Wednesday, 13 June 2007

ಚಿಕ್ಕ ಮಕ್ಕಳ rhymes

ನಾಯಿಮರಿ ನಾಯಿಮರಿ ತಿಂಡಿ ಬೇಕೆ
ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು

ನಾಯಿಮರಿ ನಿನಗೆ ತಿಂಡಿ ಏಕೆ ಬೇಕು
ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು

ನಾಯಿಮರಿ ಕಳ್ಳ ಬಂದರೇನು ಮಾಡುವೆ
ಲೊಳ್ ಲೊಳ್ ಎಂದು ಕೂಗಿ ಪಾಡುವೆ

ಜಾಣಮರಿ ತಾಳು ಹೋಗಿ ತಿಂಡಿ ತರುವೆನು
ತಾ ನಿನ್ನ ಮನೆಯ ನಾನು ಕಾಯುತಿರುವೆನು
*********************************************

ಆನಿ ಬಂತೊಂದು ಆನಿ, ಯಾವೂರು ಆನಿ, ಬಿಜಾಪೂರ ಆನಿ,
ಇಲ್ಲಿಗ್ಯಾಕ ಬಂತು, ಹಾದಿ ತಪ್ಪಿ ಬಂತು

ಹಾದಿಗೊಂದು ದುಡ್ಡು, ಬೀದಿಗೊಂದು ದುಡ್ಡು

ಅದೇ ದುಡ್ಡ ಕೊಟ್ಟು, ಸೇರ ಕೊಬ್ರಿ ತಂದು

ಲಟಲಟ ಮುರದು ಹುಡುಗರ ಕೈಯಾಗ ಕೊಟ್ಟು

ಆನಿ ಓಡೋಡೋಡ ಹೋಯ್ತು!

*********************************************


ಮಾಮ ಮಾಮ ಮಾತಾಡು...

ಮಾವಿನ ಗಿಡಕ್ಕ ಜೋತಾಡು...

ಮಾವಿನ ಗಂಟಿ ಮುರೀತ್..

ಮಾಮನ ಪಂಚೆ ಹರೀತ್!

********************************************

ಕಾಗಿ ಕಾಗಿ..ಕವ್ವ
ಯಾರ ಬಂದಾರವ್ವ
ಮಾಮಾ ಬಂದಾನವ್ವ
ಏನ ತಂದಾನವ್ವ
ಹಂಡೆದಂಥ*****
ಬಿಟ್ಕೊಂಡ್ ಹಂಗೇ ಬಂದಾನವ್ವ!

*********************************************

ಪಟ ಪಟ ಪಾರಿ
ಪಾರಿ ಗಂಡ ಪರೂತ್ ಕ ಹೋದ
ಏನ್ ತಂದ? ಕೋಳಿ ತಂದ
ಏನ್ ಮಾಡ್ದ...ಕೊಯ್ಕೊಂಡ್ ತಿಂದ!

*********************************************

ಕೈ ಕೈ ಎಲ್ಲಿಟ್ಟಿ?ಬಾಗಲಾಗ ಇಟ್ಟೆ,
ಬಾಗಲೇನ ಕೊಟ್ತು? ಕಸಬರಿಗಿ ಕೊಟ್ತು
ಕಸಬರಗಿಲೆ ಏನ ಮಾಡ್ದಿ? ಕಸಾ ಬಳದೆ
ಕಸಾ ಏನು ಮಾಡ್ದಿ? ತಿಪ್ಪಿಗೆ ಚಲ್ದೆ
ತಿಪ್ಪಿ ಏನು ಕೊಟ್ತು? ಗೊಬ್ಬರ ಕೊಟ್ತು
ಗೊಬ್ಬರ ಏನ ಮಾಡ್ದಿ? ಹೊಲಕ್ಕ ಹಾಕ್ದೆ
ಹೊಲ ಏನು ಕೊಟ್ತು? ಜ್ವಾಳ ಕೊಟ್ತು
ಜ್ವಾಳ ಏನು ಮಾಡ್ದಿ? ರೊಟ್ಟಿ ಮಾಡ್ದೆ
ರೊಟ್ಟಿ ಏನು ಮಾಡ್ದಿ? ಗಂಡಗ ಕೊಟ್ಟೆ..
ಹೊಹೊಹೊಹೊ...!!

*********************************************

ಹತ್ತಂಬಳ ಹಲಗಿ ಬಡದು,
ಹತ್ತಾರ ಆಳ ಡಂಗುರ ಸಾರಿ,
ಗೌಡನ ಹೆಂಡ್ತಿ ಏನ ಹಡದ್ಲು?
ಗಂಡನ ತಲೀಗೆ ಎಣ್ಣೀಲ್ಲೋ ಎಣ್ಣೀಲ್ಲೋ...
ಸುಂಬಳ ಹಚ್ಚಿ ಯರದಾರೋ ಯರದಾರೋ...!


*********************************************

ಅಚ್ಚಚ್ಚೋ....ಬೆಲ್ಲದಚ್ಚೋ
ಅಲ್ಲಿ ನೋಡು...ಇಲ್ಲಿ ನೋಡು
ಕೆಂಪತ್ತಿ ಮರದಲಿ ಗುಂಪು ನೋಡು
ಯಾವ ಗುಂಪು; ಕಾಗೆ ಗುಂಪು
ಯಾವ ಕಾಗೆ; ಕಪ್ಪು ಕಾಗೆ
ಯಾವ ಕಪ್ಪು; ಇದ್ದಿಲು ಕಪ್ಪು
ಯಾವ ಇದ್ದಿಲು; ಸೌದೆ ಇದ್ದಿಲು
ಯಾವ ಸೌದೆ;ಕಾಡು ಸೌದೆ
ಯಾವ ಕಾಡು;ಸುಡಗಾಡು
ಯಾವ ಸುಡು; ರೊಟ್ಟಿ ಸುಡು
ಯಾವ ರೊಟ್ಟಿ;ತಿನ್ನೋ ರೊಟ್ಟಿ
ಯಾವ ತಿನ್ನ; ಏಟು ತಿನ್ನಾ
ಯಾವ ಏಟು; ದೊಣ್ಣೆ ಏಟು..
ಯಾವ ದೊಣ್ಣೆ;ದಪ್ಪ ದೊಣ್ಣೆ
ಯಾವ ದಪ್ಪ; ಹೊಟ್ಟೆ ದಪ್ಪ
ಯಾವ ಹೊಟ್ಟೆ; ನಿನ್ನ ಹೊಟ್ಟೆ...ನಿನ್ನ ಹೊಟ್ಟೆ..ಹೊಹೊಹೊಹೊ!!

***************************************************

ಕ್ಕೋ..ಕ್ಕೋ...ಕೋಳಿ

ಬೆಳಗಾಯ್ತೇಳಿ...

ಅಂಬಾ ಅಂಬಾ ಕರುವೇ

ಹಾಲು ಕರೆಯ ಬರುವೇ

ಮಿಯಾಂವ್ ಮಿಯಾಂವ್ ಬೆಕ್ಕೇ

ಕದ್ದು ಹಾಲು ನೆಕ್ಕೇ

ಬೌ ಬೌ ನಾಯಿ

ಸಾಕು ಮುಚ್ಚು ಬಾಯಿ...!

********************************************

ಅಮ್ಮ ನೋಡೆ ಕಣ್ಬಿಟ್ಟು

ನಮ್ಮಯ ಶಾಲೆಯ ಉಪ್ಪಿಟ್ಟು

ನಮ್ಗೆ ಮಾತ್ರ ಇಷ್ಟೇ ಇಷ್ಟು

ಮಿಸ್ ಗಳಿಗ್ಮಾತ್ರ ಅಷ್ಟಷ್ಟು..!

********************************************

shaantha kka shaanthakka chennagiddhiya?
manchadha mele malagidhiya?
biscuit chow chow patna thandhre eddhu barthiya,
atthe koogidhre...maathadalla
ganda koogidhre enu andhre anthiya

********************************************

ನಾಗರಹಾವೇ ಹಾವೊಳು ಹೂವೇ
ಬಾಗಿಲ ಬಿಲದಲಿ ನಿನ್ನಯ ಠಾವೆ
ಕೈಯನು ಮುಗಿವೆ ಹಾಲನೀವೆ
ಬಾ ಬಾ ಬಾ

ಹಳದಿಯ ಹೆಡೆಯನು ಬಿಚ್ಚೋ ಬೇಗ
ಒಳಗಿನಿಂದಲೆ ಕೂಗೋ ರಾಗ
ಕೊಳಲನೂದುವೆ ಆಲಿಸು ರಾಗ
ನೀ ನೀ ನೀ ನೀ

ಎಲೆ ನಾಗಣ್ಣ ಹೇಳೆಲೋ ನಿನ್ನ
ತಲೆಯಲ್ಲಿರುವ ನಿಜವನ್ನ
ಬಡುಬಗ್ಗರಿಗೆ ಕೊಪ್ಪರಿಗೆಯ ಚಿನ್ನ
ತಾ ತಾ ತಾ ತಾ ತಾ

ಬರೀ ಮೈ ಸಣ್ಣಗೆ ಮೊದದಲಿ ಬಿಸಿ ಹಗೆ
ಎರಡಲೆ ನಾಲಗೆ ಇಟ್ಟರೂ ಸುಮ್ಮಗೆ
ಎರಗುವೆ ನಿನಗೆ ಈಗಲೆ ಹೊರಗೆ
ಪೋ ಪೋ ಪೋ ಪೋ ಪೋ

****************************************

ಒಂದು ಎರಡು ಬಾಳೆಲೆ ಹರಡು

ಮೂರು ನಾಕು ಅನ್ನ ಹಾಕು

ಐದು ಆರು ಬೇಳೆ ಸಾರು

ಏಳು ಎಂಟು ಪಲ್ಯಕ್ಕೆ ದಂಟು

ಒಂಭತ್ತು ಹತ್ತು ಎಲೆ ಮುದುರೆತ್ತು

ಒಂದರಿಂದ ಹತ್ತು ಹೀಗಿತ್ತು

ಊಟದ ಆಟವು ಮುಗಿದಿತ್ತು!

