Wednesday 13 April 2011

ನಮ್ಮ ಸೀರೆಯಲ್ಲಿ ಕಿವೀ ನೀರೆಯರು!

ನಾನು ಮೊದಲು ಕೆಲಸ ಮಾಡುತ್ತಿದ್ದದ್ದು ಈ ಊರಿನ ಜಿಲ್ಲಾ ಆರೋಗ್ಯ ಕೇಂದ್ರದಲ್ಲಿ. ಇಲ್ಲಿ ಹೆಂಗಸರಿಗೆ ಸಾಮಾನ್ಯವಾಗಿ ಬರುವ ಸರ್ವೈಕಲ್ ಕ್ಯಾನ್ಸರಿಗೆ ತಡೆ ಹಾಕಲು ಇಲ್ಲಿನ ಸರ್ಕಾರ 1991ರಿಂದ ಈಚೆಗೆ ಹುಟ್ಟಿದ್ದ ಎಲ್ಲಾ ಹೆಣ್ಣು ಮಕ್ಕಳಿಗೆ ಅವರವರ ಸ್ಕೂಲಿಗೇ ಹೋಗಿ ಉಚಿತ ಚುಚ್ಚುಮದ್ದು ಹಾಕುವ ಪ್ರಾಜೆಕ್ಟಿನಲ್ಲಿ ನಂದೊಂದು ಕೆಲಸ. ಆಯಾ ಸ್ಕೂಲುಗಳಿಗೆ ಪಬ್ಲಿಕ್ ಹೆಲ್ತ್ ನರ್ಸುಗಳ ಜೊತೆ ಹೋಗಿ, ಎಷ್ಟು ಮಕ್ಕಳಿಗೆ ಚುಚ್ಚುಮದ್ದು ಕೊಟ್ಟರು, ಯಾವ ಯಾವ ಮಕ್ಕಳು ಚಕ್ಕರ್ ಹೊಡೆದಿದ್ದರು, ಯಾರು ಯಾರಿಗೆ ಚುಚ್ಚುಮದ್ದಿನಿಂದ ರಿಯಾಕ್ಷನ್ ಆಯಿತು, ಅವೆಲ್ಲವನ್ನೂ ಪಟ್ಟಿ ಮಾಡಿ, ಮಿನಿಸ್ಟ್ರಿ ಆಫ್ ಹೆಲ್ತಿಗೊಂದು ರಿಪೋರ್ಟ್ ಮಾಡುವುದು ನನ್ನ ಕೆಲಸ. ಇಲ್ಲಿ ಇಂಜಕ್ಷನ್ ಕೊಡುವ ಮೊದಲೇ ಎಲ್ಲಾ ಮಕ್ಕಳಿಗೂ ಅವರವರ ಸ್ಕೂಲು ಟೀಚರುಗಳು ಒಂದೊಂದು ಫಾರಂ ಕೊಟ್ಟು, ಅದನ್ನು ಅವರಪ್ಪ/ ಅವರಮ್ಮನ ಒಪ್ಪಿಗೆ ಪಡೆದು ಸಹಿ ಮಾಡಿಸಿಕೊಂಡು ಬಂದಿರಬೇಕು. ಅಪ್ಪ/ಅಮ್ಮನ ಒಪ್ಪಿಗೆ ಇಲ್ಲದ ಮಕ್ಕಳಿಗೆ ನಾವು ಇಂಜಕ್ಷನ್ ಕೊಡುವಂತಿಲ್ಲ. ನಾವು ಸ್ಕೂಲಿನಲ್ಲಿದ್ದಾಗ, ಕಾಲರ ಇಂಜಕ್ಷನ್ ತೆಗೆದುಕೊಂಡಿದ್ದು ನೆನಪಿಗೆ ಬರುತ್ತಿತ್ತು. ಆಗ ನಮಗೆಲ್ಲಾ ಇಂಜಕ್ಷನ್ ಕೊಡುತ್ತಾರೆಂದು ಸ್ಕೂಲಿಗೆ ಹೋದ ಮೇಲಷ್ಟೇ ಗೊತ್ತಾಗುತ್ತಿತ್ತು. ಸಾಲಾಗಿ ಎಲ್ಲಾ ಕ್ಲಾಸಿನವರನ್ನು ನಿಲ್ಲಿಸಿ, ನಾವೆಷ್ಟೇ ಕೊಸರಿಕೊಂಡರೂ, ಅತ್ತು ಕರೆದರೂ, ಬಾಗಿಲ ಹಿಂದೆ ಅವಿತು ನಿಂತರೂ ಬಿಡದೇ ಎಲ್ಲರ ತೋಳಿಗೂ ಚುಚ್ಚಿ ಹೋಗಿದ್ದರು.


