮೊದಲೇ ಸಾರಿದ್ದರಿಂದ ( ಮಳೆ ಬರಲಿಲ್ಲ :D) ಇಲ್ಲೇ ಸುತ್ತ ಮುತ್ತ ಹೋದರಾಯಿತು. ಅಷ್ಟಕ್ಕೂ ರಜೆ ಬಂದಾಗಲೆಲ್ಲ ಹೊರಗೆ ಹೋಗಲೇ ಬೇಕೇ? ಮನೆಯಲ್ಲೇ ಆರಾಮವಾಗಿ ಇರಬಹುದು ಎಂದೆಲ್ಲಾ ಯಜಮಾನರ ಮಾತುಗಳಿಗೆ.." ಹೌದು ಹೌದು..." ಎಂದು ಸುಮ್ಮನೆ ಗೋಣಾಡಿಸುತ್ತಿದ್ದೆ ಅಷ್ಟೇ.
" ಬಸವ ಸಮಿತಿ"ಯವರು ವರ್ಷಕ್ಕೆ ಒಮ್ಮೆ ಬರುವ " ಬಸವ ಜಯಂತಿ" ಮತ್ತು ಎರಡು ವರ್ಷಕ್ಕೊಮ್ಮೆ " ಶರಣ ಸಮ್ಮೇಳನವನ್ನು" ನಡೆಸುತ್ತಾರಂತೆ. ಈ ವರ್ಷ ಆಕ್ಲೆಂಡಿನಲ್ಲಿ. ಪ್ರಪಂಚದ ಎಲ್ಲಾ ಕಡೆಗಳಿಂದಲೂ ಜನ ಬಂದಿದ್ದರು. ಬರಲಾರದವರು ಮೆಸೇಜು ಕಳಿಸಿದ್ದರಂತೆ. ಅಲ್ಲಿದ್ದ ನಮ್ಮ ಕೆಲವೇ ಸ್ನೇಹಿತರ ಪೈಕಿ ಆತ್ಮೀಯರಾದವರೊಬ್ಬರು ಬರಲೇಬೇಕೆಂದು ಆಗ್ರಹಪಡಿಸಿದ್ದರಿಂದ ಬೆಳಿಗ್ಗೆಯೇ ಊರು ಬಿಟ್ಟೆವು.
ಬೆಳಿಗ್ಗೆ ಹೋದ ಕೂಡಲೇ ಬಿಸಿ ಬಿಸಿ ಉಪ್ಪಿಟ್ಟು, ಕೇಸರೀಬಾತ್ ಮತ್ತು ಕಾಫಿ ಸರಬರಾಜು ಆಯಿತು. ಎಲ್ಲರ ಮುಖದಲ್ಲೂ ಮದುವೆ ಮನೆಯ ಸಂಭ್ರಮ! ಸರಬರ ರೇಷ್ಮೆ ಸೀರೆಗಳ ಓಡಾಟ...ಗಂಡಸರನೇಕರು ಪಂಚೆ, ಜುಬ್ಬಾ! ಒಟ್ಟಿನಲ್ಲಿ ಮೈಸೂರಿಗೋ ಬೆಂಗಳೂರಿಗೋ ಬಂದಿದ್ದೇನೆಂಬ ಅನುಭವ!
ಮೈಸೂರಿನಿಂದ ಜೆ.ಎಸ್.ಎಸ್. ಸ್ವಾಮೀಜಿಗಳು ಮತ್ತು ಎಡೆಯೂರು ಸಂಸ್ಥಾನಮಠದಿಂದ ತೋಂಟದ ಸಿದ್ಧಗಂಗಾ ಸ್ವಾಮೀಜಿಗಳು ಬಂದಿದ್ದರು.
ಮುಕ್ಕಾಲು ಜನ ಗೊತ್ತಿದ್ದವರೇ! ಎಲ್ಲರೂ ಅವರವರ ಕೆಲಸದಲ್ಲಿ ಓಡಾಡಿಕೊಂಡಿದ್ದರಿಂದ, ಬಿಸಿ ಬಿಸಿ ತಿಂಡಿಯಿಂದ ಹೊಟ್ಟೆಯೂ ತುಂಬಿದ್ದರಿಂದ ನಾನೇ ಮುಂದೆ ಹೋಗಿ ಕುಳಿತೆ.