***************************************

ಒಂದು ಎರಡು ಬೇಸನ್ ಲಾಡು

ಮೂರು ನಾಕು ಮೈಸೂರ್ ಪಾಕು

ಐದು ಆರು ಬಾದಾಮಿ ಖೀರು

ಏಳು ಎಂಟು ಪೆಪ್ಪರಮೆಂಟು

ಒಂಭತ್ತು ಹತ್ತು ಕೈ ತುಂಬಾ ಬಿಸ್ಕತ್ತು

ಒಂದರಿಂದ ಹತ್ತು ಹೀಗಿತ್ತು

ತಿಂಡಿಯ ಆಟವು ಮುಗಿದಿತ್ತು!

*******************************************

ನಮ್ಮ ಮನೆಯಲೊಂದು ಸಣ್ಣ ಪಾಪವಿರುವುದು

ಎತ್ತಿಕೊಳಲು ಹೋದರದಕೆ ಕೋಪ ಬರುವುದು

ಕೋಪ ಬರಲು ಗಟ್ಟಿಯಾಗಿ ಕಿರಿಚಿಕೊಳುವುದು

ಕಿರಿಚಿಕೊಂಡು ತನ್ನ ಮೈಯ ಪರಚಿಕೊಳುವುದು

ಪಾಪ ಅತ್ತರಮ್ಮ ತಾನು ಅತ್ತುಬಿಡುವಳು

ಅಯ್ಯೊ ಪಾಪ ಎಂದುಕೊಂಡು ಮುತ್ತು ಕೊಡುವಳು!

********************************************

ಉಂಡಾಡಿ ಗುಂಡ ಮದ್ವೆ ಮನೆಗೋದ

ಹತ್ತು ಲಾಡು ತಿಂದ ಇನ್ನು ಬೇಕು ಅಂದ

ಅಪ್ಪ ದೊಣ್ಣೆ ತಂದ ಕೈ ಕಟ್ ಬಾಯಿ ಮುಚ್ !

**********************************************

ನರಿಯು ತೋಟಕೆ ಹೋಯಿತು...ನರಿಯು ತೋಟಕೆ ಹೋಯಿತು

ತೋಟ ನೋಡಲು....ನೋಡಿತೇನದು...ನೋಡಿತೇನದು...

ಚಪ್ಪರದಿಂದ ಕೂಡಿದ...ಚಪ್ಪರದಿಂದ ಕೂಡಿದ

ಚಪ್ಪರದಿಂದ ಕೂಡಿದ ದ್ರಾಕ್ಷಿ ಗೊಂಚಲು

ಒಂದು ಸಲ ಹಾರಿತು....ಎರಡು ಸಲ ಹಾರಿತು

ಮೂರು ಸಲ ಹಾರಿತು....ಸೋತು ಹೋಯಿತು

ದ್ರಾಕ್ಷಿ ಹುಳಿ ಎಂದಿತು...ದ್ರಾಕ್ಷಿ ಹುಳಿ ಎಂದಿತು

ಸಪ್ಪೆ ಮುಖ ಮಾಡಿತು....ಓಡಿ ಹೋಯಿತು...

**********************************************

ಮಳೆ ಬಂತು ಮಳೆ

ಕೊಡೆ ಹಿಡಿದು ನಡೆ

ಜಾರಿ ಬಿದ್ದರೊಮ್ಮೆ,

ಬಟ್ಟೆಯೆಲ್ಲಾ ಕೊಳೆ

ಬಾವಿಯಿಂದ ನೀರು ಸೇದಿ

ಬಟ್ಟೆಯೆಲ್ಲಾ ಒಗೆ..!

*************************************************

ಇವನೇ ನೋಡು ಅನ್ನದಾತ

ಹೊಲದಿ ದುಡಿದೇ ದುಡಿವನು

ನಾಡ ಜನರು ಬದುಕಲೆಂದು

ದವಸ ಧಾನ್ಯ ಬೆಳೆವನು


ಮಳೆಯ ಗುಡುಗು ಚಳಿಯ ನಡುಗು

ಬಿಸಿಲ ಬೇಗೆಯ ಸಹಿಸುತಾ

ಬೆವರು ಸುರಿಸಿ ಕಷ್ಟ ಸಹಿಸಿ

ಒಂದೇ ಸಮನೆ ದುಡಿಯುತಾ


ಗಟ್ಟಿ ದೇಹ ದೊಡ್ಡ ಮನಸು

ದೇವನಿಂದ ಪಡೆವನು

ಯೋಗಿಯಾಗಿ ತ್ಯಾಗಿಯಾಗಿ

ಅನ್ನ ನೀಡುತಿರುವನು


ಎತ್ತು ಎರಡು ಅವನ ಜೋಡು

ಕೂಡಿ ದುಡಿವ ಗೆಳೆಯರು

ಹಿಗ್ಗು ಕುಗ್ಗು ಏನೇ ಬರಲಿ

ಹೊಂದಿಕೊಂಡು ನಡೆವರು.

***************************************************

ಓಲೆಯ ಹಂಚಲು ಹೊರಡುವೆ ನಾನು

ತೋರಲು ಆಗಸದಲಿ ಬಿಳಿ ಬಾನು

ಮನೆಯಲಿ ನೀವು ಬಿಸಿಲಲಿ ನಾನು

ಕಾಗದ ಬಂತು ಕಾಗದವು


ಓಲೆಯ ಕೊಡುವಧಿಕಾರಿಯು ನಾನು

ಆದರೂ ಅದರಲಿ ಬರೆದುದು ಏನು

ಎಂಬುದನರಿಯೆ ಬಲು ಸುಖಿ ನಾನು

ಕಾಗದ ಬಂತು ಕಾಗದವು
************************************

ಏರುತಿಹುದು ಹಾರುತಿಹುದು
ನೋಡು ನಮ್ಮ ಬಾವುಟ
ತೋರುತಿಹುದು ಹೊಡೆದು ಹೊಡೆದು
ಬಾನಿನಗಲ ಪಟಪಟ

ಕೇಸರಿ ಬಿಳಿ ಹಸಿರು ಮೂರು
ಬಣ್ಣ ನಡುವೆ ಚಕ್ರವು
ಸತ್ಯ ಶಾಂತಿ ತ್ಯಾಗ ಮೂರ್ತಿ
ಗಾಂಧಿ ಹಿಡಿದ ಚರಕವು

ಇಂತ ಧ್ವಜವು ನಮ್ಮ ಧ್ವಜವು
ನೋಡು ಹಾರುತಿರುವುದು
ಧ್ವಜದ ಶಕ್ತಿ ನಮ್ಮ ಭಕ್ತಿ
ನಾಡ ಸಿರಿಯ ಮೆರೆವುದು

ಕೆಂಪು ಕಿರಣ ತುಂಬಿ ಗಗನ
ಹೊನ್ನ ಬಣ್ಣವಾಗಿದೆ
ನಮ್ಮ ನಾಡ ಗುಡಿಯ ಬಣ್ಣ
ನೋಡಿರಣ್ಣ ಹೇಗಿದೆ

************************************************

ರೊಟ್ಟಿ ಅಂಗಡಿ ಕಿಟ್ಟಪ್ಪ

ನಂಗೊಂದು ರೊಟ್ಟಿ ತಟ್ಟಪ್ಪ

ಪುಟಾಣಿ ರೊಟ್ಟಿ ಕೆಂಪಗೆ ಸುಟ್ಟು

ಒಂಭತ್ತು ಕಾಸಿಗೆ ತಟ್ಟಪ್ಪ

ಬಿಟ್ಟು ಹೋಗೆನು ಕಿಟ್ಟಪ್ಪರೊಟ್ಟಿ ಅಂಗಡಿ ಕಿಟ್ಟಪ್ಪ

ರೊಟ್ಟಿಯ ನೋಡಿ ತಟ್ಟಪ್ಪ

ರೊಟ್ಟಿಯ ಸುತ್ತು ಹಸಿ ಹಸಿ ಹಿಟ್ಟು

ರೊಟ್ಟಿಯ ಬೇರೆ ತಟ್ಟಪ್ಪ

ನನಗಿದು ಬೇಡ ಕಿಟ್ಟಪ್ಪ

ರೊಟ್ಟಿ ಅಂಗಡಿ ಕಿಟ್ಟಪ್ಪ

ನಂಗೊಂದು ರೊಟ್ಟಿ ತಟ್ಟಪ್ಪ


ರೊಟ್ಟಿ ಅಂಗಡಿ ಕಿಟ್ಟಪ್ಪ

ಬೇರೆ ರೊಟ್ಟಿಯ ತಟ್ಟಪ್ಪ

ಕೊಂಡರೆ ರೊಟ್ಟಿ ಸುಡಬೇಕಪ್ಪ


ಟೂ.. ಟೂ.... ಸಂಗ ಬಿಟ್ಟೆಪ್ಪಾ


ಟೂ ಟೂ ಸಂಗ ಬಿಟ್ಟೆಪ್ಪ

ಬಿಟ್ಟರೆ ಪುನಹಾ ಕಟ್ಟೆಪ್ಪಾ

***********************************************

ಬೊಂಬೆ ಪೀಪೀ...ಬಣ್ಣದ ತುತ್ತೂರಿ

ಬಣ್ಣದ ತಗಡಿನ ತುತ್ತೂರಿ

ಕಾಸಿಗೆ ಕೊಂಡನು ಕಸ್ತೂರಿ

ಬಣ್ಣದ ತಗಡಿನ ತುತ್ತೂರಿ

ಕಾಸಿಗೆ ಕೊಂಡೆನು ನಾನೂರಿ


ಸರಿಗಮ ಪದನಿಸ ಊದಿದನು

ಸನಿದಮ ಮಗರಿಸ ಊದಿದನು

ತನಗೆ ತುತ್ತೂರಿ ಇದೆಯೆಂದ

ಬೇರಾರಿಗೂ ಅದು ಇಲ್ಲೆಂದ


ಕಸ್ತೂರಿ ನಡೆದನು ಬೀದಿಯಲಿ

ಜಂಭದ ಕೋಳಿಯ ರೀತಿಯಲಿ

ತುತ್ತೂರಿ ಊದುತ ಕೊಳದ ಬಳಿ

ನಡೆದನು ಕಸ್ತೂರಿ ಸಂಜೆಯಲಿ


ಜಾರಿತು ನೀರಿಗೆ ತುತ್ತೂರಿ

ಗಂಟಲು ಕಟ್ಟಿತು ನೀರೂರಿ

ಸರಿಗಮ ಊದಲು ನೋಡಿದನು

ಗಗ ಗಗ ಸದ್ದನು ಮಾಡಿದನು


ಬಣ್ಣವು ನೀರಿನ ಪಾಲಾಯ್ತು

ಬಣ್ಣದ ತುತ್ತೂರಿ ಬೋಳಾಯ್ತು

ಬಣ್ಣದ ತುತ್ತೂರಿ ಹಾಳಾಯ್ತು

ಜಂಭದ ಕೋಳಿಗೆ ಗೋಳಾಯ್ತು

************************************************

ಬಂದಿತು ರೈಲು
ಬಿದ್ದಿತು ಕೈಮರ
ಹೊಡೆಯಿತು ಗಂಟೆ
ಊದಿತು ಸೀಟಿ
ಬೀಸಿತು ಬಾವುಟ
ಹೊರಟಿತು ರೈಲು.