ಇಲ್ಲಿ ಮುಕ್ತ ಲೈಂಗಿಕ ವಾತಾವರಣವಿರುವುದರಿಂದಲೋ ಏನೋ ಸರ್ವೈಕಲ್ ಕ್ಯಾನ್ಸರ್ ರೋಗಿಗಳು ಬಹಳ. ಮಕ್ಕಳು, ಓದಲು ಕಷ್ಟವೆಂದು ಮಧ್ಯದಲ್ಲೇ ಸ್ಕೂಲು ಬಿಟ್ಟು, ಗೆಳೆಯ/ಗೆಳತಿಯರ ಜೊತೆ ವಾಸಿಸಲು ಶುರುಮಾಡುತ್ತಾರೆ. ಎಲ್ಲೋ ಅಲ್ಲೊಬ್ಬ ಇಲ್ಲೊಬ್ಬರು ಯಾವುದಾದರೂ ಡಿಪಾರ್ಟ್ಮೆಂಟ್ ಸ್ಟೋರುಗಳಲ್ಲಿ ಪಾರ್ಟ್ ಟೈಮ್ ಕೆಲಸಕ್ಕೆ ಸೇರಿ ತಮ್ಮ ತಮ್ಮ ಖರ್ಚು-ವೆಚ್ಚ ತೂಗಿಸಿಕೊಳ್ಳುತ್ತಾರೆ. ಚೆನ್ನಾಗಿ ಓದಿ ಒಳ್ಳೆಯ ಕೆಲಸಕ್ಕೆ ಸೇರಬೇಕು, ಅಪ್ಪ- ಅಮ್ಮನನ್ನು ನೋಡಿಕೊಳ್ಳಬೇಕು, ಮನೆಗೆ ಆಧಾರವಾಗಬೇಕು...ಇವೆಲ್ಲಾ ಇಲ್ಲಿ ಇಲ್ಲ! ನನ್ನ ಸಹದ್ಯೋಗಿಯೊಬ್ಬಳ ಮಗ 10ನೇ ಕ್ಲಾಸಿಗೆ ನಮಸ್ಕಾರ ಹೊಡೆದು, ಯಾವುದೋ ಪ್ಲಂಬಿಂಗ್ ಕೋರ್ಸ್ ಮಾಡಿ ಪ್ಲಂಬರ್ ಆಗಿದ್ದಾನೆ. ಅದನ್ನು ಅವರಮ್ಮ ಹೆಮ್ಮೆಯಿಂದ ಹೇಳಿಕೊಳ್ಳುತ್ತಾಳೆ ಕೂಡ. ಎಲ್ಲರೂ ಹಾಗೆಯೇ ಅಂತಲ್ಲಾ! ಅದಕ್ಕೇ ಏನೋ ಎಲ್ಲಾ ಪ್ರಮುಖ ಕೆಲಸಗಳಲ್ಲಿ ಹೆಚ್ಚಿನವರು ಇಂಗ್ಲೆಂಡ್, ಆಸ್ಟ್ರೇಲಿಯಾ, ಭಾರತ, ಚೀನಾದವರು. ನನ್ನ ಗೆಳೆತಿಯೊಬ್ಬರು ಇಲ್ಲಿಯ ಸ್ಕೂಲಿನಲ್ಲಿ ಮ್ಯಾಥ್ಸ್ ಟೀಚರ್. ಅವರ ಪ್ರಕಾರ ನಮ್ಮ ಮತ್ತು ಚೀನಾ ಮಕ್ಕಳೇ ಓದಿನಲ್ಲಿ ಮುಂದಿರುವುದು, ಹೋಮ್ ವರ್ಕ್ ತಪ್ಪದೇ ಮಾಡುವವರು, ಟೆಸ್ಟ್ ಗಳಲ್ಲೆಲ್ಲಾ ಹೆಚ್ಚು ನಂಬರು ತೆಗೆಯುವವರು! ಮಕ್ಕಳಿಗೆ ಹೆಚ್ಚು ಹೋಮ್ ವರ್ಕ್ ಕೊಡಬೇಡಿ, ಅವರನ್ನು ಮನೆಯಲ್ಲಿ ಓದಿಸಲು ಹೇಳಬೇಡಿರೆಂದು ದೂರು ತರುವವರೆಲ್ಲಾ ಇಲ್ಲಿಯವರಂತೆ.