ನಮಗೆ ಸ್ಕೂಲಿನಲ್ಲಿದ್ದಾಗ ವಚನಗಳನ್ನು ಓದಿದಷ್ಟೇ ನೆನಪು. " ಕಳಬೇಡ ಕೊಲಬೇಡ......" "ಲೋಕದ ಡೊಂಕ ನೀವೇಕೆ ತಿದ್ದುವಿರಿ...." ಹೀಗೆ ಒಂದೆರಡು ಬಾಯಿಪಾಠ ಮಾಡಿದಷ್ಟೇ. ವೇದಿಕೆಯ ಮೇಲಿದ್ದವರು ಲೀಲಾಜಾಲವಾಗಿ ವಚನಗಳನ್ನು ಉದ್ಧರಿಸುತ್ತಿದ್ದರು.
ಪೂಜ್ಯ ಸ್ವಾಮೀಜಿಗಳವರಿಂದ Light of Devotion ಪುಸ್ತಕ ಬಿಡುಗಡೆ ಕಾರ್ಯಕ್ರಮವೂ ಇತ್ತು. ನಂತರ ಅಲ್ಲೇ ಪುಸ್ತಕ ಮಾರಾಟದ ವ್ಯವಸ್ಥೆಯನ್ನೂ ಸಮಿತಿಯವರು ಆಯೋಜಿಸಿದ್ದರು. ನಾವೂ ಒಂದು ಪುಸ್ತಕ ಖರೀದಿಸಿ, ಅಲ್ಲೇ ಸ್ವಾಮಿಜಿಗಳವರಿಂದ ಹಸ್ತಾಕ್ಷರ ಪಡೆದುಕೊಂಡೆವು. ಈ ಪುಸ್ತಕದಲ್ಲಿ ಪ್ರೊ. ಚಂದ್ರಶೇಖರಯ್ಯ ಅವರು, 101 ವಚನಗಳನ್ನು ಇಂಗ್ಲೀಷಿಗೆ ಅನುವಾದಿಸಿದ್ದಾರೆ. ಭಾಷೆಯ ತೊಡಕಾಗಬಾರದೆಂದು ಕನ್ನಡದಲ್ಲಿ ಮತ್ತು ಇಂಗ್ಲೀಷಿನಲ್ಲಿ ವಚನಗಳ ಅರ್ಥವನ್ನು ವಿವರಿಸಿದ್ದಾರೆ. ಪುಸ್ತಕದ ಲೇಖಕರಿಗೆ ವೀಸಾ ಸಿಗಲಿಲ್ಲವಾದ್ದರಿಂದ ಪುಸ್ತಕದ ಪ್ರಕಾಶಕರಷ್ಟೇ ಹಾಜರಿದ್ದರು.
Ethnic Affairs Minister, ಕ್ರಿಸ್ ಕಾರ್ಟರ್ ಮುಖ್ಯ ಅತಿಥಿಗಳಲ್ಲೊಬ್ಬರು. ನಮ್ಮಲ್ಲಿ ಮಿನಿಸ್ಟರ್ ಗಳು ಬರುತ್ತಾರೆಂದರೆ, ಅವರ ಹಿಂಬಾಲಕರು, ಸೆಕ್ಯೂರಿಟಿಯಂತೆಲ್ಲಾ ಬಡಬಡಿಸುವ ಪೊಲೀಸರನ್ನು ಕಂಡಿದ್ದ ನನಗೆ, ಕ್ರಿಸ್ ಕಾರ್ಟರ್ ಕೈ ಬೀಸಿಕೊಂಡು, ಯಾವ ಬಾಜಾ ಬಜಂತ್ರಿಗಳೂ ಇಲ್ಲದೆ, ಬಂದು ಹೂವಿನ ಹಾರ ಹಾಕಿಸಿಕೊಂಡು, ಭಾಷಣ ಮಾಡಿದ್ದನ್ನು ನೋಡಿ ಸೋಜಿಗ!