ಉರುಳಿತು ಚಕ್ರ
ಹಾಕಿತು ಸಿಳ್ಳು
ಉಗುಳಿತು ಧೂಮ,
ದಾಟಿತು ಹೊಲಮನೆ
ಒಡಿತು ವೇಗದಿ
ಸೇರಿತು ಊರು.

*******************************************

ಬಾಳೆಯ ತೋಟದ ಪಕ್ಕದ ಕಾಡೊಳು ವಾಸಿಸುತ್ತಿದ್ದವು ಮಂಗಗಳು

ಮಂಗಗಳೆಲ್ಲವೂ ಒಟ್ಟಿಗೆ ಸೇರುತ ಒಂದುಪವಾಸವ ಮಾಡಿದವು


ಏನೂ ತಿನ್ನದೆ ಮಟಮಟ ನೋಡುತ ಇದ್ದವು ಮರದಲ್ಲಿ ಕುಳಿತಲ್ಲೇ

ನಾಳೆಗೆ ತಿಂಡಿಯ ಈಗಲೇ ಹುಡುಕುವ ಬನ್ನಿರಿ ಎಂದಿತು ಕಪಿಯೊಂದು


ಹೌದಣ್ಣಾ ಎಂದೆನ್ನುತ ಎಲ್ಲವೂ ಬಾಳೆಯ ತೋಟಕೆ ಹಾರಿದವು

ತೋಟದಿ ಬಾಳೆಯ ಹಣ್ಣನು ನೋಡಲು ಆಸೆಯು ಹೆಚ್ಚಿತು ನೀರೂರಿ


ಸುಲಿದೇ ಇಡುವ ಆಗದೆ ಎಂದಿತು ಆಸೆಯ ಮರಿಕಪಿಯೊಂದಾಗ

ಹೌದೌದೆನ್ನುತ ಹಣ್ಣನು ಸುಲಿದವು ಕೈಯೊಳು ಹಿಡಿದು ಕುಳಿತಿರಲು


ಕೈಯಲ್ಲೇತಕೆ ಬಾಯೊಳಗಿಟ್ಟರೆ ಆಗದೇ ಎಂದಿತು ಇನ್ನೊಂದು

ಹಣ್ಣನು ಬಾಯಲಿ ಇಟ್ಟವು ಜಗಿದೇ ಇಡುವೆವು ಎಂದಿತು ಮತ್ತೊಂದು


ಜಗಿದೂ ಜಗಿದೂ ನುಂಗಿದವೆಲ್ಲಾ...ಆಗಲೇ ಮುಗಿಯಿತು ಉಪವಾಸ!

******************************************************

ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟಕ ದೇಶದೊ
ಳಿರುವ ಕಾಳಿಂಗನೆಂಬ ಗೊಲ್ಲನ
ಪರಿಯ ನಾನೆಂತು ಪೇಳ್ವೆನು?


ಗಿರಿಗಳೆಡೆಯಲಿ ಅಡವಿ ನಡುವೆ
ತುರುವ ದೊಡ್ಡಿಯ ಮಾಡಿಕೊಂಡು
ಮೆರೆವ ಕಾಳಿಂಗನೆಂಬ ಗೊಲ್ಲನ ಸಿರಿಯ
ನಾನೆಂತು ಪೇಳ್ವೆನು?


ಗೊಲ್ಲದೊಡ್ದಿಯೊಳಿರುವ ಹಸುಗಳು
ಎಲ್ಲ ಬೆಟ್ಟದ ಮೇಲೆ ಮೇಯುತ
ಹುಲ್ಲು ಒಳ್ಳೆಯ ನೀರ ಕುಡಿಯುತ
ಅಲ್ಲಿ ಮೆರೆದುವರಣ್ಯದಿ


ಕರುಗಳನ್ನು ನೆನೆನೆನೆದು ಹಸುಗಳು
ಕೊರಳ ಘಂಟೆ ಢಣಿರು ಢಣಿರೆನೆ
ಪರಿದು ಲಂಘಿಸಿ ಚಿಮ್ಮಿ ನೆಗೆಯುತ
ಮರಳಿ ಬಂದವು ದೊಡ್ಡಿಗೆ

ತಮ್ಮ ತಾಯನು ಕಂಡು ಕರುಗಳು
ಅಮ್ಮಾ ಎಂದು ಕೂಗಿ ನಲಿಯುತ
ಸುಮ್ಮಾನದೊಳು ಮೊಲೆಯನುಂಡು
ನಿರ್ಮಲದೊಳು ಇದ್ದವು

ಉದಯಕಾಲದೊಳೆದ್ದು ಗೊಲ್ಲನು
ನದಿಯ ಸ್ನಾನವ ಮಾಡಿಕೊಂಡು
ಮುದದಿ ತಿಲಕವ ಹಣೆಯೊಳಿಟ್ಟು
ಚಿದುರ ಶಿಖೆಯನು ಹಾಕಿದ

ಎಳೆಯ ಮಾವಿನ ಮರದ ಕೆಳಗೆ
ಕೊಳಲನೂದುತ ಗೊಲ್ಲಗೌಡನು
ಬಳಸಿ ನಿಂದ ತುರುಗಳನ್ನು
ಬಳಿಗೆ ಕರೆದನು ಹರುಷದಿ

ಗಂಗೆ ಬಾರೇ ಗೌರಿ ಬಾರೆ
ತುಂಗಭದ್ರೆ ತಾಯಿ ಬಾರೆ
ಕಾಮಧೇನು ನೀನು ಬಾರೆಂದು
ಪ್ರೇಮದಲಿ ಗೊಲ್ಲ ಕರೆದನು

ಗೊಲ್ಲ ಕರೆದ ಧ್ವನಿಯ ಕೇಳಿ
ಎಲ್ಲ ಹಸುಗಳು ಬಂದು ನಿಂತು
ಚೆಲ್ಲಿ ಸೂಸಿ ಹಾಲು ಕರೆಯಲು
ಅಲ್ಲಿ ತುಂಬಿತು ಬಿಂದಿಗೆ

ಹಬ್ಬಿದಾ ಮಲೆ ಮಧ್ಯದೊಳಗೆ
ಅರ್ಭುತಾನೆಂದೆಂಬ ವ್ಯಾಘ್ರನು
ಅಬ್ಬರಿಸಿ ಹಸಿ ಹಸಿದು ಬೆಟ್ಟದ
ಕಿಬ್ಬಿಯೊಳು ತಾನಿದ್ದನು

ಸಿಡಿದು ರೋಷದಿ ಮೊರೊಯುತಾ ಹುಲಿ
ಘುಡು ಘುಡಿಸಿ ಭೋರಿಡುತ ಛಂಗನೆ
ತುಡುಕಲೆರಗಿದ ರಭಸಕಂಜಿ
ಚದುರಿ ಹೋದವು ಹಸುಗಳು

ಪುಣ್ಯಕೋಟಿ ಎಂಬ ಗೋವು
ತನ್ನ ಕಂದನ ನೆನೆದುಕೊಂಡು
ಮುನ್ನ ಹಾಲನ್ನು ಕೊಡುವೆನೆನುತ
ಚೆನ್ನಾಗಿ ತಾ ಬರುತಿರೆ

ಇಂದೆನೆಗೆ ಆಹಾರ ಸಿಕ್ಕಿತು
ಎಂದು ಬೇಗನೆ ದುಷ್ಟ ವ್ಯಾಘ್ರನು
ಬಂದು ಬಳಸಿ ಅಡ್ಡ ಗಟ್ಟಿ
ನಿಂದನಾ ಹುಲಿರಾಯನು

ಮೇಲೆ ಬಿದ್ದು ನಿನ್ನನೀಗಲೆ
ಬೀಳ ಹೊಯ್ವೆನು ನಿನ್ನ ಹೊಟ್ಟೆಯ
ಸೀಳಿ ಬಿಡುವೆನು ಎನುತ ಕೋಪದಿ
ಖೂಳ ವ್ಯಾಘ್ರನು ಕೂಗಲು

ಒಂದು ಬಿನ್ನಹ ಹುಲಿಯೆ ಕೇಳು
ಕಂದನಿರುವನು ದೊಡ್ಡಿಯೊಳಗೆ
ಒಂದು ನಿಮಿಷದಿ ಮೊಲೆಯ ಕೊಟ್ಟು
ಬಂದು ಸೇರುವೆನಿಲ್ಲಿಗೆ.