ಮಕ್ಕಳಿಗೆ ಯಾವುದು ಸರಿ, ಯಾವುದು ತಪ್ಪು ಎಂದು ಬಿಡಿಸಿ ಹೇಳುವವರಾರು? ಪನಿಶ್ ಮೆಂಟ್ ಕೊಡುವ ಹಾಗಿಲ್ಲ! ಹೊಡೆದರೆ ಪೋಲಿಸರಿಗೆ ಪೋನ್ ಮಾಡಬೇಕೆಂದು ಮಕ್ಕಳಿಗೇ ಗೊತ್ತು! ನಮ್ಮಲ್ಲಿರುವ ದಂಡಂ ದಶಗುಣಂ ಸೂತ್ರ ಇಲ್ಲಿಲ್ಲ. ಅಲ್ಲಲ್ಲಿ ಭಾರತೀಯ ಮಕ್ಕಳೂ ತಮ್ಮ ತಮ್ಮ ಅಪ್ಪ-ಅಮ್ಮಂದಿರಿಗೆ ಹೆದರಿಸಲು ಕಲಿತಿವೆ. ಇವರೇ ನಮ್ಮ ತಂದೆ-ತಾಯಿಯರು ಎನ್ನುವಷ್ಟು ಬುದ್ಧಿ ಬರುವ ಹೊತ್ತಿಗೆ, ಮಲ ಅಪ್ಪನೋ/ಅಮ್ಮನೋ ಮನೆಗೆ ಬಂದಿರುತ್ತಾರೆ. ನಮ್ಮ ಮನೆ, ನಮ್ಮಪ್ಪ, ನಮ್ಮಮ್ಮ, ಅಜ್ಜಿ-ತಾತ ಎಂಬ ಸೆಳೆತವೇ ಇಲ್ಲಿಯವರಿಗಿಲ್ಲ. ಮಕ್ಕಳನ್ನು ಬೆಳೆಸಿ, ಓದಿಸಿ ಒಳ್ಳೇ ಪ್ರಜೆಗಳನ್ನಾಗಿಸಬೇಕೆಂಬ ಜವಾಬ್ದಾರಿ ಪಾಲಕರಿಗಿಲ್ಲ. ಇಲ್ಲಿಯ ಪದ್ಧತಿಯೇ ಹೀಗಿದೆ. ವಯಸ್ಸಾದ ಅಪ್ಪ-ಅಮ್ಮಂದಿರನ್ನು ನೋಡಿಕೊಳ್ಳಬೇಕೆಂಬ ಹೊಣೆ ಮಕ್ಕಳಿಗಿಲ್ಲ. ಹೇಗೂ ರೆಸ್ಟ್ ಹೋಂಗಳು ಇದ್ದೇಇವೆ. ಎಲ್ಲವನ್ನೂ ಸರ್ಕಾರ ನೋಡಿಕೊಳ್ಳುತ್ತದೆಂಬ ನೆಮ್ಮದಿ. ವರ್ಷಕ್ಕೊಮ್ಮೆ ಬರುವ ಫಾದರ್‍ಸ್ ಡೇ, ಮದರ್‍ಸ್ ಡೇ ಗೊಂದು ಗಿಫ್ಟ್ ಕೊಟ್ಟರೆ ಮುಗಿಯಿತು. ನೀವು ನಂಬುತ್ತೀರೋ ಇಲ್ಲವೋ, ಇಲ್ಲಿನ ಕೆಲವು ಮಕ್ಕಳು ಸ್ಕೂಲಿಗೆ ಹಲ್ಲುಜ್ಜದೇ ಬರುತ್ತಾರೆ. ಮಕ್ಕಳಿಗೆ ಮಧ್ಯಾಹ್ನ ಊಟದ ನಂತರ ಹಲ್ಲುಜ್ಜಿಸುವ ಕೆಲಸ ಟೀಚರ್ ಗಳದ್ದು! ಬೆಳಗಿನ ತಿಂಡಿ ತಿನ್ನದೇ ಬರುತ್ತಾರೆಂದು ಸರ್ಕಾರಕ್ಕೇ ಗೊತ್ತು! ಅದಕ್ಕಾಗಿಯೇ ನಾವು ಮಕ್ಕಳಿಗೆ ಚುಚ್ಚುಮದ್ದು ನೀಡುವ ಮುನ್ನ, ತಿಂಡಿ ತಿಂದು ಬಂದಿದ್ದೀಯಾ ಇಲ್ಲವಾ ಎಂದು ಕೇಳಬೇಕು. ಹೆಚ್ಚಿನವರ ಉತ್ತರ ಇಲ್ಲ! ಅಂತಹವರಿಗೆ ಇಂಜಕ್ಷನ್ ಕೊಡುವ ಮುನ್ನ ಮೈಲೋ/ಸೇಬು ಏನಾದರೂ ಕೊಟ್ಟು ನಂತರ ಸೂಜಿ.

ನನಗೆ ನಿಜಕ್ಕೂ ಆತಂಕಕಾರಿ ಎನಿಸಿದ್ದು, ಇಲ್ಲಿಯ ಹೆಣ್ಣು ಮಕ್ಕಳಿಗೆ ಇಂಜಕ್ಷನ್ ಕೊಡುವ ಮೊದಲು ನರ್ಸುಗಳು ಕೇಳಬೇಕಾದ ಮೊದಲ ಪ್ರಶ್ನೆ.." ನೀನು ಗರ್ಭಿಣಿಯಾಗಿದ್ದೀಯಾ...?" ಎಂದು. 12-13 ವರ್ಷಕ್ಕೇ ಗರ್ಭಿಣಿಯಾದವರಿದ್ದಾರೆ. ಅಂತಹವರಿಗೆ ಇಂಜಕ್ಷನ್ ಕೊಡುವ ಹಾಗಿಲ್ಲ. ಅವರು " ಇಲ್ಲ"ವೆಂದರಷ್ಟೇ ಇಂಜಕ್ಷನ್. ಕೆಲವರಿಗೆ "ಸಂದೇಹ"ವಿದ್ದರೆ, ನರ್ಸುಗಳು ಅಲ್ಲಿಯೇ ಪರೀಕ್ಷಿಸಬೇಕು. ಇನ್ನೂ ಗಂಭೀರವೆನಿಸಿದ್ದು, ಒಂದಿಬ್ಬರಿಗೆ ಮೊದಲ ಸುತ್ತಿನ ಚುಚ್ಚುಮದ್ದು ಕೊಟ್ಟು, ಎರಡನೇ ಸುತ್ತಿಗೆ ಬರುವಷ್ಟರಲ್ಲೇ ಗರ್ಭಿಣಿಯಾದವರನ್ನು ನೋಡಿ. ಮೊದಲ ಡೋಸಿಗೂ ಎರಡನೇ ಡೋಸಿಗೂ ಇರುವ ಕಾಲಾಂತರ ಕೇವಲ ಎರಡು ತಿಂಗಳು! ಹೋಗಲಿ ಅಪ್ಪನೆನಿಸಿಕೊಂಡವನು ಯಾರಪ್ಪಾ...ಎಂದು ನೋಡಿದರೆ, ಅವಳ ಕ್ಲಾಸಿನವನೇ! ಕೆಲವರು ಅಬಾರ್ಷನ್ ಮಾಡಿಸಿಕೊಂಡರೆ, ಹೆಚ್ಚಿನವರು " ಸಿಂಗಲ್ ಮಾಮ್ " ಗಿರುವ ಸೌಲಭ್ಯಗಳ ಆಸೆಗೆ ಬಿದ್ದು ಮಕ್ಕಳನ್ನು ಹೆರುತ್ತಾರೆ. ನಮ್ಮಲ್ಲಿ ಹತ್ತನೇ ಕ್ಲಾಸ್ ಯಾಕೆ, ಎರಡನೇ ಪಿಯುಸಿ ಹೆಣ್ಣು ಮಕ್ಕಳ ಮುಖದಲ್ಲಿ ಕಾಣಬರುವ ಎಳಸುತನ, ಮುಗ್ಧಭಾವ, ಇಲ್ಲಿಯ ಆರನೇ ಕ್ಲಾಸಿನ ಮಕ್ಕಳ ಮುಖದಲ್ಲೂ ಕಾಣಸಿಗುವುದಿಲ್ಲ. ಯಜಮಾನರ ಕೊಲೀಗ್ ಮೊನ್ನೆ ಮಾರ್ಕೆಟ್ಟಿನ್ನಲಿ ಸಿಕ್ಕಿದ್ದಳು, ಅವಳೂ 14ನೇ ವಯಸ್ಸಿನಿಂದಲೇ ಹೆರಲು ಶುರುಮಾಡಿದವಳೇ, ಜೊತೆಗಿದ್ದವಳನ್ನು ಮಗಳೆಂದು ಪರಿಚಯಿಸಿದಳು. ವಯಸ್ಸು ಕೇಳಿದರೆ ಹನ್ನೆರಡು, ಆದರೆ ಮೈ-ಮುಖ ನೋಡಿದರೆ ನಮ್ಮ ಕಡೆಯ ದೊಡ್ಡ ಸೀಮೆ ಹಸುವಿನಂತೆ! ಯಾರೋ ಬಾಯ್ ಫ್ರೆಂಡ್ ಜೊತೆಗಿದ್ದಾಳೆಂದು, ಅವನು ಎಲ್ಲೋ ಊರಿಂದ ಹೊರಗೆ ಹೋಗಿದ್ದರಿಂದ ಜೊತೆ ಇರಲು ಬಂದಿದ್ದಾಳೆಂದು ಅವರಮ್ಮ ಹೇಳಿದಳು.

ಆಫೀಸಿನಲ್ಲಿದ್ದಾಗ ನನ್ನ ಜೊತೆಯವಳೊಮ್ಮೆ ನನ್ನನ್ನು "ನೀನು ಯಾವ ಚರ್ಚಿಗೆ ಹೋಗುತ್ತೀ??" ಎಂದಿದ್ದಕ್ಕೆ ನಾನು ಕಕ್ಕಾಬಿಕ್ಕಿ! "ಅರೆ, ನಾನ್ಯಾಕೆ ಚರ್ಚಿಗೆ ಹೋಗಬೇಕು?" ಅದಕ್ಕೆ ಅವಳಿಗೆ," ನಾನು ಹಿಂದೂ. ನಮಗೆ ದೇವಸ್ಥಾನಗಳಿವೆ ಹೋಗಲು, ನಾವು ಚರ್ಚಿಗೆ ಬರುವುದಿಲ್ಲ" ಎಂದೆ. " ಅರೆ ನನಗೆ ಗೊತ್ತು ನೀನು ಇಂಡಿಯನ್ ಅಂತ, ಆದರೆ ನಮ್ಮ ಚರ್ಚಿಗೆ ಸುಮಾರು ಜನ ಇಂಡಿಯನ್ಸ್ ಬರುತ್ತಾರೆ...ನೀನು ಬಾ" ಎಂದಳು. " ಅವರು ಯಾಕೆ ಬರುತ್ತಾರೆ ನನಗೆ ಗೊತ್ತಿಲ್ಲ, ಬಹುಷಃ ಅವರು ಕ್ರಿಶ್ಚಿಯನ್ನರು ಇರಬಹುದು" ಎಂದೆ. ಅವಳಿಗೆ ಆಶ್ಚರ್ಯ, ಚರ್ಚಿಗೆ ಬರದವರೂ ಈ ಜಗತ್ತಿನಲ್ಲಿ ಇದ್ದಾರೆಯೇ ಎಂದು! ಮನೆಗೆ ಬಂದು ಯಜಮಾನರ ಹತ್ತಿರ ನಡೆದಿದ್ದೆಲ್ಲಾ ಹೇಳಿ, ಕಡೆಗೆ ನನ್ನನ್ನು ಚರ್ಚಿಗೆ ಕರೆದದ್ದನ್ನೂ ಹೇಳಿದೆ. " ಇವರಲ್ಲಿ ಅರ್ಧಕ್ಕೆ ಅರ್ಧ ಜನ ಚರ್ಚಿಗೆ ಹೋಗುವುದಿಲ್ಲ, ಇನ್ನು ನಿನ್ನನ್ನು ಕರೆದರೇ? ನಿನ್ನನ್ನೂ ಅವರ ಜೊತೆ ಸೇರಿಸಿಕೊಳ್ಳಲು ಇರಬಹುದು, ಹೋಗುತ್ತೀಯೇನೋ ನೋಡು" ಎಂದರು. ಇನ್ನೂ, ನನ್ನ ಧರ್ಮ, ನಮ್ಮ ದೇವರುಗಳನ್ನೇ ಸರಿಯಾಗಿ ತಿಳಿದುಕೊಂಡಿಲ್ಲದ ನಾನು, ಎಲ್ಲಾ ಬಿಟ್ಟು ಇವರ ಚರ್ಚಿಗೆ ಹೋಗಿ ಕುಳಿತುಕೊಳ್ಳಲೇ? ಪ್ರೈಮರಿಯಿಂದ ಹೈಸ್ಕೂಲಿನವರೆಗೂ ಕ್ರಿಸ್ತನ ಧರ್ಮ ಸಂದೇಶಗಳನ್ನು ಸಾಕು ಸಾಕೆನಿಸುವಷ್ಟು ನಮಗೆ ತುರುಕಿ ಆಗಿದೆ. ಇನ್ನು ಅಲ್ಲೇನು ಹೋಗಿ ಹೊಸದು ಕೇಳಲಿ?

