Wednesday, 24 March 2010

ಮಳೆ ಬಂದ್ರೆ ಸಾಕಪ್ಪ!!

"ಇದೇನು? ಈಗಷ್ಟೇ ಬಿಸಿಲು ಶುರುವಾಗಿದೆ, ಆಗ್ಲೆ ಮಳೆ ಬೇಕು ಅಂದ್ರೆ ಹೇಗೆ??" ಅಂತೀರಾ...? ಊರಲ್ಲಿ ನಿಧಾನಕ್ಕೆ ಬಿಸಿಲು ಜೋರಾಗುತ್ತಿರುವುದು ಮನೆಗೆ ಫೋನ್ ಮಾಡಿದಾಗಲೆಲ್ಲಾ ತಿಳಿಯುತ್ತಿದೆ. ನನ್ನ ಕಷ್ಟ ಬೇರೆಯದೇ. ಮೊದಲಿದ್ದ ಊರಿನಲ್ಲಿ ಇದ್ದಿದ್ದೇ ಎರಡು ಸೀಸನ್ ಗಳು. ಒಂದು ಚಳಿಗಾಲ, ಇನ್ನೊಂದು ವಿಪರೀತ ಚಳಿಗಾಲ! ಆ ಊರಲ್ಲಿ ಹೆಚ್ಚು ಕಡಿಮೆ ನಾನಿದ್ದದ್ದು ಆರು ತಿಂಗಳಷ್ಟೇ. ಯಜಮಾನರಿಗೆ ದಮ್ಮಯ್ಯ ಗುಡ್ಡಯ್ಯ ಹಾಕಿ ಆಕ್ಲೆಂಡಿಗೆ ಬಂದಿದ್ದೆ. ಅಲ್ಲೂ ಯಾಕೋ ನೀರಿನ ಋಣ ಇದ್ದಿದ್ದು ಕಡಿಮೆಯೇ. ನಂತರ "ವಿಂಟರ್‍ ಲೆಸ್ ನಾರ್ತ್" ಎಂದು ಪ್ರಸಿದ್ಧಿ ಪಡೆದಿರುವ ಈ ಊರಿಗೆ ಪಾದಾರ್ಪಣೆ! ಬಂದು ತಳ ಊರಿ " ಆಹಾ! ಊರು ಎಂದರೆ ಹೀಗಿರಬೇಕು, ಮನೆಯೆಂದರೆ ಹೀಗಿರಬೇಕು" ಎಂದು ನನ್ನಷ್ಟಕ್ಕೆ ನಾನೇ ಹಿಗ್ಗಿ ಹೀರೇಕಾಯಿಯಾಗಿದ್ದೆ. ಊರಿನಲ್ಲಿದ್ದ ಮನೆಗಳೆಲ್ಲಿ ಕೆಲವು ನನಗೆ " ಬೇಡ" ಎನಿಸಿದರೆ, ಕೆಲವು ಯಜಮಾನರಿಗೆ " ಬ್ಯಾಡ" ಎನಿಸಿತ್ತು. ಹೀಗಾಗಿ ಊರಿನಿಂದ ಹತ್ತು ಕೀಮಿ ದೂರವಿದ್ದ ಈ ಮನೆಯನ್ನೇ ನಾನು ಸೆಲೆಕ್ಟ್ ಮಾಡಿ, ಯಜಮಾನರಿಗೂ " ಹೂಂ" ಅನ್ನಿಸಿದ್ದೆ. ಬಂದ ಹೊಸತರಲ್ಲಿ ಊರಿಂದ ದೂರ ಎನ್ನುವುದನ್ನು ಬಿಟ್ಟರೆ ಮಿಕ್ಕೆಲ್ಲಾ ವಿಷಯದಲ್ಲೂ ಈ ಮನೆ ಚೆನ್ನಾಗಿಯೇ ಇತ್ತು.