ಹಸಿದ ವೇಳೆಗೆ ಸಿಕ್ಕಿದೊಡವೆಯ
ವಶವ ಮಾಡದೆ ಬಿಡಲು ನೀನು
ನುಸುಳಿ ಹೋಗುವೆ ಮತ್ತೆ ಬರುವೆಯ
ಹುಸಿಯನಾಡುವೆಯೆಂದಿತು

ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯ ವಾಕ್ಯಕ್ಕೆ ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು.


ಕೊಂದು ತಿನ್ನುವೆನೆಂಬ ಹುಲಿಗೆ
ಚೆಂದದಿಂದ ಭಾಷೆಯಿತ್ತು
ಕಂದ ನಿನ್ನನು ನೋಡಿ ಹೋಗುವೆ
ನೆಂದು ಬಂದೆನು ದೊಡ್ಡಿಗೆ.

ಅಮ್ಮ ನೀನು ಸಾಯಲೇಕೆ?
ನಮ್ಮ ತಬ್ಬಲಿ ಮಾಡಲೇಕೆ?
ಸುಮ್ಮನಿಲ್ಲೆಯೆ ನಿಲ್ಲೆನುತ
ಅಮ್ಮನಿಗೆ ಕರು ಹೇಳಲು

ಕೊಟ್ಟ ಭಾಷೆಗೆ ತಪ್ಪಲಾರೆನು
ಕೆಟ್ಟ ಯೋಚನೆ ಮಾಡಲಾರೆನು
ನಿಷ್ಠೆಯಿಂದಲಿ ಪೋಪನಲ್ಲಿಗೆ
ಕಟ್ಟಕಡೆಗಿದು ಖಂಡಿತ.


ಆರ ಮೊಲೆಯನು ಕುಡಿಯಲಮ್ಮ
ಆರ ಸೇರಿ ಬದುಕಲಮ್ಮ
ಆರ ಬಳಿಯಲಿ ಮಲಗಲಮ್ಮಾ
ಆರು ನನಗೆ ಹಿತವರು?

ಅಮ್ಮಗಳಿರಾ ಅಕ್ಕಗಳಿರಾ
ನಮ್ಮ ತಾಯೊಡಹುಟ್ಟುಗಳಿರ
ನಿಮ್ಮ ಕಂದನೆಂದು ಕಾಣಿರಿ
ತಬ್ಬಲಿಯನೀ ಕರುವನು

ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ಒದೆಯಬೇಡಿ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲೀಯನೀ ಕರುವನು


ಕಟ್ಟಕಡೆಯಲಿ ಮೇಯಬೇಡ
ಬೆಟ್ಟದೊತ್ತಿಗೆ ಹೋಗಬೇಡ
ದುಷ್ಟವ್ಯಾಘ್ರನು ಹೊಂಚುತಿರುವನು
ನಟ್ಟನಡುವಿರು ಕಂದನೆ

ತಬ್ಬಲಿಯು ನೀನಾದೆ ಮಗನೆ
ಹೆಬ್ಬುಲಿಯ ಬಾಯನ್ನು ಹೊಗುವೆನು
ಇಬ್ಬರಾ ಋಣ ತೀರಿತೆಂದು
ತಬ್ಬಿಕೊಂಡಿತು ಕಂದನ

ಗೋವು ಕರುವನು ಬಿಟ್ಟು ಬಂದು
ಸಾವಕಾಶವ ಮಾಡದಂತೆ
ಗವಿಯ ಬಾಗಿಲ ಸೇರಿ ನಿಂತು
ತವಕದಲಿ ಹುಲಿಗೆಂದಿತು

ಖಂಡವಿದೆ ಕೋ ಮಾಂಸವಿದೆ ಕೋ
ಗುಂಡಿಗೆಯ ಬಿಸಿ ರಕ್ತವಿದೆ ಕೋ
ಚಂಡ ವ್ಯಾಘ್ರನೆ ನೀನಿದೆಲ್ಲವ-
ನುಂಡು ಸಂತಸದಿಂದಿರು


ಪುಣ್ಯಕೋಟಿಯ ಮಾತ ಕೇಳಿ
ಕಣ್ಣನೀರನು ಸುರಿಸಿ ನೊಂದು
ಕನ್ನೆಯಿವಳನು ಕೊಂದು ತಿಂದರೆ
ಮೆಚ್ಚನಾ ಪರಮಾತ್ಮನು

ಎನ್ನ ಒಡಹುಟ್ಟಕ್ಕ ನೀನು
ನಿನ್ನ ಕೊಂದು ನಾನೇನ ಪಡೆವೆನು
ಎನ್ನುತಾ ಹುಲಿ ಹಾರಿ ನೆಗೆದು
ತನ್ನ ಪ್ರಾಣವ ಬಿಟ್ಟಿತು!


************************************************

ನನ್ನ ಸ್ಲೇಟು ಕರಿಯದು

ಅದರ ಪಟ್ಟಿ ಬಿಳಿಯದು

ಬರಿಯಲಿಕ್ಕೆ ಬರುವುದು

ಬಹಳ ಚಂದ ಇರುವುದು

ಅಪ್ಪ ದುಡ್ಡು ಕೊಟ್ಟನು

ನಾನು ಬಳಪ ತಂದೆನು

ಅ ಆ ಇ ಈ ಬರೆದೆನು

ಅಮ್ಮ ನ ಮುಂದೆ ಇಟ್ಟೆನು

ಅಮ್ಮ ನೋಡಿ ನಕ್ಕಳು

ತಿನ್ನಲು ತಿಂಡಿ ಕೊಟ್ಟಳು

ಕುಣಿದು ಕುಣಿದು ತಿಂದೆನು

ತಿರುಗಿ ಶಾಲೆಗೆ ಹೋದೆನು

ಕಲಿತು ಜಾಣನಾದೆನು!

********************************************

ಗೇರ್ ಗೇರ್ ಮಂಗಣ್ಣ
ಕಡಲೆ ಕಾಯಿ ನೋಡಣ್ಣ
ಓಡುತ ಓಡುತ ನೋಡಣ್ಣ
ಲಾಗ ಗೀಗ ಹಾಕಣ್ಣ

ಕಡಲೆ ಕಾಯಿ ಬೇಕಣ್ಣ
ಕಾಸುಗೀಸು ಬೇಡಣ್ಣ
ನನ್ನೊಡನಾಟ ಆಡಣ್ಣ
ಕಡಲೆ ಕಾಯಿ ತಿನ್ನಣ್ಣ

ಮಕ್ಕಳ ಕಾಡಬೇಡಣ್ಣ
ಮನೆಯವರೆಗೂ ಬಾರಣ್ಣ
ಹಣ್ಣು ಗಿಣ್ಣು ಬೇಕಣ್ಣ
ಹಾಗಾದರೆ ಲಾಗ ಹಾಕಣ್ಣ.

**********************************

ಹತ್ತು ಒಂದು ಹನ್ನೊಂದು
ಮೆತ್ತನ ಕಡುಬು ಇನ್ನೊಂದು

ಹತ್ತೂ ಎರಡು ಹನ್ನೆರಡು
ಉತ್ತಮ ತುಪ್ಪಾ ಮೇಲ್ಹರಡು

ಹತ್ತೂ ಮೂರು ಹದಿಮೂರು
ನೆತ್ತಿಗೆ ಹತ್ತಲಿ ಸುರಿ ಸಾರು

ಹತ್ತೂ ನಾಲ್ಕು ಹದಿನಾಲ್ಕು
ಮೆತ್ತನ ಕಡುಬು ಇನ್ನೂಬೇಕು

ಹತ್ತೂ ಐದು ಹದಿನೈದು
ಹೊತ್ತಗಿಲ್ಲ ಹೊಡಿ ಇನ್ನೈದು

ಹತ್ತೂ ಆರು ಹದಿನಾರು
ಉತ್ತಮಳಮ್ಮ ಸರಿ ನಿನಗಾರು?

ಹತ್ತು ಏಳು ಹದಿನೇಳು
ಮತ್ತೂ ಬಂದರೆ ಹೊಡಿಯೇಳು

ಹತ್ತೂ ಎಂಟು ಹನಿನೆಂಟು
ಚಿತ್ತಕೆ ಬಂದರೆ ಇನ್ನೂ ಉಂಟು

ಹತ್ತೂ ಒಂಭತ್ತು ಹತ್ತೊಂಭತ್ತು
ಹೆತ್ತುಪ್ಪಣ್ಣಾ ಹೊಟ್ಟೆಯು ತುಂಬಿತು

ಹತ್ತೂ ಹತ್ತೂ ಇಪ್ಪತ್ತು
ಮಾಡಿದ ಕಡುಬು ತೀರಿತ್ತು.

************************************
ತಿರುಕನೊರ್ವನೂರ ಮುಂದೆ
ಮುರುಕು ಧರ್ಮಶಾಲೆಯಲ್ಲಿ
ಒರಗಿರುತ್ತಲೊಂದು ಕನಸ ಕಂಡನೆಂತೆನೆ
ಪುರದ ರಾಜ ಸತ್ತನವಗೆ
ವರಕುಮಾರರಿಲ್ಲದಿರಲು,
ಕರಿಯ ಕೈಗೆ ಕುಸುಮಮಾಲೆಯಿತ್ತು ಪುರದೊಳು


ನಡೆದು ಯಾರ ಕೊರಳಿನಲ್ಲಿ
ತೊಡರಿಸುವದೊ ಅವರ ಪಟ್ಟ
ಕೊಡೆಯರನ್ನು ಮಾಳ್ಪೆವೆಂದು ಬಿಟ್ಟರಲ್ಲಿಯೆ
ಒಡನೆ ತನ್ನ ಕೊರಳಿನಲ್ಲಿ
ತೊಡರಿಸಲ್ಕೆ ಕಂಡ ತಿರುಕ
ಪೊಡವಿಯಾಣ್ಮನಾದೆನೆಂದು ಹಿಗ್ಗುತಿರ್ದನು