ಭಾರತ, ಅಸ್ಟ್ರೇಲಿಯಾದಿಂದ ಬಂದ ಬಸವ ಸಮಿತಿಯ ಸದಸ್ಯರುಗಳು ಒಂದೊಂದು ವಿಷಯದ ಮೇಲೆ ತಮ್ಮ ತಮ್ಮ ಅಭಿಪ್ರಾಯಗಳನ್ನು ಚರ್ಚಿಸಿದರು. ಕಡೆಗೆ ಪ್ರಶ್ನೋತ್ತರ ಕಾರ್ಯಕ್ರಮವೂ ಇದ್ದಿತು.
ಮಕ್ಕಳಿಗೆ ಬಸವ ಸಮಿತಿಯಿಂದ ಆಯೋಜಿಸಿದ್ದ " ರಂಗೋಲಿ ಸ್ಪರ್ಧೆಯಲ್ಲಿ" ಭಾಗವಹಿಸಿದ್ದ ಮಕ್ಕಳು ಬಿಡಿಸಿದ್ದ ರಂಗುರಂಗಿನ ರಂಗೋಲಿಗಳು.
ಸಂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳಿದ್ದವು. ಮೊದಲಿಗೆ ನ್ಯೂಜಿಲೆಂಡಿನ ಮಕ್ಕಳು ವಚನವನ್ನು ಸುಶ್ರಾವ್ಯವಾಗಿ ಹಾಡಿದರು.
ನಂತರ, ಆಸ್ಟ್ರೇಲಿಯಾ ಸದಸ್ಯರುಗಳು ವಚನವನ್ನು " ದೋಣಿ ಸಾಗಲಿ, ಮುಂದೆ ಹೋಗಲಿ " ಟ್ಯೂನ್ ನಲ್ಲಿ ಹಾಡಿದರು.
ಹಾಡಿನ ನಂತರ, ತನ್ನ ಈಸ್ಟರ್ ರಜೆಯ ಮಧ್ಯೆ ಬಿಡುವು ಮಾಡಿಕೊಂಡು ಬಂದ ನಮ್ಮ ರಕ್ಷಣಾ ಮಂತ್ರಿ, Phil Geoff. ಕೈಯಲ್ಲಿ ಯಾವುದೇ ಪೇಪರ್ ಹಿಡಿದುಕೊಳ್ಳದೇ " ಕಳಬೇಡ, ಕೊಲಬೇಡ..." ಎಂಬ ವಚನದ ಸಾಲುಗಳನ್ನು ಯೇಸು ಕ್ರಿಸ್ತನ Ten Commandments ಗೆ ಹೋಲಿಸಿ ಪಟಪಟನೆ ಭಾಷಣ ಮಾಡಿದರು. ಭಾಷಣದ ಮಧ್ಯೆ " ಬಸವೇಶ್ವರ, ವಚನಗಳು, ಬಸವಣ್ಣ " ಕನ್ನಡ ಪದಗಳನ್ನು ಅವರದೇ ಶೈಲಿಯಲ್ಲಿ ಹೇಳಿದುದು ನಿಜಕ್ಕೂ ಸಂತಸವಾಯಿತು.
ನ್ಯೂಜಿಲೆಂಡ್ ಸದಸ್ಯರುಗಳಿಂದ " ಆಯ್ದಕ್ಕಿ ಮಾರಯ್ಯ" ನಾಟಕದ ಒಂದು ದೃಶ್ಯ.
ಕಾರ್ಯಕ್ರಮಗಳೆಲ್ಲವೂ ಚೆನ್ನಾಗಿದ್ದುದರಿಂದ ಸಮಯ ಹೋದದ್ದೆ ಗೊತ್ತಾಗಿರಲಿಲ್ಲ. ಆದರೆ ನಾವು ಊರಿಗೆ ವಾಪಸ್ಸಾಗಬೇಕಾದ್ದರಿಂದ ಮನಸ್ಸಿಲ್ಲದಿದ್ದರೂ ರಾತ್ರಿ ಒಂಭತ್ತಕ್ಕೆ ಎದ್ದು ಹೊರಟೆವು.