ಮಳೆಯೆಂದರೆ ನನಗಿಲ್ಲ ಈಗ ಸ್ಚಲ್ಪವೂ ಇಷ್ಟ
ಈ ಮಳೆಯಿಂದ ನನಗಾಯಿತು ಭಾರೀ ನಷ್ಟ
ಮೊನ್ನೆ ಮದುವೆಯ ಕರೆಯೋಲೆ ಕೊಡಲು ಹೊರಟಿದ್ದೆ
ಇಲ್ಲೇ ಮನೆ ಹತ್ತಿರ ತಾನೆ ಎಂದು ನಡೆದಿದ್ದೆ
ಉಟ್ಟಿದ್ದ ಹೊಸಾ ರೇಷ್ಮೆ ಸೀರೆಯ ನೆರಿಗೆ ಚಿಮ್ಮುತ್ತಾ
ಹೊಟ್ಟೆ ಉರಿಸುವ ಆಲೋಚನೆಯಲ್ಲಿ ಗೆಳತಿಯ ಮನೆಯತ್ತ
ನಾನುಂಟೋ ಮೂರು ಲೋಕವುಂಟೋ ಎಂದು ಹೊರಟ್ಟಿದ್ದ ನನಗೆ
ತಟ್ಟನೇ ಬ್ರೇಕು ಬಿತ್ತು ಮಳೆಯ ಮೊದಲ ಹನಿಗೆ
ಆಕಾಶದಲ್ಲೇ ನಡೆದಿದ್ದ ನನಗೆ ಹಿಂದೆಯೇ ಕವಿದಿದ್ದ ಮೋಡ
ಗೊತ್ತೇ ಆಗಿರಲಿಲ್ಲ ಸ್ವಲ್ಪವೂ ಕೂಡಾ
ನನಗೇನೂ ಮಳೆಯೆಂದರೇನೂ ಹೆದರಿಕೆಯಿಲ್ಲ
ನೆಗಡಿ, ಶೀತಕ್ಕೆಲ್ಲಾ ಬೆದರುವವಳು ನಾನಲ್ಲಾ
ಚಿಂತೆಯೆಲ್ಲಾ ಯಜಮಾನರು ಕೊಡಿಸಿದ್ದ ಹೊಸ ಸೀರೆಯತ್ತಾ
ಮಳೆಗೆ ಸಿಕ್ಕಿಕೊಂಡರೆ ಸೀರೆ ಉಳಿಯುವುದಿಲ್ಲ ಖಂಡಿತಾ
ಮುಂದಕ್ಕೆ ಅಡಿಯಿಡಲಾಗದೇ ಹಿಂದಕ್ಕೆ ಬರಲೊಪ್ಪದೇ
ನೋಡಿಯೇ ಬಿಡೋಣವೆಂದು ಹೆಜ್ಜೆ ಎತ್ತಿಟ್ಟ ಕೂಡಲೇ
ಬೆದರಿಸಿತು ಮತ್ತೆರಡು ದಪ್ಪ ಮಳೆ ಹನಿ
ಮಳೆಗಿಂತ ಮೊದಲೇ ತುಂಬಿತ್ತು ಕಣ್ಣಲ್ಲಿ ಹನಿ
ಕೊಡೆ ತರದೆ ಬಂದ ನನ್ನ ತಪ್ಪಿಗೆ
ಚುರುಕುಗೊಳಿಸುತ್ತಾ ನಡಿಗೆ
ಹಾಕುತ್ತಾ ಹಿಡಿಶಾಪ ಮಳೆಗೆ
ನಡೆದೆ ಅಳುಮುಖ ಹೊತ್ತು ಮನೆಕಡೆಗೆ