ಪಟ್ಟವನ್ನು ಕಟ್ಟಿ ನೃಪರು
ಕೊಟ್ಟರವಗೆ ಕನ್ಯೆಯರನು
ನೆಟ್ಟನವನು ರಾಜ್ಯವಾಳ್ದ ಕನಸಿನಲ್ಲಿಯೇ
ಭಟ್ಟನಿಗಳ ಕೂಡಿ ನಲ್ಲ
ನಿಷ್ಟಸುಖದೊಳಿರಲವಂಗೆ
ಹುಟ್ಟಿ ಹೆಣ್ಣು ಗಂಡು ಮಕ್ಕಳಾದುವಾಗಲೇ


ಓಲಗದಲಿರುತ್ತ ತೊಡೆಯ
ಮೇಲೆ ಮಕ್ಕಳಾಡುತಿರಲು
ಲೀಲೆಯಿಂದ ಚಾತುರಂಗ ಬಲವ ನೋಡುತ
ಲೋಲನಾಗಿ ನುಡಿದನಿನಿತು
ಕೇಳು ಮಂತ್ರಿ, ಸುತರುಗಳಿಗೆ
ಬಾಲೆಯರನು ನೋಡಿ ಮದುವೆ ಮಾಡಬೇಕೆಲೆ


ನೋಡಿ ಬನ್ನಿರೆನಲು ಜೀಯ
ನೋಡಿ ಬಂದೆವೆನಲು ಬೇಗ
ಮಾಡು ಮದುವೆ ಮಂಟಪದೊಳು ಸಕಲ ಕಾರ್ಯವ
ಗಾಢವಾಗೆ ಸಂಭ್ರಮಗಳು
ಮಾಡುತಿದ್ದ ಮದುವೆಗಳನು
ಕೂಡಿದಖಿಳ ರಾಯರೆಲ್ಲ ಮೆಚ್ಚುವಂದದಿ


ಧನದ ಮದವು ರಾಜ್ಯ ಮದವು
ತನುಜ ಮದವು ಯುವತಿಮದವು
ಜನಿತಮಾಗಿ ಕನಸಿನಲ್ಲಿ ಹಿಗ್ಗುತಿರ್ದನು
ಅನಿತರೊಳಗೆ ನೃಪರ ದಂಡು
ಮನೆಯ ಮುತ್ತಿದಂತೆಯಾಗೆ
ಕನಸ ಕಾಣತಿರ್ದ ಹೆದರಿ ಕಣ್ಣ ತೆರೆದನು.

********************************************

ಹಸಿದ ಹೊಟ್ಟೆಯಿಂದ ನಾಯಿ
ರೊಟ್ಟಿಗಾಗಿ ತಿರುಗಿತು
ಊರ ದಾಟಿ ಹಳ್ಳದಾಚೆ
ಹುಡುಕಲೆಂದು ಹೊರಟಿತು||೧||

ಅಲ್ಲಿ ಹೊಲದ ಗುಡಿಸಲಲ್ಲಿ
ಬುತ್ತಿ ಗಂಟು ದೊರಕಿತು
ರೊಟ್ಟಿಯೊಂದನೆತ್ತಿಕೊಂಡು
ಊಬ್ಬಿನಿಂದ ಮರಳಿತು||೨||

ಹಳ್ಳ ದಾಟುವಾಗ ನೋಟ
ನೀರಿನಲ್ಲಿ ಬಿದ್ದಿತು
ರೊಟ್ಟಿ ಹಿಡಿದ ಬೇರೆ ನಾಯಿ
ಕಂಡು ರೊಚ್ಚಿಗೆದ್ದಿತು||೩||

ಅದನು ಕಿತ್ತುಕೊಳ್ಳಲೆಂದು
ಬಾಯಿ ತೆರೆದು ಬೊಗಳಿತು
ರೊಟ್ಟಿ ಜಾರಿ ಹಳ್ಳದಲ್ಲಿ
ಬಿದ್ದುಬಿಡಲು ಮರುಗಿತು||೪||

ಆಸೆಯಿಂದ ತನ್ನದನ್ನು
ಕಳೆದುಕೊಂಡ ತಪ್ಪಿಗೆ
ಡೊಂಕುಬಾಲ ಎತ್ತಿಕೊಂಡ್ದು
ಓಡಿತಾಗ ತೆಪ್ಪಗೆ||೫||

*******************************************

ಬಹಳ ಒಳ್ಳೇರು ನಮ್ಮಿಸ್ಸು
ಏನ್ ಹೇಳಿದ್ರು ಎಸ್ಸೆಸ್ಸು...
ನಗ್ತಾ ನಗ್ತಾ ಮಾತಾಡಿಸ್ತಾರೆ
ಸ್ಕೂಲಿಗೆಲ್ಲಾ ಪೇಮಸ್ಸು...ಸ್ಕೂಲಿಗೆಲ್ಲಾ ಪೇಮಸ್ಸು...

ಆಟಕ್ಕೆ ಬಾ ಅಂತಾರೆ
ಆಟದ ಸಾಮಾನ್ ಕೊಡ್ತಾರೆ
ಆಟದ್ ಜೊತೆ ಗೊತ್ತಿಲ್ದಂಗೆ.. ಪಾಟನೂ ಕಲಿಸ್ತಾರೆ...

ನಮ್ಮಿಸ್ಸಂತ ಮಿಸ್ ಇಲ್ಲ
ನಮ್ ಸ್ಕೂಲ್ ಅಂತ ಸ್ಕೂಲ್ ಇಲ್ಲಾ
ಅಮ್ಮನ್ನಾಗೆ ಅವರನ್ನ ಬಿಟ್ಬರೋಕೆ ಮನಸಿಲ್ಲಾ....

***********************************

ಬಸ್ ಬಂತು ಬಸ್

ಗೌರ್ನಮೆಂಟ್ ಬಸ್

ಕೆಂಪು ಬಿಳಿ ಬಣ್ಣಾ

ನೋಡು ಬಾರಣ್ಣಾ


ಆರು ಚಕ್ರ ಇರುವುದು

ಎರಡು ಲೈಟ್ ಉರಿವುದು

ನಾ ಕಂಡಕ್ಟರ್ ಆಗುವೆ

ರೈಟ್ ರೈಟ್ ಹೇಳುವೆ

ಸೀಟಿಯನ್ನು ಊದುವೆ!

***************************************

ಗೋಡೆ ಮೇಲಿನ ಗಡಿಯಾರಕ್ಕೆ

ಯಾಕೋ ತುಂಬಾ ನಿದ್ದೆ

ಟಿಕ್ ಟಿಕ್ ಎಂದು ಹಾಡಲು ಮರೆತು

ಗೊರಕೆ ಹೊಡಿದದ್ದೇ


ಗೊರಕೆ ಹೊಡಿಯೋ ಗಡಿಯಾರಕ್ಕೆ

ಹೊಕ್ಕಿತೊಂದು ಜೇಡ

ಹೊರಗೆ ಬರಕ್ಕೆ ಆಗಲೇ ಇಲ್ಲಾ

ಅದರ ಫಜೀತಿ ಬೇಡ!

***********************************

ಕರಡಿ ಬೆಟ್ಟಕೆ ಹೋಯಿತು

ಕರಡಿ ಬೆಟ್ಟಕೆ ಹೋಯಿತು

ಕರಡಿ ಬೆಟ್ಟಕೆ ಹೋಯಿತೂ

ನೋಟ ನೋಡಲು


ನೋಡಿತೇನದು ನೋಡಿತೇನದು

ಬೆಟ್ಟದ ಇನ್ನೊಂದು ಭಾಗಾ

ಬೆಟ್ಟದ ಇನ್ನೊಂದು ಭಾಗ

ಕರಡಿ ನೋಡಿತು

ಹಲಸು ತಂದಿತು...ಜೇನ ಕಲಸಿತು

ಮರಿಗಳಿಗೆ ತಿನ್ನಿಸಿ

ತಾನು ತಿಂದು ತೇಗಿತು!

*****************************************

ಪೆನ್ಸಿಲ್ಲಣ್ಣನ ಮೊದಲನೆ ಶತ್ರು

ಅಳಿಸೋ ರಬ್ಬರ್ರು

ತಪ್ಪು ಬರೆದರೆ ಒಪ್ಪೋದಿಲ್ಲಾ

ಎನೇ ಹೇಳಿದ್ರೂ


ಪೆನ್ಸಿಲ್ಲಣ್ಣನ ಎರಡನೆ ಶತ್ರು

ಹೆರೆಯೋ ಮೆಂಡರ್ರು

ಮೊಂಡಾಗಿರಲು ಬಿಡೋದೇ ಇಲ್ಲಾ

ಎಷ್ಟೇ ಬಡ್ಕೊಂಡ್ರೂ!