ನಾವು ಊರಿನಿಂದ ಹತ್ತು ಕಿಮೀ ದೂರವಿರುವುದು ಎಂದಿದ್ದೆ ಅಲ್ವಾ, ಹಾಗಾಗಿ ನಮಗೆ ಮುನಿಸಿಪಾಲಿಟಿಯಿಂದ (ಕೌನ್ಸಿಲ್)ನೀರು ಸರಬರಾಜಾಗುವುದಿಲ್ಲ. ನಾವು ಮಳೆ ನೀರನ್ನೇ ಆಶ್ರಯಿಸಬೇಕು. ನಮ್ಮ ಮನೆ ಮೇಲೆ ಬಿದ್ದ ಮಳೆ ನೀರು ಪೈಪಿನ ಮೂಲಕ ನಮ್ಮ 25000 ಲೀಟರಿನ ಎರಡು ಸಿಮೆಂಟ್ ಟ್ಯಾಂಕುಗಳಲ್ಲಿ ಶೇಖರವಾಗುತ್ತದೆ. ಮೊದಲ 350 ಲೀಟರಿನಷ್ಟು ನೀರು ಹೊರಹೋಗಿ ನಂತರದ ನೀರು ಟ್ಯಾಂಕಿಗೆ ಬೀಳುತ್ತದೆ. ಅಲ್ಲಿಂದ ಮೂರು ಫಿಲ್ಟರುಗಳಲ್ಲಿ ಶುದ್ಧವಾಗಿ ನಮ್ಮ ನಲ್ಲಿಗಳಿಗೆ ಬರುತ್ತದೆ.ಅಡಿಗೆ ಮನೆಗೊಂದು ಎಕ್ಸ್ಟ್ರಾ ಫಿಲ್ಟರ್ ಹಾಕಿಸಿಕೊಂಡಿದ್ದೇನೆ. ಇಷ್ಟು ದಿನ ಊರಲ್ಲಿ ಕಾವೇರಿ ನೀರು, ಅತ್ತೆಯ ಮನೆಯ ಭೀಮಾ ನೀರು ಕುಡಿದೇ ಅಭ್ಯಾಸವಾಗಿದ್ದು ಮಳೆ ನೀರಿನ ಅನುಭವ ಇದೇ ಮೊದಲು. ಮೊದ ಮೊದಲು ಕುಡಿಯಲು ಹಿಂಜರಿದಿದ್ದೂ ಉಂಟು. ಮಳೆನೀರಿನ ರುಚಿ ಬಿದ್ದ ಮೇಲೆ, ಸ್ನೇಹಿತರ ಮನೆಗೆ ಹೋದರೆ ಅಲ್ಲಿಯ ಕೌನ್ಸಿಲ್ ನೀರಿನ ರುಚಿ ಬೋರ್ ವೆಲ್ ನೀರು ಕುಡಿದಂತೆ ಅನ್ನಿಸುತ್ತಿತ್ತು. ಅಷ್ಟಕ್ಕೂ ನೀರಿಗೇನೂ ತೊಂದರೆಯಿರಲಿಲ್ಲ. ವಾರಕ್ಕೆ ಹದಿನೈದು ದಿನಗಳಿಗೊಮ್ಮೆ ಮಳೆ ಬರುತ್ತಲೇ ಇದ್ದುದರಿಂದ ನಮ್ಮ ಟ್ಯಾಂಕುಗಳು ಯಾವಾಗಲೂ ಫುಲ್!

ಸಂಕಟ ಶುರುವಾಗಿದ್ದು, ಕಳೆದ ಜೂನಿನಿಂದ ನಮಗೆ ಸರಿಯಾಗಿ ಮಳೆಯಾಗದೇ ನಿಧಾನಕ್ಕೆ ನಮ್ಮ ಟ್ಯಾಂಕಿನ ನೀರಿನ ಮಟ್ಟ ಕೆಳಗಿಳಿಯಲಾರಂಭಿಸಿದ್ದರಿಂದ. ನೆಪ ಮಾತ್ರಕಷ್ಟೇ ನಾಲ್ಕು ಹನಿ ಉದುರಿಸುತ್ತಿದ್ದ ಮಳೆಯಿಂದ ಏನೂ ಪ್ರಯೋಜನವಾಗುತ್ತಿರಲಿಲ್ಲ. ಪ್ರತೀ ಸಲದಂತೆ ಈ ಸಲದ ಜುಲೈ ಮಳೆ ಅಷ್ಟೇನೂ ಜೋರಾಗಿ ಬರದೆ ಮುಂದೇನು? ಎಂದು ಯೋಚಿಸುವಂತೆ ಮಾಡಿತ್ತು. ಆಗಸ್ಟ್, ಸೆಪ್ಟಂಬರ್ ಮುಗಿದು ಅಕ್ಟೋಬರ್ ನ ಬಿಸಿಲು ಶುರುವಾಯಿತು, ಮಳೆಯ ಸುದ್ದಿಯೇ ಇಲ್ಲ. ಮಳೆಗಾಲದಲ್ಲೇ ಬರದ ಮಳೆ ಬೇಸಿಗೆಯಲ್ಲಿ ಬಿದ್ದೀತೇ? ನೀರನ್ನು ನಾಜೂಕಿನಿಂದ ಉಪಯೋಗಿಸಿದರೂ ಒಂದು ಟ್ಯಾಂಕಿನ ನೀರಷ್ಟೇ ಉಳಿದಿತ್ತು. ಡಿಸೆಂಬರಿನಲ್ಲಿ ಯಜಮಾನರ ಸ್ನೇಹಿತರು ನಮ್ಮಲ್ಲಿಗೆ ಬರುವವರಿದ್ದರು. ನಾವೇನೋ ನೀರು ಕಡಿಮೆ ಉಪಯೋಗಿಸಿ ಅಡ್ಜಸ್ಟ್ ಮಾಡಿಕೊಳ್ಳುತ್ತೇವೆ, ಆದರೆ ಮನೆಗೆ ಬಂದವರಿಗೆ ಹೇಗೆ ಹೇಳುವುದು? ನಮ್ಮ ಕೆಳಗಿನ ಮನೆಯವನು ಈ ಸಲ ಕ್ರಿಸ್ ಮಸ್ಸಿಗೆ ಅವನ ಗೆಳೆಯರನ್ನು ಮನೆಗೆ ಬರಬೇಡಿರೆಂದು ಹೇಳಿದ್ದೇನೆ, ಅವರೆಲ್ಲರೂ ಬಂದರೆ, ನನ್ನ ಟ್ಯಾಂಕ್ ಖಾಲಿಯಾಗುತ್ತದಷ್ಟೇ, ನೀವೂ ಹಾಗೆ ಮಾಡಿ ಎಂದು ಬಿಟ್ಟಿ ಸಲಹೆ ಕೊಟ್ಟ. ಯಜಮಾನರ ಹತ್ತಿರದ ಗೆಳೆಯರಿಗೆ ಮನೆಗೆ ಬನ್ನಿ..ಬನ್ನಿ ಎಂದು ನಾವೇ ಕರೆದು ಈಗ ಬರಬೇಡಿರೆಂದು ಹೇಗೆ ಹೇಳುವುದು? ನೋಡೋಣ ಅಷ್ಟರಲ್ಲಿ ಒಂದು ದೊಡ್ಡ ಮಳೆ ಬಂದರೂ ಬರಬಹುದು ಎಂದು ನಮಗೆ ನಾವೇ ಸಮಾಧಾನ ಮಾಡಿಕೊಂಡಿದ್ದಷ್ಟೇ. ಯಜಮಾನರ ಗೆಳೆಯರು ಬಂದು, ಇದ್ದು, ವಾಪಸ್ ಹೋಗಿದ್ದೂ ಆಯಿತು, ಮಳೆರಾಯನ ಪತ್ತೆಯೇ ಇಲ್ಲ!

ಮಳೆ ಬರದೆ ಈ ಸಲದ ಬಿಸಿಲೂ ತಡೆಯಲಾರದಷ್ಟು ಪ್ರಖರ! ಅಷ್ಟೋ ಇಷ್ಟೋ ಬೀಳುತ್ತಿದ್ದ ಮಳೆಗೆ ಚಿಗುರುತ್ತಿದ್ದ ನನ್ನ ತರಕಾರಿ ಗಿಡಗಳೆಲ್ಲವೂ ಸುಡು ಸುಡು ಬಿಸಿಲಿಗೆ ಒಣಗೆ ಕರ್ರಗಾದವು. ಪ್ರತೀ ವರ್ಷವೂ ಬೀನ್ಸ್, ಟೋಮೋಟೋ, ಮೆಣಸಿನಕಾಯಿ ವರ್ಷಕ್ಕಾಗುವಷ್ಟು ಬೆಳೆದುಕೊಂಡು ಉಳಿದಿದ್ದನ್ನು ಸ್ನೇಹಿತರಿಗೆ ಕೊಟ್ಟಿದ್ದ ನನಗೆ ಈ ಸಲ ತರಕಾರಿಯ ಒಂದು ಕಡ್ಡಿಯೂ ಚಿಗುರಲಿಲ್ಲ. ಇದು ನನ್ನೊಬ್ಬಳ ಪಾಡಲ್ಲ! ಪ್ರತೀ ವರ್ಷದ ಮಳೆ ಬೀಳುತ್ತಿದ್ದ ಪ್ರಮಾಣಕ್ಕೆ ಹೋಲಿಸಿದರೆ ನಮಗೆ ಅದರ ಹತ್ತು ಪರ್ಸೆಂಟಿನಷ್ಟೂ ಮಳೆ ಬಿದ್ದಿಲ್ಲ. ಯಾವಾಗಲ್ಲೂ ಹಸಿರು ಹೊದ್ದಿರುತ್ತಿದ್ದ ಬೆಟ್ಟ-ಗುಡ್ಡಗಳು ಕಂದು ಬಣ್ಣಕ್ಕೆ ತಿರುಗಿವೆ. ಅಲ್ಲಲ್ಲಿ ಬೆಂಕಿ ಎದ್ದು, ಮೊದಲೇ ಒಣಗಿದ್ದ ಪೈನ್ ಮರಗಳು ಬೂದಿಯಾಗಿವೆ. ತಡೆಯಲಾರದ ಬಿಸಿಲಿಗೆ ಎಷ್ಟೋ ಹಸುಗಳು, ಕುರಿಗಳು ಸತ್ತಿವೆ. ನಮ್ಮೂರಿನಿಂದ 200ಕಿಮೀ ಉತ್ತರಕ್ಕೆ ಇರುವ ಊರಿನ ಡ್ಯಾಂ ಖಾಲಿಯಾಗುತ್ತಾ ಬರುತ್ತಿದ್ದು, ಊರಿನ ಜನರಿಗೆಲ್ಲಾ ನೀರನ್ನು ಎಚ್ಚರಿಕೆಯಿಂದ ಬಳಸುವಂತೆ ಕಟ್ಟುನಿಟ್ಟಾದ ಸೂಚನೆಯಿತ್ತಿದ್ದಾರೆ. ಯಾರೂ ಕಾರನ್ನು ತೊಳೆಯುವಂತಿಲ್ಲ, ಮನೆಯ ಕೈದೋಟಕ್ಕೆ ನೀರು ಹಾಕಿ ನೀರನ್ನು ಪೋಲು ಮಾಡುವಂತಿಲ್ಲ. ಪುಣ್ಯಕ್ಕೆ ನಮ್ಮೂರಿನಲ್ಲಿ ಇನ್ನೂ ಸ್ಥಿತಿ ಬಂದಿಲ್ಲ. ಊರಿನಲ್ಲಿರುವ ನಮ್ಮ ಸ್ನೇಹಿತರು ಹಾಯಾಗಿ ಮನೆ-ಕಾರು ತೊಳೆದುಕೊಂಡು, ಮನೆ ಸುತ್ತವಿರುವ ಅಂಗೈಯಗಲದ ಜಾಗದಲ್ಲೇ ಮೆಂತೆ,ಕೊತ್ತಂಬರಿ,ಮೆಣಸಿನಕಾಯಿ ಗಿಡಗಳಿಗೆ ನೀರುಣಿಸಿಕೊಂಡಿದ್ದಾರೆ.


ಟ್ಯಾಂಕ್ ನೀರು ಖಾಲಿಯಾದರೆ ಕೌನ್ಸಿಲಿನಿಂದ ನೀರು ಖರೀದಿ ಮಾಡಿ ಟ್ಯಾಂಕಿಗೆ ಹಾಕಿಸಿಕೊಳ್ಳಬಹುದು. ಅಲ್ಲಲ್ಲಿ ಕೆಲವರು ಟ್ಯಾಂಕಿಗೆ ನೀರು ಹಾಕಿಸಿಕೊಂಡಿದ್ದಾರೆ. ಆದರೆ ಮಳೆ ನೀರಿನ ರುಚಿ ಹತ್ತಿರುವ ನನಗೆ ಕೌನ್ಸಿಲ್ ನೀರು ಬೇಡ! ಅದಕ್ಕೆ ದಿನ ಬೆಳಗಾದರೆ ಈಗ ಮಳೆಯ ಜಪ. ದಿನವೂ ಟಿವಿಯಲ್ಲಿ ವಾರ್ತೆ ತಪ್ಪಿಸಿಕೊಂಡರೂ ಹವಾಮಾನ ವರದಿ ತಪ್ಪಿಸಿಕೊಳ್ಳುತ್ತಿಲ್ಲ. ಆದರೇನು ಅವರು ಮಳೆ ಜೋರಾಗಿ ಬರುವ ಸಂಭವವಿದೆ ಎಂದರೂ ನಮಗೆ ಶಾಸ್ತ್ರಕ್ಕಾದರೂ ನಾಲ್ಕು ಹನಿ ಬೀಳುತ್ತಿಲ್ಲ. ಈಗ ಟ್ಯಾಂಕಿನಲ್ಲಿರುವ ನೀರು ಹದಿನೈದು ದಿನಗಳಿಗೆ ಸಾಲುತ್ತದೆ. ಒಂದು ವಾರ ಕಾದು ಮಳೆ ಬರದಿದ್ದರೆ ಕೌನ್ಸಿಲಿನಿಂದ ನೀರು ಹಾಕಿಸಬೇಕು. ಜೋರಾಗಿ ಮಳೆ ಬಂದು ನಮ್ಮ ಟ್ಯಾಂಕುಗಳೆರಡೂ ತುಂಬಲಿ ಎಂಬುದಷ್ಟೇ ಸದ್ಯಕ್ಕೆ ನನ್ನ ಬೇಡಿಕೆ, ನೀವೆಲ್ಲರೂ ದಯವಿಟ್ಟು " ತಥಾಸ್ತು" ಅನ್ನೀ ಪ್ಲೀಸ್!