ಇಂಡಿಯಾ ಅಂದರೆ, ಬರೀ ಭಿಕ್ಷುಕರು ಎಂದು ಮೂಗು ಮುರಿಯುವ ಇವರು ಬಾಲಿವುಡ್ ಎಂದರೆ ಕಣ್ಣು ಅರಳಿಸುತ್ತಾರೆ! ಹಿಂದೀ ಸಿನಿಮಾಗಳ ಬಗ್ಗೆ ನನಗಿಂತ ಹೆಚ್ಚು ತಿಳುವಳಿಕೆ! ಸಿನೆಮಾಗಳ ಹೆಸರು ಹೇಳಲು ಬರದಿದ್ದರೂ ಅವುಗಳಲ್ಲಿರುವ ಡ್ಯಾನ್ಸ್ ಗಳ ಬಗ್ಗೆ ಸಿಕ್ಕಾಪಟ್ಟೆ ಕುತೂಹಲ! ಒಮ್ಮೆ ನನ್ನ ಮ್ಯಾನೇಜರ್, ನೀನು ಈ ಸಿನೆಮಾ ನೋಡಿದ್ದೀಯಾ? ಅದರೆ ಹೆಸರು ಹೇಳಲು ಬರುವುದಿಲ್ಲವೆಂದು ಸ್ಪೆಲ್ಲಿಂಗ್ ಬರೆದು ತೋರಿಸಿದರು. ಓದಿದರೆ " ಕಾಂಟೆ!" ಅವರಿಗೆ ಇಷ್ಟವಾಯಿತಂತೆ, ಇಂಗ್ಲೀಷಿನ ಡಬ್ಬಿಂಗ್ ಅದು ಎಂದೆ. " ಹೌದು, ಆದರೆ ಹಿಂದಿಯಲ್ಲಿ ಡ್ಯಾನ್ಸ್ ಗಳಿವೆ ನನಗಂತೂ ಇಷ್ಟವಾಯಿತು ಅದಕ್ಕೆ ಅದರ ಡಿವಿಡಿ ಖರೀದಿಸಿದ್ದೇನೆ, ನನ್ನ ಮಕ್ಕಳಿಗೂ ಇಷ್ಟ, ಯಾವಾಗಲಾದರೊಮ್ಮೆ ಹಾಕಿಕೊಂಡು ನೋಡುತ್ತೇವೆ" ಎಂದರು.

ಹೋದ ತಿಂಗಳು, ನನ್ನ ಹಳೇ ಆಫೀಸಿನವಳು ಫೋನ್ ಮಾಡಿ, " ಏನೋ ಮಾತಾಡುವುದಿದೆ, ನೀನು ಯಾವಾಗ ಫ್ರೀ ಇರುತ್ತೀಯಾ ಹೇಳು" ಎಂದಳು. ಮತ್ತೆಲ್ಲೋ ಚರ್ಚು, ಬೈಬಲ್ ರೀಡಿಂಗ್ ಇಂತದ್ದೇ ಏನೋ ಇರಬೇಕು, ಬರಲಿ ಸರಿಯಾಗಿ ಅಂದರಾಯಿತು ಎಂದು ಶನಿವಾರ, ಭಾನುವಾರ ಯಾವಾಗಲಾದರೂ ಬಾ ಎಂದಿದ್ದೆ. ಮತ್ತೆ ಪೋನ್ ಮಾಡಿ ಇನ್ನು ಹದಿನೈದು ದಿನಕ್ಕೆ, ಅವರ ಚರ್ಚಿನಲ್ಲಿ, ಅದೇನೋ ಕಾರ್ಯಕ್ರಮಕ್ಕೆ ಅವರೆಲ್ಲರೂ ಸೇರಿ ಬಾಲಿವುಡ್ ಡ್ಯಾನ್ಸ್ ಮಾಡುತ್ತಾರೆಂದೂ, ನೀನು ಬಾ ..ಇನ್ನೊಬ್ಬಳೂ ಇದ್ದಾಳೆ ಮೂವರು ಸೇರಿಕೊಂಡರೆ, ನಮಗೇ ಪ್ರೈಜ್ ಗ್ಯಾರಂಟಿ, ಹೂಂ ಅನ್ನು"...ಎಂದು ಇಬ್ಬರೂ ಒಬ್ಬರಾದಮೇಲೊಬ್ಬರು ಫೋನಿನಲ್ಲಿ ಗಂಟು ಬಿದ್ದರು." ಡ್ಯಾನ್ಸಾ??" ಸ್ಕೂಲಿನಲ್ಲಿದ್ದಾಗ ಅದ್ಯಾವುದೋ ಗ್ರೂಪ್ ಡ್ಯಾನ್ಸಿನಲ್ಲಿ ಕೈಕಾಲು ಕುಣಿಸಿದ್ದು ಬಿಟ್ಟರೆ ಮತ್ತೊಂದಿಲ್ಲ!! ಅದೆಲ್ಲಾ ಇವರಿಗ್ಯಾಕೆ ಎಂದು " ನನಗೆ ಡ್ಯಾನ್ಸ್ ಗೀನ್ಸು ಬರುವುದಿಲ್ಲ, ಆದರೆ ನಿಮಗೇನಾದರೂ ಹೆಲ್ಪ್ ಬೇಕಿದ್ದರೆ ಫೋನ್ ಮಾಡಿರೆಂದು ಜಾರಿಕೊಂಡೆ. ಅದಾದ ನಂತರ ಗೂಗಲ್ ನಲ್ಲಿ ಬಾಲಿವುಡ್ ಡ್ರೆಸ್ಸುಗಳನ್ನು ನೋಡುವುದು, ಅದು ಹೇಗೆ, ಇದು ಹೇಗೆಂದು ಮೇಲ್ ಮಾಡಿ ನನ್ನ ತಲೆತಿನ್ನುವುದು ಶುರುವಾಯಿತು. ಚೂಡಿದಾರಗಳ, ಸೀರೆಗಳ ಬಗ್ಗೆ ಕೇಳೀ ಕೇಳಿ ನನ್ನ ತಾಳ್ಮೆ ಪರೀಕ್ಷಿಸಿದರು. ನಾನು ಆಫೀಸಿಗೆ ಚೂಡಿದಾರ್ ಹಾಕಿಕೊಂಡೇ ಹೋಗುತ್ತಿದ್ದೆ. ಕಡೆಗೊಮ್ಮೆ, ನಿನ್ನ ಹತ್ತಿರವಿರುವ ಚೂಡಿದಾರ್ ಗಳಲ್ಲೇ ಒಂದು ಕೊಡು, ಅದನ್ನೇ ಬಾಲಿವುಡ್ ಡ್ಯಾನ್ಸಿಗೆ ಹಾಕಿಕೊಳ್ಳುತ್ತೇವೆಂದು ಬಾಂಬು ಸಿಡಿಸಿದರು. ಇದೆಲ್ಲಿಗೆ ಬಂತು ಗ್ರಹಚಾರ? ಇವರಿಬ್ಬರೂ ನನಗಿಂತ ದಪ್ಪx ದಪ್ಪ! ನನ್ನ ಡ್ರೆಸ್ಸುಗಳು ಇವರಿಗೆ ಹೇಗೆ ಬರಲು ಸಾಧ್ಯ?! "ಹೋಗಲಿ ನಿನ್ನ ಫೋಟೋ ಸೀರೆ ಕೊಡು, ನಾವು ಟೀ ಶರ್ಟಿನ ಮೇಲೆ ಉಡುತ್ತೇವೆ ನೀನೇ ಉಡಿಸಿಕೊಡು" ಎಂದು ನನಗೇ ಸಲಹೆ ಕೊಟ್ಟರು. ಕೆಲಸಕ್ಕೆ ಸೇರಿದ ಹೊಸದರಲ್ಲಿ ನಮ್ಮ ಮದುವೆಯ ಫೋಟೋ ತೋರಿಸಿದ್ದಕ್ಕೆ, ಇವರಿಬ್ಬರೂ ನನ್ನ ರೇಷ್ಮೆ ಸೀರೆಯ ಬಗ್ಗೆ ಕೇಳಿದ್ದು, ನಮ್ಮ ಮ್ಯಾರೇಜು ಆನಿವರ್ಸರಿ ದಿನದಂದು ಮಾತ್ರ ಮತ್ತೆ ಆ ಸೀರೆಯುಡುವುದೆಂದು ಹೇಳಿದ್ದು, ಇವರಿಬ್ಬರೂ ಸೀರೆಯನ್ನು ಮೆಚ್ಚಿಕೊಂಡಿದ್ದು ನೆನಪಿಗೆ ಬಂತು. " ಯಪ್ಪಾ, ಇವರ ಯಾವುದೋ ಸೊಟ್ಟ ಕಾರ್ಯಕ್ರಮಕ್ಕೆ ನನ್ನ ಮದುವೆ ಸೀರೆ ಕೊಡುವುದೇ? ನನ್ನ ಅಕ್ಕನಿಗೇ ಅದರ ಅಂಚನ್ನೂ ಮುಟ್ಟಲು ಬಿಟ್ಟವಳಲ್ಲ ನಾನು, ಇನ್ನು ಇವರಿಗೆ? ಇದ್ಯಾಕೋ ನನ್ನ ತಲೆಗೇ ಬಂತು, ಹೇಗಾದರೂ ತಪ್ಪಿಸಿಕೊಳ್ಳಬೇಕೆಂದು, " ಬಾಲಿವುಡ್ ಡ್ಯಾನ್ಸ್ ಗಳಲ್ಲಿ ಯಾರಾದರೂ ರೇಷ್ಮೆ ಸೀರೆಯುಟ್ಟು ಕುಣಿಯುತ್ತಾರೆಯೇ? ಅದಕ್ಕೆ ಬೇರೆಯೇ ಸೀರೆಗಳಿರುತ್ತವೆಂದು ಒಂದಷ್ಟು ಗೂಗಲಿಸಿ ಕಳಿಸಿದೆ.