**********************************

ಘಂಟೆಯ ನೆಂಟನೆ ಓ ಗಡಿಯಾರ

ಬೆಳ್ಳಿಯ ಬಣ್ಣದ ಗೋಳಾಕಾರ

ಹೊತ್ತನು ತಿಳಿಯಲು ನೀನಾಧಾರ

ಟಿಕ್ ಟಿಕ್ ಗೆಳೆಯಾ

ಟಿಕ್ ಟಿಕ್ ಟಿಕ್


ಹಗಲೂ ಇರಳೂ ಒಂದೇ ಬಾಳು

ನೀನಾವಾಗಲೂ ದುಡಿಯುವ ಆಳು

ಕಿವಿಯನು ಹಿಂಡಲು ನಿನಗದೇ ಕೂಳು

ಟಿಕ್ ಟಿಕ್ ಗೆಳೆಯಾ

ಟಿಕ್ ಟಿಕ್ ಟಿಕ್

*********************************


ಕಾಮನ ಬಿಲ್ಲು ಕಮಾನು ಕಟ್ಟಿದೆ

ಮೋಡದ ನಾಡಿನ ಬಾಗಿಲಿಗೆ

ಬಣ್ಣಗಳೇಳನು ತೋರಣ ಮಾಡಿದೆ

ಕಂದನ ಕಣ್ಣಿಗೆ ಚಂದನ ಮಾಡಿದೆ

ಹಣ್ಣಿನ ಹೂವಿನ ಹೊನ್ನನು ಕೂಡಿದೆ

ಮಕ್ಕಳಿಗೋಕುಳಿ ಆಟವನಾಡಿದೆ

ತೆಂಗಿನ ತೋಟದ ಬುಡದಲಿ ಮೂಡಿದೆ

ಭೂಮಿಗೆ ಬಾನಿಗೆ ಸೇತುವೆ ಮಾಡಿದೆ

***********************************

ಹತ್ತು ಹತ್ತು ಇಪ್ಪತ್ತು

ತೋಟಕೆ ಹೋದನು ಸಂಪತ್ತು

ಇಪ್ಪತ್ತು ಹತ್ತು ಮೂವತ್ತು

ಕೈಯಲಿ ಒಂದು ಕಲ್ಲಿತ್ತು

ಮೂವತ್ತು ಹತ್ತು ನಲವತ್ತು

ಎದುರಿಗೆ ಮಾವಿನ ಮರವಿತ್ತು

ನಲವತ್ತು ಹತ್ತು ಐವತ್ತು

ಮರದಲಿ ಕಾಯಿಯು ತುಂಬಿತ್ತು

ಐವತ್ತು ಹತ್ತು ಅರವತ್ತು

ಕಲ್ಲನು ಬೀರಿದ ಸಂಪತ್ತು

ಅರವತ್ತು ಹತ್ತು ಎಪ್ಪತ್ತು

ಕಾಯಿಯು ತಪತಪ ಉದುರಿತ್ತು

ಎಪ್ಪತ್ತು ಹತ್ತು ಎಂಭತ್ತು

ಮಾಲಿಯ ಕಂಡನು ಸಂಪತ್ತು

ಎಂಭತ್ತು ಹತ್ತು ತೊಂಭತ್ತು

ಕಾಲುಗಳೆರಡು ನಡುಗಿತ್ತು

ತೊಂಭತ್ತು ಹತ್ತು ನೂರು

ಮನೆಯನು ತಲುಪಿದ ಸಂಪತ್ತು
*********************************

ನಾನು ಒಬ್ಬ ಮಂಗಣ್ಣ

ನಂಗೆ ಉಂಟು ಬಾಲ

ಹಾಕುವೆ ನಾನು ಲಾಗ

ನಾನು ಒಬ್ಬ ಮಂಗಣ್ಣ


ಹಣ್ಣು ಗಿಣ್ಣು ತಿನ್ನುವೆ

ಸಿಪ್ಪೆ ಗಿಪ್ಪೆ ಎಸೆಯುವೆ

ಡಾನ್ಸ್ ಗೀನ್ಸ್ ಮಾಡುವೆ

ಟ್ವಿಸ್ಟ್ ಗಿಸ್ಟ್ ಮಾಡುವೆ

ಕುಂಟು ಕಾಲಲಿ ನಡೆಯುವೆ

ನಾಲ್ಕು ಕಾಲಲಿ ನಡೆಯುವೆ

ಲಾಗ ಗೀಗ ಹಾಕುವೆ

ನಾನು ಒಬ್ಬ ಮಂಗಣ್ಣ
********************************
: ಬೊಮ್ಮನಹಳ್ಳಿಯ ಕಿಂದರಿಜೋಗಿ :


ತುಂಗಾ ತೀರದ ಬಲಗಡೆಯಲ್ಲಿ ಹಿಂದಲ್ಲಿದ್ದುದು ಬೊಮ್ಮನ ಹಳ್ಳಿ
ಅಲ್ಲೇನಿಲಿಗಳ ಕಾಟವೆ ಕಾಟ ಅಲ್ಲಿನ ಜನಗಳಿಗತಿಗೋಳಾಟ
ಇಲಿಗಳು ಬಡಿದವು ನಾಯಿಗಳ ಇಲಿಗಳು ಕಡಿದವು ಬೆಕ್ಕುಗಳ
ಕೆಲವನು ಕೊಂದವು ಕೆಲವನು ತಿಂದವು ಕೆಲವನು ಬೆದರಿಸಿ ಹಿಂಬಾಲಿಸಿದವು
ಅಲ್ಲಿಯ ಮೂಶಿಕ ನಿಕರವು ಸೊಕ್ಕಿ ಎಲ್ಲರ ಮೇಲೆಯು ಕೈಬಾಯಿಕ್ಕಿ
ಹೆದರಿಕೆಯಿಲ್ಲದೆ ಬೆದರಿಕೆಯಿಲ್ಲದೆ ಕುಣಿದವು ಯಾರನು ಲೆಕ್ಕಿಸದೆ
ಹಾಲಿನ ಮಡಕೆಯನೊಡೆದವು ಕೆಲವು ಅನ್ನದ ಗಡಿಗೆಯ ಪುಡಿ ಮಾಡಿದವು
ಬಡಿಸುವ ಅಡುಗೆಯ ಭಟ್ಟನ ತಡೆದು ಕೈಯಲ್ಲಿರುವಾ ಸಟ್ಟುಗವ
ಭೀತಿಯೆ ಇಲ್ಲದೆ ನೆಕ್ಕಿದವು ಈ ಪರಿ ತಿನ್ನುತ ಸೊಕ್ಕಿದವು
ಧಾನ್ಯವನೆಲ್ಲವ ಬಿಕ್ಕಿದವು
ಟೋಪಿಯ ಒಳಗಡೆ ಗೂಡನು ಮಾಡಿ ಹೆತ್ತವು ಮರಿಗಳನು
ಪೇಟದ ಒಳಗಡೆ ಆಟವನಾಡಿ ಕಿತ್ತವು ಸರಿಗೆಯನು
ಗೋಡೆಗೆ ತಗುಲಿಸಿದಂಗಿಯ ಜೇಬಿನ ದಿನವೂ ಜಪ್ತಿಯ ಮಾಡಿದವು
ಮಲಗಿರೆ ಹಾಸಿಗೆಯನ್ನೇ ಹರಿದವು ಕೇಶಛೇದನ ಮಾಡೀದವು
ಬೆಣ್ಣೆಯ ಕದ್ದವು ಬೆಲ್ಲವ ಮೆದ್ದವು ಎಣ್ಣೆಗೆ ಬಿದ್ದವು ದಿನದಿನವು
ಗೌಡರು ಮಾತಾಡುತ ಕುಳಿತಲ್ಲಿ ಬಹಳ ಗಲಾಟೆಯ ಮಾಡಿದವು
ಗರತಿಯರಾಡುವ ಹರಟೆಗೆ ತುಂಬಾ ತೊಂದರೆಯಿತ್ತು ಗಿಜಿಬಿಜಿ ಮಾಡಿ
ಊರಿನ ಮಕ್ಕಳ ಕೈಯಲ್ಲಿದ್ದಾ ತಿಂಡಿಯ ಕಸಿದವು ಧೈರ್ಯದಲಿ

ಇಲಿಗಳ ಕೊಲ್ಲಲು ಊರಿನ ಜನರು ತುಂಬಾ ಯತ್ನವ ಮಾಡಿದರು
ಕಡಿದರೆ ಮುರಿದುವು ಕತ್ತಿಗಳೆಲ್ಲ ಹೋಡೆದರೆ ಮಡಿದವು ಕೋಲುಗಳೆಲ್ಲ
ಇಲಿಗಳ ಬೇಟೆಯನಾಡುತಲಿರಲು ಮುರಿದವು ತಿಮ್ಮನ ಕಾಲುಗಳು
ಭೃಂಗಾಮಲಕದ ತೈಲವ ಹಚ್ಚಿದ ಶೇಶಕ್ಕನ ನುಣ್ಣನೆ ಫಣಿವೇಣಿ
ಬೆಳಗಾಗೇಳುತ ಕನ್ನದಿ ನೋಡೆ ಇಲಿಗಳಿಗಾಗಿತ್ತೂಟದ ಫೇಣಿ
ನುಗ್ಗುತ ಕೊಟ್ಟಿಗೆಗಿರುಳಿನ ಹೊತ್ತು ಉಂಡವು ತಿಂದವು ದನಗಳ ಕೆಚ್ಚಲು
ಹರಿದವು ಕರುಗಳ ಬಾಲಗಳ
ಸಿದ್ದೋಜೈಗಳು ಶಾಲೆಗೆ ಹೋಗಿ ಪಾಟವ ಬೊಧಿಸುತಿದ್ದಾಗ
ಅಂಗಿಯ ಜೇಬಿಂ ಹೆಳವಿಲಿಯೊಂದು ಛಂಗನೆ ನೆಗೆಯಿತು ತೂತನು ಮಾಡಿ
ಲೇವಡಿಯೆಬ್ಬಿಸೆ ಬಾಲಕರೆಲ್ಲ ಗುರುಗಳಿಗಾಯಿತು ಬಲುಗೇಲಿ
ಬೇಟೆಯನಾಡಲು ಅಡುಗೆಯ ಮನೆಯಲಿ ಬಿದ್ದಳು ಬಳೆಯೊಡೆದಚ್ಚಮ್ಮ
ಮೂಶಿಕ ಯಾಗವ ಮಾಡಿದರು ದೇವರ ಪೂಜೆಯ ಮಾಡಿದರು
ಹರಕೆಯ ಹೊತ್ತರು ಕಾಣಿಕೆ ತೆತ್ತೆರು ಮಂತ್ರವ ದಿನದಿನ ಹೇಳಿದರು
ನಿಶ್ಫಲವಾದವು ಮಂತ್ರಗಳೆಲ್ಲ ಬಾಯಿ ಬಾಯಿ ಕಳೆದರು ಶಾಸ್ತ್ರಿಗಳೆಲ್ಲ
ಕಣ್ ಕಣ್ ಬಿಟ್ಟರು ಪಂಡಿತರೆಲ್ಲ ಕಂಬನಿಗರೆದರು ಜನರೆಲ್ಲ

ಮುಂದಿನ ಮಾರ್ಗವ ಕಾಣದೆ ಜನರು ಗೌಡನ ಬಳಿ ಹೋದರು ಗುಂಪಾಗಿ
ಗೌಡನು ಜನರನು ಕುರಿತಿಂತೆಂದನು
ಇಲಿಗಳ ಕೊಲ್ಲಲು ದಾರಿಯನಾರು ತೋರಿಸಿಕೊಡುವಿರೊ ಅವರಿಗೆ ಆರು
ಸಾವಿರ ನಾಣ್ಯಗಳೀಯುವೆ ನಾನು ತಿಳಿದವರಿದ್ದರೆ ಬನ್ನಿರಿಯೇನು ?

ಏನಿದು ಗುಜುಗುಜು ಗುಂಪಿನಲಿ ? ನೋಡಿದರೇನಾಶ್ಚರ್ಯವನು
ಆಲಿಸಿ ದೂರದ ಕಿಂದಿರಿನಾದ ಬರುವನು ಯಾರೋ ಕಿಂದರಿ ಜೋಗಿ
ಹತ್ತಿರ ಹತ್ತಿರಕವನೈತಂದ ಬಂದಿತು ಜನರಿಗೆ ಬಲು ಆನಂದ
ನೋಡಿರಿ ನೋಡಿರಿ ಕಿಂದರಿ ಜೋಗಿ ನೋಡಿದರೆಲ್ಲರು ಬೆರಗಾಗಿ
ಬಂದನು ಬಂದನು ಕಿಂದರಿ ಜೋಗಿ ಕೆದರಿದ ಕೂದಲ ಗಡ್ಡದ ಜೋಗಿ
ನಾನಾ ಬಣ್ಣದ ಬಟ್ಟೆಯ ಜೋಗಿ ಕೈಯಲಿ ಕಿಂದರಿ ಹಿಡಿದಾ ಜೋಗಿ
ಜೋಗಿಯು ಹತ್ತಿದ ಗೌಡನ ಕಟ್ಟೆಯ ಗೌಡನ ಹೃದಯವು ಬಾಯಿಗೆ ಬಂದಿತು
ಗಡಗಡ ನಡುಗಿದನು
ತೊದಲುತ ಬೆದರುತ ಕಂಪಿತ ಕಂಠದಿ ನೀನಾರೆಂದನು ಜೋಗಿಯ ಕುರಿತು
ಅದಕಾ ಜೋಗಿಯು ಇಂತೆಂದ ಕೇಳಿದರೆಲ್ಲರು ಬಾಯಿಬಿಟ್ಟು
ಹಿಮಗಿರಿಯಲ್ಲಿಹ ಜೋಗಿಯು ನಾನು ಪರಮೇಶ್ವರನಿಗೆ ಗೆಳೆಯನು ನಾನು
ನಿಮ್ಮೀ ಗೋಳನು ಕೇಳಿದ ಶಿವನು ನನ್ನನ್ನಿಲ್ಲಿಗೆ ಕಳುಹಿದನು
ಇಲಿಗಳನೆಲ್ಲಾ ಕೊಂದರೆ ಆರು ಸಾವಿರ ನಾಣ್ಯಗಳೀಯುವೆಯೇನು ?

ಉಬ್ಬಿತು ಉಕ್ಕಿತು ಗೌಡನ ಸಂತಸ ಶಹಭಾಸೆಂದರು ಜನರೆಲ್ಲ
ಗೌಡನು ಜೋಗಿಯ ಕುರಿತಿಂತೆಂದನು ಜನರದನೆಲ್ಲಾ ಕೇಳಿದರು
ಬೇಕಾದುದ ನಾ ಕೊಡುವೆನು ಜೋಗಿ ಆರೇಕಿನ್ನೆರಡಾದರು ಕೊಡುವೆನು
ಬೇಕಾದುದನೆಲ್ಲವ ನೀ ಕೇಳು ಊರೇ ನಿನ್ನದು ನಾ ನಿನ್ನಾಳು

ಮರು ಮಾತಾಡದೆ ಕಿಂದರಿ ಜೋಗಿ ಕಟ್ಟೆಯನಿಳಿದನು ಬೀದಿಗೆ ಹೋಗಿ
ಗಡ್ಡವ ನೀವುತ ಸುತ್ತಲು ನೋಡಿ ಮಂತ್ರವ ಬಾಯಲಿ ಮಣಮಣ ಹಾಡಿ
ಕಿಂದರಿ ಬಾರಿಸತೊಡಗಿದನು ಜಗವನೆ ಮೋಹಿಸಿತಾ ನಾದ !
ಏನಿದು ? ಏನಿದು ಗಜಿಬಿಜಿಯೆಲ್ಲಿ ? ಊರನೆ ಮುಳುಗಿಪ ನಾದವಿದೆಲ್ಲಿ ?
ಇಲಿಗಳೂ ! ಇಲಿಗಳೂ ! ಇಲಿಗಳ ಹಿಂಡು ಬಳಬಳ ಹರಿದವು ಇಲಿಗಳ ದಂಡು
ಅನ್ನದ ಮಡಕೆಯನಗಲಿದವು ಟೋಪಿಯ ಗೂಡನು ತ್ಯಜಿಸಿದವು
ಬಂದವು ಅಂಗಿಯ ಜೇಬನು ಬಿಟ್ಟು ಮಕ್ಕಳ ಕಾಲಿನ ಚೀಲವ ಬಿಟ್ಟು
ಹಾರುತ ಬಂದವು ಓಡುತ ಬಂದವು ನೆಗೆಯುತ ಬಂದವು ಕುಣಿಯುತ ಬಂದವು
ಜೋಗಿಯು ಬಾರಿಸೆ ಕಿಂದರಿಯ ಸಣ್ಣಿಲಿ, ದೊಡ್ಡಿಲಿ, ಮೂಗಿಲಿ, ಸುಂಡಿಲಿ
ಅಣ್ಣಿಲಿ, ತಮ್ಮಿಲಿ, ಅವ್ವಿಲಿ, ಅಪ್ಪಿಲಿ, ಮಾವಿಲಿ, ಭಾವಿಲಿ, ಅಕ್ಕಿಲಿ, ತಂಗಿಲಿ,
ಗಂಡಿಲಿ, ಹೆಣ್ಣಿಲಿ, ಮುದುಕಿಲಿ, ಹುಡುಗಿಲಿ ಎಲ್ಲಾ ಬಂದವು ಓಡೋಡಿ
ಜೋಗಿಯು ಬಾರಿಸೆ ಕಿಂದರಿಯ ! ಬಂದವು ನಾನಾ ಬಣ್ಣದ ಇಲಿಗಳು
ಕೆಂಪಿನ ಇಲಿಗಳು, ಹಳದಿಯ ಇಲಿಗಳು, ಬೆಳ್ಳಿಲಿ, ಕರಿಯಿಲಿ, ಗಿರಿಯಿಲಿ, ಹೊಲದಿಲಿ,
ಕುಂಕುಮ ರಾಗದ, ಚಂದನ ರಾಗದ, ಹಸುರಿನ ಬಣ್ಣದ, ಪಚ್ಚೆಯ ವರ್ಣದ,
ಸಂಜೆಯ ರಾಗದ, ಗಗನದ ರಾಗದ ನಾನಾ ವರ್ಣದ ಇಲಿಗಳು ಬಂದವು
ಕುಣಿಯುತ ನಲಿಯುತ ಸಂತಸದಿ ಜೋಗಿಯು ಬಾರಿಸೆ ಕಿಂದರಿಯ
ನೋಡಿರಿ ! ಕಾಣಿರಿ ! ಬರುತಿಹವಿನ್ನೂ ಅಟ್ಟದ ಮೇಲಿಂ ಬರುವುವು ಕೆಲವು,
ಕಣಜದ ಕಡೆಯಿಂ ಬರುವುವು ಹಲವು, ಓಹೋ ! ಬಂದವು ಹಿಂಡಿಂಡಾಗಿ !
ಕುಂಟಿಲಿ, ಕಿವುಡಿಲಿ, ಹೆಳವಿಲಿ, ಮೂಗಿಲಿ ಚೀ ಪೀ ಎನ್ನುತ ಕೂಗುತಲೋಡಿ
ಗಹಗಹಿಸುತ ನೆರೆ ನೆರೆನಲಿದಾಡಿ ಬಂದಿತು ಮೂಶಿಕ ಸಂಕುಲವು
ಜೋಗಿಯು ಬಾರಿಸೆ ಕಿಂದರಿ ನಾದ !