" ಇದೇನೋ ಸರಿ, ಆದರೆ ಈ ಸೀರೆಗಳೆಲ್ಲಿ ಸಿಗುತ್ತವೆ?, ನಮಗೆ ಸಹಾಯ ಮಾಡುತ್ತೇನೆಂದು ಹೇಳಿದ್ದೀಯಾ, ಈಗ ನೀನೇ ಏನಾದರೂ ಅರೇಂಜ್ ಮಾಡು, ನಾವಂತೂ ಅಲ್ಲಿ ಡ್ಯಾನ್ಸ್ ಮಾಡಲೇ ಬೇಕು " ಎಂದು ಹಟ ಹಿಡಿದರು.

ಸರಿ ಇವರಂತೂ ನನ್ನನ್ನು ಬಡಪೆಟ್ಟಿಗೆ ಬಿಡುವವರಲ್ಲ ಎಂದು," ನಿಮಗೆ ಸೀರೆ ತಾನೆ? ತರಿಸಿಕೊಡುತ್ತೇನೆ" ಎಂದೆ. " ಬರೀ ಸೀರೆಯೇ? ಇಲ್ಲಿ ನೋಡು, ಹೀರೋಯಿನ್ ಏನೆಲ್ಲಾ ಹಾಕಿದ್ದಾಳೆ, ನಮಗೆ ಅವೆಲ್ಲಾ ಬೇಕು ಎಂದು ಐಶ್ವರ್ಯ ರೈಳ ಯಾವುದೋ ಡ್ಯಾನ್ಸ್ ಫೋಟೋ ಗೂಗಲಿನಲ್ಲಿದ್ದನ್ನು ತೋರಿಸಿದರು. ಐಶ್ವರ್ಯಳ ತರಹ ಇಬ್ಬರನ್ನು ಹಾಕಿದರೆ, ಇವರೊಬ್ಬಬ್ಬರಾಗುತ್ತಾರೆ, ಅಂತಹದರಲ್ಲಿ, ಅವಳಂತೆ ಇವರಿಗೆಲ್ಲಿಂದ ಸೀರೆ, ಕೈಗೆ, ಮೈಗೆ ಮ್ಯಾಚಿಂಗ್ ಹೊಂದಿಸಿ ಕೊಡಲಿ?!

ಆದದ್ದಾಗಲಿ, ಇಷ್ಟು ಆಸೆಯಿಂದ ಕೇಳುತ್ತಿದ್ದಾರೆ, ಊರಿನಿಂದ ತರಿಸಿದರಾಯಿತು ಎಂದು ಭರವಸೆ ಕೊಟ್ಟೆ. ಇಂಡಿಯಾದಿಂದ, ಅದೂ ಎಲ್ಲವೂ ಹೊಸತು! (ಇಲ್ಲಿರುವ ಇಂಡಿಯನ್ ಸ್ಟೋರಿನಲ್ಲಿ ಬಾಡಿಗೆಗೆ ಎಲ್ಲವನ್ನೊ ಕೊಡುತ್ತಾರೆಂದು ಅವರೇ ಸುದ್ದಿ ತಂದಿದ್ದರು. ಬಾಡಿಗೆಗೆ ದುಡ್ಡೂ ಕೊಡಬೇಕು, ನಂತರ ಅವೆಲ್ಲವನ್ನೂ ವಾಪಸ್ ಕೊಡಬೇಕು ) ಈಗ ತರಿಸುತ್ತಿರುವುದನ್ನು ತಾವೇ ಇಟ್ಟುಕೊಳ್ಳಬಹುದೆಂಬುದೇ ಇಬ್ಬರಿಗೂ ಖುಷಿ! ಭರವಸೆಯೇನೋ ಕೊಟ್ಟಿದ್ದಾಗಿತ್ತು, ಫಂಕ್ಷನ್ನಿಗೆ ಇನ್ನು ಹತ್ತು ದಿನಗಳಿವೆ, ಅಷ್ಟರಲ್ಲಿ ತರಿಸುವುದು ಹೇಗೆ? ಪೂನಾದಲ್ಲಿರುವ ನನ್ನ ಓರಗಿತ್ತಿಗೆ ಫೋನಿನಲ್ಲೇ ಇವರ ಮೈ-ಕೈ ಅಳತೆಯೆಲ್ಲಾ ಹೇಳಿ, ಅವರಿಗೆ ಆದಷ್ಟು ಬೇಗ ಎಲ್ಲವನ್ನೂ ಕೊರಿಯರ್ ಮಾಡಲು ಹೇಳಿದೆ. ಪಾಪ! ನಾನು ಕೇಳಿದೆನೆಂದು ಅವರು ಇದ್ದ ಕೆಲಸವೆಲ್ಲಾ ಬಿಟ್ಟು, ಒಂದೇ ದಿನದಲ್ಲಿ ಶಾಪಿಂಗ್ ಮಾಡಿ ಕೊರಿಯರ್ ಕಳಿಸಿದರು.