ಬೊಮ್ಮನ ಹಳ್ಳಿಯ ಕಿಂದರಿ ಜೋಗಿ ಹೊರಟನು ತುಂಗಾ ನದಿಯೆಡೆಗಾಗಿ
ಕಿಂದರಿ ನಾದವು ಗಗನಕ್ಕೇರಿತು ಇಲಿಗಳನೆಲ್ಲಾ ಮನಮೋಹಿಸಿತು
ಕಿಂದರಿ ಜೋಗಿಯ ಹಿಂಬಾಲಿಸಿದರು ಜನಗಳು ನೋಡಲು ಕೌತುಕವ
ಜೋಗಿಯು ನಡೆದನು, ಇಲಿಗಳು ನಡೆದವು ಸೇರಿದರೆಲ್ಲರು ನದಿಯೆಡೆಯ
ಹೊಳೆಯಾ ಮರಳಿನ ಗುಡ್ಡೆಯ ತುಂಬಾ ನೋಡಿದರೆಲ್ಲೆಲ್ಲಿಯು ಇಲಿ-ಇಲಿ ಗುಂಪೆ !
ಉಸಿರಾಡದೆ ನಿಂತರು ಜನರೆಲ್ಲಾ ಮುಂದೇನಾಗುವುದೆಂದಲ್ಲಿ
ದಿವಿಜರು ಕವಿದರು ಗಗನದಲಿ ಹೂಮಳೆ ಕರೆದರು ಹರುಶದಲಿ
ದುಂದುಭಿ ನಾದವ ಮಾಡಿದರು ಕಾಣದ ಬೆರಗನು ನೋಡಿದರು
ಸುತ್ತಲು ನೋಡಿಮ್ ಕಿಂದರಿ ಜೋಗಿ ನಡೆದನು ಹೊಳೆಯ ನೀರಿನ ಮೇಲೆ
ಸೇರಿದ ಜನರೆಲ್ಲರು ಬೆರಗಾಗಿ ಜಯಜಯ ಜೋಗಿ ಎಂದರು ಕೂಗಿ
ಇಲಿಗಳು ಒಂದರ ಮೇಲೊಂದು ಹಿಂಬಾಲಿಸಿದವು ಜೋಗಿಯನು
ಬುಳುಬುಳು ನೀರೊಳು ಮುಳುಗಿದವೆಲ್ಲಾ ಹೆಣವಾಗಲ್ಲಿಯೆ ತೇಲಿದವು
ಕಿಂದರಿ ಜೋಗಿಯು ಹಿಂದಕೆ ಬಂದು ಗೌಡನೆ ನಾಣ್ಯಗಳನು ಕೊಡು ಎಂದ
ಗೌಡನು ನೋಡಿದ ಬೆರಗಾಗಿ ! ಸಾವಿರ ಆರೂ ಎಂದನು ಜೋಗಿ !
ಗೌಡನು ನಿಂತನು ತಲೆತೂಗಿ ! ಕಿಂದರಿ ಜೋಗಿಯೆ ಹೇಳುವೆ ಕೇಳು
ಸಾವಿರ ಆರನು ನಾ ಕೊಡಲಾರೆನು ನೀ ಮಾಡಿದ ಕೆಲಸವು ಹೆಚ್ಚಲ್ಲ
ಸುಮ್ಮನೆ ಕಿಂದರಿ ಬಾರಿಸಿದೆ ಇಲಿಗಳ ಹೊತ್ತೆಯ ನೀನೇನು ?
ಅವುಗಳು ತಮ್ಮಷ್ಟಕೆ ತಾವೇ ಬಿದ್ದವು ಹೊಳೆಯಲಿ ಮುಳುಗಿದವು
ಕೊಡುವೆ ನೀ ಪಟ್ಟಿಹ ಶ್ರಮಕಾಗಿ ಕಾಸೈದಾರನು ಕೊಡುವೆನು ಜೋಗಿ
ಪುರಿಗಡಲೆಯನು ಕೊಂಡುಕೊ ಹೋಗಿ !
ಗೌಡನು ಈ ಪರಿ ನುಡಿಯಲು ಜೋಗಿಯು ಕಂಗಳ ಕೆರಳಿಸುತಿನ್ತೆಂದ
ಆಡಿದ ಭಾಶೆಯ ತಪ್ಪುವೆಯ ? ಸಾವಿರ ಆರನು ಕೊಡದಿರೆ ನೀನು
ಮತ್ತೀ ಕಿಂದರಿ ಬಾರಿಸುವೆ ! ನಿಮ್ಮೀ ಹಳ್ಳಿಯನಾರಿಸುವೆ !
ಸಾವಿರವಾರನು ಕೊಡುವವರಾರು ಅಪ್ಪನ ಗಂಟೇ ? ಹೊಗೋ ಜೋಗಿ
ನೀ ಮಾಡುವುದೇನನು ನೋಡುವೆನು ಮರುಮಾತಾಡದೆ ತೊಲಗಿಲ್ಲಿಂದ !
ಹೆಚ್ಚಿಗೆ ಮಾತೇನಾದರು ನೀನಾಡಿದರೆ ಕಿಂದರಿಯೊಡೆಸುವೆ ಗಡ್ಡವ ಸುಡಿಸುವೆ
ನಿನ್ನೀ ತಲೆಯನು ಬೋಳಿಸುವೆ ಕಿಂದರಿ ತಂತಿಯು ಹರಿಯುವವರೆಗೂ
ಬಾರಿಸು ! ಬೇಡೆಂದವರಾರು ? ಬಲ್ಲೆಯ ನಾನಾರೆಂಬುದನು ?
ಊರ ಪಟೇಲ ಹಳ್ಳಿಗೆ ಗೌಡ ! ನಡೆನಡೆ ಮರುಮಾತಾಡದಿರು

ಗೌಡನ ನುಡಿಯನು ಕೇಳಿದ ಜೋಗಿ ಕಿಂದರಿ ಬಾರಿಸತೊಡಗಿದನು
ನಾದವು ಉಬ್ಬಿತು ಊರೊಳಗೆಲ್ಲ ಕರೆಯಿತು ಊರಿನ ಹುಡುಗರನೆಲ್ಲ
ಓಡುತ ಬಂದರು ಬಾಲಕರು ಕೇಳದೆ ಹಿರಿಯರ ಮಾತುಗಳ
ಬೊಮ್ಮನ ಹಳ್ಳಿಯ ಕಿಂದರಿ ಜೋಗಿ ಕಿಂದರಿ ಬಾರಿಸಿದನು ಇಂಪಾಗಿ
ಟಿಂಗ್ ಟಿಂಗ್ ಟಿಂಗ್ ಟಿಂಗ್ ನಾದವ ಕೇಳಿ ಚಂಗ್ ಚಂಗ್ ನೆಗೆದರು ಬಾಲಕರಾದಿ
ಕಿಂದರಿ ಜೋಗಿಯು ಹೊರಟನು ಮುಂದೆ ಬಾಲಕರೆಲ್ಲರು ಹರಿದರು ಹಿಂದೆ
ಊರಿನ ಜನರೆಲ್ಲರು ಭಯದಿಂದ ಎಂದರು ಮಕ್ಕಳ ಗೌಡನೆ ಕೊಂದ
ಹಾಳಾದೆವು ಗೌಡನ ದೆಸೆಯಿಂದ ಗೌಡನು ಕೂಗಿದ ಹೆದರಿಕೆಯಿಂದ
ಜೋಗಿ, ಜೋಗಿ, ಹಿಂದಿರುಗೆಂದ ಕಿಂದರಿ ಜೋಗಿಯು ನಡೆದನು
ಮುಂದೆಮಕ್ಕಳು ಓಡುತ ಹೋದರು ಹಿಂದೆ
ಕುಂಟರು ಭರದಿಂದೋಡಿದರು ಕುರುಡರು ನೋಟವ ನೋಡಿದರು
ಮೂಗರು ಸವಿ ಮಾತಾಡಿದರು ಕಿವುಡರು ನಾದವ ಕೇಳಿದರು
ಜನರೆಲ್ಲಾ ಗೋಳಾಡಿದರು ಬೊಮ್ಮನ ಹಳ್ಳಿಯ ಕಿಂದರಿ ಜೋಗಿ
ಮಕ್ಕಳ ಹೊಳೆಯೊಳಗಿಳಿಸುವನೆಂದು ಓಡಿದರೆಲ್ಲರು ಜೋಗಿಯ ಹಿಂದೆ
ಬೆಟ್ಟದ ಬುಡವನು ಸೇರಿದ ಜೋಗಿ ನಿಲ್ಲುವನೆಂದೆಲ್ಲಾ ಬಯಸಿದರು

ಏನಿದು ನಿಂತರು ಜನರೆಲ್ಲ ? ಅಯ್ಯೋ ಮಕ್ಕಳೆ ಎಂದೆನುತ !
ಜೋಗಿಯು ಬಾರಿಸೆ ಕಿಂದರಿಯ ಬಂಡೆಯು ದವಡೆಯನಾಕಳಿಸುತ್ತ
ಬಾಯನು ತೆರೆಯಿತು ಆ ಗಿರಿಯ ! ಜೋಗಿಯು ನುಗ್ಗಿದನದರಲ್ಲಿ
ಹಿಂದೆಯೆ ಹೋದರು ಬಾಲಕರು ! ಬೆಟ್ಟವು ಹಾಕಿತು ಬಾಗಿಲ ಬೇಗ
ಹಿಂದಕ್ಕುಳಿದವನೊಬ್ಬನೆ ಕುಂಟ ಅಲ್ಲಿಗೆ ಬಂದರು ಜನರೋಡಿ
ಕುಂಟನ ಕಂಡರು ಒಂಟಿಯಲಿ ಕುಂಟನು ಉಳಿದವರೆಲ್ಲೆಂದು
ಕೇಳಲು ಬೆಟ್ಟವ ತೋರಿದನು ಕಂಬನಿಗರೆದರು ಗೋಳಾಡಿದರು
ಉಳಿದಾ ಕುಂಟನು ಅಳುತಿಂತೆಂದ
ಅಯ್ಯೋ ಹೋಯಿತೆ ಆ ನಾಕ ! ಅಯ್ಯೋ ಬಂದಿತೆ ಈ ಲೋಕ !

6 comments:

Bistappayya Nadiger said...

Thank you very much for your interest and curiosity in collecting. A good venture to recollect our age old unfiorgettable songs.

Bistappayya Nadiger said...

Thank you very much for your curiosity and a good venture in collecting these old but unforgettable rhymes.

Guru Prasad said...

ತುಂಬ ಉಪಯುಕ್ತ ಸಂಗ್ರಹ. ತುಂಬ ಧನ್ಯವಾದಗಳು ಮತ್ತು ನಿಮ್ಮ ಅಭಿರುಚಿಗೆ ಅಭಿನಂದನೆಗಳು

Guru Prasad said...

ತುಂಬ ಉಪಯುಕ್ತ ಸಂಗ್ರಹ. ತುಂಬ ಧನ್ಯವಾದಗಳು ಮತ್ತು ನಿಮ್ಮ ಅಭಿರುಚಿಗೆ ಅಭಿನಂದನೆಗಳು

RAVINDRA G G said...

ಚಂದವಾಗಿದೆ ಧನ್ಯವಾದಗಳು...

Shashidhar Dyamani said...

ಧನ್ಯವಾದಗಳು,ಎಲ್ಲ ಕಡಲ ಮುತ್ತುಗಳನ್ನು ಹೆಕ್ಕಿ ತಂದು ಪೋಣಿಸಿ ಒಂದೆಡೆ ಮಾಲೆಯಾಗಿಸಿ ಆಸ್ವಾದಿಸುವುದಕ್ಕೆ ಅಣಿ ಮಾಡಿಕೊಟ್ಟಿರುವುದಕ್ಕೆ!