ಕೊರಿಯರ್ ಬಂದ ಮೇಲೆ, ಮನೆಗೊಮ್ಮೆ ಇಬ್ಬರೂ ಬಂದು ಎಲ್ಲವನ್ನೂ ಹಾಕಿಕೊಂಡು ಖುಷಿ ಪಟ್ಟಿದ್ದೂ ಆಯಿತು. ಫಂಕ್ಷನ್ ಭಾನುವಾರವಿದ್ದರಿಂದ ನಮ್ಮ ಮನೆಗೆ ಬರಲು ಹೇಳಿದ್ದೆ. ಇಬ್ಬರಿಗೂ ಸೀರೆ ಉಡಿಸಿ, ನಮ್ಮ ಮನೆಯಲ್ಲೇ ಫೋಟೋ ತೆಗೆದು ಶುಭ ಹಾರೈಸಿ ಕಳಿಸಿದೆ.

ಮರುದಿನ, ಪ್ರೈಜ್ ಯಾರೋ ಫಿಜೀ ಇಂಡಿಯನ್ನಳಿಗೆ ಕೊಟ್ಟು ಬರೀ ಮೋಸ ಮಾಡಿದರೆಂದೂ, ಆದರೆ ಎಲ್ಲರೂ ನಮ್ಮನ್ನು ಮೆಚ್ಚಿದರೆಂದು ಫೋನ್ ಮಾಡಿ ಹೇಳಿದರು. ಫಂಕ್ಷನ್ನಿನ್ನ ಫೋಟೋದಲ್ಲಿ ಇವರಿಬ್ಬರೇ ನಿಜಕ್ಕೂ ಚೆನ್ನಾಗಿ ಕಾಣಿಸುತ್ತಿದ್ದದ್ದು. ಫಿಜೀ ಇಂಡಿಯನ್ನಳಿಗೆ ಬಹುಮಾನ ಕೊಟ್ಟಿದ್ದು ನನಗೂ ಸರಿಯೆನಿಸಲಿಲ್ಲ. ಹೊರಗಿನವರು ಇಷ್ಟು ಚೆನ್ನಾಗಿ ಇಂಡಿಯನ್ನರಂತೆ ಡ್ರೆಸ್ ಮಾಡಿಕೊಂಡಿದ್ದಕ್ಕೆ ಇವರಿಗೇ ಬರಬೇಕಿತ್ತೆಂದು ನನ್ನ ಅನಿಸಿಕೆ. ದುಡ್ಡು ಎಷ್ಟಾಯಿತೆಂದು ಕೊಡಲು ಬಂದವರಿಗೆ, ದುಡ್ಡು ಬೇಡವೆಂದೂ ಎಲ್ಲವನ್ನೂ ನನ್ನ ನೆನಪಿಗೆ ಇಟ್ಟುಕೊಳ್ಳಿರೆಂದು ಹೇಳಿದಾಗ, ಇಬ್ಬರ ಕಣ್ಣಲ್ಲೂ ನೀರು! ನನಗೆ ದುಡ್ಡೇನೋ ಬೇಡ, ಆದರೆ ಒಂದು ಕಂಡೀಶನ್ ಎಂದೆ. " ಏನದು ಕಂಡೀಶನ್? ಸೀರೆ ಮಾತ್ರ ವಾಪಸ್ ಕೇಳಬೇಡ!" ಎಂದು ಇಬ್ಬರೂ ಒಟ್ಟಿಗೆ ಹೇಳಿದರು. ನನಗೆ ಸೀರೆ ಬೇಡ, ನನ್ನ ಬ್ಲಾಗಿನಲ್ಲಿ ನಿಮ್ಮಿಬ್ಬರ ಫೋಟೋ ಹಾಕಿಕೊಳ್ಳಲೇ ಎಂದೆ. " ಓಹೋ ಧಾರಾಳವಾಗಿ ಹಾಕಿಕೋ" ಎಂದು ಇಬ್ಬರೂ ಅನುಮತಿ ಇತ್ತಿದ್ದಕ್ಕೆ ನೋಡಿ ಅವರಿಬ್ಬರ ಫೋಟೋಗಳು.

ನೀಲಿ ಸೀರೆಯಲ್ಲಿರುವವಳು ಕ್ಯಾರೆನ್. ಕಪ್ಪು ಸೀರೆಯವಳು ವಿಕ್ಕಿ.





3 comments:

sunaath said...

ನೀಲ-ಗಿರಿಯವರೆ,
ಬಹಳ ದಿನಗಳ ನಂತರ, ಬ್ಲಾಗಿಗೆ ಬಂದಿದ್ದೀರಿ. ವಿಳಂಬವಾದರೂ ಸಹ ಉತ್ತಮವಾದ, ಮಾಹಿತಿಪೂರ್ಣ ಲೇಖನ.

HegdeG said...

Lekhana chennagide.
aa neereyara seere vyamoha mattu preeti mecchabeku :-D

NilGiri said...

ಧನ್ಯವಾದಗಳು @ಕಾಕಾ ಮತ್ತು ಹೆಗಡೆಯವರಿಗೆ.